ಕಲ್ಲೇಶ್ವರ ದೇವಾಲಯವನ್ನು ನಾವು ಪ್ರವೇಶಿಸುವುದೇ ಹಿಂಬದಿಯ ದಿಕ್ಕಿನಿಂದ. ಮೊದಲು ಕಾಣಿಸುವ ಮಂಟಪದ ಭಿತ್ತಿ ಕಂಬಗೋಪುರ ರಚನೆಗಳೊಡನೆ ಸರಳವಾಗಿದ್ದರೂ ಗೋಡೆಯ ಮೇಲಂಚಿನಲ್ಲಿ ಹಲವು ಶಿಲ್ಪಗಳು ಗೋಚರಿಸುತ್ತವೆ. ಎರಡು ಸಾಲುಗಳಲ್ಲಿ ಕೀರ್ತಿಮುಖಗಳೊಳಗೂ ಪ್ರತ್ಯೇಕವಾಗಿಯೂ ಕಿರುಶಿಲ್ಪಗಳನ್ನು ಚಿತ್ರಿಸಿದೆ. ಆನೆ, ಕುದುರೆ, ಯಾಳಿ, ಮತ್ತಿತರ ಪ್ರಾಣಿಗಳು; ನರ್ತಕ, ಭಕ್ತ, ವಾದ್ಯಗಾರ, ಅಶ್ವಾರೋಹಿ, ರತಿಮನ್ಮಥ ಮೊದಲಾದವರ ಎಡೆಯಲ್ಲಿ ಅನೇಕ ಮಿಥುನ ಶಿಲ್ಪಗಳು ಕಂಡುಬರುತ್ತವೆ. ಎಲ್ಲ ಪುರಾತನಗುಡಿಗಳಲ್ಲಿ ಮಿಥುನಶಿಲ್ಪಗಳು ಸಾಂಪ್ರದಾಯಕವೆನ್ನುವಂತೆ ಕ್ವಚಿತ್ತಾಗಿ ಕಂಡರೆ ಬಾಗಳಿಯ ದೇಗುಲಭಿತ್ತಿಯ ಮೇಲಂಚಿನಲ್ಲಿ ವಿವಿಧ ಭಂಗಿಗಳ ಮಿಥುನಶಿಲ್ಪಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಐವತ್ಮೂರನೆಯ ಕಂತು

 

ಮೊದಲ ಮಳೆಯ ಸಿಂಚನ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನುದ್ದಕ್ಕೂ ತಂಪೆರೆದಿತ್ತು. ಬಾಗಳಿಯ ಕೆರೆಯಲ್ಲಾಗಲೇ ಸಾಕಷ್ಟು ನೀರು. ಅದೆಲ್ಲಿಂದ ಸಂದೇಶ ತಲುಪಿತೋ ಏನೋ, ಬಣ್ಣದ ಕೊಕ್ಕರೆ, ಚಮಚ ಕೊಕ್ಕಿಗರೂ ಸೇರಿದಂತೆ ನೀರುಹಕ್ಕಿಗಳ ದೊಡ್ಡ ದಂಡೇ ಅಲ್ಲಿ ನೆರೆದಿತ್ತು. ಏರಿಯ ಇನ್ನೊಂದು ಬದಿಯಲ್ಲಿ ಪುರಾತನ ದೇಗುಲವೊಂದು ತಗ್ಗಿನಿಂದಲೇ ಕೈಬೀಸಿ ಕರೆಯತೊಡಗಿತ್ತು.

ಹೂವಿನ ಹಡಗಲಿಯಲ್ಲಿ ಇತಿಹಾಸದ ಹಲವು ಹತ್ತು ಅಧ್ಯಾಯಗಳೇ ಅಡಗಿರುವಂತಿದೆ. ಕಲ್ಯಾಣದ ಚಾಲುಕ್ಯ ಅರಸರು ನಿರ್ಮಾಣ ಮಾಡಿದ ಅನೇಕ ಗುಡಿಗಳು ಹೂವಿನ ಹಡಗಲಿಯಲ್ಲೂ ಈ ತಾಲ್ಲೂಕಿಗೆ ಸೇರಿದ ಮಾಗಳ, ಬಾಗಳಿ, ಹಿರೇ ಹಡಗಲಿ, ನೀಲಗುಂದ, ಕುರುವತ್ತಿ ಮೊದಲಾದ ಸ್ಥಳಗಳಲ್ಲೂ ಕಂಡುಬರುತ್ತವೆ. ಹಡಗಲಿಯಿಂದ ದಕ್ಷಿಣಕ್ಕೆ ಇಪ್ಪತ್ಮೂರು ಕಿಮೀ ದೂರದಲ್ಲಿರುವ ಬಾಗಳಿಯನ್ನು ಶಾಸನಗಳಲ್ಲಿ ಬಾಳ್ಗಲಿ ಎಂಬ ಹೆಸರಿನಿಂದ ಗುರುತಿಸಲಾಗಿದೆ. ಕಲ್ಯಾಣ ಚಾಲುಕ್ಯರೂ ಮುಂದಿನ ಶತಮಾನಗಳಲ್ಲಿ ಹೊಯ್ಸಳ, ವಿಜಯನಗರ ಅರಸರೂ ಈ ಪ್ರಾಂತ್ಯವನ್ನು ಆಳಿದ್ದಾರೆ. ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಕಾಲದಲ್ಲಿ ಪ್ರಮುಖ ಅಗ್ರಹಾರವಾಗಿದ್ದ ಬಾಗಳಿಯಲ್ಲಿ ಕಲ್ಲೇಶ್ವರ ದೇವಾಲಯವಿದೆ.

ಹಿಂದೆ ಈ ದೇವರನ್ನು ಕಲಿದೇವ ಎಂದು ಕರೆಯುತ್ತಿದ್ದರಂತೆ. ಕೆರೆಯ ಬದಿಯ ವಿಶಾಲ ಆವರಣದಲ್ಲಿ ಹರಡಿಕೊಂಡಿರುವ ಈ ಪುರಾತನ ದೇಗುಲ ಸಂಕೀರ್ಣ ಕಣ್ಣಿಗೊಂದು ಹಬ್ಬ. ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಣೆಗೊಳಪಟ್ಟಿರುವ ಈ ದೇಗುಲದ ಆವರಣದಲ್ಲಿ ಚಾಲುಕ್ಯರ ಕಾಲಕ್ಕೆ ಸೇರಿದ ಹಲವು ಗುಡಿಮಂಟಪಗಳಿವೆ. ಕೆಲವು ಪುರಾತನ ಶಾಸನ, ವೀರಗಲ್ಲುಗಳನ್ನೂ ಸಂರಕ್ಷಿಸಿ ಇರಿಸಲಾಗಿದೆ. ಚಾಲುಕ್ಯದೊರೆ ಆಹವಮಲ್ಲನ ಆಳ್ವಿಕೆಯ ಕಾಲವಾದ 987 ರಲ್ಲಿ ದುಗ್ಗಿಮಯ್ಯನೆಂಬಾತನು ಈ ದೇಗುಲವನ್ನು ನಿರ್ಮಿಸಿದನಂತೆ.

ಕಲ್ಲೇಶ್ವರ ದೇವಾಲಯವನ್ನು ನಾವು ಪ್ರವೇಶಿಸುವುದೇ ಹಿಂಬದಿಯ ದಿಕ್ಕಿನಿಂದ. ಮೊದಲು ಕಾಣಿಸುವ ಮಂಟಪದ ಭಿತ್ತಿ ಕಂಬಗೋಪುರ ರಚನೆಗಳೊಡನೆ ಸರಳವಾಗಿದ್ದರೂ ಗೋಡೆಯ ಮೇಲಂಚಿನಲ್ಲಿ ಹಲವು ಶಿಲ್ಪಗಳು ಗೋಚರಿಸುತ್ತವೆ. ಎರಡು ಸಾಲುಗಳಲ್ಲಿ ಕೀರ್ತಿಮುಖಗಳೊಳಗೂ ಪ್ರತ್ಯೇಕವಾಗಿಯೂ ಕಿರುಶಿಲ್ಪಗಳನ್ನು ಚಿತ್ರಿಸಿದೆ. ಆನೆ, ಕುದುರೆ, ಯಾಳಿ, ಮತ್ತಿತರ ಪ್ರಾಣಿಗಳು; ನರ್ತಕ, ಭಕ್ತ, ವಾದ್ಯಗಾರ, ಅಶ್ವಾರೋಹಿ, ರತಿ-ಮನ್ಮಥ ಮೊದಲಾದವರ ಎಡೆಯಲ್ಲಿ ಅನೇಕ ಮಿಥುನ ಶಿಲ್ಪಗಳು ಕಂಡುಬರುತ್ತವೆ. ಎಲ್ಲ ಪುರಾತನಗುಡಿಗಳಲ್ಲಿ ಮಿಥುನಶಿಲ್ಪಗಳು ಸಾಂಪ್ರದಾಯಕವೆನ್ನುವಂತೆ ಕ್ವಚಿತ್ತಾಗಿ ಕಂಡರೆ ಬಾಗಳಿಯ ದೇಗುಲಭಿತ್ತಿಯ ಮೇಲಂಚಿನಲ್ಲಿ ವಿವಿಧ ಭಂಗಿಗಳ ಮಿಥುನಶಿಲ್ಪಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಮುಖ್ಯದೇಗುಲದ ದ್ವಾರಪಟ್ಟಿಕೆಯ ಲಲಾಟದಲ್ಲಿ ಗಜಲಕ್ಷ್ಮಿ, ತೋರಣದಲ್ಲಿ ದೇವತೆಗಳ ಸಾಲು. ಒಂಬತ್ತು ಪಟ್ಟಿಕೆಗಳ ಚೌಕಟ್ಟು. ವಜ್ರ, ನಾಗ-ನಾಗಿಣಿ, ಹೂಬಳ್ಳಿಗಳು, ನರ್ತಕ ವಾದ್ಯಗಾರರೇ ಮೊದಲಾದವರನ್ನು ಈ ಪಟ್ಟಿಕೆಗಳಲ್ಲಿ ಸೂಕ್ಷ್ಮವಾಗಿ ಚಿತ್ರಿಸಿರುವ ಬಗೆ ಅಚ್ಚರಿಯುಂಟುಮಾಡುತ್ತದೆ. ಪಟ್ಟಿಕೆಯ ಅಡಿಭಾಗದಲ್ಲಿ ದ್ವಾರಪಾಲಕರೊಡನೆ ರತಿ-ಮನ್ಮಥರೂ ನಿಂತಿರುವುದು ಗಮನಾರ್ಹ. ಎಂದರೆ, ಹೊರಗೋಡೆಯ ಮಿಥುನ ಶಿಲ್ಪಗಳ ಲೌಕಿಕವೇನಿದ್ದರೂ ಅಲ್ಲಿಗೇ ಕೊನೆಗೊಂಡಂತಾಯಿತು.

ನಡುಮಂಟಪದಲ್ಲಿ ಕಿರಿದೊಂದು ನಂದಿಯ ವಿಗ್ರಹ. ಗರ್ಭಗುಡಿಯತ್ತಣ ಬಾಗಿಲವಾಡದ ಕೆತ್ತನೆ ಇನ್ನಷ್ಟು ಸೊಗಸಿನದು. ಲಲಾಟದಲ್ಲಿ ತ್ರಿಮೂರ್ತಿಗಳೆ ಬಂದು ಸೇರಿದ್ದಾರೆ. ಮಕರತೋರಣದಲ್ಲಿ ಆಚೀಚೆಗೆ ಕೈಮುಗಿದು ಕುಳಿತ ಬ್ರಹ್ಮ ವಿಷ್ಣು. ನಡುವೆ ಅಂಧಕಾಸುರ ಸಂಹಾರಿ, ಗಜಾಸುರ ಸಂಹಾರಿ, ಹಾಗೂ ನರ್ತನಾಸಕ್ತ ಶಿವನ ರೂಪಗಳನ್ನು ಚಿತ್ರಿಸಿದೆ. ಜಾಲಂದ್ರಸಹಿತವಾದ ಬಾಗಿಲವಾಡದ ಪಟ್ಟಿಕೆಗಳು ಇನ್ನಷ್ಟು ಸೂಕ್ಷ್ಮಕೆತ್ತನೆಯಿಂದ ಮನಸೆಳೆಯುತ್ತವೆ. ನೆಲದಲ್ಲಿ ಹುದುಗಿದಂತಿರುವ ಪಾಣಿಪೀಠದ ಮೇಲೆ ಶಿವಲಿಂಗವಿದೆ. ದೇವಾಲಯದ ವಿಶಾಲವಾದ ಹೊರಮಂಟಪದ ಅನೇಕ ಕಂಬಗಳೂ ನಕ್ಷತ್ರಾಕಾರದಲ್ಲಿ ವಿನ್ಯಾಸಗೊಂಡ ಕಕ್ಷಾಸನಗಳೂ ಕಟ್ಟಡದ ಒಟ್ಟಂದವನ್ನು ಮಿಗಿಲುಗೊಳಿಸಿವೆ. ಒಂದಕ್ಕಿಂತ ಒಂದು ವಿಭಿನ್ನವಾದ ಕೆತ್ತನೆಯ ವಿನ್ಯಾಸದಿಂದ ಕಂಗೊಳಿಸುವ ಕಂಬಗಳು. ಕಂಬಗಳ ಬುಡದ ಚೌಕಾಕಾರದ ತೆರವಿನಲ್ಲಿ ನರ್ತಕಿಯರೂ ನರಸಿಂಹ ಮತ್ತಿತರ ದೇವತೆಗಳೂ ಚಿತ್ರಿತರಾಗಿದ್ದಾರೆ.

ಮಂಟಪದಲ್ಲಿ ಗರ್ಭಗುಡಿಗೆ ಅಭಿಮುಖವಾಗಿ ಸಾಲಂಕೃತ ನಂದಿಯ ದೊಡ್ಡ ವಿಗ್ರಹವಿದೆ. ಎಡಭಾಗದ ಗುಡಿಯಲ್ಲಿ ನರಸಿಂಹ ದೇವರ ವಿಗ್ರಹವಿದೆ. ದ್ವಾದಶ ಭುಜಗಳ ಅದ್ಭುತರೂಪವಿದು. ಎಂಟು ಕೈಗಳಲ್ಲಿ ಆಯುಧಗಳನ್ನು ಧರಿಸಿದ ಉಗ್ರನರಸಿಂಹನು ಎರಡು ಕೈಗಳಿಂದ ಹಿರಣ್ಯಕಶಿಪುವನ್ನು ಸೆಳೆದು ತೊಡೆಯ ಮೇಲೇರಿಸಿಕೊಂಡು ಇನ್ನೆರಡು ಕೈಗಳಿಂದ ರಕ್ಕಸನ ದೇಹವನ್ನು ಬಗೆಯುತ್ತಿರುವ ದೃಶ್ಯ ಶಿಲಾರೂಪದಲ್ಲಿ ಮೂಡಿಬಂದಿರುವ ರೀತಿ ಅಸಾಧಾರಣ. ಇನ್ನೊಂದು ಗರ್ಭಗುಡಿಯಲ್ಲಿ ಸೂರ್ಯದೇವನ ಪ್ರತಿಮೆಯನ್ನು ಕಾಣಬಹುದು. ಒಳಗುಡಿಗೆ ಸಂಪರ್ಕಕಲ್ಪಿಸುವ ಇನ್ನೊಂದು ಬಾಗಿಲವಾಡದ ಕೆತ್ತನೆಯೂ ಆಕರ್ಷಕವಾಗಿದ್ದು ಗಂಧರ್ವ ನರ್ತಕಗಾಯಕರನ್ನು ಉಬ್ಬುಶಿಲ್ಪಗಳ ರೂಪದಲ್ಲಿ ಅಳವಡಿಸಿರುವ ರೀತಿ ಅನನ್ಯವಾಗಿದೆ.

ಹಿರೇ ಹಡಗಲಿಯಿಂದ ಬಾಗಳಿಗೆ ಬಂದು ಮುಂದೆ ನೀಲಗುಂದದ ಮಾರ್ಗವಾಗಿ ಕುರುವತ್ತಿ, ಮೈಲಾರಗಳಿಗೆ ಹೋಗಿ ಬರಬಹುದು. ಈ ಎಲ್ಲ ಸ್ಥಳಗಳೂ ಧಾರ್ಮಿಕ ಕ್ಷೇತ್ರಗಳಾಗಿರುವುದರ ಜೊತೆಗೆ ಐತಿಹಾಸಿಕ ಮಹತ್ವದವೆಂದು ಬೇರೆ ಹೇಳಬೇಕಾಗಿಲ್ಲ.