ಬಹಳ ನಿಧಾನವಾಗಿಯೇ ಹರಿಯುವ ಇವುಗಳ ಆಂಟೆನಾಗಳು ಮಾತ್ರ ಬಹಳ ವೇಗವಾಗಿ ಕೆಲಸ ಮಾಡುವಂತದ್ದು. ಅವುಗಳಿಗೆ ಗಟ್ಟಿಯಾದ ದವಡೆಯೂ ಇರುವುದಂತೆ. ಮತ್ತೆ ಹುಳವನ್ನು ಅದೇ ಕಡ್ಡಿಯಿಂದ ಸಮತಟ್ಟು ಪ್ರದೇಶಕ್ಕೆ ಹಾಕಿ ನನ್ನ ಪ್ರಯೋಗಕ್ಕಾಗಿ ಉಪ್ಪಿನ ಹರಳು ಹಾಕಿ ಬಿಟ್ಟೆ. ಹಾಕಿದ ತಕ್ಷಣವೇ ಹುಳ ಕೊಂಚ ಕೊಸರಾಡಿದಂತೆ ಕಂಡಿತು. ಮರು ಕ್ಷಣವೇ ಅದರ ಮೈ ನೀರಾಗಿ ಕರಗಲಾರಂಭಿಸಿತು. ಇನ್ನೂ ಸೂಕ್ಷ್ಮವಾಗಿ ನೋಡುತ್ತಾ ನಿಂತೆ. ನೆಗಡಿಯ ರೂಪಕ್ಕೆ ಪರಿವರ್ತನೆ ಹೊಂದುತ್ತಾ ಅದು ನೀರಾಗಿ ಹೋಗತೊಡಗುತ್ತಿತ್ತು. ಜೊತೆಗೆ ಏನೋ ಕಮಟು ವಾಸನೆ ಅದರಿಂದ ಉತ್ಪತ್ತಿಯಾಗುತ್ತಿತ್ತು.
ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥನ

 

ಉಮ್ಮನ ಎಲ್ಲ ಮಕ್ಕಳೂ ಬಂದ ದಿನ ಮನೆಯಲ್ಲಿ ಹಬ್ಬ. ಹೀಗೆ ಎಲ್ಲರೂ ಬರುವುದಕ್ಕೆ ಎರಡು ಹಬ್ಬಗಳನ್ನು ಕಾಯಬೇಕು. ರಾತ್ರಿಯಾದರೆ ಎಲ್ಲರೂ ಒಂದೇ ಮಂಚದಲ್ಲಿ ಜಾಗ ಮಾಡಿಕೊಂಡು ಕುಳಿತು ಮಾತನಾಡುವುದೆಂದ್ರೆ ಸ್ವರ್ಗಕ್ಕೆ ಮೂರೇ ಗೇಣು. ಗಂಡು ಮಕ್ಕಳಾದ ಅಣ್ಣ ಮತ್ತು ನಾನು ಹಾಸ್ಟೆಲ್ ನಲ್ಲೇ ಇರುವುದು, ನನಗೆ ರಜೆ ಸಿಕ್ಕಾಗ ಅವನಿಗೆ ಸಿಗುವುದಿಲ್ಲ, ಅವನಿಗಿದ್ದಾಗ ನನಗೆ ಇರುತ್ತಿರಲಿಲ್ಲ. ಆ ದಿನ ಯಾವುದೋ ಹಬ್ಬದ ಆಸುಪಾಸಿನ ದಿನ ಎಲ್ಲರೂ ಸೇರಿದ್ದೆವು. ಒಬ್ಬೊಬ್ಬರು ಒಂದೊಂದು ಅನುಭವವನ್ನು ಹೇಳಿ ನಗುತ್ತಿರಬೇಕಾದರೆ, ಅಣ್ಣ ಮಾತ್ರ ಆ ಸ್ವಾರಸ್ಯಕರ ಕಥೆ ಹೇಳಿ ರೇಜಿಗೆ ಹುಟ್ಟಿಸಿದ. ಹೇಳಿ ಮುಗಿದ ಬಳಿಕ ಅವನೊಬ್ಬನೇ ಹೊಟ್ಟೆ ತುಂಬಾ ಬಿರಿಯಾನಿ ತಿಂದದ್ದು. ನಮಗ್ಯಾರಿಗೂ ಆ ವಿವರಣಾತ್ಮಕ ಅಸಹ್ಯ ಕಥೆಯಿಂದಾಗಿ ಬಿರಿಯಾನಿ ಒಂದು ಹಿಡಿಯೂ ಗಂಟಲಿಳಿಸಿಕೊಳ್ಳಲು ಆಗಲಿಲ್ಲ. ಈಗ ಅದೇ ಕಥೆ ನಾನು ಹೇಳುತ್ತೇನೆ. ತಿನ್ನುತ್ತಾ ಓದುವವರಿದ್ದರೆ ಈಗಲೇ ನಿಲ್ಲಿಸಿ, ಅಥವಾ ಇನ್ನು ತಿನ್ನಲೆಂದು ತೀರ್ಮಾನಿಸಿದವರಿದ್ದರೆ ತಿಂದ ಮೇಲೆ ಓದು ಮುಂದುವರಿಸಿ.

ಆ ದಿನ ಬೆಳಗಿನ ಜಾವ ಎದ್ದಿದ್ದ ಅಣ್ಣ ಹಾಸ್ಟೆಲ್ ನಲ್ಲಿ ಮುಖ ತೊಳೆಯುವ ಸಲುವಾಗಿ ಹಿತ್ತಲ ಪೈಪಿನ ಬಳಿ ಬಂದನಂತೆ. ಮಳೆಗಾಲ ಬೇರೆ, ಮೊದಲ ಬಾರಿ ಬಾಯಿ ಮುಕ್ಕಳಿಸಿ, ಬ್ರಶ್ ಮಾಡಿ ಮುಗಿದ ಮೇಲೆ ಒಂದು ಬೊಗಸೆ ನೀರು ಹಾಕಿದವನಿಗೆ ಬಾಯಿ ತುಂಬಾ ಲೋಳೆಯಾಗಿ ಗಂಟಲು ಅಂಟತೊಡಗಿತಂತೆ. ಏನಪ್ಪಾ ಎಂದು ಬಾಯೊಳಗಿನ ನೀರಲ್ಲೇ ನಾಲಗೆ ಆಡಿಸುತ್ತಿರಬೇಕಾದರೆ ಮೆತ್ತಗಿನ ಮಾಂಸ ಖಂಡವೊಂದು ನೀರಲ್ಲಿದ್ದುದ್ದು ಸ್ಪರ್ಶವಾದದ್ದೇ ತಡ, ತುಪುಕ್ ಎಂದು ಉಗಿದು ಬಿಟ್ಟ. ಉಗುಳು ಬಿದ್ದ ಕಡೆ ಮೈ ಮೇಲಿನ ಲೋಳೆ ಕರಗಿದ್ದ, ಬಸವನ ಹುಳು ಜೀವನ್ಮರಣ ಹೋರಾಟದಲ್ಲಿರಬೇಕೇ! ಇಷ್ಟು ಕೇಳುವಾಗಲೇ, ಕೇಳುಗರಾದ ನಮ್ಮೆಲ್ಲರ ಕರ್ಣ ಪಟಲಗಳಿಗೆ ಕೈ ಹೋಗಿ ಸಾಮೂಹಿಕ “ವ್ಯಾಕ್ ಥೂ” ಗಳು ಪ್ರಾರಂಭಗೊಂಡಾಗಿತ್ತು. ಎಲ್ಲರೂ ಎದ್ದು ಓಡಿಹೋಗಿ ಬಾಯಿ ಮುಕ್ಕಳಿಸಲು ಹೊರಟರೆ ಅಣ್ಣ ಏನೂ ಆಗದವನಂತೆ ಇನ್ನಷ್ಟು ಕಥೆ ಮುಂದುವರಿಸಿ, “ಆ ದಿನವೆಲ್ಲಾ ಬಾಯಿ ಮುಕ್ಕಳಿಸಿ ಮರಳು ತಿಂದು ಬಾಯಿಯ ಲೋಳೆಯನ್ನು ಹೋಗಲಾಡಿಸಿದೆ” ಎಂದು ಹೇಳುತ್ತಲೇ ಇದ್ದದ್ದು ಬಾಯಿತೊಳೆಯಲು ಬಚ್ಚಲು ಮನೆಗೆ ಬಂದ ನನಗೆ ಕೇಳುತ್ತಿತ್ತು.

ನನಗೂ ಎಲ್ಲೋ ಓದಿದ ನೆನಪು. ಈ ಬಸವನ ಹುಳಗಳನ್ನು ದಾರದಲ್ಲಿ ಕಟ್ಟಿ ಉತ್ತಮ ಹಾಡುಗಾರರ ಗಂಟಳಿಗೆ ಇಳಿಯ ಬಿಟ್ಟು ಸ್ವರ ಮಾಧುರ್ಯವನ್ನು ನುಣುಪುಗೊಳಿಸುವ ಚಿಕಿತ್ಸೆಯಿದೆಯಂತೆ. ಇದು ಎಷ್ಟು ಸುಳ್ಳು ಎಷ್ಟು ಸತ್ಯ ಗೊತ್ತಿಲ್ಲ, ಆ ಬಳಿಕ ಕೆಲವೊಮ್ಮೆ ಅತ್ಯುತ್ತಮ ಹಾಡುಗಾರರ ಹಾಡೆಲ್ಲಾ ಆಲಿಸುವಾಗ ನನಗೆ ಬಸವನ ಹುಳುವಿನ ಲೋಳೆ ನೆನಪಿಗೆ ಬಂದು ರಪ್ಪನೆ ರೋಮಗಳೆಲ್ಲಾ ಸೆಟೆದುಕೊಳ್ಳುತ್ತಿತ್ತು.

ಬಸವನ ಹುಳು ಅಂದರೆ ಜಗತ್ತಿನಲ್ಲೇ ಬಹಳ ನಿಧಾನವಾಗಿ ಸಾಗುವ ಹುಳವಂತೆ. ಮಳೆಗಾಲದಲ್ಲಿ ಇವುಗಳ ಇರುವಿಕೆ ಜಾಸ್ತಿ. ತೇವಾಂಶ ಪ್ರದೇಶದಲ್ಲಿ ಕಾಣ ಸಿಗುವ ಇವುಗಳು ಗೋಡೆಗಳೆಲ್ಲಾ ತೇವ ಮೂಡಿಸುತ್ತಾ, ತಾನು ಹೋದ ಕಡೆ ಮಂದವಾದ ಒಂದು ಗೆರೆ ಎಳೆಯುತ್ತಾ ಸಾಗುತ್ತಿರುತ್ತದೆ.

ಒಂದು ದಿನ ಮದರಸದ ಸಹಪಾಠಿ ಹುಡುಗನೊಬ್ಬ ದೊಡ್ಡ ಬಸವನ ಹುಳ ತೋರಿಸಿ ಇವುಗಳಿಗೆ ಉಪ್ಪು ಹಾಕಿದರೆ ನೀರಾಗುತ್ತದೆಂದು ಬಿಟ್ಟಿ ಸಲಹೆ ಕೊಟ್ಟಿದ್ದ. ಆ ಕ್ಷಣ ಅವನ ಮಾತಿಗೆ ನಾನು ಸೊಪ್ಪು ಹಾಕಿರಲಿಲ್ಲ. ಈಗ್ಗೆ ಕಳೆದ ವರ್ಷದ ಮಳೆಗಾಲದಲ್ಲಿ ಇವುಗಳನ್ನು ಕಂಡಂತೆ ಅವನ ಮಾತು ನೆನಪಿಗೆ ಬಂದು ಒಂದೆರಡು ಕಲ್ಲು ಉಪ್ಪು ತಂದು ಇದರ ಮೇಲೆ ಸುರುವಿದ್ದೆ. ಏನಾಗುತ್ತೆ ನೋಡೋಣವೆನ್ನುತ್ತಾ ಅದನ್ನೇ ನೋಡುತ್ತಾ ನಿಂತೆ. ಗೆರೆ ಎಳೆದುಕೊಂಡು ಸಾಗುತ್ತಿರುವ ಬಸವನ ಹುಳಕ್ಕೆ ಆ ಹರಳುಗಳು ಬೀಳಲಿಲ್ಲ. ಸುಮ್ಮನೆ ಕುತೂಹಲಕ್ಕೆಂದು ಅದರ ಹತ್ತಿರ ಹೋಗಿ ಕುಳಿತು ಸಣ್ಣ ಹುಲ್ಲು ಕಡ್ಡಿಯಲ್ಲೊಮ್ಮೆ ಹುಳವನ್ನು ಮುಟ್ಟಿದೆ. ಸಣ್ಣಗೆ ಮಿಸುಕಿ, ಮತ್ತೇನೂ ಆಗದಂತೆ ಹುಳ ಮತ್ತೆ ನಿಧಾನವಾಗಿ ಹರಿಯಲು ಶುರುವಿಟ್ಟಿತು. ವಿಶೇಷವೆಂದರೆ ಅವಕ್ಕೆ ತಲೆಯ ಬಳಿ ಎರಡು ಸಣ್ಣ ಕೊಂಬುಗಳಿರುತ್ತವೆ. ಅವು ಸೆನ್ಸಾರ್ ಮಾದರಿಯಲ್ಲಿ ಆಂಟೇನಾದಂತೆ ಕೆಲಸ ಮಾಡುತ್ತವಂತೆ. ಕುತೂಹಲಕ್ಕಾಗಿ ಆಂಟೆನಾವೊಂದರ ಹತ್ತಿರ ಆ ಹುಲ್ಲುಕಡ್ಡಿಯಿಂದ ಮುಟ್ಟಿದೆ. ಒಂದು ಹೂತು ಹೋದಂತೆ ಒಳಗೆ ಇಳಿದು ಹೋಯಿತು, ಇನ್ನೊಂದು ಹಾಗೆಯೇ ಹೊರ ಬಂದಂತೆಯೇ ಇತ್ತು. ಎರಡಕ್ಕೂ ತಾಗಿಸಿದರೆ ಎರಡೂ ಒಳಗೆಳೆದುಕೊಂಡು ಅಂತರ್ಧಾನವಾಯಿತು. ಸ್ವಲ್ಪ ಹೊತ್ತಿನ ತರುವಾಯ ಮತ್ತೆ ಹೊರ ಬಂದಿತ್ತು.

ಬಹಳ ನಿಧಾನವಾಗಿಯೇ ಹರಿಯುವ ಇವುಗಳ ಆಂಟೆನಾಗಳು ಮಾತ್ರ ಬಹಳ ವೇಗವಾಗಿ ಕೆಲಸ ಮಾಡುವಂತದ್ದು. ಅವುಗಳಿಗೆ ಗಟ್ಟಿಯಾದ ದವಡೆಯೂ ಇರುವುದಂತೆ. ಮತ್ತೆ ಹುಳವನ್ನು ಅದೇ ಕಡ್ಡಿಯಿಂದ ಸಮತಟ್ಟು ಪ್ರದೇಶಕ್ಕೆ ಹಾಕಿ ನನ್ನ ಪ್ರಯೋಗಕ್ಕಾಗಿ ಉಪ್ಪಿನ ಹರಳು ಹಾಕಿ ಬಿಟ್ಟೆ. ಹಾಕಿದ ತಕ್ಷಣವೇ ಹುಳ ಕೊಂಚ ಕೊಸರಾಡಿದಂತೆ ಕಂಡಿತು. ಮರು ಕ್ಷಣವೇ ಅದರ ಮೈ ನೀರಾಗಿ ಕರಗಲಾರಂಭಿಸಿತು. ಇನ್ನೂ ಸೂಕ್ಷ್ಮವಾಗಿ ನೋಡುತ್ತಾ ನಿಂತೆ. ನೆಗಡಿಯ ರೂಪಕ್ಕೆ ಪರಿವರ್ತನೆ ಹೊಂದುತ್ತಾ ಅದು ನೀರಾಗಿ ಹೋಗತೊಡಗುತ್ತಿತ್ತು. ಜೊತೆಗೆ ಏನೋ ಕಮಟು ವಾಸನೆ ಅದರಿಂದ ಉತ್ಪತ್ತಿಯಾಗುತ್ತಿತ್ತು. ಕ್ಷಣಾರ್ಧದಲ್ಲೇ ಉಪ್ಪಿನೊಂದಿಗೆ ಹುಳ ಕರಗಿ ನೀರಾಗಿ ಹೋಯಿತು. ಎಲ್ಲವೂ ಮುಗಿದ ಮೇಲೆ ಅದರಲ್ಲುಳಿದದ್ದು ಸಣ್ಣಗೆ ಬಿಳಿ ಗಟ್ಟಿಯಂತಹ ಮಾಂಸವೋ, ಮೂಳೆಯೋ ಬಹುಶಃ ದವಡೆಯೇ ಇರಬೇಕೆಂದು ಲೆಕ್ಕ ಹಾಕಿ ಕೈ ತೊಳೆದುಕೊಂಡು ಮನೆಯೊಳಗಡೆ ಬಂದೆ.

ಈ ಬಸವನ ಹುಳಗಳನ್ನು ದಾರದಲ್ಲಿ ಕಟ್ಟಿ ಉತ್ತಮ ಹಾಡುಗಾರರ ಗಂಟಳಿಗೆ ಇಳಿಯ ಬಿಟ್ಟು ಸ್ವರ ಮಾಧುರ್ಯವನ್ನು ನುಣುಪುಗೊಳಿಸುವ ಚಿಕಿತ್ಸೆಯಿದೆಯಂತೆ. ಇದು ಎಷ್ಟು ಸುಳ್ಳು ಎಷ್ಟು ಸತ್ಯ ಗೊತ್ತಿಲ್ಲ, ಆ ಬಳಿಕ ಕೆಲವೊಮ್ಮೆ ಅತ್ಯುತ್ತಮ ಹಾಡುಗಾರರ ಹಾಡೆಲ್ಲಾ ಆಲಿಸುವಾಗ ನನಗೆ ಬಸವನ ಹುಳುವಿನ ಲೋಳೆ ನೆನಪಿಗೆ ಬಂದು ರಪ್ಪನೆ ರೋಮಗಳೆಲ್ಲಾ ಸೆಟೆದುಕೊಳ್ಳುತ್ತಿತ್ತು.

ತಂಗಿ ಬಿ.ಎಸ್ಸಿ ಫೈನಲ್ ಇಯರ್ ಓದುತ್ತಿದ್ದಳು. ಎಂ.ಬಿ.ಬಿ.ಎಸ್ ಮಾಡಬೇಕಾದವಳು ಆ ಕನಸು ಕೈಗೂಡದೆ ಬಿ.ಎಸ್ಸಿ ಆಯ್ಕೆ ಮಾಡಿದ್ದಳು. ಸುಮ್ಮನೆ ಅವಳಿಗೊಮ್ಮೆ ಉಪ್ಪು ಮತ್ತು ಬಸವನಹುಳದ ಬಗ್ಗೆ ಹೇಳಿದೆ. ಹೇಳುವುದಷ್ಟನ್ನೂ ಕೇಳಿಸಿಕೊಂಡು, “ಆಸ್ಮಾಸಿಸ್, ಅಭಿಸಾರಣೆ” ಅಂಥ ವೈಜ್ಞಾನಿಕ ಕಾರಣ ಹೇಳತೊಡಗಿದಳು. ಅಭಿಸಾರಣೆಯೆಂದರೆ ಕಡಿಮೆ ನೀರಿರುವ ಕಡೆ ಹೆಚ್ಚು ನೀರು ಪ್ರಸರಣೆಯಾಗುವ ಕ್ರಿಯೆ. ಬಹುಃಶ ಇಲ್ಲಿಯೂ ನಡೆದದ್ದೂ ಅದೇ, ಬಸವನ ಹುಳದ ಮೈಮೇಲಿನ ನೀರಿನಂಶ ಕಡಿಮೆ ತೇವವಿರುವ ಉಪ್ಪಿನ ಕಡೆಗೆ ಪ್ರಸರಣೆಗೊಂಡಿರುವುದೆಂದು ತಂಗಿ ಪ್ರತಿಪಾದಿಸಿದಳು. ನಾನು ಅವಳ ಮುಖವನ್ನೇ ನೋಡುತ್ತಾ ನಿಂತೆ. ಅವಳ ಆತ್ಮ ವಿಶ್ವಾಸದ ಮಾತುಗಳು ಪ್ರಾಣಿ ತಜ್ಞೆಯ ಚಹರೆ ಮುಖದಲ್ಲಿ ವ್ಯಕ್ತವಾಗುತ್ತಿತ್ತು.

ಬಸವನ ಹುಳಗಳಲ್ಲಿ ಎರಡು ವಿಧ. ಒಂದು ಚಿಪ್ಪು ಹೊಂದಿರುವಂತದ್ದು, ಇನ್ನೊಂದು ಚಿಪ್ಪು ಇಲ್ಲದವುಗಳು. ಕೃಷಿಗೆ ಹಾನಿಯುಂಟು ಮಾಡುವ ಇವುಗಳು ಸಸ್ಯಗಳ ಚಿಗುರನ್ನೇ ಕೊಳೆಯುವಂತೆ ಮಾಡುವುದುಂಟು. ಆದುದರಿಂದಲೇ ಕೃಷಿಕರಿಗೆ ಇವನ್ನು ಕಂಡರೆ ಮೂಗಿನ ತುದಿಯಲ್ಲಿ ಸಿಟ್ಟು. ಮೊನ್ನೆ ಮೊನ್ನೆ ಪತ್ರಿಕೆ ಓದುವಾಗ ಆಫ್ರಿಕನ್ ಬಸವನ ಹುಳಗಳು ಉಪ್ಪಿನಂಗಡಿ ಸಮೀಪದ ಅಲಂಗಾರ್, ಕಡಬ, ಸುಬ್ರಮಣ್ಯ ಪರಿಸರದಲ್ಲಿ ಪತ್ತೆಯಾಗಿದೆಯೆಂದು ಓದಿದ್ದೆ. ಇವುಗಳು ಮೂಲತಃ ಕೇರಳದಿಂದ ಬಂದಿದ್ದೆಂದೂ ವರದಿಯಿತ್ತು. ಅಷ್ಟು ದೂರ ಕೇರಳದಿಂದ ಇವುಗಳು ಬಂದವೆಂದು ನಂಬುವುದಾದರೂ ಹೇಗೆ. ಹೋಗಲಿ, ಕೇರಳದಿಂದ ಹೇಗೋ ನಡೆದುಕೊಂಡು ಬರಲು ಅವುಗಳಿಗೆ ಹತ್ತು ವರ್ಷವಾದರೂ ಆಯುಸ್ಸಿದೆಯಲ್ವಾ? ಆ ದೂರ ಆಫ್ರಿಕಾದಿಂದ ಹೇಗೆ ಬಂತೆಂದು ತಲೆ ಹುಣ್ಣು ಮಾಡಿಕೊಂಡಿದ್ದೆ. ಹೀಗೆ ಪರಿಸರದ ಬಗ್ಗೆ ಏನಾದರೂ ಸಂಶಯ ಬಂದ ಕೂಡಲೇ ನಾನು ಫೋನಾಯಿಸುವುದು ಗೆಳೆಯ ಡಾಕ್ಟರ್ ಹನೀಫ್ ಬೆಳ್ಳಾರೆಗೆ.

ಹಾಗೆ ಈ ಸಲ ಈ ವಿಷಯ ಪ್ರಸ್ತಾಪಿಸಿದೆ. ಇಲ್ಲಿರುವುದು ಟ್ವಿಸ್ಟ್ ಅಂತ ಅವುಗಳ ಪರ್ಯಟನೆ ಬಗ್ಗೆ ಚೆಂದದ ಕಥೆ ಹೇಳಿದರು. ‘ಅವುಗಳು ಹೆಚ್ಚಾಗಿ ಮಣ್ಣಿನಲ್ಲಿ ಮೊಟ್ಟೆ ಇಡುವುದರಿಂದ ಆಫ್ರಿಕಾದ ಮಣ್ಣು ಇಲ್ಲಿಗೆ ಬಂದಿರಬಹುದು’ ಎಂಬ ಸಾಧ್ಯತೆ ಹೇಳಿದರು. ಅದು ಹೇಗೆ ಸಾಧ್ಯ ಅಂತ ನಾನು ಆ ಅವಕಾಶವನ್ನು ತಳ್ಳಿ ಹಾಕುವುದರಲ್ಲಿದ್ದೆ. ಅಷ್ಟರಲ್ಲಿ ಅವರು ಬಿಡಿಸಿ ಹೇಳುತ್ತಾ ಕಡಲು ದಾಟಿ ಬರುವ ಹಡಗುಗಳಲ್ಲಿ ಆ ಮಣ್ಣು ಬಂದಿರಲೂ ಸಾಕು ಎಂದು ಸಮಜಾಯಿಷಿ ನೀಡಿದರು. ಸರಿ ಎಂದು ತಲೆದೂಗಿದೆ. ಆದರೂ ಕೇರಳದಿಂದ ಇಲ್ಲಿಗೆ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಹೆಣಗಿದೆ. ಕೊನೆಗೂ ಒಂದು ತೀರ್ಮಾನಕ್ಕೆ ಬಂದೆ. ನದಿ ಹೊಯ್ಗೆ ಅಡ್ಡ ರಸ್ತೆ ಬಳಸಿ ಕೇರಳಕ್ಕೆ ಕಳ್ಳ ಸಾಗಾಣಿಕೆ ಜಾಲವೂ ಇತ್ತೀಚೆಗೆ ಚುರುಕಾಗಿದೆ. ಅವುಗಳ ಮೂಲಕ ಮೊಟ್ಟೆಯೇನಾದರೂ ಗಡಿ ದಾಟಿರಬಹುದು. ನನಗೂ ಕೊಂಚ ಸಮಾಧಾನವಾಗಿತ್ತು.

ಇವುಗಳ ಬಗ್ಗೆ ಸುಮಾರು ಚಿಂತಿಸಿ ತಲೆ ಹಾಳು ಮಾಡಿಕೊಳ್ಳುತ್ತ ಗೂಗಲ್ ನಲ್ಲಿ ಮಾಹಿತಿ ಕಲೆ ಹಾಕತೊಡಗಿದೆ. ಬಸವನಹುಳಗಳಲ್ಲಿ ಅವುಗಳಲ್ಲೇ ಹೆಣ್ಣು ಗಂಡು ವೀರ್ಯಾಣುಗಳು ಉತ್ಪತ್ತಿಯಾಗುವುದಂತೆ. ಆದರೆ ಈ ಮಾಹಿತಿ ಸತ್ಯಕ್ಕೆ ದೂರ ಎಂಬುದಾಗಿ ತಜ್ಞರು ಹೇಳುತ್ತಾರೆ. ಅವುಗಳಲ್ಲಿ ಹೆಣ್ಣು ಗಂಡು ಎಂದು ಬೇರೆಬೇರೆ ಹುಳಗಳಿವೆ ಮತ್ತು ಅವುಗಳ ಜನನೇಂದ್ರಿಯಗಳು ಥೇಟ್ ಮನುಷ್ಯರಂತೆಯೇ ಇರುತ್ತದಂತೆ. ಇದನ್ನು ಯೂಟ್ಯೂಬ್ ಹೇಳಿಕೊಟ್ಟಿತು. ಹಾಗೆಯೇ ಅಂತರ್ಜಾಲದಲ್ಲಿ ಅಲೆಯುತ್ತಿರಲು ಇನ್ನೊಂದು ಕುತೂಹಲ ಮಾಹಿತಿಯೂ ಲಭಿಸಿತು. ಇವೇ ಜಾತಿಗೆ ಸೇರುವ ಇನ್ನೊಂದು ಹುಳವೆಂದರೆ ಶಂಖ ಹುಳು. ಶಂಖ ಹುಳದ ಮಾತೆತ್ತಿದಾಗ ಈ ಕಥೆ ನನಗೆ ಸದಾ ನೆನಪಿಗೆ ಬರುವುದುಂಟು.

ಆಗ ಹಾಸ್ಟೆಲ್ ನಲ್ಲಿ ಬೇಸಿಗೆ ರಜೆ ಸಿಕ್ಕಿ ನಾನು ಊರಿಗೆ ಬಂದಿದ್ದೆ. ಗೆಳೆಯರೆಲ್ಲಾ ಸೇರಿ ಎಲ್ಲಾದರೂ ಸುತ್ತಬೇಕೆಂದು ತೀರ್ಮಾನಿಸಿ ಪಣಂಬೂರು ಬೀಚಿಗೆ ಹೋಗಬೇಕೆಂದು ದಿನ ಗೊತ್ತು ಮಾಡಿದ್ದರು. ಬಹುಶಃ ಕಡಲು ಮೆಟ್ಟಿದ್ದು ನಾನು ಅದೇ ಮೊದಲು. ಪಣಂಬೂರು ಬೀಚ್ ಅಂದರೆ ಪ್ರವಾಸಿಗರಿಗೆ ಕಡಲ ಸ್ನಾನಕ್ಕೆ ಮಂಗಳೂರಿನ ಹೆಚ್ಚು ಸುರಕ್ಷಿತ ಕಡಲು. ಉಳ್ಳಾಲದ ಬೀಚಿನಲ್ಲಿ ಆಳ ಜಾಸ್ತಿಯೆಂಬ ಕಾರಣಕ್ಕೆ ಕಡಲು ಮೊದಲ ಬಾರಿ ಅಲ್ಲಿ ನೋಡಿದ್ದರೂ ನೀರಿಗಿಳಿದಿರಲಿಲ್ಲ. ಇಲ್ಲಿ ಹಾಗಲ್ಲ , ಅರ್ಧ ಕಿ.ಮೀಟರಷ್ಟು ಮೊಳಕಾಲು ಮುಟ್ಟುವಷ್ಟೇ ನೀರು. ಹೆಚ್ಚಿನ ಆಳವಿಲ್ಲ. ಎಲ್ಲರೂ ಎದ್ದು ಬಿದ್ದು ಅಲೆಗಳ ಜೊತೆಯಾಡಿ ಈಜಾಡುತ್ತಿದ್ದರೆ ನಾನು ಮಾತ್ರ ಎರಡು ಬಾರಿ ಮುಳುಗು ಹಾಕಿ ಮೇಲೆ ಬಂದು ಚಿಪ್ಪು, ಶಂಖ ಹೆಕ್ಕತೊಡಗಿದೆ. ಸಂಜೆಯಾಗುವಾಗ ಸುಮಾರು ಶಂಖಗಳೂ ಚಿಪ್ಪುಗಳೂ ನನಗೆ ಸಿಕ್ಕವು.

ಎಂಥೆಂಥಾ ಬಣ್ಣಗಳವು. ಅಲ್ಲೇ ಅವನ್ನು ಹೊಯ್ಗೆಯಲ್ಲಿ ಚೆನ್ನಾಗಿ ರುಬ್ಬಿ ತೊಳೆದುಕೊಳ್ಳುತ್ತಿದ್ದೆ. ಗೆಳೆಯನೊಬ್ಬ ಅದನ್ನು ನೋಡಿ ಶಂಖದೊಳಗೆ ಹುಳವಿರುವುದೆಂದೂ, ಅವನ್ನು ಹೇಗೆ ತೆಗೆಯುವುದೆಂದು ಹೇಳಿಕೊಟ್ಟ. ಅಷ್ಟರವರೆಗೂ ನಾನೇನೋ ಕಲ್ಲಿನ ಚೂರೆಂದು ಅಂತಂದುಕೊಂಡಿದ್ದರಿಂದ ನನಗೆ ಈ ಅಚ್ಚರಿಯ ಮಾಹಿತಿ ಕೇಳಿ ಕುತೂಹಲಗೊಂಡಿದ್ದೆ. ಒಂದು ಕೋಲು ಹಾಕಿ ನಾಲ್ಕು ಬಾರಿ ಇಕ್ಕಿದರೆ ಕೀಟದಂತಹ ಹುಳ ಹೊರ ಬರುತ್ತಿತ್ತು. ಅವನು ಮತ್ತೆ ನೀರಿಗಿಳಿದ ಬಳಿಕ ನಾನು ಕೋಲು ಹಾಕಿ ಸಾಕಾಗಿ ಬರಿ ಗೈಯಲ್ಲೇ ಶಂಕ ಹುಳಗಳನ್ನು ತೆಗೆದು ಹಾಕಿ ಕೈ ತೊಳೆದುಕೊಳ್ಳುತ್ತಿದ್ದೆ. ಬಹುಶಃ ನನ್ನ ಅದೃಷ್ಟ ಚೆನ್ನಾಗಿದ್ದಿರಬೇಕು. ಆ ಹುಳಗಳೇನಾದರೂ ಆ ದಿನವೇ ಚುಚ್ಚಿ ಬಿಡುತ್ತಿದ್ದರೆ ನಾನು ಈ ಕಥೆ ಹೇಳಲು ಬಾಕಿ ಉಳಿಯುತ್ತಿರಲಿಲ್ಲವೋ ಏನೋ.

ಶಂಖಹುಳಗಳು ವಿಷಕಾರಿಗಳೆಂದು, ಒಮ್ಮೆ ಕುಟುಕಿದ ವಿಷಕ್ಕೆ ೨೦ ಮನುಷ್ಯರನ್ನು ಕೊಲ್ಲುವ ಶಕ್ತಿ ಇದೆಯೆಂದು ಇತ್ತೀಚೆಗೆ ಓದಿದಾಗ ಮೈಯೊಮ್ಮೆ ಜುಮ್ಮನೆ ಕರೆಂಟು ಹೊಡೆದಂತಾಗಿತ್ತು. ಒಂದು ಪ್ಲಾಸ್ಟಿಕ್ ಲಕೋಟೆಯಲ್ಲಿ ಹಾಕಿ ಗೆಳೆಯರಿಗೆ ವಿದಾಯ ಹೇಳಿ ಉಪ್ಪಿನಂಗಡಿ ಬಸ್ಸು ಹತ್ತಿ ಮನೆಗೆ ಬಂದೆ. ಕಡಲಿಗೆ ಹೋದದ್ದು ಗೊತ್ತಾದರೆ ಬೆನ್ನಿಗೆ ಬಾಸುಂಡೆ ಬರುವ ತನಕ ಹೊಡೆತ ಬೀಳುತ್ತದೆಂಬ ಖಚಿತತೆ ಇದ್ದದ್ದರಿಂದ ಶಂಖವನ್ನು ಯಾರಿಗೂ ತೋರಿಸದೆ ಬ್ಯಾಗಿನೊಳಗೆ ಬಚ್ಚಿಟ್ಟಿದ್ದೆ. ಕಡಲ ನೀರಿನ ಸ್ನಾನಕ್ಕೆ ತಲೆಗೂದಲು ಗಟ್ಟಿಯಾಗಿ ಹೋಗಿದ್ದವು. ಹೇಗೂ ಎರಡು ದಿನ ಕಳೆಯಿತಲ್ಲ, ಕೂದಲು ಕತ್ತರಿಸದಿದ್ದರೆ ಇನ್ನು ಸಾಧ್ಯವೇ ಇಲ್ಲ ಅನಿಸುವಾಗ ಉಮ್ಮನಲ್ಲಿ ಸತ್ಯ ಬಿಚ್ಚಿಟ್ಟೆ. ಅಬ್ಬನಲ್ಲಿ ಹೇಳಿ ಕೂದಲು ತೆಗಿಸಲು ಹಣ ಕೊಡಿಸಿದ್ದರು. ಕ್ಷೌರ ಮಾಡಿ ಮನೆಗೆ ಬಂದು ಬ್ಯಾಗು ಬಿಚ್ಚಿದೆ. ಶಂಕ, ಚಿಪ್ಪುಗಳ ಲಕೋಟೆ ಅಸಹ್ಯವಾಗಿ ವಾಸನೆ ಹೊಡೆದುಕೊಳ್ಳುತ್ತಿತ್ತು. ಮೂಗು ಮುಚ್ಚಿಕೊಂಡು ಎಲ್ಲವನ್ನೂ ಎಸೆದು ಬಾಗಿಲು ಹಾಕಿಕೊಂಡೆ.