ಬೆಣ್ಣೆ ಮತು ಮತ್ತು ಬೆವರು

ಐಟಮ್ಮುಗಳ ಹೊರುವ ಡೈನಿಂಗ್
ಟೇಬಲ್ಲಿನ ಕಾಲು
ದವಾಕಾನಿಯ ಪಾಟಣಿಗೆ ಎಣಿಸುತ್ತಿದೆ
ರೊಟ್ಟಿ ಹಸಿ ಹಿಂಡಿ ನುಂಗಿ ಬಲಿತ
ರೆಟ್ಟೆ ಬೆಟ್ಟ ಕಡಿಯುವಲ್ಲಿ ನಿರತ

ಗಂಧ ಹಿಡಿಕೆಯ ವಾರ್ಡ್ ರೋಬಿನ
ಹ್ಯಾಂಗರುಗಳಲ್ಲಿ ಜೋತು ಬಿದ್ದ
ಖಿನ್ನತೆ ಬಾವಲಿಗಳು
ಮುಳ್ಳು ಕಂಟಿ ಮೇಲೆ ಮಲಗುವ
ಸಬಕಾರ ಕಾಣದ ಅರಿಬಿ
ವಸಂತ ಕೋಗಿಲೆ

ಏಸಿ ರೂಮಿನ ಐಶಾರಾಮಿ
ಗಾದೆಗಳ ಎದೆ ಮೇಲೆ
ಗೂಡು ಕಟ್ಟಿದ ಗೂಗಿ
ಕುಂಭಕರ್ಣನ ಕಟ್ಟೆಗೊರಗಿದ
ಹರಕು ಚಾಪೆ ಮುರುಕು ದಿಂಬು
ಬಣ್ಣ ಬಣ್ಣದ ಕೌದಿ

ಕಡುಕಪ್ಪು ಮಸಿ ಅಂಟಿದ
ಅಸಾಧ್ಯ ಲಾಕರುಗಳಿಗೆ
ಬಿಳಿಯಾಗುವುದೇ ಚಿಂತೆ
ಸೆರಗು ವಲ್ಲಿಗಳ ತುದಿಯಲ್ಲಿ ಕುಂತ
ಬೆವರು ರಕ್ತದಿ ಮೆತ್ತಗಾದ ನೋಟು
ಪಂಚಮಿ ಜೋಕಾಲಿ

ಕನ್ವೆನ್ಷನ್ ಹಾಲಿನ
ಹಳದಿ ಲೋಹ
ಪಿಂಕ್ ನೋಟುಗಳ ಕಣ್ಣುಗಳಲ್ಲಿ
ಕ್ಯಾಲ್ಕುಲೇಟರಿನ ಪ್ರತಿಬಿಂಬ
ತೆಂಗಿನ ಗರಿಯ
ಮದುವೆ ಹಂದರದ
ಕೆಳಗಿನ
ಹಳ್ಳದ ಉಸುಕಿನ ಕಣಗಳಲ್ಲಿ
ಕರುಳು ಬೆಸೆಯುವ ತವಕ

ಫಸ್ಟ್‌ ಏಡ್ ಕಿಟ್ಟಿಗಾಗಿ ಹಾತೊರೆವ
ಚಿನ್ನದ ಹೊಳಪಿನ ಮೈಕಾಂತಿ
ಹಣಕಿ ಹಾಕುವ ನೆತ್ತರ
ಕುಕ್ಕುವ ಬಯಲ ಮಣ್ಣು
ಕಂಪೋಂಡಿನಾಚೆಯ ಸಣ್ಣ ಸದ್ದಿಗೂ
ಕಂಪಿಸುವ ಪಿಜ್ಜಾ ಬರ್ಗರ್
ಟೋಸ್ಟುಗಳು
ಊರು ಕೇರೆಲ್ಲಾ ಹರಗ್ಯಾಡಿ
ಎದೆ ಸೆಟೆಸಿಕೊಂಡು ಬರುವ
ಹಗೇವಿನ ಜೋಳ

ಝಗಮಗಿಸುವ ಇಂದ್ರನ ಅರಮನೆಗಳು
ನರಳುತ್ತಿವೆ
ಅಷ್ಟದಿಗ್ಭಂದನ ನಡುವೆ
ಮೈತುಂಬಾ ಹೊಲಿಗೆ ಹಾಕಿಸಿಕೊಂಡ
ಗುಡಿಸಲುಗಳು ಗುನುಗುವ
ಹಾಡಿನ ಬೊಗಸೆ ತುಂಬಾ
ನಳ ನಳಿಸುವ ಪ್ರೀತಿ

ನಕ್ಷತ್ರಗಳ ಪೋಣಿಸಿಕೊಂಡ
ಕಿಚನ್ನಿನ ಬಾಗಿಲುಗಳು
ಐಡಿ ಕಾರ್ಡ್ ಇಲ್ಲದೇ ಮಿಸುಗುವುದಿಲ್ಲ
ನಗ್ಗಿದ ಡಬರಿ ಗಂಗಾಳ
ಕರೆಯುತ್ತವೆ
ಅಂಗಳದಲ್ಲಿ ಇಲಿ ಹೊತ್ತು
ಓಡುವ ಹೊಟ್ಟೆಗಳನ್ನು

ಅಚ್ಚಗೆ ಉಂಡು
ಬೆಚ್ಚಗೆ ಮಲಗುವ
ಮರಿ ಹಕ್ಕಿಗಳು
ರೆಕ್ಕೆ ಸೋತ ತಾಯಿ ಹಕ್ಕಿಗಳ
ನೂಕಿವೆ ಬಾಡಿಗೆ ಗೂಡುಗಳಿಗೆ
ಚಂಡಮಾರುತ ಪ್ರವಾಹಗಳು
ತಲೆ ಮೇಲೆ ಕುಣಿದರೂ
ಜುಮ್ಮೆನ್ನುವುದಿಲ್ಲ
ಬಿದಿರ ಮೆಳೆ

ಬೆಣ್ಣೆ ಬೆವರ ಪಾಠ
ಕಲಿತು
ಗೋಡೆಗಳ ಕೆಡವಲು
ನಿಂತರೆ…
‘ಉಂಡೆ’ ಮತ್ತು ‘ಹೋಳು’ಗಳ
ಗೊಡವೆಯೇ ಇರುವುದಿಲ್ಲ.

ದವಾಕಾನಿ = ಆಸ್ಪತ್ರೆ, ಪಾಟಣಿಗೆ = ಮೆಟ್ಟಿಲು, ಹಸಿ ಹಿಂಡಿ = ಹಸಿಮೆಣಸಿನಕಾಯಿ ಚಟ್ನಿ, ಬಲಿತ = ಗಟ್ಟಿಯಾದ, ಸಬಕಾರ = ಸಾಬೂನು, ವಲ್ಲಿ = ಪಂಚೆ, ಹಂದರ = ಚಪ್ಪರ, ಉಸುಕು = ಮರಳು, ಹರಗ್ಯಾಡಿ = ತಿರುಗಾಡಿ, ಸೆಟೆಸಿಕೊಂಡು = ಉಬ್ಬಿಸಿಕೊಂಡು, ಹಗೇವು/ವಿನ = ನೆಲದ ಒಳಗಿನ ಉಗ್ರಾಣ, ಗಂಗಾಳ = ತಟ್ಟೆ, ಅಚ್ಚಗೆ = ಚೆನ್ನಾಗಿ.
ಮೆಹಬೂಬ್ ಮಠದ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದವರು
ಪ್ರಸ್ತುತ ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ಕಾವ್ಯ, ಕತೆ, ಸಿನೆಮಾ, ಫೋಟೊಗ್ರಫಿ ಹಾಗೂ ಸಂಸ್ಕೃತಿ ಅಧ್ಯಯನದಲ್ಲಿ ಅಪಾರ ಆಸಕ್ತಿ.
‘ಬಿಸಿಲು ಕಾಡುವ ಪರಿ’ ಇವರ ಮೊದಲ ಕವನ ಸಂಕಲನ. ಈ ಸಂಕಲನಕ್ಕೆ ‘ಕಸಾಪ ದ ನಾ.ಕು. ಗಣೇಶ್ ದತ್ತಿ ಪ್ರಶಸ್ತಿ’, ಪ್ರತಿಷ್ಟಿತ ‘ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ’ (2019) ಬಂದಿವೆ. ಆಕಾಶವಾಣಿ ಧಾರವಾಡದಲ್ಲಿ ಸಂದರ್ಶನ ಪ್ರಸಾರವಾಗಿದೆ. ಹಲವು ಪತ್ರಿಕೆಗಳಲ್ಲಿ ಕವಿತೆ, ಲೇಖನಗಳು ಪ್ರಕಟವಾಗಿವೆ.