“ಅದು ಅವರಿಬ್ಬರು ದುಡ್ಡಿಗಾಗಿ ಮಾಡಿದ ನಟನೆಯೇ ಆಗಿದ್ದರೂ, ಗಂಡ ಹೆಂಡತಿಯ ಸಾಂಸಾರಿಕ ಬದುಕಿನ ಆಪ್ತಭಾವದ ಕ್ಷಣ ಟಿವಿ ಪರದೆ ತುಂಬ ಹಚ್ಚಗೆ ಹರಡಿ ನಿಂತಿದೆ. ಅಂಥದೊಂದು ಸಾಂಸಾರಿಕ ಪ್ರೀತಿಯ ಬಾಂಧವ್ಯಕ್ಕೆ ತಾನು ಪಕ್ಕಾಗಲೇ ಇಲ್ಲ, ಅಂಥದೊಂದು ಆಪ್ತಬಂಧ ತನಗೆ ದಕ್ಕಲೇ ಇಲ್ಲ, ಬಹುಶಃ ಇನ್ನೆಂದೂ ತನ್ನ ಬದುಕಿನಲ್ಲಿ ದಕ್ಕಲಾರದು ಕೂಡ ಎಂಬ ಕಹಿಸತ್ಯದ ನೋಟದಿಂದಲೇ ಅಮ್ಮ ಆ ಜಾಹೀರಾತು ನೋಡುತ್ತ ಮೈಯ ಕಣಕಣದಲ್ಲೂ ವಿಷಾದ ರಾಗವನ್ನು ಹೊಮ್ಮಿಸುತ್ತಿದ್ದಾಳೆ”
ಸುಮಂಗಲಾ ಬರೆದ ಸಣ್ಣ ಕಥೆ ನಿಮ್ಮ ಈ ಭಾನುವಾರದ ಓದಿಗೆ.

 

‘ಅಕ್ಕಾ ಏ ಅಕ್ಕಾ’ ಮೊಬೈಲ್‌ನಲ್ಲಿ ವಿನೂ ಧ್ವನಿ.

‘ಹೂಂ.. ಏನು…’

‘ಇವತ್ತು ಗೇಮ್ಸ್ ಪೀರಿಯಡ್ ಇತ್ತು. ಗೋಪಿ ಸರ್ ಜೊತೆ ನಾವೆಲ್ಲ ಆಡಕ್ಕೆ ಹೋದ್ವಿ… ಫುಟ್‌ಬಾಲ್…’

ದೇವರೇ.. ಇವನ ಪೀಠಿಕೆ ಮುಗಿಯಕ್ಕೆ ಇನ್ನು ಐದು ನಿಮಿಷ ಬೇಕು ಎಂದುಕೊಂಡ ವಿದ್ಯಾ ‘ಸರಿಯಪ್ಪ.. ಉದ್ದ ಕಥೆ ಬೇಡ. ಏನಾಯ್ತು ಅಂತ ಮೊದ್ಲು ಹೇಳು ಮಾರಾಯ’ ಎಂದಳು.

‘ಅದ್ನೇ ಹೇಳಕ್ಕೆ ಹೊರಟಿರೋದು ಕಣೇ’

‘ಎಲ್ಲಿಗೆ ಹೊರಟೆ’ ಬೇಡವೆಂದುಕೊಂಡರೂ ಎಂದಿನಂತೆ ವಿದ್ಯಾ ರೇಗಿಸಿಯೇಬಿಟ್ಟಳು.

‘ನಿಂಗೆ ಎಲ್ಲ ತಮಾಶೆನೇ. ನಾವೆಲ್ಲ ಆಡ್ತಾ ಇದ್ವಿ. ನಾನು ಬಾಲ್‌ನ ಕಿಕ್ ಮಾಡೋಣ ಅಂದ್ಕೋತಿದ್ದೆ… ಅವಾಗ..’

‘ಬಾಪ್‌ರೇ… ಏನಾಯ್ತು ಅಂತ ಮೊದ್ಲು ಹೇಳೋ’ ಯಾವಾಗ್ಲೂ ಹೀಗೇ ಇವನ ಪೀಠಿಕೆಯೇ ಇಷ್ಟುದ್ದ ವಿದ್ಯಾ ಮನಸ್ಸಿನಲ್ಲಿಯೇ ರೇಗಿಕೊಂಡಳು.

‘ಅದೇ ಕಣೇ ಆಡೋವಾಗ ಬಾಲ್ ನನ್ನ ಮೀಮಿಗೆ ಬಡೀತು…’

ವಿನೂ ಧ್ವನಿಯಲ್ಲಿ ಕೊಂಚ ಅಳು ಹಣಕಿಹಾಕುತ್ತಿದೆ.

‘ನೀನೇನು ಕಾಲಲ್ಲಿ ಫುಟ್‌ಬಾಲ್ ಆಡ್ತೀಯೋ ಅಥ್ವಾ ಮೀಮಿಯಿಂದಲೋ’ ವಿದ್ಯಾಗೆ ನಗು ತಡೆಯಲಾಗಲೇ ಇಲ್ಲ.

‘ನಗಬೇಡ್ವೇ… ನಂಗೆ ಮೀಮಿ ಹತ್ರ ತುಂಬ ನೋಯ್ತಿದೆ…’

ವಿನೂ ನಿಜಕ್ಕೂ ಅಳು ಹತ್ತಿಕ್ಕಿದ್ದಂತೆ ಅನ್ನಿಸಿತು. ವಿದ್ಯಾಗೆ ಛೀ ಪಾಪದ್ದು… ರೇಗಿಸಬಾರದಿತ್ತು ಎನ್ನಿಸಿ ‘ತುಂಬ ನೋಯ್ತಿದೆಯೇನೋ. ಎಲ್ಲಿ ತೊಡೆ ಹತ್ರಾನ…’ ಧ್ವನಿ ತಗ್ಗಿಸಿ, ಮೆತ್ತಗೆ ಕೇಳಿದಳು. ‘ಅದೇ… ತೊಡೆ ಮಧ್ಯಕ್ಕೆ. ಅಂದ್ರೆ ಮಧ್ಯನೂ ಅಲ್ವೇ… ಮೀಮಿ ತುದಿಗೆ ಕರೆಕ್ಟಾಗಿ ಬಾಲ್ ಜೋರಾಗಿ ಬಡೀತು… ತುಂಬ ನೋಯ್ತಿದೆ ಅಕ್ಕಾ… ಏನು ಹಚ್ಕೋಬೇಕೆ ಅದಕ್ಕೆ…’

‘ಏನು ಹಚ್ಕೋತಿಯ… ಅಮ್ಮಂಗೆ ಕೇಳಬೇಕಿತ್ತು ಕಣೋ’

‘ಶ್ಯೀ.. ನಾನ್ಹೆಂಗೆ ಕೇಳ್ಲೇ.. ನೀನೇ ಕೇಳೇ..’

ಆಹಾಹಾ… ಮಹಾ ನಾಚಿಗೆ ಇದಕ್ಕೆ ಮನಸ್ಸಿನಲ್ಲೇ ರೇಗಿಕೊಂಡ ವಿದ್ಯಾ ‘ಚೂರು ಅಯೋಡೆಕ್ಸ್ ಹಚ್ಕೊ… ಅಲ್ಲೇ ಟೇಬಲ್ ಮೇಲೆ ಆ ಚಿಕ್ಕ ಬಾಕ್ಸ್‌ನಲ್ಲಿ ಇರಬೇಕು ನೋಡು… ಅಥ್ವಾ ಅಮ್ಮ ಅವಾಗವಾಗ ಬೆನ್ನುನೋವಿಗೆ ಅದೇನೋ ವೊಲಿನೋ ಅಂತೇನೋ ಹಚ್ಕೋತಾಳಲ್ಲ ಅದನ್ನಾದ್ರೂ ಚೂರು ಹಚ್ಕೋ… ಇವತ್ತು ಮತ್ತೆಲ್ಲೂ ಆಡಕ್ಕೆ ಹೋಗ್ಬೇಡ, ಚೂರು ಮಲ್ಕೋ ಆಯ್ತಾ’ ಅಂದಳು. ಆ ಕಡೆಯಿಂದ ಏನೂ ಉತ್ತರ ಬರಲಿಲ್ಲ. ವಿದ್ಯಾ ಮತ್ತೆ ಮೆತ್ತಗೆ ‘ತುಂಬ ನೋಯ್ತಿದೆಯಾ ವಿನೂ’ ಎಂದಳು. ‘ಹೂಂ ಕಣೇ’ ಅವನ ಕಣ್ಣಾಲಿಗಳಲ್ಲಿ ನೀರು ತುಂಬಿದೆ ಎನ್ನುವುದು ಕಂಪ್ಯೂಟರ್ ಪರದೆಯ ಮುಂದೆ ಇದ್ದ ವಿದ್ಯಾನ ಕಣ್ಣುಗಳಿಗೆ ನಿಲುಕುತ್ತಿತ್ತು. ‘ಸರಿ ಅದ್ನ ಹಚ್ಕೋ… ಕಡಿಮೆಯಾಗುತ್ತೆ ಆಯ್ತಾ…’

ಊಂಗುಟ್ಟಿ ಅವನು ರಿಸೀವರ್ ಇಟ್ಟ.

ಸ್ವಲ್ಪ ಹೊತ್ತಿಗೆ ವಿದ್ಯಾಗೆ ಮನಸ್ಸು ತಡೆಯದೇ ಅಮ್ಮನ ಮೊಬೈಲ್‌ಗೆ ಕರೆಮಾಡಿದಳು. ‘ಏನು..’ ಅಮ್ಮ ಪಕ್ಕದ ಟೇಬಲ್‌ಗೆ ಕೇಳದಂತೆ ಪಿಸುಗುಟ್ಟಿದಳು. ವಿದ್ಯಾ ಒಂದೆರೆಡೇ ವಾಕ್ಯದಲ್ಲಿ ಹೇಳಿದಳು. ‘ಒಂದ್ನಿಮಿಷ ಇರು…’ ಬಹಶಃ ಅಮ್ಮ ಅಲ್ಲಿಂದೆದ್ದು ಯಾರೂ ಇಲ್ಲದ ಅಲ್ಲಿಯ ಪುಟಾಣಿ ಕಾರಿಡಾರ್‌ಗೆ ಸರಸರನೆ ನಡೆದು ಬರುತ್ತಿದ್ದಾಳೆ ಎಂದು ವಿದ್ಯಾ ಊಹಿಸಿಕೊಂಡಳು. ‘ಅಲ್ವೇ… ಮೀಮಿಗೆ ಯಾರಾದ್ರೂ ಅಯೋಡೆಕ್ಸ್ ಹಚ್ಕೋತಾರೇನೆ. ಮಂಗಾ. ಅದೂ ಅದ್ರ ತುದಿಗೆ ಬಾಲ್ ಬಡೀತಂತೆ ಅಂತೀಯ.. ಸುಮ್ನೆ ಚೂರು ಕೊಬ್ಬರಿ ಎಣ್ಣೆ ಸವರಿಕೊಂಡಿದ್ರೆ ಆಗ್ತಿತ್ತು. ತುದಿ ಕೆಂಪಾಗಿದೆಯಾ, ಸುತ್ಲೂ ಬಾವು ಬಂದಿದೆಯಾ ಅಂತ ಕೇಳಬೇಕಿತ್ತು…’ ಅಮ್ಮನ ಧ್ವನಿಯಲ್ಲಿ ಆತಂಕ. ‘ಅದೆಲ್ಲ ಕೇಳಕ್ಕೆ ನಂಗೆ ಗೊತ್ತಾಗ್ಲಿಲ್ಲಮ್ಮಾ’ ವಿದ್ಯಾ ತಪ್ಪೊಪ್ಪಿಕೊಳ್ಳುವ ಭಾರ ಧ್ವನಿಯಲ್ಲಿ.

‘ಸರಿ. ನಾನೇ ಫೋನ್ ಮಾಡಿ ಕೇಳ್ತೀನಿ ಇರು. ಇವನು ಗೊತ್ತಾಗದೇ ಅಯೋಡೆಕ್ಸ್ ಒಂದಿಷ್ಟು ಮೆತ್ತಿಕೊಂಡ ಅಂದ್ರೆ ಉರಿಯೋದಷ್ಟೆ ಅಲ್ಲ, ಗುಳ್ಳೆಗಿಳ್ಳೆ ಆದ್ರೂ ಆಗ್ಬಹುದು. ಅದು ತುಂಬ ಸೂಕ್ಷ್ಮ ಮಾರಾಯ್ತಿ…’ ಕಡೆಯ ವಾಕ್ಯ ಅಮ್ಮ ಎಷ್ಟು ನಿಧಾನವಾಗಿ, ಮೆಲುವಾಗಿ ಹೇಳಿದಳು ಎಂದರೆ ಆ ಒಂದು ವಿಶಿಷ್ಟ ಸ್ಪರ್ಶದ ಸೂಕ್ಷ್ಮತೆ ತನ್ನ ಬೆರಳ ತುದಿಯಲ್ಲಿ ಇನ್ನೂ ಉಸಿರಾಡುತ್ತಿದೆ ಎಂಬಂತೆ. ವಿದ್ಯಾ ತಣ್ಣಗಾಗಿ  ಕುಳಿತಳು. ಎಷ್ಟೋ ದಿನಗಳ ಹಿಂದಿನ ಸ್ಪರ್ಶವೊಂದು ಅಮ್ಮನ ಬೆರಳಲ್ಲಿ ಇನ್ನೂ ಉಳಿದಿದೆಯಾ. ಅಪ್ಪ ಎನ್ನಿಸಿಕೊಂಡವ ಎಲ್ಲಿದ್ದಾನೆ ಎಂದು ಸರಿಯಾಗಿ ಗೊತ್ತಿಲ್ಲದೆ ವರ್ಷಗಳೇ ಉರುಳಿವೆ. ತನಗೆ ಅಪ್ಪ ಎಂದರೆ ತುಂಬ ಮೊದಲು ತನ್ನ ಬಗ್ಗೆ ಒಂದಿಷ್ಟು ಪ್ರೀತಿಯ ಮತ್ತು ನಂತರ ಅಮ್ಮನ ಜೊತೆಗೆ ಅವನ ಜಗಳಗಳ ಒಂದಿಷ್ಟು ನೆನಪಾದರೂ ಉಳಿದಿದೆ. ವಿನೂಗೆ ಬಹುಶಃ ಅದೂ ಉಳಿದಿಲ್ಲವೇನೋ. ಮೂವರಿಗೂ ಆಸರೆಯಾಗುತ್ತಾನೆ ಎಂದು ಭರವಸೆ ಹುಟ್ಟಿಸಿದ ಅಮ್ಮನ ಸ್ನೇಹಿತ, ತಾನು ಮತ್ತು ವಿನೂ ಇಬ್ಬರೂ ಅಂಕಲ್ ಎಂದು ಕರೆಯುತ್ತಿದ್ದವ, ಅಷ್ಟೆಲ್ಲ ಹಚ್ಚಿಕೊಂಡಿದ್ದವ ಕೂಡ ಮನೆಗೇ ಬಾರದೆ ವರ್ಷಗಳು ಉರುಳುತ್ತಿವೆ. ಏಕೆ ಎಂಬ ಕಾರಣದ ಅರಿವೂ ಆಗದಂತೆ ಇದ್ದಕ್ಕಿದ್ದಂತೆ ಅಂಕಲ್ ಎಂಬ ಒಂದು ಭರವಸೆಯ ಎಳೆ ತುಂಡಾಗಿದ್ದೇ ಅನಂತ ವಿಶ್ವದಲ್ಲಿ ಮೂವರೇ ಅನಾಥರಾಗಿ ತೇಲುತ್ತಿರುವ ಅನುಭವ. ಅಮ್ಮ ಅಂಕಲ್‌ನ ಆ ಜೀವಸ್ಪರ್ಷ ಮತ್ತೆ ಬೇಕೆಂಬ ಆತ್ಮದಾಳದ ಅದಮ್ಯ ಆಕಾಂಕ್ಷೆಯನ್ನು ಮೆಟ್ಟಿಕೊಂಡು ಹೇಗೆ ಬದುಕುತ್ತಿದ್ದಾಳೆ. ವಿದ್ಯಾಗೆ ಗ್ರಹಿಕೆಗೂ ನಿಲುಕುವ ಮುನ್ನವೇ ಕಣ್ಣಾಲಿ ತುಂಬಿಕೊಳ್ಳುತ್ತ ತಟ್ಟನೆ ಲೂಗೆ ಎದ್ದು ಹೋದಳು. ಮತ್ತೆ ಬಂದವಳು ಕಷ್ಟಪಟ್ಟು ಮನಸ್ಸನ್ನು ಕೆಲಸದಲ್ಲಿ ತೊಡಗಿಸಿದಳು.

ಸಂಜೆ ವಿದ್ಯಾ ಮನೆಗೆ ಬರುವಷ್ಟರಲ್ಲಿ ಅಮ್ಮ ಬಂದಿದ್ದಳು. ವಿನೂ ದಿವಾನದ ಮೇಲೆ ಕುಳಿತು ಟಿವಿಯಲ್ಲಿ ಮುಳುಗಿದ್ದ. ಅವನನ್ನು ನೋಡುತ್ತಲೇ ವಿದ್ಯಾಗೆ ರೇಗಿಸಬೇಕೆನ್ನಿಸಿತು. ಅಡುಗೆ ಮನೆ ಬಾಗಿಲಲ್ಲಿ ನಿಂತ ಅಮ್ಮ ಕಣ್ಣುಸನ್ನೆ ಮಾಡಿದ್ದು ವಿದ್ಯಾನ ಗಮನಕ್ಕೆ ಬಾರದೆ ‘ಹೇಗಿದೆಯೋ ನಿನ್ನ ಮೀಮಿ. ಕಾಲಲ್ಲಿ ಪುಟ್‌ಬಾಲ್ ಆಡೋದು ಕೇಳಿದೀನಿ, ನೋಡಿದೀನಿ ಮಾರಾಯನೇ. ಆದ್ರೆ ಹಿಂಗೆ ಆಡೋದು ಕೇಳಿಲ್ಲಪ್ಪ…’ ರೇಗಿಸುತ್ತಲೇ ಜೋರಾಗಿ ನಕ್ಕಳು.

‘ನೀನು ಡಾಕ್ಟರಾಗ್ಲಿಲ್ಲ ಸದ್ಯ. ಆಗಿದ್ರೆ ಎಷ್ಟು ಜನರಿಗೆ ಏನು ಮಾಡ್ತಿದ್ಯೋ. ನೀನು ಹೇಳ್ದೆ ಅಂತ ಮೊದ್ಲು ಅಯೋಡೆಕ್ಸ್ ಮೆತ್ಕೊಂಡೆ. ಜೋರು ಉರಿ ಶುರುವಾಯ್ತು. ಆಮೇಲೆ ನಾನೇ ಚೂರು ತಲೆ ಓಡಿಸ್ದೆ ಗೊತ್ತಾ…’ ವಿನೂ ತನ್ನ ಎಂದಿನ ಲಹರಿಗೆ ಮರಳಿದ್ದ. ‘ಕರ್‍ಚೀಫ್ ಒಂಚೂರು ಒದ್ದೆ ಮಾಡ್ಕೊಂಡು ಆಯೋಡೆಕ್ಸ್‌ನ ಒರೆಸಿ ತೆಗ್ದು, ಚೂರು ಕೊಬ್ಬರಿ ಎಣ್ಣೆ ಹಚ್ಗೊಂಡು ಮಲ್ಗಿದೆ. ಅಮ್ಮ ನಾನು ಹಂಗ್ಮಾಡಿದ್ದೇ ಛಲೋ ಆಯ್ತು ಅಂದ್ಲು ಗೊತ್ತಾ…’ ಎದ್ದು ಬಂದವನೇ ವಿದ್ಯಾನ ಬೆನ್ನಿಗೊಂದು ಗುದ್ದಿದ. ‘ಶುರುವಾಯ್ತಾ ನಿಮ್ಮ ಜಗಳ…’ ಅಮ್ಮ ರೇಗಿದಳು.

ಒಂದೇ ರೂಮ್ ಮತ್ತು ಹಾಲ್ ಇದ್ದ ಆ ಮನೆಯಲ್ಲಿ ಅಮ್ಮ ದಿವಾನ ಮೇಲೆ ಹಾಲ್‌ನಲ್ಲಿ ಮಲಗಿದರೆ ರೂಮಿನಲ್ಲಿ ಅಕ್ಕ- ತಮ್ಮ. ಆ ಕಡೆ ಸಿಂಗಲ್ ಅಲ್ಲದ, ಈ ಕಡೆ ಡಬಲ್ ಕೂಡ ಅಲ್ಲದ ಇದು ಒಂದೂವರೆ ಮಂಚ ಎಂದು ವಿನೂ ತಮಾಶೆ ಮಾಡುವ ಮಂಚದಲ್ಲಿ ಅಕ್ಕ, ತಮ್ಮ ಮಲಗುತ್ತಿದ್ದರು. ರಾತ್ರಿ ನಿದ್ದೆಗಣ್ಣಲ್ಲಿ ಇವನಿಗೆ ಫುಟ್‌ಬಾಲ್ ಆಡಬೇಡ ಅಂತ ಹೇಳಮ್ಮ ಎನ್ನುತ್ತಲೇ ವಿದ್ಯಾ ತಮ್ಮನೊಂದಿಗೆ ಮಲಗುತ್ತಿದ್ದಳು.

ಆ ರಾತ್ರಿ ಎಷ್ಟೋ ಹೊತ್ತಿನವರೆಗೆ ಕಂಪ್ಯೂಟರ್‌ನಲ್ಲಿ ಏನೋ ಮಾಡುತ್ತಿದ್ದ ವಿದ್ಯಾ ಮಲಗಲು ಹೋದಾಗ ವಿನೂ ಗಾಢ ನಿದ್ದೆಯಲ್ಲಿದ್ದ. ಲೈಟ್ ಆಫ್ ಮಾಡಿದ ಮೇಲೆ ಅವನು ಹೊದಿಕೆ ಒದ್ದು ಕಾಲ ಬಳಿ ಹಾಕಿಕೊಂಡಿರೋದನ್ನು ವಿದ್ಯಾ ಗಮನಿಸಿದಳು. ಹೊದಿಕೆ ಸರಿಪಡಿಸುವಾಗ ಅಚಾನಕ್ ಅವನ ತೊಡೆ ಬಳಿ ಕೈ ತಗುಲಿತು. ಆ ನಸುಕತ್ತಲೆಯಲ್ಲಿಯೂ ಅವನ ಮೀಮಿ ಉಬ್ಬಿಕೊಂಡಿದ್ದು ಇವಳ ಬೆರಳ ಸ್ಪರ್ಶಕ್ಕೆ ಸಿಕ್ಕಿತು. ತಮ್ಮ ದೊಡ್ಡವನಾಗ್ತಿದ್ದಾನೆಂದು ತಟ್ಟನೆ ಅನ್ನಿಸಿತು. ಅರೆಕ್ಷಣ ವಿದ್ಯಾ ಗಕ್ಕನೆ ನಿಂತಳು. ಅಮ್ಮನೂ ಇದನ್ನೆಲ್ಲ ಗಮನಿಸಿರಬಹುದೇ… ಯಾಕೋ ತಮ್ಮ ಹೀಗೆ ದೊಡ್ಡವನಾಗುತ್ತಿರುವುದನ್ನು ಅರಿಯಲಾದರೂ ಅಂಕಲ್ ತಮ್ಮೊಂದಿಗೆ ಇರಬೇಕಿತ್ತು ಎನ್ನಿಸಿದ್ದೇ ವಿದ್ಯಾಗೆ ಕೊರಳುಬ್ಬಿ ಬಂತು.

ಮರುದಿನ ಅಮ್ಮನಿಗೆ ‘ಅಮ್ಮಾ… ಆ ಕಾಟ್ ಇಕ್ಕಟ್ಟಾಗುತ್ತಮ್ಮ. ಅವನು ಎಷ್ಟು ದೊಡ್ಡೋನಾಗ್ತಿದಾನೆ. ಇನ್ನೊಂದು ಸಿಂಗಲ್ ಕಾಟ್ ಇದ್ದಿದ್ದರೆ ಚೆನ್ನಾಗಿರೋದು’ ರಾಗವೆಳೆದಳು. ಅಮ್ಮನಿಗೆ ಅರ್ಥವಾಯಿತು.

‘ಇನ್ಮೇಲೆ ಅವಂಗೆ ಆ ಫುಟ್‌ಪಾತ್‌ನಲ್ಲಿ ಚೌಕಾಸಿ ಮಾಡಿ ಬನಿಯನ್, ಅಂಡರ್‌ವೇರ್ ತರ್‍ತೀಯಲ್ಲ.. ಅಂಥದು ತರಬೇಡಮ್ಮ. ಅಂಗಡಿಯಿಂದ ಒಳ್ಳೆ ಬ್ರಾಂಡ್‌ದು…’

‘ಗೊತ್ತಾಯ್ತು ಮಾರಾಯ್ತಿ. ನಾನೂ ಅವತ್ತಿನಿಂದ ಅಂದುಕೊಳ್ತಿದ್ದೆ’ ಅಮ್ಮ ನಸುನಕ್ಕಳು. ಅರೆ… ಅವತ್ತಿನಿಂದ ಅಂದ್ರೆ ಯಾವತ್ತಿನಿಂದ ಈ ಅಮ್ಮ ಅವನು ದೊಡ್ಡೋನಾಗ್ತಿರೋದನ್ನು ಗಮನಿಸಿದ್ದಾಳೆ ಹಾಗಿದ್ರೆ…

ಆ ಸಂಜೆ ವಿದ್ಯಾ ಮನೆಗೆ ಬರುವಷ್ಟರಲ್ಲಿ ಸಂಜಯ್‌ದತ್ ಜಾಹೀರಾತಿನ ಒಳ್ಳೆಯ ಬ್ರಾಂಡೆಡ್ ಬನಿಯನ್, ಅಂಡರ್‌ವೇರ್‌ನ ಕವರ್ ದಿವಾನಾ ಮೇಲೆ ಬಿದ್ದುಕೊಂಡಿತ್ತು. ವಿನೂ ಡ್ರ್ಯಾಗನ್‌ಬಾಜಿ ಕಾರ್ಟೂನ್‌ನಲ್ಲಿ ಮುಳುಗಿದ್ದ. ಅಮ್ಮ ಅಡುಗೆ ಮನೆಯಲ್ಲಿದ್ದಳು. ವಿದ್ಯಾಗೆ ಅವನು ಚಿಕ್ಕವನಿದ್ದಾಗ ಹೀಗೆ ಹೊಸತೇನನ್ನು ತಂದರೂ ರಾತ್ರಿ ಮಲಗುವಾಗ ಹಾಕಿಕೊಂಡೇ ಮಲಗುತ್ತಿದ್ದು ನೆನಪಾಯಿತು. ’ಓಹೋ… ಇವತ್ತು ರಾತ್ರಿ ಸಂಜಯ್‌ದತ್ ಫೋಸ್‌ನಲ್ಲಿ ಇವನ್ನು ಹಾಕ್ಕೊಂಡೇ ಮಲ್ಕೋತೀಯೇನೋ’ ಎಂದು ಇನ್ನೇನು ರೇಗಿಸುವುದರಲ್ಲಿದ್ದಳು. ಅಷ್ಟರಲ್ಲಿ ಅಡುಗೆ ಮನೆ ಬಾಗಿಲಿಗೆ ಬಂದು ನಿಂತಿದ್ದ ಅಮ್ಮ ಕಣ್ಣುಸನ್ನೆ ಮಾಡಿ ವಿದ್ಯಾ ಎಂದು ಗದರಿದಳು. ವಿದ್ಯಾ ನಗು ಹತ್ತಿಕೊಂಡು ಸುಮ್ಮನಾದಳು.

ಮತ್ತೆ ನಾಲ್ಕಾರು ದಿನ ಕಳೆಯುವಷ್ಟರಲ್ಲಿ ಆ ಒಂದೂವರೆ ಮಂಚ ಹೋಗಿ, ರೂಮಿನಲ್ಲಿ ಎರಡು ಸಿಂಗಲ್ ಮಂಚ ಬಂದಿತ್ತು. ಅಬ್ಬ ನಾನಿನ್ಮೇಲೆ ಇವಳ ತರ್ಲೆ ಇಲ್ದೆ ಒಳ್ಳೆ ರಾಜನ ಥರಾ ಒಬ್ನೇ ಮಲ್ಕೋತೀನಿ ಎಂದು ಎರಡು ದಿನ ವಿನೂ ಖುಷಿಯಲ್ಲಿ ಹಾರಾಡಿದ. ನಾಲ್ಕಾರು ದಿನವಾದ ನಂತರ ನಡುರಾತ್ರಿ ‘ಅಕ್ಕಾ.. ಕೆಟ್ಟ ಕನ್ಸು… ಹೆದ್ರಿಕೆ ಕಣೇ…’ ಎಂದು ಇವಳ ಪಕ್ಕ ಬಂದು ಮುದುರಿ ಮಲಗಿದ. ಬೆಳಗ್ಗೆ ವಿನೂಗೆ ಟ್ಯೂಶನ್‌ಗೆ ಎಂದು ಎಬ್ಬಿಸಲು ಬಂದ ಅಮ್ಮ ನೋಡಿ, ಮಾತಾಡದೇ ನಕ್ಕಳಷ್ಟೆ.

ವಿದ್ಯಾ ಆ ದಿನ ಹೊಟ್ಟೆನೋವು ಜಾಸ್ತಿಯಾಯ್ತು ಎಂದು ಮನೆಯಲ್ಲಿಯೇ ಇದ್ದಳು. ಅಮ್ಮ ಎರಡೆರೆದು ಬಾರಿ ಫೋನ್ ಮಾಡಿ ಇನ್ನೂ ಹೊಟ್ಟೆ ನೋಯ್ತಿದೆಯೇನೆ. ಬ್ಲೀಡಿಂಗ್ ತುಂಬಾ ಜಾಸ್ತಿಯಾಯ್ತಾ ರಾಣಿ’ ಎಂದು ವಿಚಾರಿಸಿಕೊಂಡಳು. ತೀರಾ ಅಕ್ಕರೆ ತುಂಬಿಬಂದಾಗ ಅಮ್ಮ ಹೀಗೆ ರಾಣಿ ಅಂತ ಕರೆಯೋದು. ಮಧ್ಯಾಹ್ನದ ಹೊತ್ತಿಗೆ ಮಲಗಿ ಮಲಗಿ ಬೇಸರವಾಗಿ ಇಂಟರ್‌ನೆಟ್‌ನಲ್ಲಿ ಸುಮ್ಮನೆ ಗೂಗಲ್‌ನಲ್ಲಿ ಬ್ರೌಸ್ ಮಾಡತೊಡಗಿದಳು. ನಾಲ್ಕಾರು ದಿನದ ಹಿಂದೆ ನೋಡಿದ್ದ ಲಿಂಕ್ ಒಂದು ಬೇಕೆಂದು ನೆನಪಾಗಿ ಗೂಗಲ್‌ನ ಹಿಸ್ಟರಿಗೆ ಹೋದಳು. ವಾರದ ಹಿಂದಿನ ಎಲ್ಲ ದಿನಗಳ ಸೈಟ್ ನೋಡುತಿದ್ದವಳಿಗೆ ಯಾಕೋ ಒಂದೆರಡು ಸೈಟ್ ಹೆಸರುಗಳು ಕಾರ್ಟೂನ್‌ದಿದ್ದರೂ ಸ್ವಲ್ಪ ವಿಚಿತ್ರವಾಗಿದೆ ಎನ್ನಿಸಿ ತಟ್ಟನೆ ಅನುಮಾನವೆನ್ನಿಸಿತು. ಆ ಎಲ್ಲ ಸೈಟ್‌ಅನ್ನೂ ಬೇರೆ ವಿಂಡೋದಲ್ಲಿ ಓಪನ್ ಮಾಡುತ್ತ ಹೋದಳು. ಒಂದೊಂದೂ ಪರದೆಯ ಮೇಲೆ ಹರಡಿಕೊಳ್ಳುತ್ತಿದ್ದಂತೆ ವಿದ್ಯಾ ಅವಾಕ್ಕಾದಳು. ಇದೆಲ್ಲ ವಿನೂ ಕೆಲಸವೇ ಎನ್ನೋದ್ರಲ್ಲಿ ಸಂಶಯವೇ ಉಳಿದಿರಲಿಲ್ಲ. ಪೋರ್ನ್ ಸೈಟ್‌ಗಳ ಹೆಸರು, ವಿಡಿಯೋ ಕ್ಲಿಪಿಂಗ್ ಎಲ್ಲ ಕಾರ್ಟೂನ್‌ಗಳದ್ದೇ… ಅಷ್ಟೂ ಚಿತ್ರವಿಚಿತ್ರ ಸಂಭೋಗದ ಅಶ್ಲೀಲ ಭಂಗಿಯಲ್ಲಿಯೇ ಇದ್ದದ್ದು. ವಿದ್ಯಾಗೆ ನಾಲ್ಕಾರು ಸೈಟ್ ನೋಡುವಷ್ಟರಲ್ಲಿ ವಿಪರೀತ ಹೇವರಿಕೆ ಹುಟ್ಟಿ ಎಲ್ಲ ಕ್ಲೋಸ್ ಮಾಡಿ ಕುಳಿತಳು. ಡ್ರ್ಯಾಗನ್‌ಬಾಜಿ, ನೆರುಟಾ, ಟಾಮ್ ಆಂಡ್ ಜೆರಿ ಇಂತಹ ಕಾರ್ಟೂನ್‌ಗಳಲ್ಲಿ ಮುಳುಗಿರುತ್ತಿದ್ದ ಮುಗ್ಧ ಕಣ್ಣುಗಳ, ಎಳೆ ಕೆನ್ನೆಗಳ ಇನ್ನೂ ಪುಟಾಣಿ ತಮ್ಮನಂತೆ ಇದ್ದ ಜಗಳಗಂಟ ವಿನೂ ಈ ಎಲ್ಲ ಸೈಟ್ ನೋಡ್ತಿದ್ದಾನಾ… ಯಾಕೋ ವಿದ್ಯಾಗೆ ಅರಿಗಿಸಿಕೊಳ್ಳಲೇ ಆಗದೇ ತಣ್ಣಗೆ ಕುಳಿತಳು. ಮತ್ತೆ ತುಸುಹೊತ್ತಿನ ನಂತರ ಇವನು ಎಷ್ಟು ದಿನದಿಂದ ಇದರ ಹಿಂದೆ ಬಿದ್ದಿದ್ದಾನೆ ನೋಡೋಣವೆಂದು ತಿಂಗಳ ಹಿಂದಿನ ಹಿಸ್ಟರಿ ತೆಗೆದು ನೋಡಿದಳು. ಸುಮಾರು ಒಂದು ಒಂದೂವರೆ ತಿಂಗಳಿನಿಂದ ಈ ಕಾರುಬಾರು ನಡೆಸಿದ್ದಾನೆ ಎನ್ನಿಸಿತವಳಿಗೆ. ಅಂದರೆ ಇದೆಲ್ಲ ಏನು ಎಂದು ಅವನಿಗೆ ಗೊತ್ತಾಗಿದೆಯೇ… ಅವನ ಮನಸ್ಸಿನಲ್ಲಿ ಏನು ಕಲ್ಪನೆಗಳಾದರೂ ಮೂಡಿರಬಹುದು… ಇದೆಲ್ಲ ನೋಡಿದ ಮೇಲೆ ಸ್ಕೂಲಿನ ಹುಡುಗಿಯರ ಕುರಿತು ಏನಾದ್ರೂ ಕಲ್ಪನೆಗಳು ಹಾದುಹೋಗುತ್ತಿವೆಯೇ… ಒಬ್ನೇ ನೋಡಿದಾನಾ ಅಥವಾ ಆಗೀಗ ಮನೆಗೆ ಬರುವ ಅವನ ಇನ್ನೊಂದಿಬ್ಬರು ಗೆಳೆಯರು ಸೇರಿ ನೋಡಿರಬಹುದೇ… ದೇವ್ರೇ… ಅಮ್ಮನಿಗೆ ಗೊತ್ತಾದರೆ ಎಂತಹ ಆಘಾತವಾಗಬಹುದು. ವಿದ್ಯಾಳ ಮನಸ್ಸಿನಲ್ಲಿ ಹತ್ತು ಹಲವಾರು ಪ್ರಶ್ನೆಗಳು ಸುಳಿದುಹೋಗುತ್ತಿತ್ತು. ಅಮ್ಮನಿಗೆ ಗೊತ್ತಾಗೋದು ಬೇಡ, ನಾನೇ ಇದನ್ನು ನಿಭಾಯಿಸೋದು ಒಳ್ಳೇದು ಎಂದುಕೊಂಡ ವಿದ್ಯಾ ಕಂಪ್ಯೂಟರ್ ಆಫ್ ಮಾಡಿ ಮಲಗಿದಳು.

ನಾಲ್ಕು ಗಂಟೆಗೆ ಸ್ಕೂಲ್‌ನಿಂದ ಬಂದ ವಿನೂ ‘ನೀನ್ಯಾಕೆ ಇವತ್ತು ಆಫೀಸ್‌ಗೆ ಹೋಗೇ ಇಲ್ಲ… ಓ.. ಮಹಾ ಹುಷಾರಿಲ್ವಂತೆ ಇವ್ಳಿಗೆ. ನೀನು ನೋಡಪ್ಪಾ ಬೇಕಾದಾಗ ರಜಾ ತಗೊಳ್ತೀಯ.. ನಾನಾದ್ರೆ ಬೆಳಿಗ್ಗೆ ಟ್ಯೂಶನ್, ಆಮೇಲೆ ಸ್ಕೂಲು, ಮತ್ತೆ ಹೋಂವರ್ಕ್ ಮಾಡ್ಬೇಕು… ಈ ಟೆನ್ತ್ ಮುಗಿದ್ರೆ ಸಾಕಪ್ಪಾ ಅನ್ನಿಸ್ತಿದೆ’ ಎಂದೆಲ್ಲ ತನ್ನ ಎಂದಿನ ವರಸೆಯಲ್ಲಿಯೇ ಇವಳನ್ನು ಕಿಚಾಯಿಸಿದ. ಅವನು ತಿಂಡಿಗಿಂಡಿ ಎಲ್ಲ ಮುಗಿಸುವವರೆಗೆ ವಿದ್ಯಾ ಏನೂ ಮಾತನಾಡದೇ ಸುಮ್ಮನಿದ್ದಳು. ಕಂಪ್ಯೂಟರ್ ಆನ್ ಮಾಡಿ ವಿನೂ ಬಾ ಇಲ್ಲಿ ಎಂದು ಪಕ್ಕಕ್ಕೆ ಕೂರಿಸಿಕೊಂಡಳು. ಇಂಟರ್‌ನೆಟ್‌ನ ಗೂಗಲ್‌ನಲ್ಲಿ ಹಿಸ್ಟರಿಯಲ್ಲಿರುವ ಒಂದೊಂದೇ ಸೈಟ್ ತೆರೆಯುತ್ತ ಹೋದಳು. ‘ಏನಿದು ವಿನೂ’ ವಿನೂ ಇದನ್ನು ನಿರೀಕ್ಷಿಸಿರಲಿಲ್ಲ. ಕಂಪಿಸತೊಡಗಿದ. ‘ತಪ್ಪಾಯ್ತು ಅಕ್ಕಾ’ ಎಂದು ತೊದಲಿದ. ‘ನೋಡು ವಿನೂ ನಾನು ಬರೀ ನಿನ್ನಕ್ಕ ಅಲ್ಲ, ನಿನ್ನ ಒಳ್ಳೆ ಫ್ರೆಂಡ್ ಅಲ್ವಾ ರಾಜಾ… ನಿಂಗೆ ಈ ಸೈಟ್ ಹೆಂಗೆ ಗೊತ್ತಾಯ್ತು. ಯಾರಾದ್ರೂ ಫ್ರೆಂಡ್ಸ್ ಹೇಳಿದ್ರಾ. ಒಬ್ಬನೇ ನೋಡ್ತಿದ್ಯಾ ಅಥವಾ ಅವರ್ಯಾರಾದ್ರೂ ಜೊತೆಗೆ ಇರ್ತಿದ್ರಾ ಸರಿಯಾಗಿ ಹೇಳು.. ನಾನು ಯಾರ ಹತ್ರಾನೂ ಹೇಳಲ್ಲ ರಾಜಾ. ಅಮ್ಮಂಗೂ ಹೇಳಲ್ಲ ಕಣೋ. ನಿಂಗೊತ್ತು ಅಲ್ವಾ ಈ ಅಕ್ಕ ನಿನ್ನ ಎಷ್ಟು ಪ್ರೀತಿಸ್ತಾಳೆ ಅಂತ. ಊಂ..’ ವಿದ್ಯಾ ವಿನೂ ಕೈಹಿಡಿದು ತೀರಾ ಮೆಲ್ಲಗೆ ಕೇಳಿದಳು.

‘ಒಂದಿನ ಯೂಟ್ಯೂಬ್‌ನಲ್ಲಿ ಏನೋ ಪಿಕ್ಚರ್ ಹುಡುಕ್ತಿದ್ದೆ. ಆವಾಗ ಅದೊಂದು ಏನೋ ಬಂತು. ನಂಗೆ ಮೊದ್ಲು ಗೊತ್ತಾಗ್ದೇ ಆ ಲಿಂಕ್‌ನ್ನ ಕ್ಲಿಕ್ ಮಾಡ್ದೆ. ಆಮೇಲೆ ಅದೇ. ಈ ಕೆಟ್ಟದಾಗಿರೋ ಕಾರ್ಟೂನ್ ಥರಾ ವಿಡಿಯೋ ಎಲ್ಲ ಓಪನ್ ಆಯ್ತು. ಒಂಥರಾ ನೋಡಣ ಅನ್ನಿಸಿ ಮತ್ತೆ ಕ್ಲಿಕ್ ಮಾಡ್ದೆ. ಹಂಗೇ ಸುಮಾರು ಲಿಂಕ್ ಸಿಗ್ತು. ಆಮೇಲೆ…’ ವಿನೂ ಇವಳ ತೊಡೆ ಮೇಲೆ ತಲೆ ಇಟ್ಟವನೇ ಜೋರಾಗಿ ಬಿಕ್ಕತೊಡಗಿದ.

ವಿದ್ಯಾ ನಿಧಾನವಾಗಿ  ಮೃದುವಾಗಿ ಅವನ ತಲೆಕೂದಲಲ್ಲಿ ಬೆರಳಾಡಿಸದಳು. ‘ನೋಡು ವಿನೂ ನೀನಿನ್ನೂ ಚಿಕ್ಕವನು ಇದನ್ನೆಲ್ಲ ನೋಡಿದ್ರೆ ಎಂಥ ಅರ್ಥವಾಗುತ್ತೆ ನಿಂಗೆ. ಸ್ವಲ್ಪ ದೊಡ್ಡೋನಾದ ಮೇಲೆ ಸೆಕ್ಸ್ ಅಂದ್ರೆ ಏನು ಅಂತ ಗೊತ್ತಾಗುತ್ತೆ. ಒಂದ್ಸಲ ಕುತೂಹಲ ಹುಟ್ಟಿ ನೋಡಿದೆ. ಅದು ತಪ್ಪು ಅಂತ ನಾನು ಹೇಳ್ತಿಲ್ಲ ವಿನೂ. ಆದ್ರೆ ದಿನಾ ಅದನ್ನೇ ನೋಡೋದು ಸರೀನಾ ರಾಜಾ. ನೀನೇ ಹೇಳು…’

‘ಒಂದೆರಡು ದಿನ ನೋಡಿದ ಮೇಲೆ ದಿನಾ ನೋಡಣ ಅನ್ನಿಸ್ತಾ ಇತ್ತು. ಸ್ಕೂಲಿಂದ ಬಂದ ಮೇಲೆ ನೀನು ಅಮ್ಮ ಬರೋಕಿಂತ ಮುಂಚೆ ಒಂದು ಗಂಟೆ ನೋಡ್ತಿದ್ದೆ. ಗಲೀಜು ಅನ್ನಿಸ್ತಿತ್ತು ಆದ್ರೂ ಒಂಥರಾ ನೋಡೋ ಆಸೆ ಆಗ್ತಿತ್ತು. ತಡೆಯಕ್ಕಾದೆ ನೋಡ್ತಿದ್ದೆ…’ ವಿನೂ ಇನ್ನೂ ಬಿಕ್ಕುತ್ತಲೇ ಇದ್ದ.

‘ಮೊದ್ಲು ಕಂಪ್ಯೂಟರ್ ಆಫ್ ಮಾಡಕ್ಕಾ. ಇನ್ನು ಮೇಲೆ ನೋಡಲ್ಲ. ತಪ್ಪಾಯ್ತು ಕಣೇ. ಅಮ್ಮಂಗೆ ಹೇಳ್ಬೇಡ್ವೇ. ಪ್ಲೀಸ್ ಅಕ್ಕಾ. ನಿನ್ನಾಣೆ ಅಕ್ಕಾ. ಇನ್ನು ಮೇಲೆ ನೋಡಲ್ಲ. ಅದು ಗಲೀಜು ಅಂತ ಗೊತ್ತು ಅಕ್ಕಾ…’ ವಿದ್ಯಾನ ತೊಡೆ ತೋಯುತಿತ್ತು. ಸರಿ ಎಂದು ಕಂಪ್ಯೂಟರ್ ಆಫ್ ಮಾಡಿದ ವಿದ್ಯಾ ನೋಡಿಲ್ಲಿ ಎಂದು ಅವನನ್ನು ಸರಿಯಾಗಿ ಕೂರಿಸಿ ಒಂದಿಷ್ಟು ತಿಳಿಸಿ ಹೇಳಿದಳು. ತಲೆ ಕೆಳಗೆ ಹಾಕಿ ಕುಳಿತಿದ್ದ ವಿನೂ ಎಲ್ಲದಕ್ಕೆ ಊಂಗುಟ್ಟಿದ.

ಆಮೇಲೆ ವಿದ್ಯಾಗೆ ಕಳೆದ ಸಲ ಬಿಲ್ ಜಾಸ್ತಿ ಬಂದಿದೆ ಎಂದು ಅಮ್ಮ ಹೇಳಿದ್ದು ನೆನಪಾಗಿ ಕಳೆದ ತಿಂಗಳು ಕಟ್ಟಿದ ಬಿಲ್ ಹುಡುಕಿ, ನೋಡಿದಳು. ಸಾಮಾನ್ಯವಾಗಿ ಬರುವುದಕ್ಕಿಂತ ಜಾಸ್ತಿ ಇತ್ತು. ಈ ಸಲ ಇನ್ನೂ ಜಾಸ್ತಿಯೇ ಬರಬಹುದು ಎನ್ನಿಸಿತು. ಮನೆಗೆ ಮೊದಲು ಬರುವವನು ಮೊದಲು ವಿನು ಆಗಿದ್ದರಿಂದ ಹೊರಗೆ ಪೋಸ್ಟ್ ಡಬ್ಬಿಯೊಳಗಿದ್ದನ್ನೆಲ್ಲ ಅವನೇ ಒಳಗೆ ತಂದಿಡುತ್ತಿದ್ದ.

‘ನೋಡು ಬಿಎಸ್‌ಎನ್‌ಎಲ್‌ದು ಬಿಲ್ ಬಂದರೆ ಬೇರೆ ಎತ್ತಿಡು. ಮೊದಲು ನಂಗೆ ತೋರ್ಸು ಆಯ್ತಾ’ ಎಂದು ವಿನೂಗೆ ಹೇಳಿದಳು. ಒಂದು ರಾತ್ರಿ ಅಮ್ಮ ಮಲಗಿದ ನಂತರ ‘ಅಕ್ಕಾ ಬಿಲ್ ಬಂದಿದೆಯೇ’ ಎಂದು ತನ್ನ ಪುಸ್ತಕದ ಕಪಾಟಿನಲ್ಲಿ ಮುಚ್ಚಿಟ್ಟಿದ್ದ ಬಿಲ್ ತೆಗೆದು ಅಕ್ಕನ ಕೈಗಿಡುವಾಗ ವಿನೂನ ಬೆರಳು ಸಣ್ಣಗೆ ನಡಗುತ್ತಿತ್ತು. ವಿದ್ಯಾ ಊಹಿಸಿದಂತೆಯೇ ಆಗಿತ್ತು. ಬ್ರಾಡ್‌ಬ್ಯಾಂಡ್‌ನ ಬಿಲ್ ಎಂಟು ನೂರನ್ನು ದಾಟಿತ್ತು.

‘ಸಾರಿ ಅಕ್ಕಾ’

ವಿದ್ಯಾ ಮರುಮಾತಾಡಲಿಲ್ಲ.

ಮರುದಿನ ಬಿಲ್ ತಾನೇ ತುಂಬಿ ಬಂದ ವಿದ್ಯಾ ಅಮ್ಮನಿಗೆ ಹೇಗೆ ಹೇಳೊದು ಎಂದರ್ಥವಾಗದೇ ನೋಡೋಣ ಮುಂದೆ ಎಂದುಕೊಂಡು ಸುಮ್ಮನಾದಳು.

‘ಅರೆ… ಈ ಸಲ ತಿಂಗಳು ಮುಗೀತಾ ಬಂದ್ರೂ ಬಿಎಸ್‌ಎನ್‌ಎಲ್ ಬಿಲ್ ಬಂದೇ ಇಲ್ಲವಲ್ಲೇ ವಿದ್ಯಾ. ಎಲ್ಲಾದ್ರೂ ಕಳಿಸೋದು ಮರೆತ್ರಾ ಹೇಗೆ’ ಅಮ್ಮನೊಂದು ದಿನ ರಾಗವೆಳೆದಾಗ ವಿದ್ಯಾ ಮೆತ್ತಗೆ

‘ಹೇಳೋದೇ ಮರ್ತೆ ಅಮ್ಮಾ. ಬಂದಿತ್ತು. ಅವತ್ತು ನಾನೇ ಎಕ್ಸ್‌ಚೇಂಜ್ ಹತ್ರ ಇಳ್ದು ತುಂಬಿ ಬಂದೆ. ಯಾವಾಗ್ಲೂ ಬರುತ್ತಲ್ಲ ಅಷ್ಟೇ ಬಂದಿತ್ತು. ಐದು ನೂರು ಚಿಲ್ರೆ ಏನೋ ಬಂದಿತ್ತು’ ಎಂದಳು. ಸದ್ಯ. ಸುಳ್ಳು ಸಾಕಷ್ಟು ಸರಾಗವಾಗಿ ಬಂತು ಎಂದುಕೊಂಡ ವಿದ್ಯಾ ಉಸಿರುಬಿಟ್ಟಳು. ಅಮ್ಮ ವಿದ್ಯಾನ ಬಳಿ ಬಂದು ತಲೆ ಸವರಿದಳು. ಎರಡು ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ತಾನು ಮೊದಲ ತಿಂಗಳ ಸಂಬಳ ಕೈಗಿತ್ತಾಗಲೂ ಅಮ್ಮ ಹೀಗೆ ಅಕ್ಕರೆಯಿಂದ ತಲೆ ಸವರಿರಲಿಲ್ಲ ಎನ್ನಿಸಿತವಳಿಗೆ.

‘ಇಷ್ಟು ದಿನ ಎಲ್ಲದಕ್ಕೆ ಒಬ್ಳೆ ಏಗ್ತಾ ಇದ್ದೆ. ಈಗ ನೀನು ಬಿಲ್ ತುಂಬೋ ಹಾಗಾದ್ಯಲ್ಲ ರಾಣಿ. ಅಷ್ಟೇ ಸಾಕು…’ ಅಮ್ಮನ ಕಣ್ಣಲ್ಲಿ ಸಣ್ಣಗೆ ನೀರು ಜಿನುಗಿತು. ಅಮ್ಮ ಸರಕ್ಕನೆ ಬಚ್ಚಲಿಗೆ ಹೋದಳು.

ವಿನೂ ಅಕ್ಕನ ಬಳಿ ಬಂದು ‘ಸದ್ಯ ಅಮ್ಮಂಗೆ ಗೊತ್ತಾಗ್ಲಿಲ್ಲ ಅಕ್ಕ. ಥ್ಯಾಂಕ್ಸ್ ಕಣೇ’ ಮೆತ್ತಗೆ ಉಸುರಿದ.

ನಾಲ್ಕಾರು ದಿನಗಳ ನಂತರ ಶನಿವಾರ ರಾತ್ರಿ ವಿದ್ಯಾ ಆರ್ಟಿಕಲ್ ಒಂದನ್ನು ಡೌನ್‌ಲೋಡ್ ಮಾಡುತ್ತಿದ್ದಳು. ತಾನು ಜಾಕಿಜಾನ್‌ದು ಅದ್ಯಾವುದೊ ಆಕ್ಷನ್ ಸಿನಿಮಾ ನೋಡಬೇಕು, ನೋಡಬೇಕಿದ್ರೆ ಅಕ್ಕ, ಅಮ್ಮ ಇಬ್ರೂ ಓದ್ಕೋ ಓದ್ಕೋ ಅಂತ ಕುಣೀಬೇಡಿ ಎಂದು ಬೆಳಗ್ಗೆಯಿಂದಲೇ ವರಾತ ಹಚ್ಚಿದ್ದ ವಿನೂ ಟಿವಿಯಲ್ಲಿ ಮುಳುಗಿದ್ದ. ಅಮ್ಮ ಅಡುಗೆ ಮನೆಯಲ್ಲಿ ಫ್ರಿಜ್ ಕ್ಲೀನ್ ಮಾಡುವ ಕೆಲಸದಲ್ಲಿದ್ದಳು. ಆಗೀಗ ಇವನು ಮತ್ತೆ ಯಾವುದಾದರು ಪೋರ್ನ್ ಸೈಟ್‌ಗಳನ್ನು ನೋಡುತ್ತಿದ್ದಾನಾ ಎಂದು ವಿದ್ಯಾ ಪರಿಶೀಲಿಸ್ತಾ ಇದ್ದಳು. ಆ ದಿನವೂ ವಿದ್ಯಾ ಹಾಗೆ ಪರೀಕ್ಷಿಸುವಾಗ ನಾಲ್ಕಾರು ದಿನದಿಂದ ಪೋರ್ನ್ ಸೈಟ್ ಓಪನ್ ಮಾಡಿರುವ ವಿವರ ಸಿಕ್ಕಿತು. ಆದರೆ ಇವು ಕಾರ್ಟೂನ್ ಪೋರ್ನ್ ಸೈಟ್‌ಗಳಲ್ಲ, ಅಡಲ್ಟ್ ಪೋರ್ನ್ ಸೈಟ್‌ಗಳು. ಒಂದೆರಡು ತೆರೆದು ನೋಡಿದರೆ ಮೊದಲಿಗೆ ಏನೋ ಕೊಂಚ ಉನ್ಮಾದಕತೆ ಎನ್ನಿಸಿದರೂ ಅರೆಕ್ಷಣದ ನಂತರ ವಾಕರಿಕೆ ಹುಟ್ಟಿಸಿತು. ಅಮ್ಮ ಹೇಗೂ ಇನ್ನೂ ಅರ್ಧ ಗಂಟೆಯಾದರೂ ಅಡುಗೆ ಮನೆ ಬಿಟ್ಟು ಹೊರಬರುವುದಿಲ್ಲ. ವಿನೂನ ಈಗಲೇ ಕರೆದು ಕೇಳೊದು ವಾಸಿ ಎಂದುಕೊಂಡು ಅದನ್ನೆಲ್ಲ ಮಿನಿಮೈಸ್ ಮಾಡಿ ವಿನೂ ಎಂದು ಕರೆದಳು. ‘ಸುಮ್ನಿರೇ… ನಾನು ಈ ಸಿನಿಮಾ ಫುಲ್ ನೋಡ್ಬೇಕು ಅಂತ ಆವಾಗ್ಲೇ ಹೇಳಿರಲಿಲ್ಲವಾ. ನೀನೂ ನೋಡು ಬಾರಕ್ಕಾ. ಜಾಕಿ ಜಾನ್ ಹೆಂಗೆ ಫೈಟ್ ಮಾಡ್ತಿದಾನೆ ಅಂತ…’ ವಿನೂ ಟಿವಿಯಿಂದ ಕಣ್ಣು ಕೀಳದೇ ಅಲ್ಲಿಂದಲೇ ಉತ್ತರಿಸಿದ.

‘ವಿದ್ಯಾ ಅದನ್ನ ಕ್ಲೋಸ್ ಮಾಡು. ಅವಂಗೇನೂ ಕೇಳಬೇಡ’ ಅಮ್ಮನ ಧ್ವನಿ ಕೇಳಿಸಿತು. ವಿದ್ಯಾ ತಿರುಗಿ ನೋಡಿದಳು. ಅಮ್ಮ ರೂಮಿನ ಬಾಗಿಲಲ್ಲಿ ನಿಂತಿದ್ದಳು. ತೀರಾ ದಣಿದಂತೆ ಕಾಣುತ್ತಿದ್ದ ಅಮ್ಮ ‘ಹೇಳಿದ್ನಲ್ಲ ಅದ್ನ ನೋಡ್ಬೇಡ. ಪ್ಲೀಸ್ ಕ್ಲೋಸ್ ಮಾಡು’ ಭಾರವಾದ ಧ್ವನಿಯಲ್ಲಿ ಹೇಳಿ ಮೆತ್ತಗೆ ಅಡುಗೆ ಮನೆಗೆ ಸರಿದು ಹೋದಳು. ವಿದ್ಯಾ ಏನೊಂದೂ ಗ್ರಹಿಕೆಗೆ ಸಿಗದೆ ಸುಮ್ಮನೆ ಕುಳಿತಳು. ಯಾಕೋ ಹೀಗೆ ಅಮ್ಮನ ಒಂದು ಸಹಜ, ವೈಯಕ್ತಿಕ ಕ್ಷಣವನ್ನು ತಾನು ಜಾಲಾಡಬಾರದಿತ್ತು, ಅಮ್ಮನಿಗೆ ಅಷ್ಟೂ ಸ್ವಾತಂತ್ರ್ಯವಿಲ್ಲವೇ, ತನಗೇಕೆ ಬೇಕಿತ್ತು ಛೇ ಎಂದು ವಿದ್ಯಾಗೆ ತನ್ನ ಮೇಲೆ ಸಿಟ್ಟು ಬರತೊಡಗಿತು.

ಜಾಕಿಜಾನ್ ಸಿನಿಮಾ ನೋಡಿದ ವಿನೂ ಅಕ್ಕನಿಗೆ ಅದರ ಕುರಿತು ಕೊರೆಯುತ್ತಲೇ ನಿದ್ದೆಗೆ ಜಾರಿದ. ಅವನಿಗೆ ನಿದ್ದೆ ಬಂದಿದ್ದು ಖಚಿತವಾದ ನಂತರ ವಿದ್ಯಾ ಎದ್ದು ಹಾಲ್‌ಗೆ ಬಂದಳು. ಅಮ್ಮ ಮಲಗಿದ್ದ ದಿವಾನಾ ಬಳಿ ನೆಲದ ಮೇಲೆ ಕುಳಿತಳು. ಅಮ್ಮ ಕಣ್ಣು ತೆಗೆದು ನೋಡಿದಳು. ‘ಸಾರಿ ಅಮ್ಮಾ…’

‘ಇಲ್ಲೇ ಮಲ್ಕೋ ರಾಣಿ’ ಅಮ್ಮ ಮತ್ತಷ್ಟು ಗೋಡೆಯ ಬಳಿ ಸರಿದಳು. ವಿದ್ಯಾ ಮರುಮಾತಾಡದೆ ಅಮ್ಮನ ಹೊದಿಕೆಯೊಳಗೆ ತೂರಿಕೊಂಡಳು.

ವಿನೂ ಮರುದಿನ ಬೆಳಗ್ಗೆ ಭಾನುವಾರದ ತನ್ನ ಎಂದಿನ ಕಾರ್ಟೂನ್ ಸೀರಿಯಲ್ ನೋಡುತ್ತಿದ್ದ. ಅಮ್ಮ ಬೀನ್ಸ್ ಸೋಸುತ್ತ ದಿವಾನದ ಅಂಚಿನಲ್ಲಿ ಕುಳಿತಿದ್ದಳು. ಕಾರ್ಟೂನ್ ಮಧ್ಯದಲ್ಲಿ ಏರ್‌ಟೆಲ್ ಜಾಹೀರಾತು ಬಂತು. ಜಾಹೀರಾತಿನಲ್ಲಿ ಯಾರದು ಮಾಧವನ್ ಕಾಣುತ್ತೆ… ಅದೇ ತಾನೆ ಕಚೇರಿಯಿಂದ ಸುಸ್ತಾಗಿ ಬಂದಂತೆ ಕುಳಿತಿದ್ದಾನೆ. ಅವನ ಹಿಂದೆ ನಿಂತಿದ್ದ ವಿದ್ಯಾ ಬಾಲನ್ ಅವನ ಭುಜ ಮೆತ್ತಗೆ ಅಮುಕುತ್ತ ಏನೋ ಹೇಳಿದವಳು ದುಡ್ಡು ಕಳಿಸಿದೆಯಾ ಕೇಳ್ತಾಳೆ. ಅವನು ಊಂಗುಡುತ್ತಾನೆ. ಬಚ್ಚಲಿಗೆ ಹೋಗಲೆಂದು ರೂಂನಿಂದ ಎದ್ದು ಬಂದ ವಿದ್ಯಾ ಗಕ್ಕನೆ ನಿಂತಳು. ತಟ್ಟನೆ ಅಮ್ಮನನ್ನು ನೋಡಿದಳು. ಅಮ್ಮನ ಕೈ ಬೀನ್ಸ್ ಬಿಡಿಸುತ್ತಲೇ ಇಲ್ಲ. ಸ್ತಬ್ಧವಾಗಿದೆ. ಕಣ್ಣಲ್ಲಿ ಇನ್ನೇನು ನೀರು ಧುಮ್ಮಿಕ್ಕುತ್ತದೆ ಹಾಗೆ ಕಣ್ಣಾಲಿ ತುಂಬಿದೆ. ಅಮ್ಮ ಎವೆ ಇಕ್ಕದೆ ಆ ಚಂದದ ಜಾಹೀರಾತು ಜೋಡಿಯನ್ನು ನೋಡುತ್ತಿದ್ದಾಳೆ. ಜಾಹೀರಾತಿನದೇ ಆದರೂ, ಅದು ಅವರಿಬ್ಬರು ದುಡ್ಡಿಗಾಗಿ ಮಾಡಿದ ನಟನೆಯೇ ಆಗಿದ್ದರೂ, ಒಂದು ಬೆಚ್ಚನೆಯ ಸಾಂಗತ್ಯದ, ಒಂದು ಆತ್ಯಂತಿಕ ಪ್ರೀತಿಯ, ಗಂಡ ಹೆಂಡತಿಯ ಸಾಂಸಾರಿಕ ಬದುಕಿನ ಆಪ್ತಭಾವದ ಕ್ಷಣ ಟಿವಿ ಪರದೆ ತುಂಬ ಹಚ್ಚಗೆ ಹರಡಿ ನಿಂತಿದೆ. ಅಂಥದೊಂದು ಸಾಂಸಾರಿಕ ಪ್ರೀತಿಯ ಬಾಂಧವ್ಯಕ್ಕೆ ತಾನು ಪಕ್ಕಾಗಲೇ ಇಲ್ಲ, ಅಂಥದೊಂದು ಆಪ್ತಬಂಧ ತನಗೆ ದಕ್ಕಲೇ ಇಲ್ಲ, ಅಂತಹದೊಂದು ಆಪ್ತಬಂಧಕ್ಕಾಗಿ ಎಷ್ಟೆಲ್ಲ ನಡೆದು ದಣಿದೆನಲ್ಲ, ಬಹುಶಃ ಇನ್ನೆಂದೂ ತನ್ನ ಬದುಕಿನಲ್ಲಿ ದಕ್ಕಲಾರದು ಕೂಡ ಎಂಬ ಕಹಿಸತ್ಯದ ನೋಟದಿಂದಲೇ ಅಮ್ಮ ಆ ಜಾಹೀರಾತು ನೋಡುತ್ತ ಮೈಯ ಕಣಕಣದಲ್ಲೂ ವಿಷಾದ ರಾಗವನ್ನು ಹೊಮ್ಮಿಸುತ್ತಿದ್ದಾಳೆ.

‘ಬೇರೆ ಚಾನಲ್ ಹಾಕೋ’ ವಿದ್ಯಾ ತಟ್ಟನೆ ತಮ್ಮನಿಗೆ ಗದರಿದಳು. ‘ಇರೇ… ನೋಡು ಅದೆಷ್ಟು ಚೆನ್ನಾಗಿದೆ ಅಂತ. ಅಂಥ ಏರ್‌ಟೆಲ್ ಮೊಬೈಲ್ ತಗೋ ಅಂದ್ರೆ ಈ ಅಮ್ಮ ಕೇಳಲ್ಲ. ಅದ್ರಿಂದ ಈಗ ಎಲ್ಲಿಗಾದ್ರೂ ದುಡ್ಡೂ ಕಳಿಸ್ಬೋದು ಗೊತ್ತಾ…’ ವಿನೂ ಹುಡುಗಾಟದ ರಾಗ ಎಳೆಯುತ್ತಿದ್ದಾನೆ.

‘ಅಯ್ಯೋ ರಾಮ… ನಾನ್ಯಾರಿಗೆ ದುಡ್ಡು ಕಳಿಸ್ಬೇಕು ಮಾರಾಯನೇ… ಬಾರಾಕ್ ಒಬಾಮಾಗೋ ಅಥವ ಮೆಕೇನ್‌ಗೋ ಎಲೆಕ್ಷನ್ ಖರ್ಚಿಗೆ ನಾನೇನು ದುಡ್ಡು ಕಳಿಸ್ಬೇಕೋನೋ. ನಂಗ್ಯಾಕೆ ಅಷ್ಟು ಅತ್ಯಾಧುನಿಕ ದುಬಾರಿ ಮೊಬೈಲ್ ಬೇಕು ಹೇಳು. ನವಿಲು ಕುಣೀತು ಅಂತ ಕೆಂಬೂತ ಕುಣಿಯಕ್ಕಾಗುತ್ತೇನೋ…’ ಅಮ್ಮನ ಕೈ ಮತ್ತೆ ಬೀನ್ಸ್‌ನಲ್ಲಿ ಮುಳುಗಿದೆ. ಕಣ್ಣಾಲಿಯಲ್ಲಿ ನೀರು ತುಂಬಿದ್ದೇ ಸುಳ್ಳೇನೋ ಎಂಬಂತೆ ಅಮ್ಮ ಒಂದು ಹುಸಿನಗುವನ್ನು ತುಟಿಯಲ್ಲಿ ಮೃದುವಾಗಿ ಅರಳಿಸಿದ್ದಾಳೆ. ಕಣ್ಣಂಚಿನ ನೀರ ಹನಿಗಳೆಡೆಯಲ್ಲಿಯೇ ಅಮ್ಮನ ಎಂದಿನ ತಮಾಶೆ ಮಿಂಚಿದೆ.

‘ಇಲ್ಲಪ್ಪಾ… ನೀವಿಬ್ರೂ ಓಬಿರಾಯನ ಕಾಲದ ಮೊಬೈಲ್‌ನೇ ಇಟ್ಟುಕೊಂಡಿರಿ’ ವಿನೂ ರೇಗಿದ.

ಈ ಅಮ್ಮ ಒಮ್ಮೆ ಜೋರಾಗಿ ಅತ್ತುಬಿಡಬಾರದೇ. ಯಾಕೆ ಹೀಗೆ ಎಲ್ಲ ಒಳನುಂಗುತ್ತಾಳೆ ವಿದ್ಯಾಗೆ ಕಡುಸಂಕಟವೆನ್ನಿಸಿ ಮತ್ತೆ ರೂಮಿಗೆ ಮರಳಿದಳು. ಸ್ವಲ್ಪ ಹೊತ್ತಿಗೆ ಬಚ್ಚಲಿಗೆ ಹೋಗಲೇಬೇಕೆನ್ನಿಸಿ ಎದ್ದು ಬಂದಳು. ವಿನೂ ಮತ್ತು ಅಮ್ಮ ಡಿಸ್ಕವರಿ ಚಾನಲ್‌ನಲ್ಲಿ ಮುಳುಗಿದ್ದರು. ಬಚ್ಚಲಿನಿಂದ ವಾಪಸಾದ ವಿದ್ಯಾ ಕೂಡ ಅವರೊಂದಿಗೆ ಬೆರೆತಳು.

 

(ಮುಖಪುಟ ಕಲೆ: ರೂಪಶ್ರೀ ಕಲ್ಲಿಗನೂರ್)