ಬದುಕು

ಬದುಕು ಒಮ್ಮೊಮ್ಮೆ ಧರಿಸುವ ಬಟ್ಟೆಯ ಹಾಗೆ..
ಧರಿಸುತ್ತೇವೆ. ಕೊಳೆಯಾಗುತ್ತದೆ. ಕಳಚಿ ಸೋಪಿನ ನೊರೆಯಲ್ಲಿ ತೋಯಿಸಿ, ತಿಕ್ಕಿ, ಜಪ್ಪಿ, ಹಿಂಡಿ, ಒಗೆದು ಒಣ ಹಾಕುತ್ತೇವೆ. ಮತ್ತೆ ಧರಿಸುತ್ತೇವೆ.
ಬದುಕೂ ಹಾಗೆ ಎಲ್ಲದಕ್ಕೂ ಪಕ್ಕಾಗಬೇಕು.
ಕಾಲದೊಂದಿಗೆ ಸಾಗಬೇಕು.

ಬದುಕು ಒಮ್ಮೊಮ್ಮೆ ತಿಂಗಳ ಚಂದಿರನ ಹಾಗೆ..
ಹುಣ್ಣಿಮೆಗೆ ಬರುತ್ತಾನೆ. ಅಮವಾಸ್ಯೆಗೆ ಮರೆಯಾಗುತ್ತಾನೆ. ಅರ್ಧವಾಗುತ್ತಾನೆ ಪೂರ್ತಿಯಾಗುತ್ತಾನೆ ಖಾಲಿಯಾಗುತ್ತಾನೆ ಮತ್ತೆ ತುಂಬುತ್ತಾನೆ.
ಬದುಕೂ ಹಾಗೆ ಎಲ್ಲರೊಳಗೊಂದಾಗಿ ಮಾಗಬೇಕು. ಕಾಲದೊಂದಿಗೆ ಸಾಗಬೇಕು.

ಬದುಕು ಒಮ್ಮೊಮ್ಮೆ ಹರಿವ ನದಿಯ ಹಾಗೆ..
ಮೇಲೆ ಪ್ರಶಾಂತ; ಒಳಗೆ ಭೋರ್ಗರೆತ.
ಕಲುಷಿತವಾಗುತ್ತದೆ ನಿರ್ಮಲವಾಗುತ್ತದೆ.
ಬತ್ತಿ ಹೋಗಿ ಸೊರಗುತ್ತದೆ. ಮತ್ತೆ ಮೈದುಂಬಿ ಉಕ್ಕುತ್ತದೆ.
ಬದುಕೂ ಹಾಗೆ ಎಲ್ಲವನ್ನೂ ತನ್ನೊಳಗೆ ಸೆಳೆದೊಯ್ಯಬೇಕು. ಕಾಲದೊಂದಿಗೆ ಸಾಗಬೇಕು

ಎಲ್ಲದಕ್ಕೂ ಪಕ್ಕಾಗಬೇಕು
ಎಲ್ಲರೊಳಗೊಂದಾಗಿ ಮಾಗಬೇಕು
ಎಲ್ಲವನ್ನೂ ತನ್ನೊಳಗೆ ಸೆಳೆದೊಯ್ಯಬೇಕು
ಕಾಲದೊಂದಿಗೆ ಸಾಗಬೇಕು ಸಾಗುತ್ತಲೇ ಇರಬೇಕು

ಮೇಘನಾ ಕಾನೇಟ್ಕರ್ ಹುಬ್ಬಳ್ಳಿಯವರು
ವೃತ್ತಿಯಲ್ಲಿ ಲೆಕ್ಕ ಪರಿಶೋಧಕಿಯಾಗಿರುವ ಇವರು ಹವ್ಯಾಸಿ ಬರಹಗಾರ್ತಿ, ಬ್ಲಾಗರ್
‘ಕಾಡುವ ಹುಡುಗ’ ಇವರ ಪ್ರಕಟಿತ ಕವನ ಸಂಕಲನ