ರಜನಿಯ ರಂಗಭೂಮಿ 1 – ನಾಟಕದ ಟೀಚರ್ ಲಲಿತಕ್ಕ

ರಜನಿ ಗರುಡ ಮೂಲತಃ ಶಿರಸಿಯವರು. ಈಗ ಧಾರವಾಡದಲ್ಲಿ ನೆಲಸಿದ್ದಾರೆ. ನೀನಾಸಂ ರಂಗಶಿಕ್ಷಣ ಪಡೆದು ರಂಗಭೂಮಿಯ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಗೊಂಬೆಮನೆ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಸಂಗೀತ, ನೃತ್ಯ, ನಟನೆ, ನಿರ್ದೇಶನ, ರಂಗತರಬೇತಿ ಶಿಬಿರಗಳು, ಗೊಂಬೆ ತಯಾರಿಕೆ ಮತ್ತು ಪ್ರದರ್ಶನ ಹೀಗೆ ಹಲವು ಅವರ ಆಸಕ್ತಿಯ ಕ್ಷೇತ್ರಗಳು. ಹವ್ಯಾಸಿ ಬರಹಗಾರರು ಕೂಡ. ಅವರು ಬರೆವ ರಂಗಭೂಮಿಯ ನೆನಪುಗಳು ಇನ್ನು ಕೆಲ ಕಾಲ ಪ್ರತಿ ಮಂಗಳವಾರ ಕೆಂಡಸಂಪಿಗೆಯಲ್ಲಿ ಕಾಣಿಸಿಕೊಳ್ಳಲಿದೆ.

ನಾಟಕದ ಟೀಚರ್ ಲಲಿತಕ್ಕ

ನಾನಾಗ ಐದನೇ ತರಗತಿ. ನನ್ನೂರಿನ ಬಳಿಯ ಪುಟ್ಟಶಾಲೆಯಲ್ಲಿ ಓದುತ್ತಿದ್ದೆ. ಮೂರು ರೂಮಿನ, ಮೂರು ಶಿಕ್ಷಕರು ಮತ್ತು ೮೫ ಮಕ್ಕಳ ಶಾಲೆ. ಕಾಡಿನ ದಾರಿಯಲ್ಲಿ ನಾನು ನನ್ನ ಗೆಳತಿ ವನಿತಾ ಐದು ಮೈಲು ನಡೆದುಕೊಂಡು ಹೋಗಿ ಬರುತ್ತಿದ್ದೆವು. ನನ್ನ ತರಗತಿಯಲ್ಲಿ ೧೧ ಜನ ಮಕ್ಕಳು ೪ ಜನ ಹುಡುಗಿಯರು. ಉಳಿದವರು ಹುಡುಗರು. ಗೋಡೆಗೆ ತಾಗಿ ೫ನೇ ಕ್ಲಾಸಿನ ನಾವಾದರೆ, ಮಧ್ಯದ ಜಾಗದಲ್ಲಿ ಮೂರನೆಯ ತರಗತಿಯ ೧೮ ಮಕ್ಕಳು. ಲಲಿತಕ್ಕೋರು ನಮ್ಮ ತರಗತಿಯ ಶಿಕ್ಷಕಿ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲೀಷ್, ಕನ್ನಡ, ಚಿತ್ರಕಲೆ, ಸಂಗೀತ, ಕೈತೋಟ ಎಲ್ಲದನ್ನು ಕಲಿಸುವುದು ಅವರೊಬ್ಬರೆ!. ನಮಗೆ ಹೇಳಿಕೊಡುತಿದ್ದಾಗಲೇ ಮೂರನೇಯ ತರಗತಿಯವರಿಗೂ ಮಧ್ಯ ಮಧ್ಯ ಪಾಠ ಹೇಳಿಕೊಟ್ಟು ತರಗತಿಯನ್ನು ಸರಿದೂಗಿಸುತ್ತಿದ್ದರು.

ನಮ್ಮ ಅಕ್ಕೋರು ಲಲಿತಾ ಗುನಗಾ ಬಹಳ ಸುಂದರಿ. ಗುಂಗುರು ಕೂದಲಿನ ಉದ್ದ ಜಡೆ, ಬೆಳ್ಳನೆಯ ಮೈಬಣ್ಣ. ಸಾದಾ ವಾಯಿಲ್ ಸೀರೆ, ನವಿರಾಗಿ ಪರಿಮಳಿಸುತ್ತಿದ್ದ ಸೆಂಟ್ ಇವೆಲ್ಲ ನಮಗೆಲ್ಲ ಬಯಳ ಪ್ರಿಯವಾಗಿತ್ತು. ಪಟ್ಟಿ ತೋರಿಸುವಾಗ, ಪಾಠ ಹೇಳುವಾಗ ಅವರ ಟೇಬಲ್ ಸುತ್ತ ನಿಲ್ಲುವ ನಮಗೆ ಅವರ ಮೈಕೈ ತಾಗಿದರೆ ಏನೋ ಪುಳಕ! ಅವರಾಗೇ ನಮ್ಮನ್ನು ಮುಟ್ಟಿದರಂತೂ ವಿಚಿತ್ರ ಹೆಮ್ಮೆಯಾಗಿ ಪಕ್ಕದವರನ್ನು ಅಂಹಕಾರದಿಂದ ನೋಡುತ್ತಿದ್ದೆವು. ನಾನವರ ಸ್ಪೆಷಲ್ ಪ್ರೀತಿ ಪಡೆಯಲು ಖಾಯಂ ಹೋರಾಟದಲ್ಲಿರುತ್ತಿದ್ದೆ. ಮನೆಯಲ್ಲಿ ಬೆಳೆದ ಗುಲಾಬಿ ಹೂ, ಮಲ್ಲಿಗೆ ದಂಡೆ, ಪಪ್ಪಳೆ ಹಣ್ಣು, ಚಿಕ್ಕು ಹೀಗೆ ಏನಾದರೊಂದು ತಗೊಂಡು ಹೋಗಿ ಕೊಡುವುದು, ಬೆಳಿಗ್ಗೆ ಪ್ರಾರ್ಥನೆಯ ನಂತರ ಅವರಿಗೆ ಮುಟ್ಟಿಸಿ, ಕೊಟ್ಟದ್ದಕ್ಕೆ ನಕ್ಕಾಗ ಕೃತಾರ್ಥರಾದ ಭಾವನೆಯಿಂದ ಬೆಂಚಿಗೆ ಹಿಂದಿರುಗುತ್ತಿದ್ದೆ. ಮಾರನೆಯ ದಿನ ಹಣ್ಣಿನ ರುಚಿ ಹೇಗಿತ್ತು ಎಂಬುದನ್ನು ಅವರು ಬಣ್ಣಿಸಿ ಹೇಳಬೇಕೆಂಬ ಅಪೇಕ್ಷೆಯಿಂದ ಅವರ ಬಳಿ ಮತ್ತೆ ಹೋಗಿ ನಿಲ್ಲುತ್ತಿದ್ದೆ. ಅವರೂ ನಮ್ಮ ಅಪೇಕ್ಷೆಯನ್ನು ಅರಿತು ವಿಸ್ತರಿಸಿ ಹೇಳುತ್ತಿದ್ದರು.

ಇಂಥ ಲಲಿತಕ್ಕೋರು ನಮಗೆ ಟಿಪ್ಪೂ ಸುಲ್ತಾನ ನಾಟಕವನ್ನು ಜನೆವರಿ ೨೬ಕ್ಕೆ ಮಾಡಿಸಲು ತೆಗೆದುಕೊಂಡರು. ೬-೭ ಜನರ ನಾಟಕವದು. ಕೂತಲ್ಲಿ, ನಿಂತಲ್ಲಿ ಡಾನ್ಸ್ ಮಾಡುತ್ತ ಹಾಡು ಹೇಳುತ್ತಿದ್ದ ನನಗೇ ಇದ್ದೊಂದು ಸ್ತ್ರೀ ಪಾರ್ಟು ಕೊಟ್ಟರು. ಸಣಕಲು ಕಡ್ಡಿಯಂತಿದ್ದ ಶಂಕರಿ ತಿರುಮಲೆಶೆಟ್ಟಿ, ಕಪ್ಪಗೆ-ತೆಳ್ಳಗೆ ಉದ್ದನೆಯ ಅಣ್ಣಪ್ಪ, ಟಿಪ್ಪು ಸುಲ್ತಾನ, ಪರಮೇಶ್ವರ ಮೀರಸಾದಕ, ಉಳಿದವರು ಸೈನಿಕರು.

ಮೊದಲು ಎಲ್ಲರೂ ನಾಟಕದ ಮಾತನ್ನು ಬರೆದುಕೊಂಡೆವು. ಮೊದಲಿನವರ ಪಾರ್ಟಿನ ಹೆಸರು, ಅವರ ಮಾತಿನ ಪ್ರಾರಂಭದ ಶಬ್ದ ನಂತರ ಟಿಮ್ ಟಿಮ್ ಅವರ ಮಾತಿನ ಕೊನೆಯ ಶಬ್ದ ಹೀಗೆ ಬರೆಯುವುದಾಯಿತು. ಮಧ್ಯ ಪುಸ್ತಕ ಇರಿಸಿಕೊಂಡು ಸುತ್ತಲೂ ಕೂತು ಬರೆಯುವುದು, ನಂತರ ತಾಲೀಮು ಸುರು. ಅಕ್ಕೋರು ಮಾತು ಕಲಿಸಲು ಪ್ರಾರಂಭಿಸಿದರು. `ನೀನು ಅಲ್ಲಿ ನಿಲ್ಲು, ತಿರುಮಲಶೆಟ್ಟಿ ಇಲ್ಲಿ ನಿಲ್ಲಲಿ, ಟಿಪ್ಪು ಇಲ್ಲಿ ನಿಲ್ಲಲಿ ಈಗ ಮಾತು ಹೇಳಿ’ ಎಂದು ಎಲ್ಲರನ್ನು ಸಾಲಾಗಿ ನಿಲ್ಲಿಸಿ ಮಾತು ಹೇಳಿಸುತ್ತಿದ್ದರು. ತಿರುಮಲಶೆಟ್ಟಿಯಾದ ಶಂಕರಿ ನನ್ನ ಖಾಯಂ ವೈರಿ, ಒನ್ನೇ ನಂಬರ ವಿಷಯಕ್ಕೆ ಒಳಗೆ ಮುಸುಕಿನ ಗುದ್ದಾಟ ನಡೆದಿರುತ್ತಿತ್ತು. ಇಲ್ಲೂ ಅಷ್ಷೇ ಅವನಿಗಿಂತ ನಾನು ಮೊದಲು ಮಾತು ಕಲಿಯಬೇಕೆಂಬ ಹಠ ನನ್ನಲ್ಲಿ ಯಾವಾಗಲೂ ಇರುತ್ತಿತ್ತು. ನನ್ನನ್ನು ಯಾವಾಗಲೂ ಕಾಡಿಸುತ್ತಿದ್ದ ಅಣ್ಣಪ್ಪನ ಬಗ್ಗೆ ದ್ವೇಷ, ಹುಡುಗಿಯರೆಂದರೆ ಮುಖ ನೋಡಬಾರದು ಎಂದು ತಿಳಿದ ಪರಮೇಶ್ವರ ಇಂತಹ ಸವಾಲುಗಳ ಮಧ್ಯೆ ನಾನೊಬ್ಳಳೇ ಹುಡುಗಿ, ಅವರ ಜೊತೆಗೆ ಪಾರ್ಟು ಮಾಡವುದು ಸಾಮಾನ್ಯ ವಿಷಯವೇ ?

ಲಲಿತಕ್ಕೋರು ಹುರಿದುಂಬಿಸುತ್ತಿದ್ದರು ಮಾತನ್ನು ಭಾವನೆಗೆ ತಕ್ಕಂತೆ ತಿದ್ದಿ ತೀಡಿ ಹೇಳಿಸುತ್ತಿದ್ದರು. ತಿರುಮಲಶೆಟ್ಟಿ ಹೆಂಡತಿಯ ಕೈ ಹಿಡಿದು ಎಳಿಯಬೇಕು. ಟಿಪ್ಪು ಸುಲ್ತಾನ ನನ್ನ ತಲೆಯ ಮೇಲೆ ಕೈ ಇಡಬೇಕು ನಾನು ಮುಜಗರವಿಲ್ಲದೆ ಅಕ್ಕೋರು ಹೇಳಿಕೊಟ್ಟಂತೆ ಮಾಡಿಬಿಟ್ಟೆ. ಅಕ್ಕ ಪಕ್ಕ ನಿಂತವರೆಲ್ಲ ಮುಸಿ ಮುಸಿ ನಗತೊಡಗಿದರು. ಮುಂದೆ ಒಂದಕ್ಕೆ ಬಿಟ್ಟಾಗ ಇಡೀ ಶಾಲೆಯ ತುಂಬೆಲ್ಲ ದೊಡ್ಡ ಸುದ್ದಿಯಾಗಿತ್ತು. ಏಳನೆಯ ತರಗತಿಯ ಹುಡುಗಿಯರು ನನ್ನನ್ನು ಕರೆದು ಹೇಗೆ ಮಾಡಿದೆ ಎಂದು ನನ್ನಿಂದ ಮಾಡಿಸಿ ಮಾಡಿಸಿ ನಕ್ಕರು `ಅಂವಾ ಕೈ ಹಿಡ್ದಾಗ ನಾಚ್ಕೆ ಆಗ್ಲಿಲ್ಲಾ?’ ಎಂದೆಲ್ಲ ಕೇಳಿ ತಾವು ನಕ್ಕು ನನ್ನನ್ನು ಅಳಿಸಿದರು. ಹುಡುಗರ ಗುಂಪಿನಲ್ಲೂ ಇದು ದೊಡ್ಡ ಸುದ್ದಿಯಾಗಿತ್ತು. ಶಂಕರಿ ರಜನಿ ಜೋಡಿ ಎಂದು ಜೋರಾಗಿ ಕೂಗುತ್ತ ಸಿಳ್ಳೆ ಹೊಡೆಯುತ್ತಿದ್ದರು. ನಾನು ಹೇಗೋ ತರಗತಿಯಲ್ಲಿ ಬಂದು ಕುಳಿತೆ, ನನ್ನ ಅಳುಮೋರೆ ನೋಡಿ ಅಕ್ಕೋರು ಹತ್ತಿರ ಕರೆದರು. ನಾನು ದುಃಖಿಸುತ್ತ ನನ್ನ ಸಂಕಷ್ಟವನ್ನೆಲ್ಲ ಹೇಳಿಕೊಂಡೆ. `ಮತ್ತೆ ನಾನಿನ್ನು ಈ ಪಾರ್ಟ ಮಾಡಲಿಕ್ಕಿಲ್ಲ, ನನಗೆ ಹುಡುಗರು ತ್ರಾಸು ಕೊಡುತ್ತಿದ್ದಾರೆ’ ಎಂದು ನಿವೇದಿಸಿಕೊಂಡೆ. ಅವರು ಬಹಳ ಗಂಭೀರರಾದರು.

ಎಲ್ಲರನ್ನು ಕರೆದರು. ನನ್ನನ್ನು ಅಣಕಿಸಿದ್ದ ೬-೭ನೇಯ ತರಗತಿಯವರಿಗೂ ಬರ ಹೇಳಿದರು. `ನಿಮ್ಗೆ ಅಕ್ಕ ತಂಗಿ ಇಲ್ಲಾ? ನಾಟ್ಕ ಮಾಡಿದ್ ಕೂಡ್ಲೆ ಮದ್ವೇನೆಯಾ?’ ಎಂದು ತುಂಬಾ ಬೈದರು. ಮತ್ತೆ ತಾಲೀಮು ಪ್ರಾರಂಭವಾಯಿತು. ನಾನು ಬಹಳ ಜಾಗೃತೆಯಿಂದ ಹುಡುಗರ ಮೈಕೈ ತಗಲದಂತೆ ದೂರ ನಿಂತೆ. ಅವರ ಮುಖ ನೋಡಬಾರದೆಂದು ನೆಲ ನೋಡುತ್ತಲೇ ಮಾತಾಡಿದೆ. ತಿರುಮಲಶೆಟ್ಟಿ, ಮೀರ್ ಸಾಧಕನೊಂದಿಗೆ ಸೇರಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾನೆ. ಅವನ ಹೆಂಡತಿ ಜಯಂತಿಗೆ ಇದೆಲ್ಲ ತಿಳಿದು ಟಿಪ್ಪುವಿಗೆ ತಿಳಿಸಲು ಹೋಗುತ್ತಾಳೆ. ಮೀರ್‌ಸಾಧಕ ಅವರ ಮಾನಹರಣಕ್ಕೆ ಪ್ರಯತ್ನಿಸುತ್ತಾನೆ. ಕೊನೆಯಲ್ಲಿ ಟಿಪ್ಪುಸುಲ್ತಾನ ಅವಳನ್ನು ರಕ್ಷಿಸುತ್ತಾನೆ. ಜಯಂತಿ ಅವನ ಕಾಲಿಗೆರಗುತ್ತಾಳೆ.

ನಾನು ಥಟ್ಟನೆ ನಮಸ್ಕರಿಸಲು ಕುಳಿತುಕೊಂಡೆ, ನನ್ನ ಗಿಡ್ಡನೆ ಫ್ರಾಕ್ ತೊಡೆ ಮುಚ್ಚದೆ ಚಡ್ಡಿ ಕಾಣಿಸಿತು! ನನಗದು ಗೊತ್ತೇ ಇಲ್ಲ. ಎಲ್ಲರೂ ಜೋರಾಗಿ ನಗುತ್ತಿದ್ದಾರೆ! ಮತ್ತೊಮ್ಮೆ ಏನೂ ತಿಳಿಯದೆ ಎಲ್ಲರನ್ನೂ ನೋಡುತ್ತ ನಿಂತೆ. ಅಕ್ಕೋರು ನಗುತ್ತಿದ್ದರು! ಈಗಷ್ಟೇ ಇದೇ ಅಕ್ಕೋರು ಎಷ್ಟು ಪ್ರೀತಿಯವರಾಗಿದ್ದರು, ಅವರೂ ಹೀಗೆ ನಕ್ಕರೆ? ಅಳು ಮೋರೆಯಲ್ಲಿ ನನ್ನ ಆಪ್ತ ಗೆಳತಿ ಸುನಂದಳ ಬಳಿ ಬಂದು ಕೇಳಿದೆ. ನಿನ್ನ ಚಡ್ಡಿ ಕಾಣಿಸಿತು! ಎಂದಳು, ನನಗೆ ಗಾಬರಿಯೇ ಆಯ್ತು. ಹುಡುಗಿಯರ ಚಡ್ಡಿ ಕಾಣಿಸಬಾರದು ಎಂದು ತಿಳಿದಿದ್ದೇ ಈಗ. ಒಂದನೇ ತರಗತಿಯಿಂದ ನಾಲ್ಕನೆಯ ತರಗತಿಯವರೆಗೆ ನಮ್ಮ ಮನೆಯ ಪಕ್ಕದಲ್ಲೇ ಇರುವ ಒಂದೇ ಕೊಠಡಿಯ ಶಾಲೆಗೆ ಹೋಗುತ್ತಿದ್ದೆ. ಅಲ್ಲಿ ಒಬ್ಬಕೀ ಸರ್. ಅಲ್ಲಿರುವವರೆಗೆ ಚಡ್ಡಿ ಕಾಣಿಸಬಾರದೆಂದೇ ತಿಳಿದಿರಲಿಲ್ಲ. ಅಷ್ಟೇ ಅಲ್ಲಿ ಹುಡುಗ-ಹುಡುಗಿ ಮಾತಾಡಿಕೊಳ್ಳುವುದು, ಒಟ್ಟಿಗೇ ಕೂಡುವುದು – ಆಡುವುದು ಇವೆಲ್ಲ ಸಾಮಾನ್ಯ. ಈ ದೂರದ ಶಾಲೆಗೆ ಬಂದ ಮೇಲೆ ಅವೆಲ್ಲ ನಿಷಿದ್ಧವಾಗಿದ್ದವು! ಮೊದ ಮೊದಲು ನನಗೆ ಗಾಬರಿಯೇ ಆಗಿತ್ತು. ಮುಂದೆ ಪಾರ್ಟು ಮಾಡುವಾಗ ಕಷ್ಟಪಟ್ಟು ಫ್ರಾಕಿನ ನಿರಿಗೆಯನ್ನು ತೊಡೆ ಸಂದಿಯಲ್ಲಿ ಸಿಕ್ಕಿಸಿಕೊಂಡು ಮಾಡಿದೆ.

ಶಾಲೆ ಬಿಟ್ಟು ಮನೆಗೆ ಊಟಕ್ಕೆ ಹೋಗುವಾಗ ಪರಿಸ್ಥಿತಿ ಬಹಳ ಬಿಗಡಾಯಿಸಿತ್ತು. ಊಟಕ್ಕೆ ಲಲಿತಕ್ಕೋರ ಜೊತೆಗೆ ಹೋಗುತ್ತಿದ್ದ ಯಾವ ಹುಡುಗ-ಹುಡುಗಿಯರೂ ಬರಲಿಲ್ಲ. ನಮ್ಮಿಂದ ದೂರ ನಿಂತು ಗುಸು ಗುಸು ಪಿಸ ಪಿಸ ಎಂದು ಮಾತಾಡುತ್ತ ಗುಂಪಾಗಿ ಬೇರೆಯಾಗಿ ದೂರ ಹೋಗುತ್ತಿದ್ದರು. ನಾನು ತಿಳಿಯದೆ ಅಕ್ಕೋರ ಹಿಂದೆ ಒಬ್ಬಳೇ ಹೊರಟೆ. ಅಕ್ಕೋರು ಸ್ವಲ್ಪ ದೂರ ಹೋಗಿ ತಿರುಗಿ ನೋಡಿದರು. ಯಾರು ಜೊತೆಯಲ್ಲಿ ಇಲ್ಲದ್ದು ನೋಡಿ ನನ್ನೊಡನೆ ಮಾತಾಡುತ್ತ ಹೊರಟರು. ಕೆಲ ದಿನ ಹೀಗೆ ನಡೆಯಿತು. ದೇವಸ್ಥಾನದ ಬಳಿ ಕೂಡು ರಸ್ತೆಯಲ್ಲಿ ನಾನು ಕಾಯುವುದು ಅವರು ಬಂದ ನಂತರ ಒಟ್ಟಿಗೇ ಹೋಗುವುದು, ರಸ್ತೆಯ ಮೇಲೆ ಮುಳ್ಳಿನ ಗೊನೆಗಳನ್ನು ಇಡುವುದು, ಮುಂದೆ ಹೋಗಿ ಧೂಳೆಬ್ಬಿಸುವುದು, ಹೆಸರಿಡಿದು ಕೇಕೆ ಹಾಕಿ ನಗುವುದು ಸಾಮಾನ್ಯವಾಯಿತು. ನನಗೆ ಬೆಂಚಿನ ಮೇಲೆ ಜಾಗವೇ ಇರುತ್ತಿರಲಿಲ್ಲ. ಶಾಲೆಯ ಗೋಡೆಯ ಮೇಲೆ ನನ್ನ ಶಂಕರಿಯ ಹೆಸರೂ ನನ್ನ -ಅಣ್ಣಪ್ಪನ ಹೆಸರೂ ಸಾಮಾನ್ಯವಾಯಿತು. ಮನೆಯಲ್ಲಿ ಹೇಳುವುದಕ್ಕೆ ಭಯವಾಯಿತು, ಅಕ್ಕೋರೇ ನನ್ನ ಕಷ್ಟವನ್ನು ನೋಡಿ ಹೆಡ್‌ಮಾಸ್ತರ್ ಪಟಗಾರ ಸರ್‌ಗೆ ಹೇಳಿದರು. ಪಟಗಾರ ಸರ್ ನನ್ನನ್ನು ಕರೆಸಿ ಆತ್ಮೀಯವಾಗಿ ನನ್ನ ಸಂಕಷ್ಟವನ್ನು ಕೇಳಿದರು. ಸಂಜೆ ಆಟದ ಪಿರಿಯಡ್‌ನಲ್ಲಿ ೫-೬-೭ನೇಯ ತರಗತಿಯ ಮಕ್ಕಳಿಗೆ ಮೀಟಿಂಗ್ ಕರೆದರು. ಎಲ್ಲ ಮಕ್ಕಳ ಮನಮುಟ್ಟುವಂತೆ ಬಹಳ ಚೆನ್ನಾಗಿ ಮಾತಾಡಿ ಎಲ್ಲರಿಗೂ ಬುದ್ದಿ ಹೇಳಿದರು. ನನಗೆ ಪಟಗಾರ ಸರ್ ಬಗ್ಗೆ ಬಹಳ ಗೌರವವೆನಿಸಿತು. ಮಿಟಿಂಗ್ ಮುಗಿಸಿ ಎಲ್ಲ ಮಕ್ಕಳು ಮೌನವಾಗಿ ಹೊರನಡೆದರು. ಒಬ್ಬೊಬ್ಬರೇ ನನ್ನ ಜೊತೆ ಮುಗುಳು-ನಗಲು, ಮಾತಾಡಲು ಪ್ರಾರಂಭಿಸಿದರು. ಎದೆ ಹಗುರವಾಯಿತು.

ರಜನಿ ರಂಗಭೂಮಿ 2: ನಾಟಕ ಸಾಕು ಎಂದ ಅಪ್ಪ

ನಾಟಕದ ಸಿದ್ಧತೆ ಜೋರಾಗಿತ್ತು, ಗಣಪತಿ ಮಂಟಪದಿಂದ ಕಿತ್ತ ಬೇಗಡಗಳನ್ನೆಲ್ಲ ಸೇರಿಸಿ ಖಡ್ಗ, ಕಿರೀಟ ಸಿದ್ಧವಾದವು. ಮನೆಯಲ್ಲಿಯ ಹಳೆಯ ಮಣಿಸರಗಳು, ಬಳೆ ಎಲ್ಲವನ್ನು ಸರಿ ಹೊಂದಿಸಿಕೊಂಡೆ. ಅಮ್ಮನ ಸೀರೆಗಳಲ್ಲಿ ಇದ್ದದ್ದರಲ್ಲಿಯೇ ಚೆನ್ನಾಗಿರುವ ಸೀರೆಗಳನ್ನು ಮೂರು ದೃಶ್ಯಕ್ಕೆ ಮೂರು ಸೀರೆಗಳನ್ನು ಆಯ್ಕೆ ಮಾಡಿಕೊಂಡೆ. ಅದಕ್ಕಾಗಿ ಅಮ್ಮನನ್ನೊಪ್ಪಿಸುವುದು ಬಹಳ ಸಾಹಸದ್ದಾಗಿತ್ತು. ಅತ್ತೆಗೆ ಹೇಳಿ ಪೋಲಕ್ (ಬ್ಲೌಸ್) ರೆಡಿಮಾಡಿಕೊಂಡೆ. ಚವರೀಕೂದಲು ಇರಲಿಲ್ಲ, ಯಾರದ್ದೋ ಮನೆಗೆ ಹೋಗಿ ಗಂಟು ಗಂಟಿನ ಚವರೀ ಕೂದಲನ್ನು ಹೊಂದಿಸಿಕೊಂಡೆ. ಅತ್ತೆ ಆಸಕ್ತಿಯಿಂದ ನನಗೆ ಬೇಕಾದ ಬಣ್ಣ ಬೇಗಡೆಗಳನ್ನು ಜೋಡಿಸಿಟ್ಟಳು. ಹೆಡ್ ಮಾಸ್ಟರ್ ಎದುರಿಗೆ ರಂಗತಾಲೀಮು ಆಗಿ ಹೋಯ್ತು, ಅವರು ಅಕ್ಕೋರಿಗೆ ಶಹಬ್ಬಾಸ್ ಎಂದರು.

ಸಂಜೆ ನನ್ನ ಗೆಳತಿ ವನಿತಾಳ ಜೊತೆಗೆ ಸಾವಿತ್ರತ್ತಿಗೆಯ ಮನೆಗೆ ಹೋಗಿ ಅಬ್ಬಲಿಗೆ, ಮಲ್ಲಿಗೆ ಮೊಗ್ಗುಗಳನ್ನು ಮಡಿಲಿನಲ್ಲಿ ಹಿಚುಕಿ ಹಿಚುಕಿ ಕಿತ್ತುಕೊಂಡು ಬಂದೆವು, ಅಯ್ಯೋ, ಮದರಂಗಿ ! ಇನ್ನೂ ಅದೊಂದೆ ಕೊಯ್ಯಬೇಕು, ನಾಳೆ ನಾಟಕದಲ್ಲಿ ಕೈ ತಿರುಗಿಸುವಾಗ ಕೆಂಪಗೆ ಕಾಣಬೇಕಲ್ಲ! ಮತ್ತೆ ಗದ್ದೆ ಕಡೆ ಓಡಿದೆವು. ಸಾಕಷ್ಟು ಕತ್ತಲಾಗಿತ್ತು. ಓಡುವಾಗ ಕತ್ತಲಲ್ಲಿ ಆದ ತರಚಿದ ಗಾಯಗಳು ಮನೆಗೆ ಬಂದು ಕಾಲಿಗೆ ನೀರು ಹಾಕಿಕೊಂಡಾಗ ಚುರ್ ಎಂದಿತು.

ಅಂದು ಬಾಯಿಪಾಠ ಮತ್ತು ಭಜನೆ ಎರಡರಿಂದ ವಿನಾಯತಿ ದೊರೆಯಿತು. ವನಿತಾ ಹೂವಿನೊಂದಿಗೆ ಬಳ್ಳಿಪಟ್ಟೆ ದಾರದೊಂದಿಗೆ ಬಂದಳು. ಇಬ್ಬರೂ ಮೊಗ್ಗನ್ನು ಪಾಲಂಚಿ ಹೆಬ್ಬಾಗಿಲ ದೀಪದಲ್ಲಿ ಮಾಲೆ ಮಾಡುತ್ತ ಕೂತೆವು. ಅಮ್ಮನಿಗೆ ಮದರಂಗಿ ಬೀಸಿಕೊಡಲು ಹೇಳಿದ್ದೆ. ಅತ್ತೆ ಆಗಲೆ ಔಡಲೆಲೆಯನ್ನು ಮದರಂಗಿ ಕಟ್ಟಲು ತಂದಿದ್ದಳು. ಮಾಲೆ ಮಾಡಲು ಅತ್ತೆಯೂ ಬಂದು ಸೇರಿದಳು. ಊಟ ಬೇಗ ಮುಗಿಸಿ ಚಿಮಣಿ ಬೆಳಕಿನಲ್ಲಿ ಅತ್ತೆ ನನಗೆ ವನಿತಾಳಿಗೆ ಮದರಂಗಿ ಕಟ್ಟಿದಳು. ಕೈ ಆಗಲೇ ಕೆಂಪಗಾಗುತ್ತಿತ್ತು. ಇಪ್ಪತ್ತೂ ಬೆರಳಿಗಾದ ಮೇಲೆ ಇನ್ನೂ ಬೀಸಿದ ಮದರಂಗಿ ಉಳಿದದ್ದು ನೋಡಿ ಇನ್ನೆಲ್ಲೂ ಹಚ್ಚಿಕೊಳ್ಳಲು ಬರುವುದಿಲ್ಲವಲ್ಲಾ ಎಂದು ಬೇಸರ ಆಯಿತು. ಎಲೆಸುತ್ತಿ ಬಳ್ಳಿಪಟ್ಟೆಯಿಂದ ಬಿಗಿದ ಬೆರಳುಗಳನ್ನು ಆಡಿಸಲು ಊರಲು ಬಾರದೆ ಹೇಗೂ ಸರ್ಕಸ್ಸ್ ಮಾಡುತ್ತ ಕಡೆಗೆ ಹಾಸಿಗೆಯಲ್ಲಿ ಉರುಳಿದೆ. ಅಮ್ಮನಿಗೆ ಚಾದರ ಹೊದೆಸಲು ಕೂಗಿದೆ. ನಿದ್ದೆ ಬಂತೆಂದರೆ ಇವಳೆಲ್ಲೊ ಚಾದರವೆಲ್ಲೊ ಎಂದು ಗೊಣಗುತ್ತಲೇ ಹೊದಿಸಿದಳು. ತಂಗಿಯರೆಲ್ಲ ಆಗಲೇ ಮಲಗಿದ್ದರು. ವನಿತಾ ತಡಕಾಡುತ್ತಾ ದಣಪೆ ದಾಟಿ ಮನೆಗೆ ಹೋದಳು.

ನಿದ್ದೆ ಎಲ್ಲಿ ಬರಬೇಕು, ಮದರಂಗಿ ಕಟ್ಟಿದ ಬೆರಳುಗಳೆಲ್ಲ ಜೋಮು ಹಿಡಿದಂತಾಗಿತ್ತು. ನಾಟಕ-ಟಿಪ್ಪು-ಜಯಂತಿ-ತಿರುಮಲಶೆಟ್ಟಿ-ಮಾತು-ಧ್ವಜಾರೋಹಣ ಇತ್ಯಾದಿ ಇತ್ಯಾದಿ ಕನವರಿಕೆ.

ಬೆಳಿಗ್ಗೆ ಬೇಗನೆ ತಯಾರಾಗಿ ತಾರತ್ತೆಗೆ ಲಗೂ ಬಾ ಎಂದು ಹತ್ತುಸಲ ಹೇಳಿ ಶಾಲೆಗೆ ಹೊರಟೆ. ಅಮ್ಮ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದಳು.  ಅಪ್ಪ ಗಂಭೀರವಾಗಿ ಎಲೆ ಅಡಿಕೆ ಹಾಕುತ್ತಿದ್ದ. ನನ್ನ ನಾಟಕ ನೋಡಲು ಬರಲು ಹೇಳಲು ಮನಸ್ಸಾಯಿತು. ಗಂಭೀರ ಮುಖ ನೋಡಿ ಧೈರ್ಯವಾಗದೆ ಹಾಗೆ ಉಳಿದವರಿಗೆಲ್ಲ ಹೇಳಿ ವನಿತಾಳ ಜೊತೆ ಓಡಿದೆ.

ಆಗಲೇ ಧ್ವಜದ ಕಂಬದ ಅಲಂಕಾರ ಮಾಡಿ ಕಟ್ಟೆಯೊಳಗೆ ಇಡಲು ಸಿದ್ಧತೆ ಮಾಡುತ್ತಿದ್ದರು. ಎಲ್ಲರೂ ಗರಿಗರಿ ವಸ್ತ್ರ ಧರಿಸಿ ಬಂದಿದ್ದರು. ಲಲಿತಕ್ಕೋರು ಬಿಳಿಯ ಪತ್ತಲದಲ್ಲಿ ಚಂದ ಕಾಣುತ್ತಿದ್ದರು. ಯಾರೋ ಹಳದಿ ಬಣ್ಣದ ಸಿಂಹದ ಮುಖದ ಡೇರೆ ಹೂ ಕೊಟ್ಟಿದ್ದರು. ಅದನ್ನೇ ಮುಡಿದು ಮಲ್ಲಿಗೆ ಮಾಲೆ ಇಳಿಬಿಟ್ಟಿದ್ದರು. ಹುಡುಗಿಯರೆಲ್ಲ ಧ್ವಜದ ಕಟ್ಟೆಯ ಸುತ್ತಲೂ ರಂಗೋಲಿ ಹಾಕಿ ಬಣ್ಣ ತುಂಬಿದೆವು. ಮಕ್ಕಳೆಲ್ಲ ತಂದ  ಹೂವಿನಿಂದ ಅಲಂಕಾರ ಮಾಡಿದೆವು. ಮುಖ್ಯ ಅತಿಥಿಗಳಾಗಿ ಸಂಸ್ಕೃತ ವಿದ್ವಾಂಸರಾದ ಶಾಸ್ತ್ರಿಗಳು ಬರುವವರಿದ್ದರು. ಪಟಗಾರ್ ಸರ್ ಅವರಿಗಾಗಿ ಕಾಯುತ್ತಿದ್ದರು.

ಪಂಚೆಯನ್ನುಟ್ಟು ಬಿಳಿಯ ಬುಶ್‌ಶರ್ಟ್ ತೊಟ್ಟು ಸೈಕಲ್ ಹೊಡೆದುಕೊಂಡು ಶಾಸ್ತ್ರಿಗಳು ಬಂದರು. ಕರಿಯ ಟೊಪ್ಪಿಗೆ ಹಿಂದೆ ಚೂರೆ ಜುಟ್ಟು ಹೊರಬಿದ್ದಿತ್ತು. ಪಟಗಾರ ಸರ್ ಅವರನ್ನು ಸ್ವಾಗತಿಸಿ ಧ್ವಜದ ಕಟ್ಟೆಯ ಬಳಿ ಕರೆದುಕೊಂಡು ಹೋದರು. ನಾಡಗೀತೆ, ರಾಷ್ಟ್ರಗೀತೆ, ಭೋಲೋ ಭಾರತ ಮಾತಾಕಿ ಎಲ್ಲವೂ ಆದವು. ನಮ್ಮ ನಾಟಕದ ಸುದ್ದಿ ಮಕ್ಕಳ ಮೂಲಕ ಎಲ್ಲ ಸುತ್ತ-ಮುತ್ತಲ ಹಳ್ಳಿಗೂ ತಲುಪಿತ್ತು. ಬಹಳಷ್ಟು ಜನ ನೋಡಲು ಬರುತ್ತಿದ್ದರು. ಪಡ್ಡೆ ಹುಡುಗರೂ ಸಾಕಷ್ಟು ಜನ ಬಂದಿದ್ದರು. ನನಗೆ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತೆ ಸಪ್ಪಳ. ನಾಟಕದ ಮಾತಿನ ಹೊರತು ಯಾವುದೂ ತಲೆಗೆ ಹೋಗದು. ಪಟಗಾರ್ ಸರ್ ಸ್ವಲ್ಪವೇ ಮಾತಾಡಿದರು. ಶಾಸ್ತ್ರಿಗಳು ಮುದ್ದುಮಕ್ಕಳೇ ಎಂದರು, ನೀವೆ ಭಾರತದ ಭಾವಿ ಪ್ರಜೆಗಳು, ನೀವೇ ಈ ದೇಶವನ್ನು ಮುಂದೆ ತರಬೇಕು ಎಂದು ನಮಗೆ ಜವಾಬ್ದಾರಿಯನ್ನು ಕೊಟ್ಟರು. ನಂತರ ಪೆಪ್ಪರ್‌ಮೆಂಟ್ ಕೊಟ್ಟರು.  ಕಾರ್ಯಕ್ರಮ ಶುರುಮಾಡಬೇಕು ನಾನು ಅತ್ತೆಯನ್ನು ಹುಡುಕುತ್ತಿದ್ದೆ.

ಅವಳೇ ನನ್ನನ್ನು ಹುಡುಕಿಕೊಂಡು ಬಂದಳು. ಜೊತೆಯಲ್ಲಿ ಅವಳ ಎರಡು ಮೂರು ಗೆಳತಿಯರೂ ಬಂದಿದ್ದರು. ಏಳೆಂಟು ನೃತ್ಯ, ನಾಲ್ಕೈದು ಮಕ್ಕಳ ಭಾಷಣದ ನಂತರ ನಮ್ಮ ನಾಟಕ ಕಾರ್ಯಕ್ರಮದ ಮಕ್ಕಳೆಲ್ಲ ತಯಾರಿಗೆ ಹೋದರು. ಅವರವರ ಅಮ್ಮಂದಿರು, ಅಕ್ಕಂದಿರು ಬಂದು ಸೀರೆ ಉಡಿಸುವುದು, ಡ್ರೆಸ್ ಹಾಕುವುದು, ಜಡೆ ಹೆಣೆಯುವುದು, ಲಾಲಗಂಧದಿಂದ ತುಟಿ, ಕೆನ್ನೆಗೆಲ್ಲ ಬಣ್ಣ ಹಚ್ಚುವುದು, ಪೌಡರ್ ಬಳಿಯುವುದು ನಡೆದಿತ್ತು. ನನ್ನ ಮೈಗೆ ಅಮ್ಮನ ಪೊಲಕವನ್ನು ಸರಿಹೊಂದಿಸಿದರು. ಪಕ್ಕದಲ್ಲಿ ಟಿಪ್ಪುವಿಗೆ ಭಟ್ಟರ ಮಡಿಯನ್ನು ಉಡಿಸುತ್ತಿದ್ದರು. ನನ್ನ ಜಡೆಗೆ ಮಾಲೆಯನ್ನೆಲ್ಲ ಸುತ್ತಿ ಡೇರೆಹೂ, ಗುಲಾಬಿ ಹೂವನ್ನು ಮೇಲೆ ಸಿಕ್ಕಿಸಿದರು. ಸರ, ಬಳೆ ಎಲ್ಲ ಹಾಕಿದರು. ಮೇಕಪ್ ಆಯಿತು. ಇನ್ನಷ್ಟು ಹೂ, ಮಾಲೆ ಉಳಿದಿತ್ತು, ಅದನ್ನೂ ಹಾಕಲು ಕೇಳಿದೆ. ಸಾಕು ಸಾಕು ನೀನೇನು ದಿಂಡಗಿತ್ತಿಯಾ? ಎಂದು ಅತ್ತೆ ಬೈದಳು.

ಮೂರು ತರಗತಿಯ ಮುಂದಿನ ಉದ್ದನೆಯ ಜಗುಲಿಯ ಮೇಲೆಯೇ ಕಾರ್ಯಕ್ರಮ. ಹತ್ತು ಅಡಿ ಅಗಲದ ಈ ಪಟ್ಟಿಯಲ್ಲೆ ಮಕ್ಕಳೆಲ್ಲ ಕುಳಿತಿದ್ದರು.  ಸ್ಟೇಜ್ ಎಂದರೆ ಬಿಟ್ಟ ಖಾಲಿ ಜಾಗವೇ. ಅದರ ಹಿಂದೆ ಸಾಲಾಗಿ ಕುರ್ಚಿಯಲ್ಲಿ ಪಟಗಾರ್ ಸರ್, ಶಾಸ್ತ್ರಿಯವರು, ಉಳಿದ ಶಿಕ್ಷಕರು, ಊರ ಹಿರಿಯರು ಕುಳಿತಿದ್ದರು. ಅವರಿಗೆ ಬೆನ್ನು ಹಾಕಿ ನಾವು ಕಾರ್ಯಕ್ರಮ ಮಾಡಬೇಕು, ಅಕ್ಕೋರು ಕಾರ್ಯಕ್ರಮ ನಿರೂಪಿಸುತ್ತಿದ್ದರು. ಮೊದಲಿಗೆ ಸ್ವಾಗತ ಗೀತೆ, ಕೆಲವು ಜಾನಪದ ನೃತ್ಯಗಳು, ಕೆಲವು ಮಕ್ಕಳ ಭಾಷಣ ನಡೆದವು. ನಮ್ಮ ತರಗತಿಯೇ ಗ್ರೀನ್‌ರೂಮ್. ಹೊರಗೆ ಸಭ್ಯ ಸಭಿಕರು ಕುಳಿತಿದ್ದರೆ ಒಳಗೆ ಗ್ರೀನ್ ರೂಮಿನ ಗಲಾಟೆ ಬಹಳವಾಗಿತ್ತು. ಬೇಗಡೆ ಕಿರೀಟ, ಮುಡಿತುಂಬ ಹೂ, ಸರ-ಬಳೆ, ಕೆಂಪು, ಕೆಂಪು ಮೇಕಪ್ ಹೊರಲಾರದೆ ಅಮ್ಮನ ಜರಿ ಸೀರೆ ಉಟ್ಟು ನಿಂತಿದ್ದೆ. ಸೀರೆ ಸಿಕ್ಕಿಸಿ ಸಿಕ್ಕಿಸಿ ನನಗಿಂತಲು ಬಹಳ ಮುಂದೆ ಅದರ ನಿರಿಗೆ ನಿಂತಿತ್ತು.

ನಾಟಕ ಪ್ರಾರಂಭವಾಗುತ್ತದೆ ಎಂದು ಅಕ್ಕೋರು ಹೇಳಿಯಾಯಿತು. ನಾನು ಮನದಲ್ಲಿ ನಮ್ಮೂರ ಮಹಾಗಣಪತಿಯನ್ನು ನೆನೆದು ಕೈ ಮುಗಿದೆ. ಅತ್ತೆ ನನ್ನನ್ನೆಳೆದು ಬಾಗಿಲ ಬಳಿ ತಂದು ನಿಲ್ಲಿಸಿದಳು. ಮೀರಸಾಧಕ ಪೈಜಾಮು ಬಹಳ ಸಡಿಲವಾದದ್ದರಿಂದ ಅದನ್ನು ಗಟ್ಟಿನಿಲ್ಲಿಸುವ ಸಾಹಸದಲ್ಲಿದ್ದರು. ಅಕ್ಕೋರು ನನ್ನನ್ನು ಸ್ಟೇಜಿಗೆ ಕರೆದುಕೊಂಡು ಹೋಗಿ ನಿಲ್ಲಿಸಿದರು.  ಎಲ್ಲರೂ ನಿಂತು ನಾಂದಿ ಹಾಡೊಂದನ್ನು ಹಾಡಿದೆವು. ಮುಂದೆ ನಾಟಕ ಪ್ರಾರಂಭವಾಯಿತು. ತಿರುಮಲಶೆಟ್ಟಿಯ ಮಾತುಗಳು ಪ್ರಾರಂಭವಾದವು. ನಾನು ಎದುರಿಗೆ ಕುಳಿತ ಜನರನ್ನು ನೋಡಿದೆ, ಶಾಲೆಯವರು, ಪಾಲಕರು, ನನ್ನೂರಿನವರು ಎಲ್ಲರೂ ಕಂಡರು. ನಾನು ಅಮ್ಮ, ಅಪ್ಪ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರನ್ನೂ ಹುಡುಕಿದೆ. ಅಜ್ಜಿ ಮಾತ್ರ ನನ್ನ ತಂಗಿಯರೊಂದಿಗೆ ದೂರದಲ್ಲಿ ಕುಳಿತಿದ್ದಳು. ಅಂಥ ಭಯವೇನೂ ಅನಿಸಲಿಲ್ಲ. ನನ್ನ ಮಾತುಗಳನ್ನು ಅಕ್ಕೋರು ಕಲಿಸಿದಂತೆ ಆಡಿದೆ.  ಸ್ವಲ್ಪ ಹೆಚ್ಚಾಗಿಯೇ ಕೈಯನ್ನು ಬೀಸಿಬೀಸಿ ಮಾತಾಡಿದೆ. ಟಿಪ್ಪು ಸುಲ್ತಾನ ಸ್ವಲ್ಪ ಮಾತನ್ನು ತಡವರಿಸಿದ. ಹಿಂದೆ ಕುಳಿತ ಶಾಸ್ತ್ರಿಗಳು ಹೆದರಬೇಡಾ ಅಪ್ಪಣ್ಣಾ, ಆರಾಮವಾಗಿ ಮಾಡು ಎಂದು ಅಭಯವನ್ನು ನೀಡಿದರು. ಟಿಪ್ಪುವಿನ ಮುಂದೆ ಮಾತು ಹೇಳುವಾಗ ಸ್ವಲ್ಪ ಹೆಚ್ಚೇ ಭಾವುಕಳಾದೆ. ಕಣ್ಣಲ್ಲಿ ನೀರೇ ಬಂತು. ಟಿಪ್ಪು ನನ್ನ ಭುಜದ ಮೇಲೆ ಕೈ ಇಟ್ಟು ಅಭಯದಾನವನ್ನು ನೀಡಿದಾಗ ಪಡ್ಡೇ ಹುಡುಗರು ಸೀಟಿ ಹೊಡೆದರು.

ನಾಟಕ ಮುಗಿಯಿತು. ನನ್ನ ಅಮೋಘ ಅಭಿನಯವನ್ನು ಮೆಚ್ಚಿ ಶಾಸ್ತ್ರಿಗಳು ತಮ್ಮ ಪಟ್ಟೆಪಟ್ಟೆ ಅಂಡರ್‌ವೇರಿನಲ್ಲಿ ಕೈ ಹಾಕಿ ೨ರೂ ಬಹುಮಾನ ನೀಡಿದರು. ಆಮೇಲೆ ಅನೇಕರು ೧ರೂ, ೨ರೂ ನೀಡಿದರು. ಸುಮಾರು ೧೨ರೂ ಸಂಗ್ರಹವಾಯಿತು. ಅತ್ತೆ ಸಂತೋಷದಿಂದ ಅರಳಿದಳು, ಚೆನ್ನಾಗಿ ಮಾಡಿದೆ ಎಂದು ಬೆನ್ನು ಚಪ್ಪರಿಸಿದಳು. ಅಕ್ಕೋರು ಚೊಲೋ ಆಯ್ತು ಎಂದರು. ಶಾಲೆಯ ಉಳಿದ ಮಕ್ಕಳು ನನ್ನನ್ನು ಕಣ್ಣರಳಿಸಿ ನೋಡಿದರು, ನನಗೆ ನನ್ನ ಬಗ್ಗೆ ಬಹಳ ಹೆಮ್ಮೆ ಎನಿಸಿತು. ಆಗಲೇ ಜಡೆ, ಚವರೀಕೂದಲು, ಮಾಲೆ, ಸೀರೆ ಎಲ್ಲ ಹೊರೆಯಾಗಿತ್ತು. ತಾರತ್ತೆ ಎಲ್ಲ ತೆಗೆದು ಫ್ರಾಕನ್ನು ಕೊಟ್ಟಳು.

ಮನೆ ತಲುಪಿದಾಗ ಬಹಳ ಹಸಿವೆಯಾಗಿತ್ತು. ಕೈಕಾಲು ತೊಳೆದು ನಾನು ತಾರತ್ತೆ ಮಜ್ಜಿಗೆ ಕುಡಿದೆವು. ಅಮ್ಮ ಎಮ್ಮೆಗೆ ಹತ್ತಿಕಾಳನ್ನು ಮಾರಗಲದ ಒರಳಲ್ಲಿ ಮಲಗಿ-ಎದ್ದು, ಮಲಗಿ-ಎದ್ದು ಬೀಸುತ್ತಿದ್ದಳು. ಅಜ್ಜಿ-ತಂಗಿಯರು, ಅತ್ತೆ ಎಲ್ಲ ನಾಟಕದ ಬಗ್ಗೆ, ಕಾರ್ಯಕ್ರಮದ ಬಗ್ಗೆ, ನನ್ನ ಬಗ್ಗೆ ಮಾತಾಡುತ್ತಿದ್ದರು. ಅಜ್ಜ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. ಅಜ್ಜಿ ಚಿಟಿಪಿಟಿ ಹಾರಿಸಿ ದೃಷ್ಟಿ ತೆಗೆದಳು. ನಾನು ಮೇಕಪ್ ಮುಖದಲ್ಲಿಯೇ ಊರಲ್ಲಿ ಒಮ್ಮೆ ಅಡ್ಡಾಡಿ ಬಂದೆ. ಎಲ್ಲರೂ ಮಾತಾಡಿಸುವವರೆ, ಬಹಳ ಖಷಿ ಎನಿಸಿತು.

ಮನೆಗೆ ಬಂದಾಗ ಊಟಕ್ಕೆ ಹಾಕುತ್ತ ಅತ್ತೆ ಅಣ್ಣಂದಿರ ಮುಂದೆ ಅತ್ತಿಗೆಯರ ಮುಂದೆ ನಾಟಕದ ಬಗ್ಗೆ ಹೇಳುತ್ತಿದ್ದಳು, ಅಪ್ಪ ನಿರ್ಭಾವುಕವಾಗಿ ಊಟ ಮಾಡುತ್ತಿದ್ದರು. ಚಿಕ್ಕಪ್ಪ ರೇಡಿಯೋದಲ್ಲಿ ಸಿಲೋನ್ ಸ್ಟೇಷನ್ ಹುಡುಕುತ್ತಿದ್ದರು. ನಾವು ಮಕ್ಕಳೆಲ್ಲ ಗಂಡಸರ ಮುಖದಲ್ಲಾಗುವ ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದೆವು. ಅಪ್ಪ ಏನಾದರೂ ಮಾತಾಡಬಹುದು ಎಂದೆಣಿಸಿದೆ. ಊಟ ಮುಗಿಯುತ್ತ ಬಂದಾಗ ನಾಟಕ ಸಾಕು ಶಾಣ್ಯಾ ಎಷ್ಟು ಅನ್ನೋದನ್ನ ಅಭ್ಯಾಸದಲ್ಲಿ ತೋರಿಸಲಿ ಎಂದು ಅಪ್ಪ ಎದ್ದರು. ನಾನು ಅಮ್ಮನ ಮುಖ ನೋಡಿದೆ. ಅವಳು ನಿರ್ಲಿಪ್ತವಾಗಿ ಎಲ್ಲರಿಗೂ ಮಜ್ಜಿಗೆ ಬಡಿಸುತ್ತಿದ್ದಳು.

ಊಟದ ನಂತರ ರಜೆಯ ದಿನ ಮಕ್ಕಳು ಮಲಗಬೇಕು. ಆ ಆರ್ಡರಂತೆ ನಾವೆಲ್ಲ ಮಕ್ಕಳು ಮಹಡಿಗೆ ಹತ್ತಿದೆವು. ಉದ್ದಕ್ಕೆ ಕಂಬಳಿ ಹಾಸಿ ಉರುಳಿದೆವು. ನನಗೆ ಇನ್ನಿಲ್ಲದ ದಣಿವು, ಏನೋ ವಿಚಿತ್ರ ಹೆಮ್ಮೆಯಿಂದ ನಿದ್ದೆ ಹೋದೆ.

ರಜನಿ ರಂಗಭೂಮಿ 3 – ಅಮ್ಮ ಹೇಳಿದ ಶೀಲ ಪ್ರವಚನ

ಮಳೆಗಾಲದಲ್ಲಿ ನಾನು ಶಾಲೆಗೆ ಹೋಗುವಾಗ ಭಾರವಾದ ಪಾಟೀಚೀಲ, ಉದ್ದನೆಯ ಛತ್ರಿ, ಬೇಸಿಗೆ – ಮಳೆ – ಚಳಿಗಾಲಕ್ಕೆ ಹೊಂದುವಂತಹ  ಏಕರೂಪಿ ಚಪ್ಪಲಿ (ಇದ್ದರೆ), ಅಲ್ಲೇ ದಾರಿ ಬದಿಯ ನಮ್ಮ ಗದ್ದೆಯಲ್ಲಿ ಕೆಲಸ ಮಾಡುವ ಪರಮನಿಗೆ ದೋಸೆ, ಬೆಲ್ಲ, ಚಹ ಇವಿಷ್ಟು ಕೊಂಡೊಯ್ಯಲೇ ಬೇಕಾದಂತಹವುಗಳು. ಗಾಳಿ ಬೀಸಿದತ್ತ ಮಳೆಯಿಂದ ತಪ್ಪಿಸಿಕೊಳ್ಳಲು ಛತ್ರಿಯನ್ನು ತಿರುಗಿಸುತ್ತ ಹರಿಯುವ ನೀರಿನಲ್ಲಿ ಆಡುತ್ತ ಮೈಯೆಲ್ಲ ಒದ್ದೆಮಾಡಿಕೊಂಡು ಶಾಲೆಯನ್ನು ತಲುಪುತ್ತಿದ್ದೆವು. ಹಸಿಬಟ್ಟೆಯಲ್ಲೇ ಇಡೀ ದಿನ ಕಳೆದು ಸ್ವಲ್ಪ ಒಣಗುತ್ತಿದ್ದಂತೆ ಸಂಜೆ ಮತ್ತೆ ಮಳೆಯಲ್ಲಿ ನೆನೆಯುತ್ತ ಮನೆಗೆ ಬರುತ್ತಿದ್ದೆವು, ಬೆಳಿಗ್ಗೆ ದೋಸೆಯನ್ನೇ ತಿಂಡಿ ತಿಂದು ಒದ್ದೆಯಾದ ಬಟ್ಟೆಯನ್ನು ಒಣಗಿಸುತ್ತ, ಹೋಂವರ್ಕ್ ಮಾಡುತ್ತ ಕೊಟ್ಟಿಗೆಯಲ್ಲಿ ಹಾಕಿದ ಹೊಡ್ತ್ಲಿನ (ಬೆಂಕಿಗೂಡು) ಮುಂದೆ ಕೂರುತ್ತಿದ್ದೆವು. ಅಜ್ಜ ಕಥೆ ಹೇಳುತ್ತ, ಹಲಸಿನ ಬೇಳೆ ಸುಟ್ಟು ಕೊಡುತ್ತ ಅಪ್ಪ, ಚಿಕ್ಕಪ್ಪಂದಿರ ಕಂಬಳಿ ಒಣಗಿಸುತ್ತ, ನಮ್ಮ ಹೋಂವರ್ಕ್ ಗಮನಿಸುತ್ತಿದ್ದರು.

‘ಆಕಾಶವಾಣಿ ಧಾರವಾಡ ಈಗ ಸಮಯ ೫.೩೦, ಚಿತ್ರಗೀತೆಗಳು’ ಅಂತ ಅಜ್ಜನ ಪಕ್ಕದಲ್ಲಿರುವ ೩ ಬ್ಯಾಂಡಿನ ರೇಡಿಯೊ ಉಲಿಯುತ್ತಿತ್ತು.  ಸಿನೆಮಾ ಗೀತೆಗಳೆಂದರೆ ನನ್ನ ಕಿವಿ ಅರಳುತ್ತಿತ್ತು. ನಾನೂ ಧ್ವನಿ ಸೇರಿಸುತ್ತ ಮಧ್ಯೆ ಒಮ್ಮೆ ಅಲ್ಲಿಯೇ ಹೆಜ್ಜೆ ಹಾಕಿ ಕುಣಿದು ಮನೆಯಲ್ಲಿ ಮತ್ತ್ಯಾರಾದರು ಗಮನಿಸಿದ್ದರೆ? ಎಂದು ಹೆದರಿ ಮತ್ತೆ ಪುಸ್ತಕಕ್ಕೆ ಮರಳುತ್ತಿದ್ದೆ. ೩-೪ ವರ್ಷಕ್ಕೊಮ್ಮೆ ನೋಡುತ್ತಿದ್ದ ಸಿನೆಮಾ ಸುಮಾರು ೫-೬ ತಿಂಗಳವರೆಗೆ ಮಾತಾಡುವ ದೊಡ್ಡ ವಿಷಯವಾಗಿರುತ್ತಿತ್ತು. ರೇಡಿಯೊ ಸ್ಟೇಷನ್‌ನ ಧಾರವಾಡ, ಭದ್ರಾವತಿ, ಮಂಗಳೂರು, ವಿವಿಧ ಭಾರತಿ, ಸಿಲೋನ್ ಕೇಂದ್ರಗಳು ನನ್ನನ್ನು ಸಾಂಸ್ಕೃತಿಕ ಲೋಕಕ್ಕೆ ಕೊಂಡೊಯ್ದ ಕಿಟಕಿಗಳು. ಬಹಳಷ್ಟು ರೇಡಿಯೊ ನಾಟಕಗಳು ನನಗೆ ಈಗಲೂ ನೆನಪಿವೆ.

ಶ್ರಾದ್ಧ, ಮದುವೆ, ಮುಂಜಿಗಳಲ್ಲಿ ನಮ್ಮ ಊರಿನಲ್ಲಿ ಸಂಗೀತ ಕಾರ್ಯಕ್ರಮಗಳು, ಯಕ್ಷಗಾನ, ತಾಳಮದ್ದಲೆ ನಡೆಯುತ್ತಿತ್ತು. ಶಿರಸಿಯ ಜಾತ್ರೆಯಲ್ಲಿ ದಿನವೂ ಯಕ್ಷಗಾನಕ್ಕೆ ಹೋಗುತ್ತಿದ್ದೆ. ಅಜ್ಜಿ ಪರಮನಿಗೆ ಹೇಳಿ ಗಾಡಿ ಕಟ್ಟಿಸುತ್ತಿದ್ದಳು. ೭ ಗಂಟೆಗೆ ಊಟಮಾಡಿ ಕಂಬಳಿಯೊಂದಿಗೆ ಗಾಡಿ ಏರಿ ಕುಳಿತುಕೊಳ್ಳುತ್ತಿದ್ದೆವು. ೧ರೂ. ಚಾಪೆಗೆ ಮಕ್ಕಳೆಲ್ಲ ಕಂಬಳಿಹಾಸಿ ಕುಳಿತು ಕೆರೆಮನೆ ಶಂಭು ಹೆಗಡೆಯರ ಸತ್ಯಹರಿಶ್ಚಂದ್ರ, ಮಹಾಬಲ ಹೆಗಡೆಯವರ ವಿಶ್ವಾಮಿತ್ರ, ಕುಂಜಾಲು ರಾಮಕೃಷ್ಣನ ನಕ್ಷತ್ರಕ, ಭಾಸ್ಕರ ಜೋಶಿಯ ತಾರಾಮತಿ, ಚಿಟ್ಟಾಣಿಯವರ ರಾವಣ ಇವರನ್ನೆಲ್ಲ ನೋಡಿ ನಮ್ಮ ಕಣ್ಮುಂಬಿಸಿಕೊಳ್ಳುತ್ತಿದ್ದೆವು. ಸತ್ಯಹರಿಶ್ಚಂದ್ರ, ಲೋಹಿತಾಶ್ವನನ್ನು ಮಾರುವಾಗ ಗೊಳೋ ಎಂದು ಅತ್ತಿದ್ದೇ ಅತ್ತಿದ್ದು.

ನಮ್ಮೂರ ಮಹಿಳಾ ಮಂಡಲದವರು ಪ್ರತಿವರ್ಷ ಒಂದು ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡುತ್ತಿದ್ದರು. ಅತ್ತೆಯವರೆಲ್ಲ ನಾಟಕ ನೃತ್ಯ ಮಾಡುತ್ತಿದ್ದರು. ಆಗ ನಾನೂ ಮುಂಚೂಣಿಯಲ್ಲಿರುತ್ತಿದ್ದೆ. ಊರಿನವರೆಲ್ಲ ಸೇರಿ ಮಾಡುತ್ತಿದ್ದ ಕಂಪನಿ ನಾಟಕದ ಮಾದರಿಯ ಹವ್ಯಾಸಿ ನಾಟಕಗಳೂ ನಡೆಯುತ್ತಿದ್ದವು.  ಇನ್ನೂ ಕೆಲವು ಕಂಪನಿ ನಾಟಕಗಳು ಶಿರಸಿಯ ಜಾತ್ರೆಯಲ್ಲಿ ಮತ್ತು ಅಜ್ಜಿಯ ಮನೆ ಮಂಚಿಕೇರಿಗೆ ಹೋದಾಗ ನೋಡುತ್ತಿದ್ದೆ. ಅಲ್ಲಂತೂ ಮಾವಂದಿರು ನಾಟಕಕ್ಕೆ ಲಾರಿಯಲ್ಲಿ ಕರೆದುಕೊಂಡು ಹೋಗುತ್ತಿದ್ದರು.

ಮುಂದೆ ಹೈಸ್ಕೂಲಿಗೆ ಬಂದಾಗ ನನ್ನಲ್ಲಿ ಬೇರೆಯ ತರಹದ್ದೇ ಬೆಳವಣಿಗೆ. ನಿಧಾನವಾಗಿ ದೇಹ ಅರಳತೊಡಗಿತ್ತು, ನನ್ನನ್ನು ಅಲಂಕರಿಸಿಕೊಳ್ಳುವ ಆಸಕ್ತಿ ಹೆಚ್ಚುತ್ತಿತ್ತು. ಬೇರೆಯವರು ನನ್ನನ್ನು ಗಮನಿಸುತ್ತಾರೆ ಎಂದು ಗೊತ್ತಾದಾಗ ನನ್ನ ಹಾವಭಾವಗಳೆಲ್ಲ ಬೇರೆಯಾಗತೊಡಗಿತ್ತು.  ಜೊತೆಯಲ್ಲಿ ಸಿನೆಮಾ ಪ್ರಭಾವವೂ ಇತ್ತು. ಮುಂದೆ ವಾರ್ಷಿಕ ದಿನಾಚರಣೆಗೆ ಒಂದು ನೃತ್ಯ ಮಾಡುವುದಕ್ಕಷ್ಟೇ ನನ್ನ ಸಾಂಸ್ಕೃತಿಕ ಚಟುವಟಿಕೆಗಳು ಸೀಮಿತವಾದವು.

ಕಾಲೇಜಿನಲ್ಲಂತೂ ಇಲ್ಲವೇ ಇಲ್ಲ. ಎಲ್ಲಿ ಏನು ನಡೆಯುತ್ತದೆ ಎಂಬುದೇ ತಿಳಿಯುತ್ತಿರಲಿಲ್ಲ. ಸಾವಿರಾರು ವಿದ್ಯಾರ್ಥಿಗಳಲ್ಲಿ ನಾನು ಬೆರೆತುಹೋದೆ. ಅಷ್ಟು ದೂರದ ದಾರಿಯಲ್ಲಿ ನಡೆದುಹೋಗಿ ಬರುವುದೇ ಒಂದು ಸಾಹಸ. ಅಲ್ಲದೆ ಸಂಜೆ ೫ ಅಥವಾ ೫.೩೦ರ ಒಳಗೆ ಮನೆಯಲ್ಲಿರಬೇಕು ಇಲ್ಲದಿದ್ದರೆ ವಿಚಾರಣೆ, ಹೊಡೆತಗಳು ಇರುತ್ತಿದ್ದವು. ಆದರೂ ಯುವಜನೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಕಾರ್ಯಕ್ರಮಗಳಿಗೆ ಕದ್ದು ಹೋಗುತ್ತಿದ್ದೆ. ಮನೆಯಲ್ಲಿ ಆಮೇಲೆ ಹೇಗೋ ಗೊತ್ತಾಗಿ ಮೀಟಿಂಗ್ ನಡೆಸುತ್ತಿದ್ದರು.

ಒಮ್ಮೆ ಯುವಜನೋತ್ಸವಕ್ಕೆ ಕದ್ದು ಹೋಗಿ ಬಂದೆ. ಮನೆ ತಲುಪಿದಾಗ ನನಗಿಂತ ಮೊದಲೇ ಸುದ್ದಿ ಮನೆ ತಲುಪಿತ್ತು. ವಾತಾವರಣ ಬಹಳ ಬಿಸಿಯಾಗಿತ್ತು. ದೇವರ ಮನೆಯಲ್ಲಿ ಒಂದು ಕಡೆ ಅಮ್ಮ-ಅಜ್ಜಿ, ತಂಗಿಯರು ಮಕ್ಕಳೆಲ್ಲ ಸೇರಿದ್ದರೆ, ಅವರ ಎದುರಿಗೆ ಕಂಬಳಿಯ ಮೇಲೆ ಚಿಕ್ಕಪ್ಪಂದಿರು, ಅಜ್ಜ, ದೊಡ್ಡಪ್ಪ ಎಲ್ಲ ಕೂತಿದ್ದರು. ನನ್ನ ಬಗಲಲ್ಲಿ ಬ್ಯಾಗಿನ್ನೂ ಇತ್ತು, ಅದರಲ್ಲಿನ ಗೆಜ್ಜೆ ನಾನು ಹೆಜ್ಜೆ ಇಟ್ಟಾಗ ಝಣಿಸುತ್ತಿತ್ತು.  ನಾನು ರೆಡ್‌ಹ್ಯಾಂಡ್ ಸಿಕ್ಕಿಬಿದ್ದಿದ್ದೆ. ಸೋತ ಹೆಜ್ಜೆಗಳೊಂದಿಗೆ ಮಧ್ಯದ ಕಂಬವನ್ನು ಆತು ಹಿಡಿದು ಅಪರಾಧಿಯಂತೆ ನಿಂತೆ. ಅಪ್ಪನ ಮೂಗು ಕೆಂಪಗೆ ಹೊಳೆಯುತ್ತಿತ್ತು. ಏಕಾಏಕಿ ನನ್ನ ಬಳಿ ಬಂದು ‘ಡ್ಯಾನ್ಸ್ ಕುಣೀತೆ’ ಎಂದು ಛಟೀರ್ ಛಟೀರ್ ಎಂದು ಕೆನ್ನೆಗೆ, ಮೈಗೆ ಹೊಡೆದರು. ಅಜ್ಜಿ ನನ್ನ ರಕ್ಷಣೆಗೆ ಬಂದಳು, ಹಿರಿಯರೆಲ್ಲ ಸೇರಿ ನನ್ನನ್ನು ಆದಿಚುಂಚನಗಿರಿಯಲ್ಲಿರುವ ನನ್ನ ಚಿಕ್ಕಪ್ಪನ ಮನೆಯಲ್ಲಿಡಲು ನಿರ್ಧರಿಸಿದರು. ಒಬ್ಬೊಬ್ಬರೇ ಹಿರಿಯರು ನಾನು ಹೆಣ್ಣು, ಹಿರಿಮಗಳು ಎಂದು ತಾಸಿನವರೆಗೆ ಒಬ್ಬರಾದ ಮೇಲೆ ಒಬ್ಬರು ಬೋಧಿಸುತ್ತಿದ್ದರು. ಅಮ್ಮ ಹೆಣ್ಣಿನ ಶೀಲದ ಬಗ್ಗೆ ಪ್ರವಚನ ನೀಡಿದಳು.

ಕೊನೆಗೂ ನನಗೆ ಶಾಸ್ತ್ರೀಯವಾಗಿ ಸಂಗೀತ – ನೃತ್ಯ ಕಲಿಯಲು ಸಾಧ್ಯವಾಗಲೇ ಇಲ್ಲ. ಮನೆಯಲ್ಲಿ ಈ ಎಲ್ಲ ಮಾತೆತ್ತಿದರೆ ಅಪರಾಧವಾಗುತ್ತಿತ್ತು. ನವರಾತ್ರಿಯಲ್ಲಿ ದುರ್ಗೆಗೆ ಕೊಡುವ ದುಡ್ಡನ್ನು ಸಂಗ್ರಹಿಸಿ ನಾನೊಂದು ಲಿಪ್‌ಸ್ಟಿಕ್ ಕೊಂಡಿದ್ದೆ. ಯಾರು ಇಲ್ಲದಾಗ ಅದನ್ನು ಹಚ್ಚಿಕೊಂಡು ಖುಷಿ ಪಡುತ್ತಿದ್ದೆ. ಅಮ್ಮನ ಸೀರೆಯನ್ನೇ ಬೇರೆಬೇರೆ ತರಹ ಉಡುತ್ತಿದ್ದೆ. ಅಜ್ಜನ ಪಂಚೆಯನ್ನು ತಲೆಗೆ ಸುತ್ತಿಕೊಳ್ಳುತ್ತಿದ್ದೆ. ನನ್ನ ಯಾವ ಕಾರ್ಯಕ್ರಮಗಳಿಗೂ ನನ್ನ ತಂದೆ ತಾಯಿ ಜೊತೆಯಲ್ಲಿ ಬಂದು ಕುಳಿತು ನೋಡಿದ್ದಿಲ್ಲ. ಮನೆಗೆ ಬಂದ ನೆಂಟರಿಷ್ಟರ ಮುಂದೆ ಕುಣಿದು-ಹಾಡಿ ಮಾಡುತ್ತಿದ್ದೆನಾದರೂ ಅವರು ಒಮ್ಮೆಯೂ ನಿಂತು ನೋಡಿಲ್ಲ, ಪ್ರೋತ್ಸಾಹಿಸಿಲ್ಲ.

ಆದ್ದರಿಂದ ನನ್ನೂರಿನ ಸುತ್ತಲಿನ ಕಾಡೇ ನನ್ನ ನೃತ್ಯ ಸಂಗೀತಕ್ಕೆ ಶ್ರೋತೃ ನಾಟಕದ ಪ್ರೇಕ್ಷಕ. ಹೊತ್ತು ಗೊತ್ತಿಲ್ಲದೆ ಕಾಡುಹಣ್ಣು, ಕಾಡುಹೂವು, ಹಕ್ಕಿಗರಿ ಹುಡುಕಿಕೊಂಡು ತಿರುಗುತ್ತಿದ್ದೆ.  ಕಾಡಿನ ಗಾಢ ಮೌನದಲ್ಲಿ ತರಗೆಲೆಯ ಮೇಲೆ ಹೆಜ್ಜೆ ಇಟ್ಟಾಗ ಜೋರಾಗಿ ಶಬ್ದವಾಗುತ್ತಿತ್ತು. ಮತ್ತು ಉಮೇದಿನಿಂದ ನಾನು ಮತ್ತು ಜೋರಾಗಿ ಹಾಡುತ್ತಿದ್ದೆ. ತುಂಬಾ ಹೊತ್ತು ಮರವೇರಿ ಕುಳಿತು ದೂರದ ಬೆಟ್ಟಗುಡ್ಡಗಳನ್ನು ವೀಕ್ಷಿಸುತ್ತಿದ್ದೆ.  ಮಕ್ಕಳನ್ನೆಲ್ಲ ಕರೆದುಕೊಂಡು ಹೋಗಿ ಹತ್ತಿರದಲ್ಲಿದ್ದ ಅಘನಾಶಿನಿ ಹೊಳೆಯಲ್ಲಿ ಆಟವಾಡುತ್ತಿದ್ದೆ. ಆಗೆಲ್ಲ ಸಿನೆಮಾದ, ಯಕ್ಷಗಾನದ, ನಾಟಕದ ಪಾತ್ರಗಳನ್ನು ಅಭಿನಯಿಸಿ ಉಳಿದವರಿಗೆ ತೋರಿಸುತ್ತಿದ್ದೆ.

ನಾನು ಮುಂದೇನಾಗುತ್ತೇನೆ ಎನ್ನುವುದು ನನಗೆ ತಿಳಿದಿರಲಿಲ್ಲ. ನೀನೇನಾಗುತ್ತೀ ಎಂದು ಮನೆಯಲ್ಲಿ ಯಾರೂ ಕೇಳಲಿಲ್ಲ ಅಥವಾ ಇದಾಗೂ ಎಂದೂ ಯಾರೂ ಹೇಳಲಿಲ್ಲ. ಡಿಗ್ರಿ ಮುಗಿಸುವುದು ನಂತರ ಮದುವೆ ಮಾಡುವುದಷ್ಟೇ ಅವರ ಗುರಿಯಾಗಿತ್ತು. ಆದರೆ ಅವರಿಚ್ಛೆಯಂತೆ ನಾನೇನನ್ನೂ ಮಾಡಲಿಲ್ಲ.

ಇಂದು ಹೀಗೆ ಬರೆಯುವಾಗ ನನಗೆ ನಾನೇ ಸ್ಪಷ್ಟವಾದಂತೆ ಎನಿಸುತ್ತದೆ. ನಾನು ಕ್ರಮಿಸುವ ದಾರಿ ಇನ್ನೂ ದೂರವಿದೆ. ಆದರೆ ನನ್ನನ್ನು ಪ್ರಭಾವಿಸಿದ ಆ ಎಲ್ಲವುಗಳ ಬಗ್ಗೆ ಪ್ರೀತಿ ಉಕ್ಕುತ್ತದೆ. ಮತ್ತೆ ಅಲ್ಲಿ ನನ್ನೂರಿಗೆ, ನನ್ನ ಮನೆಗೆ ಹೋಗಬೇಕೆನಿಸುತ್ತದೆ. ಕಾಲ ಬದಲಾಗಿದೆ.  ತುಂಬಿದ ಮನೆಯಲ್ಲಿ ಮುದುಕರಾದ ಅಪ್ಪ-ಅಮ್ಮ ಇಬ್ಬರೇ ಇರುತ್ತಾರೆ. ಕೊಟ್ಟಿಗೆಯೆಲ್ಲ ಖಾಲಿ ಖಾಲಿ. ಸುತ್ತಲಿನ ಕಾಡು ಅಷ್ಟೆ. ಮನೆಯಲ್ಲಿ ಟಿ.ವಿ.ಇದೆ. ನನ್ನ ಮುಖ ಟಿವಿಯಲ್ಲಿ ಬಂದಾಗ ನೆಂಟರಿಷ್ಟರೆಲ್ಲ ಫೋನ್ ಮಾಡಿ ಹೇಳುತ್ತಾರೆ. ಅಪ್ಪ, ಯಾವ ನಾಟಕ ಮಾಡುತ್ತಾ ಇದ್ದೆ? ಎನ್ನುತ್ತಾರೆ.

ರಜನಿ ರಂಗಭೂಮಿ 4: ಕೊಳಲು, ಸುಬ್ಬಣ್ಣ ಮತ್ತು ಅಕ್ಷರ

ರಾತ್ರಿ ರೂಮಿನಲ್ಲಿ ಅಥವಾ ಮಧ್ಯ ಯಾವಾಗಲಾದರೂ ಬಿಡುವು ಸಿಕ್ಕಾಗ ಒಬ್ಬರಿಗೊಬ್ಬರು ಆತ್ಮೀಯವಾಗಿ ಹರಟುತ್ತಿದ್ದೆವು. ಕುಟುಂಬದ ಸಮಸ್ಯೆಗಳು, ಪ್ರೀತಿ ಪ್ರಣಯದ ವಿಷಯಗಳು, ಕನಸುಗಳು, ಅಂತರಾಳದ ಮಾತುಗಳು ಹೊರಬೀಳುತ್ತಿದ್ದವು. ಹೀಗೆ ಕೇಳುತ್ತ ಕೇಳುತ್ತ ನಾನು ನನ್ನದೇ ಜಗತ್ತಿನಿಂದ ಹೊರ ಬಂದು ಹೊರಗಿನ ಜಗತ್ತನ್ನು ನೋಡಲು ಪ್ರಾರಂಭಿಸಿದೆ. ಕವಿಗಳು, ಸಾಹಿತಿಗಳು,ವಿಮರ್ಶಕರು, ನಾಟಕ ನಿರ್ದೇಶಕರು, ಸಂಗೀತಗಾರರು, ಕಲಾವಿದರು ಹೀಗೆ ಹತ್ತು ಹಲವು ಜನ ಬಂದು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ನಾನು ಕಥೆ-ಕಾದಂಬರಿಗಳನ್ನು ಬಿಟ್ಟು ವಿಮರ್ಶೆ, ನಾಟಕ, ಇನ್ನಿತರ ಸಾಹಿತ್ಯ ಪ್ರಕಾರಗಳನ್ನು ಓದಲು ಪ್ರಾರಂಭಿಸಿದೆ.

ನನ್ನ ಒಬ್ಬ ಗೆಳೆಯನಿದ್ದ, ನೀನಾಸಂನವನೇ. ಸಂಗೀತ, ಯಕ್ಷಗಾನ ಬಲ್ಲವನಾತ. ಕೊಳಲು ಬಾರಿಸುತ್ತಿದ್ದ. ಸಹಜವಾಗಿ ನಾನವನೊಡನೆ ಆತ್ಮೀಯವಾಗಿದ್ದೆ. ಆತ ಕೊಳಲನೂದುವುದು, ತನ್ನ ಸಂಕಷ್ಟಗಳನ್ನು ತೋಡಿಕೊಳ್ಳುವುದು ಅವನ ಎದುರಿನಲ್ಲಿ ಕೂತು ಅವನ ಗೋಳನ್ನು ಆಲಿಸುವುದು, ನನ್ನ ಕೆಲಸವಾಗಿತ್ತು. ನೀನು ನನ್ನನ್ನು ಪ್ರೀತಿಸುತ್ತೀಯಾ ಎಂದು ಕೇಳಿದಾಗ ಹೂಂ ಎಂದು ಬಿಟ್ಟೆ. ಕೆಲವೇ ದಿನಗಳಲ್ಲಿ ಕೊಳಲು ಕೇಳುವ ಕೆಲಸ ಬಹಳ ಬೋರ್ ಎನ್ನಿಸಹತ್ತಿತು. ಆವಾಗಲೇ ಎಲ್ಲ ಕಡೆಗೆ ಸುದ್ದಿಯಾಗಿ ನನ್ನ ಮನೆಗೂ ಗೊತ್ತಾಗಿ ಸುದ್ದಿಯಲ್ಲೇ ಮದುವೆ ಮಾಡಿ ಮುಗಿಸಿಬಿಟ್ಟರು. ನಾನು ಗಾಬರಿಯಾಗಿಬಿಟ್ಟೆ! ಅಪ್ಪ ಬಂದು ನಾಟಕದವರು ಬೇಡವೆಂದು ಬಿಟ್ಟ. ನಾನು ಮದುವೆಯ ಬಗ್ಗೆ ವಿಚಾರ ಮಾಡಿರಲೇ ಇಲ್ಲ. ಮುಂದೆ ಕಲಿಯುವುದು, ನನ್ನ ಭವಿಷ್ಯದ ಬಗ್ಗೆ, ನನ್ನ ಕನಸುಗಳ ಬಗ್ಗೆ ಆತನಲ್ಲಿ ಹೇಳಿದೆ. ಅಲ್ಲಿ ನನಗೆ ಉತ್ತೇಜದಾಯಕವಾದ ಉತ್ತರಗಳೇ ಇಲ್ಲ. ಈ ಸಂಬಂಧ ಅಲ್ಲಿಗೇ ಮುಗಿದು ಹೋಯಿತು. ಆದರೆ ಇದರಿಂದ ನಾನು ಒಳ್ಳೆಯ ಪಾಠ ಕಲಿತೆ.

ನೀನು ನನ್ನ ಜೊತೆ ಚಹಾ ಕುಡಿಯುತ್ತೀಯಾ? ಎಂದು ಕೇಳುವಷ್ಟು ಸುಲಭವಾಗಿ ನೀನು ನನ್ನನ್ನು ಪ್ರೀತಿಸುತ್ತೀಯಾ? ಎಂದು ಹುಡುಗರು ಸುಲಭವಾಗಿ ಕೇಳುತ್ತಿದ್ದರು. ಸ್ವಲ್ಪ ಒಡನಾಡಿದರೆ ಸಾಕು ಇದು ಸಾಮಾನ್ಯವಾಗಿತ್ತು. ಅಲ್ಲಿ ಕಲಿಯಲು ಬರುವವರ ವಯಸ್ಸೇ ಹಾಗೆ ! ಸಂಗಾತಿಯನ್ನು ಹುಡುಕುವುದು ಆಯ್ಕೆ ಮಾಡುವುದು. ಆದರೆ ಇದರಲ್ಲಿ ಸಕ್ಸಸ್ ಆಗುವುದು ಬಹಳ ಕಡಿಮೆ. ಅಮ್ಮ ಆಗಲೇ ಎರಡು ಮೂರು ಪತ್ರ ಬರೆದಿದ್ದಳು. ಮಾವನ ಮಗ ನನಗಾಗಿ ಕಾಯುತ್ತಿದ್ದ.

ನಮಗೆ ಕೆ.ವಿ. ಸುಬ್ಬಣ್ಣ ತರಗತಿಗಳನ್ನು ತೆಗೆದುಕೊಂಡಿದ್ದಿಲ್ಲ. ಆದರೆ ಅವರೊಂದಿಗೆ ಮುಕ್ತ ಸಂವಾದಗಳಿರುತ್ತಿದ್ದವು. ದಪ್ಪ ಕನ್ನಡಕ, ತೀಕ್ಷ್ಣನೋಟ, ಬಾಯಿ ತುಂಬ ಎಲೆ-ಅಡಿಕೆ, ಮಾತು ಕಡಿಮೆ, ಕಪ್ಪನೆಯ ಉದ್ದದ ಫರ್ ಕೋಟನ್ನು ಹಾಕಿಕೊಂಡು ಏನೋ ನಿಗೂಢವಾದದ್ದನ್ನು ಅದರಲ್ಲಿ ಬಚ್ಚಿಟ್ಟುಕೊಂಡಂತೆ, ಎಲೆ-ಅಡಿಕೆ ಚೀಲದೊಂದಿಗೆ ಓಡಾಡುತ್ತಿದ್ದ. ಸುಬ್ಬಣ್ಣ ಎಂದರೆ ಅದೊಂದು ಓಡಾಡುವ ಎನ್‌ಸೈಕ್ಲೋಪಿಡಿಯಾ! ನಮಗೆಲ್ಲ ಕನ್‌ಫೆಕ್ಷನ್ ಬಾಕ್ಸ್ ಇದ್ದಂತೆ. ನಮ್ಮ ಕೆಲಸಗಳು, ತೊಂದರೆಗಳು, ಪರಿಹಾರಗಳು, ಸೋಲು-ಗೆಲುವು, ದುಃಖ ಎಲ್ಲವನ್ನೂ ಅವರ ಸಮೀಪ ಕೂತು ಸಣ್ಣನೆ ದನಿಯಲ್ಲಿ ಹೇಳಿಕೊಳ್ಳುತ್ತಿದ್ದೆವು. ಅವರು ಅದನ್ನು ನಿಧಾನ ಕೇಳಿಸಿಕೊಂಡು ನಮ್ಮ ತಪ್ಪುಗಳನ್ನು ತೋರಿಸಿ, ಮೆಲ್ಲಗೆ ಗದರಿ, ಪರಿಹಾರ ಹೇಳಿ, ಆತ್ಮೀಯತೆಯಿಂದ ಸಮಾಧಾನ ಹೇಳುತ್ತಿದ್ದರು. ಪರಿಸರ ಪ್ರಜ್ಞೆ, ರಾಜಕೀಯ ಪ್ರಜ್ಞೆ, ಸಾಮಾಜಿಕ ಕಳಕಳಿ, ಶಿಸ್ತು, ನಾಯಕತ್ವದ ಗುಣಗಳೆಲ್ಲ ನಮಗೆ ಅವರಿಂದಲೇ ಬಂದಿದ್ದು. ಮುಂದಿನ ನನ್ನ ಕೆಲಸಗಳಿಗೆ ಅವರೇ ಮಾದರಿಯಾಗಿದ್ದರು. ಅವರ ಪ್ರಭಾವದಿಂದ ನನಗಿನ್ನೂ ಹೊರಬರಲೇ ಸಾಧ್ಯವಾಗುತ್ತಿಲ್ಲ. ಯಾರೇ ಬರಲಿ ಆರಾಮಾ ಬನ್ನಿ, ಕಾಫಿ ಕುಡೀರಿ ಎಂದು ಮೆಸ್ಸ್‌ಗೆ ಕರೆದುಕೊಂಡು ಹೋಗಿ, ಅವರು ಯಾವ ಯಾವ ಪ್ರದೇಶದವರೆಂದು ತಿಳಿದು, ಅಲ್ಲಿಯ ಮಳೆ, ಬೆಳೆ, ಉದ್ಯೋಗಗಳನ್ನು ವಿಚಾರಿಸುತ್ತಿದ್ದರು. ಅವರ ಎಲೆ-ಅಡಿಕೆ ಚೀಲ ಅಕ್ಷಯ ಪಾತ್ರೆ ಇದ್ದಂತೆ. ಬೇಕಾದಷ್ಟನ್ನು ಕವಳ ಹಾಕಬಹುದಿತ್ತು. ಆದರೂ ನಾವು ಅದರಿಂದ ಎಲೆ-ಅಡಿಕೆ ಕದಿಯುತ್ತಿದ್ದೆವು! ಯಾಕೆ ಗೊತ್ತಿಲ್ಲ.

ಕೆ.ವಿ. ಅಕ್ಷರ ನಮಗೆ ತರಗತಿಯನ್ನು ತೆಗೆದುಕೊಳ್ಳುತ್ತಿದ್ದರು. ವೆಸ್ಟರ್ನ್ ಥಿಯರಿ, ನಾಟಕ ನಿರ್ದೇಶನ, ಇನ್ನು ಕೆಲವು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಇವರ ಬಾಯಲ್ಲೂ ಇಡೀ ದಿನ ಎಲೆ-ಅಡಿಕೆ. ತುಂಟ ಕಣ್ಣುಗಳು, ಯಾವಾಗಲೂ ಕೆಲಸದಲ್ಲಿ ತೊಡಗಿರುತ್ತಿದ್ದರು. ಸುಬ್ಬಣ್ಣನ ಪ್ರಾಕ್ಟಿಕಲ್ ರೂಪ ಎಂದುಕೊಳ್ಳುತ್ತಿದ್ದೆವು. ನಮ್ಮ ಪ್ರಾಚಾರ್ಯರು ಸಿ. ಆರ್. ಜಂಬೆಗೆ ‘ಟೈಗರ್’ ಎಂದೇ ಕರೆಯುತ್ತಿದ್ದೆವು.  ಯಾವಾಗಲೂ ನಮ್ಮ ಮೇಲೆ ತೀವ್ರ ನಿಗಾ ಶಿಸ್ತು, ಅಭ್ಯಾಸ, ಕೆಲಸ, ಇವುಗಳ ಹೊರತು ನಾವು ಬೇರೆ ವಿಷಯಕ್ಕೆ ತಲೆ ಹಾಕಲೇ ಬಿಡುತ್ತಿರಲಿಲ್ಲ.

ಚಲನಚಿತ್ರೋತ್ಸವ, ನಾಟಕೋತ್ಸವ, ಕಾವ್ಯ ಕಮ್ಮಟ, ಸಾಹಿತ್ಯ ಕಮ್ಮಟ, ತರಬೇತಿ ಶಿಬಿರ ಮುಂತಾದವು ಹತ್ತು ತಿಂಗಳೊಳಗೆ ನಡೆಯುತ್ತಿದ್ದವು. ಇಷ್ಟೆಲ್ಲ ಆದರೂ ನೀನಾಸಂ ಹುಡುಗಿಯರು ತಮ್ಮ ಡ್ರೆಸ್, ಫೇರ್ ಅಂಡ್ ಲವ್ಲಿ, ಸಿಂಗಾರ, ಪ್ರೀತಿ ಪ್ರಣಯ ಬಿಟ್ಟು ಹೊರಬರುತ್ತಲೇ ಇರಲಿಲ್ಲ. ಈಗಲೂ ಬೆರಳೆಣಿಕೆಯಷ್ಟೇ ಹುಡುಗಿಯರು ರಂಗಭೂಮಿಯಲ್ಲಿದ್ದಾರೆ. ವೈಚಾರಿಕತೆಗೆ ಮತ್ತು ಸೃಜನಶೀಲತೆಗೆ ತೆರೆದುಕೊಂಡವರು ಕಡಿಮೆ. ಹೀಗಾಗಿ ನನಗೆ ಹುಡುಗರೇ ಇಷ್ಟವಾಗುತ್ತಿದ್ದರು. ಮುಕ್ತವಾಗಿ ಮಾತಾಡಬಹುದಿತ್ತು. ನಮ್ಮ ವಿಚಾರಗಳನ್ನು ಹಂಚಿಕೊಳ್ಳಬಹುದಿತ್ತು. ಸಾಹಿತ್ಯ, ರಂಗಭೂಮಿ, ರಾಜಕೀಯ ಎಂದು ಚರ್ಚಿಸಬಹುದಿತ್ತು.

ಹತ್ತು ತಿಂಗಳ ಕೋರ್ಸ್ ಮುಗಿದೇ ಹೋಯಿತು. ಆಗ ನಾನು ಮನೆಯ ಬಗ್ಗೆ ವಿಚಾರ ಮಾಡಲು ಪ್ರಾರಂಭಿಸಿದೆ. ಆದರೆ ಮುಂದಿನ ವರ್ಷ ತಿರುಗಾಟಕ್ಕೆ ಬರಲು ಒಪ್ಪಿದ್ದೆ. ಎರಡು ತಿಂಗಳನ್ನು ಮನೆಯಲ್ಲೇ ಕಳೆಯಬೇಕಾಗಿತ್ತು. ಅಪ್ಪ-ಚಿಕ್ಕಪ್ಪ ಎಲ್ಲ ಬೇರೆಯಾಗಿದ್ದರು. ನಾನು ಮನೆಯ ಮುಂಬಾಗಿಲನ್ನು ಬಿಟ್ಟು, ಕೊಟ್ಟಿಗೆಗೆ ಹೋಗುತ್ತಿದ್ದ ಬಾಗಿಲಿನಿಂದ ಪ್ರವೇಶಿಸಿದೆ. ರಾತ್ರಿ ಊಟಕ್ಕೆ ಉದ್ದನೆಯ ಪಂಕ್ತಿ ಇರಲಿಲ್ಲ. ಮಧ್ಯ ಅಡಿಗೆ ಇಟ್ಟುಕೊಂಡು ಸುತ್ತಲೂ ಕೂತುಕೊಳ್ಳುತ್ತಿದ್ದೆವು. ನಾನು ಅಪ್ಪನ ಪಕ್ಕ ಮೊದಲ ಬಾರಿ ಕೂತು ಊಟ ಮಾಡಿದೆ. ಅಜ್ಜ – ಅಜ್ಜಿ ಚಿಕ್ಕಪ್ಪನ ಜೊತೆಗಿರುತ್ತಿದ್ದರು. ನಮಗೆಲ್ಲ ವಿಚಿತ್ರವಾಗಿತ್ತು! ಈ ಹೊಸ ಸಂಸಾರಕ್ಕೆ ಹೊಂದಿಕೊಳ್ಳಲು ಕಷ್ಟವಾಗಿತ್ತು. ನಾನು ರಜ ಮುಗಿಸಿ ತಿರುಗಾಟಕ್ಕೆ ಹೊರಟೆ.

ಬಹಳಷ್ಟು ನಮ್ಮ ಬ್ಯಾಚಿನವರೇ ಹುಡುಗರಿದ್ದರು. ಹಳೆಯ ಬ್ಯಾಚಿನವರು ಎರಡು ಮೂರು ಜನ ಮಾತ್ರ ಇದ್ದರು. ನಾವು ಐದು ಹುಡುಗಿಯರು, ೧೭ ಹುಡುಗರ ತಂಡ. ಮೊದಲೇ ಅಕ್ಷರರ ನಾಟಕ ಸಾಹೇಬರು ಬರುತ್ತಾರೆ ಪ್ರಾರಂಭವಾಯಿತು. ಅದನ್ನು ಓದುವಾಗ ನಮಗ್ಯಾರಿಗೂ ಸಂತೋಷವಾಗಲಿಲ್ಲ. ಅದೊಂದು ತರಹ ಕಾಲೇಜು ಹುಡುಗರ ನಾಟಕದಂತಿತ್ತು. ಅದರಲ್ಲಿ ನನಗೆ ಕಾವೇರಮ್ಮ ಪಾತ್ರ. ಆದರೆ ಅದನ್ನು ನಾನು ಇನ್ನೊಬ್ಬಳು ನಟಿಯೊಂದಿಗೆ ಹಂಚಿಕೊಳ್ಳಬೇಕಾಗಿತ್ತು. ಇನ್ನೊಂದು ನಾಟಕ ಜಂಬೆಯವರ ನಿರ್ದೇಶನದಲ್ಲಿ ಗಿರೀಶ್ ಕಾರ್ನಾಡರ ತುಘಲಕ್ ನಾಟಕ. ಅದರಲ್ಲಿ ಮುಖ್ಯ ಭೂಮಿಕೆಯಲ್ಲಿದ್ದೆ. ನನ್ನ ನಡಿಗೆ, ಧ್ವನಿ ಮೇಲೆ ಬಹಳ ಕೆಲಸ ಮಾಡಿಕೊಂಡೆ. ಆದರೂ ಆ ಪಾತ್ರ ಹಿಡಿತಕ್ಕೆ ಸಿಗುತ್ತಿರಲಿಲ್ಲ. ಬಹಳ ಕಷ್ಟಪಡುತ್ತಿದ್ದೆ, ಬೈಸಿಕೊಳ್ಳುತ್ತಿದ್ದೆ. ಮುಂದೆ ಜರ್ಮನಿಯ ನಿರ್ದೇಶಕ ಬ್ರೆಕ್ಟ್‌ನ ಶಿಷ್ಯ ಫ್ರಿಟ್ಸ್‌ಬೆನ್‌ವಿಟ್ಸ್ ಬಂದರು.  ಸೇಜುವಾನ್ ನಗರದ ಸಾದ್ವಿ ನಾಟಕ ತೆಗೆದುಕೊಂಡರು. ನನಗೆ ಮುಖ್ಯ ಪಾತ್ರ. ನನ್ನನ್ನು ತಿದ್ದಿ, ತೀಡಿ ನಟಿ ಮಾಡಿದರು. ಕೊನೆಯ ನಾಟಕ ಕೆ. ಜಿ. ಕೃಷ್ಣಮೂರ್ತಿ ನಿರ್ದೇಶನದ ಧಾಂ ಧೂಂ ಸುಂಟರಗಾಳಿ. ಶೇಕ್ಸಪಿಯರ್‍ನ ಟೆಂಪೆಸ್ ನಾಟಕವನ್ನು ವೈದೇಹಿ ಮಕ್ಕಳ ನಾಟಕವನ್ನಾಗಿ ಮಾಡಿದ್ದರು. ಈ ನಾಟಕದಲ್ಲಿ ಕಿನ್ನರಿ ಮಾಡುತ್ತಿದ್ದೆ.

ತಿರುಗಾಟ ಪ್ರದರ್ಶನ ಇಡೀ ಕರ್ನಾಟಕದ ತುಂಬ ನಡೆಯುತ್ತಿತ್ತು. ದಿನವೂ ಹೊಸ ಊರು, ಹೊಸ ರಂಗಸ್ಥಳ, ಹೊಸ ಪ್ರೇಕ್ಷಕರು. ದಿನವೂ ಸಾಮಾನು ಇಳಿಸುವುದು, ಹತ್ತಿಸುವುದು, ಸಾಗಿಸುವುದು, ಪ್ಯಾಕ್ ಮಾಡುವುದು. ನಾವು ಇದರಲ್ಲಿ ಯಂತ್ರಗಳಂತೆ ಆಗಿ ಬಿಡುತ್ತಿದ್ದೆವು.

ನಾಟಕದ ಹುಡುಗಿಯರ ಬಗ್ಗೆ ಯಾರಿಗೂ ಒಳ್ಳೆಯ ಅಭಿಪ್ರಾಯಗಳಿರುತ್ತಿರಲಿಲ್ಲ. ನಮ್ಮನ್ನು ನೋಡುವ ದೃಷ್ಟಿಗಳೇ ಸರಿ ಇರುತ್ತಿರಲಿಲ್ಲ. ನನಗೆ ಬಹಳ ಹೆದರಿಕೆಯಾಗುತ್ತಿತ್ತು. ಪರಸ್ಥಳಗಳಲ್ಲಿ ಎಲ್ಲದಕ್ಕೂ ನಾವು ಹುಡುಗರ ಮೇಲೆ ಅವಲಂಬಿತರಾಗುತ್ತಿದ್ದೆವು. ಎಲ್ಲಿಯೂ ರಂಗಸ್ಥಳ ಸರಿಯಾಗಿ ಇರುತ್ತಿರಲಿಲ್ಲ. ಬಟ್ಟೆ ಬದಲಾಯಿಸುವುದು, ಮೂತ್ರ ವಿಸರ್ಜಿಸಲು ಹೋಗುವುದಕ್ಕೂ ಹುಡುಗರನ್ನು ಕಾವಲು ನಿಲ್ಲಿಸಿಕೊಳ್ಳುತ್ತಿದ್ದೆವು. ರಾತ್ರಿ ನಮ್ಮ ಬಿಡದಿಯಲ್ಲಿ ಹುಡುಗಿಯರ ರೂಮಿನ ಬಳಿ ಹುಡುಗರು ಹಾಗೂ ಟೀಂ ಮ್ಯಾನೇಜರ್ ಕಾವಲು ಮಲಗುತ್ತಿದ್ದರು. ಹೀಗಾಗಿ ನಮಗೆ ವೈಯಕ್ತಿಕ ಬದುಕೇ ಇರುತ್ತಿರಲಿಲ್ಲ.

ಅಷ್ಟೇ ನಾವು ಮಜವನ್ನು ಮಾಡುತ್ತಿದ್ದೆವು. ಪ್ರತಿ ಊರಿನ ವಿಶೇಷಗಳನ್ನು ನೋಡಲು ಹೋಗುತ್ತಿದ್ದೆವು. ತಂಡದಲ್ಲಿರುವವರ ಊರಾದರೆ ಅವರ ಮನೆಗೆ ಹೋಗುತ್ತಿದ್ದೆವು. ಸಿಟ್ಟು, ಜಗಳ, ಅಸೂಯೆ, ಅನಾರೋಗ್ಯ ಸಾಮಾನ್ಯವಾಗಿತ್ತು. ಅನೇಕ ಹುಡುಗರು ಸಿಗರೇಟು, ಮದ್ಯದ ದಾಸರಾಗಿದ್ದರು. ತುಘಲಕ್ ಪಾತ್ರ ನಿಭಾಯಿಸುತ್ತಿದ್ದ ಪ್ರಕಾಶ ಗರುಡನ ಜೊತೆ ನಾನು ಸ್ನೇಹದಿಂದಿದ್ದೆ. ಆದರೆ ಪ್ರೀತಿ-ಪ್ರೇಮ, ಮದುವೆ ಇವುಗಳನ್ನು ವಿಚಾರ ಮಾಡಿರಲಿಲ್ಲ. ನಾನು ಮುಂದೆ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ದೆಹಲಿಗೆ ಹೋಗುವ ಸಿದ್ಧತೆಯಲ್ಲಿದ್ದೆ. ತಿರುಗಾಟ ಮುಗಿದ ನಂತರ ನಾವಿಬ್ಬರೂ ಸೇರಿ ಕೆಲಸ ಮಾಡುವುದು ಎಂದುಕೊಂಡಿದ್ದೆವು.

ರಜನಿ ರಂಗಭೂಮಿ 5: ಭಾವುಕತೆ, ಮುಂಗೋಪ ಮತ್ತು ಕನಸು

ನಾನು ಶಾಲೆಯನ್ನು ಬಿಟ್ಟ ನಂತರ ಜನರು ಬಗೆಬಗೆಯಾಗಿ ಮಾತಾಡಿಕೊಂಡರು. ಕೆಲವರು ಅನುಕಂಪದಿಂದ ನೋಡಿದರೆ, ಕೆಲವರು ಮುಂದೇನು ಮಾಡುತ್ತಾಳೆ ಎಂಬ ಕುತೂಹಲದಿಂದ ನೋಡಿದರು. ಕೆಲವು ಶಾಲೆಯಿಂದ ಆಹ್ವಾನ ಬಂತು. ಒಂದಿಬ್ಬರು ಹಿರಿಯರು, ‘ಜಾಗ ಕೊಡುತ್ತೇವೆ ಶಾಲೆ ಪ್ರಾರಂಭಿಸು’ ಎಂದರು. ಆದರೆ ನಾನು ಮೌನವಾಗಿದ್ದೆ. ನನಗೊಮ್ಮೆ ಎಲ್ಲವನ್ನೂ ಅವಲೋಕಿಸಿಕೊಳ್ಳವುದು ಬೇಕಿತ್ತು. ರಂಗಭೂಮಿಯಿಂದ ಬಂದು ಶಿಕ್ಷಣದಲ್ಲಿ ಕೆಲಸ ಮಾಡುತ್ತಿದ್ದ ನಾನು ನನ್ನ ರಕ್ಷಣೆ, ಪೋಷಣೆ ಯಾವುದರಿಂದ ಆಗಬಹುದು ಎಂದು ವಿಚಾರ ಮಾಡಿರಲಿಲ್ಲ. ಎಲ್ಲದಕ್ಕೂ ಹಣ-ಅಂತಸ್ತು, ಅಧಿಕಾರ, ಜಾತಿ ಇವುಗಳೇ ನಿರ್ಣಾಯಕವಾದುದು ಎನ್ನುವುದು ನನಗೆ ತಿಳಿಯಲಿಲ್ಲ. ನನಗೆ, ಪ್ರಕಾಶನಿಗೆ ಯಾವ ಗಾಡ್‌ಫಾದರ್‌ಗಳೂ ಇಲ್ಲ. ನಾವೇನಿದ್ದರೂ ಸ್ವಂತ ಪರಿಶ್ರಮದಿಂದಲೇ ಬರಬೇಕು. ಧಾರವಾಡಕ್ಕೆ ನಾನು ಖಾಲಿ ಕೈಯಿಂದ ಬಂದಿದ್ದೆ. ಮತ್ತೊಮ್ಮೆ ಖಾಲಿಯಾಗಿ ನಿಂತಂತೆನಿಸಿತು. ನಡೆದದ್ದೆಲ್ಲ ನೆನಸಿಕೊಂಡರೆ ಮಕ್ಕಳಾಟದಂತೆನಿಸುತ್ತದೆ. ಮಕ್ಕಳು ಆಟಿಕೆಗಾಗಿ ಹಠ ಮಾಡುವುದಿಲ್ಲವೇ? ಹಾಗೆ… ತನಗೇ ಆಟಿಕೆ ಬೇಕೆಂದು ಹಠ ಮಾಡುವ ಮಗುವಿಗೆ ಆಟಿಕೆ ಕೊಟ್ಟರೆ ಆ ಕ್ಷಣಕ್ಕಾದರೂ ಹಠ ನಿಲ್ಲಿಸಬಹುದಲ್ಲವೇ?

ಶಾಲೆ ಬಿಟ್ಟ ತಕ್ಷಣ ಸುಬ್ಬಣ್ಣನ ಬಳಿ ಹೋಗಿದ್ದೆ. ಉದ್ವಿಗ್ನಳಾಗಿದ್ದ ನನ್ನನ್ನು ಬಹಳ ಸಮಾಧಾನಪಡಿಸಿದರು. ‘ನಿನಗೆ ಯಾವಾಗ ಏನು ಬೇಕಾದರೂ ಕೇಳು’ ಎಂದಿದ್ದರು. ಮುಂದೆ ಎರಡು ತಿಂಗಳಲ್ಲಿ ಸುಬ್ಬಣ್ಣ ನಾನು ಕೇಳುವ ಮೊದಲೇ ಹೋಗಿಬಿಟ್ಟರು. ಪ್ರಸನ್ನರ ಬಳಿಯೂ ಹೋಗಿದ್ದೆ. ‘ಮುಖ ನೋಡಿದಾಕ್ಷಣ ಮನುಷ್ಯರನ್ನು ಅಳೆಯುವ ಸ್ವಭಾವ ನಾಟಕದವರಿಗಿರಬೇಕು ರಜನಿ’ ಎಂದರು. ನಾನೀಗ ಎಲ್ಲ ಮರೆತುಬಿಟ್ಟಿದ್ದೇನೆ. ಆ ಶಾಲೆಯ ಮುದ್ದು ಮಕ್ಕಳು ಅದರ ಸಿಹಿ ನೆನಪು ಮಾತ್ರ ನನ್ನ ಬಳಿ ಇದೆ.

ಈ ಅವಧಿಯಲ್ಲಿ ನಾನು ಅನೇಕ ಶಾಲೆಗಳಲ್ಲಿ ನಾಟಕ ಮಾಡಿಸಿದೆ. ಅಲ್ಲದೆ ಅನೇಕ ಎನ್.ಜಿ.ಓ ಗಳಿಗೆ ತರಬೇತಿ ನೀಡಿದೆ. ನಾನೂ ಅನೇಕ ನಾಟಕಗಳಲ್ಲಿ ಪಾತ್ರ ಮಾಡಿ, ವಸ್ತ್ರವಿನ್ಯಾಸವನ್ನೂ ಮಾಡಿದೆ. ದೆಹಲಿ, ಲಖನೋ, ಜೈಪುರ, ಉದಯಪುರ, ಮುಂಬಯಿ, ಮೈಸೂರು, ಬೆಂಗಳೂರುಗಳಲ್ಲೆಲ್ಲ ಗೊಂಬೆಯಾಟ ಪ್ರದರ್ಶನ ಮತ್ತು ನಾಟಕದ ಪ್ರದರ್ಶನ ನೀಡಿದೆವು. ನನ್ನ ಮಗಳೂ ಜೊತೆಯಲ್ಲೇ ಬರುತ್ತಿದ್ದಳು. ಇವುಗಳ ಮಧ್ಯದಲ್ಲಿ ಶಾಂತಿನಾಥ ದೇಸಾಯಿಯವರ ಕಾದಂಬರಿ ಓಣಂಮೋ ಟೆಲಿಫಿಲ್ಮನಲ್ಲೂ ಮಾಡಿದೆ.

ಮುಂದೆ ಎರಡು ವರ್ಷ ಮನೆಯಲ್ಲಿಯ ಹಿರಿಯರ ಆರೋಗ್ಯ, ಸರಿಯಾದ ಕೆಲಸವಿಲ್ಲದೆ ಹಣದ ತೊಂದರೆ ಇತ್ಯಾದಿ ಇತ್ಯಾದಿ. ನನ್ನ ಮಗಳನ್ನು ನನಗೆ ಯಾವ ಶಾಲೆಗೂ ಸೇರಿಸಲು ಮನಸ್ಸಾಗಲಿಲ್ಲ. ಯಾವ ಶಾಲೆಯೂ ಸರಿ ಎನಿಸುತ್ತಿರಲಿಲ್ಲ. ಮನೆಯಲ್ಲಿ ಎಲ್ಲ ಹೇಳಿಕೊಡುತ್ತಿದ್ದೆ. ಆದರೆ ಅವಳಿಗೆ ಆಡಲು ಮಕ್ಕಳು ಬೇಕಾಗಿತ್ತು. ಕೊನೆಗೂ ಸೆಂಟ್ರಲ್ ಸ್ಕೂಲಿಗೆ ಸೇರಿಸಿದೆ. ಆಗಲೇ ನಮಗೆ ಗ್ರ್ಯಾಂಟ್ ಕೊಡುವ ಕುರಿತು ಮಾತುಕತೆ ನಡೆಯುತ್ತಿತ್ತು. ಹಿಂದೆ ಕೊಟ್ಟ ಸಂಸ್ಥೆಗಳೇ ಗ್ರ್ಯಾಂಟ್ ಕೊಡಲು ಮುಂದೆ ಬಂದಿದ್ದರು. ಆದರೆ ಟ್ರಸ್ಟ್ ರಿಜಿಸ್ಟ್ರೇಶನ್ ತೊಂದರೆಯಿಂದ ಸ್ವಲ್ಪ ಮುಂದಕ್ಕೆ ಹೋಯಿತು.

ಗಿರೀಶ್ ಕಾರ್ನಾಡರ ‘ಅಂಜುಮಲ್ಲಿಗೆ’ಯಲ್ಲಿ ಮುಖ್ಯಪಾತ್ರ ಮಾಡುತ್ತಿದ್ದೆ. ಆ ನಾಟಕ ಪ್ರಕಾಶ್ ಮಾಡಿಸುತ್ತಿದ್ದಾಗ ಎಲ್ಲರೂ ಮೂಗು ಮುರಿದರು. ನಾಟಕ ನೋಡಿದ ನಂತರ ಧಾರವಾಡದ ಮಡಿವಂತರೂ ಮೆಚ್ಚಿಕೊಂಡರು. ಕಂಬಾರರ ಹೇಳ್ತೀನ ಕೇಳ ಕವನಗಳನ್ನಿಟ್ಟುಕೊಂಡು ನಮ್ಮ ಹಿಂದಿನ ಕೆಲಸವನ್ನು ನೋಡಿದ್ದ ಅವರು ವಿಶೇಷ ಮುತುವರ್ಜಿಯಿಂದ ಫಂಡಿಂಗ್ ಮಾಡಿದರು. ಹೊಸ ರೀತಿಯಲ್ಲಿ ಪ್ರಯೋಗ ಮಾಡಿದೆವು. ನಾನು ಸೂಳೆ ಕಮಲಿ ಪಾತ್ರ ಮಾಡುತ್ತಿದ್ದೆ. ಜಿ.ಬಿ. ಜೋಶಿಯವರ ‘ಜಡಭರತನ ಕನಸುಗಳಲ್ಲಿ’ ಸೋಲೋ ಪ್ರದರ್ಶನ ನೀಡಿದೆ. ಅಜ್ಜ ಗರುಡ ಸದಾಶಿವರಾಯರ ಸಂಗೀತ ನಾಟಕ ‘ವಿಷಮ ವಿವಾಹ’ವನ್ನು ಮತ್ತೆ ಮಾಡಿದೆವು. ೧೯೨೦ರಲ್ಲಿ ಬಹಳ ಜನಪ್ರಿಯವಾದ ನಾಟಕ, ಹಾಡುತ್ತ -ಸಂಭಾಷಣೆ ಹೇಳುವುದು ನಮ್ಮ ತಲೆಮಾರಿನನವರಿಗೆ ಬಹಳ ಕಷ್ಟವೆನಿಸುತ್ತದೆ. ಹೀಗೆ ಮತ್ತೆ ನಾನು ಸಾಹಿತ್ಯ, ಸಂಗೀತ, ನಾಟಕಗಳನ್ನು ಪ್ರಾರಂಭಿಸಿದೆ. ಶಾಲೆಯಲ್ಲಿದ್ದಾಗ ಒಂಭತ್ತು ವರ್ಷ ನಾಟಕ-ಸಾಹಿತ್ಯದಿಂದ ದೂರ ಇದ್ದೆ. ಹಳೆಯ ಗೆಳೆಯರೆಲ್ಲ ಈ ಅವಧಿಯಲ್ಲಿ ನನ್ನನ್ನು ಮರೆತುಬಿಟ್ಟಿದ್ದರು. ಮತ್ತೆ ಅಭಿನಯವನ್ನು ಪ್ರಾರಂಭಿಸಿದೆ.

ಈಗ ಶಾಲೆಯಲ್ಲಿ ಮಾಡಿದ ಕೆಲಸವನ್ನೇ ಭ್ರೀಫ್ ಆಗಿ ಶಿಕ್ಷಕರಿಗೆ, ಶಿಕ್ಷಕರಾಗುವವರಿಗೆ, ಮಕ್ಕಳಿಗೆ, ಸ್ಲಂನ ಮಕ್ಕಳಿಗೆ, ಹಳ್ಳಿಯಲ್ಲಿರುವ ಮಕ್ಕಳಿಗೆ, ಕಾಲೇಜು ಹುಡುಗರಿಗೆ ಹೀಗೆ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದೇವೆ. ಈಗ ನಮ್ಮ ಮುಂದೆ ಬಹಳ ಯೋಜನೆಗಳು ಕೆಲಸಗಳು ಇವೆ. ಆದ್ದರಿಂದ ನಾನು ಈಗ ಆಯ್ಕೆ ಮಾಡಿಕೊಳ್ಳಬಹುದು, ಆದರೆ ನಾಟಕ ಮಾಡುವುದು ಈಗ ಬಹಳ ಕಷ್ಟವೆನಿಸುತ್ತದೆ. ರಂಗಮಂದಿರಗಳ ಬಾಡಿಗೆ, ವ್ಯವಸ್ಥೆಯ ಕೊರತೆ, ನಟರ ಕೊರತೆ ಅಲ್ಲದೆ ರಂಗನಟರೆಲ್ಲ ಟಿ.ವಿ.ಸೀರಿಯಲ್‌ಗೆ ಮುಖ ಮಾಡಿದ್ದಾರೆ.

ರಶೀದ್ ಅವರು ‘ಕೆಂಡಸಂಪಿಗೆಗೆ ನೀವೇನು ಬರೆಯುತ್ತೀರಿ?’ ಎಂದಾಗ ನಾನು ನನ್ನ ಅನುಭವವನ್ನೇ ಬರೆಯುತ್ತೇನೆ ಎಂದಿದ್ದೆ. ನಾನೇನು ಬರೆದೆ? ನನ್ನ ಗೋಳುಗಳನ್ನೇ? ಅನುಕಂಪ ಬಯಸಿದೆನೆ? ಇದೇನು ಆತ್ಮಕಥೆಯೇ? ಇತ್ಯಾದಿ ಪ್ರಶ್ನೆಗಳು ನನ್ನೊಳಗೆ. ಆದರೆ ಬರೆಯುತ್ತ ಬರೆಯುತ್ತ ಎಷ್ಟೊಂದು ವಿಷಯಗಳು ಹೊರಬಂದವು. ನಾನು ಗಮನಿಸಿದ್ದು, ಗಮನಿಸಲಾರದ್ದು, ಯೋಚಿಸಲು ಹಚ್ಚಿದ್ದು…. ಆದರೆ ಈಗ ನನಗೇ ಸ್ಪಷ್ಟವಾಗಿದೆ. ನನ್ನನ್ನು ನಾನು ನೋಡಿಕೊಳ್ಳಬಲ್ಲೆ.

ಸಮಾಜದ ಮುಖ್ಯವಾಹಿನಿಯಲ್ಲಿ ಬರುವ ಜನರಲ್ಲ ನಾವು. ಅಂದರೆ ಇಂಜಿನೀಯರ್‌ಗಳು, ವೈದ್ಯರು, ಶಿಕ್ಷಕರಂತೆ ನೇರವಾಗಿ ಅಗತ್ಯವಾದವರಲ್ಲ. ಜನರಿಗೆ ಬೇಸರವಾದಾಗ, ಕಲೆ-ಸಂಸ್ಕೃತಿಯ ನೆನಪಾದಾಗ, ವೇಳೆ ಕಳೆಯಲು, ಬದಲಾವಣೆಗೋಸ್ಕರ ಅಥವಾ ಇತ್ತೀಚಿನ ಸರಕಾರದ ಉತ್ಸವಗಳಿಗೆ ನಾವು ಬೇಕಾಗುತ್ತೇವೆ. ಹಾಗೆ ಯಾವಾಗಲೋ ಒಮ್ಮೆ ನೆನಪಾಗುವವರು ನಾವು. ಅದನ್ನೇ ಜೀವನ ಮಾಡಿಕೊಂಡಿರುವವರ ಬದುಕು ಹೇಗಿರುತ್ತದೆ? ನನ್ನಂತಹ ಮಧ್ಯಮ ವರ್ಗದ ಅದರಲ್ಲೂ ಕೃಷಿ ಕುಟುಂಬದಿಂದ ಬಂದವಳ ಅನುಭವ ಹೇಗಿರುತ್ತದೆ? ಅದಿಷ್ಟೇ ಅಲ್ಲ ಬರೆಯುತ್ತ ರಂಗಭೂಮಿಯ ಜೊತೆಗೆ ತಳುಕು ಹಾಕಿಕೊಂಡಿರುವ ಅನೇಕ ವಿಷಯಗಳು ಹೊರಬೀಳುತ್ತವೆ. ನಾನಿದನ್ನು ಭಾವೋದ್ವೇಗದಿಂದ ಬರೆಯದೆ ಕಂಡಂತೆ, ಅನಿಸಿದಂತೆ, ಮೂರನೆಯ ವ್ಯಕ್ತಿಯಾಗಿ ಬರೆಯಲು ಪ್ರಾರಂಭಿಸಿದೆ. ಓಡುವ ಬದುಕಲ್ಲಿ ಒಮ್ಮೆ ಅಲ್ಪವಿರಾಮ ಪಡೆದು ಬರೆದೆ. ನನ್ನ ಇತಿಗಳು, ಮಿತಿಗಳು ಅರ್ಥವಾಗಿವೆ. ಆದರೀಗ ಶಾಂತವಾಗಿದ್ದೇನೆ. ಭೋರ್ಗರೆವ ಸಮುದ್ರ ಶಾಂತವಾದಂತೆ.

ಎಂದಿದ್ದರೂ ಕನಸು ಕಾಣುವವಳು, ನನ್ನಲ್ಲೇ ಮೈಮರೆಯುವಳು ನಾನು, ಯಾವುದಕ್ಕೂ ಹೆದರದೆ, ಎಲ್ಲೂ ರಾಜಿಮಾಡಿಕೊಳ್ಳದೆ, ಹಠದಿಂದ, ದುಡುಕುತನದಿಂದ, ಮುಂಗೋಪದಿಂದ, ನನಗೆ ಸರಿ ಕಂಡಂತೆ ಬದುಕಿದ್ದೇನೆ. ಅತಿ ಉದಾರತೆ, ಅತಿ ಭಾವುಕತೆ, ಅತಿ ಶಿಸ್ತು, ಅತಿ ನಿಷ್ಟುರತೆಯಿಂದಲೇ ಕೆಲಸ ಮಾಡಿದ್ದೇನೆ. ಇದರಿಂದ ಕಳೆದುಕೊಂಡಿದ್ದೇ ಬಹಳ. ಕಳೆದುಕೊಂಡಿದ್ದರ ಬಗ್ಗೆ ದುಃಖವಿಲ್ಲ. ಎಷ್ಟೊಂದು ಕೆಲಸಗಳು ಆಗಿವೆಯಲ್ಲ! ನನ್ನ ಶಾಲಾ ಕೆಲಸದಿಂದ ಧಾರವಾಡದ ಶಾಲೆಗಳಲ್ಲಿ ಒಂದು ಹೊಸ ಸಂಚಲನ ಮಾಡಿದೆಯಲ್ಲ! ಎಷ್ಟೊಂದು ಜನ ಪ್ರೇರಣೆ ಪಡೆದರಲ್ಲ! ಎಷ್ಟೊಂದು ರೀತಿಯ ಸಂಬಂಧಗಳು, ಎಷ್ಟೊಂದು ಆತ್ಮೀಯರು, ಸ್ನೇಹಿತರು, ಪ್ರೇಕ್ಷಕರು… ನಿಬ್ಬೆರಗಾಗುತ್ತೇನೆ. ಆದರೂ ಕನಸುಗಳೇ ನನ್ನ ಜೀವಾಳ. ಕನಸು ಕಾಣುವುದನ್ನು ಎಂದೂ ನಿಲ್ಲಿಸುವುದಿಲ್ಲ.