“ನಾವು ಚೊಕ್ಕಾಡಿಯವರ ಬಳಿ ಯಾವುದೇ ವರ್ತಮಾನದ ವಿಷಯ ಮಾತನಾಡುವುದಕ್ಕಿಂತ ಹೆಚ್ಚಾಗಿ ಅವರ ಹಳೆಯ ನೆನಪುಗಳನ್ನು ಕೆದಕುವುದೇ ಹೆಚ್ಚು. ಅಡಿಗರ ಜೊತೆ, ರಾಮಚಂದ್ರ ಶರ್ಮರ ಬಗ್ಗೆ, ತಿರುಮಲೇಶರ ಕಾವ್ಯದ ಮತ್ತು ಒಡನಾಟದ ಬಗ್ಗೆ.. ನನ್ನ ಪ್ರೀತಿಯ ಕಥೆಗಾರ ವ್ಯಾಸರ ಬಗ್ಗೆ… ಹೀಗೆ ಅವರ ಜೀವನದಲ್ಲಿ ನಡೆದ ಪ್ರಭಾವಿಸಿದ ಅನೇಕ ವಸ್ತು ವಿಷಯಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ ಅವರು ಹೇಳುತ್ತಿದ್ದಷ್ಟೂ ಕೇಳುವ ಕುತೂಹಲ ನಮ್ಮದು. ಅವರೆಂದೂ ಯಾವುದೇ ಲೇಖಕರ ಬಗ್ಗೆ ಇರುವ ದಂತಕಥೆಗಳ ಬಗ್ಗೆ ಹುಟ್ಟಿಕೊಂಡ ಕಥೆಗಳ ಬಗ್ಗೆ ಹೇಳುವುದಿಲ್ಲ. ನಮ್ಮಲ್ಲಿ ಒಂದು ಪಾಸಿಟಿವ್ ವೈಬ್ ತರುವಂತಹಾ ಕಥೆಗಳನ್ನೇ ಹೇಳುತ್ತಾರೆ. ನಾವು ಓದಿದ ಪದ್ಯಗಳ ಬಗ್ಗೆ ಅಭಿಪ್ರಾಯ ಹೇಳುತ್ತಿದ್ದರೆ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ. ಏನಾದರೂ ಬರೆದರೆ ಇಷ್ಟವಾಗಿದ್ದರೆ ಇಷ್ಟವಾಯಿತು ಎನ್ನುತ್ತಾರೆ. ಇಲ್ಲದಿದ್ದರೆ ತಿದ್ದಬಹುದಾದ ಅಂಶಗಳ ಬಗ್ಗೆ ಹೇಳುತ್ತಾರೆ.”
ಸುಬ್ರಾಯ ಚೊಕ್ಕಾಡಿಯವರಿಗೆ ಶಿವರಾಮ ಕಾರಂತ ಪ್ರಶಸ್ತಿ ಬಂದ ಸಂದರ್ಭದಲ್ಲಿ ಮಾಲಿನಿ ಗುರುಪ್ರಸನ್ನ ಹಂಚಿಕೊಂಡ ಚೊಕ್ಕಾಡಿಯವರ ಒಂದು ಬರಹ.

ಸುಬ್ರಾಯ ಚೊಕ್ಕಾಡಿ ಸರ್ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ ಬಂತು. ಹೀಗೊಂದು ಸುದ್ದಿ ಬಂದ ಕೂಡಲೇ ಮಾಮೂಲಿಯಂತೆ ಖುಷಿಯಂತೂ ಆಯಿತು. ಸಾಮಾನ್ಯವಾಗಿ ಒಂದು ಪ್ರಶಸ್ತಿ ಅರ್ಹರಿಗೆ ಬಂತು ಎಂದರೆ ಖಂಡಿತ ಖುಷಿಯಾಗೆ ಆಗುತ್ತದೆ. ಅದರ ಬಗ್ಗೆ ಮರುಮಾತೆ ಇಲ್ಲ. ಆದರೆ ಅದು ಯಾರಿಗೆ ಸಲ್ಲಬೇಕಿತ್ತೋ ಅವರಿಗೇ ಸಂದರೆ ರೋಮಾಂಚನವಾಗುತ್ತದೆ. ಕಾರಂತರೆಂದರೆ ಸಿಟ್ಟು, ಕಾರಂತರೆಂದರೆ ಪ್ರತಿಭೆಯ ಜ್ವಾಲಾಮುಖಿ.. ಸಾಹಿತ್ಯವೊಂದೇ ಅಲ್ಲದೆ ಯಕ್ಷಗಾನದಂತಹ ಅನೇಕ ಕ್ಷೇತ್ರಗಳಲ್ಲಿ ಪ್ರಾವೀಣ್ಯ ಪಡೆದ ದಂತಕಥೆ.. ಕಾರಂತರೆಂದರೆ ನಿಗಿನಿಗಿ ಹೊಳೆಯುವ, ಉರಿಯುವ ಕಡಲ ತೀರದ ಭಾರ್ಗವ. ಹೀಗೆಲ್ಲಾ ಕಾರಂತರನ್ನು ಪರಿಭಾವಿಸುವ ನಾವು ಒಂದು ಪೀಠದ ಮೇಲೆ ಅವರನ್ನು ಕೂರಿಸಿ ಪೂಜೆಗೈದು ಬಿಡುತ್ತೇವೆ. ಆ ಪೂಜೆಯಿಂದ ನಾವು ಅವರನ್ನು ಮುಟ್ಟುವುದೇ ಇಲ್ಲ. ಹಾಗೊಂದು ಪೂಜೆಯಿಂದ ಓದುಗನೂ ಬೆಳೆಯುವುದಿಲ್ಲ. ಲೇಖಕನೂ ಬೆಳೆಯುವುದಿಲ್ಲ. ಹೀಗೆ ಕಾರಂತರು ಅಂತಹಾ ಪೂಜೆಗೈವ ಜನರನ್ನು ಕೊಂಚ ದೂರದಲ್ಲೇ ಇರಿಸಿದ್ದರಂತೆ ಕೂಡಾ. ಚೊಕ್ಕಾಡಿಯವರಿಗೆ ಶಿವರಾಮ ಕಾರಂತ ಪ್ರಶಸ್ತಿ ಬಂದಾಗ ನನಗೆ ನೆನಪಾದದ್ದು ಅವರು ನಮ್ಮ ಬಳಿ ಹೇಳಿದ ಒಂದಿಷ್ಟು ಘಟನಾವಳಿಗಳು.
ನನಗೆ ಮತ್ತು ಗೆಳತೀ ಸಿಂಧು ರಾವ್ ಇಬ್ಬರಿಗೂ ಹಿರಿಯ ಜೀವಗಳೊಡನೆ ಮಾತನಾಡುವುದು ಬಹಳ ಇಷ್ಟದ ವಿಷಯ. ಅವರಲ್ಲಿ ಬಹಳ ಮುಖ್ಯವಾಗಿ ಕಥೆಗಳಿರುತ್ತವೆ. ಕೇಳುವ ಹಂಬಲ ನಮಗಿದ್ದರೆ ಅವರುಗಳು ಕಥೆಗಳ ಕಣಜವನ್ನೇ ನಮ್ಮ ಮುಂದಿಡುತ್ತಾರೆ. ಮತ್ತು ಅಂತಹ ಘಟನೆಗಳ ವಿವರಗಳು ಹಸಿಹಸಿಯಾಗಿರದೇ ಅವರ ಅನುಭವದಲ್ಲಿ ಪಕ್ವವಾಗಿ ಯಾವುದೇ ಪೂರ್ವಾಗ್ರಹವಿಲ್ಲದ ಕತೆಗಳು ಹೊರಹೊಮ್ಮುತ್ತವೆ. ನಾವು ಚೊಕ್ಕಾಡಿಯವರ ಬಳಿ ಯಾವುದೇ ವರ್ತಮಾನದ ವಿಷಯ ಮಾತನಾಡುವುದಕ್ಕಿಂತ ಹೆಚ್ಚಾಗಿ ಅವರ ಹಳೆಯ ನೆನಪುಗಳನ್ನು ಕೆದಕುವುದೇ ಹೆಚ್ಚು. ಅಡಿಗರ ಜೊತೆ, ರಾಮಚಂದ್ರ ಶರ್ಮರ ಬಗ್ಗೆ, ತಿರುಮಲೇಶರ ಕಾವ್ಯದ ಮತ್ತು ಒಡನಾಟದ ಬಗ್ಗೆ.. ನನ್ನ ಪ್ರೀತಿಯ ಕಥೆಗಾರ ವ್ಯಾಸರ ಬಗ್ಗೆ… ಹೀಗೆ ಅವರ ಜೀವನದಲ್ಲಿ ನಡೆದ ಪ್ರಭಾವಿಸಿದ ಅನೇಕ ವಸ್ತು ವಿಷಯಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ ಅವರು ಹೇಳುತ್ತಿದ್ದಷ್ಟೂ ಕೇಳುವ ಕುತೂಹಲ ನಮ್ಮದು. ಅವರೆಂದೂ ಯಾವುದೇ ಲೇಖಕರ ಬಗ್ಗೆ ಇರುವ ದಂತಕಥೆಗಳ ಬಗ್ಗೆ ಹುಟ್ಟಿಕೊಂಡ ಕಥೆಗಳ ಬಗ್ಗೆ ಹೇಳುವುದಿಲ್ಲ. ನಮ್ಮಲ್ಲಿ ಒಂದು ಪಾಸಿಟಿವ್ ವೈಬ್ ತರುವಂತಹಾ ಕಥೆಗಳನ್ನೇ ಹೇಳುತ್ತಾರೆ. ನಾವು ಓದಿದ ಪದ್ಯಗಳ ಬಗ್ಗೆ ಅಭಿಪ್ರಾಯ ಹೇಳುತ್ತಿದ್ದರೆ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ. ಏನಾದರೂ ಬರೆದರೆ ಇಷ್ಟವಾಗಿದ್ದರೆ ಇಷ್ಟವಾಯಿತು ಎನ್ನುತ್ತಾರೆ. ಇಲ್ಲದಿದ್ದರೆ ತಿದ್ದಬಹುದಾದ ಅಂಶಗಳ ಬಗ್ಗೆ ಹೇಳುತ್ತಾರೆ. ಹೀಗೆ ಒಂದು ದಿನ ಶಿವರಾಮ ಕಾರಂತರ ಬಗ್ಗೆ ಮಾತನಾಡುತ್ತಿದ್ದಾಗ ಅಚಾನಕ್ಕಾಗಿ ಮೂಕಜ್ಜಿಯ ಕನಸುಗಳ ಬಗ್ಗೆ ಮಾತು ಬಂತು. ಆಗ ಅವರು ಹಿಂದೆ ನಡೆದ ಘಟನಾವಳಿಗಳ ಕುರಿತು ನಮ್ಮೊಡನೆ  ಒಂದಿಷ್ಟು ಹಂಚಿಕೊಂಡರು. ಅವರ ಆ ಮಾತುಗಳು ನಮ್ಮಲ್ಲಿ ಮೂಡಿಸಿದ್ದು ಒಂದು ವೈಬ್ರೆಷನ್.
ಅವರು ಕಾರಂತರ ಬಗ್ಗೆ ಹೇಳಿದ ಆ ಘಟನೆಗಳನ್ನು ಬರೆದುಕೊಡಿ ಎಂದು ಅವರನ್ನು ಪೀಡಿಸಲಾರಂಭಿಸಿದೆವು. ಅವರು ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟರೂ ಬೆನ್ನು ಬಿಡದ ನಕ್ಷತ್ರಿಕರಂತೆ ಪಟ್ಟು ಹಿಡಿದು ಕೂತ ನಮ್ಮ ಮೊಂಡುತನವನ್ನು ಪ್ರೀತಿಯೆಂದು ಪರಿಗಣಿಸಿ ಅವರು ಒಂದಿಷ್ಟು ಸಾಲುಗಳನ್ನು ಬರೆದು ಕೊಟ್ಟು “ಹಾಳಾಗಿ ಹೋಗಿ” ಎಂದು ಆಶೀರ್ವದಿಸಿದರು. ಆ ಘಟನಾವಳಿಗಳು ಇಲ್ಲಿವೆ.  ಶಿವರಾಮ ಕಾರಂತ ಪ್ರಶಸ್ತಿ ಅವರಿಗೆ ಏಕೆ ಬರಲೇಬೇಕಿತ್ತು ಎಂಬುದು ಈ ಬರಹ ಓದಿದರೆ ತಾನೇ ತಾನಾಗಿ ಅರಿವಾಗುತ್ತದೆ ಎಂದು ನಂಬಿದ್ದೇನೆ.

 

ಶಿವರಾಮ ಕಾರಂತರಿಗೂ ನನಗೂ ಪ್ರೀತಿ ಮತ್ತು ಸಿಟ್ಟಿನ ಸಂಬಂಧ. ಅಜ್ಜ ಹಾಗೂ ಮೊಮ್ಮಗನ ನಡುವಿನ ಪ್ರೀತಿ ಮತ್ತು ಸಿಟ್ಟಿನ ಸಂಬಂಧ. ಇದಕ್ಕೆ ಉದಾಹರಣೆಯಾಗಿ ಇರುವ ಅನೇಕ ಘಟನೆಗಳ ಪೈಕಿ ಒಂದು ಘಟನೆ ತುಂಬಾ ರೋಚಕವಾದದ್ದು.

ಅದು ನಡೆದದ್ದು 1978ರಲ್ಲಿರಬೇಕು. ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತ್ತು. ಆ ಸಂಬಂಧವಾಗಿ ಅವರು ಬಹುಕಾಲ ನೆಲೆಸಿದ್ದ ಪುತ್ತೂರಿನಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಸಲಿರುವ ವಿಚಾರ ನನಗೆ ತಿಳಿಯಿತು. ನಾವು ಗೆಳೆಯರು ಆಗ “ಸುಮನಸಾ”ವೇದಿಕೆಯ (ಸುಳ್ಯದ ಮಧ್ಯದ ನವ್ಯ ಸಾಹಿತಿಗಳ ವೇದಿಕೆ) ಮೂಲಕ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆವು. ಕಾರಂತರನ್ನು ನಮ್ಮಲ್ಲಿಗೆ ಕರೆಯೋಣ ಅನ್ನಿಸಿ ಅವರಿಗೊಂದು ಕಾರ್ಡು ಬರೆದೆ. ನೀವು ಪುತ್ತೂರಿಗೆ ಬರುವ ವಿಚಾರ ತಿಳಿಯಿತು. ಅಲ್ಲಿಗೆ ಬಂದವರು ನನ್ನೂರು ಚೊಕ್ಕಾಡಿಗೂ ಬಂದು, ಒಂದರ್ಧ ಗಂಟೆಯಷ್ಟಾದರೂ ನಮ್ಮ ಶಾಲೆಯ ಮಕ್ಕಳ ಜೊತೆ ಬೆರೆಯಬೇಕು ಅಂತ ಬರೆದು ನಮ್ಮೂರಿಗೆ ಬರುವಂತೆ ಕೇಳಿಕೊಂಡೆ. ಮರು ಟಪ್ಪಾಲಿಗೇ ಅವರು ಒಂದು ಕಾರ್ಡಿನಲ್ಲಿ ಪುತ್ತೂರಿಗೆ ಬರುವ ಹಿಂದಿನ ದಿನ ನಿಮ್ಮಲ್ಲಿಗೆ ಬರುತ್ತೇನೆ. ಆ ದಿನ ಅಲ್ಲೇ ಉಳಿದು, ಮರುದಿನ ಪುತ್ತೂರಿನ ಕಾರ್ಯಕ್ರಮಕ್ಕೆ ಹಾಜರಾಗುತ್ತೇನೆ ಎಂದು ತಿಳಿಸಿದರು. ಇದನ್ನು ಓದಿ ನಾನು ಗಾಬರಿಯಾದೆ. ನನ್ನಲ್ಲಿ ಅವರಂಥವರು ಉಳಿದುಕೊಳ್ಳುವುದಕ್ಕೆ ವ್ಯವ್ಯಸ್ಥೆಯಿರಲಿಲ್ಲ. ಇದು ಹಳ್ಳಿಯಾದ್ದರಿಂದ ಹೋಟೆಲ್ ವ್ಯವಸ್ಥೆಯೂ ಇರಲಿಲ್ಲ. ಬರಬೇಡಿ ಎನ್ನಲೂ ಸಾಧ್ಯವಿಲ್ಲ.

ಏನು ಮಾಡಲಿ ಅಂತ ಯೋಚಿಸುತ್ತಿರುವಾಗಲೇ ಕಾರಂತರ ಅಭಿಮಾನಿಯಾಗಿದ್ದ ನನ್ನ ದೊಡ್ಡಮ್ಮನ ಮಗ ಸಂಕೇಶದ ಕೇಶವಣ್ಣ ನನ್ನ ನೆರವಿಗೆ ಬಂದರು. ಯೋಚನೆ ಬೇಡ ಅವರು ನಮ್ಮ ಮನೆಯಲ್ಲಿ ಉಳಿಯಲಿ, ಅದು ನಮಗೆ ಬಯಸದೇ ಬಂದ ಭಾಗ್ಯ ಅಂತ ಹೇಳಿದರು. ಅವರಲ್ಲಿ ಕಾರಂತರನ್ನು ಉಳಿಸಲು ಬೇಕಾದ ಎಲ್ಲ ವ್ಯವಸ್ಥೆಗಳೂ ಇದ್ದವು. ಹೀಗೆ ನನ್ನ ಒಂದು ಸಮಸ್ಯೆ ಮಂಜಿನಂತೆ ಕರಗಿ ಹೋಯಿತು.

ಅಷ್ಟರಲ್ಲಿ ಪುತ್ತೂರಿನಿಂದ ಕರೆ ಬಂತು. ಕಾರಂತ ಅಭಿನಂದನ ಕಾರ್ಯಕ್ರಮದಂದು ಬೆಳಗ್ಗೆ ಮೂಕಜ್ಜಿಯ ಕನಸುಗಳು ಕೃತಿಯ ಬಗ್ಗೆ ವಿಚಾರಸಂಕಿರಣ ಏರ್ಪಡಿಸಲಾಗಿದೆ. ಅದರಲ್ಲಿ ನೀವು ಒಂದು ಪ್ರಬಂಧ ಮಂಡನೆ ಮಾಡಬೇಕು. ನಿಮ್ಮ ಜತೆ ತಾಳ್ತಜೆ ವಸಂತಕುಮಾರರು ಪ್ರಬಂಧ ಮಂಡಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿ.ಎಚ್.ನಾಯಕರು ವಹಿಸಲಿದ್ದಾರೆ ಎಂದು. ಅವರ ಒತ್ತಾಯದ ಮೇರೆಗೆ ಒಪ್ಪಿಕೊಂಡೆ ಮತ್ತು ನವ್ಯ ಚಳುವಳಿ ನನಗೆ ತಂದುಕೊಟ್ಟ ಹುಂಬ ಧೈರ್ಯವಿತ್ತು.

ಇನ್ನೀಗ ಕಾರಂತರಿಗೊಂದು ಸ್ಮರಣಿಕೆ ಕೊಡಬೇಕಾಗಿತ್ತು. ಸಾಕಷ್ಟು ಯೋಚಿಸಿ ಮೈಸೂರಿನ ಮಿತ್ರರ ಸಹಾಯದಿಂದ ಕಾವೇರಿ ಎಂಪೋರಿಯಂನಿಂದ ನಗುವ ಬುದ್ಧನ ಮೂರ್ತಿಯನ್ನು ತರಿಸಿಕೊಂಡೆ. ಸಮಾರಂಭದ ಅಧ್ಯಕ್ಷರಾಗಲು ಎಂ.ಮರಿಯಪ್ಪ ಭಟ್ಟರನ್ನು ಕೇಳಿಕೊಂಡೆ.

ನಿಗದಿಪಡಿಸಿದ ದಿನದಂದು ನಮ್ಮೂರಿನ ಈ ಕಾರ್ಯಕ್ರಮವು ನಾನು ಕೆಲಸಮಾಡುತ್ತಿದ್ದ ಕುಕ್ಕುಜಡ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾಯಿತು. ಕಾರಂತರು ಹಾಗೂ ಮರಿಯಪ್ಪ ಭಟ್ಟರು ಸಮಯಕ್ಕೆ ಮುಂಚಿತವಾಗಿಯೇ ಆಗಮಿಸಿದ್ದರು. ಚುಟುಕಾಗಿ ಸ್ವಾಗತದ ಮಾತಾಡಿದ ನಾನು, ನಿಮಗೆ ಸಾಕು ಅನಿಸುವಷ್ಟು ಹೊತ್ತು ಮಾತಾನಾಡಬೇಕು, ಆಮೇಲೆ ಸಂವಾದದಲ್ಲೂ ಭಾಗವಹಿಸಬೇಕು, ಬೇರಾರೂ ಮಾತಾಡೋದಿಲ್ಲ, ನಿಮಗೆ ಸ್ವಾಗತ, ನಿಮ್ಮ ಮಾತುಗಳಿಗೆ ಸ್ವಾಗತ ಅಂತ ಹೇಳಿ ನನ್ನ ಮಾತು ಮುಗಿಸಿದೆ.

ಆ ದಿನ ಕಾರಂತರು ಸುಮಾರು ಒಂದೂವರೆ ಗಂಟೆಗಳ ಕಾಲ ಪರಿಸರದ ಬಗ್ಗೆ, ಮಾನವ ಜೀವನದ ವಿಕಾಸದ ಬಗ್ಗೆ ಆದ್ಯಂತವಾಗಿ ಮಾತನಾಡಿದರು. ಮರಿಯಪ್ಪ ಭಟ್ಟರು ಚೆನ್ನಾಗಿ ಚುಟುಕಾಗಿ ಮಾತನಾಡಿದರು. ಆಮೇಲೆ ಸಂವಾದ – ಪ್ರಶ್ನೆಗಳಿಗೆ ಕಾರಂತರ ಚುರುಕಾದ, ಕೆಲವೊಮ್ಮೆ ವ್ಯಂಗ್ಯ ಭರಿತವಾದ ಉತ್ತರ.

ಅಷ್ಟರಲ್ಲಿ ಮುಸ್ಸಂಜೆಯಾಗಿತ್ತು. ಜತೆಗೇ ಕುಂಭದ್ರೋಣ ಮಳೆ. ಅಣ್ಣನ ಮನೆಗೆ ಹೋಗುವ ದಾರಿಯಲ್ಲಿ ಹೊಳೆ ತುಂಬಿ ಹರಿಯುತ್ತಿದ್ದ ಕಾರಣ ಕಾರಂತರನ್ನು ವಾಹನನದಲ್ಲಿ ಕರೆದುಕೊಂಡು ಹೋಗುವಂತಿರಲಿಲ್ಲ. ಹಾಗಾಗಿ ಗ್ಯಾಸ್ ಲೈಟುಗಳ (ಪೆಟ್ರೋಮ್ಯಾಕ್ಸ್ ದೀಪಗಳು) ಸಹಾಯದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಅಣ್ಣನ ಮನೆಗೆ ಕಾರಂತರನ್ನು ನಡೆಸಿಕೊಂಡೇ ಹೋದೆವು.

ರಾತ್ರಿ ಅಣ್ಣನಲ್ಲಿ ಭರ್ಜರಿ ವ್ಯವಸ್ಥೆ ಮಾಡಿದ್ದರು. ವಿಷಯ ತಿಳಿದ ಕೆಲವು ಬೇರೆ ಊರಿನವರೂ ಬಂದಿದ್ದರು. ಸುಮಾರು ಐವತ್ತು ಜನರಿಗೆ ಭರ್ಜರಿ ಭೋಜನ ಹಾಗೂ ತನ್ನ ಎಂದಿನ ನಿಯಮವನ್ನು ಮೀರಿ ಕಾರಂತರು ರಾತ್ರಿ ಹನ್ನೆರಡು ಗಂಟೆಯ ತನಕ ವಿವಿಧ ವಿಷಯಗಳ ಬಗ್ಗೆ ಆಡಿದ ಮಾತುಗಳ ಊಟ. ಅದೆಲ್ಲ ಮುಗಿದ ಮೇಲೆ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿನ ನನ್ನ ಮನೆಗೆ ಮರಳಿದೆ.

ಮೂಕಜ್ಜಿಯ ಬಗ್ಗೆ ಮಾತನಾಡಬೇಕೆಂದು ನನ್ನ ಮನಸ್ಸಿದ್ದಿತಾದರೂ ಕಾರಂತರ ಕುರಿತಾದ ಭಯದಿಂದಾಗಿ ಅವಸರದಲ್ಲಿ ಒಂದು ಪ್ರಬಂಧವನ್ನು ಸಿದ್ಧಪಡಿಸಿ ಮಲಗಿದಾಗ ರಾತ್ರಿ ಗಂಟೆ ಎರಡಾಗಿತ್ತು.

ಮರುದಿನ ಬೆಳಗ್ಗೆ ಏಳುಗಂಟೆಗೆ ಕಾರಂತರ ಕಾರಿನಲ್ಲೇ ನಾನು ಪುತ್ತೂರಿಗೆ ಹೋದೆ. ಬೆಳಗ್ಗೆ ಗಂಟೆ ಹತ್ತಕ್ಕೆ ವಿಚಾರಗೋಷ್ಠಿ ಆರಂಭವಾಯಿತು. ಅಷ್ಟರಲ್ಲಿ ಕಾರಂತರು ಬಂದು ಎದುರಿನ ಸಾಲಿನಲ್ಲೆ ಕುಳಿತರು. ನಮಗೆ ಪುಕುಪುಕು. ಮೊದಲಿಗೆ ತಾಳ್ತಜೆಯವರು ಚೆನ್ನಾಗಿ ಮಾತನಾಡಿದರು. ನಂತರ ನನ್ನ ಮಾತು. ಕಾರಂತರು ನಮ್ಮ ಕಾಲದ ಬಹುದೊಡ್ಡ ಲೇಖಕರು. ಅವರಿಗೆ ಈ ಪ್ರಶಸ್ತಿ ಈ ಹಿಂದೆಯೇ ಬರಬೇಕಾಗಿತ್ತು. ಅವರ ಮರಳಿಮಣ್ಣಿಗೆ, ಬೆಟ್ಟದ ಜೀವದಂತಹ ಕಾದಂಬರಿಗಳು ಸರ್ವಶ್ರೇಷ್ಠ ಕಾದಂಬರಿಗಳೂ. ಆದರೆ ಮೂಕಜ್ಜಿಯ ಕನಸುಗಳು ಆ ಮಟ್ಟದಲ್ಲಿಲ್ಲದ ಕೃತಿ. ಅದು ಆಚೆಗೆ ಕಲಾಕೃತಿಯೂ ಆಗಲಿಲ್ಲ, ಈಚೆಗೆ ಅಂತ್ರೋಪಾಲಜಿಯೂ ಆಗಲಿಲ್ಲ. ಜ್ಞಾನಪೀಠ ಬಂತೆಂದು ಅದು ಕಾರಂತರ ಶ್ರೇಷ್ಠ ಕೃತಿಯೆಂದು ನಾನು ಒಪ್ಪಿಕೊಳ್ಳಲಾರೆ ಎಂದು ಅನೇಕ ಉದಾಹರಣೆಗಳ ಮೂಲಕ ನನ್ನ ಮಾತುಗಳನ್ನು ನವ್ಯರ ಹುಂಬಧೈರ್ಯದಿಂದ ಸಮರ್ಥಿಸಿಕೊಂಡೆ. ನನ್ನ ಮಾತುಗಳನ್ನು ಮೌನದಿಂದ ಆಲಿಸಿದ ಕಾರಂತರು ಆಮೇಲೆ ಅಲ್ಲಿಂದ ಹೊರಟುಹೋದರು.

ನನ್ನ ಮಾತುಗಳ ಬಗ್ಗೆ ಸಭಿಕರಿಂದ ಆಕ್ಷೇಪಗಳು ಬಂದವು. ಆದರೆ ನಾನದಕ್ಕೆ ಸೊಪ್ಪು ಹಾಕಲಿಲ್ಲ. ಜಿ.ಹೆಚ್.ನಾಯಕರೂ ನನ್ನ ಮಾತುಗಳನ್ನು ಬಹುಮಟ್ಟಿಗೆ ಸಮರ್ಥಿಸಿಯೇ ಮಾತನಾಡಿದರು. ಒಟ್ಟಾರೆಯಾಗಿ ನನ್ನ ಮಾತುಗಳು ಸಂಚಲನವನ್ನುಂಟುಮಾಡಿದ್ದು ಮಾತ್ರ ನಿಜ.

ಸಂಜೆ ಕಾರಂತರಿಗೆ ಆಭಿನಂದನಾ ಕಾರ್ಯಕ್ರಮ ಮತ್ತು ಪೌರಸನ್ಮಾನ. ಅಧ್ಯಕ್ಷರು ಗೋಪಾಲಕೃಷ್ಣ ಅಡಿಗರು. ಸನ್ಮಾನಕ್ಕೆ ಉತ್ತರಿಸುವಾಗ ಕಾರಂತರು ಖಾರಂತರಾದರು. ಸಿಟ್ಟಿನಿಂದ ಘರ್ಜಿಸಿದರು. “ನನ್ನ ಪುಸ್ತಕಗಳನ್ನು ಓದಬೇಕೆಂದು ಯಾರು ಹೇಳಿದರೂ ಒಲೆಗೆ ಹಾಕಿ” ಅಂತೆಲ್ಲ ಮಾತಿನ ಮಳೆಗರೆದರು. ಕಾರಂತರ ರೌದ್ರರೂಪವನ್ನು ಕಂಡ ಅಡಿಗರು, ಯಾರೋ ಇವರನ್ನು ಕೆರಳಿಸಿರಬೇಕೆಂದು ಭಾವಿಸಿ ಯಾರೊಡನೆಯೊ ಈ ಬಗ್ಗೆ ವಿಚಾರಿಸಿದರು. ಅವರಿಗೆ ಬೆಳಗಿನ ಗೋಷ್ಠಿಯ ವಿವರಗಳು ತಿಳಿದಿರಲಿಲ್ಲ. ಅವರ ಕೆರಳಿಕೆಗೆ ಚೊಕ್ಕಾಡಿ ಕಾರಣ ಎಂದು ಅಡಿಗರಿಗೆ ಗೊತ್ತಾದಾಗ ಅದನ್ನು ಊಹಿಸಿದೆ ಎನ್ನುವ ಹಾಗೆ ನಸುನಕ್ಕರು.

ಅವರ ಮರಳಿಮಣ್ಣಿಗೆ, ಬೆಟ್ಟದ ಜೀವದಂತಹ ಕಾದಂಬರಿಗಳು ಸರ್ವಶ್ರೇಷ್ಠ ಕಾದಂಬರಿಗಳೂ. ಆದರೆ ಮೂಕಜ್ಜಿಯ ಕನಸುಗಳು ಆ ಮಟ್ಟದಲ್ಲಿಲ್ಲದ ಕೃತಿ. ಅದು ಆಚೆಗೆ ಕಲಾಕೃತಿಯೂ ಆಗಲಿಲ್ಲ, ಈಚೆಗೆ ಅಂತ್ರೋಪಾಲಜಿಯೂ ಆಗಲಿಲ್ಲ. ಜ್ಞಾನಪೀಠ ಬಂತೆಂದು ಅದು ಕಾರಂತರ ಶ್ರೇಷ್ಠ ಕೃತಿಯೆಂದು ನಾನು ಒಪ್ಪಿಕೊಳ್ಳಲಾರೆ ಎಂದು ಅನೇಕ ಉದಾಹರಣೆಗಳ ಮೂಲಕ ನನ್ನ ಮಾತುಗಳನ್ನು ನವ್ಯರ ಹುಂಬಧೈರ್ಯದಿಂದ ಸಮರ್ಥಿಸಿಕೊಂಡೆ.

ಅಧ್ಯಕ್ಷಭಾಷಣದಲ್ಲಿ ಕಾರಂತರನ್ನು ಅಭಿನಂದಿಸುತ್ತಾ ನಾವು ಹಿರಿಯರು ಕಿರಿಯರ ಮಾತುಗಳಿಗೆ ಮನ್ನಣೆ ಕೊಡಬೇಕಾದ ಅಗತ್ಯವಿದೆ ಅಂತ ಸೂಚ್ಯವಾಗಿ ಹೇಳಿದರು.

ಆಮೇಲೆ ಸಿಕ್ಕಾಗ ಆ ಕಾದಂಬರಿ ಚೆನ್ನಾಗಿಯೇ ಇದೆ ಎಂದು ಅಡಿಗರು ನನ್ನಲ್ಲಿ ಹೇಳಿದರು. ಆಗಲೂ ನಾನದನ್ನು ಒಪ್ಪಲಿಲ್ಲ. ಈಗಲೂ ಬಹುಮಟ್ಟಿಗೆ ಒಪ್ಪಲಾರೆ.

ಆ ಕ್ಷಣದಲ್ಲಿ ಕಾರಂತರ ಮಾತುಗಳಿಂದ ನನಗೆ ನೋವಾಗಿತ್ತು. ಮರುದಿನ ಅವರಿಗೆ ನಾನೊಂದು ಪತ್ರ ಬರೆದೆ. “ನೀವು ನನಗೆ ಗುರುಗಳಂತೆ. ನಿಮ್ಮ ಜ್ಞಾನದ ಎದುರು ನಾನು ತೃಣಸಮಾನ. ಆದರೆ ತನಗನಿಸಿದ್ದನ್ನು ಹಿಂಜರಿಯದೆ ಹೇಳಬೇಕೆಂಬುದನ್ನು ನಾನು ನಿಮ್ಮಿಂದಲೇ ಕಲಿತುಕೊಂಡಿದ್ದು. ನಿಮಗೆ ನನ್ನ ಮಾತುಗಳಿಂದ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ. ಈ ಕಿರಿಯ ಹುಡುಗಾಟದ ಮಾತುಗಳನ್ನು ಮರೆತು ಆಶೀರ್ವದಿಸಿ” ಅಂತ ಕೇಳಿಕೊಂಡೆ.

ಮರುಟಪ್ಪಾಲಿಗೇ ಅವರ ಉತ್ತರ ಬಂತು. ಅದು ಅವರ ಮಾಮೂಲಿ ಕಾರ್ಡಿನ ಬದಲು ಎರಡು ಪುಟಗಳ ದೀರ್ಘ ಪತ್ರ. ಅದರಲ್ಲವರು “ನಾನು ಮೊನ್ನೆ ನಿಮ್ಮನ್ನು ಉದ್ದೇಶಿಸಿ ಮಾತನಾಡಿದ್ದಲ್ಲ. ಬೇರೆ ಕಾರಣಗಳಿದ್ದವು. ಅನಿಸಿದ್ದನ್ನು ಹೇಳಬೇಕೆಂಬ ನಿಮ್ಮ ಮಾತಿಗೆ ನನ್ನದೂ ಒಪ್ಪಿಗೆಯೇ. ಹೀಗೆಯೇ ಮುಂದುವರಿಯಿರಿ” ಎಂದು ಬರೆದು ನಮ್ಮ ಕುಕ್ಕುಜಡ್ಕದಲ್ಲಿ ನಡೆದ ಕಾರ್ಯಕ್ರಮದ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಬರೆದಿದ್ದರು.

ಆಮೇಲೆಯೂ ನಮ್ಮಲ್ಲಿಗೆ ಎರಡು ಮೂರು ಬಾರಿ ಅವರು ಬಂದಿದ್ದಾರೆ. ಕಾರ್ಯಕ್ರಮಗಳಲ್ಲಿ ನನ್ನ ಮಾತನ್ನು ಕೇಳಿದ್ದಾರೆ. ಕೆಲವು ವರ್ಷಗಳ ನಂತರ ನಾನು ಬ್ರಹ್ಮಾವರದಲ್ಲಿನ ಅವರ ಮನೆಗೆ ಯಾವುದೋ ವಿಚಾರವಾಗಿ ಮಾತನಾಡಲೆಂದು ಹೋಗಿದ್ದೆ. ಅವರ ದಿವಾನಖಾನೆಯಲ್ಲಿ ನಾವು ಕುಕ್ಕುಜಡ್ಕದ ಕಾರ್ಯಕ್ರಮದಲ್ಲಿ ಕೊಟ್ಟಿದ್ದ ನಗುವ ಬುದ್ಧ ಮೂರ್ತಿಯನ್ನು ಬಿಟ್ಟರೆ ಬೇರೆ ಯಾವ ಸ್ಮರಣಿಕೆಗಳೂ ಅಲ್ಲಿರಲಿಲ್ಲ.! ನನಗಾದ ಆನಂದ ಅಪರಿಮಿತ.

ಆ ಮೇಲಿನ ಕೆಲವು ಘಟನೆಗಳ ಪೈಕಿ ಕೊನೆಯದನ್ನು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ. ಕಾರಂತರ ತೊಂಭತ್ತಾರರ (?)ಹುಟ್ಟುಹಬ್ಬದ ಪ್ರಯುಕ್ತ ಬ್ರಹ್ಮಾವರದಲ್ಲಿ ಎರಡು ದಿನಗಳ ಕಾರ್ಯಕ್ರಮ ಏರ್ಪಡಿಸಿದ್ದು ಸಮಾರೋಪ ಭಾಷಣಕ್ಕಾಗಿ ನನ್ನನ್ನು ಕರೆದಿದ್ದರು.ಅದಕ್ಕಿಂತ ಮೊದಲು ಕಾರಂತರೊಡನೆ ಸಂವಾದ ಕಾರ್ಯಕ್ರಮವಿತ್ತು. ಅದು ಮುಗಿದೊಡನೆ ಟೀ ವಿರಾಮವಿದ್ದು ನಾನು ಹೊರಗಡೆ ಟೀ ಕುಡಿಯುತ್ತಾ ಇದ್ದೆ. ಅಷ್ಟರಲ್ಲಿ ಕಾರ್ಯಕರ್ತರೊಬ್ಬರು ಬಂದರು. ಅವರೊಡನೆ ಕಾರಂತರು ಇನ್ನು ಏನು ಕಾರ್ಯಕ್ರಮ ಎಂದು ಕೇಳಿದರಂತೆ. ಇವರು ಇನ್ನು ಸಮಾರೋಪ ಅಂದಾಗ, ಕಾರಂತರು “ಯಾರು ಸಮಾ ಆರೋಪ ಮಾಡುವವರು” ಎಂದು ಅವರದೇ ಶೈಲಿಯಲ್ಲಿ ಕೇಳಿದರಂತೆ. ಆಗ ಇವರು ಸುಬ್ರಾಯ ಚೊಕ್ಕಾಡಿ ಎಂದರಂತೆ. ಅದಕ್ಕೆ ಕಾರಂತರು, ನಾನು ಅವರ ಭಾಷಣ ಕೇಳಬಹುದಂತೋ? ಅಂತ ಕೇಳಿದರು. ಅದಕ್ಕೇ ಇಲ್ಲಿಗೆ ಬಂದೆ ಅಂದರು. ನನಗಾಗ ಏನು ಹೇಳಬೇಕೋ ತಿಳಿಯಲಿಲ್ಲ. ಅವರು ಭಾಷಣ ಕೇಳಲು ಕುಳಿತರೆ ನನಗೆ ನಿಜಕ್ಕೂ ಭಯವೇ. ಆದರೆ ಅವರು ಕೇಳ್ತಾರಾದರೆ, ಅದಕ್ಕಿಂತ ದೊಡ್ಡ ಸಂತೋಷ ನನಗೆ ಬೇರೆ ಇಲ್ಲ. ಅವರಲ್ಲಿ ಹೋಗಿ ಹೇಳಿ ಅಂದೆ. ಜತೆಗೇ ಆ ಕಾರ್ಯಕರ್ತರ ದಡ್ಡತನದ ಕುರಿತು ನಗೆಯೂ ಬಂತು!

ಎದುರಿಗೆ ಕಾರಂತರು, ಸ್ವಲ್ಪ ಭಯದಿಂದ, ಸ್ವಲ್ಪ ನವ್ಯರ ಹುಂಬ ಧೈರ್ಯದಿಂದ ಆದಿನ ಆರಂಭದ ಆತಂಕವನ್ನು ಮರೆತು ಮಾತನಾಡತೊಡಗಿದೆ. ಆ ದಿನದ ಭಾಷಣದ ನನ್ನ ಮುಖ್ಯ ಥೀಮ್ ಕಾರಂತರು ಹೊಸದನ್ನು ಸೃಷ್ಟಿಸಿ ಹೊಸಹಾದಿಯನ್ನು ಹಾಕಿ ಕೊಟ್ಟವರೂ ಅಲ್ಲ; ಕ್ರಾಂತಿಕಾರರೂ ಅಲ್ಲ; ಬದಲಾಗಿ ಅವರು ಪರಿಷ್ಕರಣವಾದಿ ಹಾಗೂ ಏಕಾಂಗಿಯಾಗಿ ಮುನ್ನುಗ್ಗುವ ಬರೆಹಗಾರರು ಎಂಬುದಾಗಿತ್ತು. ಅದಕ್ಕೆ ಅವರ ಕೃತಿಗಳು ಹಾಗೂ ಆಸಕ್ತಿಗಳಾದ ಯಕ್ಷಗಾನ, ಸಾಹಿತ್ಯ, ಸಂಗೀತ, ನೃತ್ಯ, ವಿಜ್ಞಾನ, ಪರಿಸರ, ಇತ್ಯಾದಿಗಳಿಂದಲೇ ಉದಾಹರಣೆಗಳನ್ನೆತ್ತಿಕೊಂಡು ಮೂಲತಃ ಅವರು ಈಗಿದ್ದುದನ್ನೇ, ಅದರಲ್ಲಿನ ಅನವಶ್ಯ ಹಾಗೂ ಅಪ್ರಸ್ತುತ ಭಾಗಗಳನ್ನು ತೆಗೆದು ಹಾಕಿ, ಪರಿಷ್ಕೃತ ಹೊಸರೂಪವನ್ನು ಸಿದ್ಧಪಡಿಸಿದರು ಎಂಬುದನ್ನು ವಿವರವಾಗಿ ಸುಮಾರು ಒಂದು ಗಂಟೆಗೂ ಮಿಕ್ಕಿ ಮಾತನಾಡಿದೆ. ನನಗೂ ಆ ದಿನ ನಾನು ಚೆನ್ನಾಗಿಯೇ ಮಾತನಾಡಿದೆ ಅನ್ನಿಸಿತು. ಸಭಾಸದರೂ ತುಂಬಾ ಆಸಕ್ತಿಯಿಂದ ಕೇಳಿದರು ಅನ್ನಿಸಿತು.

ಆದರೆ ಕಾರಂತರು? ನನ್ನ ಭಾಷಣ ಆರಂಭವಾಗಿ ಹತ್ತು ನಿಮಿಷದಲ್ಲಿ ಅವರು ಹೊರಹೋದರು. ಅವರಿಗೆ ಇಷ್ಟವಾಗಲಿಲ್ಲವೆಂದು ಹೊರಹೋದರು ಅಂದುಕೊಂಡೆ. ಆದರೆ ಆಮೇಲೆ ತಿಳಿಯಿತು ಅವರು ಒಳಗೆ ಸೆಖೆಯಾಗುತ್ತದೆಂದು ಒಂದು ಕುರ್ಚಿಯನ್ನು ಹೊರಹಾಕಿಸಿ, ಅಲ್ಲೇ ಕುಳಿತು ಇಡೀ ಭಾಷಣ ಕೇಳಿ ಹೋದರು ಅಂತ.. ಇದು ನನ್ನ ಅತ್ಯಂತ ಸಂತೋಷದ ಕ್ಷಣ ಎಂದು ನಾನು ಭಾವಿಸುವೆ. ನನ್ನಂಥ ಕಿರಿಯನಿಗೆ ಆ ಹಿರಿಯರು ಸ್ಪಂದಿಸಿದ ರೀತಿ ಸದಾ ಸ್ಮರಣೀಯ….

ನವದೆಹಲಿಯಲ್ಲಿನ ಕರ್ನಾಟಕ ಸಂಘವು ಶಿವರಾಮ ಕಾರಂತರ ಹೆಸರಿನ ಸಾಹಿತ್ಯ ಪ್ರಶಸ್ತಿಯನ್ನು ಕೊಡಮಾಡುತ್ತಿರುವ ಸಂದರ್ಭದಲ್ಲಿ ಈ ಎಲ್ಲ ಘಟನಾವಳಿಗಳು ನನ್ನ ನೆನಪಿನಂಗಳದಲ್ಲಿ ಕಾಣಿಸಿಕೊಂಡು ಮರೆಯಾದವು.

ಕನ್ನಡಕ್ಕೊಬ್ಬರೇ ಕಾರಂತ. ಅವರ ಕುರಿತಾದ ನೆನಪುಗಳು ಅನಂತ.

ಸುಬ್ರಾಯ ಚೊಕ್ಕಾಡಿ.