ಪ್ರತಿ ವರ್ಷ ಬೇಸಿಗೆಯ ಒಣಹವೆ ಬರುತ್ತದೆ, ಆಸ್ಟ್ರೇಲಿಯದ ಹಲವು ಕಡೆ ಚಿಕ್ಕ ಪುಟ್ಟ ಬೆಂಕಿಗಳೂ ಧಿಗ್ಗನೆ ಕಾಡ್ಗಿಚ್ಚಾಗಿ ಕಾಡುತ್ತವೆ. ಹಲವು ಊರು ಕೇರಿಗಳಿಗೆ ಮಾರಣಾಂತಿಕವಾಗಿ ಅಮರಿಕೊಳ್ಳುತ್ತದೆ. ತೇವವೆಲ್ಲಾ ಆರಿ ಹೋದ, ತರಗೆಲೆ ಮುಚ್ಚಿದ ಕಾಡಿನ ನೆಲಕ್ಕೆ ಒಂದು ಸಣ್ಣ ಕಿಡಿ ಸಾಕಾಗುತ್ತದೆ. ಹೀಗಾದಾಗಲೆಲ್ಲಾ, ಬೇಕಂತಲೇ ಯಾರಾದರೂ ಬೆಂಕಿ ಹಚ್ಚಿದರಾ ಎಂದು ಕಿಡಿಗೇಡಿಗಳ ಹುಡುಕಾಟವೂ ನಡೆಯುತ್ತದೆ. ಅತ್ಯಂತ ಒಣ ಭೂಖಂಡದಗಳಲ್ಲಿ ಒಂದಾದ ಇಲ್ಲಿ ಇವೆಲ್ಲ ಹೊಸದಲ್ಲ. ನಂತರ ಮಳೆ ಬರುತ್ತದೆ. ಚಳಿಗಾಲ ಎಲ್ಲವನ್ನು ತಣ್ಣಗಾಗಿಸುತ್ತದೆ. ಬರುವ ಬೇಸಿಗೆಯವರೆಗೆ ಇದು ಒಣ ಭೂಮಿ ಅನ್ನುವುದನ್ನು ಮರೆಸುತ್ತದೆ.

ಕೆಲವು ವರ್ಷದ ಕೆಳಗೆ ನಮ್ಮ ಮನೆಯ ನಾಕಾರು ರಸ್ತೆಯಾಚೆಯಿರುವ ನೀಲಗಿರಿ ಮರದ ಕಾಡೂ ಹೀಗೆ ಹೊತ್ತಿ ಉರಿದಿತ್ತು. ಕಿಡಿಗಳು ಅಷ್ಟೆತ್ತರ ಹಾರುತ್ತಾ ಎದೆಯಲ್ಲಿ ದಿಗಿಲು ಮೂಡಿಸಿತ್ತು. ಆ ಹೊತ್ತಿಗೆ ಅಮೂಲ್ಯ ಅನಿಸದ್ದನ್ನೆಲ್ಲಾ ಕಾರಿನಲ್ಲಿ ತುರುಕಿಕೊಂಡು ಓಡಲು ಕಾದಿದ್ದೆವು. ಅದೃಷ್ಟವಶಾತ್ ಏನೂ ಆಗಲಿಲ್ಲ.

ಹೋದ ವಾರ ಆಸ್ಟ್ರೇಲಿಯದ ದಕ್ಷಿಣದ ರಾಜ್ಯಗಳಲ್ಲಿ ಕಾಡ್ಗಿಚ್ಚು ಹಬ್ಬಿ ಹಲವು ಊರುಗಳು ನಾಶವಾಗಿದೆ. ಆದರೆ ಈ ಬಾರಿ ಸುಮಾರು ಇನ್ನೂರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟು ಜನ ಕಾಡ್ಗಿಚ್ಚಿಗೆ ಬಲಿಯಾದುದು ಈ ದೇಶದ ಚರಿತ್ರೆಯಲ್ಲಿ ಇದೇ ಮೊದಲ ಬಾರಿ. ಯಾವುದೇ ಮುನ್ಸೂಚನೆ ಕೊಡದೆ ಕೆಲವು ಬೆಂಕಿಗಳು ಗಾಳಿಯ ರಭಸಕ್ಕೆ ಹತ್ತಾರು ಮೈಲಿ ಹರಡಿದ್ದು ಒಂದು ದುರಂತ. ಎಷ್ಟೋ ಕುಟುಂಬಗಳು ಒಟ್ಟೊಟ್ಟಿಗೆ ಮನೆಗಳಿಂದ ತಪ್ಪಿಸಿಕೊಳ್ಳುವ ಮೊದಲೇ ಆಹುತಿಯಾಗಿದ್ದಾರೆ. ನಾಕು ಕಡೆಯಿಂದಲೂ ಬೆಂಕಿ ಆವರಿಸಿ ಏನೂ ಮಾಡುವ ಮೊದಲೇ ರಸ್ತೆಯುದ್ದಕ್ಕೂ ಮನೆಗಳು ಉರಿದು ಬೂದಿಯಾಗಿವೆ. ಸತ್ತ ನೆರೆಹೊರೆಯವರನ್ನು, ಬಂಧುಮಿತ್ರರನ್ನು ಕಣ್ಣೀರಿಟ್ಟು ನೆನೆಸಿಕೊಳ್ಳುವುದೊಂದೇ ಅಲ್ಲಿಯ ಸಣ್ಣಪುಟ್ಟ ಸಮುದಾಯಗಳಿಗೆ ಸದ್ಯದ ದಾರಿಯಾಗಿದೆ.

ಕಾಡ್ಗಿಚ್ಚಿನ ಹೊತ್ತಿನಲ್ಲಿ “ಲೀವ್ ಅರ್ಲಿ ಆರ್ ಸ್ಟೇ ಅಂಡ್ ಫೈಟ್” ಎಂಬ ಸರ್ಕಾರ ಕೊಟ್ಟಿದ್ದ ಸಲಹೆಯನ್ನು ಹಲವರು ಈ ಸಾವುಗಳಿಂದಾಗಿ ಪ್ರಶ್ನಿಸಿದ್ದಾರೆ. ಸುಟ್ಟ ದೇಹದವರನ್ನು ಹತ್ತಿರದಿಂದ ನೋಡಿರುವ ಸುಟ್ಟ ಗಾಯದ ತಜ್ಞೆ ಫೀಯೋನಾ ವುಡ್ ಎಂಬಾಕೆ – “ಜನ ಮೊದಲು ಬೆಂಕಿಯಿಂದ ದೂರ ಹೋಗುವುದೇ ಸರಿ” ಎಂದು ಅನುಮಾನವಿಲ್ಲದಂತೆ ಹೇಳಿದ್ದಾರೆ. ಆದರೆ ಚಿಕ್ಕಪುಟ್ಟ ಬೆಂಕಿಗೂ ಹಾಗೆ ಹೊರಟುಬಿಟ್ಟರೆ ಹೇಗೆ ಎಂಬ ಅನುಮಾನವೂ ಇದೆ.

ಸಂಖ್ಯೆಯಲ್ಲಿ ಅತಿಹೆಚ್ಚು ನಗರವಾಸಿಗಳೇ ಇರುವ ಆಸ್ಟ್ರೇಲಿಯದಲ್ಲಿ ಹಳ್ಳಿ ಹಾಗು ರೈತರ ಬಗ್ಗೆ ಅಪಾರ ಅಭಿಮಾನವಿದೆ. ಕೆಲವೊಮ್ಮೆ ಅದು ಅತಿರೇಕ ಅನಿಸುವುದೂ ಹೌದು. ನಗರದಲ್ಲಿ ಕೆಲಸ ಸಿಗದವರ ಬಗ್ಗೆ, ನಿರ್ವಸತಿಗರ ಬಗ್ಗೆ, ಒಂಟಿ ಪಾಲಕರ ಬಗ್ಗೆ, ಅಬಾರಿಜಿನಿಗಳ ಬಗ್ಗೆ ಇರುವ ಕಠಿಣ ನಿಲುವುಗಳು ಹಳ್ಳಿಯ ರೈತರ ಬಗ್ಗೆ ಬಂದಾಗ ಏಕೋ ಕರಗಿ ನೀರಾಗುತ್ತದೆ. ಸರ್ಕಾರವೂ ಹಳ್ಳಿಗಳಲ್ಲಿ ಏನಾದರೂ ತುಸು ಏರುಪೇರಾದರೆ ತಟ್ಟನೆ ಅತ್ತ ಧಾವಿಸಿ ತಾನೂ ಕರುಣಿ ಎಂದು ಹೇಳಿಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತದೆ. ಬೇಸಾಯದ ನೀರಾವರಿಗೆ ಸಾಕಷ್ಟು ದುಡ್ಡು ಸುರಿಯುತ್ತದೆ. ಆದರೆ, ಇಂತಹ ಒಣಭೂಮಿಯಲ್ಲಿ ಲಾಭದ ಮೇಲೇ ಕಣ್ಣಿಟ್ಟು ತುಂಬಾ ನೀರು ಬೇಡುವ ಅಕ್ಕಿ, ಗೋಧಿ, ಕಬ್ಬು ಬೆಳೆಯುವುದು ಎಷ್ಟು ಸರಿ ಎಂದು ಕೇಳಿದರೆ ದೇಶದ್ರೋಹಿ ಎಂಬಂತೆ ನೋಡುತ್ತಾರೆ. ಆಸ್ಟ್ರೇಲಿಯದ ಹಲವು ನದಿಗಳು ಒಣಗುತ್ತಿರುವಾಗ, ನದಿ ನೀರು ಉಪ್ಪುಮಯವಾಗುತ್ತಿರುವಾಗ ಈ ಪ್ರಶ್ನೆಗಳು ಇನ್ನೂ ವಸ್ತುನಿಷ್ಠವಾಗಿ ಪ್ರಜೆಗಳ ತಲೆಗೆ ಹೊಕ್ಕಂತಿಲ್ಲ.

ಈ ಬಾರಿಯ ಕಾಡ್ಗಿಚ್ಚಿಂದ ನಿರಾಶ್ರಿತರಾದವರಿಗೆ ಸರ್ಕಾರ ಕೂಡಲೇ ಸಹಾಯ ಧನ ಘೋಷಿಸಿತು. ದೇಶಾದ್ಯಂತ ಮಿಲಿಯನ್‌ಗಟ್ಟಲೆ ಸಹಾಯಧನ ಸಂಗ್ರಹಿಸಲಾಗಿದೆ. ವಾರಾದ್ಯಂತ ಟಿವಿಯಲ್ಲಿ ನಷ್ಟವಾದ ಮನೆಮಠ, ಕಾರು, ಸಾಮಾನುಗಳದೇ ಚಿತ್ರಗಳು. ಪ್ರೀತಿಪಾತ್ರರನ್ನು ಕಳೆದುಕೊಂಡವರ, ಉಳಿಸಿಕೊಂಡವರ ಕತೆಗಳೇ – ಎಡೆಬಿಡದೆ ಪ್ರಸಾರವಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡದ್ದು ತುಂಬಲು ಬಾರದಂತಹ ಸಂಗತಿ. ಕೆಲವು ಕತೆಗಳಂತೂ ಹೃದಯ ಹಿಂಡುವಂತಹದು. ಇನ್ನು ಕೆಲವು ಕತೆಗಳು ಮನುಷ್ಯನ ಮೂಲ ಕೆಚ್ಚಿಗೆ ಕನ್ನಡಿ ಹಿಡಿಯುವಂತಹದು. ಆದರೂ, ಅತಿಯೇನೋ ಅನಿಸುವಂತೆ ದೇಶದ ಪ್ರತಿಕ್ರಿಯೆ ಹೀಗೆ ಒಮ್ಮೆಲೆ ಧನಸಹಾಯದ ರೂಪದಲ್ಲಿ ಹರಿದದ್ದು ಅಚ್ಚರಿ ಪಡುವಂತಹುದೇ. ಒಂದು ಕಡೆ ನಿಧಾನಕ್ಕೆ ಸೊರಗುವ ಅಬಾರಿಜಿನಿಗಳ ನೋವು ರೂಢಿಯಾಗಿಬಿಟ್ಟಿರುವಾಗ, ಇಂತಹ ಅನಾಹುತಗಳ ಸುತ್ತಮುತ್ತ ಕಣ್ಣೀರು ಮಿಡಿಯುವುದು ತುಸು ನಾಟಕೀಯವೇನೋ ಅನಿಸುತ್ತದೆ ಅಷ್ಟೆ. ಇನ್ನೊಬ್ಬರ ದುಃಖ ಸಂಕಟ ವರದಿಯ ಎಲ್ಲೆ ಮೀರಿ ಟೀವಿಯಲ್ಲಿ ಕಥನವಾಗುವುದು ಅದನ್ನು ನೋಡುವ ಮಂದಿಯಿರುವುದರಿಂದ ಅಲ್ಲವೆ? ಆರ್ಥಿಕ ಹಿಂಜರಿತದ ಹೊತ್ತಲ್ಲೂ ಮಿಲಿಯಗಟ್ಟಲೆ ಡಾಲರ್‍ ಸೇರಿರುವುದು ಜನರ ಯಾವ ಮನಸ್ಥಿತಿಗೆ ದ್ಯೋತಕ ಎಂದೇ ಅರಿವಾಗದ ಸ್ಥಿತಿಯಿದೆ.

ಸಾವಿರಾರು ವರ್ಷಗಳಿಂದ ಕಾಡುಮೇಡು ಕಾಪಾಡಲು ಇದೇ ಅಬಾರಿಜಿನಿಯರು “ಬ್ಯಾಕ್ ಬರ್ನಿಂಗ್” ಎಂಬ ಪದ್ಧತಿಯನ್ನು ಒಂದು ಆಚರಣೆಯಂತೆ ಮಾಡಿಕೊಂಡು ಬಂದಿದ್ದರು. ಅದನ್ನು ಈಗಿನ ಸರ್ಕಾರ ನಿಷ್ಠೆಯಿಂದ ಮಾಡಿದ್ದರೆ ಇಷ್ಟು ಹಾನಿಯಾಗುತ್ತಿರಲಿಲ್ಲ ಎನ್ನುತ್ತಿದ್ದಾರೆ. ಕಾಡುಮೇಡಿನ ಹತ್ತಿರ ಕಟ್ಟಿದ ಮನೆಯ ಸುತ್ತ ಮರ ಕಡಿಯಲು ಅನುಮತಿ ಕೊಡಬೇಕು ಎಂಬ ಕೂಗು ಎದ್ದಿದೆ. ಎಷ್ಟೋ ಕಡೆ ಕಾಡು ಮೇಡಿನ ಹತ್ತಿರ ಮನೆ ಕಟ್ಟಲೇ ಬಾರದು, ಪ್ರಕೃತಿಯನ್ನು ಹಾಗೇ ಬಿಡಬೇಕು ಎಂಬ ಮಾತೂ ಕೇಳಿಬಂದಿದೆ. ಪ್ರಕೃತಿಯ ವಿಕೋಪ ಎಂದು ಕೈಚೆಲ್ಲದೆ, ಒಂದು ಒಣಖಂಡದಲ್ಲಿದ್ದೇವೆ ಎಂದು ನೆನಪಿಟ್ಟುಕೊಂಡು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ದಾರಿಗಳನ್ನು ಹುಡುಕುತ್ತಿದ್ದಾರೆ. ಕಾಡ್ಗಿಚ್ಚನ್ನು ತಡೆಗಟ್ಟಲು ಆಗದ ಮಾತು, ಆದರೆ ಜೀವಹಾನಿ ಹಾಗು ನಷ್ಟವಾಗದ ಹಾಗೆ ಅದನ್ನು ಮ್ಯಾನೇಜ್ ಮಾಡಿ ಸಂಭಾಳಿಸಬಹುದು ಎಂದು ಚರ್ಚೆ ಶುರುವಾಗಿದೆ.

ಇನ್ನೂ ಖಾಯಂ ವೀಸಾ ಸಿಕ್ಕಿಲ್ಲದ ವಿಯಟ್ನಮೀಸ್ ಕುಟುಂಬವೊಂದರ ಮೂಲೆ ಅಂಗಡಿಯೂ ಈ ಬೆಂಕಿಯಲ್ಲಿ ಆಹುತಿಯಾಗಿದೆ. ಎಲ್ಲರಿಗೂ ಸಿಕ್ಕುವ ಸರ್ಕಾರದ ಸಹಾಯ ಅವರಿಗೆ ಸಿಕ್ಕದೇ ಹೋಗಬಹುದಂತೆ. ಅಂತಹವರಿಗಾದರೂ ಚಂದಾ ಎತ್ತಿದ ದುಡ್ಡು ಸಹಾಯವಾಗಬಹುದು ಎಂಬುದೇ ಒಂದು ಸಮಾಧಾನ.