ನಮ್ಮೂರಲ್ಲಿ ನದಿಯೂ ಇದೆ ಸಮುದ್ರವೂ ಇದೆ. ಮತ್ತೆ ಇವೆರಡರ ನಡುವೆ ಸಲ್ಲಾಪ ಸಂಗೀತ ಜಗಳ ಎಲ್ಲ ನಡೆಯುತ್ತದೆ. ಸಾವಿರಗಟ್ಟಲೆ ತೆಂಗಿನ ಮರಗಳೂ ಇವೆ. ಅವು ತಂಗಾಳಿಗೆ ತಮ್ಮ ಹೆಡೆಗಳನ್ನು ಬೀಸಿ ಬರುವವರನ್ನೆಲ್ಲ ಕರೆಯುತ್ತವೆ ಗಾಳಿಯಲ್ಲಿ ಜೀಕುತ್ತವೆ. ಮನೆಯ ಅಂಗಳದಲ್ಲಿ ನಿರ್ಭಯವಾಗಿ ತಿರುಗುವ ನವಿಲುಗಳು ಊರಿನ ರಾಣಿಯಂತೆ ಗತ್ತಿನಲ್ಲಿ ತಿರುಗುತ್ತವೆ. ಬ್ರಿಟಿಷರು ಹುಬ್ಬೇರಿಸಲಿಕ್ಕೆ ಮನೆಯ ಹತ್ತಿರ ಸಮುದ್ರ ಇದೆ ಎನ್ನುವ ಒಂದು ಸತ್ಯ ಸಾಕಾದರೂ, ನಮ್ಮೂರು ಬೀಚ್ ಹಾಗು ಬಿಸಿಲುಗಳ ಸಾಂಗತ್ಯರೂಪಕ ಎಂದು ಇನ್ನಷ್ಟು ಕುತೂಹಲ ಹುಟ್ಟಿಸುತ್ತೇನೆ.
ಯೋಗೀಂದ್ರ ಮರವಂತೆ ಬರೆವ ಅಂಕಣ.

ಇಲ್ಲಿಂದ ಅಲ್ಲಿಗೆ ಹೊರಟಾಗಲೆಲ್ಲ, ಇಡೀ ಚೀಲದಲ್ಲಿ ರಜೆಯನ್ನು ತುಂಬಿಸಿಕೊಂಡು ಜಗತ್ತಿನ ಅತಿ ದೊಡ್ಡ ಸಿರಿವಂತನಂತೆ ಹೊರಡುವವನು ನಾನು. ಅಲ್ಲಿಗೆ ತಲುಪುವವರೆಗೂ ನಡುನಡುವೆ ನನ್ನ ರಜೆಯ ಥೈಲಿಯ ಭಾರವನ್ನು ಮುಟ್ಟುತ್ತಾ ತಟ್ಟುತ್ತ ನನ್ನೊಳಗೆ ಹಿಗ್ಗುತ್ತಾ ಸಾಗುವವನು. ಇಲ್ಲಿಂದ ಅಂದರೆ ಇಂಗ್ಲೆಂಡ್ ನ ನೈಋತ್ಯ ಕರಾವಳಿಯ ಪಟ್ಟಣ ಬ್ರಿಸ್ಟಲ್ ನಿಂದ. ಅಲ್ಲಿಗೆ ಅಂದರೆ ನನ್ನ ಹುಟ್ಟೂರು ಮರವಂತೆಗೆ. ಇಲ್ಲಿಂದ ಹೊರಟು ಮರವಂತೆ ತಲುಪಿದ್ದು, ರಜೆ ಕಳೆದದ್ದು, ಈಗ ಹಳೆ ಸುದ್ದಿ, ಬಿಡಿ. ಹೊಸ ಸುದ್ದಿ ಅಂದರೆ ಅಷ್ಟೂ ರಜೆ ಖರ್ಚಾದದ್ದು ಮತ್ತೆ ನಾನು ಮೊದಲಿನಂತೆ ಬಡವನಾಗಿ ಮರಳಿದ್ದು! ಖರ್ಚಾಗದೆ ಉಳಿದಿರುವುದು – ಇಷ್ಟುದ್ದ ರಜೆಗೆ ಇನ್ನು ಒಂದು ವರ್ಷ ಕಾಯಬೇಕಲ್ಲ ಎನ್ನುವ ಯೋಚನೆಗಳು. ಇನ್ನು ರಜೆ ಖರ್ಚು ಮಾಡಿ ನಾನು ಗಳಿಸಿರುವುದು ಭರಿಸಿರುವುದು ಮರವಂತೆಯ ನೆನಪ ಖಜಾನೆಯನ್ನು. ಗಳಿಸಿದ್ದು ಕಳೆದದ್ದು ಭರಿಸಿದ್ದರ ಆಯವ್ಯಯ ಎಲ್ಲ ಈಗ ಆಗಿಹೋಗಿದೆ.

ಹೀಗೆ ರಜೆ ಒಟ್ಟುಗೂಡಿಸುವುದು, ಆಮೇಲೆ ಮರವಂತೆಗೆ ಹಾರುವುದು ಅಲ್ಲಿ ಅವೆಲ್ಲವನ್ನೂ ಮುಗಿಸಿ, ಗಂಟು ಕಳೆದ ಜೂಜುಕೋರನಂತೆ ಬ್ರಿಸ್ಟಲ್ ಗೆ ಮರಳುವುದು ಮತ್ತೆ ಮರುಕಳಿಸಿದೆ. ಊರು ಬಿಟ್ಟು ಇಂಜಿನೀಯರಿಂಗ್ ಓದಿಗೆ ಬೆಂಗಳೂರಿಗೋ ಮತ್ತೆ ಕೆಲಸದ ನಿಮಿತ್ತ ಇಂಗ್ಲೆಂಡ್ ಗೋ ಗಡಿಪಾರಾದ ಮೇಲೆ ನನ್ನಮಟ್ಟಿಗೆ ರಜೆ ಅಂದರೆ ಮರವಂತೆ, ಮರವಂತೆ ಅಂದರೆ ರಜೆ. ಇಂಗ್ಲೆಂಡ್ ನ ಹದಿನಾಲ್ಕು ವರ್ಷಗಳ ವಾಸದಲ್ಲಿ ಕೆಲವು ರಜೆಗಳು ಯೂರೋಪಿನ ಸುತ್ತಾಟಕ್ಕೆ ಒತ್ತೆಯಾಗಿದ್ದು ಬಿಟ್ಟರೆ ಮತ್ತೆಲ್ಲ ರಜೆಗಳಿಗೂ ಮರವಂತೆಯೇ ವಾರೀಸು. ಹುಟ್ಟೂರಿಗಿರುವ ಅಧಿಕಾರ. ಅಂದರೆ ವರ್ಷವಿಡೀ ಕೆಲಸ ಮಾಡಿದ್ದಕ್ಕೆ ನನಗೆ ಸಿಗಬೇಕಾದ ಐದು ವಾರಗಳ ರಜೆಯನ್ನು ಮರವಂತೆಯ ತಿರುಗಾಟಕ್ಕೆ ಹಾಕಿ ಖರ್ಚುಮಾಡುವುದು.


ತಮ್ಮದೆನ್ನುವ ಊರು ನೀರು ಗಾಳಿ ಬಿಸಿಲು ಐದು ಸಾವಿರ ಮೈಲು ದೂರದಲ್ಲಿದ್ದರೆ ಇನ್ಯಾರಾದರೂ ಹೀಗೆ ಮಾಡುತ್ತಾರೇನೋ. ವರ್ಷದುದ್ದಕ್ಕೂ ಸ್ವಲ್ಪ ಸ್ವಲ್ಪ ರಜೆ ತೆಗೆದುಕೊಳ್ಳುತ್ತಾ ಬೇರೆ ಬೇರೆ ಊರು ಸುತ್ತುತ್ತ ತಮ್ಮ ರಜೆ ಖಾಲಿ ಮಾಡುವ ಇಂಗ್ಲೆಂಡ್ ನ ನನ್ನ ಕೆಲವು ಸಹೋದ್ಯೋಗಿಗಳು ನನ್ನ ಇಷ್ಟು ರಜೆಗಳನ್ನು ಕಳೆಯುವ ಉಡಾಯಿಸುವ ಊರು ಯಾವ ಲೋಕದಲ್ಲಿದೆಯೋ ಎಂದು ಕೇಳುತ್ತಾರೆ; ಇನ್ನು ಕೆಲವು ಸಹೋದ್ಯೋಗಿಗಳು ರಜೆ ಅಂದರೆ ನಿನ್ನ ತರಹ ಮನೆಗೆ ಹೋಗಿಯೇ ಕಳೆಯಬೇಕು ನೋಡು ಎನ್ನುತ್ತಾರೆ. ಕಾರ್ಮಿಕ ಸಂಘಟನೆಗಳು ಅತ್ಯಂತ ಬಲಶಾಲಿಯಾಗಿರುವ ಜರ್ಮನಿಯಲ್ಲಿ ತಾವು ಕೆಲಸ ಮಾಡುತ್ತಿದ್ದರೆ ವರ್ಷಕ್ಕೆ ಆರು ವಾರಗಳ ರಜೆ ಸಿಗುತ್ತಿತ್ತಲ್ಲ ಎಂದು ಗೊಣಗುತ್ತಾರೆ; ಆಮೇಲೆ, ಇಷ್ಟು ವರ್ಷಗಳಿಂದ ಅಷ್ಟೂ ರಜೆಯನ್ನು ಒಂದೇ ಊರಿನ ವಾಸಕ್ಕೋ ಭೇಟಿಗೂ ಕಳೆದ ಆ ಊರಿನ ಹೆಸರೇನೊ ಎಂದೂ ಕೇಳುತ್ತಾರೆ.

ಇಷ್ಟು ಕೇಳಿದವರಿಗೆ, “ಬಲ್ಲಿರೇನಯ್ಯಾ?” ಎನ್ನುವ ಯಕ್ಷಗಾನದ ಒಡ್ಡೋಲಗದ (ಪೀಠಿಕೆಯ) ಶೈಲಿಯಲ್ಲಿ ನಾನು ಶುರು ಮಾಡುತ್ತೇನೆ. ಹತ್ತಿರದಲ್ಲಿ ಕೂಡಿಸಿ, ಗೂಗಲ್ ಮ್ಯಾಪ್ ತೆರೆದು ಇಗೋ ಭಾರತದ ನೈಋತ್ಯ ಕರಾವಳಿಯ ಊರು ಮರವಂತೆ ಎಂದು ತೋರಿಸುತ್ತೇನೆ, ಇನ್ನೂ ಸುಲಭವಾಗಲಿ ಎಂದು ಇಂಗ್ಲೆಂಡ್ ನ ಮ್ಯಾಪಿನಲ್ಲಿ ಬ್ರಿಸ್ಟಲ್ ಎನ್ನುವ ಊರು ಎಲ್ಲಿದೆಯೋ ಭಾರತ ಭೂಪಟದಲ್ಲಿ ಮರವಂತೆ ಸುಮಾರಿಗೆ ಅದೇ ಜಾಗದಲ್ಲಿದೆ ಎನ್ನುತ್ತೇನೆ. ಒಹೋ, ಮರವಂತೆ ಅಂದರೆ ಹೀಗೊಂದು ಊರ ಹೆಸರೋ, ಅದನ್ನೇ ನಿನ್ನ ಹೆಸರೊಟ್ಟಿಗೆ ಇಟ್ಟುಕೊಂಡು ಓಡಾಡುವೆಯಲ್ಲ ಎಂದು ಪ್ರಶ್ನಿಸುತ್ತಾರೆ. ಅಷ್ಟು ಚಂದದ ಊರಿನ ಹೆಸರನ್ನು ನೀನು ಹೀಗೆ ಬಳಸಬಹುದೇ ಎಂದು ವ್ಯಂಗ್ಯ ಮಾಡುತ್ತಾರೆ. ಆ ಕಾರಣಕ್ಕಾದರೂ ನಂಗೊಂದು ಹೆಸರು ಬರಲಿ ಎನ್ನುವ ಹವಣಿಕೆಯಲ್ಲಿ ಎಂದು ಹೇಳಿ ಅವರ ನಗೆಯಲ್ಲಿ ಸೇರಿಕೊಳ್ಳುತ್ತೇನೆ. ಮುಂದುವರಿದು, ನಿಮ್ಮೂರ, ಇಂಗ್ಲೆಂಡ್ ನ ಯಾವ ಕರಾವಳಿಗೆ ಯಾವ ಕಾಲಕ್ಕೆ ಹೋದರೂ ಕಾಲು ಕೊರೆಯುವ ತಣ್ಣನೆಯ ನೀರು, ಮರವಂತೆಯ ಸಮುದ್ರದಲ್ಲಿ ಬೆಚ್ಚಗಿನ ಬಿಸಿನೀರು, ನೀರಲ್ಲಿ ಕುಣಿದರೂ, ಆಡಿ ದಣಿದರೂ ಥಂಡಿ ಹತ್ತದು ಗೊತ್ತಾ ಎಂದು ಹುಬ್ಬು ಹಾರಿಸುತ್ತೇನೆ. ನನ್ನ ಮನೆಯಿಂದ ಸಮುದ್ರಕ್ಕೆ ಬರೇ ಒಂದು ಕಿಲೋಮೀಟರು ಎಂದು ಹೊಟ್ಟೆ ಉರಿಸುತ್ತೇನೆ. ಬೀಚ್ ನ ಸಾಮೀಪ್ಯ ಯಾರಿಗಾದರೂ ಇದೆ ಎಂದರೆ ಆಂಗ್ಲರು ಕಣ್ಣರಳಿಸಿ ಮತ್ಸರ ಪಡುತ್ತಾರೆ. ಇಲ್ಲಿ ಕೆಲವರು ಜೀವನಪೂರ್ತಿ ದುಡಿದು ಗಳಿಸಿ ಉಳಿಸಿ ಸ್ಪೇನ್ ದೇಶದ ಬೇಲೆಬದಿಯಲ್ಲೊಂದು ಮನೆ ಖರೀದಿಸುತ್ತಾರೆ. ಮತ್ತೆ ವರ್ಷದ ಕೆಲ ತಿಂಗಳು ಅಲ್ಲಿ ಕಳೆಯುತ್ತಾರೆ, ಇಲ್ಲವಾದರೆ ಯಾರೋ ಪ್ರವಾಸಿಗಳಿಗೆ ಬಾಡಿಗೆಗೆ ಕೊಡುತ್ತಾರೆ.

ನಮ್ಮೂರಲ್ಲಿ ನದಿಯೂ ಇದೆ ಸಮುದ್ರವೂ ಇದೆ. ಮತ್ತೆ ಇವೆರಡರ ನಡುವೆ ಸಲ್ಲಾಪ ಸಂಗೀತ ಜಗಳ ಎಲ್ಲ ನಡೆಯುತ್ತದೆ. ಸಾವಿರಗಟ್ಟಲೆ ತೆಂಗಿನ ಮರಗಳೂ ಇವೆ. ಅವು ತಂಗಾಳಿಗೆ ತಮ್ಮ ಹೆಡೆಗಳನ್ನು ಬೀಸಿ ಬರುವವರನ್ನೆಲ್ಲ ಕರೆಯುತ್ತವೆ ಗಾಳಿಯಲ್ಲಿ ಜೀಕುತ್ತವೆ. ಮನೆಯ ಅಂಗಳದಲ್ಲಿ ನಿರ್ಭಯವಾಗಿ ತಿರುಗುವ ನವಿಲುಗಳು ಊರಿನ ರಾಣಿಯಂತೆ ಗತ್ತಿನಲ್ಲಿ ತಿರುಗುತ್ತವೆ. ಬ್ರಿಟಿಷರು ಹುಬ್ಬೇರಿಸಲಿಕ್ಕೆ ಮನೆಯ ಹತ್ತಿರ ಸಮುದ್ರ ಇದೆ ಎನ್ನುವ ಒಂದು ಸತ್ಯ ಸಾಕಾದರೂ, ನಮ್ಮೂರು ಬೀಚ್ ಹಾಗು ಬಿಸಿಲುಗಳ ಸಾಂಗತ್ಯರೂಪಕ ಎಂದು ಇನ್ನಷ್ಟು ಕುತೂಹಲ ಹುಟ್ಟಿಸುತ್ತೇನೆ.

ಹತ್ತಿರದಲ್ಲಿ ಕೂಡಿಸಿ, ಗೂಗಲ್ ಮ್ಯಾಪ್ ತೆರೆದು ಇಗೋ ಭಾರತದ ನೈಋತ್ಯ ಕರಾವಳಿಯ ಊರು ಮರವಂತೆ ಎಂದು ತೋರಿಸುತ್ತೇನೆ, ಇನ್ನೂ ಸುಲಭವಾಗಲಿ ಎಂದು ಇಂಗ್ಲೆಂಡ್ ನ ಮ್ಯಾಪಿನಲ್ಲಿ ಬ್ರಿಸ್ಟಲ್ ಎನ್ನುವ ಊರು ಎಲ್ಲಿದೆಯೋ ಭಾರತ ಭೂಪಟದಲ್ಲಿ ಮರವಂತೆ ಸುಮಾರಿಗೆ ಅದೇ ಜಾಗದಲ್ಲಿದೆ ಎನ್ನುತ್ತೇನೆ.

ಬ್ರಿಟಿಷರಿಗೆ ಬಿಸಿಲು ಮತ್ತೆ ಬೀಚ್ ಗಳ ಜೊತೆಗಾರಿಕೆ ಎಂದರೆ ಬಹಳ ಪ್ರೀತಿ. ಪ್ರತಿ ವರ್ಷವೂ ಬಿಸಿಲು ಮತ್ತೆ ಸಮುದ್ರ ಎಲ್ಲಿರುವುದೋ ಎಂದು ಹುಡುಕಿ ಹೋಗಿ ರಜೆ ಕಳೆದು ಬರುತ್ತಾರೆ. ಸುತ್ತಲೂ ನೀರು ಆವರಿಸಿರುವ ದೇಶ ಇಂಗ್ಲೆಂಡ್. ದೇಶದ ಯಾವುದೇ ದಿಕ್ಕಿನಲ್ಲಿ ಕೆಲ ಕಾಲ ಪ್ರಯಾಣ ಮಾಡಿದರೆ ಸಮುದ್ರ ದಂಡೆ ಸಿಗುತ್ತದೆ. ಆದರೆ ಇಲ್ಲಿನ ಪ್ರತಿಕೂಲ ಹವಾಮಾನದಿಂದ ಸಮುದ್ರ ದಂಡೆಗಳು ವರ್ಷದ ಎರಡು ಮೂರು ತಿಂಗಳಲ್ಲಿ ಮಾತ್ರ ಜನರನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿವೆ. ವರ್ಷದ ಹೆಚ್ಚಿನ ಮಾಸಗಳಲ್ಲಿ ತಂಪಾದ ಗಾಳಿ ಬೀಸುವ, ನೀರಲ್ಲಿ ಕಾಲು ಮುಳುಗಿಸಿದರೆ ಕೊರೆಯುವ ತಣ್ಣಗಿನ ನೀರಿರುವ ಸಮುದ್ರ ಪ್ರವಾಸಿಗರಿಗೆ ಹೇಗೆ ಮುದ ಕೊಟ್ಟೀತು? ನೆತ್ತಿಯ ಮೇಲೆ ಬೆಳಗಿನಿಂದ ಸಂಜೆಯ ತನಕ ಸುಡು ಬಿಸಿಲನ್ನು ಚೆಲ್ಲುವ, ಆ ಬಿಸಿಲಿಗೆ ಮಿರಮಿರ ಮಿನುಗುವ ಕಡಲು, ಅದು ಸೂಸುವ ನೊರೆ, ಮೊರೆಯುವ ತೆರೆ ಎಲ್ಲಿದೆ ಎಂದು ಅರಸುತ್ತ ಸ್ಪೇನ್, ಮೆಕ್ಸಿಕೋ, ಕ್ಯಾನರಿ ದ್ವೀಪ, ಗೋವಾ ಹೀಗೆ ಪ್ರಪಂಚವೆಲ್ಲ ಸುತ್ತುತ್ತಾರೆ. ಬಿಸಿಲು ಬೀಚುಗಳ ಅನುಗ್ರಹ ಪಡೆಯಲು ತಪಸ್ವಿಗಳಂತೆ ದೇಶವಿದೇಶ ಸುತ್ತುತ್ತಾರೆ ; ರಜೆಯನ್ನು ಸುಂದರ ಮತ್ತು ಸ್ಮರಣೀಯವಾಗಿಸಿಕೊಳ್ಳಲು ನದಿ, ಸಮುದ್ರ, ದೇಶಗಳನ್ನ ಲಂಘಿಸಿ ಪ್ರಯಾಣಮಾಡುತ್ತಾರೆ. ಆಮೇಲೆ ರಜೆಯಿಂದ ಮರಳಿದ ಮೇಲೆ ತಮ್ಮ ಅನುಭವ ಹೇಳುವುದೂ ಇತರ ಕತೆ ಕೇಳುವುದೂ ಎರಡನ್ನೂ ಮಾಡುತ್ತಾರೆ.

ಆಂಗ್ಲರ ಜೀವನದಲ್ಲಿ ರಜೆ ಮತ್ತು ವಿರಾಮಕ್ಕಿರುವ ಮಹತ್ವದಿಂದ ಯಾರೋ ರಜೆಗೆ ಹೊರಟರೆಂದರೆ,ರಜೆ ಮುಗಿಸಿ ಬಂದರೆಂದರೆ ಪ್ರಶ್ನೆಗಳ ಸುರಿಮಳೆ ಕಾದಿರುತ್ತದೆ. ನಾನೂ ಈಗ ರಜೆ ಮುಗಿಸಿ ಬಂದ ಆಸಾಮಿಯಾದ್ದರಿಂದ ಬ್ರಿಸ್ಟಲ್ ನ ಕಚೇರಿ ಹೊಕ್ಕಿದ ಕೂಡಲೇ ಮರವಂತೆ ಹೇಗಿದೆ, ರಜೆಹೇಗಿತ್ತು, ಬಿಸಿಲು ಎಷ್ಟಿತ್ತು ಎಂದೆಲ್ಲ ಕೇಳುತ್ತಾರೆ. ನಾನಾಗ ರಜೆಯ ಒಂದೊಂದೇ ಎಳೆಯನ್ನು ತೆಗೆದು ಸಹೋದ್ಯೋಗಿಗಳ ಮುಂದಿಡುತ್ತೇನೆ. ಚತುಷ್ಪಥ ರಸ್ತೆ ಸಿದ್ಧವಾಗುತ್ತಿರುವುದರ ಸೂಚಕವಾಗಿ ಮರವಂತೆಯ ನದಿ ಸಮುದ್ರಗಳ ಸಾಮೀಪ್ಯದ ವಿಹಂಗಮ ದೃಶ್ಯದ ರಸ್ತೆ ಚಂದದ ಜಡೆ ಮುಡಿ ಕಟ್ಟಿಕೊಳ್ಳುವ ಮೊದಲು ಸುಂದರಿಯೊಬ್ಬಳು ಕನ್ನಡಿ ಎದುರು ಕೂದಲು ಹರಡಿಕೊಂಡು ಕೂತಂತೆ ಕೂತಿರುವುದು, ಪ್ರತಿ ರಾತ್ರಿಯೂ ಯಕ್ಷಗಾನದ ಚೆಂಡೆ ಸದ್ದು ಕೇಳುವದು ಅದಕ್ಕೆ ನನ್ನ ಕಾಲು ಕುಣಿಯುವುದು, ಮತ್ತೆ ನಾನೂ ಅವಕಾಶ ಸಿಕ್ಕಿದರೆ ಬಣ್ಣ ಹಚ್ಚಿ ಕುಣಿಯುವುದು ಹಿತ್ತಿಲಲ್ಲಿ ನವಿಲು ಕಾಣಸಿಗುವುದು, ಹಾವು ಕಾಣೆ ಆಗಿರುವುದು, ಮನೆ ಮನೆಗಳಲ್ಲಿ ಇಲಿಗಳ ಕೊಳ್ಳೆ, ಸೊಳ್ಳೆಗಳ ಝೇಂಕಾರ ಮತ್ತೆ ಸಮುದ್ರ ಬದಿಯಲ್ಲಿ ಅಡ್ಡಡ್ಡ ಓಡುವ ಏಡಿಗಳು ಹೀಗೆ ಒಂದಾದಮೇಲೊಂದು ಎಲ್ಲ ಸುದ್ದಿ ಉಸುರುತ್ತೇನೆ. ಈ ಸಲದ ರಜೆಯಲ್ಲಿ ಮರವಂತೆಯ ಕಂಚಿಕೇರಿಯ ಹೊಳೆಬದಿಯಲ್ಲಿ ಒಂಟಿ ದೋಣಿಯೊಂದು ತೂಕಡಿಸುತ್ತಿದ್ದುದರ ಕತೆಯನ್ನೂ ಹೇಳುತ್ತೇನೆ. ಫೋಟೋ ತೋರಿಸುತ್ತೇನೆ.

ಒಂದು ಅಲೆಯೂ ಇಲ್ಲದ ಒಂದು ಸುಳಿಯೂ ಕಾಣದ ಬೆಳಗಿನ ಸೌಪರ್ಣಿಕಾ ನದಿಯಲ್ಲಿ ಒಬ್ಬಂಟಿ ನಾವೆಯ ವಿಶ್ರಾಮ ಗೀತೆ ನೋಡಿ ಎನ್ನುತ್ತೇನೆ. ಹೆಚ್ಚಿನ ದಿನಗಳಲ್ಲಿ ಯಾರೂ ಬಳಸದ, ದಡದ ಹತ್ತಿರದ ತೆಂಗಿನ ಮರಕ್ಕೆ ಹಗ್ಗ ಕಟ್ಟಿಕೊಂಡು ಬಂಧಿಯಾದ ದೋಣಿಯಡಿಯ ನೀರಲ್ಲಿ ಕರ್ಸೆ ಕಾಣೆಗಳಂತಹ ಮರವಂತೆಯ ಜಗದ್ವಿಖ್ಯಾತ ಮೀನುಗಳು ಭಂಡ ಧೈರ್ಯದಲ್ಲಿ ಓಡಾಡುತ್ತಿವೆ. ಇನ್ನು ಮರವಂತೆಯ ಸಮುದ್ರಬದಿಯ ಹೊಸ ಬಂದರಿನಲ್ಲಿ ಆ ದಿನ ಟನ್ ಗಟ್ಟಲೆ “ನಂಗ” ಮೀನು ಬಲೆಗೆ ಬಿದ್ದದ್ದೂ, ಕೋಟಿಗಟ್ಟಲೆ ವ್ಯವಹಾರ ನಡೆದದ್ದು, ಹೊಳೆಮೀನಿನ ರುಚಿ ಗೊತ್ತಿದ್ದವರು ಈಗ ಬರುವರೋ ಇನ್ನೇನು ಬರುವರೋ ಎಂದು ಆತಂಕದಲ್ಲಿ ಕರ್ಸೆ ಕಾಣೆಗಳು ಚುರುಕಲ್ಲಿ ಓಡಾಡಿದ್ದು, ಹೀಗೆ ಸೂಕ್ಷ್ಮ ಮಾತುಗಳು ಸಣ್ಣ ನೆನಪುಗಳು ಹೊತ್ತಿಸಿದ ಅಗ್ಗಿಷ್ಟಿಕೆಯಂತೆ ಹೊತ್ತಿಕೊಂಡಿವೆ. ನಾನೂ ಅವರೂ ಸೇರಿ ಮೆಲುಕುಗಳ ಗಾಳಿಯನ್ನೂ ಊದಿ ಉರಿಸುತ್ತಿದ್ದೇವೆ.

ನನ್ನ ಮಧುರ, ನವಿರು, ಸಿಹಿ, ಕೋಮಲ ಇತ್ಯಾದಿ ಇತ್ಯಾದಿ ಅನುಭಗಳ ನಂತರ ಭಾರತವನ್ನು ಹಿಂದೆಂದೋ ಭೇಟಿ ಮಾಡಿರುವ ಈ ಆಂಗ್ಲ ಸಹೋದ್ಯೋಗಿಗಳು, ದೆಹಲಿಯಲ್ಲೋ, ಬೆಂಗಳೂರಿನಲ್ಲೋ ಆಟೋರಿಕ್ಷಾ ಪ್ರಯಾಣದಲ್ಲಿ ಉಸಿರು ಬಿಗಿಹಿಡಿದು ಕೂತಿದ್ದು, ವಾಹನ ದಟ್ಟಣೆಯ ರಸ್ತೆಗಳನ್ನು ನಡೆದು ದಾಟಲು ಪಟ್ಟ ಹರಸಾಹಸಗಳನ್ನು ನನ್ನ ಮುಂದಿಡುತ್ತಾರೆ. ಸುಂದರ ರಮಣೀಯ ಕಮನೀಯ ಎಂದು ನಾನು ಕೊಚ್ಚಿಕೊಳ್ಳುವ ನಾಡಿನ ರಾಜಧಾನಿ ದೆಹಲಿಯ ಪೇಟೆಯ ಧೂಳು ಮಾಲಿನ್ಯದ ನೆನಪು ಮಾಡಿಸುತ್ತಾರೆ. ಜೊತೆಗೆ, ಕೇರಳದ ಹಿನ್ನೀರಿನಲ್ಲಿ ಮಾಡಿದ ದೋಣಿ ವಿಹಾರ ಹಾಗು ತಿಂದ ಬಂಗುಡೆ ಫ್ರೈ ಇನ್ನೊಮ್ಮೆ ಎಂದು ಸಿಗುವೊದೋ ಎಂದು ಕನವರಿಸುತ್ತಾರೆ. ಮುಂಬಯಿಯ ಶಿಖರಸ್ವರೂಪಿ ಐಶಾರಾಮಿ ಕಟ್ಟಡಗಳು ಅದರ ಹತ್ತಿರದಲ್ಲೆ ಇರುವ ಕೊಳಚೆ ಪ್ರದೇಶಗಳ ಬಗ್ಗೆ ಹೇಳುತ್ತಾ ಭಾರತೀಯ ಸಾಮಾಜಿಕ ವ್ಯವಸ್ಥೆಯೊಳಗಿನ ವೈರುಧ್ಯ ಹಾಗು ಅಸಮತೋಲನದ ಬಗ್ಗೆ ಒಂದೆರಡು ವ್ಯಂಗ್ಯ ಮಾತಾಡಿ ಮತ್ತೆ ಭಾರತದ ಹಳ್ಳಿಗಳ ಪ್ರಶಾಂತಪರಿಸರವನ್ನು ಆಸ್ವಾದಿಸಿದ್ದರ ನೆನಪು ಮಾಡುತ್ತಾರೆ.

ನನ್ನ ಸುದ್ದಿ ಹಾಗು ಅವರ ಮೆಲಕುಗಳು ಒಂದನ್ನೊಂದು ಕೆಲವೊಮ್ಮೆ ಆಲಂಗಿಸುತ್ತ ಕೆಲವೊಮ್ಮೆ ದುರುಗುಟ್ಟುತ್ತ ಒಂದಕ್ಕೊಂದು ಸುತ್ತಿಟ್ಟ ಹೊಸ ಬಳ್ಳಿ ಹುಟ್ಟುತ್ತದೆ ಮತ್ತೆ ವರ್ಷದುದ್ದಕ್ಕೂ ಬೆಳೆಯುತ್ತಿರುತ್ತದೆ. ಪ್ರತಿವರ್ಷ ರಜೆ ಮುಗಿಸಿ ಮರಳಿದಾಗಲೂ ಈ ಬಳ್ಳಿಯಲ್ಲಿ ಹೊಸ ಟಿಸಿಲು ಹೊಮ್ಮುತ್ತದೆ. ನಾನು ನಿತ್ಯ ಕಾಣುವ ಬಳ್ಳಿಯ ಪರಿಚಯ ನಿಮಗೆ ನೀಡುತ್ತ ನಿಮ್ಮೊಡನೆ ಹರಟುತ್ತ ಸಮಯವೂ ಕಳೆದಿದೆ, ರಜೆಯೂ ಮುಗಿದಿದೆ; ರಜೆ ತುಂಬಿಸಿಕೊಂಡು ಬಂದಿದ್ದ ಚೀಲದ ಖಾಲಿಯೊಳಗಿನ ಮರವಂತೆಯ ಚಿತ್ರ ಶಬ್ದ ವಾಸನೆಗಳನ್ನು ಅರಸುತ್ತ, ಖಜಾನೆಯ ಒಳಗೆ ಕೈ ಇಳಿಸಿ ತಡಕಾಡುತ್ತಾ ಇನ್ನೊಂದು ರಜೆಗೆ ಕಾಯುತ್ತಿದ್ದೇನೆ.