ಕಾರಂತರು ಯಾವುದಾದರು ಒಂದು ಲಹರಿಯಲ್ಲಿ ಮಾತನಾಡುವಾಗ, ಕೆಲಸ ಮಾಡುವಾಗ ತಮ್ಮ ಆ ಲಹರಿಯನ್ನು, ತಮಗೆ ತಾವೇ ಮುರಿಯುತ್ತಿದ್ದರು.ಮಕ್ಕಳೊಟ್ಟಿಗೆ ಅವರು ಮಾಡಿದ ಕೆಲಸದಿಂದ ಇದು ಅವರಿಗೆ ದಕ್ಕಿದ ತಂತ್ರವೆಂದು ನನ್ನ ಅನಿಸಿಕೆ. ಮಕ್ಕಳಿಗೆ ಒಂದೇ ಲಹರಿಯಲ್ಲಿ ಮಾತಾಡುತ್ತಿದ್ದರೆ ಬೋರಾಗುತ್ತದೆ. ಅದನ್ನು ನಾನೂ ಹಲವು ಸಲ ಮಕ್ಕಳೊಟ್ಟಿಗೆ, ಅಷ್ಟೇ ಏಕೆ ದೊಡ್ಡವರಿಗೂ ನಾಟಕ ಮಾಡಿಸುವಾಗ ಪ್ರಯೋಗಿಸಿದ್ದೇನೆ. ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವುದು ದೊಡ್ಡದಲ್ಲ, ಆದರೆ ಅದನ್ನು ನಿಷ್ಕ್ರಿಯಗೊಳಿಸುವ ತಂತ್ರವೂ ಪ್ರಯೋಗಿಸಿದವರಿಗೆ ಗೊತ್ತಿರಬೇಕು. ಆಗಲೇ ಅದು ರಂಗಭೂಮಿ.
ಚನ್ನಕೇಶವ ಬರೆವ `ರಂಗಪುರಾಣ’ದ ಎರಡನೇ ಕಂತು.

 

‘ನೀವು ನೀನಾಸಮ್‌ನವರೂ ಹಾಗೇನೇ…’

ಬಿ.ವಿ. ಕಾರಂತರು ಆಗಿನ್ನೂ ಮೈಸೂರಿನ ರಂಗಾಯಣದ ನಿರ್ದೇಶಕರಾಗಿದ್ದರು. ಧಾರವಾಡದಲ್ಲಿ ಯಾವುದೋ ಕೆಲಸಕ್ಕೆ ಬಂದಿದ್ದ ಅವರು ಅಲ್ಲಿ ನಡೆಯುತ್ತಿದ್ದ ತಿರುಗಾಟದ ನಾಟಕಗಳನ್ನು ನೋಡಿ, ನಂತರ ಅಲ್ಲಿಯ ಮಲ್ಲಿಕಾರ್ಜುನ ಮನ್ಸೂರ್ ರಂಗಮಂದಿರದ ಮೆಟ್ಟಿಲ ಮೇಲೆ ಕುಳಿತಿದ್ದರಂತೆ. ನಮ್ಮ ತಿರುಗಾಟದ ನಟರೊಬ್ಬರಿಗೆ ಅವರನ್ನು ಮಾತನಾಡಿಸುವ ಆಸೆಯಾಗಿ ಹತ್ತಿರ ಹೋಗಿ ಒಂದು ಪ್ರಶ್ನೆಯನ್ನು ಕೇಳಿಯೇಬಿಟ್ಟರು
‘ಸಾರ್, ರಂಗಾಯಣದಲ್ಲಿನ ನಟರೆಲ್ಲ ನಿರ್ದೇಶಕರು ಹೇಳಿದ ಮಾತನ್ನು ಕೇಳೋದೇ ಇಲ್ಲವಂತೆ!’
ಅದಕ್ಕೆ ಕಾರಂತರು ನಮ್ಮ ಮಿತ್ರರನ್ನು ಮೇಲಿಂದ ಕೆಳಗಿನವರೆಗೆ ನೋಡಿ — ‘ನೀವು ನೀನಾಸಮ್‌ನವರಲ್ಲವಾ?’ ಅಂದರಂತೆ. ಕಾರಂತರು ತನ್ನ ಗುರುತು ಹಿಡಿದದ್ದಕ್ಕೆ ನನ್ನ ಮಿತ್ರರು ಹಿಗ್ಗಿದರು. ‘ಹೌದು’ ಅಂದರು. ಕಾರಂತರು ಮುಖ ಬೇರೆಡೆಗೆ ತಿರುಗಿಸಿ
‘ನೀವು ನೀನಾಸಮ್‌ನ ನಟರೂ ಅಷ್ಟೇ, ಹೇಳಿದ ಮಾತು ಕೇಳೋದೇ ಇಲ್ಲ, ನಾನೇ ನೋಡಿದ್ದೀನಲ್ಲಾ’ ಅಂದರಂತೆ.

ಅಡ್ಡಹೆಸರನ್ನು ಇಡುವುದರಲ್ಲಿ ಚಿದಂಬರರಾವ್ ಜಂಬೆಯವರದ್ದು ಎತ್ತಿದ ಕೈ. ಸಾಮಾನ್ಯವಾಗಿ ನಟರು ಮಾಡುವ ಪಾತ್ರಗಳನ್ನು, ಅವರ ಬದಲಾಗದ ನಡೆ-ನುಡಿಗಳನ್ನು ಸೂಚಿಸುವ ಒಂದು ತೆರನಾದ ವಿಶೇಷಣವನ್ನು ಅವರ ಹೆಸರಿನ ಜೊತೆ ಸೇರಿಸಿ ಕರೆಯುತ್ತಿದ್ದರು. ಅವರೇ ನಿರ್ದೇಶಿಸಿದ್ದ ಗಿರೀಶ ಕಾರ್ನಾಡರ ‘ತಲೆದಂಡ’ ನಾಟಕದಲ್ಲಿ ಬಸವಣ್ಣನ ಪಾತ್ರ ಮಾಡಿದ್ದ ನಟರಾಜ ಹೊನ್ನವಳ್ಳಿಯವರನ್ನು ಇಂದಿಗೂ ಅವರು ‘ಬಸಣ್ಣ’ ಎಂದೇ ಕರೆಯುವುದು. ಕನ್ನಡದ ಮತ್ತೊಬ್ಬ ಹಿರಿಯ ನಿರ್ದೇಶಕರಾದ ರಘುನಂದನ ಅವರನ್ನು ‘ಗುಂಡೇಗೌಡ್ರೇ’ ಎಂದು ಕರೆಯುತ್ತಾರೆ. ಏಕೆಂದರೆ ರಘುನಂದನ ಅವರು ಮೈಸೂರಿನ ರಂಗಾಯಣದಲ್ಲಿದ್ದಾಗ ಹೆನ್ರಿಕ್ ಇಬ್ಸನ್ ಬರೆದ ‘ಪೀರ್ ಗೆಂಟ್’ ನಾಟಕವನ್ನು ‘ಗುಂಡೇಗೌಡನ ಚರಿತ್ರೆ’ ಎಂದು ರೂಪಾಂತರಗೊಳಿಸಿದ್ದರು. ಹಾಗೆಯೇ ಜಂಬೆಯವರು ನನ್ನ ಮಿತ್ರ ನಟ ಅಚ್ಯುತಕುಮಾರ್ ಅವರನ್ನು ‘ಅಚ್ಯುತದಾಸರೇ’ ಎಂದು ಕರೆಯುತ್ತಾರೆ.

ಅಡ್ಡಹೆಸರನ್ನು ಇಡುವುದರಲ್ಲಿ ಚಿದಂಬರರಾವ್ ಜಂಬೆಯವರದ್ದು ಎತ್ತಿದ ಕೈ. ಸಾಮಾನ್ಯವಾಗಿ ನಟರು ಮಾಡುವ ಪಾತ್ರಗಳನ್ನು, ಅವರ ಬದಲಾಗದ ನಡೆ-ನುಡಿಗಳನ್ನು ಸೂಚಿಸುವ ಒಂದು ತೆರನಾದ ವಿಶೇಷಣವನ್ನು ಅವರ ಹೆಸರಿನ ಜೊತೆ ಸೇರಿಸಿ ಕರೆಯುತ್ತಿದ್ದರು.

ಗ್ರೀಕ್ ಮಹಾಕವಿ ಯುರಿಪಿಡೀಸನ ‘ಮೀಡಿಯಾ’ ನಾಟಕವನ್ನು ಕಾರಂತರು ನೀನಾಸಮ್ ತಿರುಗಾಟಕ್ಕೆ ಆಡಿಸುತ್ತಿದ್ದರು. ನಾಟಕದಲ್ಲಿ ಸುದ್ದಿ ತರುವವನೊಬ್ಬನ ಪಾತ್ರವನ್ನು ಬಾಬು ರಮೇಶ್ವರಾನಂದ ಸ್ವಾಮಿ ಎನ್ನುವ ನಮ್ಮ ಸ್ನೇಹಿತರೊಬ್ಬರು ಮಾಡುತ್ತಿದ್ದರು. ಅವರನ್ನು ನಾವು ಬಾಬೂಜಿ ಅಂತಲೂ ಕರೆಯುತ್ತಿದ್ದೆವು. ಮುಂದೆ ನಾನು ಮಾಡಿದ ತಿರುಗಾಟದಲ್ಲಿ ಇವರು ನನ್ನ ಜೊತೆ ನಟರಾಗಿದ್ದಾಗ, ಜಯಂತ ಕಾಯ್ಕಿಣಿಯವರ ‘ಜತೆಗಿರುವನು ಚಂದಿರ’ ನಾಟಕದಲ್ಲಿ ‘ಕಲಾಯಿ ಭಾಯ್’ ಪಾತ್ರ ಮಾಡಿ, ‘ಕಲಾಯಿ ಬಾಬು’ ಆದರು. ಆ ಹೆಸರಿಟ್ಟಿದ್ದು ಜಂಬೆಯವರೇ. ‘ಮೀಡಿಯಾ’ ನಾಟಕದ ತಾಲೀಮಿನಲ್ಲಿ, ಬಹಳ ಹೊತ್ತಿನಿಂದ ನಮ್ಮ ಕಲಾಯಿ ಬಾಬು ಹತ್ತಿರ ಬಾಬುಕೋಡಿ ಕಾರಂತರು — ಆ ನಾಟಕದಲ್ಲಿದ್ದ ಸುದ್ದಿಗಾರನ ಪಾತ್ರವೊಂದು ಹೇಗೆ ಗಡಿಬಿಡಿಯಿಂದ ಓಡುತ್ತಾ ಬಂದು ಮಾತಾಡಬೇಕು ಎನ್ನುವುದನ್ನು ಹೇಳಿಹೇಳಿ ಮಾಡಿಸುತ್ತಿದ್ದರು. ಆದರೆ ಬಾಬು ಎಷ್ಟು ಸಲ ಪ್ರಯತ್ನ ಮಾಡಿದರೂ ಕಾರಂತರಿಗೆ ಸಮಾಧಾನವಾಗಲಿಲ್ಲ. ಕಡೆಗೆ ಆ ಸುದ್ದಿಗಾರನ ಕೈಯಲ್ಲಿದ್ದ ದಂಡವನ್ನು ಕಿತ್ತುಕೊಂಡ ಕಾರಂತರು ‘ನೋಡಿ, ಈಗ ನಾನು ಮಾಡಿ ತೋರಿಸುತ್ತೇನೆ. ನಾನೇನು ನಟ ಅಲ್ಲ. ಆದರೂ ನೋಡಿ’ ಎಂದು ಹೇಳಿ ವಿಂಗ್ ಒಳಗಡೆ ನುಸುಳಿ ಮಾಯವಾದರು. ನಟರೆಲ್ಲಾ ಹೊರಗೆ ಬಂದು ಕಾರಂತರ ಅಭಿನಯವನ್ನು ನೋಡಲು ಕುತೂಹಲದಿಂದ ನಿಂತರು. ಕಾರಂತರು ಗಡಿಬಿಡಿ ಮತ್ತು ಗಾಭರಿಯಿಂದ ಕೂಗುತ್ತ ದೂತನ ಪಾತ್ರವಾಗಿ ಓಡಿ ಬಂದರು. ಡಯಾಸ್ ಏರುವ ಭರದಲ್ಲಿ ನಿಜವಾಗಲೂ ಬಿದ್ದೇಬಿಟ್ಟರು. ಅವರ ಕೈಲಿದ್ದ ದಂಡವೊಂದು ಕಡೆ, ಅವರ ಕನ್ನಡಕವೊಂದು ಕಡೆ ಬಿದ್ದು ಚಲ್ಲಾಪಿಲ್ಲಿ ಆದವು. ಇದನ್ನು ನೋಡುತ್ತಿದ್ದ ನಟರಲ್ಲಿ ಕೆಲವರು ಓಡಿ ಬಂದು ಕಾರಂತರನ್ನು ಎತ್ತಿ ನಿಲ್ಲಿಸಿದರು. ಕನ್ನಡಕ ಕೊಟ್ಟರು. ಪುನಹ ದಂಡವನ್ನು ಕೊಡಲು ಹೋದಾಗ ಕಾರಂತರು — ‘ಇಲ್ಲ, ನನಗೆ ಬೇಡ. ನೀವು ಮಾಡಿದ್ದೇ ಸರಿ. ಮುಂದುವರಿಸಿ’ ಅಂದರು. ಕೆಲವು ನಟರು ಮುಸಿಮುಸಿ ನಗುತ್ತಿದ್ದರು.

ಮೀಡಿಯಾ ನಾಟಕದ ದೂತನ ಪಾತ್ರದಲ್ಲಿ ಬಾಬೂಜಿ

ಸುದ್ದಿಗಾರನ ಕೈಯಲ್ಲಿದ್ದ ದಂಡವನ್ನು ಕಿತ್ತುಕೊಂಡ ಕಾರಂತರು ‘ನೋಡಿ, ಈಗ ನಾನು ಮಾಡಿ ತೋರಿಸುತ್ತೇನೆ. ನಾನೇನು ನಟ ಅಲ್ಲ. ಆದರೂ ನೋಡಿ’ ಎಂದು ಹೇಳಿ ವಿಂಗ್ ಒಳಗಡೆ ನುಸುಳಿ ಮಾಯವಾದರು. ನಟರೆಲ್ಲಾ ಹೊರಗೆ ಬಂದು ಕಾರಂತರ ಅಭಿನಯವನ್ನು ನೋಡಲು ಕುತೂಹಲದಿಂದ ನಿಂತರು. ಕಾರಂತರು ಗಡಿಬಿಡಿ ಮತ್ತು ಗಾಭರಿಯಿಂದ ಕೂಗುತ್ತ ದೂತನ ಪಾತ್ರವಾಗಿ ಓಡಿ ಬಂದರು. ಡಯಾಸ್ ಏರುವ ಭರದಲ್ಲಿ ನಿಜವಾಗಲೂ ಬಿದ್ದೇಬಿಟ್ಟರು. ಅವರ ಕೈಲಿದ್ದ ದಂಡವೊಂದು ಕಡೆ, ಅವರ ಕನ್ನಡಕವೊಂದು ಕಡೆ ಬಿದ್ದು ಚಲ್ಲಾಪಿಲ್ಲಿ ಆದವು.

ಕಾರಂತರ ಬಗ್ಗೆ ಮೊದಲೇ ನಾನು ಅಲ್ಪ ಸ್ವಲ್ಪ ತಿಳಿದುಕೊಂಡಿದ್ದೆನೆಂದು ಹಿಂದೆ ಹೇಳಿದ್ದೆನಷ್ಟೆ. ನಾನು ಕಲಿಯುತ್ತಿದ್ದ ಚಿತ್ರಕಲಾ ಪರಿಷತ್ತಿನಲ್ಲಿ ಮೈಸೂರಿನ ರಂಗಾಯಣವು ‘ಬೆಂಗಳೂರು ಮೊಕ್ಕಾಂ’ ಮಾಡಿದ್ದಾಗ ಅವರನ್ನು ಸಮೀಪದಿಂದ ನೋಡಿದ್ದೆ. ಕಾರಂತರು ನಿರ್ದೇಶಿಸಿದ್ದ ಕುವೆಂಪು ಅವರ ‘ಕಿಂದರಿಜೋಗಿ’ ನಾಟಕವನ್ನೂ ನೋಡಿದ್ದೆ. ಆಗ ದೇವನೂರ ಮಹಾದೇವರ ‘ಕುಸುಮಬಾಲೆ’ ಕಾದಂಬರಿಯನ್ನು ಸಿ. ಬಸವಲಿಂಗಯ್ಯ ರಂಗರೂಪಕ್ಕೆ ತಂದಿದ್ದರು. ಆ ನಾಟಕದಲ್ಲಿ ಕಾರಂತರ ಸಂಗೀತ ಸಂಯೋಜನೆಯ ‘ವಾಲಾಡಿಯೇ… ವಾಲಾಡ್ತಾ…’ ಎನ್ನುವ ಗೀತವು ನನಗೆ ಬಾಯಿಪಾಠವಾಗಿತ್ತು. ಆಗ ‘ಕುಸುಮಬಾಲೆ’ ನಾಟಕವನ್ನು ನಾನು ಹತ್ತು ಸಲ ನೋಡಿದ್ದೆ. ಆ ನಾಟಕದ ಆರಂಭದಲ್ಲಿ ಒಮ್ಮೆ ಕಾರಂತರು ಮಾತನಾಡುತ್ತಾ ‘ಈ ನಾಟಕದಲ್ಲಿ ಅಶ್ಲೀಲ ಪದಗಳಿವೆ ಅಂತ ಕೆಲವರು ಹೇಳ್ತಿದ್ದಾರೆ… ಆದ್ರೆ ನನ್ನ ಪ್ರಕಾರ ಜೀವನಕ್ಕೆ ಹತ್ತಿರವಾದದ್ದು ಯಾವುದೂ ಅಶ್ಲೀಲವಲ್ಲ’ ಎಂದಿದ್ದರು. ಇದು ನನ್ನೊಳಗೆ ಎಷ್ಟು ಹೊಕ್ಕಿತ್ತೆಂದರೆ ಮುಂದೆ ನಾನು ಗ್ರೀಕ್ ಮಹಾಕವಿ ಅರಿಸ್ಟೋಫೆನಿಸ್‌ನ ‘ಲೈಸಿಸ್ಟ್ರಾಟ’ ವೈನೋದಿಕವನ್ನು ಗೆಳತಿ ವಿಶಾಲಾ ಜೊತೆಗೂಡಿ ಭಾವಾಂತರಿಸುವಾಗ ಕಾರಂತರ ಈ ಮಾತನ್ನು ಅದರಲ್ಲಿ ಉಲ್ಲೇಖಿಸಿದೆ.

ಕುಸುಮಬಾಲೆ ನಾಟಕ

ಬೆಂಗಳೂರು ಸಮುದಾಯ ತಂಡಕ್ಕೆ ಎಚ್.ಎಸ್. ಶಿವಪ್ರಕಾಶರ ‘ಮಹಾಚೈತ್ರ’ ನಾಟಕವನ್ನು ಇಕ್ಬಾಲ್ ಅಹಮದ್ ನಿರ್ದೇಶಿಸುವಾಗ, ಅದರ ಪೂರ್ವ ತಯಾರಿಗಾಗಿ ಮೈಸೂರಿನಲ್ಲಿ ಹದಿನೈದು ದಿನಗಳ ಒಂದು ಕಾರ್ಯಾಗಾರವನ್ನು ನಡೆಸಿದ್ದರು. ನಾನೂ, ಚಿತ್ರಕಲೆಯ ನನ್ನ ಕೆಲವು ಸ್ನೇಹಿತರೂ ಅದರಲ್ಲಿ ಭಾಗಿಯಾಗಿದ್ದೆವು.

ಆ ಕಾರ್ಯಾಗಾರದಲ್ಲಿ ಒಂದು ಸಂಜೆ ಬಿ.ವಿ. ಕಾರಂತರು ರಂಗಭೂಮಿಯನ್ನು ಕುರಿತು ಮಾತನಾಡಲು ಬಂದಿದ್ದರು. ಹತ್ತು-ಹದಿನೈದು ಜನರಿದ್ದ ನಾವು ಕಾರಂತರೆದುರು ತನ್ಮಯತೆಯಿಂದ ಕುಳಿತಿದ್ದೆವು. ನಾನಂತೂ ಕಾರಂತರ ಪದಪದಗಳನ್ನೂ ಗ್ರಹಿಸುವ ಏಕಾಗ್ರತೆಯಲ್ಲಿದ್ದೆ. ಮಾತಿನ ಮದ್ಯೆ ಇದ್ದಕ್ಕಿದ್ದಂತೆ ಕಾರಂತರು ‘ನೋಡಿ ಅವನು ಹೇಗೆ ಕುಳಿತಿದ್ದಾನೆ’ ಎಂದು ನನ್ನೆಡೆಗೆ ಗುರಿ ಮಾಡಿದರು. ಎಲ್ಲರೂ ನನ್ನನೇ ನೋಡತೊಡಗಿದರು. ನಾನು ವಜ್ರಾಸನದಲ್ಲಿ ಕುಳಿತಿದ್ದೆನಷ್ಟೇ. ಹಾಗೆ ಕುಳಿತದ್ದು ಸರಿಯೋ ತಪ್ಪೋ ಎನ್ನುವ ಗೊಂದಲಕ್ಕೊಳಗಾದೆ. ಆದರೆ ಅದು ಸರಿಯೇ ಎಂದು ಅರಿವಾಯ್ತು.

ಕಾರಂತರು ಯಾವುದಾದರು ಒಂದು ಲಹರಿಯಲ್ಲಿ ಮಾತನಾಡುವಾಗ, ಕೆಲಸ ಮಾಡುವಾಗ ತಮ್ಮ ಆ ಲಹರಿಯನ್ನು, ತಮಗೆ ತಾವೇ ಮುರಿಯುತ್ತಿದ್ದರು. ಮಕ್ಕಳಿಟೊಟ್ಟಿಗೆ ಅವರು ಮಾಡಿದ ಕೆಲಸದಿಂದ ಇದು ಅವರಿಗೆ ದಕ್ಕಿದ ತಂತ್ರವೆಂದು ನನ್ನ ಅನಿಸಿಕೆ. ಮಕ್ಕಳಿಗೆ ಒಂದೇ ಲಹರಿಯಲ್ಲಿ ಮಾತಾಡುತ್ತಿದ್ದರೆ ಬೋರಾಗುತ್ತದೆ. ಅದನ್ನು ನಾನೂ ಹಲವು ಸಲ ಮಕ್ಕಳೊಟ್ಟಿಗೆ, ಅಷ್ಟೇ ಏಕೆ ದೊಡ್ಡವರಿಗೂ ನಾಟಕ ಮಾಡಿಸುವಾಗ ಪ್ರಯೋಗಿಸಿದ್ದೇನೆ. ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವುದು ದೊಡ್ಡದಲ್ಲ, ಆದರೆ ಅದನ್ನು ನಿಷ್ಕ್ರಿಯಗೊಳಿಸುವ ತಂತ್ರವೂ ಪ್ರಯೋಗಿಸಿದವರಿಗೆ ಗೊತ್ತಿರಬೇಕು. ಆಗಲೇ ಅದು ರಂಗಭೂಮಿ.
ನೀನಾಸಮ್ ತರಬೇತಿಯ ನಂತರ ಬೆಂಗಳೂರಿಗೆ ಬಂದಾಗ ಕಾರಂತರು ಆಗ ಎಂ.ಇ.ಎಸ್. ಕಿಶೋರ ಕೇಂದ್ರದ ಮಕ್ಕಳಿಗೆ ತಾವೇ ಬರೆದ ‘ಅಳಿಲು ರಾಮಾಯಣ’ ನಾಟಕ ನಿರ್ದೇಶಿಸುತ್ತಿದ್ದರು. ತಂತ್ರಜ್ಞನಾಗಿ ಕೆಲಸ ಮಾಡಲು ನನ್ನನ್ನು ಅಲ್ಲಿಗೆ ಕರೆದಿದ್ದರು. ನಾನಲ್ಲಿಗೆ ಹೋದಾಗ ‘ರಾಮಲಾಲಿ… ರಘುಕುಲ ಸೋಮಲಾಲಿ…’ ಎನ್ನುವ ಹಾಡನ್ನು ಹೇಳಿಕೊಡುತ್ತಿದ್ದರು. ಎಲ್ಲ ಮಕ್ಕಳ ಜೊತೆ ಕಾರಂತರು ಮಕ್ಕಳಂತೆಯೇ ಇರುತ್ತಿದ್ದರಾದರೂ ಬೇಕಾದಾಗ, ಬೇಕಾದ ತಂತ್ರವನ್ನು ಬಳಸಿ ಅವರಿಗೆ ಅಚ್ಚರಿಯನ್ನುಂಟುಮಾಡುತ್ತಿದ್ದರು. ಆಗ ಅಲ್ಲಿ ಒಬ್ಬ ಚಿಕ್ಕ ಹುಡುಗ ಸಿಕ್ಕಾಪಟ್ಟೆ ತರಲೆ ಮಾಡುತ್ತಿದ್ದ. ಅವನನ್ನು ನಿಯಂತ್ರಿಸಲು ಕಾರಂತರ ಸಹಾಯಕರು ಹರಸಾಹಸ ಪಡುತ್ತಿದ್ದರು. ಅದು ನಿಯಂತ್ರಣಕ್ಕೆ ಬಾರದಾಗ ಇದ್ದಕ್ಕಿದ್ದಂತೆ ಕಾರಂತರು ಎತ್ತರಿಸಿದ ದನಿಯಲ್ಲಿ ‘ಏನೋ ನೀನು ಇಷ್ಟು ಗಲಾಟೆ ಮಾಡೋದು? ಸುಮ್ಮನೆ ಇರಬೇಕು… ಇಲ್ಲಾಂದ್ರೆ ನಿನ್ನನ್ನ ಇಲ್ಲಿಂದ ಹೊರಗೆ ಕಳಿಸ್ತೇನೆ… ಎಷ್ಟು ಗಲಾಟೆ ಮಾಡ್ತೀಯ ನೋಡು…’ ಎಂದು ಕೂಗಿ, ಒಂದು ಸಣ್ಣ ಪಾಸ್ ಕೊಟ್ಟು, ಗೊಣಗುವ ದನಿಯಲ್ಲಿ ‘ನೋಡೋಕೆ ನೀನು ನನ್ನ ಬೆಸ್ಟ್ ಫ್ರೆಂಡ್ ಬೇರೆ…’ ಎಂದರು. ಕಾರಂತರ ಎತ್ತರಿಸಿದ ಸಿಟ್ಟಿನ ದನಿಗೆ ಬೆದರಿ ತಣ್ಣಗಾಗಿದ್ದ ಇಡೀ ತಾಲೀಮಿನ ಆವರಣವೇ ಮುಗುಳ್ನಗೆಯೊಂದಿಗೆ ನಿಟ್ಟುಸಿರುಬಿಟ್ಟಿತು. ಹೀಗೆ ತಾಲೀಮಿನಲ್ಲಿ ಯಾವುದೇ ಭಾವಾತಿರೇಕಕ್ಕೆ ಹೋಗದೇ, ಹಾಗೆ ಅದು ಅತಿರೇಕವಾಗುತ್ತದೆ ಅನ್ನಿಸುತ್ತಿದ್ದಂತೇ ಅದನ್ನು ನಿಷ್ಕ್ರಿಯ ಗೊಳಿಸುವ ತಂತ್ರವನ್ನು ಕಾರಂತರು ಆಗಾಗ ಬಳಸುತ್ತಿದ್ದರು.

(ಫೋಟೋಗಳು:ರಂಗಾಯಣ ಮತ್ತು ಲೇಖಕರ ಸಂಗ್ರಹದಿಂದ)

ತಾಲೀಮಿನಲ್ಲಿ ಯಾವುದೇ ಭಾವಾತಿರೇಕಕ್ಕೆ ಹೋಗದೇ, ಹಾಗೆ ಅದು ಅತಿರೇಕವಾಗುತ್ತದೆ ಅನ್ನಿಸುತ್ತಿದ್ದಂತೇ ಅದನ್ನು ನಿಷ್ಕ್ರಿಯ ಗೊಳಿಸುವ ತಂತ್ರವನ್ನು ಕಾರಂತರು ಆಗಾಗ ಬಳಸುತ್ತಿದ್ದರು.

ಕಾರಂತರು ಭರತೇಂದು ಹರಿಶ್ಚಂದ್ರ ಅವರು ಬರೆದ ‘ಅಂಧೇರ್ ನಗರಿ ಚೋಪಟ್ ರಾಜ’ ನಾಟಕವನ್ನು ೧೯೯೯ರ ಬ್ಯಾಚ್‌ಗೆ ನಿರ್ದೇಶಿಸುತ್ತಿದ್ದರು. ಆ ನಾಟಕವನ್ನು ವೈದೇಹಿಯವರು ‘ಸತ್ರೂ ಅಂದ್ರೆ ಸಾಯ್ತಾರಾ?’ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ರೂಪಾಂತರಗೊಳಿಸಿದ್ದರು. ಕಾರಂತರು ಹೆಗ್ಗೋಡಿಗೆ ಬರುವ ಎರಡು ಮೂರು ದಿನ ಮೊದಲೇ ಆ ನಾಟಕದ ಸಹಾಯಕ ನಿರ್ದೇಶಕನಾಗಿದ್ದ ನಾನು ಪಠ್ಯವನ್ನು ವಿದ್ಯಾರ್ಥಿಗಳಿಗೆ ಓದಿ ವ್ಯಾಖ್ಯಾನ ಮಾಡುತ್ತಿದ್ದೆ. ಕಾರಂತರು ಈ ನಾಟಕವನ್ನು ೧೯೭೮ರಲ್ಲಿ ಎನ್.ಎಸ್.ಡಿ.ಯಲ್ಲಿ ಮಾಡಿಸಿ ಅದು ಬಹಳ ಪ್ರಸಿದ್ಧಿ ಪಡೆದಿತ್ತು. ಅದರ ಹಿಂದಿ ಅವತರಣಿಕೆಗೂ ಮತ್ತು ಕನ್ನಡದ ಅವತರಣಿಕೆಗೂ, ಕತೆಯ ಮೂಲದಲ್ಲಿ ಒಂದು ಬಹುಮುಖ್ಯ ಬದಲಾವಣೆಯಾಗಿತ್ತು. ಗೋಡೆ ಕುಸಿದು ತನ್ನ ಮೇಕೆಯೊಂದು ಸತ್ತ ದೂರನ್ನು ವೃದ್ಧೆಯೊಬ್ಬಳು ಮುಟ್ಠಾಳ ರಾಜನ ಬಳಿ ತರುತ್ತಾಳೆ. ಆ ಮೂರ್ಖರಾಜ ಆಕೆಗೆ ನ್ಯಾಯ ಒದಗಿಸುವಲ್ಲಿ ಸೋಲುವುದೇ ಈ ನಾಟಕದ ಕಥಾವಸ್ತು. ಆದರೆ ವೈದೇಹಿಯವರ ಕನ್ನಡ ಅವರತಣಿಕೆಯಲ್ಲಿ ಆ ವೃದ್ಧೆಯೂ ಸುಳ್ಳು ದೂರನ್ನು ತರುತ್ತಾಳೆ ಎನ್ನುವ ಸುಳಿವಿದೆ. ಕಾರಂತರು ಹೆಗ್ಗೋಡಿಗೆ ಬಂದ ನಂತರ ನಾನು ಈ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ವ್ಯಾಖ್ಯಾನಿಸುತ್ತಿದ್ದೆ. ಕಾರಂತರು ಅದು ತಪ್ಪು ವ್ಯಾಖ್ಯಾನ ಎಂದರು. ನಾನು ಅದು ಸರಿಯೆಂದು ಉದಾಹರಣೆ ಸಹಿತವಾಗಿ ಅವರೊಡನೆ ವಾದ ಮಾಡಿದೆ. ತಾಲೀಮಿನ ನಂತರ ಅವರೊಡನೆ ಮೆಸ್ಸಿನ ಕಡೆಗೆ ಹೋಗುವಾಗ ‘ನೀನು ಎಲ್ಲರ ಎದುರಿಗೆ ನನನ್ನ ಖಂಡಿಸಬೇಡ, ನಾನೊಂಥರ ಕರ್ಣ ಇದ್ದ ಹಾಗೆ, ಇಳಿದು ಹೋಗ್ತೇನೆ’ ಎಂದರು. ಅದು ಯಾಕೆ ಹಾಗೆ ಹೇಳಿದರೆಂದು ನನಗಿನ್ನೂ ಅರ್ಥವಾಗಿಲ್ಲ.

ಇನ್ನು ಕಾರಂತರು ನಿರ್ದೇಶಿಸಿದ ಪುತಿನ ಅವರ ‘ಗೋಕುಲ ನಿರ್ಗಮನ’ ನಾಟಕದ ತಾಲೀಮಿನ ಬಗ್ಗೆ ಅಸಂಖ್ಯಾತ ಐತಿಹ್ಯಗಳಿವೆ. ಅವೆಲ್ಲವೂ ಬೇಡ. ಕೆಲವೊಂದನ್ನು ಮಾತ್ರ ಇಲ್ಲಿ ಸಂಗ್ರಹಿಸಿ ಮುಂದೆ ಬರೆಯುತ್ತೇನೆ.

(ಮುಂದುವರಿಯುವುದು)

ಚನ್ನಕೇಶವ ಬರೆವ ರಂಗ ಪುರಾಣ  ೧ ನೇ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ.