ವಿದ್ಯಾರ್ಥಿಗಳನ್ನು ನಾಲ್ಕು ಗುಂಪಾಗಿ ವಿಂಗಡಿಸಿ ಪ್ರತಿ ಗುಂಪಿಗೆ ಒಬ್ಬೊಬ್ಬ ಗಣಿತ ಪರಿಣತ ವಿದ್ಯಾರ್ಥಿಯನ್ನು ನಾಯಕನನ್ನಾಗಿ ಮಾಡಿದ್ದರು. ನನಗೆ ಒಂದು ಗುಂಪಿನ ಜಬಾಬ್ದಾರಿ ಕೊಟ್ಟಿದ್ದರು. ದೊಡ್ಡದಾಗಿರುವ ಮನೆಯ ಸಹಪಾಠಿಗಳ ಕೋಣೆಯೊಂದರಲ್ಲಿ ರಾತ್ರಿ ಕುಳಿತು ಗಣಿತ ಬಿಡಿಸುತ್ತಿದ್ದೆವು. ಅಲ್ಲೇ ಮಲಗಿ ಬೆಳಿಗ್ಗೆ ಮನೆಗೆ ಹೋಗುತ್ತಿದ್ದೆವು. ಹೀಗೆ ಸಹಪಾಠಿಗಳ ಮನೆಗೆ ಹೋಗಿ ಪಾಠ ಹೇಳುವುದನ್ನು ಮೊದಲಿನಿಂದಲೂ ಮಾಡುತ್ತಿದ್ದೆ. ಶ್ರೀಮಂತ ಹುಡುಗರ ತಾಯಂದಿರು ಬಡ ಹುಡುಗನ ತಾಯಿಯ ಮನೆಗೆ ಬಂದು “ಇವತ್ತು ನಿಮ್ಮ ಮಗನನ್ನು ನಮ್ಮ ಮನೆಗೆ ಕಳಿಸಿರಿ” ಎಂದು ಕೇಳುವುದು ನನಗೆ ಖುಷಿ ಕೊಡುತ್ತಿತ್ತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 56ನೇ ಕಂತು ನಿಮ್ಮ ಓದಿಗೆ.

1961ರಲ್ಲಿ ನಾನು ಐದನೇ ಇಯತ್ತೆ ಇರಬಹುದು. ಸೋಲಾಪುರ ಕಡೆಯಿಂದ ಬರುವ ಮಿಲಿಟರಿ ಜೀಪುಗಳು ಸಾಲುಸಾಲಾಗಿ ವಿಜಾಪುರ ಮೇಲಿಂದ ಹಾಯ್ದು ಗೋವಾ ಕಡೆಗೆ ಹೊರಟಿದ್ದವು. ನಾವು ವಿಜಾಪುರದ ಬಹಳಷ್ಟು ಎಳೆಯರು ರಾಷ್ಟ್ರೀಯ ಹೆದ್ದಾರಿ ಬಳಿ ಹೋಗಿ, ಪಕ್ಕದಲ್ಲಿ ನಿಂತು ಆ ನೂರಾರು ಹಸಿರುಬಣ್ಣದ ಜೀಪುಗಳು ಬರುವುದನ್ನು ಮತ್ತು ಅವುಗಳಲ್ಲಿನ ಯುದ್ಧ ಸನ್ನದ್ಧ ಸೈನಿಕರನ್ನು ನೋಡುವುದೇ ಆಶ್ಚರ್ಯಭರಿತ ಆನಂದವಾಗಿತ್ತು.

ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಹೋರಾಡಿ 1947ನೇ ಆಗಸ್ಟ್ 14ರ ಮಧ್ಯರಾತ್ರಿ, ಅಂದರೆ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದಿದ್ದರೂ ಗೋವಾ, ದೀವ್ ಮತ್ತು ದಮನ್‌ಗಳನ್ನು ಪೋರ್ಚುಗೀಸರಿಂದ ಹಿಂಪಡೆಯಲಿಕ್ಕಾಗಿರಲಿಲ್ಲ. ಗೋವಾ ವಿಮೋಚನೆಗಾಗಿ ಈ ಸೈನಿಕರು ಹೊರಟಿದ್ದರು ಎಂಬುದು ನನಗೆ ಮೊದಲೇ ಗೊತ್ತಿತ್ತು. ನನ್ನ ಸಹಪಾಠಿ ಮುರಿಗೆಪ್ಪನ ತಂದೆ ವಿಜಾಪುರದಲ್ಲಿ ಪೊಲೀಸ್ ಆಗಿದ್ದರು. ವಿಜಾಪುರದ ಬಹಳಷ್ಟು ಪೊಲೀಸರನ್ನು ಗೋವಾ ವಿಮೋಚನೆಗಾಗಿ ಕೆಲ ದಿನಗಳ ಹಿಂದೆ ಕಳುಹಿಸಲಾಗಿತ್ತು. ಹಾಗೆ ಹೋದವರಲ್ಲಿ ಮುರಿಗೆಪ್ಪನ ತಂದೆಯೂ ಇದ್ದರು. ಹೀಗಾಗಿ ಅವನಿಗೆ ಎಲ್ಲ ವಿಷಯ ಗೊತ್ತಿತ್ತು. ತನಗೆ ತಿಳಿದಷ್ಟು ನನಗೆ ಹೇಳಿದ್ದ.

ಕೆಲವೊಂದು ಜೀಪುಗಳು ಆ ರಾಷ್ಟ್ರೀಯ ಹೆದ್ದಾರಿಯ ಮೇಲೆ ನಿಂತವು. ನಾವು ಜೀಪು ಮತ್ತು ಸೈನಿಕರನ್ನು ನೋಡಲು ಸಮೀಪಕ್ಕೆ ಹೋದೆವು. ಆ ಸೈನಿಕರಲ್ಲಿ ತರುಣರೇ ಹೆಚ್ಚಾಗಿದ್ದರು. ಕೆಲವೊಂದು ಜೀಪುಗಳಲ್ಲಿ ಒಂದಿಷ್ಟು ಉಪ್ಪು ಮೊದಲಾದ ವಸ್ತುಗಳ ಪುಟ್ಟ ಚೀಲಗಳಿದ್ದವು. ನಾವು ಸೈನಿಕರಿಗೆ ಅಂಜುತ್ತ ದೂರದಿಂದಲೇ ಸೆಲ್ಯೂಟ್ ಹೊಡೆಯುತ್ತಿದ್ದೆವು. ಅವರು ಕರೆದು ಮಾತನಾಡಿಸುತ್ತಿದ್ದರು. ಜೀಪುಗಳು ಹೊರಡುವಾಗ ನಾವು ಕೈಬೀಸುತ್ತಿದ್ದೆವು. ಅವರು ಕೂಡ ಖುಷಿಯಿಂದ ಕೈಬೀಸುತ್ತಿದ್ದರು.

(ವಿಜಾಪುರ ನಗರದ ಕೇಂದ್ರ ಸ್ಥಳವಾದ ಗಾಂಧೀ ಚೌಕ್)

ಕೊನೆಗೆ 1961ನೇ ಡಿಸೆಂಬರ್ 19ರಂದು ಗೋವಾ ಭಾರತದ ಭಾಗವಾಯಿತು. ಗೋವಾ ಸಮರದಲ್ಲಿ ಭಾಗವಹಿಸಿದ್ದ ವಿಜಾಪುರದ ಪೊಲೀಸರು ಕೂಡ ಚಿನ್ನ ಬೆಳ್ಳಿ ಮುಂತಾದ ಬೆಲೆಬಾಳುವ ವಸ್ತುಗಳನ್ನು ತಂದರು ಎಂದು ಜನ ಆಡಿಕೊಳ್ಳುತ್ತಿದ್ದರು.

(ಆ ಸಂದರ್ಭದಲ್ಲಿ ಅಲಿಪ್ತ ರಾಷ್ಟ್ರಗಳ ಚಳವಳಿ ಪ್ರಬಲವಾಗಿತ್ತು. ಚಳವಳಿಯ ನಾಯಕರಲ್ಲಿ ನೆಹರೂ ಅವರ ಹೆಸರು ಪ್ರಮುಖವಾಗಿತ್ತು. ಈಜಿಪ್ಟ್ ಅಧ್ಯಕ್ಷ ಅಬ್ದುಲ್ ನಾಸೇರ್ ಕೂಡ ಈ ಚಳವಳಿಯಲ್ಲಿ ಕ್ರಿಯಾಶೀಲವಾಗಿದ್ದರು. ಅವರು ಪೋರ್ಚುಗೀಸರ ಯುದ್ಧನೌಕೆಗಳನ್ನು ಸುಯೇಜ್ ಕಾಲುವೆಯಿಂದ ಬಿಡಲು ಒಪ್ಪಲಿಲ್ಲ. ಹೀಗಾಗಿ ಭಾರತ ಪೋರ್ಚುಗೀಸರನ್ನು ಸೋಲಿಸುವಲ್ಲಿ ಅಲಿಪ್ತ ಚಳವಳಿ ಕೂಡ ಮುಖ್ಯ ಪಾತ್ರ ವಹಿಸಿತು.)

ಗೋವಾ ವಿಮೋಚನೆಯ ಸಂದರ್ಭದಲ್ಲಿ ಬಡವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿಲ್ಲವೆಂದು ಕಾಣುತ್ತದೆ. ಆದರೆ ನಂತರ 1962ರಲ್ಲಿ ನಡೆದ ಭಾರತ-ಚೀನ ಯುದ್ಧದ ವೇಳೆ ರಾಷ್ಟ್ರವ್ಯಾಪಿ ಬೆಲೆ ಏರಿಕೆಯಾಯಿತು! ಋತುಮಾನ, ಹಬ್ಬ ಹುಣ್ಣಿಮೆ, ಸುಗ್ಗಿ, ಬರಗಾಲ ಮುಂತಾದ ಸಂದರ್ಭಗಳಲ್ಲಿ ಬೆಲೆ ಏರಿಕೆ ಮತ್ತು ಇಳಿಕೆ (ತೇಜೀ-ಮಂದೀ) ಆಗುವುದು ಸಹಜವಾಗಿತ್ತು. ಆದರೆ ಭಾರತ-ಚೀನ ಯುದ್ಧದ ವೇಳೆ ಉತ್ತರ ಕರ್ನಾಟಕದ ಜೋಳದ ಬೆಲೆಯೂ ಏರಿತು. ಎಲ್ಲಿಯ ಜೋಳ, ಎಲ್ಲಿಯ ಚೀನದ ಗಡಿ?

ಚೀನ ಯುದ್ಧದ ಸಮಯದಲ್ಲಿ ನಾನು 6ನೇ ಇಯತ್ತೆಯಲ್ಲಿದ್ದೆ. ಶಾಲೆ ಬಿಟ್ಟ ನಂತರ ಸಾಯಂಕಾಲ ಮನೆಗೆ ಬಂದಾಗ ನನ್ನ ತಾಯಿ, ರಸ್ತೆಗೆ ಹತ್ತಿಕೊಂಡ ನಮ್ಮ ಮನೆಯ ಅಂಗಳದಲ್ಲಿ ಕುಳಿತು, ‘ರೂಪಾಯಿಗೆ ಸೊಲಗಿ ಜ್ವಾಳಾ ಆಗ್ಯಾವ, ಬಡೂರು ಹ್ಯಾಂಗ ಬದುಕಬೇಕು’ ಎಂದು ಹೇಳುತ್ತ ಅಳುತ್ತಿದ್ದಳು. ಸುತ್ತೆಲ್ಲ ನಿಂತ ಬಡ ಮಹಿಳೆಯರು ವಿಷಣ್ಣವದನರಾಗಿ ಧ್ವನಿಗೂಡಿಸುತ್ತಿದ್ದರು.

ಇಂಥ ಸನ್ನಿವೇಶವನ್ನು ನಾನು ಜೀವನದಲ್ಲಿ ಕಂಡದ್ದು ಮೊದಲಬಾರಿ. ಚೀನ ಯುದ್ಧದ ನೆಪದಲ್ಲಿ ಮೊದಲ ಬಾರಿಗೆ ದೇಶದಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಯಿತು. ವಾಣಿಜ್ಯ ಬಂಡವಾಳ ಬೆಳೆಯುವ ರೀತಿಗಳಲ್ಲಿ ಇದೂ ಒಂದು ಎಂಬುದು ನಾನು ದೊಡ್ಡವನಾದಮೇಲೆ ಅರಿತುಕೊಂಡೆ. ವ್ಯಾಪಾರಿಗಳು ಬೆಲೆ ಏರಿಕೆಯ ಯಾವ ಅವಕಾಶವನ್ನೂ ಕಳೆದುಕೊಳ್ಳುವುದಿಲ್ಲ.

ಈ ಯುದ್ಧದ ಪರಿಣಾಮದಿಂದ ದೇಶ ಬೆಚ್ಚಿಬಿದ್ದಿತು. ಚಿತ್ರವಿಚಿತ್ರ ವದಂತಿಗಳನ್ನು ಹಬ್ಬಿಸಲಾಯಿತು. ‘ವದಂತಿಗಳಿಗೆ ಕಿವಿಗೊಡಬೇಡಿ’ ಎಂಬ ಪೋಸ್ಟರ್‌ಗಳನ್ನು ಜಿಲ್ಲಾಡಳಿತ ಸಿದ್ಧೇಶ್ವರ ಗುಡಿಗೂ ಅಂಟಿಸಿತ್ತು. (ನೆಹರೂ ಅವರ ಪಂಚಶೀಲ ತತ್ತ್ವಗಳ ಆಧಾರದ ಮೇಲೆ 1954ನೇ ಏಪ್ರಿಲ್ 29ರಂದು ಭಾರತ-ಚೀನ ಒಪ್ಪಂದವಾಗಿ ‘ಹಿಂದೀ-ಚೀನಿ ಭಾಯಿ ಭಾಯಿ’ ಎನ್ನುವವರೆಗೆ ಮುಂದುವರಿಯಿತು. 1) ಭಾರತ-ಚೀನ ಗಡಿ ಪ್ರದೇಶ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳುವುದು. 2) ಅನಾಕ್ರಮಣ ನೀತಿ ಪಾಲಿಸುವುದು. 3) ಪರಸ್ಪರ ಹಸ್ತಕ್ಷೇಪಕ್ಕೆ ಅವಕಾಶ ಕೊಡದಿರುವುದು. 4) ಸಮಾನತೆ ಮತ್ತು ಪರಸ್ಪರ ಲಾಭದಾಯಕ ಸಂಬಂಧ. 5) ಶಾಂತಿಯುತ ಸಹಬಾಳ್ವೆ. ಈ ಪಂಚಶೀಲ ತತ್ತ್ವಗಳು ಅಲಿಪ್ತ ಚಳವಳಿಗೂ ಸಹಕಾರಿಯಾದವು. ಆದರೆ ಚೀನ 1962ನೇ ಅಕ್ಟೋಬರ್ 1962ನೇ ಅಕ್ಟೋಬರ್ 20ರಿಂದ ನವೆಂಬರ್ 21ರ ವರೆಗೆ ಗಡಿವಿವಾದದ ಹಿನ್ನೆಲೆಯಲ್ಲಿ ಭಾರತದ ಮೇಲೆ ದಾಳಿ ಮಾಡಿತು. ಈ ದಾಳಿಯಿಂದಾಗಿ ನೆಹರೂ ಅವರು ಬಹಳ ನೊಂದುಕೊಂಡರು.)
6ನೇ ಇಯತ್ತೆ ಪರೀಕ್ಷೆ ಮುಗಿದ ಮೇಲೆ ತೆಗ್ಗಿನ ಶಾಲೆ (ಎಸ್.ಎಸ್. ಪೈಮರಿ ಸ್ಕೂಲ್) ಯಿಂದ 5ನೇ ನಂಬರ್ ಶಾಲೆಗೆ ಹೋಗುವ ತೀವ್ರತೆ ಹೆಚ್ಚಾಯಿತು. ನಾಲ್ಕೈದು ಗೆಳೆಯರು ಹೀಗೆ ಹೋಗಲು ನಿರ್ಧರಿಸಿದೆವು. ಆದರೆ ನನ್ನ ಬಗ್ಗೆ ಸದಾ ಕಾಳಜಿ ವಹಿಸುತ್ತಿದ್ದ ಬಿ.ಎಸ್. ಪಾಟೀಲ ಸರ್ ಅವರನ್ನು ಎದುರಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಆದರೆ 5ನೇ ನಂಬರ್ ಶಾಲೆಯಲ್ಲಿ ಹು.ಹ. ಮೆಳ್ಳಿಗೇರಿ ಸರ್ ಅವರ ವಿದ್ಯಾರ್ಥಿಯಾಗುವ ತೀವ್ರತೆಯಿಂದಾಗಿ ಹೋಗಲೇಬೇಕೆಂದು ನಿರ್ಧರಿಸಿದೆವು.

(ವಿಜಾಪರದ ಸಿದ್ಧೇಶ್ವರ ದೇವಾಲಯ)

ನಾವು ಜೀಪು ಮತ್ತು ಸೈನಿಕರನ್ನು ನೋಡಲು ಸಮೀಪಕ್ಕೆ ಹೋದೆವು. ಆ ಸೈನಿಕರಲ್ಲಿ ತರುಣರೇ ಹೆಚ್ಚಾಗಿದ್ದರು. ಕೆಲವೊಂದು ಜೀಪುಗಳಲ್ಲಿ ಒಂದಿಷ್ಟು ಉಪ್ಪು ಮೊದಲಾದ ವಸ್ತುಗಳ ಪುಟ್ಟ ಚೀಲಗಳಿದ್ದವು. ನಾವು ಸೈನಿಕರಿಗೆ ಅಂಜುತ್ತ ದೂರದಿಂದಲೇ ಸೆಲ್ಯೂಟ್ ಹೊಡೆಯುತ್ತಿದ್ದೆವು. ಅವರು ಕರೆದು ಮಾತನಾಡಿಸುತ್ತಿದ್ದರು. ಜೀಪುಗಳು ಹೊರಡುವಾಗ ನಾವು ಕೈಬೀಸುತ್ತಿದ್ದೆವು. ಅವರು ಕೂಡ ಖುಷಿಯಿಂದ ಕೈಬೀಸುತ್ತಿದ್ದರು.

ಕೊನೆಗೆ ನಾನು ಮತ್ತು ಕೃಷ್ಣಾ ಮಾಸರಡ್ಡಿ ಎನ್ನುವ ವಿದ್ಯಾರ್ಥಿ ಜೊತೆಯಾಗಿ ಹೊರಬಂದೆವು. ಪಾಟೀಲ ಸರ್‌ಗೆ ಬಹಳ ಬೇಸರವೆನಿಸಿತು. ಹೀಗೆ ವಿದ್ಯಾರ್ಥಿಗಳು ಒಂದು ಶಾಲೆ ಬಿಟ್ಟು ಇನ್ನೊಂದು ಶಾಲೆಗೆ ಹೋಗುವುದು ಅಲ್ಲಿನ ಶಿಕ್ಷಕರಿಗೆ ಅಪಮಾನ ಮಾಡಿದಂತೆ ಎಂಬ ಸಹಜಭಾವ ಮೂಡುತ್ತಿತ್ತು. ಎಷ್ಟೋ ವರ್ಷ ಕಲಿತಿದ್ದ ಶಾಲೆಯನ್ನು ಬಿಟ್ಟು ಹೊರಬರುವುದು ನನ್ನಲ್ಲಿ ಅಳುಕು ಮೂಡಿಸಿತ್ತು. ಆದರೆ ವಿಜಾಪುರ ನಗರದಲ್ಲಿ ಮನೆಮಾತಾಗಿದ್ದ ಹು.ಹ. ಮೆಳ್ಳಿಗೇರಿ ಸರ್ ಅವರ ವಿದ್ಯಾರ್ಥಿಯಾಗುವ ತೀವ್ರತೆ ಎಲ್ಲವನ್ನೂ ಸಹಿಸಿಕೊಳ್ಳುವಹಾಗೆ ಮಾಡಿತು.

ಅಂತೂ ಐದನೇ ನಂಬರ್ ಶಾಲೆ ಸೇರಿದೆವು. ಸಿದ್ಧೇಶ್ವರ ಗುಡಿ ದಾಟಿ ಬಿ.ಎಲ್.ಡಿ.ಇ. ಹಾಸ್ಪಿಟಲ್ ದಾರಿಯಲ್ಲಿ ಸ್ವಲ್ಪ ಮುಂದೆ ಸಾಗಿದಾಗ ರಸ್ತೆಯ ಬಲಭಾಗದಲ್ಲಿ 5ನೇ ನಂಬರ್ ಶಾಲೆ ಇದೆ. ಅದು ಆ ಕಾಲದ ಸುಸಜ್ಜಿತ ಪ್ರಾಥಮಿಕ ಶಾಲೆ ಆಗಿತ್ತು. ನಾನು ಬಹುಶಃ ನಾಲ್ಕನೇ ಇಯತ್ತೆ ಇದ್ದಾಗ ಈ ಸುಸಜ್ಜಿತವಾದ ಕಟ್ಟಡದ ನಿರ್ಮಾಣವಾಗಿತ್ತು. ಅದರ ಉದ್ಘಾಟನೆಯ ದಿನದಂದು ಕುತೂಹಲದಿಂದ ನೋಡಲು ಹೋಗಿದ್ದೆ. ಆಗಿನ ಶಿಕ್ಷಣ ಸಚಿವರಾಗಿದ್ದ ಅಣ್ಣಾರಾವ್ ಗಣಮುಖಿ ಅವರು ಶಾಲೆಯ ಉದ್ಘಾಟನೆ ಮಾಡಿದರು. (ಅವರು ಸಮರ್ಪಣಾಭಾವದ ರಾಜಕಾರಣಿಗಳೆಂಬುದು ಬಹಳ ವರ್ಷಗಳ ನಂತರ ತಿಳಿಯಿತು. ಕಲಬುರ್ಗಿಯ ಕಡೆಯವರಾಗಿದ್ದ ಅವರು ನಿಧನರಾದಾಗ ಅವರ ಹೆಸರಿನಲ್ಲಿ ಯಾವ ಆಸ್ತಿಯೂ ಇರಲಿಲ್ಲ!)

ಅಂತೂ ನಾನು ಮತ್ತು ಕೃಷ್ಣಾ ಕಷ್ಟಪಟ್ಟು 5ನೇ ನಂಬರ್ ಶಾಲೆ ಸೇರಿದೆವು. ಅದು ದೊಡ್ಡ ಶಾಲೆ. ಅಲ್ಲಿ ಏಳನೆಯ ಇಯತ್ತೆಗೆ ಎರಡು ಕ್ಲಾಸುಗಳಿದ್ದವು ಎಂದು ನೆನಪಾಗುತ್ತಿದೆ. ನಮಗೆ ಸುದೈವದಿಂದ ಮೆಳ್ಳಿಗೇರಿ ಸರ್ ಕ್ಲಾಸೇ ಸಿಕ್ಕಿತು. ಬಿ.ಎಸ್. ಪಾಟೀಲರ ನಂತರ ಅಂಥ ವ್ಯಕ್ತಿತ್ವದ ಇನ್ನೊಬ್ಬ ಸರ್ ನೋಡಿದ್ದೆಂದರೆ ಮೆಳ್ಳಿಗೇರಿ ಸರ್. ಮೆಳ್ಳಿಗೇರಿ ಸರ್ ಜ್ಞಾನ ಮತ್ತು ಶಿಸ್ತಿನ ಆಗರವಾಗಿದ್ದರು. ಏಳನೇ ಇಯತ್ತೆಗೆ ಹೇಳಿ ಮಾಡಿಸಿದ ಶಿಕ್ಷಕರಾಗಿದ್ದರು. ಆಗಿನ ಏಳನೇ ಇಯತ್ತೆ ಪರೀಕ್ಷೆ ಬಹಳ ಮಹತ್ವದ್ದಾಗಿತ್ತು.

ಮೆಳ್ಳಿಗೇರಿ ಸರ್‌ಗೆ ಕನ್ನಡ ಎಂದರೆ ಪಂಚಪ್ರಾಣ. ಅವರಿಂದಾಗಿ ನನ್ನ ಮನದಲ್ಲಿ ಕನ್ನಡದ ವಿರಾಟ್ ದರ್ಶನವಾಯಿತು. ಅವರು ನಮ್ಮ ದೇಶಕ್ಕೆ ಹಿಂದೂಸ್ತಾನ ಅನ್ನದೆ ಭಾರತ ಎನ್ನುತ್ತಿದ್ದರು. ಹಿಂದೂಸ್ತಾನ ಎಂದರೆ ಹಿಂದುಗಳ ಸ್ಥಾನ ಎಂದು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಭಾರತ ಎಂದು ಹೇಳಲು ತಿಳಿಸುತ್ತಿದ್ದರು.

(ಮೆಳ್ಳಿಗೇರಿ ಸರ್)

ಗಣಿತ ಅವರ ಪ್ರೀತಿಯ ವಿಷಯ. ನನ್ನ ಗಣಿತ ಜ್ಞಾನ ಅವರಿಗೆ ಹಿಡಿಸಿತ್ತು. ವಿದ್ಯಾರ್ಥಿಗಳನ್ನು ನಾಲ್ಕು ಗುಂಪಾಗಿ ವಿಂಗಡಿಸಿ ಪ್ರತಿ ಗುಂಪಿಗೆ ಒಬ್ಬೊಬ್ಬ ಗಣಿತ ಪರಿಣತ ವಿದ್ಯಾರ್ಥಿಯನ್ನು ನಾಯಕನನ್ನಾಗಿ ಮಾಡಿದ್ದರು. ನನಗೆ ಒಂದು ಗುಂಪಿನ ಜಬಾಬ್ದಾರಿ ಕೊಟ್ಟಿದ್ದರು. ದೊಡ್ಡದಾಗಿರುವ ಮನೆಯ ಸಹಪಾಠಿಗಳ ಕೋಣೆಯೊಂದರಲ್ಲಿ ರಾತ್ರಿ ಕುಳಿತು ಗಣಿತ ಬಿಡಿಸುತ್ತಿದ್ದೆವು. ಅಲ್ಲೇ ಮಲಗಿ ಬೆಳಿಗ್ಗೆ ಮನೆಗೆ ಹೋಗುತ್ತಿದ್ದೆವು.

ಹೀಗೆ ಸಹಪಾಠಿಗಳ ಮನೆಗೆ ಹೋಗಿ ಪಾಠ ಹೇಳುವುದನ್ನು ಮೊದಲಿನಿಂದಲೂ ಮಾಡುತ್ತಿದ್ದೆ. ಶ್ರೀಮಂತ ಹುಡುಗರ ತಾಯಂದಿರು ಬಡ ಹುಡುಗನ ತಾಯಿಯ ಮನೆಗೆ ಬಂದು “ಇವತ್ತು ನಿಮ್ಮ ಮಗನನ್ನು ನಮ್ಮ ಮನೆಗೆ ಕಳಿಸಿರಿ” ಎಂದು ಕೇಳುವುದು ನನಗೆ ಖುಷಿ ಕೊಡುತ್ತಿತ್ತು.

ನಾಗಠಾಣ ಎಂಬ ಅಡ್ಡ ಹೆಸರಿನ ನನ್ನ ಸಹಪಾಠಿಯ ಮನೆಗೆ ಆಗಾಗ ಹೋಗಿ ಗಣಿತ ಪಾಠ ಹೇಳಿ ಕೊಡುತ್ತಿದ್ದೆ. ಶ್ರೀಮಂತ ಮನೆತನದ ಆತ ಸ್ಫುರದ್ರೂಪಿಯೂ ಒಳ್ಳೆಯನೂ ದಡ್ಡನೂ ಆಗಿದ್ದ. ಆತ ತನ್ನ ತಾಯಿಗೆ ಹೇಳಿ ನನಗೊಂದು ಎಚ್.ಎಂ.ಟಿ. ವಾಚ್ ಕೊಟ್ಟ. ಆಗ ವಾಚ್ ಶ್ರೀಮಂತರ ವಸ್ತುವಾಗಿತ್ತು. ನಾನು ಬಹಳ ಮುಜುಗರದಿಂದ ಸ್ವೀಕರಿಸಿದೆ. ಕಿಸೆಯಲ್ಲಿಟ್ಟುಕೊಂಡು ಸಮಯ ನೋಡುವಾಗ ಹೊರಗೆ ತೆಗೆಯುತ್ತಿದ್ದೆ. ಭಾನುವಾರ ರಜೆಯಲ್ಲಿ ಗೋಲಗುಂಬಜ್, ಗಗನಮಹಲ್, ಇಬ್ರಾಹಿಂ ರೋಜಾ ಮುಂತಾದ ಗಾರ್ಡನ್‌ಗಳಿಗೆ ಓದಲು ಹೋದಾಗ ಕಟ್ಟಿಕೊಳ್ಳುತ್ತಿದ್ದೆ. ಅಲ್ಲಿ ಬರುವ ವಿದ್ಯಾರ್ಥಿಗಳಲ್ಲಿ ಯಾರ ಬಳಿಯೂ ವಾಚ್ ಇರಲಿಲ್ಲ. ಅವರೆಲ್ಲರ ಕಣ್ಣು ವಾಚ್ ಮೇಲೆ ಬೀಳುತ್ತಿತ್ತು.

ಒಂದು ದಿನ ನನ್ನ ತಂದೆ ವಾಚ್ ನೋಡಿದರು. ನಡೆದ ವಿಚಾರ ತಿಳಿಸಿದೆ. ಅವರು ಸಮಾಧಾನದಿಂದ ‘ಮೊದಲು ಹೋಗಿ ವಾಚ್ ಕೊಟ್ಟು ಬಾ’ ಎಂದರು. ನಾನು ‘ಬದುಕಿದೆಯೆ ಬಡ ಜೀವ’ ಎಂದುಕೊಂಡು ಖುಷಿಯಿಂದ ನಾಗಠಾಣ ಮನೆಗೆ ಹೊರಟೆ. ‘ಶ್ರೀಮಂತರ ವಸ್ತು ಬಡವರ ಬಳಿ ಇದ್ದರೆ, ಅವು ಬಡವರ ಒಳಗಿನ ಶ್ರೀಮಂತಿಕೆಯನ್ನು ಮಸುಕು ಮಾಡುತ್ತವೆʼ ಎಂಬ ಭಾವ ಅವರದಾಗಿತ್ತು.

7ನೇ ಇಯತ್ತೆ ನನ್ನ ಜೀವನದಲ್ಲಿ ಬಹುಮುಖ್ಯ ತಿರುವು. ಆ ವರ್ಷದ ಪರೀಕ್ಷೆಯಲ್ಲಿ ಸರ್ಕಾರ ಹೊಸ ಪ್ರಯೋಗ ಮಾಡಿತು. ಪಬ್ಲಿಕ್ ಪರೀಕ್ಷೆ ಎಂದು ಹೇಳಿ ಗೊಂದಲ ಹಿಡಿಸಿತು. ಹೀಗಾಗಿ ಪರೀಕ್ಷೆಗಳು ತಡವಾಗಿ ಪ್ರಾರಂಭವಾದವು.

1964ನೇ ಮೇ 27ರಂದು ಚಾಚಾ ನೆಹರೂ ನಿಧನರಾದ ಸುದ್ದಿ ರೇಡಿಯೋದಲ್ಲಿ ತೇಲಿ ಬಂದಿತು. ಮನಸ್ಸು ಒಪ್ಪಲು ಸಿದ್ಧವಿರಲಿಲ್ಲ. ವಿಜಾಪುರದ ನಾವಿಗಲ್ಲಿಯಲ್ಲಿ ರೇಡಿಯೊ ಇದ್ದ ಮನೆಯಲ್ಲೆಲ್ಲ ಹೋಗಿ ಕೇಳಿದರೂ ಅದೇ ಮಾತು, ರೇಡಿಯೋದಲ್ಲಿ ಅದೇ ಶೋಕ ರಾಗ! ನಾನೂ ಸೇರಿದಂತೆ ದೇಶದ ಎಲ್ಲ ಮಕ್ಕಳಿಗೂ ನೆಹರೂ ಅವರು ಚಾಚಾ ಆಗಿದ್ದರು. (ನವಭಾರತದ ಇತಿಹಾಸದಲ್ಲಿ ಮಕ್ಕಳು ನೆಹರೂ ನಂತರ ಹಾಗೆ ಹಚ್ಚಿಕೊಂಡಿದ್ದೆಂದರೆ ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಮಾತ್ರ.)
ನನಗಂತೂ ಸಂಕಟ ತಾಳಿಕೊಳ್ಳಲಿಕ್ಕಾಗಲಿಲ್ಲ. ರಾತ್ರಿ ನಿದ್ದೆ ಬರದೆ ಒದ್ದಾಡಿದೆ. ಚದ್ದರ್ ಹೊದ್ದುಕೊಂಡು ಕಣ್ಣೀರು ಸುರಿಸಿದೆ. ಅತ್ತರೂ ಸಮಾಧಾನವಾಗಲಿಲ್ಲ. ಆ ದುಃಖದಲ್ಲಿ ನೆಹರೂ ಬಗ್ಗೆ ಕವನವೊಂದು ಮನದಲ್ಲಿ ಮೂಡಿತು. ಎದ್ದವನೇ ಅದನ್ನು ಹಾಳೆಯ ಮೇಲೆ ಇಳಿಸಿ ಮಲಗಿದೆ.

ಶಾಲೆಗೆ ಹೋದಮೇಲೆ ಮೆಳ್ಳಿಗೇರಿ ಸರ್‌ಗೆ ತೋರಿಸಿದೆ. ಅವರು ‘ಉತ್ತಮ ಕವನ, ಯಾರು ಬರೆದದ್ದು’ ಎಂದರು. ‘ನಾನು ಬರೆದೆ’ ಎಂದಾಗ ಅವರಿಗೆ ಸಿಟ್ಟು ಬಂದಿತು. ‘ಸುಳ್ಳು ಹೇಳಬಾರದು’ ಎಂದು ಕಪಾಳಮೋಕ್ಷ ಮಾಡಿದರು. ನಂತರ ಕವನ ಬರೆಯುವುದು ಡೇಂಜರ್ ಎಂದು ಭಾವಿಸಿ, ‘ಮಿತ್ರಪ್ರೇಮ’ ಎಂಬ ಏಕಾಂಕ ನಾಟಕ ಬರೆದು ಸಹಪಾಠಿಗಳ ಮುಂದೆ ಓದಿದೆ. ಸರ್‌ಗೆ ತೋರಿಸಲಿಲ್ಲ. ಹಾಗೂ ಹೀಗೂ ಅವರಿಗೂ ಗೊತ್ತಾಯಿತು. ತರಿಸಿಕೊಂಡು ಓದಿದರು. ಬಹಳ ಖುಷಿಪಟ್ಟರು.

ಗ್ಯಾದರಿಂಗಲ್ಲಿ ಅದೇ ನಾಟಕ ಆಡಿದೆವು. ಆ ನಾಟಕದ ನಿರ್ದೇಶಕ ಮತ್ತು ನಾಯಕ ಕೂಡ ನಾನೇ ಆಗಿದ್ದೆ. ಗ್ಯಾದರಿಂಗ್ ಅತಿಥಿಯಾಗಿದ್ದ ಸ್ಕೂಲ್ ಇನ್ಸ್‍ಪೆಕ್ಟರ್ ಸಜ್ಜನ ಸಾಹೇಬರು ಸೈಕಲ್ ಮೇಲೆ ಬಂದರು. ಧೋತರ, ಬಿಳಿ ಅಂಗಿ, ಮೇಲೆ ಕರಿಕೋಟು ಅವರ ‘ಯೂನಿಫಾರ್ಮ್’ ಆಗಿತ್ತು. ಧೋತರ ಸೈಕಲ್ ಚೈನ್‌ಗೆ ಸಿಗಬಾರದೆಂದು ಕೆಳಗಡೆ ಕ್ಲಿಪ್ ಹಾಕಿರುತ್ತಿದ್ದರು.

ವಿಜಾಪುರದ 5ನೇ ನಂಬರ್ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಗಳಾದ ನಾವು ಅವರನ್ನು ಸ್ವಾಗತಿಸಿದೆವು. ಅವರು ನನ್ನ ಜಾದೂ ಪ್ರದರ್ಶನ ಮತ್ತು ನಾಟಕ ನೋಡಿ ಸಂತೋಷಪಟ್ಟು ಬೆನ್ನು ಚಪ್ಪರಿಸಿದರು.

ಆ ಕಾಲದಲ್ಲಿ ಜಾದು ಮಾಡುವ ಪುಸ್ತಿಕೆಗಳು ಕನ್ನಡದಲ್ಲಿ ಸಿಗುತ್ತಿದ್ದವು. ನಾನು ಅಂಥ ಒಂದು ಪುಸ್ತಕವನ್ನು ಗಂಭೀರವಾಗಿ ಓದುತ್ತ ಪ್ರಯೋಗನಿರತನಾಗಿದ್ದೆ. ಚಮತ್ಕಾರಗಳನ್ನು ಚಾಕಚಕ್ಯತೆಯಿಂದ ಮಾಡುತ್ತಿದ್ದೆ. ಅವುಗಳಲ್ಲಿ ಕೆಲವೊಂದು ಬಹಳ ಸರಳ ಇದ್ದರೂ ಟ್ರಿಕ್ ಗೊತ್ತಾಗದ ಕಾರಣ ನೋಡುಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತಿದ್ದವು.

ತೆಂಗಿನ ಕಾಯಿಯ ಒಂದು ಕಣ್ಣನ್ನು ತೆಗೆದು, ನೀರು ಹೊರಹಾಕಿ ಮಲ್ಲಿಗೆ ಮೊಗ್ಗುಗಳನ್ನು ಒಳಗೆ ಹಾಕಿ, ಮೇಣದಿಂದ ಆ ತೆರೆದ ಕಣ್ಣನ್ನು ಮುಚ್ಚುತ್ತಿದ್ದೆ. ಅದನ್ನು ಅತಿಥಿಗಳಿಗೆ ತೋರಿಸುತ್ತಿದ್ದೆ. ಇದೆಲ್ಲ ಅವರಿಗೆ ಗೊತ್ತಾಗುತ್ತಿರಲಿಲ್ಲ. ನಂತರ ಧ್ರಾಂ ಧ್ರೂಂ ಮಾಡಿ ತೆಂಗು ಒಡೆದಾಗ ಮಲ್ಲಿಗೆ ಸುರಿಯುತ್ತಿದ್ದವು.

(ಎಸ್. ಎಸ್. ಹೈಸ್ಕೂಲ್ ಕಟ್ಟಡದಲ್ಲಿರುವ ತೆಗ್ಗಿನ ಶಾಲೆ. ಅದರ ಮೂರು ಕಿಟಕಿಗಳು ಮತ್ತು ಪಕ್ಕದಲ್ಲಿ ಬಾಗಿಲದ ಮುಂಭಾಗ ಕಾಣುತ್ತಿದೆ.)

ಅರ್ಧ ತುಂಬಿದ ಸುಣ್ಣದ ನೀರಿನ ಗ್ಲಾಸು ಮತ್ತು ಅರಿಷಿಣ ನೀರಿನ ಗ್ಲಾಸನ್ನು ಟೇಬಲ್ ಮೇಲೆ ಇಡುತ್ತಿದ್ದೆ. ನೋಡ್ತಾ ಇರಿ, ಇವುಗಳನ್ನು ಕೂಡಿಸಿ ಕೆಂಪು ಬಣ್ಣ ತಯಾರಿಸುವೆ ಎಂದು ಹೇಳುತ್ತಿದ್ದೆ. ನಂತರ ಅವುಗಳ ಮೇಲೆ ಬಟ್ಟೆ ಹೊದಿಸಿ, ಮ್ಯಾಜಿಕ್ ಸ್ಟಿಕ್‌ನಿಂದ ಅರ್ಥವಿಲ್ಲದ ಮಂತ್ರವನ್ನು ಗಂಭೀರವಾಗಿ ಹೇಳುತ್ತ ಸ್ವಲ್ಪ ಬಟ್ಟೆ ಎತ್ತಿ ಅರಿಷಿಣದ ನೀರನ್ನು ಸುಣ್ಣದ ನೀರಿಗೆ ಸುರಿದು, ಮ್ಯಾಜಿಕ್ ಸ್ಟಿಕ್ ಸುತ್ತುತ್ತ ಬಟ್ಟೆ ತೆಗೆಯುತ್ತಿದ್ದೆ. ಆ ನೀರು ಕೆಂಪಾದದ್ದು ನೋಡಿ ಮಕ್ಕಳು ಕರತಾಡನ ಮಾಡುತ್ತಿದ್ದರು.

ಉದ್ದ ಮತ್ತು ದಪ್ಪನೆಯ ಬಾಳೆಹಣ್ಣಿಗೆ ಮೂರ್ನಾಲ್ಕು ಕಡೆ ಸೂಜಿ ಚುಚ್ಚಿ ಒಳಗಿನಿಂದಲೇ ತುಂಡರಿಸಿ ಇಟ್ಟುಕೊಂಡಿರುತ್ತಿದ್ದೆ. ಸೂಜಿ ತೆಗೆದ ಮೇಲೆ ಏನೂ ಕಾಣುತ್ತಿರಲಿಲ್ಲ. ಎಲ್ಲರಿಗೂ ಬಾಳೆಹಣ್ಣು ತೋರಿಸಿ ಇದಕ್ಕೆ ಚಾಕೂ ಟಚ್ ಮಾಡದೆ ಎತ್ತರದಿಂದ ಚಾಕು ತೋರಿಸುವ ಮೂಲಕ ಬಾಳೆಹಣ್ಣು ತುಂಡರಿಸುತ್ತೇನೆ ಎಂದು ಹೇಳುತ್ತ ಸುಮ್ಮನೆ ಬಾಳೆಹಣ್ಣಿಗೆ ಚಾಕು ತೋರಿಸುತ್ತ ಜಾದೂಗಾರನ ಸ್ಟೈಲ್‌ನಲ್ಲಿ ಏನೇನೋ ಹೇಳುತ್ತ ದೂರದಿಂದಲೇ ಕೊಯ್ದವರ ಹಾಗೆ ಮಾಡುತ್ತಿದ್ದೆ. ನಂತರ ಎಲ್ಲರಿಗೂ ತೋರಿಸುತ್ತ ಸಿಪ್ಪೆ ಸುಲಿದಾಗ ಆ ಬಾಳೆಹಣ್ಣು ತುಂಡುತುಂಡಾಗಿ ಬೀಳುತ್ತಿತ್ತು.

ಇಂಥ ಹತ್ತಾರು ಪ್ರಯೋಗಮಾಡಿದಾಗ ವಿದ್ಯಾರ್ಥಿಗಳಿಗಲ್ಲದೆ ಶಿಕ್ಷಕರಿಗೂ ಆಶ್ಚರ್ಯವೆನಿಸಿತ್ತು. ಇವೆಲ್ಲ ಸರಳವಾದರೂ ನಾಟಕೀಯವಾಗಿ ಆತ್ಮವಿಶ್ವಾಸದಿಂದ ಏನೋ ಅದ್ಭುತವಾದುದನ್ನು ಸಾಧಿಸಿದವರಂತೆ ಮಾಡುವುದರಿಂದ ಆಕರ್ಷಕವಾಗಿ ಮತ್ತು ಆಶ್ಚರ್ಯಕರವಾಗಿ ಕಾಣುತ್ತಿತ್ತು.

ಈರಣ್ಣ ಈರಗಂಟಿ ನನ್ನ ಸಹಾಯಕನಾಗಿದ್ದ. ಗಾಜು ಮತ್ತು ಬ್ಲೇಡ್ ತಿನ್ನುತ್ತ ಬಾಯಿಯಲ್ಲೇ ಇಟ್ಟುಕೊಳ್ಳುವ ಟೆಕ್ನಿಕ್‌ನಲ್ಲಿ ಆತ ಪಳಗಿದ್ದ. ಆದರೆ ಪ್ರದರ್ಶನದ ವೇಳೆ ನಾನು ಹೆಚ್ಚಿಗೆ ಕೊಟ್ಟು ತಪ್ಪು ಮಾಡಿದ್ದರೂ ಸಹಿಸಿಕೊಂಡಿದ್ದ.

ಶಿಕ್ಷಕರ ಸಮೇತ ಎಲ್ಲ ವಿದ್ಯಾರ್ಥಿಗಳು ಈ ಜಾದೂ ಪ್ರದರ್ಶನದಿಂದ ರೋಮಾಂಚನಗೊಂಡಿದ್ದರು. ನಂತರ ನಾನು ಶಾಲೆಯ ಎಲ್ಲ ವರ್ಗಗಳ ವಿದ್ಯಾರ್ಥಿಗಳಲ್ಲಿ ಜಾದೂಗಾರ ಎಂದು ಪ್ರಸಿದ್ಧನಾದೆ!

ದೊಡ್ಡವರ ಉದ್ರಿ ಕೋಟ್ ಹಾಕಿಕೊಂಡು ಭಾರೀ ಜಾದೂಗಾರನ ಹಾಗೆ ನಟಿಸುತ್ತ ಪ್ರದರ್ಶನ ನೀಡಿದ ಆ ಕ್ಷಣ ನೆನಪಾದಾಗಲೆಲ್ಲ ನಗು ಬರುತ್ತದೆ. ಒಂದು ಸಲ ನಾವು ಹುಡುಗರು ಜಗಳಾಡುವಾಗ ಒಬ್ಬ ಹುಡುಗನಿಗೆ ಕೆಟ್ಟ ಶಬ್ದ ಬಳಸಿದೆ. ಆತ ಅಳುತ್ತ ಹೋಗಿ ಮೆಳ್ಳಿಗೇರಿ ಸರ್‌ಗೆ ಹೇಳಿದ. ಆಗ ಸರ್ ನನ್ನನ್ನು ಕರೆದು ‘ನೀನೂ ಇಂಥ ಬೈಗುಳ ಕಲಿತಿರುವೆಯಾ’ ಎಂದು ಕೇಳಿದರು. ಆಗ ನನ್ನ ಜಂಘಾಬಲವೇ ಉಡುಗಿ ಹೋಯಿತು. ಆಗ ಶಾಲೆ ಬಿಡುವ ಸಮಯವಾಗಿತ್ತು. ನಾನು ಬಹಳ ವಿಹ್ವಲನಾಗಿದ್ದೆ. ‘ನಾನು ಉಪಲಿಬುರ್ಜ್‌ದಿಂದ ಬಿದ್ದು ಸಾಯುವೆ. ಮುಂದಿನ ಜನ್ಮದಲ್ಲಿ ಒಳ್ಳೆಯ ಹುಡುಗನಾಗಿ ಹುಟ್ಟುವೆ’ ಎಂದು ಕೈ ಮೇಲೆ ಬರೆದುಕೊಂಡೆ.

ಶಾಲೆ ಬಿಟ್ಟಕೂಡಲೆ ದೂರದ ಉಪ್ಪಲಿಬುರ್ಜ್ ಕಡೆ ಹೊರಟೆ. ಖಿನ್ನತೆಯಲ್ಲಿ ಬೇರೆ ಯೋಚನೆ ಮಾಡದೆ ಗುರಿ ಸಾಧಿಸುವುದರ ಕಡೆಗೆ ಮಾತ್ರ ಲಕ್ಷವಿತ್ತು. ಅಲ್ಲಿ ಹೋಗುವುದರೊಳಗಾಗಿ ಘೋಡೇಸವಾರ್ ಎಂಬ ಅಡ್ಡಹೆಸರಿನ ಸಹಪಾಠಿ, ಇನ್ನಿಬ್ಬರು ಗೆಳೆಯರ ಜೊತೆ ನಿಂತಿದ್ದ. ನನಗೆ ಆಶ್ಚರ್ಯವೆನಿಸಿತು. ಕ್ಲಾಸಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದ ಆತ, ನಾನು ಕೈ ಮೇಲೆ ಬರೆದುಕೊಳ್ಳುವುದನ್ನು ತಾನು ನೋಡಿದ್ದಾಗಿ ಹೇಳಿದ. ಆ ಮೂವರೂ ನನಗೆ ಸಮಾಧಾನಪಡಿಸಿ ಮನೆಗೆ ತಂದು ಬಿಟ್ಟರು.

(ಚಿತ್ರಗಳು: ಸುನೀಲಕುಮಾರ ಸುಧಾಕರ)