“ಸಂವಿಧಾನದ ನೆಪದಲ್ಲಿ, ಭಿನ್ನ ಜನಾಂಗದ, ಭಿನ್ನ ಹಿನ್ನಲೆಯ, ಭಿನ್ನ ಸಾಮಾಜಿಕ, ಆರ್ಥಿಕ ಮತ್ತು ಬೌದ್ಧಿಕ ಹಿನ್ನಲೆಗಳ ಇಬ್ಬರು ವ್ಯಕ್ತಿಗಳು ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದು ಈ ಕಥೆಯ ಆತ್ಮ. ಆದರೆ ಈ ಭಿನ್ನತೆ ಕೇವಲ ನೋಡುಗರೆದುರಲ್ಲಿ ಒಂದು ಇನ್ನೊಂದಕ್ಕಿಂತ ಭಿನ್ನ ಎಂದು ಇಡಲೆಂದೇ ಹೇರಲ್ಪಟ್ಟದ್ದಲ್ಲ. ಚಿತ್ರದ ಚೌಕಟ್ಟಿನೊಳಗಡೆಯೇ ನಿರ್ದೇಶಕರು ಒಬ್ಬ ಲೈಂಗಿಕ ಅಲ್ಪಸಂಖ್ಯಾತ ಮತ್ತು ಇನ್ನೊಬ್ಬ ಜನಾಂಗೀಯ ಅಲ್ಪಸಂಖ್ಯಾತ ಇಬ್ಬರ ಬದುಕಿನ ತಾಕಲಾಟಗಳು, ಒಂದು ಹಿಡಿ ಘನತೆಗಾಗಿ ಅವರ ಹೋರಾಟಗಳನ್ನು ನಮ್ಮ ಮುಂದಿಡುತ್ತಾರೆ.”
ಲೇಖಕಿ ಸಂಧ್ಯಾರಾಣಿ ಬರೆಯುವ ಲೋಕ ಸಿನೆಮಾ ಟಾಕೀಸಿನಲ್ಲಿ ಕ್ರೊಯೇಷಿಯಾದ ಚಿತ್ರ ‘The Constitution.

 

ಇದು ದ್ವೇಷದ ಬಗೆಗಿನ ಪ್ರೇಮಕತೆ. ದ್ವೇಷಕ್ಕೆ ಎಷ್ಟೆಲ್ಲಾ ಮುಖಗಳು. ಭಿನ್ನ ಜನಾಂಗವನ್ನು ಕಂಡರೆ ದ್ವೇಷ, ಭಿನ್ನ ಲೈಂಗಿಕ ಪ್ರವೃತ್ತಿಯನ್ನು ಕಂಡರೆ ದ್ವೇಷ, ಭಿನ್ನ ನಂಬಿಕೆಯನ್ನು ಕಂಡರೆ ದ್ವೇಷ, ಅಷ್ಟೇ ಏಕೆ, ಭಿನ್ನ ಅಭಿಪ್ರಾಯವನ್ನು ಕಂಡರೂ ದ್ವೇಷ. ಭಿನ್ನಮತದೊಡನೆಯೂ ಬದುಕಬಹುದು ಅನ್ನುವ ಸಾಧ್ಯತೆಯೇ ಹಾಸ್ಯಾಸ್ಪದವಾಗಿ ತೋರುತ್ತಿರುವ ದಿನಮಾನದಲ್ಲಿ ನೋಡಿದ ಚಿತ್ರ ಇದು. ತನ್ನ ಬದುಕು ತನ್ನದು, ಅದನ್ನು ಯಾರೂ ನಿರ್ದೇಶಿಸಬಾರದು ಎನ್ನುವ ನಂಬಿಕೆ ಇಟ್ಟುಕೊಂಡಿರುವ ಅಧ್ಯಾಪಕ. ಆದರೆ ಅವನು ತನ್ನ ಲೈಂಗಿಕ ಆಯ್ಕೆಯ ಕಾರಣದಿಂದಲೇ ಅಪಹಾಸ್ಯಕ್ಕೆ, ಅವಹೇಳನಕ್ಕೆ ಒಳಗಾಗುತ್ತಿದ್ದಾನೆ. ತನ್ನ ಮಟ್ಟಿಗೆ ಯಾರೂ ಪೂರ್ವಾಗ್ರಹಗಳನ್ನು ಇಟ್ಟುಕೊಳ್ಳಕೂಡದು ಎಂದು ಗಟ್ಟಿಯಾಗಿ ಪ್ರತಿಪಾದಿಸುವ ಇವನ ಮನಸ್ಸಿನಲ್ಲೂ ಈ ಅಸಹನೆಯ ಹಾವು ಬಂದು ಸೇರಿಕೊಂಡುಬಿಟ್ಟಿದೆ. ತನಗಿಂತ ಬೇರೆಯಾಗಿರುವವರನ್ನು ಕಂಡರೆ ಇವನಲ್ಲೂ ಅಪನಂಬಿಕೆ ಇದೆ. ತನಗೆ ಸಹಾಯ ಮಾಡಲೆಂದು ಬರುವ ಹೆಣ್ಣೊಬ್ಬಳನ್ನೂ ಸಹ ಆತ ಅವಳ ಹಿನ್ನಲೆಯನ್ನೆಲ್ಲಾ ಪರೀಕ್ಷಿಸುವವರೆಗೂ ನಂಬುವುದಿಲ್ಲ. ಇಲ್ಲಿನ ಜನರು ಧರಿಸುವ ಕನ್ನಡಕ ಬೇರೆಬೇರೆಯದು, ಆದರೆ ಎಲ್ಲವುಗಳ ನೋಟವೂ ಸೀಮಿತ. ಅದನ್ನು ಈ ಅಧ್ಯಾಪಕನಿಗೆ ಅರ್ಥಮಾಡಿಸುವುದು ಡಿಸೆಲೆಕ್ಸಿಯ ಇರುವ, ಹೊಸತನ್ನು ಕಲಿಯಬೇಕಾದರೆ ಎಡವಿ ಎಡವಿ ಹೆಜ್ಜೆಯಿಡುವ, ಕಲಿಯಲು ಇವನದೇ ಸಹಾಯ ಕೇಳಿ ಬಂದಿರುವ ಒಬ್ಬ ಪೋಲೀಸ್ ಪೇದೆ. ಅವರಿಬ್ಬರ ನೆಲವನ್ನೂ ಸಮತಲಗೊಳಿಸಿ, ಇಬ್ಬರನ್ನೂ ಒಂದೇ ನೆಲೆಯಲ್ಲಿ ನಿಲ್ಲಿಸುವುದು ಅಲ್ಲಿನ ಸಂವಿಧಾನ, Constitution.

‘ಏ ಠೀಕ್ ಹೈ ಕಾಲೂ, ತುಮ್ಹಾರೆ ಇಷ್ಕ್ ಇಷ್ಕ್ ಹೈ, ಔರ್ ಹಮಾರಾ ಇಷ್ಕ್ ಸೆಕ್ಸ್?’ – ತುಂಬಾ ಹಿಂದೆ ನೋಡಿದ ’ಇಷ್ಕಿಯಾ’ ಚಿತ್ರದ ಸಂಭಾಷಣೆಯ ಒಂದು ಸಾಲು. ‘ಅದು ಸರಿ, ನಿನ್ನ ಪ್ರೀತಿ ಮಾತ್ರ ಪ್ರೇಮ, ನಮ್ಮ ಪ್ರೀತಿ ಕಾಮನೆ ಅಲ್ಲವಾ?’ ಎಂದು ನಿಗಿನಿಗಿ ಯೌವನದ ಅರ್ಷದ್ ವಾರ್ಸಿ, ಮಧ್ಯವಯಸ್ಕ ನಾಜಿರುದ್ದೀನ್ ಶಾ ನನ್ನು ಕೇಳುವ ಪ್ರಶ್ನೆ ಇದು. ಇಬ್ಬರಲ್ಲೂ ಪ್ರೀತಿಯನ್ನು ಉದ್ದೀಪಿಸಿ, ಇಬ್ಬರಿಂದಲೂ ದೂರ ನಿಲ್ಲುವವಳು ವಿದ್ಯಾಬಾಲನ್. ಇಡೀ ಚಿತ್ರದ ಆತ್ಮ ಇರುವುದು ಈ ದೃಶ್ಯದಲ್ಲಿ ಅನ್ನಿಸಿತ್ತು. ಪ್ರತಿಯೊಬ್ಬರಿಗೂ ಅವರ ಪ್ರೇಮ ಮಾತ್ರ ಪ್ರೇಮ, ಅವರ ನೋವು ಮಾತ್ರ ನೋವು, ಅವರ ಭಾವನೆಗಳಿಗೆ ಮಾತ್ರ ಪಾರಿಜಾತದ ಕೋಮಲತೆ ಎನ್ನುವ ಭಾವನೆ ಆಳದಲ್ಲೆಲ್ಲೋ ಇದ್ದೇ ಇರುತ್ತದೆಯೇನೋ. ನಾವು ಅತ್ಯಂತ ಸಂವೇದನಾಶೀಲರು ಎಂದುಕೊಂಡವರೂ ಸಹ, ಅವರ ಮಟ್ಟಿಗೆ ಅತ್ಯಂತ ಆರ್ದ್ರವಾಗಿ, ಮುಕ್ತವಾಗಿ ಆಲೋಚಿಸುತ್ತಾ, ಇನ್ನೊಂದು ಜೀವದ ವಿಷಯಕ್ಕೆ ಬಂದಾಗ ತಮ್ಮತಮ್ಮ ಪೂರ್ವಾಗ್ರಹಗಳ ಕಣ್ಣು ಪಟ್ಟಿಯನ್ನು ತೆಗೆಯಲಾಗುವುದೇ ಇಲ್ಲ. ಹೀಗೆ ತಮ್ಮ ಅರ್ಥಸಾಧ್ಯತೆಯ ಲೋಕದೊಳಕ್ಕೆ ತಡವುತ್ತಾ, ಎಡವುತ್ತಾ, ಮೆಲ್ಲ ಮೆಲ್ಲ ಹೆಜ್ಜೆಯಿಟ್ಟು ನಡೆಯುವುದೇ ಕ್ರೊಯೇಷಿಯಾ ಚಿತ್ರ ‘The Constitution’ ನ ಕತೆ.

‘ದಿ ಕಾನ್ಸ್ಟಿಟ್ಯೂಷನ್’ ಚಿತ್ರದಲ್ಲಿ ಒಂದು ರೂಪಕವೂ ಹೌದು, ಆಶಯವೂ ಹೌದು, ಪಾಲಿಸಲೇಬೇಕಾದ ಕರ್ತವ್ಯವೂ ಹೌದು. ಸಂವಿಧಾನ ಕೇವಲ ಪೂಜಿಸಬೇಕಾದ ಗ್ರಂಥವಲ್ಲ, ನಿಜಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನಿಯಮ. ಸಂವಿಧಾನದ ನೆಪದಲ್ಲಿ, ಭಿನ್ನ ಜನಾಂಗದ, ಭಿನ್ನ ಹಿನ್ನಲೆಯ, ಭಿನ್ನ ಸಾಮಾಜಿಕ, ಆರ್ಥಿಕ ಮತ್ತು ಬೌದ್ಧಿಕ ಹಿನ್ನಲೆಗಳ ಇಬ್ಬರು ವ್ಯಕ್ತಿಗಳು ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದು ಈ ಕಥೆಯ ಆತ್ಮ. ಆದರೆ ಈ ಭಿನ್ನತೆ ಕೇವಲ ನೋಡುಗರೆದುರಲ್ಲಿ ಒಂದು ಇನ್ನೊಂದಕ್ಕಿಂತ ಭಿನ್ನ ಎಂದು ಇಡಲೆಂದೇ ಹೇರಲ್ಪಟ್ಟದ್ದಲ್ಲ. ಇಲ್ಲಿ ಎರಡು ಬದುಕುಗಳು ಮತ್ತು ಜಗತ್ತುಗಳು ಸಮಾನಾಂತರವಾಗಿ ಹರಿಯುತ್ತವೆ. ಈ ಚಿತ್ರದ ಚೌಕಟ್ಟಿನೊಳಗಡೆಯೇ ನಿರ್ದೇಶಕರು ಒಬ್ಬ ಲೈಂಗಿಕ ಅಲ್ಪಸಂಖ್ಯಾತ ಮತ್ತು ಇನ್ನೊಬ್ಬ ಜನಾಂಗೀಯ ಅಲ್ಪಸಂಖ್ಯಾತ ಇಬ್ಬರ ಬದುಕಿನ ತಾಕಲಾಟಗಳು, ಒಂದು ಹಿಡಿ ಘನತೆಗಾಗಿ ಅವರ ಹೋರಾಟಗಳನ್ನು ನಮ್ಮ ಮುಂದಿಡುತ್ತಾರೆ.

ಚಿತ್ರ ಪ್ರಾರಂಭವಾಗುವ ರೀತಿ, ಅಲ್ಲಿರುವ ಗೂಢತೆ, ಕತ್ತಲ ಬದುಕು, ಮತ್ತು ಅದು ಕಟ್ಟಿರುವ ಹಿನ್ನಲೆಯ ಬಗ್ಗೆ ಇಲ್ಲಿ ಹೇಳಲೇಬೇಕು. ಚಿತ್ರ ಶುರುವಾದಾಗ ಕ್ಯಾಮೆರಾ ಹಿಂದಿನಿಂದ ಒಬ್ಬರ ಚಲನವಲನಗಳನ್ನು ಹಿಡಿದಿಡುತ್ತಾ ಹೋಗುತ್ತದೆ. ಆ ವ್ಯಕ್ತಿ ಸಾವನಧಾವಾಗಿ ಕಬೋರ್ಡಿನಿಂದ ಒಂದು ನೀಟಾದ ಸ್ಕರ್ಟ್ ತೆಗೆದಿಟ್ಟು, ಅದನ್ನು ಧರಿಸಿ, ಸಿಂಗಾರವಾಗುವಷ್ಟರಲ್ಲಿ, ಅಬ್ಬ ಇದೆಂತಹ ಗ್ರೇಸ್ ಫುಲ್ ಹೆಂಗಸು ಅನ್ನಿಸುತ್ತದೆ. ಆಗಲೂ ಮಸುಕು ಕತ್ತಲು ಹಾಗೇ ಇರುತ್ತದೆ. ಅಷ್ಟರಲ್ಲಿ ೪-೫ ನಿಮಿಷಗಳಾಗಿವೆ. ಕ್ಯಾಮೆರಾ ನಿಧಾನವಾಗಿ ಆ ವ್ಯಕ್ತಿಯ ಮುಖದ ಮೇಲೆ ಫೋಕಸ್ ಆಗುತ್ತದೆ, ಹಠಾತ್ತಾಗಿ ಅದು ಹೆಣ್ಣಿನ ಅಲಂಕಾರ ಮಾಡಿಕೊಂಡಿರುವ ಗಂಡು ಎಂದು ಗೊತ್ತಾಗಿ ಒಮ್ಮೆ ಜರ್ಕ್ ಹೊಡೆದಂತಾಗುತ್ತದೆ. ಹಾಗೆ ಸಿದ್ಧವಾದ ಆಕೆ, ಸುಂದರವಾಗಿ ಬಳುಕುತ್ತಾ, ಹಗುರವಾದ ಹೆಜ್ಜೆಯನ್ನಿಡುತ್ತಾ ಕ್ಲಬ್ ಒಂದಕ್ಕೆ ಹೋಗುತ್ತಾಳೆ. ಅದು ಬಹುಶಃ ಆಕೆ ಯಾವಾಗಲೂ ಹೋಗುವ ಕ್ಲಬ್. ಅಲ್ಲಿನ ಬಾರ್ ಟೆಂಡರ್, ಒಂದರ ಪಕ್ಕ ಒಂದರಂತೆ ಎರಡು ಗ್ಲಾಸ್ ಗಳನ್ನು ಜೋಡಿಸುತ್ತಾನೆ, ಎರಡರಲ್ಲೂ ಮದ್ಯ ಸುರಿಯುತ್ತಾನೆ. ಈಕೆ ಮೆಲುವಾಗಿ ತನ್ನ ಗ್ಲಾಸ್ ಅನ್ನು ಆ ಗ್ಲಾಸಿಗೆ ತಾಕಿಸಿ, ‘ಚಿಯರ್ಸ್’ ಎಂದು ಉಸುರಿ, ಒಂದು ಗುಟುಕು ಗುಟುಕರಿಸಿ, ನೋವು ತುಂಬಿದ ದನಿಯಲ್ಲಿ ‘ಒಂದು ವರ್ಷವಾಯಿತು…’ ಎನ್ನುತ್ತಾಳೆ. ಬಾರ್ ಟೆಂಡರ್ ಸಹಾನುಭೂತಿಯಿಂದ ತಲೆ ಆಡಿಸುತ್ತಾನೆ. ಮದ್ಯ ತುಂಬಿದ ಆ ಇನ್ನೊಂದು ಗ್ಲಾಸ್ ಹಾಗೇ ಉಳಿಯುತ್ತದೆ. ಇದು ಕತ್ತಲ ಬದುಕು. ಈ ದೃಶ್ಯಗಳಲ್ಲಿ ಬೆಳಕಿನ ಬಳಕೆ ಅತ್ಯಂತ ಮಿತವಾಗಿದೆ.

ಬೆಳಗಿನಲ್ಲಿ ಇನ್ನೊಂದು ಬೇರೆಯದೇ ಬದುಕು. ಆಕೆ ಈಗ ಆತನಾಗಿದ್ದಾನೆ. ಅವನೊಬ್ಬ ಅಧ್ಯಾಪಕ. ಅವನ ಕತ್ತಲಬದುಕಿನ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಅವನ ಹಿಂದಿನಿಂದ ಅವನನ್ನು ಅವಹೇಳನ ಮಾಡುತ್ತಾನೆ. ಅವನು ಆ ನಿರಾಕರಣೆಯನ್ನು ಉಪೇಕ್ಷಿಸುತ್ತಾನೆ. ಅವನ ಮನೆಯಲ್ಲಿ ಅವನಲ್ಲದೆ ಅವನ ತಂದೆ ಕೂಡ ಇದ್ದಾನೆ, ಹಾಸಿಗೆ ಹಿಡಿದಿದ್ದಾನೆ. ಅವನ ಮಂಚದ ಹಿಂದಿನ ಚಿತ್ರಗಳನ್ನು ನೋಡಿದಾಗ ಅವನೊಬ್ಬ ನಾಝಿ ಸೈನಿಕ ಎಂದು ಗೊತ್ತಾಗುತ್ತದೆ. ಅಪ್ಪ ಮಗನ ನಡುವೆ ಸಂಬಂಧ ಸಾಮರಸ್ಯವಾಗಿಲ್ಲ ಎಂದು ತಿಳಿಯುತ್ತದೆ. ಇಷ್ಟಾಗುವಾಗ ಬಹುಶಃ ಹತ್ತು ನಿಮಿಷಗಳಾಗಿರಬಹುದು. ಈ ಹತ್ತು ನಿಮಿಷಗಳಲ್ಲಿ ಚಿತ್ರ ನಮ್ಮ ಮನಸ್ಸಿನಲ್ಲಿ ಆಳವಾಗಿ ಇಳಿದಿರುತ್ತದೆ. ಇಷ್ಟೇ ದೃಶ್ಯಗಳಲ್ಲಿ ನಮ್ಮೊಳಗೆ ಒಂದು ಕತೆ ಸುರುಳಿ ಬಿಚ್ಚತೊಡಗುತ್ತದೆ.

ಅದೇ ಕಟ್ಟಡದಲ್ಲಿ ಇನ್ನೊಂದು ಮನೆ ಇದೆ. ಅಲ್ಲಿ ಒಬ್ಬ ಪೋಲೀಸ್ ಪೇದೆ ಮತ್ತು ಆತನ ನರ್ಸ್ ಹೆಂಡತಿ ವಾಸವಿದ್ದಾರೆ. ಅವರಿಬ್ಬರದೂ ಮುದ್ದಾದ ಸಂಸಾರ, ಇಬ್ಬರಲ್ಲಿ ಹೆಂಡತಿ ಜಾಣೆ. ಆದರೆ ಆತನಿಗೆ ಡಿಸೆಲೆಕ್ಸಿಯಾ. ಹಾಗಾಗಿಯೇ ಆಕೆ ಗಂಡನನ್ನು, ಸಂಸಾರವನ್ನು ಸಂಭಾಳಿಸುತ್ತಾ, ಒಮ್ಮೆ ಪ್ರೀತಿ ತೋರಿಸುತ್ತಾ, ಒಮ್ಮೆ ಕೋಪಗೊಳ್ಳುತ್ತಾ ಅವನನ್ನು ಮಗುವಿನಂತೆ, ಸ್ನೇಹಿತನಂತೆ ನೋಡಿಕೊಳ್ಳುತ್ತಿರುತ್ತಾಳೆ. ಆ ಗಂಡ ಸರ್ಬಿಯಾದವನು, ಹೆಂಡತಿಯದು ಕ್ರೋಯೇಶಿಯಾ. ಎರಡು ದೇಶಗಳಿಗೂ ನಡುವೆ ದ್ವೇಷದ ಇತಿಹಾಸವೇ ಇದೆ. ಆದರೆ ಈತ ಕ್ರೊಯೇಶಿಯಾದ ಯುದ್ಧವೊಂದರಲ್ಲಿ ಕ್ರೋಯೇಶಿಯಾದ ಪರವಾಗಿಯೇ ಕಾದಿದವನು. ಗಾಯಗೊಂಡಿರುವ ಇವನ ಆರೈಕೆ ಮಾಡಿದವಳು, ಅವನ ಮಗು ಮನಸ್ಸನ್ನು ನೋಡಿ, ಮೆಚ್ಚಿ ಮದುವೆಯಾಗಿದ್ದಾಳೆ. ಅವನು ಪೋಲೀಸ್ ಪೇದೆಯಾಗಿದ್ದಾನೆ. ಆದರೆ ಬೇರೆ ದೇಶದವನಾದ ಇವನಿಗೆ ಈಗ ಒಂದು ಸಮಸ್ಯೆ ಬಂದಿದೆ. ಇವನು ಇಲ್ಲಿ ಕೆಲಸ ಮಾಡಬೇಕಾದರೆ ಇಲ್ಲಿನ ಸಂವಿಧಾನವನ್ನು ಓದಿ, ಅರ್ಥ ಮಾಡಿಕೊಂಡು, ಪರೀಕ್ಷೆ ಬರೆದು ಪಾಸ್ ಮಾಡಬೇಕು. ಆದರೆ ಓದಿದ ಪಾಠ ಅಷ್ಟು ಸುಲಭಕ್ಕೆ ಅವನ ನೆನಪಿನಲ್ಲಿ ಉಳಿಯುವುದಿಲ್ಲ. ಆ ಪರೀಕ್ಷೆ ಪಾಸ್ ಮಾಡದಿದ್ದರೆ ಅವನ ಕೆಲಸ ಹೋಗುತ್ತದೆ.

ಹೀಗೆ ಒಂದೇ ಕಟ್ಟದದಲ್ಲಿದ್ದರೂ ಪರಸ್ಪರ ಸಮಾನಾಂತರ ರೇಖೆಗಳಂತೆ ಬದುಕುತ್ತಿರುವ ಇವರ ಬದುಕುಗಳು ಪರಸ್ಪರ ಹಾದು ಹೋಗಲು ಕಾರಣವೊಂದು ಬೇಕಲ್ಲ? ಒಮ್ಮೆ ಈ ಅಧ್ಯಾಪಕ ಹೆಣ್ಣಿನ ವೇಶದಲ್ಲಿ ಮನೆಗೆ ಹಿಂದಿರುವಾಗ ಅವನ ಮೇಲೆ ಹಲ್ಲೆಯಾಗುತ್ತದೆ. ಆತನ ಬಾಲ್ಯದಿಂದ ಇಲ್ಲಿನವರೆಗೂ ಪರಿಸ್ಥಿತಿ ಏನೂ ಬದಲಾಗಿಲ್ಲ. ಆಗ ಅವನ ಭಿನ್ನತೆಯನ್ನು ಖಂಡಿಸಿ ಅಪ್ಪ ಹೊಡೆಯುತ್ತಿದ್ದರು, ಈಗ ಜಗತ್ತು ಹೊಡೆಯುತ್ತಿದೆ. ಗಾಯಗೊಂಡ ಅವನನ್ನು ಆಸ್ಪತ್ರೆಗೆ ಕರೆತರುತ್ತಾರೆ. ಅಲ್ಲಿ ಆ ನೆರೆಯಾಕೆ ನರ್ಸ್ ಆಗಿರುತ್ತಾಳೆ. ಇವನನ್ನು ಕಂಡವಳೇ ಧಾವಿಸಿ ಬಂದು ಇವನ ಆರೈಕೆ ಮಾಡುತ್ತಾಳೆ. ತಾನೇ ಮನೆಗೆ ಕರೆತರುತ್ತಾಳೆ. ಅಪ್ಪನ ಬಳಿ ಮೆಲ್ಲ ಹೆಜ್ಜೆಯಿಟ್ಟು ಬರುವ ಈ ಅಧ್ಯಾಪಕ ಹೇಳುತ್ತಾನೆ, ‘ಇಲ್ಲ ನನಗೇನೂ ಅವಮಾನ ಇಲ್ಲ, ಸಣ್ಣವನಿದ್ದಾಗ ಹಂಗಿಸಿ, ಹೊಡೆದು, ಬಡಿದು ನೀನು ನನ್ನನ್ನು ಚೆನ್ನಾಗಿ ತಯಾರು ಮಾಡಿರುವೆ, ಈಗ ಎಂತಹ ಹೊಡೆತವನ್ನೂ ನಾನು ತಡೆದುಕೊಳ್ಳಬಲ್ಲೆ’ ಎಂದು ಹಲ್ಲುಮುಡಿ ಕಚ್ಚಿ ಹೇಳುತ್ತಾನೆ. ಅಪ್ಪ ಪರಮ ಅಸಹ್ಯದಿಂದ ಎನ್ನುವಂತೆ ಮಗನನ್ನು ದಿಟ್ಟಿಸುತ್ತಾನೆ. ಒಂದೇ ಮನೆಯಲ್ಲಿ, ಒಂದೇ ಸೂರಿನಡಿಯಲ್ಲಿ ಬದುಕುವವರ ನಡುವೆ ಭಿನ್ನತೆ ಎನ್ನುವುದು ಎರಡು ಅಲುಗಿನ ಕತ್ತಿಯಾಗಿದೆ.

ಮನೆಗೆ ತಂದು ಬಿಟ್ಟ ಆಕೆ ಅಷ್ಟಕ್ಕೆ ಸುಮ್ಮನಾಗುವುದಿಲ್ಲ, ಮರುದಿನ ಮತ್ತೆ ಬರುತ್ತಾಳೆ. ಇವನ ಗಾಯಗಳಿಗೆ ಔಷಧಿ ಹಚ್ಚುತ್ತಾಳೆ. ಇವನು ಕೇಳಿದ ಎಂದು ಅವನ ಅಪ್ಪನಿಗೆ ಸಹ ಆರೈಕೆ ಮಾಡಲು ಒಪ್ಪುತ್ತಾಳೆ. ಪ್ರತಿಯಾಗಿ, ಹಣ ತೆಗೆದುಕೊಳ್ಳಲು ಒಪ್ಪದೆ, ನೀನು ಉಪಾಧ್ಯಾಯ ಅಲ್ಲವಾ, ನನ್ನ ಗಂಡನಿಗೆ ಕಾನ್ಸ್ಟಿಟ್ಯೂಷನ್ ಹೇಳಿಕೊಡು ಎನ್ನುತ್ತಾಳೆ. ಅಲ್ಲಿಂದ ಶುರುವಾಗುತ್ತದೆ, ಮತ್ತೂ ಎರಡು ಭಿನ್ನತೆಗಳ ಮುಖಾಮುಖಿ. ಆಕೆಯ ಗಂಡ ಸರ್ಬಿಯಾದವನು ಎಂದು ಗೊತ್ತಾದ ಕೂಡಲೆ ಇವನ ಮನಸ್ಸಿನಲ್ಲಿರುವ ಅಸಹನೆಯ ಹಾವು ಹೆಡೆಯಾಡಿಸತೊಡಗುತ್ತದೆ. ಅವನನ್ನು ಬೇಕೆಂದೇ ಕುಟುಕುತ್ತಾನೆ. ಅವನೂ ಸುಮ್ಮನಿರುವುದಿಲ್ಲ, ವಾಪಸ್ ಕೊಡುತ್ತಾನೆ. ಅಂದಿನ ಪಾಠ ಅಷ್ಟಕ್ಕೇ ನಿಲ್ಲುತ್ತದೆ. ಮರುದಿನ ಬಂದವಳನ್ನು ಅಧ್ಯಾಪಕ, ಪ್ರಶ್ನಿಸುತ್ತಾನೆ, ‘ವೈ ಎ ಸರ್ಬ್?’ (‘Why a serb?’). ಅವಳೂ ಉತ್ತರಿಸುತ್ತಾಳೆ, ‘ಐ ವಾಸ್ ಇನ್ ಲವ್. ಲವ್ ಡಸನ್ಟ್ ಪಿಕ್ ಅಂಡ್ ಚೂಸ್’ (’I was in love. Love doesn’t pick and choose ….’). ಇಷ್ಟು ಓದಿಕೊಂಡವನಿಗೆ, ಆಕೆ ಸರಳವಾಗಿ ಹೇಳುವ ಆ ಮಾತು ಅರ್ಥವೇ ಆಗುವುದಿಲ್ಲ. ಆದರೆ ಆ ಹೆಣ್ಣಾದರೂ ಸುಮ್ಮನೆ ಸೋಲೊಪ್ಪಿಕೊಳ್ಳುವವಳಲ್ಲ. ಗಂಡನನ್ನು ಪುಸಲಾಯಿಸಿ, ಮುದ್ದಿಸಿ ಮತ್ತೆ ಕಳಿಸುತ್ತಾಳೆ.

ಗಂಡನೊಡನೆ ಅವನ ಶತ್ರುತ್ವದ ಜೊತೆಯಲ್ಲೇ ಹೆಂಡತಿಯ ಜೊತೆ ಬಾಂಧವ್ಯವೂ ಬೆಳೆಯುತ್ತಿದೆ. ಅದು ಹೆಣ್ಣೊಬ್ಬಳಿಗೆ ಮತ್ತೊಬ್ಬ ಹೆಣ್ಣು ಗೆಳತಿಯಾದಂತಹ ಅನುಬಂಧ. ಅವಳಿಗೆ ತನ್ನ ಬಟ್ಟೆಗಳನ್ನು ತೋರಿಸುತ್ತಾನೆ, ಪರ್ಸ್ ಗಳನ್ನು ತೋರಿಸುತ್ತಾನೆ. ಅವಳ ಮುಖಕ್ಕೆ ಯಾವ ರೀತಿ ಅಲಂಕಾರ ಮಾಡಿಕೊಂಡರೆ ಚೆನ್ನಾಗಿರುತ್ತದೆ ಎಂದು ತೋರಿಸುತ್ತಾನೆ. ಕಡೆಗೆ ಅವಳ ಒತ್ತಾಯಕ್ಕೆ ಮಣಿದು, ಹೆಣ್ಣುಡುಗೆಯನ್ನೂ ಧರಿಸುತ್ತಾನೆ. ಆದರೆ ಏನೇ ಆಗಲಿ ಅವಳ ಗಂಡನನ್ನು ಮಾತ್ರ ಇವನಿಂದ ಒಪ್ಪಿಕೊಳ್ಳುವುದಾಗಿರುವುದಿಲ್ಲ. ಅವನಿಗೆ ಪಾಠ ಹೇಳುತ್ತಾ, ಸಂವಿಧಾನದ ಎದುರಿಗೆ ಎಲ್ಲರೂ ಸಮಾನರು ಎಂದು ಹೇಳುವುದರಲ್ಲಿಯೇ ಒಂದು ವಿಡಂಬನೆ ಇದೆ.

(ನಿರ್ದೇಶಕ Rajko Grlic)

ಆ ಗಂಡ ಸರ್ಬಿಯಾದವನು, ಹೆಂಡತಿಯದು ಕ್ರೋಯೇಶಿಯಾ. ಎರಡು ದೇಶಗಳಿಗೂ ನಡುವೆ ದ್ವೇಷದ ಇತಿಹಾಸವೇ ಇದೆ. ಆದರೆ ಈತ ಕ್ರೊಯೇಶಿಯಾದ ಯುದ್ಧವೊಂದರಲ್ಲಿ ಕ್ರೋಯೇಶಿಯಾದ ಪರವಾಗಿಯೇ ಕಾದಿದವನು. ಗಾಯಗೊಂಡಿರುವ ಇವನ ಆರೈಕೆ ಮಾಡಿದವಳು, ಅವನ ಮಗು ಮನಸ್ಸನ್ನು ನೋಡಿ, ಮೆಚ್ಚಿ ಮದುವೆಯಾಗಿದ್ದಾಳೆ.

ಅಲ್ಲಿಯವರೆಗೂ ಅವನೆಲ್ಲಾ ಕೊಂಕು ಮಾತುಗಳನ್ನೂ ಸಹಿಸಿದ್ದ ಪೋಲೀಸ್ ಪೇದೆ ಮಾತನಾಡುತ್ತಾನೆ, ‘ನೀನು ಮಾತನಾಡುವುದೇ ನಿಜಕ್ಕೂ ನಿನ್ನ ಮನಸ್ಸಿನಲ್ಲಿಲ್ಲದಿದ್ದರೆ, ಈ ಸಂವಿಧಾನ ನಿನಗೆ ಬೇಕಿಲ್ಲ. ನಿನಗೆ ಹೊಸ ಸಂವಿಧಾನ ಬೇಕು, ಹೊಸ ದೇಶ ಬೇಕು, ಅಲ್ಲಿ ಸರ್ಬಿಯನ್ನರಿಗೆ ಜಾಗವಿರುವುದಿಲ್ಲ, ಮುಸ್ಲಿಮರಿಗೆ ಜಾಗವಿರುವುದಿಲ್ಲ, ಅಲೆಮಾರಿಗಳಗೆ ಜಾಗವಿರುವುದಿಲ್ಲ, ಯಹೂದಿಗಳಿಗೆ ಜಾಗವಿರುವುದಿಲ್ಲ…. ಮತ್ತು ಅಲ್ಲಿ ಸಲಿಂಗಿಗಳಿಗೂ ಜಾಗ ಇರುವುದಿಲ್ಲ’. ಆ ಅಧ್ಯಾಪಕನ ವಿದ್ಯೆ, ಉದ್ಯೋಗ, ಸಾಮಾಜಿಕ ಸ್ಥಾನಮಾನ, ಹಣ ಎಲ್ಲವನ್ನೂ ಈ ಪೋಲೀಸ್ ಪೇದೆ ಒಂದು ಮಾತಿನಲ್ಲಿ ಜಾಡಿಸಿ ಬಿಸಾಕುತ್ತಾನೆ. ಹಾಗೆಯೇ ಅವನ ಕಣ್ಣೆಗೆ ತಾನು ಕಾಣುವ ರೀತಿಯಲ್ಲೇ ಮತ್ತ್ಯಾವುದೋ ಕಣ್ಣುಗಳಿಗೆ ಅವನೂ ಕಾಣುತ್ತಿದ್ದಾನೆ, ಆ ಅಸಹನೆಯ ಕಣ್ಣುಗಳು ಕೈಗಳ ಮೂಲಕ ಅವನ ಮೇಲೆ ಹಲ್ಲೆ ಒಮ್ಮೆ ಮಾಡಿವೆ ಎಂದು ಸೂಚಿಸುತ್ತಲೇ, ಹಲ್ಲೆಗೊಳಗಾದ ಆತ ತನ್ನ ಮಾತುಗಳ ಮೂಲಕ ಅದೇ ಸ್ವರೂಪದ ಹಲ್ಲೆಯನ್ನು ಪದೇ ಪದೇ ಇನ್ನೊಂದು ಜೀವದ ಮೇಲೆ ಮಾಡುತ್ತಲೇ ಇದ್ದಾನೆ ಎಂದೂ ತಿಳಿಯಪಡಿಸುತ್ತಾನೆ.

ಹೀಗೆ ಒಂದು ಸಂವಿಧಾನ ತನಗೇ ಗೊತ್ತಿಲ್ಲದಂತೆ ಮನಸ್ಸುಗಳನ್ನು ಬೆಸೆಯುತ್ತಾ ಹೋಗುತ್ತದೆ. ಆ ಸಂವಿಧಾನದ ನೆಪದಲ್ಲಿ ನಿರ್ದೇಶಕ ಮನಸ್ಸಿನ ಪೊರೆಗಳನ್ನು, ತೆರೆಗಳನ್ನು ಕಳಚುತ್ತಾ ಹೋಗುತ್ತಾನೆ. ಆ ಎಲ್ಲರೂ ಒಬ್ಬರಿಗೊಬ್ಬರು ಹತ್ತಿರವಾಗುತ್ತಾ ಹೋಗುತ್ತಾರೆ. ಆ ಹೆಣ್ಣು ಮಗನ ಮನಸ್ಸಿನ ದ್ವೇಷವನ್ನು, ಅಪ್ಪನ ಮನಸ್ಸಿನ ದ್ವೇಷವನ್ನು ಆರೈಕೆ ಮಾಡಿ, ಅದಕ್ಕೆ ಮುಲಾಮು ಹಚ್ಚುತ್ತಾಳೆ. ಅಷ್ಟು ದ್ವೇಷಿಸುವ ಮಗ ಕಡೆಗೊಮ್ಮೆ ಅಪ್ಪ ಸತ್ತಾಗ ಕಣ್ಣೀರು ಮಿಡಿಯುತ್ತಾನೆ. ತಂದೆ ಸತ್ತ ಮೇಲೆ ಮೊದಲ ಸಲ ಅವನು ಬೆಳಕಿನಲ್ಲಿ ಹೆಣ್ಣಾಗಿ ಅಲಂಕಾರ ಮಾಡಿಕೊಳ್ಳುತ್ತಾನೆ. ಅವನ ಕತ್ತಲ ಪಯಣ ಅಂದಿಗೆ ಮುಗಿದಿದೆ. ಕ್ಯಾಮೆರಾ ಈಗ ಅವನ ಬೆನ್ನಿಗಿಲ್ಲ, ಅವನ ಎದುರಿಗಿದೆ. ಆದರೆ ಅವನನ್ನು ಬದುಕಿಗೆ ಬಂಧಿಸಿಟ್ಟಿದ್ದ ಒಂದು ಎಳೆಯೂ ಕಡಿದಿದೆ. ಚಿತ್ರದ ಮುಂದಿನ ಕತೆ ಅದರ ಬಗ್ಗೆ ಹೇಳುತ್ತದೆ. ಅದನ್ನು ಚಿತ್ರ ನೋಡಿಯೇ ತಿಳಿಯಬೇಕು.

ಇಡೀ ಚಿತ್ರ ಒಂದು ಆಯಾಮದಿಂದ ತೆಳುಕತೆಯಂತೆ ತೋರಿದರೂ, ಅದು ತನ್ನೊಳಗೆ ಅನೇಕ ಆಯಾಮಗಳನ್ನು ಅಡಗಿಸಿಕೊಂಡಿದೆ. ಇಲ್ಲಿರುವ ಯಾವ ಪಾತ್ರಗಳೂ ಕಪ್ಪು ಬಿಳಿ ಪಾತ್ರಗಳಲ್ಲ. ಎಲ್ಲಾ ಪಾತ್ರಗಳನ್ನೂ ನಿರ್ದೇಶಕ ಮತ್ತು ಚಿತ್ರಕಥೆ ಬರೆದವರು ಸ್ವತಂತ್ರ ಪಾತ್ರಗಳಂತೆ ಪೋಷಿಸಿದ್ದಾರೆ. ಪ್ರತಿಯೊಂದು ಪಾತ್ರಕ್ಕೂ ಚಿತ್ರದಲ್ಲಿ ಅವುಗಳದೇ ಆದ ಕ್ಷಣ ಇದೆ. ಆ ಒಂದು ಕ್ಷಣದಲ್ಲಿ ಕತೆ ಅವರೆದಿರು ಮೊಣಕಾಲೂರಿ ಕೂತುಬಿಡುತ್ತದೆ. ಇಡೀ ಚಿತ್ರದಲ್ಲಿ ಹಾಸಿಗೆಯ ಮೇಲೆ ಮಲಗಿಯೇ ಇರುವ ಅಪ್ಪನನ್ನು ನೋಡಿಕೊಳ್ಳಲು ನರ್ಸ್ ಮೊದಲ ಬಾರಿ ಬಂದಾಗ, ಆಕೆ ಹೊದಿಕೆ ತೆರೆಯಲು ಅವನು ಬಿಡುವುದಿಲ್ಲ. ನರ್ಸ್ ಬಲವಂತದಿಂದ ಹೊದಿಕೆ ಎಳೆಯುತ್ತಾಳೆ, ನೋಡಿದರೆ ಆತನಿಗೆ ಎರಡೂ ಕಾಲುಗಳೂ ಇರುವುದಿಲ್ಲ. ಆ ಒಂದು ಕ್ಷಣದಲ್ಲಿ ಅವನ ಮುಖದಲ್ಲಿನ ಅವಮಾನ, ಸಂಕೋಚ, ತನ್ನ ಘನತೆಯ ಹೊದಿಕೆಯನ್ನು ನೀನು ನನ್ನ ಅನುಮತಿ ಇಲ್ಲದೆ ಸರಿಸಿದೆ ಎನ್ನುವ ಆ ಮುಖಭಾವ.. ಆ ಪಾತ್ರ ಆ ಒಂದು ದೃಶ್ಯದಲ್ಲಿ ಗೆದ್ದುಬಿಡುತ್ತದೆ. ಉಳಿದ ಬದುಕನ್ನೆಲ್ಲಾ, ಅಂಗಹೀನನಾಗಿ, ತಾನು ತುಚ್ಚೀಕರಿಸಿದ ಮಗನ ಕರುಣೆಯಲ್ಲೇ ಕಳಿಯಬೇಕಾಗಿರುವ ಆ ಸೈನಿಕನ ಮನಸ್ಸಿನಲ್ಲಿ ಎಷ್ಟೆಲ್ಲಾ ಯುದ್ಧಗಳು ನಡೆಯುತ್ತಿರಬಹುದು? ಚಿತ್ರದಲ್ಲಿ ಇಂತಹ ಹಲವು ಸನ್ನಿವೇಶಗಳಿವೆ. ನಮ್ಮೆಲ್ಲರಲ್ಲೂ ಇರುವ ಕೆಡುಕಿನ ಪ್ರತೀಕವಾಗಿ ಅದ್ಯಾವುದೋ ಒಂದು ಪಾತ್ರ ಕಾರಣವೇ ಇಲ್ಲದೆ, ಗಾಜಿನ ಚೂರುಗಳಿರುವ ಬನ್ ಅನ್ನು ನಾಯಿಗಳಿಗೆ ತಿನ್ನಿಸಿ ಅವುಗಳ ಸಾವಿನಲ್ಲಿ ಆನಂದ ಕಾಣುತ್ತಿದೆ. ಮಕ್ಕಳಿಲ್ಲದ ಈ ಪೋಲೀಸ್ ದಂಪತಿ ಒಂದು ಮಗುವನ್ನು ದತ್ತು ತೆಗೆದುಕೊಳ್ಳಲು ಒದ್ದಾಡುತ್ತಾ, ಒಂದು ನಾಯಿಮರಿಯನ್ನು ಮಗುವಿನಂತೆ ಸಾಕುತ್ತಿದ್ದಾರೆ. ಹೀಗೆ ಈ ಚಿತ್ರ ಬದುಕಿನಂತೆ, ಬದುಕಿನಷ್ಟೇ ಸಂಕೀರ್ಣವಾಗಿದೆ. ಇಲ್ಲಿ ಎಲ್ಲರಿಗೂ ಪಕ್ಕದವರಿಂದ ಒಂದು acceptance ನ ನಿರೀಕ್ಷೆ ಇದೆ, ಆದರೆ ಅದು ಎಲ್ಲಾ ಸಂದರ್ಭದಲ್ಲೂ ಸಿಗುವುದಿಲ್ಲ. ಹಾಗೆ ಎದುರು ನೋಡುತ್ತಿರುವಾಗಲೇ ತಾವೂ ಸಹ ಅದನ್ನು ಇನ್ನೊಬ್ಬರಿಗೆ ಅದನ್ನು ನಿರಾಕರಿಸುತ್ತಿದ್ದೇವೆ ಎಂದು ಗೊತ್ತಾದ ದಿನ ಬದುಕು ಹೆಚ್ಚು ಅರ್ಥವಾಗುತ್ತದೆ.


ಚಿತ್ರದ ನಿರ್ದೇಶಕ Rajko Grlic ಮತ್ತು ಆತನೊಂದಿಗೆ ಚಿತ್ರಕತೆ ಬರೆದಿರುವುದು Ante Tomić. ಇಂತಹ ಪಾತ್ರಗಳನ್ನಿಟ್ಟುಕೊಂಡು ಚಿತ್ರ ಮಾಡುವಾಗ ಅವು ಕ್ಯಾರಿಕೇಚರ್ ಗಳಾಗದಂತೆ ನೋಡಿಕೊಳ್ಳುವುದು ನಿರ್ದೇಶಕನಿಗೆ ದೊಡ್ಡ ಸವಾಲು. ಒಂದಿಷ್ಟು ಹೆಚ್ಚುಕಮ್ಮಿಯಾದರೂ ಚಿತ್ರ ಮತ್ಯಾವುದೋ ಪರಿಣಾಮವನ್ನು ಬೀರತೊಡಗುತ್ತದೆ. ಒಂದೋ ಪರಮ ಮೆಲೋಡ್ರಾಮಿಕ್ ಆಗುತ್ತದೆ, ಅಥವಾ ಅಪಹಾಸ್ಯವಾಗುತ್ತದೆ. ಆದರೆ ಅವೆರಡೂ ಅಗಿಲ್ಲ ಎನ್ನುವುದರಲ್ಲಿ ಚಿತ್ರದ ಗೆಲುವಿದೆ. ಒಂದೇ ಸಮಯದಲ್ಲಿ ಯೋಚನೆಗಳ ಮೂಲಕ ಮತ್ತು ಭಾವನೆಗಳ ಮೂಲಕ ಈ ಚಿತ್ರದೊಡನೆ ಅನುಸಂಧಾನ ಸಾಧ್ಯ. ಚಿತ್ರದಲ್ಲಿ ಯಾವ ವಿಭಾಗ ಎದ್ದು ಕಾಣುವಂತೆ ಕೆಲಸ ಮಾಡಿದೆ ಎಂದರೆ ಬೆರಳು ತೋರಿಸಿ ಇದೇ ಎಂದು ಹೇಳಲಾಗುವುದಿಲ್ಲ ಎನ್ನುವುದರಲ್ಲಿ ಚಿತ್ರದ ಗೆಲುವಿದೆ. ಎಲ್ಲರೂ ತಮ್ಮತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಮತ್ತು ಯಾರೂ ಡಾಳಾಗಿ ಇನ್ನೊಬ್ಬರನ್ನು ಕಡೆಗಣಿಸುವ ಹಾಗೆ ಮಿರುಗುವುದಿಲ್ಲ. ನೋಡಬೇಕಾದ ಚಿತ್ರ ಇದು.