ತೋಳ್ಪಾಡಿ ಭಾಗವತ 28:ಬಣ್ಣಕ್ಕೆ ಪರಿಮಳವೂ ಇರುವುದೆ?

ನಂದನ ಮಗ ಕೃಷ್ಣ ಬೆಟ್ಟವನ್ನೆತ್ತಿದನಂತೆ. ಆ ಬೆಟ್ಟದ ಅಡಿನೆರಳಿನಲ್ಲಿ ಗೋವಳರೆಲ್ಲ ನೆರೆದರಂತೆ. ಭೀಕರವಾಗಿ ಸುರಿದ ಮಳೆ, ಉಕ್ಕೇರಿದ ನೆರೆಯಿಂದ ಹಾಗೆ ನಾವು ಏನೂ ಹಾನಿಯಾಗದಂತೆ ಪಾರಾದರಂತೆ- ಎಂದು ಕಥೆ ಹಬ್ಬಿತು. ಮಳೆ, ನೆರೆಯ ಸುದ್ದಿ ಕಂಸನಿಗೂ ಮುಟ್ಟಿತ್ತು. ತಾನು ಮಾಡಲಾಗದೆ ಇದ್ದುದನ್ನು ಇಂದ್ರ- ಮಳೆಯ ದೊರೆ- ಮಾಡುತ್ತಿದ್ದಾನೆ ಎಂದುಕೊಂಡ. ಈಗ; ಗೋವರ್ಧನದ ನೆರಳಿನಲ್ಲಿ ಎಲ್ಲರೂ ಸುರಕ್ಷಿತವಾಗಿ ನೆರೆದಿದ್ದಾರೆ ಎಂದು ವಾರ್ತೆ. ಏನು? ಈ ಹಸು ಮೇಯಿಸುವ ಮಂದಿ ತಮ್ಮದೇ ಪಾಳೆಯಪಟ್ಟು ಮಾಡಿಕೊಳ್ಳುತ್ತಾರಂತೇನು?-ಎಂದು ಅಬ್ಬರಿಸಿದ ಮಥುರೆಯ ದೊರೆ. ಅದೇನೋ ತಿಳಿಯದು; ಆದರೆ, ಆ ಹುಡುಗನಲ್ಲಿ ಗೋವಳರು ತಮ್ಮ ನಾಯಕನನ್ನು ಕಂಡುಕೊಂಡದ್ದಂತೂ ನಿಜ ಎಂದರು ಸುದ್ದಿ ತಿಳಿದ ಅವನ ಪರಿವಾರದ ಜನ. ಅದಕ್ಕೇನು ಪುರಾವೆ? ಎಂದು ಕೇಳಿದ. ಮಳೆ ನಿಂತ ಮೇಲೆ; ಬೆಟ್ಟವನ್ನು ಇದ್ದಲ್ಲೇ ಇರಿಸಿದ ಮೇಲೆ, ಆ ಗೋವರ್ಧನದಲ್ಲೇ ಪಟ್ಟಾಭಿಷೇಕವನ್ನು ಕೃಷ್ಣನಿಗೆ ಮಾಡಿದರಂತೆ. ಇದೇ ಪುರಾವೆ ಎಂದರು. ಪಟ್ಟಾಭಿಷೇಕ? ಮಥುರೆಗೆ ತಿಳಿಸದೆ? ನಮ್ಮ ಒಪ್ಪಿಗೆ ಪಡೆಯದೆ? ಇದು ಕೈಮೀರುತ್ತಿದ್ದೆ ಎಂದು ಕಂಸ ಬುಸುಗುಟ್ಟಿದ. ಗೋಕುಲಕ್ಕೆ; ವೃಂದಾವನಕ್ಕೆ ಕಳುಹಿಸಿಕೊಟ್ಟ ನಮ್ಮ ಜನರೆಲ್ಲ ವಿಫಲರಾದರು. ಆ ಗುಂಪೇ ಕರಗಿ ಹೋಯಿತು. ಪೂತನೆಯಿಂದ ತೊಡಗಿ, ಶಕಟ, ಕೇಶಿ, ತೃಣಾವರ್ತ, ಧೇನುಕ ಇತ್ಯಾದಿ ಬಿರುದಾಂಕಿತರೆಲ್ಲ ಆ ಹುಡುಗನಿಂದ ಅಸುನೀಗಿದರು! ಈ ಬಗ್ಗೆ ಕಥೆಗಳೇ ಹುಟ್ಟಿಕೊಂಡವು! ಈ ಕಥೆಗಳೇ ಭಯಾನಕ! ನಿಜಕ್ಕಾದರೆ, ಈ ಕಥೆಗಳೇ ತನ್ನನ್ನು ಕೊಲ್ಲುತ್ತಿವೆ ಎಂದು ಕಂಸ ತನ್ನೊಳಗೇ ನಲುಗಿದ. ಈ ಕಥೆಗಳು ಹುಟ್ಟದಂತೆ ಮಾಡುವುದು ಹೇಗೆ? ಆ ಜನಗಳ ಬಾಯಿ ಕಟ್ಟುವುದು ಹೇಗೆ? ಕೃಷ್ಣನ ಕಥೆಯನ್ನು ಲಾವಣಿ ಮಾಡುತ್ತ ಹಾಡಿಕೊಳ್ಳುವ ಈ ಲಾವಣ್ಯವತಿಯರಿದ್ದಾರಲ್ಲ- ಇವರ ಹಾಡನ್ನು ತಡೆಯುವುದು ಹೇಗೆ?- ಕಂಸನಿಗೆ ಹೆಂಗಸರೆಂಬವರ ಮೇಲೆಯೇ ಕೋಪ ಮಸಗುತ್ತಿತ್ತು. ಆ ಹುಡುಗನನ್ನೇ ಮಥುರೆಗೆ ಬರುವಂತೆ ಮಾಡಿ ಎಂದ. ಇಲ್ಲೇ ಬಲಿ ಹಾಕೋಣ ಎಂದ. ಬರುವಂತೆ ಮಾಡಲು ಇಲ್ಲಿ ಬಿಲ್ಲಹಬ್ಬದ ನೆವವನ್ನು ರೂಪಿಸಿ ಎಂದ. ಮಥುರೆಗೆ ಕಾಲಿಟ್ಟ ಕೂಡಲೇ ಅವನ ಅರ್ಧ ಬಲ ಕುಸಿದು ಹೋಗುತ್ತೆ ನೋಡುತ್ತಿರಿ ಎಂದ. ಇದು ನಗರ; ದೊಡ್ಡ ಸೆರೆಮನೆಗಳಿರುವ ಮಹಾನಗರ. ಇಲ್ಲಿ ಆ ಹಸು ಮೇಯಿಸುವವರ ಹುಡುಗನಿಗೆ ದಾರಿತಪ್ಪದೆ ಇರುತ್ತದೆಯೇ? ಎಂದುಕೊಂಡ. ಅದನ್ನೇ ಅಕ್ರೂರನಲ್ಲಿ ಹೇಳಿದ.

ಅಕ್ರೂರನಿಗೆ ಒಳಗೇ ನಗುಬಂತು. ತೋರಿಸಲಿಲ್ಲ. ನಗು ಏಕೆಂದರೆ ಸ್ವಯಂ ಕಂಸನೇ ಕೃಷ್ಣನ ಕಥೆಯನ್ನು ನಂಬಿದವರಲ್ಲಿ ಮೊದಲಿಗನಾಗಿದ್ದ. ದೇವಕಿಯ ಎಂಟನೆಯ ಮಗುವಿನಿಂದ ನಿನಗೆ ಮೃತ್ಯು ಎಂದುಸಿರಿದ ಅಶರೀರವಾಣಿಯನ್ನು ಕಂಸನೇಕೆ ನಂಬಬೇಕಿತ್ತು? ಎಂಟನೆಯ ಮಗು ಎಂದ ಮೇಲೆ ಅದು ದೂರದ ಭವಿಷ್ಯವಾಗಿತ್ತು. ಅಲ್ಲದೆ, ಆ ವಾಣಿಗೆ ಎಷ್ಟು ಬಗೆಯ ವ್ಯಾಖ್ಯಾನಗಳು ಸಾಧ್ಯವಿತ್ತು! ತನ್ನ ಮೃತ್ಯು ಎಂದ ಮೇಲೆ ಆ ತನ್ನ ಅಳಿಯ ತನ್ನ ಪರಮ ಶತ್ರುವೆಂಬ ಒಂದೇ ವ್ಯಾಖ್ಯಾನವನ್ನು ಕಂಸ ನಂಬಿಬಿಟ್ಟ. ಈಗ ಕಥೆ ಇಲ್ಲಿಯತನಕ ಬಂದಿದೆ! ಅಕ್ರೂರನಿಗೆ ಆಶ್ಚರ್ಯವಾಯಿತು. ಕಥೆಯಲ್ಲಿ ಕೃಷ್ಣನ ಪಾತ್ರ ಅನೇಕ ಮುಖಗಳಲ್ಲಿ ಅರಳಿಕೊಳ್ಳುತ್ತಿದೆ. ಬೆಳೆಯುತ್ತಿದೆ. ಆ ಪಾತ್ರದ ಬಗ್ಗೆ ಮೊದಲು ಕೇಳಿದವ ಈಗ ತಾನವನನ್ನು ನಂಬುವುದಿಲ್ಲ ಎನ್ನುತ್ತಿದ್ದಾನೆ! ಒಂದು ಪಾತ್ರ ಇನ್ನೊಂದು ಪಾತ್ರವನ್ನು ನಂಬುವುದಿಲ್ಲ. ನಂಬುವುದಿಲ್ಲ ಎಂದು ಗಟ್ಟಿಯಾಗಿ ಹೇಳುತ್ತಿರುವುದೇ ನಂಬಿರುವುದಕ್ಕೆ ಸಾಕ್ಷಿ! ಎನ್ನುವುದು ಅಕ್ರೂರನಿಗೆ ತಿಳಿದಿತ್ತು. ನಂಬಿದರೂ ಸಂಘರ್ಷವಿಲ್ಲ. ನಂಬದಿದ್ದರೂ ಸಂಘರ್ಷವಿಲ್ಲ. ನಂಬಿ- ನಂಬಲಾರೆನೆಂದರೆ, ನಂಬದೆ- ನಂಬಿದೆನೆಂದರೆ ಸಂಘರ್ಷ ತಪ್ಪಿದ್ದಲ್ಲ. ಪ್ರಾಯ: ಇಂಥ ದ್ವಂದ್ವದಲ್ಲಿ ನುಗ್ಗುನುರಿಯಾಗಿಯೇ ಮನುಷ್ಯ ಪ್ರಜ್ಞೆ ನಿಜವನ್ನು ತಿಳಿಯಬೇಕಿದೆ. ಇದೇನೋ ಒಪ್ಪಬಹುದಾದುದೆನ್ನಿಸಿದರೂ ಇತಿಹಾಸದುದ್ದಕ್ಕೆ ನಡೆದ ಈ ಸಂಘರ್ಷದಲ್ಲಿ ಎಷ್ಟೊಂದು ಅಮಾಯಕರ ಬಲಿ! ಅಕ್ರೂರನಿಗೆ ಅರ್ಥವಾಗಲಿಲ್ಲ. ಇದ್ದಕಿದ್ದಂತೆ ಅವನ ಮನಸ್ಸು ಪರಮ ವಿನೀತವಾಯಿತು. ವೃಂದಾವನದಿಂದ ರಾಮಕೃಷ್ಣರನ್ನು ಮಥುರೆಗೆ ಕರೆತರಲು ಕಂಸ ತನ್ನನ್ನು ಆಯ್ಕೆ ಮಾಡಿದ್ದ! ಕೃಷ್ಣನ ಕಥೆ ಅಕ್ರೂರನ ಕಿವಿ ಮುಟ್ಟುತ್ತಿತ್ತು. ಅದನ್ನು ಕೇಳುತ್ತಿದ್ದಂತೆ ಕಂಸ, ಕೃಷ್ಣರ ನಡುವಣ ಅಂತರ ತಿಳಿಯುತ್ತಿತ್ತು. ತನ್ನ ತಂದೆಯನ್ನೇ ಸೆರೆಯಲ್ಲಿಟ್ಟಿರುವ ಕಂಸನೆಲ್ಲಿ! ಎಲ್ಲರ ಮಗುವಿನಂತಿರುವ ಕೃಷ್ಣನೆಲ್ಲಿ! ಎಂಟರ ಹುಡುಗನ ನಾಯಕತ್ವವನ್ನು ಒಪ್ಪುವ ಗೋವಳರ ಅರಿವು ಅಸಾಧಾರಣವಾದುದೆಂದು ಅವನಿಗೆ ಅನ್ನಿಸಿತು. ಕಂಸನಂಥವನ ದಬ್ಬಾಳಿಕೆಯನ್ನು ಮೂಕರಂತೆ ಸಹಿಸುವ ತಾನು ತನ್ನಂಥವರನ್ನು ಅರಿವು ಉಳ್ಳವರೆನ್ನಬಹುದೆ? ಕಂಸನ ಪರಿವಾರದಲ್ಲೇ ಇದ್ದರೂ ಕಂಸನ ನಾಯಕತ್ವಕ್ಕೆ ತಾನು ಒಳಗೊಳಗೇ ಹೇಸಿದ್ದ. ಕೃಷ್ಣನನ್ನು ಒಪ್ಪುವುದೇ ಮಥುರೆಯಲ್ಲಿ ನಾಯಕತ್ವದ ಬದಲಾವಣೆಯನ್ನು ಬಯಸಿದಂತೆ ಎಂದು ಹೊಳೆದು ಇತಿಹಾಸದ ಮಹಾನಾಟಕದಲ್ಲಿ ತಾನೂ ಪಾತ್ರವಾಗಿರುವ ರೋಮಾಂಚನವೊಂದು ಮೂಡಿತು. ಹಾಗೆ ಅಕ್ರೂರ, ಸೆರೆಯಲ್ಲಿರುವ ವಸುದೇವ ದೇವಕಿಯರಿಗೆ ನೆರವಾಗುತ್ತಿದ್ದ. ಮಗು ಕೃಷ್ಣನನ್ನು ಸೆರೆಮನೆಯಿಂದ ಗೋಕುಲಕ್ಕೆ ವಸುದೇವ ಕೊಂಡೊಯ್ದ ಸಂಗತಿ ಅವನಿಗೆ ವಸುದೇವನಿಂದಲೇ ತಿಳಿದಿತ್ತು. ಈಗ ತಾನು ಅದೇ ಕೃಷ್ಣನನ್ನು ಮರಳಿ ಮಥುರೆಗೆ ಕರೆತರಲು ಹೊರಟಿದ್ದೇನೆ. ಅಕ್ರೂರನಲ್ಲಿ ಕೃಷ್ಣನ ಬಗ್ಗೆ ವಾತ್ಸಲ್ಯ ಉಕ್ಕಿತು.

‘ಬಿಲ್ಲ ಹಬ್ಬ’ ಎನ್ನುವುದು ಒಂದು ನೆಪ. ಎಲ್ಲ ಜನಪದರೂ ಮಥುರೆಯಲ್ಲಿ ಬಂದು ಸೇರುತ್ತಾರೆ. ಈ ಹಬ್ಬಕ್ಕಾಗಿ. ಅಂದರೆ ಎಲ್ಲರ ಮುಂದೆ ನಡೆಯಲಿದೆ ಕೃಷ್ಣ-ಕಂಸರ ಮುಖಾಮುಖಿ. ಇತಿಹಾಸ ಸೃಷ್ಟಿಯಾಗುತ್ತೆ. ಎಲ್ಲರ ಮುಂದೆ ಕೃಷ್ಣನ ನಾಯಕತ್ವ ತೋರಿಬರಲಿದೆ. ಅಶರೀರವಾಣಿ ಎಲ್ಲರ ಮುಂದೆ ನಿಜವಾಗಲಿದೆ. ಇದು ಗೋವಳರು ಕೃಷ್ಣನಿಗೆ ಇನ್ನೊಮ್ಮೆ ಪಟ್ಟಾಭಿಷೇಕ ಮಾಡಿದಂತೆಯೇ ಸರಿ. ಕಂಸನೇ ಇಂಥದೊಂದು ನಾಟಕಕ್ಕೆ ರಂಗವನ್ನು ಸಜ್ಜುಮಾಡುತ್ತಿದ್ದಾನೆ- ಕೃಷ್ಣನು ಕಥಾ ನಾಯಕನಲ್ಲ ಎಂದು ಹೇಳುತ್ತಲೇ. ದೈವದ ತಂತ್ರಕ್ಕೆ ಅಕ್ರೂರನಿಗೆ ಬೆರಗಾಯಿತು. ದೈವಕ್ಕೆ ಬೇಕಾದುದನ್ನೇ ಕಂಸ ನಡೆಸುತ್ತಿದ್ದಾನೆ. ಕಂಸನ ಚಿತ್ತವೇ ದೈವಚಿತ್ತವಾಗಿದೆ. ದೈವ, ಕಂಸನನ್ನು ಪರೋಕ್ಷವಾಗಿ ನಾಶ ಮಾಡುತ್ತೆ ಎಂದರೆ ಕಂಸ ತನ್ನ ನಾಶವನ್ನು ತಾನೇ ಮಾಡಿಕೊಂಡಂತೆ ಎಂದಂತೆ ಕೂಡ. ದೈವದ ಮೂಲಕ ತನಗೆ ಬೇಕಾದುದನ್ನು ಸಾಧಿಸಿಕೊಳ್ಳಬಹುದೆನ್ನುತ್ತಾನೆ- ಮಾನವ. ನಿಜಕ್ಕಾದರೆ, ತನಗೆ ಬೇಕಾದುದನ್ನು ದೈವವೇ ಮಾನವನ ಮೂಲಕ ಸಾಧಿಸಿಕೊಳ್ಳುತ್ತಿದೆ. ಮಾನವನ ನಾಶವನ್ನು ಕೂಡ. ಅಕ್ರೂರನಿಗೆ ಒಂದು ಕ್ಷಣ ಮೈ ನಡುಗಿತು. ನಾಶವೆಂದರೆ ಹೊಸ ಹುಟ್ಟು ಎಂದು ಹೊಳೆಯಿತು. ಅಕ್ರೂರ ಕುದುರೆಗಳಿಗೆ ಚಾಟಿ ಬೀಸಿ ರಥದ ವೇಗವನ್ನು ಹೆಚ್ಚಿಸಿದ.

ಅಕ್ರೂರನ ರಥ ವೃಂದಾವನವನ್ನು ತಲಪಿತು. ಹುಡುಗರೆಲ್ಲ ಗುಂಪುಗೂಡಿದರು. ಹಿರಿಯರಿಗೆ ಆತಂಕ. ಗೋಪಿಕೆಯರ ಎದೆ ಬಡಿತ ಹೆಚ್ಚಿತು. ಎಲ್ಲರಿಗಿಂತ ಮುನ್ನ, ಯಾರೂ ಹೇಳದೇ, ಗೋಪಿಕೆಯರಿಗೆ ತಿಳಿಯಿತು. ಇದು ಕೃಷ್ಣನನ್ನು ಒಯ್ಯಲು ಬಂದ ರಥ! ಎಂಥ ವಿಚಿತ್ರವಿದು; ತಿಳುವಳಿಕೆಯ ಈ ತಿರುವುಗಳು! ನಾವು ಬಹುವಾಗಿ ಪ್ರೀತಿಸುವ ವಸ್ತುವಿಗೆ ಲೋಕದ ‘ದೃಷ್ಟಿ’ಯಾಗಿ ಬಿಡುತ್ತೆ ಎಂಬ ತಿಳುವಳಿಕೆ. ನಮಗೆ ಬೇಕಾದುದಕ್ಕೆ ಹೊಂಚುವವರು ಬಹಳ ಜನ ಇರುತ್ತಾರೆ ಎಂಬ ತಿಳುವಳಿಕೆ. ಪ್ರೀತಿಯ ಜೊತೆಗೇ ವಿರಹದ ಕಾಣ್ಕೆ. ಪ್ರೀತಿಯೇ ವಿರಹದ ಸಿದ್ಧತೆ! ಇಡಿಯ ಲೋಕಕ್ಕೆ ಸಂಬಂಧಿಸಿದ ವಸ್ತುವನ್ನೇ ನಾವು ಉತ್ಕಟವಾಗಿ ಬಯಸಿ ಕೈಗೆತ್ತಿಕೊಳ್ಳುವುದೇನು?

ಅಕ್ರೂರನಲ್ಲ; ಇವನು ಮಹಾಕ್ರೂರ ಎಂದುಕೊಂಡರಂತೆ ಗೋಪಿಕೆಯರು. ಇನ್ನು ಮಥುರೆ ಎಂಬ ಆ ರಾಜಧಾನಿಯಲ್ಲಿ ನಮ್ಮ ನೀಲ ಬಣ್ಣದ ಹುಡುಗನನ್ನು ಎದೆಯ ಮೇಲೆತ್ತಿಕೊಳ್ಳುವ ಹುಡುಗಿಯರೆಷ್ಟೋ ಎಂದು ಹಳಹಳಿಸಿದರಂತೆ. ಹಾಗೆ ಮಥುರೆಯಲ್ಲಿ ಗೋಪಿಕೆಯರಿರುವ ಕನಸನ್ನು ಗೋಪಿಕೆಯರೇ ಮೊದಲು ಕಂಡರು. ಕೃಷ್ಣ ತಾನೇ ಗೋಪಿಕೆಯರ ಬಳಿ ಬಂದ. ಅವರ ಕೈಹಿಡಿದುಕೊಂಡು ಅಷ್ಟು ಹೊತ್ತು ಸುಮ್ಮನೆ ನಿಂತ. ಕಂಬನಿಗೆ ಗಲ್ಲ ಒದ್ದೆಯಾದವು ಗೋಪಿಕೆಯರಿಗೆ. ಕೃಷ್ಣ ಹೇಳಿದನಂತೆ: ನನ್ನ ತಾಯ ಬಳಿ, ತಂದೆಯ ಬಳಿ ನನ್ನನ್ನು ಕಳುಹಿಸಿಕೊಡಬೇಕಾದವರು ನೀವು. ನಿಮ್ಮ ಒಪ್ಪಿಗೆ ಇದ್ದರೆ ಅಲ್ಲಿ ತಾಯ ಬಳಿ ಸುಖವಾಗಿರಬಲ್ಲೆ. ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡಲೇ ಬೇಕಲ್ಲವೆ- ಅದರದ್ದೇ ಇನ್ನೊಂದು ಮುಖವಿದು. ವಿದಾಯವೇ ಬದುಕಿನ ನಿಜ. ಅದನ್ನೊಪ್ಪುವುದೇ ಅರಿವು.

ಸಹಿಸಿಕೊಳ್ಳುವುದು ಹೇಗೆ ಎಂದು ಎಲ್ಲರೂ ಒಟ್ಟಾಗಿ ಉಲಿದರಂತೆ ಗೋಪಿಕೆಯರು.

ಕೃಷ್ಣ ಹೇಳಿದ: ನಮ್ಮ ಒಳಗಿನ ನಿಜ ನಮ್ಮನ್ನು ಹೇಗೆ ಸಹಿಸಿಕೊಂಡಿದೆ ಗೊತ್ತೇನು? ಆ ಒಳಗಿನ ನಿಜವನ್ನು ಬೇಕಾದರೆ ದೇವರೆನ್ನಿ. ಅದು ಈ ಲೋಕಕ್ಕೆ ನಮ್ಮನ್ನು ಒಪ್ಪಿಸಿ ತಾನು ಸದಾ ವಿದಾಯದ ಭಾವದಲ್ಲಿ ಇರುವಂತಿದೆ. ಸತ್ಯ ಅಡಗಿದೆ ಎನ್ನುತ್ತಾರಲ್ಲ- ತಿಳಿದಮಂದಿ. ಅಡಗಿದೆ ಎಂದರೆ ಸತ್ಯ ನಮ್ಮ ವಿರಹವನ್ನು ಅನುಭವಿಸುತ್ತಿದೆ. ನಮ್ಮನ್ನು ಅದಕ್ಕೆ ಒಪ್ಪಿಸದೆ ನಾವದನ್ನು ಪಡೆಯಲಾರೆವು. ಮತ್ತು ಒಪ್ಪಿಸುವುದೆಂದರೆ ನಮಗೆ ನಾವೇ ವಿದಾಯವನ್ನು ಕೋರಿದಂತೆ. ಅದಿರಲಿ; ನಿಮ್ಮ ವಿರಹ ನನ್ನನ್ನು ಎಂದೂ ಬಿಟ್ಟಗಲುವುದಿಲ್ಲ- ಎಂದು ಹೇಳುತ್ತ ಕೃಷ್ಣ ಉಡಿಯ ಪೀತಾಂಬರದಲ್ಲಿ ಸಿಕ್ಕಿಸಿಕೊಂಡಿದ್ದ ಕೊಳಲನ್ನು ಕೈಗೆತ್ತಿಕೊಂಡ. ನುಡಿಸುತ್ತಾನೇನೋ ಎಂದುಕೊಂಡರು ಗೋಪಿಯರು. ಎಲ್ಲರೂ ಕೈಚಾಚಿ ಎಂದ. ಚಾಚಿದರು. ತನ್ನ ಕೊಳಲನ್ನು ಅವರ ಅಂಗೈಗಳಲ್ಲಿಟ್ಟು ಹೇಳಿದ: ಇನ್ನು ಕೊಳಲು ನುಡಿಸಲಾರೆ. ಎಲ್ಲರೂ ಕೇಳಲಿ ನಿನ್ನ ಕೊಳಲು ಎಂದು ಅದು ದೊಡ್ಡ ಮಾತೆಂದು ಆಡಬೇಡಿ. ಆ ದೊಡ್ಡ ಮಾತು ಹುಸಿ. ನನ್ನ ಕೊಳಲು ನಿಮಗೆ ಮೀಸಲು.

ಗೋಪಿಯರು ಕರಗಿ ಹೋದರು. ಬಿದಿರ ಹಸಿರು ಮೆಳೆಗಳು ತಲೆದೂಗಿದವು. ಸ್ತಬ್ದರಾಗಿ ಗೋಪಿಯರು ನೋಡುತ್ತಿದ್ದಂತೆ ಕೃಷ್ಣನನ್ನು ಬಲರಾಮನನ್ನೂ ಏರಿಸಿಕೊಂಡು ಅಕ್ರೂರನ ರಥ ಮಥುರೆಯತ್ತ ಓಡಿತು. ಪ್ರಯಾಣದ ಉದ್ದಕ್ಕೂ ಕೃಷ್ಣ ಅಕ್ರೂರನನ್ನು ನಕ್ಕು ನಗಿಸುತ್ತಲೇ ಇದ್ದ. ತಾನೇ ರಥ ಹೊಡೆಯಲೇ ಎಂದು ಕೇಳುತ್ತಿದ್ದ. ಕುದುರೆಗಳ ಬೆನ್ನ ಮೇಲೆ ಕೆಲವು ಸ್ಪರ್ಶ ಬಿಂದುಗಳಿವೆ. ಅಲ್ಲಿ ಉತ್ತೇಜಿಸಿದರೆ ಸಾಕು, ಕಸುವಿನಿಂದ ಓಡುತ್ತವೆ. ಚಾಟಿ ಬೀಸಿ ಹೊಡೆಯಬೇಕಿಲ್ಲ ಎನ್ನುತ್ತಿದ್ದ. ಮಥುರೆಯಲ್ಲಿ ನಿನ್ನ ಕಥೆ ಜನಜನಿತವಾಗಿ ಬಿಟ್ಟಿದೆ ಎಂದು ಅಕ್ರೂರ ಹೇಳಿದ್ದಕ್ಕೆ- ನಾನು ಬರುವ ಮೊದಲೇ ನನ್ನ ಕಥೆ ಮುಟ್ಟಿ ಬಿಟ್ಟಿದೆ; ಇನ್ನು ನನ್ನ ಕೆಲಸ ಸುಗಮವಾಯಿತು ಎನ್ನುತ್ತಿದ್ದ. ಕೃಷ್ಣನ ಈ ಜೀವನ ಸಮೃದ್ಧಿ ಅಕ್ರೂರನನ್ನು ಮುಟ್ಟಿ ಚಕಿತಗೊಳಿಸುತ್ತಿತ್ತು. ಈತ ದೇವರೇ ನಿಜ ಎಂದುಕೊಂಡ. ಮಗು ಕೃಷ್ಣನನ್ನು ವಸುದೇವ ಗೋಕುಲಕ್ಕೆ ಒಯ್ದ ಸಂಗತಿಯನ್ನು ಅಕ್ರೂರ ಪ್ರಸ್ತಾವಿಸಿದಾಗ ಕೃಷ್ಣ ಹೇಳಿದ: ಹೌದಲ್ಲ. ನಾನು ಕಿತ್ತು ನೆಟ್ಟ ಸಸಿ. ನಮ್ಮಣ್ಣನೂ ಹಾಗೆಯೇ ಅಂತೆ. “ಕಿತ್ತು ನೆಟ್ಟ ಸಸಿಗೆ ಅದ್ಭುತವಾದ ಫಲಸಮೃದ್ಧಿ; ಜೀವನ ಸಮೃದ್ಧಿಯಂತೆ. ಎಂದು ಕಣ್ಣು ಮಿಟುಕಿಸಿದ. ಅದೇಕೆ ಹಾಗೆ ಎಂದು ಅಕ್ರೂರ ಕೇಳಿದ. ಏಕೆಂದರೆ, ಒಮ್ಮೆ ಕಿತ್ತು ನೆಟ್ಟ ಸಸಿಯ ಮನದಾಳದಲ್ಲಿ ಸದಾ ಜೀವನ್ಮರಣ ಸಾಂಗತ್ಯ. ಈ ಬದುಕು ಸಾವಿನೊಂದಿಗೆ ಸದಾ ತಳಕು ಹಾಕಿಕೊಂಡಿರುವ ಅನುಭವ. ಈ ಅನುಭವದಿಂದಾಗಿ, ಬದುಕಿಗೆ, ಕೊಟ್ಟು ಹೋಗಬೇಕಾದುದನ್ನೆಲ್ಲ ಕೊಟ್ಟು ಹೋಗಬೇಕೆಂಬ, ಮಾಡಬೇಕಾದುದನ್ನೆಲ್ಲ ಮಾಡಿ ಮುಗಿಸಿ ಬಿಡಬೇಕೆಂಬ ತವಕ. ಕರ್ಮೋತ್ಸಾಹ. ನನ್ನದೆಲ್ಲವೂ ವೇಗ; ಅವಸರವಸರವಲ್ಲವೆ? ಎಂದು ಮತ್ತೆ ಮೋಹಕವಾಗಿ ನಕ್ಕ ಕೃಷ್ಣ. ಕಿತ್ತು ನೆಟ್ಟ ಸಸಿ ಎಂಬ ಮಾತಿಗೆ, ‘ಅವತಾರ’ ಎಂಬ ಪ್ರತಿ ಮಾತೊಂದು ಅಕ್ರೂರನಿಗೆ ಹೊಳೆಯಿತು! ಅವನು ಅದನ್ನು ಹೇಳಲಿಲ್ಲ.

ಕೃಷ್ಣ ಮತ್ತೆ ಹೇಳಿದ: ನಮ್ಮ ಮಾವ ಕಂಸನಿಗೆ ಸಾವಿನ ಭಯದಿಂದಲೇ ಸಾವು ಅನ್ನಿಸುತ್ತೆ. ಅಶರೀರವಾಣಿ ಆಯಿತಂತಲ್ಲ, ಅ ಶರೀರವಾಣಿ. ಅದನ್ನು ಕೇಳಿ ಮಾವ ಕಂಗೆಟ್ಟನಂತೆ. ಅಂದರೆ, ಅವನನ್ನು ಕೊಲ್ಲಲು ಬೇರೆ ಇನ್ನೊಂದು ಶರೀರವೇ ಬೇಕಿಲ್ಲ ಎಂದಂತಾಯಿತು; ಅವನ ಶರೀರವೇ ಅವನನ್ನು ಕೊಲ್ಲುತ್ತದೆ ಎಂದಂತಾಯಿತು. ಮಥುರೆಯ ಗಡಿ ಬಂದಿತ್ತು. ಅಕ್ರೂರನಿಗೆ ಸೋಜಿಗವಾಯಿತು. ಅವನ ಮನಸ್ಸಿನಲ್ಲಿ ಕಂಸನ ಸಾವು ಸಂಭವಿಸಿಬಿಟ್ಟಿತ್ತು. ಕಂಸನನ್ನು ಮುಟ್ಟದೆ, ಅಶರೀರಿಯಾಗಿಯೇ ಕೃಷ್ಣ ಅದನ್ನು ಸಾಧಿಸಿಬಿಟ್ಟಿದ್ದ. ಇವನ ಮಾತೆಲ್ಲ ಅಶರೀರವಾಣಿಯಂತೆಯೇ ಇದೆ ಎಂದುಕೊಳ್ಳುತ್ತ ಅಕ್ರೂರ, ರಾಮ-ಕೃಷ್ಣರಿಗೆ ಹಸ್ತಲಾಘವನ್ನಿತ್ತು ಮಥುರೆಯ ಮಣ್ಣಲ್ಲಿ ಇಳಿಸಿದ. ಸ್ವಯಂ ಅಕ್ರೂರನೇ ಊಹಿಸಿರಲಿಲ್ಲ. ಮಥುರೆಯಲ್ಲಿ ಇಂಥದೊಂದು ಸ್ವಾಗತ ಹುಡುಗರಿಗೆ ಕಾದಿರುತ್ತದೆ ಎಂದು. ಮನೆಯ ಉಪ್ಪರಿಗೆಗಳಲ್ಲಿ ಜನ ನೆರೆದಿದ್ದರು. ಹೆಂಗಸರು ಹಿಡಿತುಂಬ ಹೂ ಎರಚುತ್ತಿದ್ದರು. ಹಾದಿಯಲ್ಲೆಲ್ಲ ಹೂ ಚೆಲ್ಲಿತ್ತು. ಮನೆಯ ಮುಂದೆ ರಂಗವಲ್ಲಿಗಳಿದ್ದವು. ಬಾಗಿಲಲ್ಲಿ ಬಾಳೆಯ, ಮಾವಿನ ಸೊಪ್ಪಿನ ತೋರಣಗಳಿದ್ದವು. ಇದೆಲ್ಲ ಬಿಲ್ಲ ಹಬ್ಬದ ಸಂಭ್ರಮ ಎನ್ನುವುದು ತೋರಿಕೆಯ ಮಾತು. ಕೃಷ್ಣನಿಗೆ ಸ್ವಾಗತವಿದು ಎಂದು ಅಕ್ರೂರನಿಗೆ ಹೊಳೆಯಿತು. ಇಲ್ಲದಿದ್ದರೆ ಮನೆ ಮನೆಯ ಮಕ್ಕಳ ತಲೆಗೆ ನವಿಲಗರಿಯ ಸಿಂಗಾರ ಏಕಂತೆ!

ಮಥುರೆಯ ಬೀದಿಗಳಲ್ಲಿ ರಾಮ-ಕೃಷ್ಣರು ಬಿಜಮಾಡುತ್ತಿದ್ದಂತೆ ಕಂಸನಿಗೆ ವಾರ್ತೆ ಮುಟ್ಟಿತು. ಹೆಣ್ಣು ಮಕ್ಕಳು ಹೂ ಚೆಲ್ಲುತ್ತಿದ್ದಾರಂತೆ! ಕೆಸರೆರಚಬೇಕಿತ್ತು ಎಂದು ಯೋಚಿಸಿದ. ಆಗ ಕಂಸನ ಅರಮನೆಗೆ ಹೊರಟಿದ್ದಳು- ಗಂಧದ ಭರಣಿಗಳಲ್ಲಿ ಅಂಗರಾಗ, ಸುಗಂಧಗಳನ್ನು ಹೊತ್ತು ಆ ಹುಡುಗಿ. ಅವಳ ಹೆಸರೇ ತಿಳಿಯದು; ತ್ರಿವಕ್ರೆ ಎನ್ನುವರು; ಕುಬ್ಜೆ ಎನ್ನುವರು ಮಂದಿ. ಹಾಗೆ ಇದ್ದಳಾಕೆ. ದೇಹವೆಲ್ಲ ಡೊಂಕು ಡೊಂಕು. ಮನದಲ್ಲಿ ಅಪಾರ ಕೀಳರಿಮೆ, ಕೊರಗು. ಬೆರಳುಗಳು ಡೊಂಕಾದರೇನು?  ಅಂಗರಾಗವನ್ನು ಪೂಸುವ ಎಂಥ ಕಲೆ ಇತ್ತು ಆ ಕೈಗಳಲ್ಲಿ- ಅದು ಯಾರಿಗೂ ತಿಳಿದಿರಲಿಲ್ಲ.  ಯಾರಿಗೂ ಬೇಕಿಲ್ಲ. ಹುಡುಗಿ ಕೃಷ್ಣನ ಬಗ್ಗೆ ಕೇಳಿದ್ದಳು. ಅದೊಂದು ಪದಪುಂಜ ಅವಳ ಎದೆಯಲ್ಲಿ ಮನೆ ಮಾಡಿತ್ತು. ಚಂದನ ಚರ್ಚಿತ ನೀಲಕಲೇವರ, ಪೀತವಸನ ವನಮಾಲೀ ಚಂದನವನ್ನು ಪೂಸಿದ ನೀಲ ನಸು ಬಣ್ಣದ ದೇಹ, ಹಳದಿಯ ಬಟ್ಟೆ; ಕೊರಳಲ್ಲಿ ಕಾಡು ಹೂಗಳ ಹಾರ ತೊಟ್ಟವನು!  ಇಂಥವನ ಮೈಗೆ ತಾನು ಒಮ್ಮೆ, ಒಮ್ಮೆಯಾದರೂ ಈ ಬದುಕಿನಲ್ಲಿ, ತಾನೇ ಸಿದ್ಧಪಡಿಸಿದ ಚಂದನದ ಅಂಗರಾಗ ಪೂಸಬೇಕೆಂಬಾಸೆ- ತನ್ನ ಕಲೆಗಾಗಿಯೇ ಆ ಪದಪುಂಜ ಸೃಷ್ಟಿಯಾದಂತೆ- ಕೃಷ್ಣವರ್ಣರಂಜಿತ ಹುಡುಗ. ಎಂದು ಆಗಾಗ್ಗೆ ತನ್ನಲ್ಲೇ ಅಂದುಕೊಳ್ಳುವಳು. ಬಣ್ಣಗಳಿಗೆ ಗಂಧ ಇರುವುದೂ ಅವಳಿಗೆ ತಿಳಿದಿತ್ತು. ಕಣ್ಣುಗಳಿಂದಲೇ ಮೂಸುವುದಕ್ಕಾಗುತ್ತೆ ಎನ್ನುವುದೂ ತಿಳಿದಿತ್ತು. ಹಳದಿಯ ಬಟ್ಟೆಯುಟ್ಟವನಂತೆ ಎನ್ನುವ ನೆನಪಾದಾಗ ಬಟ್ಟೆ ಏಕಂತೆ, ತಾನು ಹಳದಿಯ ಬಣ್ಣದ ಗಂಧವನ್ನು ಅವನುಡುವ ಪೀತಾಂಬರದಂತೆಯೇ ಅವನಿಗೆ ಪೂಸಿ, ಉಡಿಸಬಲ್ಲೆ ಎಂದು ತುಂಟನಗು ತನ್ನಲ್ಲೇ ನಗುವಳು.  ನೋಡುತ್ತಾಳೆ; ಇದ್ದಕಿದ್ದಂತೆ ಅವಳ ಎದೆ ಬಡಿತ ನಿಂತಂತಾಯಿತು. ಅದೇ ಹುಡುಗ- ಅದೇ ಪದಪುಂಜದ ವರ್ಣಮಯ ಸಾಕಾರರೂಪ ತನ್ನೆದುರು ನಡೆದು ಬರುತ್ತಿದೆ. ಪೀತಾಂಬರದ ನೆರಿಗೆ ಸರಿಪಡಿಸಿಕೊಳ್ಳುತ್ತಿರುವಂತೆ ತನ್ನನ್ನೇ ನೋಡುತ್ತಿದ್ದಾನೆ. ಏನು ತನ್ನ ಮನದ ಮಾತು ಅವನಿಗೆ ತಿಳಿಯಿತೇನೋ!

ತ್ರಿವಕ್ರೆ ಮೊದಲ ಬಾರಿಗೆ ಉತ್ಕಟವಾಗಿ ನಾಚಿಕೊಂಡಳು. ಅವನು ಹತ್ತಿರ ಬರುತ್ತಿದ್ದಾನೆ. ತಾನು ಹೊತ್ತ ಅಂಗರಾಗ ಸಾಮಗ್ರಿಯನ್ನು ಗಟ್ಟಿಯಾಗಿ ಹಿಡಿದುಕೊಂಡಳು. ಅವನು ಬಂದೇ ಬಂದ. ಈ ಹುಡುಗ ಅವಳನ್ನು ನೋಡಿದಂತೆ ಇದುವರೆಗೆ ಯಾರೂ ಅವಳನ್ನು ನೋಡಿರಲಿಲ್ಲ. ಆ ನೋಟದಲ್ಲಿ ಮಮತೆ, ಕರುಣೆ, ಪ್ರೀತಿ- ಕಣ್ಣ ಕೊನೆಯಲ್ಲಿ ತುಂಟ ಶೃಂಗಾರವೂ ಇದೆಯೇನು! ಎಲ್ಲ ಸಜ್ಜನರೂ ಅವಳನ್ನು ಅದೊಂದು ಅನುಕಂಪದಿಂದ ಎಂಬಂತೆ ನೋಡಿದ್ದರು. ಈ ಹುಡುಗನ ಕಣ್ಣ ನೋಟದಲ್ಲಿ ಅನುಕಂಪದ ಭಾವವೇ ಇರಲಿಲ್ಲ! ಎಲ್ಲ ಜೀವಂತ! ಅದರ ಪ್ರಖರತೆಗೆ ತ್ರಿವಕ್ರೆ ತಲೆ ತಗ್ಗಿಸಿದಳು. ಕೃಷ್ಣ ಎಲ್ಲರ ನಡುವೆ ಈ ಗಂಧದ ಹುಡುಗಿಯನ್ನು ಮಾತನಾಡಿಸಿದ. ಸುತ್ತಲೆಲ್ಲ ಸುಗಂಧ ಹಬ್ಬಿದೆ; ಎಲ್ಲಿಗೆ ಈ ಗಂಧಯಾತ್ರೆ?

ಮಥುರೆಯ ಅರಮನೆಗೆ.

ಹೋ…. ನಾವೂ ಅಲ್ಲಿಗೇ ಹೊರಟಿರುವೆವು. ಅರಮನೆಗೆ ಹೋಗಬೇಕಾದರೆ ಗಂಧ ಹಚ್ಚಿಕೊಳ್ಳಬೇಕೇನು? ಗೊತ್ತೇ ಇರಲಿಲ್ಲ. ನಾವು ಹಸು ಮೇಯಹಿಸುವ ಮಂದಿಯಲ್ಲವೆ? ಹಾಗಾದರೆ ಸ್ವಲ್ಪ ಗಂಧದ್ರವ್ಯ ಕೊಡುತ್ತೀಯೇನು?

ಇಲ್ಲ;
ಒಂದುಪಕಾರ ಮಾಡು ಈ ಹಳ್ಳಿಯ ಹುಡುಗರಿಗೆ.
ಅದು ಕೊಡುವುದಕ್ಕೆ ಇದ್ದದ್ದಲ್ಲ.
ಮತ್ತೆ?
ಅದು ಪೂಸುವುದಕ್ಕೆ ಇದ್ದದ್ದು.
ಹಾಗಾದರೆ; ಹಾಗೆಯೇ ಮಾಡಲ್ಲ …. ….  …

ಓ ನನ್ನ ಕೃಷ್ಣ; ನೀನದನ್ನು ಕೇಳಬೇಕೇನು? ಎನ್ನುತ್ತ ಹುಡುಗಿ ಭಾವೋದ್ವೇಗಕ್ಕೆ ಒಳಗಾದಳು. ಕೃಷ್ಣನ ಪಾದದ ಬಳಿ ಕುಸಿದಳು. ಎದೆಯ ಭರಣಿಯನ್ನು ತೆರೆದಳೆಂಬಂತೆ ತನ್ನೆಲ್ಲ ಮಾರ್ಜನ ಕಲೆಯನ್ನೂ ಏಕಾಗ್ರತೆಯ ಹದಕ್ಕೆ ತಂದು ಕೃಷ್ಣನ ಆ ಮೃದು ಮೈಗೆ ಗಂಧದ ಅಭ್ಯಂಜನ ಮಾಡಿಸಿದಳು. ಮೈ ಮರೆತಳು.

ತ್ರಿವಕ್ರೆ ಹಳದಿಯ ಗಂಧ ಹಚ್ಚುತ್ತಿರಬೇಕಾದರೆ, ಕೃಷ್ಣ ಹೇಳುತ್ತಿದ್ದ: ಹಳದಿ, ದೇವರ ಬಣ್ಣ. ಬಂಗಾರದ ಬಣ್ಣ. ಕೇಳಲಿಲ್ಲವೇನು- ಹಿರಣ್ಮಯೇನ ಪಾತ್ರೇಣ ಸತ್ಯಸ್ಯ ಅಪಿ ಹಿತಂ ಮುಖಂ’ ತ್ರಿವಕ್ರೆ ನೀಲಿಯ ಕಸ್ತೂರಿ ಕಾಡಿಗೆ ಹಚ್ಚುತ್ತಿರಬೇಕಾದರೆ, ಹೇಳುತ್ತಿದ್ದ: ನೀಲಿ, ಆಗಸದ ಬಣ್ಣ, ಕಡಲಿನ ಬಣ್ಣ, ಬಯಲಿನ ಬಣ್ಣ, ಪ್ರಾಣತತ್ತ್ವದ ಬಣ್ಣ.

ಬಿಳಿಯ ಜವಾಜಿ ಹಚ್ಚುತ್ತಿರಬೇಕಾದರೆ ಹೇಳುತ್ತಿದ್ದ: ಬಿಳಿ, ಸತ್ತ್ವಗುಣದ ಬಣ್ಣ ಅರಿವಿನ ಬಣ್ಣ.  ಕೇಳಲಿಲ್ಲವೇನು- ಸರ್ವಶುಕ್ಲಾ ಸರಸ್ವತೀ!

ಗಂಧಾರ್ಚನೆಯ ಕೇಶಾದಿ ಪಾದಾಂತ ಸೇವೆ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ತ್ರಿವಕ್ರೆ ಈ ಭೂಮಿಯ ಮೇಲಿರಲಿಲ್ಲ. ಕೃಷ್ಣನ ಪಾದದ ಹೆಬ್ಬೆರಳಿಗೆ ಚಂದನ ಹಚ್ಚುತ್ತಿದ್ದಂತೆ, ಕೃಷ್ಣ, ತ್ರಿವಕ್ರೆಯ ಪಾದಗಳ ಎರಡು ಹೆಬ್ಬೆರಳುಗಳ ಮೇಲೂ ತನ್ನ ಹೆಬ್ಬೆರಳೂರಿದನಂತೆ ಬಲವಾಗಿ. ಹುಡುಗಿಯ ಎರಡೂ ತೋಳುಗಳನ್ನು ಹಿಡಿದು ಬಲವಾಗಿ ಮೇಲೆತ್ತಿದನಂತೆ.

ತ್ರಿವಕ್ರೆಯ ಬೆನ್ನಿನ, ಮೈಯ ನೆಟಿಗೆ ಮುರಿದವು. ಮೈಯಲ್ಲಿ ಸುಖದ ನೋವಿನ ಲಹರಿ ಹರಿದವು. ನೋಡುತ್ತಾಳೆ: ಮೈಯ ಡೊಂಕುಗಳೆಲ್ಲ ಹೋಗಿ ಮೈ ಋಜುವಾಗಿ ಬಿಟ್ಟಿದೆ! ಪ್ರಾಣದ ಲಹರಿ ಅಂಗಾಂಗಗಳಲ್ಲಿ ಸುಖವಾಗಿ ತಡೆ ಇಲ್ಲದೆ ಹರಿಯುತ್ತಿದೆ! ಕುಬ್ಜೆ, ಕೃಷ್ಣನ ನೇರಕ್ಕೆ ಎತ್ತರವಾಗಿ ಬಿಟ್ಟಿದ್ದಾಳೆ!  ಕೃಷ್ಣನ ಕಣ್ಮಣಿಯಲ್ಲಿ ತನ್ನ ಸುರಸುಂದರ ಪ್ರತಿಬಿಂಬ ಕಾಣುತ್ತಿದೆ! ಕೃಷ್ಣ ನೀಲಗನ್ನಡಿಯಂತೆ ಹೊಳೆಯುತ್ತಿದ್ದಾನೆ!

ಅವಳು ತ್ರಿವಕ್ರೆ. ಅವನು ತ್ರಿಭಂಗ ಮುರಾರಿ. ಇದು ಈ ಈರ್ವರ ಕಥೆ.

ತೋಳ್ಪಾಡಿ ಭಾಗವತ 29:ಎಲ್ಲವೂ ಸ್ಫುಟ,ಆದರೂ ಗುಟ್ಟೆನ್ನುವೆವು

ವೃಂದಾವನ ಗೋಪಿಕೆಯರು ನಡೆದಾಡಿದ ನೆಲ. ಅಂಥ ವೃಂದಾವನದ ಮಣ್ಣನ್ನು ಗೋಪಿಕೆಯರ ಗಾಢ ಭಕ್ತಿ ತಮ್ಮಲ್ಲೂ ಬರಲಿ ಎಂಬ ಆಶಯದಿಂದ ಮೈಗೆ ಹಚ್ಚಿಕೊಳ್ಳುವ ರೂಢಿ ಇದೆ ವೈಷ್ಣವರಲ್ಲಿ. ಆ ಮೃತ್ತಿಕೆಗೆ `ಗೋಪೀ-ಚಂದನ’ ಎಂದು ಹೆಸರು. `ಗೋಪೀ-ಚಂದನ’ದ ಈ ‘ಚಂದನ’ ಬಂದದ್ದು ಮಥುರೆಯ ಕುಬ್ಜೆ-ತ್ರಿವಕ್ರೆಯ ನೆನಪಿನಿಂದ. ‘ಕುಬ್ಜಾ ಗಂಧಾನುಲಿಪ್ತಾಂಗ:’ ಕುಬ್ಜೆ ಪೂಸಿದ ಗಂಧದ ಮೈಯವನು- ಎನ್ನುವುದು ಕೃಷ್ಣನಿಗೆ ಪ್ರೀತಿಯ ವಿಶೇಷಣದ ಅನುಲೇಪನ! ಹಾಗೆ ಕೃಷ್ಣ, ತ್ರಿವಕ್ರೆಯಲ್ಲಿ ಗೋಪಿಕೆಯೊಬ್ಬಳನ್ನು ಸೃಷ್ಟಿಸಿ ಮುನ್ನಡೆದ. ಮಥುರೆಯನ್ನು ವೃಂದಾವನವಾಗಿ ಮಾಡುವ ಹೆಜ್ಜೆಗಳನ್ನಿಡುತ್ತ. ಯಾರಿಗೆ ಗೊತ್ತು! ಪ್ರತಿಯೊಬ್ಬ ಹುಡುಗಿಯಲ್ಲೂ ಒಬ್ಬಳು ಗೋಪಿಕೆ ಇರುವಂತಿದೆ. ಪ್ರತಿ ಹುಡುಗನಲ್ಲೂ ಕೃಷ್ಣ ಪ್ರಚ್ಛನ್ನನೇ. ವಿಶ್ವ-ರೂಪವೆಂದರೆ ಇದೇ ಆಗಿರಬೇಕು. ಕೃಷ್ಣನ ಜತೆ ಅವನ ಕಥೆಯೂ ಮುನ್ನಡೆಯುತ್ತಿತ್ತು. ತ್ರ್ರಿವಕ್ರೆಯ ಮೈಯ ಅಂಕು ಡೊಂಕುಗಳನ್ನು ಸರಿಪಡಿಸಿದ ಪವಾಡ ಪುರುಷ ಎಂದು ಮಥುರೆಯಲ್ಲಿ ಕಥೆ ಹಬ್ಬಿತು. ಕಥೆಯಲ್ಲಿ ಅಂಕು ಡೊಂಕುಗಳು ಚೆಂದವೇ ಅಲ್ಲವೇ!

ರಾಮಕೃಷ್ಣರ ಹಿಂದೆ ಮಥುರೆಯ ಜನ ಗುಂಪುಗೂಡಿತು. ಪ್ರಜೆಗಳು ತನ್ನ ಶತ್ರುವನ್ನು ಮೆಚ್ಚಲು ತೊಡಗಿದರೆ ದೊರೆಯ ಶಕ್ತಿ ಅರ್ಧ ಕುಸಿದಂತೆ. ಶಕ್ತಿ ಕುಸಿದಂತೆ ತಂತ್ರಗಾರಿಕೆಯ ಪ್ರವೃತ್ತಿ ಹೆಚ್ಚಾಗಿ ತಲೆ ಎತ್ತುತ್ತದೆ. ಆನೆಗೆ ಮದ್ದಿಕ್ಕಿ ಮತ್ತೇರಿಸಿ ಅದು ರಾಮಕೃಷ್ಣರ ಮೇಲೆ ಏರಿ ಬರುವಂತೆ ಮಾಡಿದನಂತೆ ಕಂಸ; ತನ್ನರಮನೆಯ ಬಾಗಿಲಲ್ಲಿ. ಅದರ ಮತ್ತಿನಿಂದಲೇ ಅದು ಹೆಜ್ಜೆ ತಪ್ಪುವಂತೆ ಮಾಡಿ, ರಾಮಕೃಷ್ಣ ಆನೆಯನ್ನು ಕೆಡೆದು ಬೀಳಿಸಿದರು. ಗುರುತಿಗೆಂದು, ಅದರ ಉದ್ದನೆಯ ದಂತವನೇ ಕಿತ್ತರು. ತಮ್ಮ ಹೆಗಲಮೇಲೆ ಆಯುಧದಂತೆ ದಂತವನ್ನು ಹೊತ್ತು ನಡೆದರು. ಕೊಳಲನ್ನು ನುಡಿಸಿದ ಕೈಯಲ್ಲಿ ದಂತವನ್ನು ಕಿತ್ತದ್ದನ್ನು ನೋಡಿರಯ್ಯ ಎಂದು ಜನ ಉಗ್ಗಡಿಸುತ್ತಿತ್ತು. ನಿನ್ನ ಹಲ್ಲು ಮುರಿಯುವೆನೆಂದು ಕಂಸನಿಗೆ ಇದು ಸಂದೇಶ ಎಂದುಕೊಂಡರು ಕೆಲವರು. ಪಟ್ಟದಾನೆಯ ದಂತ ಕಿತ್ತು ಎತ್ತಿ ನಡೆಯುವ ಕೃಷ್ಣನ ಪರವಾಗಿ ಜನರ ಜಯಘೋಷ ಕೇಳುತ್ತಿದ್ದಂತೆ ಕಂಸನ ಮನೋಬಲ ಕುಸಿಯುತ್ತಿತ್ತು. ಚಾಣೂರ ಮುಷ್ಟಿಕರೆಂಬ ಕಂಸನ ಮಲ್ಲರು ರಾಮಕೃಷ್ಣರಿಗೆ ಎದುರಾದರು. ಆನೆ ಕೆಡೆದು ಬಿದ್ದುದರಿಂದಲೇ ಅವರು ಅಧೀರರಾಗಿದ್ದರು. ಕಂಸ ಅವರನ್ನು ಹುರಿದುಂಬಿಸುತ್ತಿದ್ದ. ಮೈಯಲ್ಲಿ ಇನಿತೂ ಕೊಬ್ಬಿಲ್ಲದೆ ಸೆಳೆ- ಮಿಂಚಿನಂತೆ ಇದ್ದ ಕೃಷ್ಣ. ಎಳೆ ಹಾವಿನಂತೆ ಎಲ್ಲೆಲ್ಲೂ ನುಸುಳಿ ಹೊರಬರುತ್ತಿದ್ದ. ಕೃಷ್ಣನನ್ನು ಹಿಡಿಯಲಾಗದೆ ಮಲ್ಲರು ದಣಿದರು. ಹುರಿಗಟ್ಟಿದ ಸ್ನಾಯುಗಳ ಉಕ್ಕಿನ ಒನಕೆಯಂತಿದ್ದ ಬಲರಾಮ. ಇವನ ಹೊಡೆತಕ್ಕೆ ಮಲ್ಲರು ದಣಿದರು. ಇವರು ದಣಿದಂತೆ ಜನರ ಹುಮ್ಮಸ್ಸು ಹೆಚ್ಚುತ್ತಿತ್ತು. ಮಲ್ಲರನ್ನು ಕೆಡಹಿ, ಕೃಷ್ಣ ಯಾವ ಹಬ್ಬದ ನೆವದಲ್ಲಿ ತಮ್ಮನ್ನು ಮಧುರೆಗೆ ಕರೆದರೋ ಆ ಭಾರಿಯ ಬಿಲ್ಲಿಗೆ ಕೈ ಹಾಕಿದ… ಎತ್ತಿ ಸೆಳೆದು ಅದನ್ನು ಬಾಗಿಸಿದ. ಬಿಲ್ಲು ಮುರಿಯಿತು. ಜನರ ಕೇಕೆ ಮುಗಿಲು ಮುಟ್ಟಿತು.

ಕಂಸನಿಗೆ ಈಗ ಮರುಳು ಹಿಡಿಯಿತು. ಈ ದುಷ್ಟರನ್ನು ಇಲ್ಲಿಂದ ಹೊರಗಟ್ಟಿ ಎಂದು ಅರಚಿದ. ಗೋವಳರನ್ನು ಸುಲಿಯಿರಿ; ನಂದನನ್ನು ಹೆಡೆಮುರಿ ಕಟ್ಟಿರಿ, ವಸುದೇವನನ್ನು ಕೊಲ್ಲಿರಿ, ತನ್ನ ತಂದೆ ಉಗ್ರಸೇನನನ್ನೇ ಹಿಂಸಿಸಿ ಎಂದು ಬೊಬ್ಬಿರಿದ. ಕೇಳುತ್ತಿದ್ದ ಅಕ್ರೂರನಿಗೆ ಅನ್ನಿಸಿತು. ಇದು ಕಂಸನ ಕೊನೆಯ ಮಾತು! ತಾನೇ ಬರಮಾಡಿಕೊಂಡ ರಾಮ-ಕೃಷ್ಣರನ್ನು ತಾನೇ ಹೊರಗಟ್ಟಿ ಎನ್ನುತ್ತಿದ್ದಾನೆ. ದೊರೆಗೆ ಹುಚ್ಚುಹಿಡಿದಿದೆ. ಅಶರೀರವಾಣಿಯ ಅರ್ಥ ಕಂಸನ ಮನದಲ್ಲಿ ಕುಂತಿದೆ. ಅದನ್ನು ಅಲ್ಲಿಂದ ಹೊರಗಟ್ಟುವುದು ಅಸಾಧ್ಯ. ಅಕ್ರೂರ ಕೃಷ್ಣನತ್ತ ನೋಡಿದ. ತಮ್ಮನ್ನು ಹೊರಗಟ್ಟಿ ಎಂದು ಕಂಸ ಕಿರುಚಿದಾಗ ರಾಮಕೃಷ್ಣರು ಸುಮ್ಮನೆ ಬೆವರೊರಸಿಕೊಳ್ಳುತ್ತಿದ್ದರು. ಯಾವಾಗ, ನಂದನನ್ನು, ವಸುದೇವನನ್ನು, ಉಗ್ರಸೇನನನ್ನು ಹಿಂಸಿಸಿ ಎಂದು ಬೊಬ್ಬಿರಿದ ಆಗ ಕಂಸನನ್ನು ವಿಚಾರಿಸಿಕೊಳ್ಳುವುದಕ್ಕೆ ನೇರವಾದ ಅವಕಾಶವಾಯಿತು. ರಾಮಕೃಷ್ಣರು ವೀರ- ಹೆಜ್ಜೆಗಳಲ್ಲಿ ಕಂಸನತ್ತ ನಡೆದರು. ಕಂಸ ಅಧೀರನಾದ. ತನ್ನ ಮುಂದೆ ಮೃತ್ಯುವೇ ಬಂದು ನಿಂತಂತೆ ಅನ್ನಿಸಿತು. ಅವನಿಗೆ ಪೂತನಾ ನೆನಪಾದಳು. ತಾನು ಕೃಷ್ಣನ ಬಳಿಗೆ ಮೊದಲು ಕಳುಹಿಸಿದ ತನ್ನ ಬಳಗದ ವಿಷಕನ್ಯೆ. ಕೈಗೂಸಾಗಿದ್ದ ಕೃಷ್ಣ ಅವಳ ಎದೆ ಹಾಲು ಹೀರುತ್ತಲೇ ಅವಳನ್ನು ಕೊಂದಿದ್ದ. ಅದನ್ನು ‘ಪೂತನಾ ಮೋಕ್ಷ’ ಎಂದು ಜನ ಕರೆದಿದ್ದರು. ಅದು ಕಂಸನ ಕಿವಿಗೂ ಬಿದ್ದಿತ್ತು. ಅಂದರೆ, ಕಿರಿಯರ ಕೈಯಿಂದ ಸತ್ತರೆ ಹಿರಿಯರಿಗೆ ಮೋಕ್ಷವೆಂದರ್ಥವೆ? ಜನ ಹಾಗೆ ನಂಬಿರುವಂತಿದೆ. ಈ ಜನರೆಲ್ಲ ಹೀಗೆಯೇ. ಇವರೆಲ್ಲ ಕಿರಿಯರ ಪರ. ಇರಲಿ, ಹಾಗಾದರೆ ಅಶರೀರವಾಣಿಯ ಅರ್ಥವೂ ಈತ ತನಗೆ ಮೋಕ್ಷವನ್ನೀಯುವನೆಂದೆ? ಹೋ! ಈ ಭ್ರ್ರಾಂತಿಗಳನ್ನೆಲ್ಲ ನಂಬಿ ಹೋರಾಟವನ್ನು ಬಿಟ್ಟು ಕೊಡುವುದು ಆತ್ಮಘಾತಕ. ಕಂಸ ಹೂಂಕರಿಸಿದ. ಆದರೆ, ಅಷ್ಟರಲ್ಲೆ ಕೃಷ್ಣ ಸಿಂಹಾಸನದಿಂದ ಅವನನ್ನು ಕೆಳಗೆ ಸೆಳೆದಾಗಿತ್ತು. ಕೆಡವಲ್ಪಟ್ಟ ಕಂಸನ ಹೂಂಕಾರ ಆರ್ತನಾದದಂತೆ ಕೇಳಿಸಿತು. ಕೃಷ್ಣನನ್ನು ಕರೆತರಲು ಅಕ್ರೂರನನ್ನು ಕಳುಹಿಸಿದಲ್ಲಿಂದ ಕಂಸ ನಿರಂತರ ಭಯದಲ್ಲಿದ್ದ. ಮತ್ತೆ ಮೇಲೇಳಲಿಲ್ಲ. ಅಶರೀರವಾಣಿ ಕೇಳಿದಲ್ಲಿಂದ ಮಥುರೆಯ ಜನ ಇಂಥದೊಂದು ನಿರೀಕ್ಷೆಯಲ್ಲಿದ್ದರು. ಕಂಸನಿಗೆ ಕೃಷ್ಣನ ಭಯವೆಂದರೆ, ಕಂಸನ ಪ್ರಜೆಗಳಿಗೆ ಕೃಷ್ಣನು ತಮ್ಮನ್ನು ಕಂಸನ ಭಯದಿಂದ ಪಾರು ಮಾಡುವನೆಂದೇ ನಿರೀಕ್ಷೆ; ಆಶೆ. ಅಶರೀರವಾಣಿಗೆ ಆಳುವವರು ಒಂದು ಅರ್ಥ ಹಚ್ಚುವರು. ಆಳಿಸಿಕೊಳ್ಳುವವರು ಬೇರೆಯೇ ಅರ್ಥ ಹಚ್ಚುವರು. ಯಾರು ಹೇಳಿದರೆಂದು ತಿಳಿಯದೆ ಇದ್ದಾಗ, ಕೇಳಿದ ಮಾತಿಗೆ ಎರಡು ಪಂಗಡಗಳಲ್ಲೂ ಸಲ್ಲುವ ಅರ್ಥ ಇರುತ್ತದೆ! ಮಾತಿನ ಅರ್ಥವಿಕಾಸಕ್ಕೆ ಆ ಮಾತನ್ನು ಆಡಿದ ವ್ಯಕ್ತಿಯ ವ್ಯಕ್ತಿತ್ವವೇ ಅಡ್ಡಿಯಾಗುವ ವಿಚಿತ್ರ! ಅರ್ಥದ ವಿಕಾಸಕ್ಕೆ ಅರ್ಥವೇ ಅಡ್ಡಿಯಾಗುವ ವಿಚಿತ್ರ! ಕಂಡ ದೃಶ್ಯದಲ್ಲಿ ಕಣ್ಣು ಸೆರೆಯಾಗಿ ಅದೇ ನಿಜವೆಂದು ನಂಬುವಂತೆ, ಕೇಳಿದ ಮಾತಿನ ವಾಚ್ಯವಾದ ಅರ್ಥದಲ್ಲಿ ಕಂಸನ ಮನಸೆರೆಯಾಗಿ ಹೋಯಿತು. ಅದಕ್ಕೇ ಬಲಿಯಾಗಿ ಹೋಯಿತು. ಭಾಷೆಯಲ್ಲಿ ವಾಚ್ಯವೆಂಬುದು ಪ್ರಾಣಘಾತುಕ. ಕಾಣ್ಕೆಯಲ್ಲಿ `ದೃಶ್ಯ’ ಎಂಬ ತೋರಿಕೆ ಪ್ರಾಣಘಾತುಕ. ಆಘ್ರಾಣದಲ್ಲಿ, ಎಲ್ಲರಿಗೂ ಮೆಚ್ಚಾಗುವ ಅವರವರ ಮೈಯ ಗಂಧವೇ ಪ್ರಾಣಘಾತುಕ. ಅರಿವಿನಲ್ಲಿ, ತಾನೆಂಬುದೇ, ತಾನೆಂಬ ತಾನುಳಿಯಬೇಕೆಂಬುದೇ ಪ್ರಾಣಘಾತುಕ. ವಾಚ್ಯ ಬಿಟ್ಟು ಕೇಳಿದರೆ, ಎಲ್ಲ ಮಾತುಗಳೂ ನಿಜಾರ್ಥದಲ್ಲಿ ಅಶರೀರವಾಣಿಯಾಗಬಹುದು! ಈ ಎಲ್ಲ ಅನುಭವಗಳಿಂದ ಕೃಷ್ಣನಲ್ಲಿ ನುಡಿಗಟ್ಟು ರೂಪುಗೊಳ್ಳುತ್ತಿತ್ತು: `ಆತ್ಮೈವಹಿ ಆತ್ಮನೋ ಬಂಧು: ಆತ್ಮೈವ ರಿಪುರಾತ್ಮನ:’. `ತನ್ನ ಬಂಧು ತಾನೇ; ತನ್ನ ಶತ್ರುವೂ’.

ಹೀಗೆ ಕಂಸ ಸಂದು ಹೋದ. ಮಥುರೆಗೆ ವಿಮೋಚನೆಯಾಯಿತು. ಇನ್ನೇನೋ ಎಂದು ಜನ ರಾಮ-ಕೃಷ್ಣರ ಹಿಂದೆ ನಡೆದರು. ಹುಡುಗರಿಬ್ಬರೂ ನೇರ ಸೆರೆಮನೆಯತ್ತ ನಡೆದರು. ಅಲ್ಲಿದ್ದರು ದೇವಕಿ-ವಸುದೇವ ಎಂಬ ಸಂಸಾರಿಗಳು! ಆರು ಮಕ್ಕಳನ್ನು ಹೆತ್ತು ಅವುಗಳನ್ನು ಕಂಸನಿಗೆ ತೆತ್ತು. ಸಾವಿನ ಉಡಿಗೆ ಹಾಕುವುದಕ್ಕಾಗಿಯೇ ತಾವು ಮಕ್ಕಳನ್ನು ಹೆರುವುದು ಎಂದು ಚಿರಪುತ್ರ ಶೋಕ ಪೀಡಿತರಾದ ದಂಪತಿಗಳು. ಇಷ್ಟು ದು:ಖದ ಕಡಲಿನ ನಡುವೆ ಎಂಟನೆಯ ಮಗುವಿಗೆ ಕಾದವರು! ಅಶರಿರವಾಣಿಯೇ ಅವರಿಗೆ ಭರವಸೆ. ‘ಸಂಸಾರ ಬಂಧನ’ ಎನ್ನುವುದು ಒಂದು ರೂಪಕ. ಕೃಷ್ಣನ ತಾಯ್ತಂದೆಯರಿಗೆ ಅದು ರೂಪಕವಾಗಿರಲಿಲ್ಲ. ವಾಸ್ತವದ ಅನುಭವವಾಗಿತ್ತು. ಈ ಅನುಭವದ ಒಡಲಿನಿಂದಲೇ ದೇವರು ಮೂಡಿಬರಬೇಕು- ಬರುವುದಾದರೆ! ದು:ಖದ ನಡುವೆ ದೇವರು ಭರವಸೆ ಎನ್ನುವುದೂ ವಾಸ್ತವವಾಗಿರಬೇಕು. ಎಷ್ಟು ಮಕ್ಕಳು ಸತ್ತು ದೇವರು ಮಗುವಾಗಿ ಬರುವುದು? ಇದು ಏನು ಲೀಲೆ? ಏಳು ಮಕ್ಕಳೂ ಸತ್ತು ಎಂಟನೆಯದು ಭರವಸೆ! ಇದೇನು ಅಂಕೆಗಳ ವಿಕಟ ವಿನೋದ? ದು:ಖವನ್ನು ಅನುಭವಿಸುವ ಶಕ್ತಿ ಎಷ್ಟಿದೆ ಎಂದು ತಾಯ್ತಂದೆಯರಲ್ಲಿ ದೇವರು ಪರೀಕ್ಷಿಸುತ್ತಾನೇನು? ಸಾವು-ಬದುಕುಗಳ ಎಂಥ ಸಾಂಗತ್ಯ ಈ ಜೀವನ! ಈ ಅರ್ಥದಲ್ಲಿ ಬದುಕಿಡೀ ದೀರ್ಘ ವಿಲಕ್ಷಣ ಪ್ರಸವ ವೇದನೆ ಎಂದು ದೇವಕಿಗೆ ಅನ್ನಿಸುತ್ತಿತ್ತು. ಸೆರೆಮನೆಯ ಬಾಗಿಲು ಕಿರುಗುಟ್ಟುತ್ತ ತೆರೆಯಿತು. ತಾಯಿ ತಂದೆ ನೋಡಿದರು. ಗಾಳಿಯಲ್ಲಿ ನವಿಲಗರಿ ಒಲೆದವು. ನೀಲ ನೀಳ ತೋಳು ಚಾಚಿದವು. ಇಷ್ಟು ಕಾಲದಲ್ಲಿ ಅಮ್ಮ ಎಂಬ ಕರೆ ದೇವಕಿ ಮೊದಲ ಬಾರಿಗೆ ಕೇಳಿದಳು. ರಾಮನಿಂದ; ಕೃಷ್ಣನಿಂದ. ಒಂದರೊಳಗೊಂದು ಬೆರೆತಂತೆ. ಆರೂ ಮಕ್ಕಳೂ ಈ ಒಂದು ಕರೆಯಲ್ಲಿ ಸೇರಿ ತಾವೂ ಕರೆದಂತೆ ಕೇಳಿಸಿತು ದೇವಕಿಗೆ. ದೇವಕಿ; ವಸುದೇವ, ರಾಮಕೃಷ್ಣರನ್ನು ತಬ್ಬಿ ಮಕ್ಕಳಂತೆ ಅತ್ತರು. ಎದೆ ಕರಗಿತು. ಈ ಮಗುವಿಗೆ ಹಾಲೂಡಲಿಲ್ಲ. ಮಡಿಲಲ್ಲಿ ಮಲಗಿಸಲಿಲ್ಲ. ತನ್ನೆದೆಯ ಬೆಚ್ಚನೆಯನ್ನು ಹಂಚಲಿಲ್ಲ. ಎಣ್ಣೆ ನೀರು ಮೀಯಿಸಲಿಲ್ಲ. ಕೂವೆ ಹಿಟ್ಟಿನ ಮಣ್ಣಿ ಉಣ್ಣಿಸಲಿಲ್ಲ; ಮಗುವನ್ನು ಶುಶ್ರೂಷೆ ಮಾಡದ ತಾಯಿ ತಾನು. ತಾಯಿಯ ಅಂತರಂಗವನ್ನು ಓದಿದನೆಂಬಂತೆ ಕೃಷ್ಣ ಹೇಳಿದ: ಅಮ್ಮ, ನಿಮ್ಮ ಶುಶ್ರೂಷೆ ಮಾಡಲಾಗಲಿಲ್ಲ ನನಗೆ. ಸುಮ್ಮನೆ ತಂಟೆಯಲ್ಲಿ ಕಾಲ ಕಳೆದಂತಾಯಿತು. ಕ್ಷಮಿಸಿ. ಆದರೆ ತಂಟೆ ಮಾಡುತ್ತಲೇ ಎಂಬಂತೆ ಕಂಸನ ಭಯದಿಂದ ಮಥುರೆಯನ್ನು ಬಿಡಿಸಿದ ಹಾಗಾಯಿತು. ಇನ್ನು ನೀನು; ಕಂಸ ಕಂಡು ಬಿಟ್ಟಾನು; ಅಪಾಯ, ಬೇಗ ಮರೆಯಾಗು ಎಂದು ನನಗೆ ಹೇಳುವಂತಿಲ್ಲ ಎನ್ನುತ್ತ ಮನೋಹರವಾಗಿ ನಕ್ಕನಂತೆ. ದೇವಕಿ ನಮ್ಮ ಮನದಾಳದಿಂದ ತನ್ನ ಮಾತುಗಳನ್ನು ಈ ಹುಡುಗ ಹೆಕ್ಕಿಕೊಳ್ಳುವನೇನು ಎಂದಚ್ಚರಿಪಡುತ್ತ `ನಿನ್ನಲ್ಲಿ ನನ್ನನ್ನು ಮರೆಮಾಡಿಕೋ ಎನ್ನ ದೇವರೇ’ ಎಂದಳಂತೆ.

ಸೆರೆಯ ಹೊರಗೆ ಸಂದಣಿ ಸೇರುತ್ತಿತ್ತು. ತಳುವದೆ ರಾಮ-ಕೃಷ್ಣ ಉಗ್ರಸೇನನಲ್ಲಿಗೆ ನಡೆದರು. ಸೆರೆಯಲ್ಲಿದ್ದ-ಕಂಸನ ವೃದ್ಧ ತಂದೆ. ಶತ್ರುಗಳ ಬಗೆಗೆ ನಿರಂತರ ಚಿಂತಿಸುತ್ತ ರಾಜಕಾರಣವೆಂಬುದು ಬಂಧುಗಳನ್ನೇ ಶತ್ರುಗಳೆಂದು ಬಗೆವಲ್ಲಿಗೆ ತಲಪಿತು ಎಂದುಕೊಂಡು ಕೊರಗುತ್ತಿದ್ದವನೆದುರು ಇದ್ದಕಿದ್ದಂತೆ ಇಬ್ಬರು ಹುಡುಗರು ನಿಂತಿದ್ದರು. ದೇವಕಿಯ ಮಗ. ರೋಹಿಣಿಯ ಮಗ. ಈ ಮೊಮ್ಮಕ್ಕಳು ಅಜ್ಜನ ಕಾಲು ಮುಟ್ಟಿದರು. ಇದುವರೆಗೆ ನೋಡದ ಮೋಹಕ ನಗೆಯ ಮೊಮ್ಮಕ್ಕಳು. ಜತೆಗೆ ವಸುದೇವ-ದೇವಕಿ. ಹೊರಗೆ ಜನರ ನೆರೆ. ಯಾರೋ ಮೊದಲೇ ಏರ್ಪಾಟು ಮಾಡಿದ್ದರೆಂಬಂತೆ ಆಳುಗಳು ಉಗ್ರಸೇನನನ್ನು ಕರೆದೊಯ್ದು ಸುಖಸ್ನಾನ ಮಾಡಿಸಿದರು. ರಾಜಪೋಷಾಕು ತೊಡಿಸಿದರು. ಗೌರವದಿಂದ ಪಾದಾವಧಾನ ಹೇಳುತ್ತ ಸಿಂಹಾಸನದ ಬಳಿಗೆ ಕರೆತಂದರು. ಅಲಂಕೃತ ಗದ್ದುಗೆಯಲ್ಲಿ ರಾಮ-ಕೃಷ್ಣ, ಕಂಸನ ಈ ತಂದೆಯನ್ನು ಕುಳ್ಳಿರಿಸಿದರು. ಮಕುಟ ತೊಡಿಸಿದರು. ಜನ ಮೂಕವಾಗಿತ್ತು. ಕೃಷ್ಣ ಎರಡೇ ಎರಡು ಮಾತು ಹೇಳಿದ. ಮಥುರೆಯ ದೊರೆ ಉಗ್ರಸೇನ ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುವರು. ದೊರೆ, ಪ್ರಜೆಗಳ ಅಕ್ಕರೆಯ ಬಂಧಿಯಲ್ಲವೆ! ಎಂಬ ಎರಡು ಮಾತು! ಜನ ಮರುಳಾಗಿ ಹೋದರು. ಇದ್ದಕಿದ್ದಂತೆ ಕೃಷ್ಣ ತನ್ನ ಉತ್ತರೀಯವನ್ನು ಸೊಂಟಕ್ಕೆ ಸುತ್ತಿ ನಡುಬಾಗಿ ದೊರೆಗೆ ವಂದಿಸಿ, `ನಾವು ರಾಜ ಸೇವಕರು. ನಮ್ಮ ಕೆಲಸವನ್ನು ಬೆಸಸಬೇಕು ದೊರೆಯೇ’ ಎಂದ. `ಪ್ರಜಾ: ಆಜ್ಞಪ್ತು ಮರ್ಹಸಿ.’

ಉಗ್ರಸೇನನಿಗೆ ಯಾವುದೋ ಅಶರೀರವಾಣಿಯನ್ನು ಕೇಳುತ್ತಿರುವಂತೆ ಅನ್ನಿಸಿತು!

ಮಥುರೆಯಲ್ಲಿ ಆಳ್ವಿಕೆಯ ಸ್ವರೂಪವೇ ಬದಲಾದವು. ಚಟುವಟಿಕೆಗಳೇ ಬದಲಾದವು. ಯಾದವರಲ್ಲಿ ಅನೇಕ ಬುಡಕಟ್ಟುಗಳು; ಉಪ ಬುಡಕಟ್ಟುಗಳು, ವೃಷ್ಣಿಗಳು, ಶೌರಿಗಳು, ಸಾತ್ತ್ವತರು….. ಎಲ್ಲರಿಗೂ ಕೃಷ್ಣ ತಮ್ಮವನೆಂಬ ಭಾವ. ಗೋಪ ಕುಲದ ಮಹತ್ತ್ವ ಮಥುರೆಯಲ್ಲಿ ಹೆಚ್ಚಿತೆನ್ನಬಹುದು. ಕಂಸನ ಮರಣದ ಅನಂತರ ತನ್ನ ಬದುಕಿನ ಗತಿ ಸಹಜವಾಗಿಯೇ ಬದಲಾಗುತ್ತೆ ಎಂದು ಕೃಷ್ಣ ಊಹಿಸಬಲ್ಲವನಿದ್ದ. ಕಂಸನನ್ನು ಕೊಂದದ್ದು ಒಂದು ಆರಂಭ ಮಾತ್ರ. ಕಂಸನಿಗೆ ಬೆಂಬಲ ಕೊಡುವ ಅನೇಕರಿದ್ದರು. ಕಂಸ ಕೇಳಿದ ಅಶರೀರವಾಣಿಯನ್ನು ತಮಗೂ ಅನ್ವಯಿಸಿಕೊಳ್ಳಬಲ್ಲವರು. ಮಹಾಪ್ರಬಲನಾದ ಜರಾಸಂಧನಿದ್ದ. ಕಂಸನಿಗೆ ಹೆಣ್ಣು ಕೊಟ್ಟ ಮಾವ. ಮಗಧ ಸಾಮ್ರಾಜ್ಯದ ದೊರೆ. ಕಂಸನನ್ನು ಕೊಂದದ್ದು ಜರಾಸಂಧನಿಗೆ ಎದೆಗೇ ಒದ್ದಂತೆ. ಗೊಲ್ಲಪಾಳಯ ಪಟ್ಟಿಗೆ ರಾಜ್ಯ ಕಟ್ಟುವ ದುರಾಸೆ. ಕ್ಷತ್ರಿಯರೊಡನೆ ತೊಡೆ ತಟ್ಟುವಷ್ಟು ಇವರು ಬೆಳೆದರೇ? -ಎಂದು ಕೃಷ್ಣನ ಚಟುವಟಿಕೆಗಳ ಬಗ್ಗೆ ಜರಾಸಂಧ ವ್ಯಾಖ್ಯಾನಿಸುತ್ತಾನೆ ಎಂದು ಕೃಷ್ಣ ಬಲ್ಲವನೇ ಇದ್ದ. ಹಸುಗಳನ್ನು ಮೇಯಿಸಿದ್ದಾಯಿತು, ಇನ್ನು ರಥ-ಕುದುರೆಗಳ ಸಹವಾಸ ಎಂದುಕೊಂಡ ಕೃಷ್ಣ. ಹಸುಗಳನ್ನು ಪ್ರೀತಿಸಿದವನಿಗೆ ಕುದುರೆಗಳ ಪ್ರೀತಿಯನ್ನು ಪಡೆಯುವುದು ಒಂದು ಗೊರಸಿನಷ್ಟು; ಒಂದು ಖುರಪುಟದಷ್ಟು ಮುಂದೆ, ಅಷ್ಟೇ. ಇವೆಲ್ಲ ಸಹಜವಾಗಿ ನಡೆದು ಬಿಡುತ್ತೆ. ಆದರೆ, ಕೃಷ್ಣನ ಮನಸ್ಸು ಇನ್ನೊಂದು ರೀತಿಯಲ್ಲಿ ಚಿಂತಿಸುತ್ತಿತ್ತು. ತನ್ನ ಬಾಳಿನಲ್ಲಿ ಹೆಣ್ಣುಮಕ್ಕಳ ಪಾತ್ರ ವಿಶೇಷವಾದ್ದು. ಹೆಣ್ಣು ಮಕ್ಕಳೆಂದರೇ- ಭಾವ ಸಮೃದ್ಧಿ. ಸಂಸ್ಕೃತಿಯ ಕೆನೆಪದರ. ಆದುದರಿಂದ ಹೆಣ್ಣು ಮಕ್ಕಳಿಗಾಗಿಯೇ ಸಾಂಸ್ಕೃತಿಕ ರಾಜಧಾನಿಯೊಂದು ನಿರ್ಮಾಣವಾಗಬೇಕಿದೆ. ಯುದ್ಧ, ರಾಜಕೀಯ ಚಟುವಟಿಕೆಗಳಿಂದ ನಿಬಿಡವಾದ ಹಸ್ತಿನೆ; ಮಥುರೆಯಂಥ ರಾಜಧಾನಿಗಳಿಂದ ಬೇರೆಯಾದ; ದೂರವಾದ, ಆದರೂ ರಾಜಧಾನಿಯೇ ಆದ, ರಾಜಧಾನಿಯಲ್ಲದ ರಾಜಧಾನಿಯೊಂದು ರೂಪುಗೊಳ್ಳಬೇಕಿದೆ. ಕೃಷ್ಣನ ಮನದಲ್ಲಿ ವೃಂದಾವನ ಆಳವಾಗಿ ನೆಲಸಿತ್ತು. ಅವನಿಗೆ ಗೋಪಿಕೆಯರ ನೆನಪಾಯಿತು. ತನ್ನ ಪ್ರಿಯ ಸಖ ಉದ್ಧವನನ್ನು ಕೃಷ್ಣ ಬಳಿಗೆ ಕರೆದ. ಉದ್ಧವ, ಮಥುರೆಯಲ್ಲಿ ಕೃಷ್ಣನಿಗೆ ದೊರೆತ ಒಡನಾಡಿ. ವೃಷ್ಣಿ ವಂಶದ ಮೇಧಾವಿ. ಮಾತಿನ ಸಂದೇಶವನ್ನು ಯಥಾರ್ಥವಾಗಿ ಗ್ರಹಿಸಬಲ್ಲವ. ಎಲ್ಲೂ ಏನೂ ಕೊರೆಯಾಗದಂತೆ ಅದನ್ನು ಬಿತ್ತರಿಸಬಲ್ಲವ. ಇವನು ಬೃಹಸ್ಪತಿಯ ಶಿಷ್ಯ ಎನ್ನುತ್ತಿದ್ದರು ಜನ. ಇಂಥ ಉದ್ಧವ ಕೃಷ್ಣನಿಗೆ ಮರುಳಾಗಿ ಬಿಟ್ಟಿದ್ದ. ಕೃಷ್ಣನ ಜೀವಂತಿಕೆಗೆ ಜೀವಂತಿಕೆಯ ಮೂಲವಾದ ನಿಸ್ಪೃಹ ಪ್ರೀತಿಗೆ, ತತ್ಕ್ಷಣದ ಸ್ಪಂದನ ಶಕ್ತಿಗೆ, ಅಪೂರ್ವ ಏಕಾಗ್ರತೆಗೆ, ಎಲ್ಲರನ್ನೂ, ಅವರು ಹೇಗಿದ್ದಾರೋ ಹಾಗೆ ಅರಿಯಬಲ್ಲ ಕನ್ನಡಿಯಂಥ ಕೃಷ್ಣನ ವ್ಯಕ್ತಿತ್ವಕ್ಕೆ ಉದ್ಧವ ಮಾರು ಹೋಗಿದ್ದ. ಬದುಕಿದರೆ, ಇವನ ಜತೆಗೇ ಬದುಕಬೇಕು ಎಂದು ಗುರಿಯನ್ನು ನಿರ್ಧರಿಸಿ ಬಿಟ್ಟಿದ್ದ. ಕೃಷ್ಣನ ಮೊದಲ ಸಂದೇಶ- ಅದು ಗೋಪಿಕೆಯರನ್ನು ಕುರಿತು- ಅದನ್ನು ಉದ್ಧವನೇ ಒಯ್ಯಬೇಕಿತ್ತು. ಮತ್ತು ಕೃಷ್ಣ ತನ್ನ ಅಂತಿಮ ಸಂದೇಶವನ್ನು ಉದ್ಧವನನ್ನು ಕುರಿತೇ ಹೇಳಿದುದಾಗಿತ್ತು; ಹೀಗೆ ತನ್ನ ನಿಧಾರದಂತೇ ಉದ್ಧವ ಬದುಕಿದ್ದ.

ಕೃಷ್ಣನಿಗೆ ಗೋಪಿಕೆಯರ ವೃಂದಾವನದ ನೆನಪು ಒತ್ತುತ್ತಿತ್ತು. ಮಥುರೆಯ ಕುಬ್ಜೆ ಆ ನೆನಪನ್ನು ಮತ್ತೆ ಉರಿಸಿದ್ದಳು. ಕೃಷ್ಣ ಗೋಪಿಕೆಯರಿಗೆ ಕೊಡಬೇಕಾದ ಸಂದೇಶವಿತ್ತು. ಅದನ್ನು ವೃಂದಾವನಕ್ಕೆ ಒಯ್ಯಲು ಉದ್ಧವ ಬಂದಿದ್ದ. ಕೃಷ್ಣ ಹೇಳಿದ: ಅದು ಅವನ ಆಂತರಿಕ ಅವಸ್ಥೆಯನ್ನು ಅವನೇ ಬಣ್ಣಿಸಿದಂತೆ ಇತ್ತು.

`ನಾನು ನಿಮಗಿಂತ ಎಲ್ಲೋ ದೂರದಲ್ಲಿರುವೆನೆನ್ನುವಿರಿ. ನನ್ನ ವಿರಹದಿಂದ ಬಳಲುವಿರಿ. ದೂರವೋ-ಹತ್ತಿರವೋ ಅದು ಬೇರೆ ಮಾತು. ವಿರಹದ ಉತ್ಕಟತೆ ಎಂಥ ದೂರವನ್ನೂ ಲೆಕ್ಕಿಸುವುದಿಲ್ಲ ಎನ್ನುವುದು ತಿಳಿಯಿತು. ವಿರಹದಿಂದಲೇ ನೆನಪು. ನೀವು ನಿಮ್ಮಲ್ಲಿ ಸವಿಯುತ್ತಿರುವ ನನ್ನ ನೆನಪು ನನಗೆ ನನಗಿಂತಲೂ ಪ್ರಿಯವೆಂದು ನಿಮಗೆ ಹೇಗೆ ತಿಳಿಸಲಿ? -ಅಪಾರ್ಥಕ್ಕೆ ಎಡೆಯಾಗದಂತೆ? ನಿಜಕ್ಕಾದರೆ ನನಗೆ ‘ವಿಯೋಗ’ದ ಅನುಭವವೇ ಇಲ್ಲ. ಎಲ್ಲೆಡೆ ಇರುವುದು ಮಣ್ಣು, ನೀರು, ಬೆಂಕಿ, ಗಾಳಿ, ಆಕಾಶಗಳೆಂಬ ಪಂಚಭೂತಗಳು.  ಮನಸ್ಸು ಮತ್ತು ಪ್ರಾಣ ಚೈತನ್ಯ. ಎಲ್ಲ ದೇಹಗಳಲ್ಲೂ ಎಲ್ಲ ಮನಸುಗಳಲ್ಲೂ. ಈ ಗುಟ್ಟು- ಇದರಲ್ಲಿ ಗುಟ್ಟೇನಿಲ್ಲ; ಎಲ್ಲವೂ ಸ್ಫುಟ. ಆದರೂ ಗುಟ್ಟೆನ್ನುವೆವು, ಇದೇ ಒಂದು ಗುಟ್ಟು- ತಿಳಿದವರಿಗೆ ಯಾವುದರಿಂದಲೂ ವಿಯೋಗವಿಲ್ಲ. ಎಲ್ಲೆಡೆ ತಾದಾತ್ಮ್ಯದ ಅನುಭವ. ಆದರೆ, ಈ ತಾದಾತ್ಮ್ಯವನ್ನು ಅನುಭವಿಸುವುದಕ್ಕೇ ವಿಯೋಗದ ತಂತ್ರವನ್ನು ನಿಸರ್ಗ ರೂಪಿಸಿದೆಯೋ ಏನೋ. ಮಣ್ಣಿನಲ್ಲಿ ಹೆಜ್ಜೆ ಎತ್ತಿ ಇಡಬೇಕಾದರೆ ಆಕಾಶದಲ್ಲೂ ಹೆಜ್ಜೆ ಎತ್ತಬೇಕಾಗುವಂತೆ. ನೆನಪೆಂಬ ಮಾಯಾದೀಪವನ್ನು ಮನುಷ್ಯಜೀವಿಗಳ ಮನಸ್ಸಿನಲ್ಲಿ ಹಚ್ಚಿ ಇಟ್ಟಿದೆ ನೋಡಿ; ನಿಸರ್ಗ. ಆ ದೀಪ ಉರಿಯುವುದು ವಿರಹದಿಂದ. ವಿಯೋಗ- ಭಾವದಿಂದ. ತಾದಾತ್ಮ್ಯವು ಭಂಗಗೊಂಡಿದೆ ಎಂಬ ವಿಚಿತ್ರ ಅರಿವಿನಿಂದ. ನೆನಪಿನ ದೀಪ ಒಮ್ಮೆ ಉರಿಹಚ್ಚಿಕೊಂಡ ಮೇಲೆ, ಅದು ತಾದಾತ್ಮ್ಯದ ಅನುಭವವನ್ನು ಇನ್ನೊಂದು ರಸಾರ್ದ್ರವಾದ ಬೆಳಕಿನಿಂದ ನೋಡಬಲ್ಲುದು. `ಆರ್ದ್ರಂ ಹಿ ಜ್ಯೋತಿರ್ಜ್ವಲತಿ’, ಬೆಳಕಿನ ನೀರು! ಬೆಳಕಿನ ರಸ! ನೀವು ನನ್ನ ನೆನೆದರೆ ನನ್ನ ಮಾಯೆಯನ್ನು ನಾನೇ ಅನುಭವಿಸುತ್ತಿರುವಂತೆ ಅನ್ನಿಸುತ್ತಿದೆ!

ಇನ್ನೊಂದು ಮಾತು ಹೇಳುವೆ. ಎಚ್ಚರ; ಕನಸು; ನಿದ್ದೆ ಇವು ಮೂರು ನಮ್ಮ ಪ್ರಜ್ಞೆಯ ಮೂರು ಅವಸ್ಥೆಗಳು. ಬಿಂದುಗಳು. ಇವುಗಳನ್ನು ಸೇರಿಸಿದರೆ, ಒಂದು ತ್ರಿಕೋಣ. ಚಲಿಸುವ ಬಿಂದುಗಳು ಎಂದು ಭಾವಿಸಿದರೆ, ಇದೊಂದು ಚಕ್ರ. ಕನಸಿಗೆ ಕನಸಿನಿಂದ ಎಚ್ಚರವಿದೆ. ನಿದ್ದೆಗೆ ನಿದ್ದೆಯಿಂದ ಎಚ್ಚರವಿದೆ.  ಎಚ್ಚರಕ್ಕೆ ಏನಿದೆ? ಎಚ್ಚರಕ್ಕೆ ಎಚ್ಚರದಿಂದ ಎಚ್ಚರವಿಲ್ಲವೆ? ಎಚ್ಚರಕ್ಕೆ ಇನ್ನೊಂದು ಮೈ ಇಲ್ಲವೆ? ಎಚ್ಚರವನ್ನು ಲೋಕ ನಂಬಿ ಬಿಟ್ಟಿರುವುದರಿಂದ, ಎಚ್ಚರದ ಇನ್ನೊಂದು ಮೈಯನ್ನು ಲೋಕಕ್ಕೆ ತಡವಲಾಗುತ್ತಿಲ್ಲ.  ಎಚ್ಚರದ ಕುರಿತೇ ಲೋಕ ಎಚ್ಚರ ತಪ್ಪ್ಪಿದಂತಿದೆ. ಲೋಕಕ್ಕೆ ಎಚ್ಚರವನ್ನು ದಾಟಲಾಗುತ್ತಿಲ್ಲ. ನಿಮ್ಮಲ್ಲಿ ಉರಿಯುತ್ತಿರುವ ನನ್ನ ನೆನಪಿದೆಯಲ್ಲ- ಅದರಿಂದ ನೀವು ಎಚ್ಚರವನ್ನೇ ದಾಟಿದ್ದೀರಿ. ಲೋಕವನ್ನೇ ಮರೆಗೆ ತಳ್ಳಿದ್ದೀರಿ. ಅಂದರೆ, ನೆನಪೆನ್ನುವುದು ಎಚ್ಚರದ ಎಚ್ಚರ! ಕನಸಿನಿಂದ, ನಿದ್ದೆಯಿಂದ, ಸಹಜವಾಗಿ ಎಚ್ಚರವಾಗುತ್ತೆ. ಆಗ ಕನಸು ನಿದ್ದೆಗಳನ್ನು ದಾಟಿದ ಹಾಗೆ. ಹಾಗೆ ಎಚ್ಚರವನ್ನೂ ದಾಟಲೆಂದೇ ದೇವರ ನೆನಪೊಂದು ಜೀವಿಯ ಎದೆಯಾಳದಲ್ಲಿ ಸಹಜವಾಗಿ ಉರಿಯುತ್ತಿರುವುದು. ನಿಮ್ಮ ನೆನಪಿನ ಬೆಳಕಿನಲ್ಲಿ ಈ ಲೋಕದ ನಡೆಗಳನ್ನೆಲ್ಲ ಸ್ವಪ್ನಸುಂದರವಾಗಿ ನಡೆಸುವೆ. ನಿಮ್ಮನ್ನು ಇನ್ನೊಮ್ಮೆ ಸೇರುವೆ.

ಈ ಸಂದೇಶವನ್ನು ಉದ್ಧವ ಒಯ್ಯಬೇಕಿತ್ತು.  ಇದು ಉದ್ಧವನಿಗೂ ಸಂದೇಶವೇ.

ತೋಳ್ಪಾಡಿ ಭಾಗವತ 30:ರುಕ್ಮಿಣಿ ಬರೆದ ಪ್ರೇಮಪತ್ರ

ಹಾಲು ಹಯನುಗಾರ ಯಾದವರು ಗೋಕುಲದಿಂದ ವೃಂದಾವನಕ್ಕೆ ತೆರಳಿದ್ದು ಅವರ ಬದುಕಿನ ಒಂದು ಚರಂತಿ ಅನುಭವವಾಗಿತ್ತು. ಗೋಕುಲದಲ್ಲಿ ಉತ್ಪಾತಗಳು ಸಂಭವಿಸಿದ್ದರಿಂದ ಹೆಚ್ಚು ಕ್ಷೇಮದ ನೆಲೆಗಾಗಿ ನಡೆದ ಸ್ಥಳ ಪಲ್ಲಟ ಅದು. ವೃಂದಾವನದಲ್ಲಿಯೂ ಆತಂಕದ ಕ್ಷಣಗಳು ಇದ್ದವಾದರೂ ಅಲ್ಲಿ ಬದುಕಿಗೆ ಬೇರೆಯೇ ಒಂದು ಉಲ್ಲಾಸದ ರಂಗು, ಕಲೆಯ ಒಲೆತ, ಭಾವಸ್ಪರ್ಶ ಬಂದಿದ್ದವು. ಬದುಕಿನ ನಾಡಿ ಹಿಡಿಯಬಲ್ಲವರಿಗೆ ಮಾತ್ರ ತಿಳಿಯದೆ ಇರಲಿಲ್ಲ- ಈ ಕೃಷ್ಣನ ಜತೆ ಬದುಕುವುದೆಂದರೆ ಎಷ್ಟು ಕ್ಷೇಮವೆಂದುಕೊಂಡರೂ ಅದು ಆತಂಕಮುಕ್ತವಾಗಿರಲಿಲ್ಲ; ಆಗುವುದೂ ಇಲ್ಲ ಎಂಬುದು. ಕೃಷ್ಣ ಆತಂಕಗಳಿಂದ ತಮ್ಮನ್ನು ಕಾಯಬಲ್ಲ. ಆತಂಕಗಳನ್ನು ಉಂಟುಮಾಡಲೂ ಬಲ್ಲ. ನಿರಾತಂಕ ಎನ್ನುವುದು ಬೇಕಿಲ್ಲವೇನೋ ಎಂಬಂತೆ ಇರುವವ. ಇವನು ಬದುಕನ್ನು, ಮನಸುಗಳನ್ನು ಗ್ರಹಿಕೆಗಳನ್ನೇ ಬದಲಾಯಿಸಲು ಬಂದವ. ಅಥವಾ ಇವನು ಬಂದಿರುವುದರಿಂದ ಬದುಕು ಬದಲಾಗಿಯೇ ಆಗುತ್ತದೆ. ಅಂದರೆ ಎಲ್ಲವನ್ನೂ ಉದ್ದೇಶಪಟ್ಟು, ಗಾಢಾಲೋಚನೆ ಮಾಡಿಯೇ ನಡೆಸುತ್ತಾನೆ ಎನ್ನುವಂತಿಲ್ಲ. ತತ್ ಕ್ಷಣದ ಸ್ಪಂದನದಿಂದ ನಡೆಸುತ್ತಾನೆ. ಆ ಸ್ಪಂದನ ತೀವ್ರವಾಗಿರುತ್ತದೆ. ಸಹಜವಾಗಿರುತ್ತದೆ. ಬಹಳ ಯೋಚನೆ ಮಾಡಿ ಬದುಕನ್ನು ಕಟ್ಟುವವರಿಗೆ ಇಂಥವನ ಸಹವಾಸ ಎಷ್ಟು ಆಪ್ಯಾಯಮಾನವಾದರೂ ಅದು ಆತಂಕಮುಕ್ತವಲ್ಲ. ಈ ಕೃಷ್ಣನದು ಸದಾ ಒಂದು ‘ನಡುವಣ ಜಾಗ’ ಎನಿಸುತ್ತದೆ. ಲೋಕವನ್ನು ಬಿಟ್ಟಿರಲೊಲ್ಲ. ಕ್ಷಣದಲ್ಲಿ ಎಲ್ಲದರಿಂದಲೂ ಕಳಚಿಕೊಳ್ಳಲೂ ಬಲ್ಲ. ಎದುರಿಗೆ ಇದ್ದರೆ ಕಾಡುತ್ತಾನೆ. ಮರೆಯಾದರೆ ತಾನು ಇನ್ನಷ್ಟು ಕಾಡುತ್ತಾನೆ. ಅಂದರೆ ಕಣ್ಣು ತೆರೆದರೆ ಕಾಣುವುದಕ್ಕಿಂತ ಕಣ್ಣು ಮುಚ್ಚಿ ನೆನೆದರೆ ಅವನು ಇನ್ನಷ್ಟು ಜೀವಂತ! ಅವನ ಕಪ್ಪು ಮೈಬಣ್ಣದ ಅರ್ಥ ಇದೇ ಇರಬಹುದೇನೋ! ನೆನೆದರೇ ಅವನನ್ನು ಕರೆದಂತೆ. ನೆನೆದರೇ ಹೆಚ್ಚು ಸಿಗುವವ. ಹಾಗೆ ಸಿಕ್ಕಿ, ನಮ್ಮಲ್ಲಿ ನೆನೆಯುವ ಶಕ್ತಿಯನ್ನು- ಧ್ಯಾನದ ಬಲವನ್ನು- ಇನ್ನಷ್ಟು ಆಳವಾಗಿಸುವವ. ನಮ್ಮನ್ನು ಧ್ಯಾನ ಜೀವಿಗಳಾಗಿಸುವವ. ಧ್ಯಾನವೆಂದರೆ ಹೊರಗಣ ಬದುಕನ್ನುಕಸಿದುಕೊಂಡಂತೆ ಎಂದು ಭಾವಿಸುವೆವಾದರೆ, ಆ ಅರ್ಥದಲ್ಲಿ ನಮ್ಮಲ್ಲಿ ಆತಂಕವನ್ನು ಸೃಷ್ಟಿಸುವವ. ಹಾಗೆ ಸೃಷ್ಟಿಸುವುದೇ ಧನ್ಯತೆ ಎಂದು ಕಂಡುಕೊಂಡಂತೆ ಇರುವವನು. ನಾವು ನಮ್ಮನ್ನು ಹೊರನೋಟಕ್ಕೆ ಹೇಗೆ ಕಾಣುವೆವೋ ಅದಕ್ಕಿಂತ ಹೆಚ್ಚು ತಾನು ತನ್ನ ಧ್ಯಾನದಲ್ಲಿ ನಿಮ್ಮನ್ನು ಕಂಡುಕೊಳ್ಳುವೆ ಎಂದು ನಮ್ಮ ವ್ಯಕ್ತಿತ್ವದ ಒಳವಿವರಗಳನ್ನು ಬಿಚ್ಚಿಡಬಲ್ಲವ. ಎಲ್ಲರಿಗೂ ಅವರ ಪಾಡಿಗೆ ಅವರಿರುವುದು ಇಷ್ಟವಾದರೆ ಈತ ವಿಲಕ್ಷಣ. ನಿಮ್ಮ ಪಾಡು ನನ್ನ ಪಾಡೂ ಹೌದು ಎನ್ನುವ. ತನ್ನ ಪಾಡಿಗೆ ತಾನು ಇರುವುದೆಂದರೆ, ‘ವಿಶ್ವ-ಪ್ರಜೆ’ಯಾಗುವ ಅನುಭವವನ್ನು ತಳ್ಳಿ ಹಾಕಿದಂತೆ ಎಂದು ವಾದಿಸುವ. ಅವನಿರುವ ‘ನಡುವಣ ಜಾಗ’ ಎಲ್ಲರಿಗೂ ಇದೆ ಎನ್ನುವ; ಸಂಗ- ಅಸಂಗ ಎರಡೂ ಬೆರೆತಿರುವ ನಡುವಣ ಜಾಗ ಅದು. ಎಲ್ಲ ವಿರೋಧಗಳಿಗೂ ಜಾಗ ಕಲ್ಪಿಸುವ ನಡುವಣ ಜಾಗ ಅದು. ಇದು ವಿಶೇಷ! ‘ಅವತಾರ’ವೆಂದರೆ ಹೀಗೆ ಮನುಷ್ಯ-ದೇವರು ಈ ಎರಡೂ ಬೆರೆತ ನಡುವಣ ಜಾಗೆಯೋ ಏನೋ! ಅಥವಾ ಮನುಷ್ಯನೆಂದರೇ ಈ ಎರಡರ ಬೆರಕೆಯೋ ಏನೋ!

ಇಂಥ ಕೃಷ್ಣ ಕಡಲ ನಡುವೆ ಕಟ್ಟಿದ ನಗರಿಗೆ ‘ದ್ವಾರಕಾ’ ಎಂದು ಹೆಸರು. ಕೃಷ್ಣನಿರುವ ‘ನಡುವಣ ಜಾಗೆ’ಯ ಸಂಕೇತ ನಗರಿಯೋ! ಹೆಸರೇ ಸೂಚಿಸುವಂತೆ ದ್ವಾರಕೆ ತೆರೆದ ಬಾಗಿಲುಗಳ; ತೆರೆದ ಅನೇಕ ಬಾಗಿಲುಗಳ ನಗರಿ. ಕೃಷ್ಣ ಕಟ್ಟಿಸಿದ ಎರಡು ವಾಸ್ತುಗಳು- ಒಂದು ದ್ವಾರಕಾ. ಇನ್ನೊಂದು ದೈತ್ಯ ಶಿಲ್ಪಿಯಾದ ಮಯನಿಗೆ ಹೇಳಿ ಪಾಂಡವರಿಗಾಗಿ, ಅವರು ರಾಜಸೂಯದಂಥ ದೊಡ್ಡ ಯಾಗಗಳನ್ನು ಮಾಡಲು ಅನುಕೂಲವಾಗುವಂತೆ ರೂಪಿಸಿದ ಮಹಾ-ಸಭಾಭವನ. ಈ ಸಭಾಭವನದಲ್ಲೇ, ರಾಜಸೂಯದ ಕೊನೆಯಲ್ಲಿ, ದುರ್ಯೋಧನ ನೆಲ-ನೀರುಗಳ ವ್ಯತ್ಯಾಸ ತಿಳಿಯದೆ ಹೆಂಗಸರ ನಡುವೆ ನಗೆಗೀಡು ಆದದ್ದು. ನಕ್ಕ ದ್ರೌಪದಿಯ ಬಗ್ಗೆ ದುರ್ಯೋಧನನಿಗೆ ತೀರದ ಹಗೆ ಉಂಟಾದದ್ದು. ಇದೇ ಕಾರಣವಾಗಿ ದ್ಯೂತದ ಸಂದರ್ಭದಲ್ಲಿ ದ್ರೌಪದಿಯ ವಸ್ತ್ರಾಪಹಾರದ ಪ್ರಸಂಗ ನಡೆದದ್ದು. ಇದರ ಪರಿಣಾಮವೇ ಕುರುಕ್ಷೇತ್ರದ ಮಹಾಯುದ್ಧ. ನೆಲ- ನೀರುಗಳ ವ್ಯತ್ಯಾಸ ತಿಳಿಯದವ ಪಾಂಡವರಿಗೆ ನೆಲಕೊಡಲಾರೆನೆಂದ! ಯುದ್ಧದ ಕೊನೆಗೆ ಕೊಳವೊಂದರ ನೀರಿನಲ್ಲಿ ಜೀವಗಳ್ಳನಾಗಿ ಮುಳುಗಿ ಕೂತಿದ್ದ! ಈ ಎಲ್ಲ ಇತಿಹಾಸ ಮಯಸಭೆಯ ವಿಚಿತ್ರ ವಾಸ್ತುವಿನಿಂದ ತೊಡಗಿತು. ದುರ್ಯೋಧನ ಎಡವಿ ಬಿದ್ದಾಗ ದ್ರೌಪದಿಯ ಜತೆಗೆ ಕೃಷ್ಣ ಕೂಡ ನಕ್ಕಿದ್ದನಂತೆ. ಆ ನಗೆಯ ಹಿಂದೆ ಏನಿತ್ತೋ!

ದ್ವಾರಕೆಯ ರಚನೆಯ ಹಿಂದೆ ಯಾದವರಿಗೆ ತಾವಾಗಿ ಬೆಳೆಯಲನುವಾಗುವಂತೆ ಹೊಸ ಊರೊಂದನ್ನು ಕಟ್ಟುವ ಕನಸಿತ್ತು. ಮಥುರೆಗೆ ಸದಾ ಆಕ್ರಮಣದ ಭೀತಿ ಇತ್ತು. ಕಂಸವಧೆಯ ಅನಂತರ ಮಗಧದ ದೊರೆ ಜರಾಸಂಧ ಉರಿದೆದ್ದಿದ್ದ. ಅವನ ಇಬ್ಬರು ಹೆಣ್ಣು ಮಕ್ಕಳೂ ಕಂಸನ ಮಡದಿಯರಾಗಿ ಈಗ ಗಂಡನನ್ನು ಕಳೆದುಕೊಂಡ ದು:ಖದಲ್ಲಿದ್ದರು. ಇದಕ್ಕೆ ಪ್ರತೀಕಾರವಾಗಿ, ಜರಾಸಂಧ, ದೊಡ್ಡ ಸೇನೆಯೊಂದಿಗೆ ಮಥುರೆಯನ್ನು ಮುತ್ತಿದ್ದ. ಯಾದವರಿಗೆ ದೊಡ್ಡ ಯುದ್ಧದ ಅನುಭವವಿಲ್ಲದಿದ್ದರೂ ಕೃಷ್ಣ-ಬಲರಾಮರು ಜರಾಸಂಧನನ್ನು ಸಮರ್ಥವಾಗಿಯೇ ಎದುರಿಸಿದ್ದರು. ಮಹಾ ಬಲಶಾಲಿಯಾದ ಬಲರಾಮ ಯುದ್ಧದಲ್ಲಿ ಜರಾಸಂಧನನ್ನು ಕೆಡವಿ, ಸಾಯಿಸುವುದರಲ್ಲಿದ್ದ. ಆಗ ಅಲ್ಲಿಗೆ ಬಂದ ಕೃಷ್ಣ, ಸಾಯಿಸದಂತೆ ತಡೆದ.  ಜರಾಸಂಧನನ್ನು ಕೊಂದರೆ, ಯಾದವರು ಕ್ಷತ್ರಿಯ ಲೋಕದಲ್ಲಿ ಮುಂಚೂಣಿಗೆ ಬಂದು ನಿಂತಂತೆ.  ತಾವೂ ಒಂದು ಶಕ್ತಿ ಕೇಂದ್ರ ಎಂದು ಸ್ಥಾಪಿಸಿದಂತೆ. ಈ ಸ್ಥಾಪನೆಯನ್ನು ಸಮರ್ಥಿಸಲು ಆ ಮೇಲೆ ಅಶ್ವಮೇಧ- ರಾಜಸೂಯಾದಿಗಳ ತಯಾರಿ ನಡೆಯಬೇಕು. ಈ ಎಲ್ಲ ಒತ್ತಡಗಳನ್ನು ಯಾದವರು ತಡೆಯಲಾರರು. ಅದೆಲ್ಲ ಮದಾಂಧ ಕ್ಷತ್ರಿಯರಿಗಿರಲಿ. ಕುರು ಪಾಂಚಾಲರಿಗಿರಲಿ. ಯಾದವರಿಗೆ ಬೇಕಿಲ್ಲ. ಈ ಕುಲೀನ ಕ್ಷತ್ರಿಯರಿಗೆ ಬೇಕಿದ್ದರೆ ಅವರೇ ಯಾದವರ ಶಕ್ತಿಯನ್ನು ಯಾಚಿಸುವ ಹಾಗಾಗಲಿ. ಅಲ್ಲದೆ, ಜರಾಸಂಧನನ್ನು ಕೊಲ್ಲಲು ಬೇರೆಯೇ ಒಂದು ವಿಧಾನವಿತ್ತು. ಅವನು, ಹೋಳಾಗಿ ಸೀಳಿ ಎಸೆದರೂ ಅದು ಮತ್ತೆ ಕೂಡಿಕೊಳ್ಳುತ್ತಿತ್ತು. ಜರಾ-ಸಂಧನನ್ನು ಅಷ್ಟು ಸುಲಭದಲ್ಲಿ ವಿ-ಸಂಧಿ ಮಾಡಲಾಗದು ಎಂದು ಕೃಷ್ಣನಿಗೆ ತಿಳಿದಿತ್ತು. ಬಲರಾಮನಿಗೆ ಅದು ಸಾಧ್ಯವಿತ್ತಾದರೂ ಅಂಥ ಪರಾಕ್ರಮವಿರುವ ಮತ್ತೊಬ್ಬ ವೀರ ಕ್ಷತ್ರಿಯರಲ್ಲಿಯೇ ಬೆಳೆಯುವುದು ಹೆಚ್ಚು ಇಷ್ಟವಾದ ಸಂಗತಿಯಾಗಿತ್ತು. ಅಂಥ ಕ್ಷತ್ರಿಯ ವೀರನನ್ನು ತಮ್ಮ ನಿಕಟ ಬಂಧು ವರ್ಗದಲ್ಲಿಯೇ ಬೆಳೆಸುವುದು ಇನ್ನಷ್ಟು ಇಷ್ಟವಾಗಿತ್ತು. ಅಂಥವನೊಬ್ಬನಿದ್ದ. ಸೋದರತ್ತೆ ಕುಂತಿಯ ಮಗ ಭೀಮಸೇನ! ರಾಜಸೂಯದಲ್ಲಿ ಭೀಮಸೇನ, ಕೃಷ್ಣನ ನಿರ್ದೇಶನದಂತೆ ಜರಾಸಂಧನನ್ನು ಸೀಳಿ ಎಸೆದ! ಮತ್ತು ಕುರುಕ್ಷೇತ್ರದಲ್ಲಿ ದು:ಶಾಸನನ ಕರುಳು ಸೀಳಿದ! ಹೋಳುಗಳು ಕೂಡಿ ಬದುಕಲಾರದ ಕ್ಷತ್ರಿಯರು. ಹೋಳು ಹೋಳಾಗಿಯೇ ಹಾಳಾಗಿ ಸಾಯಬೀಳುವ ಕ್ಷತ್ರಿಯರು. ಯಾರಿಂದಲೂ ತಡೆಯಲಾಗದ ನಡೆದೇ ನಡೆಯುವ, ಇತಿಹಾಸದ ದುರಂತ! ನಡೆಯಲಿ. ಯಾದವರು ಇದರ ಕೇಂದ್ರದಲ್ಲಿರುವುದು ಬೇಡ! ಹಾಗೆ ಜರಾಸಂಧ ಬಲರಾಮನಿಂದ ಆಗ ಬದುಕಿಕೊಂಡ. ಜರಾಸಂಧನಿಗೆ ಕೊಟ್ಟ ಅವಕಾಶ ಭೀಮಸೇನ ಬೆಳೆಯುವುದಕ್ಕೂ ಮಾಡಿಕೊಟ್ಟ ಅವಕಾಶವಾಗಿತ್ತು. ಕಂಸನನ್ನು ಕೊಲ್ಲುವ ಕೃಷ್ಣ ಹೇಗೆ ಬೆಳೆಯುತ್ತಿದ್ದನೋ ಜರಾಸಂಧನನ್ನು ಕೊಲ್ಲುವ ಭೀಮ ಹಾಗೆ ಬೆಳೆಯುತ್ತಿದ್ದ. ಮತ್ತು ಮಥುರೆಗೆ ಆಕ್ರಮಣದ ನಿತ್ಯ ಭೀತಿ ಇದ್ದುದರಿಂದ, ದ್ವಾರಕೆಯಂಥ ದೂರದ ದ್ವೀಪಸದೃಶ ನಗರವೊಂದರ ನಿರ್ಮಾಣ ಅಗತ್ಯವಿತ್ತು. ಈ ಎಲ್ಲ ಧೋರಣೆಗಳೂ ಕೃಷ್ಣನ ‘ನಡುವಣ ಜಾಗ’ದಲ್ಲಿ ನಿಂತ ನಿಲುವಿಗೆ ಅನುರೂಪವೂ ಆಗಿತ್ತು!

ದ್ವಾರಕೆಯ ನಿರ್ಮಾಣದ ನಂತರ ಕೃಷ್ಣನ ಪ್ರಸಿದ್ಧಿ ಅಪಾರವಾಗಿ ಬೆಳೆಯಿತು. ಒಂದು ದಿನ ದ್ವಾರಕೆಗೆ ದೂರದ ವಿದರ್ಭದಿಂದ ಬ್ರಾಹ್ಮಣನೊಬ್ಬ ಬಂದಿಳಿದ. ಕೃಷ್ಣನನ್ನೇ ನೋಡಬೇಕೆಂದ. ಕೃಷ್ಣ ಚಮತ್ಕೃತನಾಗಿ ಏಕಾಂತದಲ್ಲಿ ಭೇಟಿಗೊಟ್ಟ. ಬ್ರಾಹ್ಮಣ ಪತ್ರವೊಂದನ್ನು ನೀಡಿದ. ಅದು ವಿದರ್ಭ ರಾಜಕುಮಾರಿಯ ಪ್ರೇಮ-ನಿವೇದನೆಯ ಪತ್ರವಾಗಿತ್ತು. ಕುಮಾರಿಯ ಹೆಸರು ‘ರುಕ್ಮಿಣಿ’.  ವಿದರ್ಭ, ಕಾವ್ಯ-ಸಾಹಿತ್ಯಗಳ ಅಧ್ಯಯನಕ್ಕೆ ಪ್ರಸಿದ್ಧವಾದ ನಾಡು. ವೈದರ್ಭರೀತಿ ಎನ್ನುವುದೇ ಒಂದು ಮಾತಿನ ಶೈಲಿ. ‘ತ್ಯಯ್ಯಚ್ಚ್ಯುತಾವಿಶತಿ ಚಿತ್ತ ಮಪತ್ರಮಂ ಮೇ’ ಇದು ಆ ಪ್ರೇಮಸಾರ. ನಿನ್ನಲ್ಲಿ ನನ್ನ ಮನಸ್ಸು ನೆಟ್ಟು ಬಿಟ್ಟಿದೆ- ನಾಚಿಕೆ ಬಿಟ್ಟು ಹೇಳುತ್ತಿದ್ದೇನೆ: ಓ ಅಚ್ಚ್ಯುತ. ‘ಅಪತ್ರಪ’; ಎಂದರೆ ನಾಚಿಕೆ ಬಿಟ್ಟು ಎಂದು. ಪತ್ರದಲ್ಲಿ ಎಲ್ಲನ್ನೂ ಬರೆಯಲಾಗುವುದಿಲ್ಲ. ಎಲ್ಲವನ್ನೂ ಬರೆಯಲೇ ಆಗುವುದಿಲ್ಲ ಎನ್ನುವ ಧ್ವನಿಯೂ ಇದೆ; ಅಪತ್ರಪ ಎನ್ನುವ ಮಾತಿನಲ್ಲಿ. ಬ್ರಾಹ್ಮಣನೊಡನೆ ಕೂಡ ವಿಚಾರಿಸು ಎಂಬ ಸೂಚನೆ ಕೂಡ ಇದೆ. ಮಾತು ನೇರವೆಂದರೆ ನೇರ. ಆದರೂ ಧ್ವನಿ ರಮ್ಯ. ಇರಬಹುದು ಇದೇ ವೈದರ್ಭೀರೀತಿ!

ಕೃಷ್ಣ ವಿಚಾರಿಸಿದ. ರುಕ್ಷ್ಮಿಣಿಯನ್ನು ಶಿಶುಪಾಲನಿಗೆ ಮದುವೆ ಮಾಡಿಕೊಡುವ ಸಿದ್ಧತೆ ನಡೆದಿತ್ತು. ರಾಜಕುಮಾರಿಯ ಅಣ್ಣಂದಿರು ರುಕ್ಮಿ; ರುಕ್ಮರಥ ಮುಂತಾದವರು ಕೃಷ್ಣನಿಗೆ ವಿರೋಧವಿದ್ದರು. ಇವರೆಲ್ಲ ಜರಾಸಂಧನ ಒಕ್ಕೂಟದ ಸದಸ್ಯರಂತಿದ್ದರು. ಇವರೆಲ್ಲರನ್ನೂ ವಿರೋಧಿಸಿ ರುಕ್ಮಿಣಿ ತನ್ನಂತರಂಗವನ್ನು ಕೃಷ್ಣನಿಗೆ ತಿಳಿಸಿದ್ದಳು. ತಾನು ಪೂಜೆಗೆಂದು ದೇಗುಲದ ಬಳಿ ಬರುವುದಾಗಿ, ಅಲ್ಲಿ ತನ್ನನ್ನು ದ್ವಾರಕೆಗೆ ಒಯ್ಯಲು ಸಿದ್ಧನಾಗಿ ಕೃಷ್ಣ ಬರಬೇಕಾಗಿ ಬರದಿದ್ದರೆ ಬದುಕಲಾರೆನೆಂದು ತಿಳಿಸಿದ್ದಳು. ತಾನು, ತೆರೆದ ಬಾಗಿಲು ಎನ್ನುವ ಅರ್ಥದಲ್ಲಿ ದ್ವಾರಕೆಗೆ ಹೆಸರು ಇಟ್ಟದ್ದನ್ನು ನೆನೆದು ಕೃಷ್ಣನಿಗೆ ನಸುನಗು ಬಂತು. ಕುಮಾರಿಯ ಪ್ರೇಮ ನಿರಾಕರಿಸುವಂತಿಲ್ಲ. ಬರುವವರೆಲ್ಲ ಬರಲಿ!

ಹಾಗೆ ಎಲ್ಲ ವಿರೋಧಗಳ ನಡುವೆ ರುಕ್ಮಿಣೀ ಪರಿಣಯ ನಡೆಯಿತು. ತಡೆಯಲು ಬಂದ ಶಿಶುಪಾಲಾದಿಗಳನ್ನು ಸೋಲಿಸಿ, ಯಾರ ಕೈಗೂ ಸಿಗದೆ, ರುಕ್ಮಿಣಿಯನ್ನು ದ್ವಾರಕೆಗೆ ಕರೆತಂದ ಕೃಷ್ಣ. ಅದು ರುಕ್ಮಿಣೀಹರಣ! ಚಿತ್ತಾಪಹರಣ ಕೂಡ. ಕಡಲ ನಡುವಿನ ದ್ವಾರಕೆಗೆ, ಲಕ್ಷ್ಮಿಯಂತೆ ರುಕ್ಮಿಣಿ ಬಂದಳು. ಅರಮನೆಗೆ ಹೊಸ ಕಳೆ ಬಂತು. ಬಲರಾಮ ದೇವ ಆಗಲೇ ರೇವತಿಯನ್ನು ಮದುವೆಯಾಗಿದ್ದ. ಗೋಕುಲ; ವೃಂದಾವನ, ಮಥುರೆಗಳ ಜೀವನ ಹಾಗೇ ನಡೆದಿತ್ತಾದರೂ ಹೆಚ್ಚಿನ ಯಾದವರೆಲ್ಲ ದ್ವಾರಕೆಯನ್ನು ಸೇರಿದರು.

ಒಂದು ಸಂಜೆ ರುಕ್ಮಿಣಿ ಮತ್ತು ಕೃಷ್ಣ ಅಂತ:ಪುರದಲ್ಲಿ ಸರಸದಲ್ಲಿದ್ದರು. ಕೃಷ್ಣ, ನಲ್ಲೆ ರುಕ್ಮಿಣಿ ಮಡಚಿಕೊಟ್ಟ ರಸತಾಂಬೂಲ ಮೆಲ್ಲುತ್ತಿದ್ದ. ಅವನ ತುಟಿಯಂಚಿನ ಕೆಂಪುರಸ ಅವಳ ಕೆನ್ನೆಯಲ್ಲಿ ಚಿತ್ತಾರ ಬರೆದಿತ್ತು. ಇದ್ದಕಿದ್ದಂತೆ ಕೃಷ್ಣ ಹೇಳಿದ:

ನೀನು ನನ್ನಲ್ಲಿ ನಾಚದೆ ಮಾತನಾಡಿದೆ ರುಕ್ಮಿಣಿ; ನಾನೂ ನಾಚದೆ ಹೇಳಲೇಬೇಕಾದ ಮಾತೊಂದಿದೆ.

ನೀನೂ ನನ್ನಲ್ಲಿ ನಾಚಬೇಕೇನು? ನಾಚಿದರೊಂದು ರುಚಿ. ‘ನಾಚಿಕೆ’ ಬಿಟ್ಟರೆ ಬೇರೊಂದು ರುಚಿ!

ನಿನ್ನ ವೈದರ್ಭೀ ರೀತಿಗೆ ನಾನಿನ್ನೂ ಪಳಗಿಲ್ಲ. ಆದರೂ ಗುಟ್ಟೊಂದನ್ನು ಬಿಚ್ಚಿಡುವುದೆಂದರೆ ತುಸು ನಾಚಿಕೆ!

ನನ್ನಲ್ಲಿಯೂ ನಿನಗೆ ಗುಟ್ಟೇನು?

ಗುಟ್ಟೆಂದರೆ ಗುಟ್ಟಲ್ಲ; ಆದರೂ ಗುಟ್ಟು!

ಇದಂತೂ ವೈದರ್ಭೀ ರೀತಿಯಲ್ಲ; ಓ ನನ್ನ ಕೃಷ್ಣ ಬಿಚ್ಚಿ ಹೇಳಲ್ಲ.

ಹೇಳಬೇಕಾದ ಗುಟ್ಟೇನು ಗೊತ್ತೇ? ನಾನು ನಿನಗೆ ಅಸಮಾನ ಎಂಬ ಮಾತು. ಐಶ್ವರ್ಯದಲ್ಲಿ ಲೋಕಪಾಲೋಪಮರಿದ್ದರು. ಪ್ರಭಾವಶಾಲಿಗಳು; ರೂಪಶಾಲಿಗಳು; ಬಲಶಾಲಿಗಳು ಇದ್ದರು. ನಿನ್ನ ಅಣ್ಣಂದಿರು ನಿನ್ನನ್ನು ಶಿಶುಪಾಲನಿಗೆ ವಾಗ್ದಾನ ಮಾಡಿದ್ದರು. ನಿನ್ನನ್ನು ಹಂಬಲಿಸುವವರೆಷ್ಟು ಜನ! ನಾನೋ ಎಲ್ಲ ರೀತಿಯಲ್ಲೂ ನಿನಗೆ ಅಸಮಾನ. ಜರಾಸಂಧನಂಥ ಶತ್ರುಗಳಿಗೆ ಭೀತನಾಗಿ ಕಡಲ ನಡುವೆ ಮನೆ ಮಾಡಿದೆ. ಬಲವದ್ವಿರೋಧವಿದೆ. ಸಿಂಹಾಸನಾಧಿಕಾರವಿಲ್ಲ……

ರುಕ್ಮಿಣಿಗೆ ನಗು ಬಂತು. ಇದಲ್ಲ ನೀನು ಹೇಳಬೇಕಾಗಿದ್ದುದು ಎಂದಳು.
ಕೃಷ್ಣ ಹೇಳಿದ: ಇದಲ್ಲ ನಿಜ. ಇದಕ್ಕಿಂತ ನಿಷ್ಠುರ ಸತ್ಯ ಹೇಳಬೇಕಿದೆ. ಮಾತೇನೆಂದರೆ- ನನ್ನ ದಾರಿಯೇ ವಿಲಕ್ಷಣ. ಲೋಕದ ದಾರಿ ನನ್ನದಾರಿಯಲ್ಲ. ಬದುಕಿನ ಬಗ್ಗೆ ಜನಕ್ಕಿರುವ ಖಚಿತತೆ ನಾ ನಂಬಲಾರೆ. ಕುಲೀನತೆ, ಆಢ್ಯತೆ, ಚೆಲುವು, ಐಶ್ವರ್ಯ, ಅಧಿಕಾರ ಇದಾವುದನ್ನೂ ನಾನು ನೆಚ್ಚಲಾರೆ. ಇಂಥ ನನ್ನ ಜತೆ ಹೆಜ್ಜೆ ಹಾಕುವ ಹೆಂಗಸರಿಗೆ ಚಿಂತೆ ಕಾಡದೆ ಇರುತ್ತದೆಯೇ? ಇದೇ ನನ್ನ ಚಿಂತೆ! ನಿಜ ಹೇಳುತ್ತೇನೆ. ನನಗೆ ‘ಆಸಕ್ತಿ’ಯೇ ಇಲ್ಲ. ‘ಅನಾಸಕ್ತಿ’ಯೇ ನನ್ನ ಸ್ವಭಾವ. ಉದಾಸೀನಾವಯಂ ನೂನಂ ನಸ್ತ್ರೀ ಅಪತ್ಯ ಅರ್ಥಕಾಮುಕಾ: ದುಡ್ಡು; ಹೆಣ್ಣು; ಸಂತತಿ- ಯಾವುದೂ ನನ್ನನ್ನು ಸೆಳೆಯುವುದಿಲ್ಲ. ನಾನು ಈ ನನ್ನ ದೇಹವನ್ನೂ ಸೇರಿಸಿ, ಈ ಲೋಕವನ್ನು ನೋಡುವುದು ಕೇವಲ ‘ಸಾಕ್ಷಿ’ಯಾಗಿ. ‘ಸಾಕ್ಷಿ’ಯನ್ನು ಬಿಟ್ಟು ‘ಪಾತ್ರ’ ವಹಿಸುವುದು ನನ್ನಿಂದಾಗದು. ಇಂಥ ನನ್ನನ್ನು ನಿನಗೆ ಸಮಾನನಲ್ಲದವನನ್ನು ಹುಚ್ಚಿಯಂತೆ ಪ್ರೇಮಿಸುತ್ತಿರುವೆಯಲ್ಲ- ಇದು ಏನು ನಮ್ಮ ಪಾಡು!

ಕೇಳುತ್ತಿದ್ದ ರುಕ್ಮಿಣಿಗೆ ದು:ಖ ಉಕ್ಕಿತು. ಲೋಕದಲ್ಲಿ ಗಂಡು-ಹೆಣ್ಣಿನ ನಡುವೆ ವಿಲಕ್ಷಣ ವ್ಯವಹಾರವಿದೆ. ಗಂಡು ಹೆಣ್ಣನ್ನು ಮೇಲಿಡುತ್ತಾನೆ. ನಾನು ನಿನಗೆ ಸಮಾನನಲ್ಲ ಎನ್ನುತ್ತಾನೆ. ಹೆಣ್ಣಿನ ಅನುಕಂಪಕ್ಕಾಗಿ, ಆ ಅನುಕಂಪವೇ ತನಗೆ ಸಾಕೆಂಬಂತೆ, ಅವಳ ಮುಂದೆ ತನ್ನ ಕೀಳರಿಮೆಯೇ ತನಗೆ ಪ್ರಿಯವೆಂಬಂತೆ- ನಡೆದುಕೊಳ್ಳುತ್ತಾನೆ. ಹೆಣ್ಣಿಗೆ ಇಷ್ಟು ಅಹಂತೃಪ್ತಿ ಆಗಿಬಿಡುತ್ತದೆ- ಬದುಕಿನುದ್ದಕ್ಕೆ ಇವರಿಬ್ಬರ ಈ ಮಾಯೆ ನಡೆದಾಡುತ್ತದೆ.

ರುಕ್ಮಿಣಿ ಇದನ್ನು ಬಲ್ಲಳು. ಕೃಷ್ಣ, ಲೋಕದ ಈ ಆಟವನ್ನು ತನ್ನಲ್ಲಿ ಆಡಲಾರ! ಗದ್ಗದವಾಗಿ ಹೇಳಿದಳು: ಓ ನನ್ನ ಕೃಷ್ಣ, ನಾನು ನಿನಗೆ ಅನುರೂಪಳಾಗುವುದೆಂತು? ಲೋಕ ವಿಲಕ್ಷಣನಾದ ನಿನ್ನನ್ನು ನಾನು ಅನುಸರಿಸುವುದೆಂತು? ಅಷ್ಟು ಮಾಡು. 

ಕೃಷ್ಣ ಹೇಳಿದ: ಈ ಅನುಸರಿಸುವ ಮಾತು ಬಿಟ್ಟು ಬಿಡು. ನಾನು ನಿನ್ನನ್ನು ಅನುಸರಿಸುತ್ತಿದ್ದೇನೆ. ಮನಸ್ಸು ದೇಹವನ್ನು ಅನುಸರಿಸುವುದಿಲ್ಲವೆ? ಹಾಗೆ. ಇದು ನಿನಗೆ ತಿಳಿದರೆ ಸಾಕು. ನಾನು ಆಡಬೇಕಾದ, ಆದರೆ ಲೋಕ ಕೇಳಲೊಲ್ಲದ, ಮಾತನ್ನು ನಾನು ಯಾರ ಮುಂದೆ ಆಡಬೇಕು? ನನ್ನಲ್ಲಿ ಎಲ್ಲವನ್ನೂ ತೋಡಿಕೊಂಡ ನಿನ್ನ ಮುಂದಲ್ಲದೆ? ನಾನು ಸತ್ಯ ಹೇಳೋದು ಯಾರ ಮುಂದೆ? -ನನ್ನ ಪಾಡು ನಿನಗೆ ತಿಳಿದರೆ, ನನ್ನ ಪಾಡೇ ನಿನಗೆ ಬರುತ್ತದೆ. ಮತ್ತೆ ಅನುಸರಣೆಯ ಮಾತೇ ಬೇಕಿಲ್ಲ. ನನ್ನ ಅಸ್ತಿತ್ತ್ವ, ದೇಹದಲ್ಲಿ ಬಂದಿಯಾಗಿಲ್ಲ, ಅದು ವಿಶ್ವದ ಎಲ್ಲೆಡೆ ಚಾಚಿದೆ. ನಿನ್ನದೂ ಹಾಗೆಯೇ. ಈ ಅರ್ಥದಲ್ಲಿ ನಾನು ಇರಬೇಕು; ಇಲ್ಲದಿರಬೇಕು -ಎಂಬಂತೆ ಇದ್ದೇನೆ. ನಾನು ‘ಇದ್ದೇನೆ’ ಎನ್ನುವುದನ್ನು ಎಲ್ಲರ ಮುಂದೆಯೂ ಹೇಳಬಹುದು. ನಾನು ‘ಇಲ್ಲ’ ಎನ್ನುವುದನ್ನು ನಿನ್ನ ಮುಂದೆ ಮಾತ್ರ ಹೇಳಬಹುದು. ನಾವು ದ್ವಾರಕೆಯ ಅಂತ:ಪುರದ ಬಂದಿಗಳಲ್ಲ. ವಿಶ್ವದ ಬಯಲಲ್ಲಿ ಜೊತೆಯಾಗಿ ನಡೆವ ಪಯಣಿಗರು.  ಇಷ್ಟು ಮಾತುಗಳನ್ನು ನಿನ್ನ ನಾಚಿಕೆ ಇಲ್ಲದ ಪ್ರೇಮ ಪತ್ರ ನನ್ನಿಂದ ನುಡಿಸಿತು- ಎಂದ.

ಕೊನೆಗೂ ವೈದರ್ಭೀ ರೀತಿ ಗೆದ್ದಿತು ಎಂದುಕೊಂಡಳಂತೆ ರುಕ್ಮಿಣಿ.

ತೋಳ್ಪಾಡಿ ಭಾಗವತ 31:ಕಾಲಯವನ ಸುಟ್ಟ ಮುಚುಕುಂದ

ದ್ವಾರಕೆಯಂಥ ದ್ವಾರಕೆ ಕೂಡ ಶತ್ರು ಭೀತಿಯಿಂದ ಪೂರ್ಣಮುಕ್ತವಾಗಿರಲಿಲ್ಲ. ಹಾಗೆ ಮುಕ್ತವಾಗುವುದು  ಸಾಧ್ಯವೂ ಇಲ್ಲ. ಒಂದು ರಚನೆಯ ಕಾರಣದಿಂದಲೇ- ಹೀಗೊಂದು ನೆಲೆ ಇದೆ ಎನ್ನುವ ಕಾರಣದಿಂದಲೇ ಅದರ ಭಂಜಕರೂ ಹುಟ್ಟಿಕೊಳ್ಳುತ್ತಾರೆ. ಕೆತ್ತನೆಯೊಂದು ತನ್ನ ಭಂಜಕರನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ! ತನಗೆ ತಾನೇ ಶತ್ರು, ತನಗೆ ತಾನೇ ಮಿತ್ರ ಎನ್ನುವ ಕೃಷ್ಣನ ಪ್ರಸಿದ್ಧವಾದ ಮಾತಿನಲ್ಲಿ ಈ ಅರ್ಥವೂ ಇಣುಕುತ್ತಿರುವಂತಿದೆ. ಆದರೆ ಕೃಷ್ಣನಿಗೆ ತನ್ನ ದ್ವಾರಕೆ ಕಾಳಗದ ಕಣವಾಗುವುದು ಖಂಡಿತ ಬೇಕಿರಲಿಲ್ಲ. ಯುದ್ಧ ನಡೆಯದ ಒಂದಾದರೂ ನಗರ ಲೋಕದಲ್ಲಿರಬೇಕು. ಏಕಿರಬೇಕು? -ಅದಕ್ಕೆ ಕಾರಣ ಹಲವು. ಅದಿರಲಿ. ಯುದ್ಧ ನಡೆಯದೆ ಇರುವುದೆಂದರೆ, ನಡೆಯಬಹುದಾದ ಯುದ್ಧವನ್ನು ಉಪಾಯದಿಂದ ತಪ್ಪಿಸಬೇಕು. ಅಂಥ ಉಪಾಯ ಹೊಳೆಯಬೇಕಾದರೆ ಕ್ಷತ್ರಿಯರ ಜನ್ಮಜಾತ ಮದಾಂಧ ಗರ್ವವನ್ನು ದೂರವಿಟ್ಟು ಸಾಮಾನ್ಯನಾಗಿ ಯೋಚಿಸಬೇಕು. ಈ ಲೋಕದಲ್ಲಿ, ಸಾಮಾನ್ಯ ಇದ್ದೂ ಇಲ್ಲದಂತೆ ಇರುವವನಲ್ಲವೆ? ಇದ್ದೂ ಇಲ್ಲದಂತೆ ಇರಲು ಸಾಧ್ಯವಾಗುವುದೇ ದೊಡ್ಡ ಉಪಾಯವೊಂದರ, ದೊಡ್ಡ ಕೌಶಲವೊಂದರ ಫಲ.

‘ಕಾಲಯವನ’ನೆಂಬ ರೂಕ್ಷ ರಾಕ್ಷಸನೊಬ್ಬನಿದ್ದ. ಅವನಲ್ಲಿ ಅವನಷ್ಟೇ ಒರಟಾದ ದೊಡ್ಡದೊಂದು ಸೇನೆಯೂ ಇತ್ತು. ಒರಟು ಶಕ್ತಿಯನ್ನು ನಿಭಾಯಿಸುವುದು ಇನ್ನಷ್ಟು ಕಷ್ಟ. ಅಲ್ಲದೆ, ಈ ‘ಕಾಲಯವನ’, ಯಾದವರು ಶಕ್ತರು; ಅವರು ಜರಾಸಂಧನಂಥವನನ್ನೂ ಲೆಕ್ಕಿಸಲಿಲ್ಲ ಎಂದು ತಿಳಿದು ಯಾದವರ ಜತೆ ಹೋರಾಟಕ್ಕೆ ನಿಂತವ. ಶಕ್ತರೊಡನೆ ಮೈ ಬೆವರೊಡೆಯುವಂತೆ ಹೋರದಿದ್ದರೆ, ಅವನ ಕೊಬ್ಬು- ಎಲ್ಲ ಅರ್ಥಗಳಲ್ಲಿಯೂ- ಕರಗುತ್ತಿರಲಿಲ್ಲ. ಕಾಲಯವನ ಎಂಬ ಹೆಸರು ಕೇಳುವಾಗ ಭರತ ವರ್ಷದ ಮೇಲೆ ಏರಿಬಂದ ವಿದೇಶೀ ಆಕ್ರಮಣಕಾರರನ್ನು ‘ಭಾಗವತ’ ಸೂಚಿಸುತ್ತಿದೆಯೋ? ಕಾಲಯವನನನ್ನು ಕೃಷ್ಣ ನಿರೋಧ ಮಾಡಿದ್ದು ಒಂದು ವಿಶಿಷ್ಟ ತಂತ್ರಗಾರಿಕೆಯಿಂದ. ನೇರ ಹೋರಾಟದಲ್ಲಿ ಅಲ್ಲ. ಇದು ಕೂಡ ಭಾಗವತದ ಒಂದು ಸೂಚನೆಯಂತಿದೆ.

ಕಾಲಯವನ ಮಥುರೆಯನ್ನು ಮುತ್ತಿದ. ಮಥುರೆಗೆ ಜರಾಸಂಧನ ಭಯ ಇದ್ದದ್ದೇ. ಈಗ ಕಾಲಯವನ! ಕೃಷ್ಣ ಎರಡೆರಡು ಬಾರಿ ಯೋಚಿಸಿದ. ಆ ಯವನನಿಗೆ ಮಥುರೆಗಿಂತ ಹೆಚ್ಚು ತನ್ನ ಮೇಲೆ ಕಣ್ಣು! ಕಂಸನನ್ನು ಮುರಿದು ಒಮ್ಮೆಲೇ ಪ್ರಸಿದ್ಧಿಗೆ ಬಂದವನನ್ನು ಅದುಮಿಟ್ಟರೆ ಅದು ಕಾಲಯವನನನ್ನು ದೊಡ್ಡ ನಾಯಕನನ್ನಾಗಿಸುತ್ತದೆ. ಜರಾಸಂಧನಿಗಿಂತಲೂ ದೊಡ್ಡ ನಾಯಕನನ್ನಾಗಿ. ಯವನನಿಗೆ ತನ್ನ ಮೇಲೆ ಕಣ್ಣು ಎಂದು ನೆನೆದು ಕೃಷ್ಣನಿಗೆ ತುಟಿಯಂಚಿನಲ್ಲಿ ನಸು ನಗು ಸೂಸಿತು. ಮುತ್ತಿದ ಯವನನ ಸೇನೆಗೆ ಯಾದವರ ಸೇನೆ ತಾಗಿತು. ಹೋರಾಟ ತೊಡಗಿತು. ಏನಾಯಿತೆಂದರೆ ಕಾಲಯವನ ನೋಡುತ್ತಿರುವಂತೆ ಕೃಷ್ಣ ಯುದ್ಧ ರಂಗದಿಂದ ಕಾಲ್ತೆಗೆದನು! ಬಲರಾಮ ದ್ವಾರಕೆಯಲ್ಲೇ ಇದ್ದ; ಅದರ ರಕ್ಷಣೆಗಾಗಿ. ಕೃಷ್ಣ ನುಸುಳಿಕೊಂಡು ಹೋಗುತ್ತಿರುವುದು ಯವನನಿಗೆ ಕಂಡಿತು. ಕೃಷ್ಣನ ಕೈಯಲ್ಲಿ ಆಯುಧವೂ ಇದ್ದಿಲ್ಲ.  ಯವನ ಚಕಿತನಾದ. ಈ ಕೃಷ್ಣನೆಂಥ ಹೋರಾಟಗಾರ? ಈತ ಓಡಿ ಹೋಗುತ್ತಿದ್ದಾನೆ! ಪಲಾಯನ ಪಟು!  ಜೀವಗಳ್ಳ! ಯವನನಿಗೆ ತನ್ನ ಬಗ್ಗೆ ಗರ್ವವೆನಿಸಿತು. ಆದರೂ ಈ ಕೃಷ್ಣನನ್ನು ಬಿಡಲಾಗದು. ತಾನೊಬ್ಬನೇ ಅವನನ್ನು ಹಿಂಬಾಲಿಸಬೇಕು ಎಂದುಕೊಂಡ. ಕೃಷ್ಣನ ಹಿಂದೆ ತಾನೂ ಓಡತೊಡಗಿದ. ಹೀಗೆ ಕೃಷ್ಣ ಮತ್ತು ಕಾಲಯವನ ಇಬ್ಬರೂ ಓಡತೊಡಗಿದರು. ಎಷ್ಟು ಓಡಿದರೂ ಕೃಷ್ಣ ಕೈಗೆ ಸಿಗುತ್ತಿರಲಿಲ್ಲ. ಹಾಗೆಂದು ಪೂರ್ತಿ ಮರೆಯಾಗುತ್ತಲೂ ಇರಲಿಲ್ಲ. ಎಲ್ಲೋ ದೂರದಲ್ಲಿ ಪೀತಾಂಬರ ಹೊಳೆಯುತ್ತಿತ್ತು! ಹಾಳಾಗಿ ಹೋಗಲಿ ಎಂದು ಹಿಂತಿರುಗುವಂತಿರಲಿಲ್ಲ. ಓಡುತ್ತ ಓಡುತ್ತ ಯವನನಿಗೆ ಹಟ ಹುಟ್ಟಿತು. ಕೃಷ್ಣ ಎಲ್ಲಿಗೆಲ್ಲ ಯವನನನ್ನು ಒಯ್ದನೋ! ದೂರದಲ್ಲಿ ಒಂದು ಬೆಟ್ಟ. ದೊಡ್ಡ ಕಲ್ಲುಗಳನ್ನು ಒಂದರ ಮೇಲೊಂದು ಪೇರಿಸಿ ಇಟ್ಟಂತೆ ಇವೆ. ಕೃಷ್ಣನೇನೋ ನುಣ್ಣಗೆ ಕಾಣುತ್ತಿದ್ದಾನೆ! ಅವನಿಗೆ ಆಯಾಸವಾದಂತಿದೆ. ಅಲ್ಲಲ್ಲಿ ನಿಂತು ಏದುಸಿರು ಬಿಡುತ್ತ ಕಣ್ಣಿನಲ್ಲಿ ಹೆದರಿಕೆಯನ್ನು ಸೂಸುತ್ತ ನಡೆಯುತ್ತಿದ್ದ. ನಡಿಗೆಯಲ್ಲಿ ವೇಗವಿಲ್ಲ. ಯವನನಿಗೆ ತಿಳಿದು ಬಿಟ್ಟಿತು. ಈ ಬೆಟ್ಟದಲ್ಲೇ ಈ ಕಳ್ಳನನ್ನು ಹಿಡಿದು ಹಾಕುವೆ. ಅವನ ಹುಮ್ಮಸ ಏರಿತು.  ಓಡಿ ಕೃಷ್ಣನಿಗೆ ಹತ್ತಿರವಾದ. ಬೆಟ್ಟದಲ್ಲಿ ಒಂದು ಗುಹೆ ಇತ್ತು. ಯವನ ನೋಡುತ್ತಿರುವಂತೆ ಕೃಷ್ಣ ಗುಹೆಯೊಳಗೆ ನುಸುಳಿದ. ಎಲ್ಲಿ ಮರೆಯಾಗಿ ಹೋದನೋ. ಕಾಲಯವನ ಕೂಡ ಗುಹೆಯೊಳಗೆ ಧಾವಿಸಿದ. ಸಣ್ಣಗೆ ಬೆಳಕಿತ್ತು. ರೂಕ್ಷವಾಗಿ ಸುತ್ತೆಲ್ಲ ನೋಡಿದ. ಅಲ್ಲೊಬ್ಬ ಉದ್ದಕ್ಕೆ ಮಲಗಿರುವುದು ಕಂಡಿತು. ಮುಸುಕು ಹೊದೆದಿದೆ. ಜೀವಂತವೋ! ಶವವೋ! ಯಾರೋ! ಅಥವಾ ಈ ಉಪಾಯಗಾರ ಕೃಷ್ಣನೇ ಇರಬಹುದು! ಆಯಾಸಗೊಂಡಿದ್ದಾನೆ. ಆಚಾರಕ್ಕೂ ಆಯಿತು; ಸುಖಕ್ಕೂ ಆಯಿತು ಎಂಬಂತೆ ಸುಸ್ತು ಕಳೆಯಲು ಹೀಗೆ ಸೋಗು ಹಾಕಿದ್ದಾನೆ. ಸೋಗಲಾಡಿ. ಕಾಲಯವನ ಹೇಳಿ ತೀರದ ರೋಷದಿಂದ ಕಾಲು ಅಪ್ಪಳಿಸುತ್ತ ಮುಸುಕು ಹೊದ್ದು ಮಲಗಿದ್ದ ನಿಗೂಢ ವ್ಯಕ್ತಿಗೆ ಬಲವಾಗಿ ಒದ್ದು ಬಿಟ್ಟ.

ವ್ಯಕ್ತಿ ಮಿಸುಕಿತು. ಎಚ್ಚರುವ ಉದ್ದನೆಯ ಉಸಿರು ಹೊರಟಿತು. ಮೈ ಮುರಿಯಿತು. ಮುಸುಕು ತೆಗೆಯಿತು. ವ್ಯಕ್ತಿ ಎದ್ದು ಕೂತಿತು. ಒಮ್ಮೆಲೇ ಕಣ್ಣು ತೆರೆಯಿತು. ಏನಾಯಿತೆಂದರೆ; ಆ ಕಣ್ಣಿನಿಂದ ಕಿಡಿಗಳು ಹಾರಿದವು. ಯೋಗಿಯ ನಿದ್ರೆ ಭಂಗಗೊಂಡದ್ದರಿಂದ ಕ್ರೋಧ ಜ್ವಾಲೆಗಳು ಚಿಮ್ಮಿದವು. ಕ್ಷಣದಲ್ಲಿ ಕಾಲಯವನನ ಮೈಗೆ ಬೆಂಕಿ ಹಿಡಿಯಿತು. ಚೀತ್ಕಾರವೂ ಇಲ್ಲದೆ ಯವನ ಉರಿದು ಹೋದ. ಹಿಡಿ ಬೂದಿ ಮುಚುಕುಂದನ ಕಾಲಬಳಿ ಗುಪ್ಪೆ ಬಿದ್ದಿರಬಹುದು.

ಅವನು ಮುಚುಕುಂದ. ಇಕ್ಷಾಕುವಂಶದ ರಾಜರ್ಷಿ. ಒಂದು ಕಾಲದಲ್ಲಿ ದೇವತೆಗಳಿಗೆ ನೆರವಿತ್ತ ಶಕ್ತ. ಒಲಿದ ದೇವತೆಗಳು ಕೇಳಿದರಂತೆ: ನಿನಗೇನು ಬೇಕು! ಮುಚುಕುಂದ ಹೇಳಿದ: ಲೋಕ ಜೀವನವೆಂದರೆ ದಣಿವು. ಇನ್ನಷ್ಟು ದಣಿವು. ಲೋಕವೆಂದರೇ ನೋಡುವುದಲ್ಲವೆ? ಲೋಕ. ಲೋಕನ. ಅವಲೋಕನ. ನೋಡಿ ನೋಡಿ ದಣಿವಾಗಿದೆ. ನೀವು ದೇವತೆಗಳಾದ್ದರಿಂದ ಹೀಗೆ ಬಿಡುಗಣ್ಣರಾಗಿದ್ದೀರಿ. ಅನಿಮಿಷರು! ನೀವು ಕಣ್ಣು ಮುಚ್ಚುವಂತಿಲ್ಲ. ನನಗೆ ಕಣ್ಣು ಮುಚ್ಚಬೇಕಿದೆ. ದೀರ್ಘ ವಿಶ್ರಾಂತಿ ಬೇಕಿದೆ. ಸಮಾಧಿ ಸ್ಥಿತಿಯಲ್ಲಿ ಮುಳುಗಬೇಕಿದೆ. ಅನುಗ್ರಹಿಸಿ. ದೇವತೆಗಳು ತಥಾಸ್ತು ಎನ್ನುವ ಮುಂಚೆ ಇದಕ್ಕೆ ಇನ್ನೊಂದು ಮಾತು ಸೇರಿಸಿದರಂತೆ. ನೀನು ಯೋಗ ನಿದ್ರೆಯಲ್ಲಿ ಆಳವಾಗಿ ಮುಳುಗಿರುವಂತಾಗಲಿ. ನಿನ್ನ ಈ ವಿಶ್ರಾಂತಿಯನ್ನು ಒಂದೊಮ್ಮೆ ಯಾರು ಕೆಡಿಸಿದರು ಅವರು ಉರಿದು ಬೂದಿಯಾಗಿ ಬೀಳುವರು- ನೀನವರನ್ನು ದಿಟ್ಟಿಸಿ ನೋಡಿದರೆ! ಎಂದು ಮಾತು ಸೇರಿಸಿ, ‘ತಥಾಸ್ತು’ ಎಂದರು. ಹಾಗೆ ಮುಚುಕುಂದ, ಅತಿಶೈತ್ಯದಲ್ಲಿ ಪ್ರಾಣಿಗಳ ಮೈ ಕಾಪಿಡುವುದಕ್ಕೆ ನಿಸರ್ಗವೇ ಅವುಗಳನ್ನು ದೀರ್ಘ ನಿದ್ರೆಗೆ ಒಯ್ಯುವಂತೆ ಸಮಾಧಿಯನ್ನು ಅನುಭವಿಸುತ್ತಿದ್ದವನು. ಈಗ ಹೀಗಾಗಿದೆ!

ಕಾಲಯವನ ಉರಿದು ಹೋದ ಮೇಲೆ ಕತ್ತಲ ಗರ್ಭದಿಂದ ಕೃಷ್ಣ ಕಾಣಿಸಿಕೊಂಡ- ಮುಚುಕುಂದನ ಮುಂದೆ. ಮುಚುಕುಂದ ದಿಟ್ಟಿಸಿ ನೋಡಿದ. ಕೃಷ್ಣ ನಗುತ್ತಿದ್ದ. ಇದ್ದಕಿದ್ದಂತೆ ಮುಚುಕುಂದನಿಗೆ ಹೊಳೆಯಿತು. ಹೇಳಿದ: ನನ್ನ ನಿದ್ದೆಯನ್ನು ಕೆಡಿಸಿದವನನ್ನು ದಿಟ್ಟಿಸಿ ನೋಡಿಯೇ ಸುಟ್ಟೆ. ನಿನ್ನನ್ನಾದರೋ ಕಣ್ತೆರೆದು ನೋಡಲಾಗುತ್ತಿಲ್ಲ ನನಗೆ. ಅಂಥ ತೇಜೋಬಿಂಬ- ಓ ನೀನು ಯಾರು? ಕೃಷ್ಣ ತನ್ನ ಬಗ್ಗೆ ಈಗ ಪೂರ್ತಿ ಎಚ್ಚತ್ತಿದ್ದ. ಹೇಳಿದ: ಬೆಳಕನ್ನು ವಿಂಗಡಿಸಬೇಕಿದೆ ಎಂದರೆ ನಾನು ಪಾಠ ಮಾಡುತ್ತಿದ್ದೇನೆ ಎಂದುಕೋ ಬೇಡ. ಆದರೆ, ವಿಂಗಡಿಸಬೇಕಿದೆ ಎನ್ನುವುದು ಮಾತ್ರ- ನಿಜ. ಯಾವುದನ್ನು ಯಾವುದರಿಂದ ವಿಂಗಡಿಸೋದು? ‘ಬೆಳಕ’ನ್ನು ‘ಶಾಖ’ದಿಂದ ವಿಂಗಡಿಸೋದು. ಹೌದು. ಬೆಳಕು ಮತ್ತು ಶಾಖ ಎರಡಿವೆ. ಎರಡೂ ‘ಬೆಳಕೇ’ ಮತ್ತು ಎರಡೂ ‘ಶಾಖವೇ’. ಅಷ್ಟರ ಮಟ್ಟಿಗೆ ಎರಡೂ ಜತೆಯಾಗಿವೆ! ಆದರೂ ವಿಂಗಡಿಸೋದು ಸಾಧ್ಯ! ‘ಶಾಖ’ವೊಂದು ಅದ್ಭುತ. ಅದು ನೀರನ್ನು ಉರಿಮಾಡಬಲ್ಲುದು! ಉರಿಯನ್ನು ನೀರು ಮಾಡಬಲ್ಲುದು! ವಸಂತದಲ್ಲಿ ಚಿಗುರೊಡೆದು ಜೀವದ ಸಂಭ್ರಮವನ್ನುಕ್ಕಿಸಬಲ್ಲುದು. ಉರಿ ಬೇಸಗೆಯಲ್ಲಿ ಎಲ್ಲವನ್ನೂ ಸುಟ್ಟು ಕರಕು ಮಾಡಬಲ್ಲುದು. ಪ್ರಾಣದ ‘ಹದ’ದಿಂದಲೇ ಜೀವ ಜಗತ್ತು. ಪ್ರಾಣದ ತೀಕ್ಷ್ಣತೆಯಿಂದಲೇ ನಾಶ.

‘ಪ್ರಾಣ’ವೆಂದರೆ ಶಾಖ. ‘ಶಾಖ’ವೆಂದರೆ ಪ್ರಾಣ. ಪ್ರಾಣವೆಂದರೆ ಶಾಖವೆಂದರೆ ಶಕ್ತಿ ‘ಶಕ್ತಿ’ ಎಂದರೆ ‘ಚಲನೆ’. ಚಲನೆಯಿಂದ ರೂಪಾಂತರ. ನಾಶವೆಂದರೂ ರೂಪಾಂತರವೇ. ನೀನು ದಿಟ್ಟಿಸಿ ನೋಡಿ ಯವನನನ್ನು ಸುಟ್ಟದ್ದು ನಿನ್ನ ನೋಟದಲ್ಲಿ ಶೇಖರವಾಗಿದ್ದ ಪ್ರಾಣ ಶಾಖದಿಂದಲೇ. ಲೋಕವೆಲ್ಲ ಈ ಶಾಖವೆಂಬ ಪ್ರಾಣ ಶಕ್ತಿಯ ಹಿಂದೆ ಬಿದ್ದಿದೆ. ‘ಅಗ್ನಿ ಚಯನ’!

ನಾನು ಹೇಳಬೇಕೆಂದಿರೋದೇನು ಗೊತ್ತೆ? ಏನೆಲ್ಲವನ್ನೂ ಸೃಷ್ಟಿಸಬಲ್ಲ. ಸುಡಬಲ್ಲ ರೂಪಾಂತರ ಮಾಡಬಲ್ಲ ‘ಶಕ್ತಿ’ ತಾನು ರೂಪಾಂತರಗೊಳ್ಳುವುದು ಸಾಧ್ಯ! ಎಲ್ಲವನ್ನೂ ರೂಪಾಂತರ ಮಾಡುತ್ತ ನಡೆಯುವುದು ನಿಸರ್ಗದ ದೈನಂದಿನ ವ್ಯಾಪಾರವೇ ಆದರೂ ಒಂದು ವಿಶಾಲವಾದ ಅರ್ಥದಲ್ಲಿ ಈ ವ್ಯಾಪಾರ ಅರ್ಥಶೂನ್ಯವೆಂದು, ವ್ಯರ್ಥ ಪ್ರಯಾಸವೆಂದು, ಅಥವಾ ಇದು ನಿಜವಲ್ಲವೆಂದು, ನಿಜ- ಬೇರೆ ಇದೆ ಎಂದು ‘ಶಕ್ತಿ’ಗೆ ಹೊಳೆದರೆ ಆಗ ತನ್ನಲ್ಲೇ ತಾನು ಬದಲಾಗುವ ಪ್ರಕ್ರಿಯೆ ಶುರುವಾಗಬಹುದು. ಆಗ ಇನ್ನೊಂದನ್ನು ಸುಡೋದಿಲ್ಲ. ಇದು ಅಂತರ್ದಹನ! ಇದು ಶಕ್ತಿಯ ಸಾಧ್ಯತೆ! ಇದು, ಲೋಕದ ದೃಷ್ಟಿಯಲ್ಲಿ ‘ಶಕ್ತಿ’ಯು ತನ್ನನ್ನು ತಾನು ಕಳೆದುಕೊಂಡಂತೆ. ಉಂಟೆ? ಈ ಲೋಕದಲ್ಲಿ ಯಾರಾದರೂ ‘ಶಕ್ತಿ’ಯನ್ನು ಬಿಟ್ಟು ಕೊಡುವುದುಂಟೆ? ಎಂದರೆ ಉಂಟು. ಇರುತ್ತಾರೆ ಕೆಲವರು. ತಾನು ಇನ್ನೊಂದನ್ನು ರೂಪಾಂತರ ಮಾಡಬಲ್ಲೆನೆಂದು ತಿಳಿದಾಗ ತನಗೂ ರೂಪಾಂತರವಿದೆಯೇನು ಹಾಗಾದರೆ ಎಂದು ತಮ್ಮನ್ನು ತಾವೇ ಕೇಳಿಕೊಳ್ಳಬಲ್ಲವರು. ಅಂತರ್ದಹನಗೊಂಡವರನ್ನು ಯಾವ ಬೆಂಕಿಯೂ ಸುಡಲಾರದು. ಅವರೂ ಏನನ್ನೂ ಸುಡಲಾರರು. ಬೆಂಕಿ ಬೆಂಕಿಯನ್ನು ಸುಡುವುದುಂಟೆ? ನೀರು ನೀರನ್ನು ನೆನೆಯಿಸುವುದುಂಟೆ? ಗಾಳಿ ತನ್ನನ್ನು ತಾನು ಉಸಿರಾಡಬೇಕೆ? ಮತ್ತೇನು ಉಳಿಯುತ್ತೆ ಎಂದು ನೀನು ಕೇಳುವೆ.  ಗೊತ್ತು.

ಮತ್ತೆ ಉಳಿಯುವುದು ಬೆಳಕು! ಶಾಖವಿಲ್ಲದ ಬೆಳಕು! ಎಲ್ಲರಿಗೂ ಅವರಿಗೆ ಅವರನ್ನೇ- ಇನ್ನೊಂದನ್ನಲ್ಲ- ತೋರಿಸುವ ಬೆಳಕು! ಇನ್ನೊಂದನ್ನು ತೋರಿಸಿದ್ದೂ ಇದೇ ಬೆಳಕು! ಬೇರೆ ಬೆಳಕೆಂಬುದೆಲ್ಲಿದೆ? ತನ್ನಿಂದ ಬೇರೆಯಾಗಿ ಇನೊಂದನ್ನು ಕಂಡಾಗ- ಮೈಬಿಸಿಯಾಗುವುದು ನಿಜ. ಶಾಖ ಹುಟ್ಟಿಕೊಳ್ಳುವುದು ನಿಜ. ಆ ಇನ್ನೊಂದು ತನಗೆ ಬೇಕೆಂದು ಅದರ ಕಡೆಗೆ ‘ಚಲನೆ’ ಶುರುವಾಗುವುದು ನಿಜ. ಚಲನೆ ಎಂದರೆ ಒಂದು ಅತಿ ಸೂಕ್ಷ್ಮ ರೀತಿಯಲ್ಲಿ ‘ಘರ್ಷಣೆ’ ಎನ್ನುವುದೂ ನಿಜ. ಇವೆಲ್ಲ ‘ಶಕ್ತಿ’ಯ ವ್ಯಾಪಾರ. ಶಾಖದ ಚಟುವಟಿಕೆ. ಈ ಅರ್ಥದಲ್ಲಿ ಬೆಳಕಿನಿಂದಲೇ- ಶಾಖ. ಆದುದರಿಂದಲೇ ನೀನು ಶಾಖವನ್ನು ವಿಂಗಡಿಸಿ ನೋಡಿದೆಯಾದರೆ, ಉಳಿಯುವುದು ಬೆಳಕೇ.

ಮತ್ತೆ ಉಳಿಯುವುದು ಬೆಳಕೇ. ಬೆಳಕು ಮಾತ್ರ ಇನ್ನೊಂದನ್ನು ಸುಡದಂತೆ ನೋಡಬಲ್ಲುದು. ಶಾಖ ಹಾಗೆ ನೋಡಲಾರದು, ಸುಡದಂತೆ ನೋಡುವುದೆಂದರೆ ಮೊನಚಿಲ್ಲದೆ ನೋಡುವುದು. ಇದು ವಿಚಿತ್ರವಾಗಿ ಕೇಳಿಸಬಹುದು. ಮೊನಚೆಂದರೆ ‘ಶಕ್ತಿ’, ‘ಶಕ್ತಿ’ ಎಂದರೆ ಅಹಂಕಾರ. ‘ತಾನು’ ಎನ್ನುವುದು ಬಹಳ ಮೊನಚಿನ ಒಂದು ಆಯುಧ. ಆಯುಧವಾಗಿರುವಷ್ಟು ಕಾಲ ಅದು ತನ್ನ ಮೊನಚನ್ನು ಕಳೆದುಕೊಳ್ಳಲಾರದು. ತನ್ನನ್ನು ತಾನು ಮಸೆದುಕೊಳ್ಳುತ್ತಲೇ ಇರುತ್ತದೆ. ಮೊನಚನ್ನು ಕಳೆದುಕೊಳ್ಳದೆ ‘ತಾನು’ ಅರಳಲಾರದು. ಅರಳುವುದೆಂದರೆ ಬೆಳಕಾಗುವುದು. ಶಾಖವು ಬೆಳಕಾಗುವುದು. ಬೆಳಕು ಮೊನಚಲ್ಲ ತಿಳಕೋ. ಮತ್ತು ಮೊನಚಿನಿಂದ ಬೆಳಕನ್ನು ಹಿಡಿಯ ಹೋದರೆ ಶಾಖವೇ ಹುಟ್ಟಿಕೊಳ್ಳುತ್ತದೆ; ತಿಳಕೋ. ಮೊನಚಿಲ್ಲದೆ, ಶಾಖವಿಲ್ಲದೆ, ಹೊಗೆಯೂ ಇಲ್ಲದೆ, ಅಹಂಕಾರವಿಲ್ಲದೆ ಈ ಲೋಕದಲ್ಲಿ ಬೆಳಕಿನಂತೆ ಅರಳಿ ಬದುಕುವುದೆಂದರೆ- ಅದನ್ನು ಇದ್ದು ಇಲ್ಲದ ಸ್ಥಿತಿ ಎಂದು ಲೋಕವೇ ಕರೆಯುವುದು! ಓ ಮುಚುಕುಂದ, ದೀರ್ಘ ವಿಶ್ರಾಂತಿಯಲ್ಲಿ ನೀನಿದ್ದಾಗ, ನೀನು ಆ ಸ್ಥಿತಿಯಲ್ಲೇ ಇದ್ದೆ. ಆದರೆ ಕಾಲಯವನನಿಂದ ನಿದ್ರಾಭಂಗವಾಯಿತು. ಅವನು ಉರಿದು ಹೋದ.  ಹೋಗಲಿ. ನನಗದೇ ಬೇಕಿತ್ತು ಎಂದು ತಿಳಕೋ. ಇದ್ದು ಇಲ್ಲದ ಸ್ಥಿತಿಯಲ್ಲಿ ನಡೆವ ಎಲ್ಲ ಚಟುವಟಿಕೆಗಳೂ ಲೋಕದ ಕಣ್ಣಿಗೆ ದೊಡ್ಡ ತಂತ್ರಗಾರಿಕೆಯಾಗಿ ಕಾಣುವುದೊಂದು ದೊಡ್ಡ ಮೋಜು! ತಂತ್ರಗಾರಿಕೆ ಎಂದರೆ ಬುದ್ಧಿಯ ಮೊನಚನ್ನು ಬಹುಮುಖವಾಗಿ ಪ್ರಯೋಗಿಸಿ ನೋಡುವುದೇ ಅಲ್ಲವೆ? ತಾನಿಟ್ಟ ಹೆಜ್ಜೆಗೆ ಶತ್ರುವಿನ ಪ್ರತಿಕ್ರಮ ಏನಿದ್ಧೀತು ಎಂದೂಹಿಸುವುದು ಶತ್ರುವಿನ ಮೂಲಕ ತನ್ನ ಮೊನಚನ್ನು ತಾನು ಪರೀಕ್ಷಿಸುವುದೇ ಆಗಿದೆಯಲ್ಲವೆ? ಅಬ್ಬಾ! ಈ ಲೋಕ; ಅರಳುವಿಕೆಯನ್ನು ತಂತ್ರಗಾರಿಕೆಯಿಂದ ಸಾಧಿಸಬಹುದು ಎಂದುಕೊಂಡಿದೆಯೇನು? ಆದರೆ, ಇದು ನಡೆಯೋದಿಲ್ಲ ಮುಚುಕುಂದ. ಏಕೆನ್ನುವಿಯೋ. ಲೋಕ ಬಹುಕಾಲ ಎಚ್ಚರವನ್ನು ಸಾಧಿಸಲಾರದು. ಅದಕ್ಕೆ ವಿಶ್ರಾಂತಿ ಬೇಕು. ನಿದ್ದೆ ಬೇಕು. ನಿದ್ದೆಯಲ್ಲಿ ತಂತ್ರಗಾರಿಕೆ ನಡೆಯೋದಿಲ್ಲ. ಬದುಕಿನಲ್ಲಿ ನಡೆಯಬಹುದು. ಸಾವಿನಲ್ಲಿ ತಂತ್ರಗಾರಿಕೆ ನಡೆಯೋದಿಲ್ಲ.

ನೀನು ನಿದ್ದೆಯಲ್ಲಿದ್ದೆ. ನಿದ್ರಾಭಂಗವಾಗಿ ಹೋಯಿತು. ಇನ್ನು ನೀನು; ಯಾತರಿಂದಲೂ ಭಂಗಗೊಳ್ಳದ ನಿದ್ದೆಯನ್ನು, ಇದ್ದು ಇಲ್ಲದ ಸ್ಥಿತಿಯನ್ನು ಸಾಧಿಸಬೇಕಿದೆ. ಯವನನನ್ನು ಸುಟ್ಟೆ. ಇನ್ನು ನೀನು ಅಂತರ್ದಹನಗೊಳ್ಳಬೇಕಿದೆ. ಕಣ್ಣನ್ನು ನೆಚ್ಚದಿರು. ಕಣ್ಣಿನ ಮೊನಚನ್ನು ನೆಚ್ಚದಿರು. ಅಗ್ನಿಯನ್ನು ನೆಚ್ಚದಿರು. ಕೊನೆಗೆ ಸೂರ್ಯನನ್ನು ಕೂಡಾ. ಇವೆಲ್ಲ ಶಾಖದ ಭಿನ್ನ ಮಾದರಿಗಳು!

ಇನ್ನೊಂದಿದೆ ಬೆಳಕು! ಅದನ್ನು ಹೇಗೆ ಬಣ್ಣಿಸಲಿ! ಇಲ್ಲಿನ ಬೆಳಕಿನ ಮಾದರಿಯಲ್ಲ ಎಂದೇ ಬಣ್ಣಿಸಬೇಕು!

ನ ತತ್ರ ಸೂರ್ಯೋಭಾತಿ| ನ ಚಂದ್ರ ತಾರಕಂ!
ನೇಮಾವಿದ್ಯುತೋ ಭಾಂತಿ| ಕುತೋಯಮಗ್ನಿ:||
ಯಸ್ಯ ಭಾಸಾ ಸರ್ವಮಿದಂ ವಿಭಾತಿ … …

ಅಲ್ಲಿ ಬೆಳಗುವುದಿಲ್ಲ- ಚಂದಿರ ಸೂರ್ಯ, ತಾರಕೆಗಳು
ಅಲ್ಲಿ ಮಿಂಚುವುದಿಲ್ಲ ಇಲ್ಲಿ ಕೋರೈಸುವ ಮಿಂಚು
ಇನ್ನು ಬೆಂಕಿಯ ಮಾತು ದೂರವೇ ಉಳಿಯಿತು.
ಆದರೆ, ಆ ಬೆಳಕಿನಿಂದಲೇ- ಈ ಎಲ್ಲ ಅಗ್ನಿಕಾರ್ಯಗಳು ತಮ್ಮ ಬೆಳಕನ್ನು ಪಡೆದಿವೆ.

ಕೃಷ್ಣನ ಮಾತು ಕೇಳುತ್ತಿದ್ದಂತೆ ಕಾಲಯವನನನ್ನು ಸುಟ್ಟ ಮುಚುಕುಂದನ ಕಣ್ಣುಗಳಿಂದ ಇದ್ದಕಿದ್ದಂತೆ ನೀರು ಸುರಿಯಲು ತೊಡಗಿತು.

ತೋಳ್ಪಾಡಿ ಭಾಗವತ 32:ಸಂಸಾರ ಎಂಬುದು ಅನ್ನವೂ ಕಾಮವೂ

‘ಅವತರಣ’ ಎಂದರೆ ಕೆಳಗಿಳಿದು ಬರೋದು. ಹಾಗೆ ಇಳಿದು ಬಂದದ್ದು ‘ಅವತಾರ’. ಅಂದರೆ, ತನ್ನ ನೆಲೆ ಬಿಟ್ಟು ಇಲ್ಲಿಗೆ ಇಳಿದು ಬರೋದು. ಅಲ್ಲಿದೆ ನಮ್ಮನೆ- ಇಲ್ಲಿ ಬಂದೆ ಸುಮ್ಮನೆ ಎಂದು ದಾಸರು ಹಾಡಿದರಲ್ಲ, ಆ ಅನುಭವದ ಮೂಲ ಇಲ್ಲಿದೆ. ಅಂದರೆ, ಆ ಹಾಡಿನಲ್ಲಿರೋದು ಇಳಿದು ಬಂದವನ, ದೇವರ- ಅನುಭವ. ದೇವರು ಮುಟ್ಟಿದವನ ಅನುಭವ ಕೂಡಾ. ಹಾಗೆ ಇಳಿದು ಬಂದವನು, ಇಲ್ಲಿ ಈ ಲೋಕ ನಮ್ಮದು ಎಂದು ಗಟ್ಟಿಯಾಗಿ ನಂಬಿರುವ ಲೌಕಿಕರಿದ್ದಾರಲ್ಲ- ಈ ಲೌಕಿಕರನ್ನು ಮೆಚ್ಚಿಸುವುದಕ್ಕೆಂಬಂತೆ ದುಡಿಯಬಲ್ಲ; ದುಡಿಯುತ್ತಾನೆ. ಲೋಕದ ದೈವ, ಲೋಕದ ದಾಸನಂತೆ ದುಡಿಯುತ್ತದೆ! ಈ ಸೂಕ್ಷ್ಮವನ್ನು ದೈವವನ್ನು ತಿಳಿದವನು ಗ್ರಹಿಸಬಲ್ಲ. ಗ್ರಹಿಸಿದವನು ತಾನು ದಾಸನಾಗದೆ ಇರುವುದು ಅಸಾಧ್ಯ. ಬರಿಯ ದಾಸನಲ್ಲ. ದಾಸರ ದಾಸ. ದಾಸದಾಸರ ಮನೆಯ ದಾಸಾನುದಾಸ! ಅದಿರಲಿ; ತನ್ನದಲ್ಲದ ಲೋಕದಲ್ಲಿ ತನ್ನದಲ್ಲದ್ದಕ್ಕಾಗಿ ದುಡಿಯೋದು, ಮನುಷ್ಯನ ಕ್ರಿಯಾಶೀಲತೆ ಮುಟ್ಟಬಹುದಾದ ಕೊನೆಯ ಬಿಂದು!

ಅಚ್ಚರಿ ಎಂದರೆ ಲೋಕವೆಲ್ಲ ನಡೆಯುತ್ತಿರೋದು ಜನಜೀವನದ ಇಂಥ ಪರಿಶ್ರಮದ ಮೇಲೆಯೇ. ಮನುಷ್ಯ ತನ್ನ ಬದುಕಿಗೆ ಮಾತ್ರ ಬೇಕಾದರೆ ಇಷ್ಟು ದುಡಿಯಬೇಕಿಲ್ಲ. ಆದರೂ ಬಹಳಷ್ಟು ದುಡಿಯುತ್ತಾನೆ- ಇತರರಿಗಾಗಿ. ಹಾಗೆ ದುಡಿಯದಿದ್ದರೆ, ತನಗೆ ಬೇಕಾದ್ದೂ ಸಿಗೋದಿಲ್ಲ. ತನಗೆ ದುಡಿದಂತೆ ಕೂಡಾ ಆಗೋದಿಲ್ಲ. ಲೋಕವ್ಯವಸ್ಥೆ ಹಾಗೆ ಇದೆ. ಈ ವ್ಯವಸ್ಥೆಯಲ್ಲಿ ಎಷ್ಟು ವಿಪರ್ಯಾಸಗಳಿದ್ದರೂ, ಇದನ್ನು ತಲೆಕೆಳಗಾದ ಸಾಮುದಾಯಿಕತೆ ಎಂದು ಭಾವಿಸುವಂತಾದರೂ, ಇಲ್ಲಿ ಸಮುದಾಯಭಾವವೊಂದಿದೆ ಎನ್ನುವುದು ಮಾತ್ರ ನಿಚ್ಚಳ. ಈ ವಿಪರ್ಯಾಸವನ್ನೂ, ಈ ಸಮುದಾಯ ಭಾವವನ್ನೂ ಗ್ರಹಿಸಿರುವನೆಂಬಂತೆ- ತನಗೇನೂ ಬೇಕಿಲ್ಲದಿದ್ದರೂ ತಾನು ಈ ಲೋಕದಲ್ಲಿ ದುಡಿಯುತ್ತೇನೆ- ಎಂದುದುಂಟು- ಕೃಷ್ಣ! ಆದುದರಿಂದ ಒಂದು ಅರ್ಥದಲ್ಲಿ ‘ಅವತಾರ’ವೆಂದರೆ, ಇಲ್ಲಿನ ಈ ಲೋಕದ ಜನಜೀವನವನ್ನೂ, ಈ ಬದುಕಿನ ಆಳದ ಕಷ್ಟಗಳನ್ನೂ ತಾನು ಅನುಭವಿಸೋದು! ಹಾಗೆ ಅನುಭವಿಸದೆ, ಯಾವ ಲೋಕದಿಂದ, ಯಾವ ಮೇಲಿನ ನೆಲೆಯಿಂದ ದೇವರು ಇಳಿದು ಬಂದನೋ ಆ ನೆಲೆಯ ಪೂರ್ಣತೆಯೂ ನಿಜವಾಗಿ ಪೂರ್ಣವಾಗುವುದಿಲ್ಲವೇನೋ! ಈ ಲೋಕದಲ್ಲಿ ಇಂಥ ತೀವ್ರ ದು:ಖ, ದುಗುಡ; ನೋವುಗಳಿರುತ್ತವೆ, ಆ ಲೋಕದಲ್ಲಿ ನಿರಾಳವಾಗಿರುವುದು ಒಂದೊಮ್ಮೆ ಸಾಧ್ಯವಾದರೂ ಹಾಗಿರುವುದೇ ಒಂದು ಸೆರೆಮನೆಯಲ್ಲಿ ಇದ್ದಂತೆ ಆಗುವುದೋ ಏನೋ! ಮೇಲಿನ ಲೋಕದಿಂದ ಇಳಿದು ಬಂದವನು ತನ್ನದಲ್ಲದ ಈ ಲೋಕದಲ್ಲಿ ಇರೋದು- ಅಥವಾ ಇದು ತಮ್ಮ ಲೋಕ ಎಂದು ಖಚಿತವಾಗಿ ತಿಳಕೊಂಡಿರುವವರ ನಡುವೆ ಇರೋದು- ಇದ್ದು ಇಲ್ಲದ ಒಂದು ಮನ:ಸ್ಥಿತಿಯನ್ನು ಉಂಟು ಮಾಡುವುದಾದರೆ, ಈ ಲೋಕ ಹೀಗಿರುತ್ತ ಆ ಲೋಕದಲ್ಲಿ ಇರುವುದೂ ಇದ್ದೂ ಇಲ್ಲದ ಸ್ಥಿತಿಯೇ ಆಗಲಾರದೆ? ಸೆರೆವಾಸದ ಅನುಭವ, ಇಲ್ಲಿ ಮತ್ತು ಅಲ್ಲಿ ಎರಡೂ ಕಡೆ- ಒಂದು ಸೂಕ್ಷ್ಮವಾದ ಅರ್ಥದಲ್ಲಿ ಸಮಾನವಾಗಿರುವಂತೆ ಅನಿಸುತ್ತದೆ.

ಕೃಷ್ಣನ ಕಾಲದಲ್ಲಿ ಮೂರು ಪ್ರಸಿದ್ಧ- ಕುಪ್ರಸಿದ್ಧ- ಸೆರೆಮನೆಗಳಿದ್ದವು. ಒಂದು, ಸ್ವಯಂ ಕೃಷ್ಣನ ತಂದೆ ತಾಯಿಯರೇ ಬಹುಕಾಲ ಬಂಧನವನ್ನು ಅನುಭವಿಸಿದ ಕಂಸನ ಆಳ್ವಿಕೆಯ ಮಥುರೆಯಲ್ಲಿನ ಸೆರೆಮನೆ. ಎರಡನೆಯದು ಮಗಧಾಧಿಪತಿಯಾದ ಜರಾಸಂಧನ ಸೆರೆಮನೆ. ಆ ಸೆರೆಮನೆಯಲ್ಲಿ, ತನ್ನ ಅಧಿಕಾರವನ್ನು ಒಪ್ಪಲಾರರೆಂಬ ಶಂಕೆಯಿಂದ ಸಣ್ಣ ಪುಟ್ಟ ಕ್ಷತ್ರಿಯ ರಾಜಕುಮಾರರನ್ನೆಲ್ಲ ನೂರು ಸಂಖ್ಯೆಯಲ್ಲಿ ಜರಾಸಂಧ ಕೂಡಿಹಾಕಿದ್ದ. ಈ ರಾಜಕೀಯಕ್ಕೆ- ಇವರನ್ನೆಲ್ಲ ಭೈರವನಿಗೆ ನರಬಲಿಕೊಡಬೇಕಿದೆ ಎಂಬ ಕಾಪಾಲಿಕ ಧರ್ಮದ ಬಣ್ಣವನ್ನು ಕೊಟ್ಟಿದ್ದ. ಈ ಕ್ಷತ್ರಿಯರ ಪರಿವಾರದವರು ಗುಟ್ಟಾಗಿ ಕೃಷ್ಣನನ್ನು ಕಂಡು ಸಹಾಯವನ್ನು ಕೋರಿದ್ದರು. ಕೃಷ್ಣ, ಪಾಂಡವ ಭೀಮನ ಮೂಲಕ ಜರಾಸಂಧನನ್ನು ಕೊಲ್ಲಿಸಿ, -ಈ ಕ್ಷತ್ರಿಯ ಹುಡುಗರನ್ನೆಲ್ಲ ಬಿಡುಗಡೆ ಮಾಡಿಸಿದ. ಜರಾಸಂಧನ ವಿರುದ್ಧದ ಈ ಉಪಕ್ರಮಕ್ಕೆ ಪಾಂಡವರು ತೊಡಗಿಕೊಂಡ ‘ರಾಜಸೂಯ ಯಾಗ’ದ ಕಾರಣವು ಅನುಕೂಲವಾಗಿ ಒದಗಿಬಂದಿತ್ತು. ನರಮೇಧದ ಕಾಪಾಲಿಕ ಧರ್ಮಕ್ಕೆ ಪ್ರತಿಯಾಗಿ ‘ರಾಜಸೂಯ’ದ ಯಜ್ಞ ಧರ್ಮ! ಹಾಗೆ ಜರಾಸಂಧನ ಸೆರೆಯಿಂದ ಬಿಡುಗಡೆಗೊಂಡ ಕ್ಷತ್ರಿಯ ಕುಮಾರರೆಲ್ಲ ಮುಂದೆ ನಡೆಯಲಿರುವ ಕೌರವ-ಪಾಂಡವರ ಮಹಾಯುದ್ಧದಲ್ಲಿ ಪಾಂಡವರ ಪರವಾಗಿ ನಿಲ್ಲುವುದು ಸಹಜವಿತ್ತು. ಇದೆಲ್ಲ ‘ಇತಿಹಾಸ’ವೆಂದು ಪ್ರಖ್ಯಾತವಾದ ‘ಜಯ’ ಎಂಬ ಹೆಸರಿನ ಮಹಾಭಾರತದ ವಿಷಯವಾಯಿತು. ಇನ್ನೊಂದು ಸೆರೆಮನೆ ಇತ್ತು. ಅದು ನರಕಾಸುರನೆಂದೇ ಹೆಸರಾದ ಪ್ರಾಗ್ಜೋತಿಷ ನಗರದ ದೊರೆಯಾದ ಭೌಮಾಸುರನದು.  ‘ಭೌಮ’ ಎಂಬ ಪದದ ಅರ್ಥ ಭೂಮಿಯ ಮಗನೆಂದು. ಮಣ್ಣಿನ ಮಗ. ಮಗನೆಂದಲ್ಲದೆ ತಾನು ಭೂಮಂಡಲಕ್ಕೆಲ್ಲ ಗಂಡನೆಂದುಕೊಳ್ಳುವ ಹಮ್ಮಿನ ಈ ದೈತ್ಯ, ಅಸುರನೊಬ್ಬನ ಅತ್ಯಾಚಾರದ ಫಲವಾಗಿ ಭೂದೇವಿಯಲ್ಲಿ ಜನಿಸಿದವನಂತೆ. ಆದುದರಿಂದಲೇ ಭೌಮಾಸುರ! ಭೂದೇವಿಯ ಮೇಲೆ ಅತ್ಯಾಚಾರ ಹಿರಣ್ಯಾಕ್ಷನಿಂದಲೇ ಮೊದಲಾಗಿತ್ತು. ಆ ಹಿರಣ್ಯಾಕ್ಷ ಪರಂಪರೆಯ ಯಾವನೋ ದೈತ್ಯ ಭೂದೇವಿಯ ಮೇಲೆ ಅತ್ಯಾಚಾರವೆಸಗಿದ್ದ. ಈ ನರಕಾಸುರ ಪ್ರಸಿದ್ಧನಾದದ್ದು ಮಾತ್ರ ಭೂಮಿಯ ಮಗನೆಂದೇ.  ಭೌಮನೆಂದೇ. ಭೂ ದೇವಿ- ಈತನ ಅರಮನೆಯಲ್ಲೇ ಇದ್ದಳಂತೆ. ‘ಅರಮನೆಯಲ್ಲೇ ಸೆರೆಮನೆಯಲ್ಲಿರುವಂತೆ ಇದ್ದಿರಬಹುದು’. ಅಲ್ಲದೆ, ಈ ಭೌಮಾಸುರನಿಗೆ ಮಗನೊಬ್ಬನಿದ್ದ. ಹುಡುಗನ ಹೆಸರು ಭಗದತ್ತ. ಮೊಮ್ಮಗನ ಮೇಲೆ ಭೂದೇವಿಗೆ ಸಹಜ ಮಮಕಾರವಿತ್ತು. ಭೌಮನಿಗೆ ಮುರಾಸುರನೆಂಬ ಗೆಳೆಯನೊಬ್ಬನಿದ್ದ. ಅವನು ಪ್ರಾಗ್ಜೋತಿಷವನ್ನು ಶತ್ರುಗಳಿಗೆ ಅಭೇದ್ಯವಾಗುವಂತೆ ತನ್ನ ಪಾಶಗಳಿಂದ ಬಲಿದು ರೂಪಿಸಿದ್ದ. ಪ್ರಾಗ್ಜೋತಿಷವೆಂದರೆ ಉದಯ ಸೂರ್ಯನ ಮೊದಲ ಕಿರಣ ಚುಂಬಿಸುವ ನೆಲವಂತೆ. ಮೊದಲ ಬೆಳಕು ಬೀಳುವ ಹೆಮ್ಮೆಯ ನಗರದಲ್ಲಿ ಕತ್ತಲ ಕೂಪವೊಂದಿತ್ತು. ಆ ಸೆರೆಮನೆಯಲ್ಲಿ ಹದಿನಾರು ಸಾವಿರ ಮಂದಿ ಹೆಣ್ಣುಮಕ್ಕಳು ಬಂದಿಗಳಾಗಿದ್ದರು. ಈ ಭೂಮಿಯ ಮಗ, ಭೂಮಂಡಲದ ಎಲ್ಲೆಡೆಗಳಿಂದ ಬಾಚಿ ತಂದ ಹೆಣ್ಣುಮಕ್ಕಳು. ಹದಿನಾರು ಸಾವಿರ ಎನ್ನುವ ನಿರ್ದಿಷ್ಟ ಸಂಖ್ಯೆ ದಾಖಲೆಯನ್ನು ಹೇಳುತ್ತದೆ. ಇದೊಂದೇ ಕಾರಣ ಸಾಕು; ಇಂಥ ನರಕಾಸುರನನ್ನು ತನ್ನ ಶತ್ರುವೆಂದು ಕೃಷ್ಣ ಬಗೆಯುವುದಕ್ಕೆ. ಅದರ ಮೇಲಿನಿಂದ, ಈ ನರಕ, ದೇವಮಾತೆ ಅದಿತಿಯ ಕುಂಡಲಗಳನ್ನು ಕದ್ದೊಯ್ದಿದ್ದನಂತೆ. ವರುಣನ ಬೆಳ್ಗೊಡೆ ಒಯ್ದನಂತೆ. ಹೀಗೆ ಎಷ್ಟೋ. ಸ್ವಯಂ ಇಂದ್ರನೇ ಬಂದು ಕೃಷ್ಣನಲ್ಲಿ ಈ ಬಗ್ಗೆ ದೂರಿದ್ದನಂತೆ.

ಕೃಷ್ಣ ತನ್ನ ಇನ್ನೊಬ್ಬಳು ಮಡದಿ ಸತ್ಯಭಾಮೆಯನ್ನು ಕೂಡಿಕೊಂಡು ಗರುಡನ ಮೇಲೇರಿ ನರಕಾಸುರನ ಪ್ರಾಗ್ಜೋತಿಷಕ್ಕೆ ಆಕ್ರಮಣ ಮಾಡಿದ. ನರಕನಲ್ಲಿ ‘ಶತಘ್ನಿ’ ಮುಂತಾದ ಶಸ್ತ್ರಾಸ್ತ್ರಗಳಿದ್ದವು. ಮುರಾಸುರನ ನೆರವಿತ್ತು. ಬೆಟ್ಟಗಳಿಂದ ಸುತ್ತುವರಿದ ಪ್ರಕೃತಿಯ ದುರ್ಗಮತೆಯೂ ನರಕನಿಗೆ ಸಹಾಯವಾಗುವಂತೆ ಇತ್ತು. ಆದುದರಿಂದಲೇ ಕೃಷ್ಣ ಇದೊಂದು ಬಾರಿ ಗರುಡನ ಮೇಲೇರಿ ಧಾಳಿ ಎಸಗಿದ. ಈ ಧಾಳಿಯ ಮುಂದೆ ನರಕನ ಯಾವ ಆಟವೂ ನಡೆಯದೆ ಹೋಯಿತು. ಭೂಮಿಯ ಮಗನ ಮೇಲೆ ಭೂಮ್ಯಾಕಾಶಗಳೇ ಮುನಿದಿದ್ದುವು! ಮುರ, ನರಕ, ಯುದ್ಧದಲ್ಲಿ ಹತರಾದರು. ಪ್ರಾಗ್ಜೋತಿಷದ ಜನತೆ ಹೊಸ ಬೆಳಕನ್ನು ಕಂಡರು. ಹದಿನಾರು ಸಾವಿರ ಹೆಂಗಳೆಯರ ಬಿಡುಗಡೆಯಾಯಿತು. ನರಕ ಯಾತನೆಯೊಂದು ಮುಗಿಯಿತು. ಭೂದೇವಿ, ತನ್ನ ಮೊಮ್ಮಗನೊಂದಿಗೆ ಕೃಷ್ಣನನ್ನು ಕಂಡು ಹುಡುಗನಿಗೆ ಕೃಷ್ಣನಿಂದ ಅಭಯವನ್ನು ಪಡೆದು ಉಲ್ಲಾಸಗೊಂಡಳು.

ಅದೇನೋ ನಿಜ, ಆದರೆ ಈ ಸಾವಿರಾರು ಹೆಣ್ಣುಮಕ್ಕಳು ಮುಂದೇನು ಮಾಡಬೇಕೆಂಬ ಪ್ರಶ್ನೆ ಎದುರಾಯಿತು. ನರಕನ ಸೆರೆಯಲ್ಲಿದ್ದವರು. ಅಂದರೆ, ಅವನಿಂದ ಅತ್ಯಾಚಾರಕ್ಕೆ ಒಳಗಾದವರು. ಲೋಕ ಇವರನ್ನು ಸ್ವೀಕರಿಸಲಾರದು. ಹೆಚ್ಚೆಂದರೆ ಕರುಣೆಯಿಂದ ನೋಡಬಹುದು. ನಿತ್ಯದ ಬದುಕಿನಲ್ಲಿ ಸ್ವೀಕರಿಸುವುದು ಆಗದ ಹೋಗದ ಮಾತು. ಲೋಕ, ಅತ್ಯಾಚಾರವನ್ನು ಖಂಡಿಸುತ್ತದೆಯೇನೋ ನಿಜ. ಏಕೆಂದರೆ ಅದರಿಂದ ಕುಲಧರ್ಮಗಳ ಮಡಿ ಕೆಡುತ್ತದೆ. ಹಾಗೆಂದು ಈಗ ಅತ್ಯಾಚಾರಕ್ಕೆ ಒಳಗಾದವರನ್ನು ಸ್ವೀಕರಿಸಿದರೂ ಮಡಿ ಕೆಡುವುದಿಲ್ಲವೆ? ಇದು ಲೋಕದ ನ್ಯಾಯ. ಲೋಕಕ್ಕೆ ಬೌದ್ಧಿಕ ಎಚ್ಚರವಿರಬಹುದು. ಹೃದಯದ ಎಚ್ಚರವಂತೂ ಇಲ್ಲ. ಅದು ಇನ್ನೂ ಉಂಟಾಗಬೇಕಷ್ಟೆ!

ಕೃಷ್ಣ, ಭೂ-ದೇವಿಯನ್ನು ಈ ಬಗೆಗೆ ಕೇಳಿದ. ಅವಳಾದರೋ ಅತ್ಯಾಚಾರಕ್ಕೆ ಒಳಗಾಗಿ ಸ್ವಯಂ ನೊಂದವಳು. ಹೇಳಿದಳು: ಓ ಕೃಷ್ಣ; ದ್ವಾರಕಾಧೀಶ; ಹೆಣ್ಣುಮಕ್ಕಳಿಗೆ ಕುಟುಂಬದ ವಾಂಛಲ್ಯ ಬಿಡಲಾಗದ್ದು. ಬಿಟ್ಟೆನೆಂದರೂ ಬಿಡದೀ ಮಾಯೆ. ಮೊಮ್ಮಗನ ಬಗೆಗೆ ನನ್ನ ಪ್ರೀತಿಯನ್ನು ನೀನು ನೋಡಿಲ್ಲವೆ? ಈ ಹುಡುಗಿಯರನ್ನು ನರಕನ ಕೈಯಿಂದ ನೀನು ಪಾರು ಮಾಡಿದೆ. ಮತ್ತೆ ಲೋಕದ ಪ್ರಚ್ಛನ್ನ ನರಕಕ್ಕೆ ಅವರು ಹೋಗಬೇಕೇನು? ನಿಜ ಹೇಳುತ್ತೇನೆ. ನೀನು ಬಂದು ಇವರನ್ನು ಬಿಡುಗಡೆ ಮಾಡಬಹುದೆನ್ನುವ ನಿರೀಕ್ಷೆ ಅದು ಹೇಗೋ ಇವರಲ್ಲಿ ಮನೆ ಮಾಡಿತ್ತು. ಬಿಡುಗಡೆ ಮಾಡುವುದಿದ್ದರೆ ಅದು ನೀನು ಮಾತ್ರ ಎಂಬ ನಿರೀಕ್ಷೆಯದು. ಗೋಪಿಕೆಯರ ಮತ್ತು ನಿನ್ನ ನಡುವಿನ ದಿವ್ಯವೆನ್ನಬಹುದಾದ ಸಂಬಂಧದ ಬಗ್ಗೆ ಈ ಹೆಣ್ಣು ಮಕ್ಕಳಲ್ಲಿ ಅನೇಕರು ಕೇಳಿ ತಿಳಿದಿದ್ದರು. ಅವರ ದೇಹ ನರಕನ ಕೈಯಲ್ಲಿತ್ತು. ನಿಜ. ಆದರೆ ಮನಸ್ಸು ನಿನ್ನಲ್ಲಿ ನೆಲಸಿದೆ. ಇದಕ್ಕೆ ನಾನು ಸಾಕ್ಷಿ. ಅಂದರೆ ಭೂಮಿ ಸಾಕ್ಷಿಯಾಗಿ ಇದು ನಿಜ! ನೀನು ಮನಸ್ಸನ್ನು ನೋಡುವವನು. ದೇಹವನ್ನಲ್ಲ. ಈ ಅರ್ಥದಲ್ಲಿ ನೀನು ಈ ಮಣ್ಣನ್ನು ಮೀರಿದವನು. ನೀಲ ಬಣ್ಣದ ಆಗಸದ ಮೈಯವನು. ಮಣ್ಣಿನ ಮಗ ಮಾಡಿದ ಅತ್ಯಾಚಾರಕ್ಕೆ ಒಳಗಾದವರನ್ನು ನೀನು ಮೇಲೆತ್ತಬೇಕಲ್ಲದೆ ಬೇರಾರು ಎತ್ತಬಲ್ಲರು? ಈ ಹೆಣ್ಣು ಮಕ್ಕಳು ಲೋಕದಲ್ಲಿ ಬೇರೆಲ್ಲೂ ಬದುಕಲಾರರು. ಇವರಿಗೆ ದ್ವಾರಕೆಯ ಬಾಗಿಲು ತೆರೆದಿರಲಿ!

ಹಾಗೆ, ‘ದ್ವಾರಕೆ’ಯ ಹೆಸರು ಅನ್ವರ್ಥವಾಯಿತು. ನರಕಾಸುರನ ಸೆರೆಮನೆಗೆ, ಲೋಕದ ಎಲ್ಲ ಸೆರೆಮನೆಗಳಿಗೆ- ಉತ್ತರವೆಂಬಂತೆ, ಪರಿಹಾರವೆಂಬಂತೆ. ಬಿಡುಗಡೆಯ ತಾಣವೆಂಬಂತೆ, ಬಿಗಿಯಾದ ಹೆಬ್ಬಾಗಿಲುಳ್ಳ ಎಲ್ಲ ರಾಜಧಾನಿಗಳನ್ನು ಅಣಕವಾಡುವಂತೆ ಬಿಡುಬೀಸಾದ ‘ದ್ವಾರಕೆ’ ಇತ್ತು. ಕೃಷ್ಣನಂಥವನು ಇಂಥದೊಂದು ನಗರವನ್ನು, ‘ರಾಜಧಾನಿ’ಯಲ್ಲದ ರಾಜಧಾನಿಯನ್ನು, ಕೌಟುಂಬಿಕ ನಗರಿಯನ್ನು, ಕಲ್ಪಿಸಿದ. ಸೆರೆಯಲ್ಲಿದ್ದ ಹೆಣ್ಣು ಮಕ್ಕಳ ದೊಡ್ಡದೊಂದು ಗುಂಪು ದ್ವಾರಕೆಯನ್ನು ಸೇರಿ ಅಲ್ಲಿ ಹೀಗೊಂದು ಹೊಸ ಬದುಕನ್ನು ಕಾಣುವಂತಾಯಿತು. ಈ ಎರಡು ಸಂಗತಿಗಳೂ ಕಾಲದ ನಡೆಯಲ್ಲಿ ಹೇಗೆ ತಳಕು ಹಾಕಿಕೊಂಡವೆಂದರೆ, ಕೃಷ್ಣನ ನಡೆಯನ್ನು ಕಾಲ ಅನುಸರಿಸಿತೇ ಅಥವಾ ಹೊಸ ಕಾಲವನ್ನು ಊಹಿಸಿ, ಕೃಷ್ಣ ನಡೆದನೇ- ಎಂದು ಹೇಳುವುದು ಕಷ್ಟವೆಂದು ಯೋಚಿಸಬಲ್ಲವರು ತಿಳಿಯುವಂತಾಯಿತು!

ಕೃಷ್ಣನೀಗ ‘ಮಹಾಗೃಹಸ್ಥ’, ‘ಮಹಾ ಸಂಸಾರಿ’. ವಾಚ್ಯಾರ್ಥದಲ್ಲಿಯೋ, ಧ್ವನ್ಯರ್ಥದಲ್ಲಿಯೋ ಅಥವಾ ಎರಡೂ ಒಂದರೊಳಗೊಂದು ಬೆರೆತಿದೆಯೋ- ಕೃಷ್ಣನಂತೂ ‘ವಿಶ್ವ ಕುಟುಂಬಿ’. ಸಂಸಾರಿಗಳ ಮಾತು ಬಿಡಿ. ನಾರದನಂಥ ಲೋಕ ಸಂಚಾರಿಯಾದ ಮುನಿಗೆ- ಅವನು ಲೋಕ ಸಂಚಾರಿಯಾದುದರಿಂದಲೇ- ಕೃಷ್ಣನ ಸಂಸಾರ ಜೀವನವನ್ನು ಒಮ್ಮೆ ಕಂಡು ಬರಬೇಕೆಂದು ತಡೆಯಲಾರದ ಕುತೂಹಲ ಉಂಟಾಯಿತಂತೆ. ಹಾಗೆ ನಾರದ ದ್ವಾರಕೆಯತ್ತ ಬಂದ.

ಸದಾ ಬೀಸುತ್ತಿರುವ ಕಡಲ ಗಾಳಿ. ವಿಶಾಲವಾದ ದೊಡ್ಡ ಮನೆಗಳು. ಬೀದಿಗಳು. ವ್ಯಾಪಾರಕ್ಕೆಂದು, ವಹಿವಾಟಿಗೆಂದು, ಜನರ ಪಯಣಕ್ಕೆಂದು ನಿತ್ಯ ಬಂದು ಹೋಗುವ ಸಣ್ಣ ದೊಡ್ಡ ನೌಕೆಗಳು. ಕಡಲ ನಡುವಿನ ನಗರದಲ್ಲಿ ಬದುಕುತ್ತ ಗಟ್ಟಿ ಮೈಕಟ್ಟಿನ ಈಜುಗಾರ ಯಾದವ ಹುಡುಗರು. ಹೋ! ಎಲ್ಲಿಯ ಗೋಕುಲ; ವೃಂದಾವನ! ಎಲ್ಲಿಯ ದ್ವಾರಕೆ! ಇದು ವ್ಯಾಪಾರ ಕೇಂದ್ರ. ಗೋಪಾಲನೆಯಿಂದ ವಾಣಿಜ್ಯಕ್ಕೆ ಮಗುಚಿದರು ಯಾದವರು! ತಪ್ಪೆನ್ನುವಂತಿಲ್ಲ. ಇದು ವೈಶ್ಯಧರ್ಮ. ಕೃಷಿ; ಗೋರಕ್ಷ, ವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಂ ಹೆಜ್ಜೆ ಹೆಜ್ಜೆಗೆ ಅಚ್ಚರಿಪಡುತ್ತ, ಬದುಕೇ ಬದಲಾಗಿ ಹೋದಂತಿದೆ ಎಂದುಕೊಂಡ ನಾರದ. ಲೋಕ ಸಂಚಾರಿಯಾದ ನಾರದನಿಗೆ ತಟಕ್ಕನೆ ಹೊಳೆಯಿತು. ಲೋಕದ ಇನ್ನು ಮುಂದಿನ ದೇವರು ಈ ಕೃಷ್ಣ. ನೌಕೆಗಳು ಹೋಗುವಲ್ಲೆಲ್ಲ ಕಡಲ ಮೇಲೆ, ಹೊಳೆಗಳ ಮೇಲೆ ಕೃಷ್ಣನ ಕಥೆ ಸಂಚರಿಸುತ್ತದೆ! ಹೆಣ್ಣು ಮಕ್ಕಳು ಕೃಷ್ಣನ ಬಗ್ಗೆ ಹಾಡು ಕಟ್ಟುವರು. ಗಾನಪದ್ಧತಿ ಬೆಳೆಯುತ್ತೆ. ಕವಿತೆಯ ಸೂಕ್ಷ್ಮ ಬೆಳೆಯುತ್ತೆ. ಮನಸ್ಸಿನ ಸೃಷ್ಟಿಶೀಲತೆಗೇ ಹೊಸ ಬಾಗಿಲುಗಳು ತೆರೆಯುತ್ತವೆ. ಇದೇ ಏನು ‘ದ್ವಾರಕೆ’ಯ ಅರ್ಥ? ಇದೇ ಏನು ವಿಶ್ವ ಕುಟುಂಬ? ದ್ವಾರಕೆಯ ಬೀದಿಗಳಲ್ಲಿ ಅಲೆಯುತ್ತ ನಾರದ ಹೊಸ ಹಾದಿಯಲ್ಲಿದ್ದ. ಕೃಷ್ಣನ ಕುಟುಂಬದ ಹೆಣ್ಣು ಮಕ್ಕಳನ್ನು ಮಾತನಾಡಿಸಬೇಕೆನ್ನಿಸಿತು ಅವನಿಗೆ. ಎಲ್ಲ ಮನೆಗಳಲ್ಲೂ ಒಂದು ಉಲ್ಲಾಸವಿತ್ತು. ಒಂದು ಸಂತೃಪ್ತಿ ಇತ್ತು. ಕೆಲಸವಾದರೆ ಕೆಲಸ, ವಿರಾಮವಾದರೆ ವಿರಾಮ, ಹರಟೆಯಾದರೆ ಹರಟೆ. ಎಲ್ಲದರಲ್ಲಿ ಕಡಲ ಅಲೆಗಳಂಥ ಒಂದು ತರಲ ಜೀವಂತಿಕೆ ಇತ್ತು. ದೊಡ್ಡ ಮನೆಯ ಹಜಾರವೊಂದರಲ್ಲಿ ಕೆಲವು ಹೆಣ್ಣು ಮಕ್ಕಳು ಕಲೆತಿದ್ದರು. ನಾರದ ಅವರ ಜೊತೆ ಹೀಗೆ ಸಂವಾದ ತೊಡಗಿದ: ನೀವು ಶ್ರೀಕೃಷ್ಣನ ಕುಟುಂಬಿಕರು; ನಿಮ್ಮ ಸಂಸಾರದ ಅನುಭವ ಕೇಳಬಹುದೆ? ಹೆಣ್ಣು ಮಗಳೊಬ್ಬಳು ಸೆರಗಿನಿಂದ ತನ್ನ ನಗು ಬಾಯಿ ಮುಚ್ಚಿಕೊಂಡಳು. ಇನ್ನೊಬ್ಬಳೆಂದಳು: ಕೃಷ್ಣ ನಿನ್ನೆ ತಾನೇ ಹೇಳುತ್ತಿದ್ದ, ಮುನಿಗಳೇ, ಇನ್ನು ಮುಂದೆ ಇನ್ನೊಬ್ಬರ ಅನುಭವ ಕೇಳುವ ಮಾತುಗಾರರು ಹೆಚ್ಚುತ್ತಾರೆ. ಅನುಭವ ಪಡೆಯುವವರು ಕಡಿಮೆ ಎಂದು.

ನಾರದ: ಅದು ದೊಡ್ಡ ಮಾತು. ಆದರೆ, ನಿಮ್ಮ ಅನುಭವ ಹೇಳಬೇಕೆನ್ನುವ ತವಕ ನಿಮಗೇ ಉಂಟಾಗುವುದಿಲ್ಲವೇನಮ್ಮ?
-ಆಗುತ್ತೆ ಮುನಿಗಳೇ.
-ಹಾಗಾದರೆ ಹೇಳಿ
-ಸಂಸಾರದ ಅನುಭವವೆಂದರೆ ನಿಮಗೇನನಿಸುತ್ತೆ ಮುನಿಗಳೇ ಅದನ್ನು ಮೊದಲು ಹೇಳಿರಲ್ಲ.
-ಹಾಗೇನು? ಸಂಸಾರದ ಅನುಭವವೆಂದರೆ- ಮನೆ; ಮಡದಿ; ಗಂಡ; ಮಕ್ಕಳು; ಮಕ್ಕಳನ್ನು ಬೆಳೆಸುವ ತವಕ ಇತ್ಯಾದಿ… ಎಲ್ಲ ಹೆಣ್ಣು ಮಕ್ಕಳು ನಕ್ಕರು. ಹಿರಿಯಾಕೆ ಹೇಳಿದಳು: ಇದು ಲೋಕ ರೂಢಿಯ ಮಾತು. ನಾರದರೇ. ನಿಮ್ಮಿಂದ ತಾತ್ತ್ವಿಕವಾದ ನುಡಿಗಟ್ಟುಗಳನ್ನು ನಾವು ಕೇಳಬಯಸಿದ್ದೆವು.

-ಅದನ್ನು ನೀವೇ ಹೇಳಿರಮ್ಮ.
-ಹಾಗೇನು? ಹಾಗಾದರೆ, ಕೇಳಿ. ಸಂಸಾರವೆಂದರೆ ಅನ್ನ ಮತ್ತು ಕಾಮ.
-ಹೋ. ಇದೀಗ ಚೆನ್ನಾಗಿದೆ. ಸ್ವಲ್ಪ ಬಿಡಿಸಿ ಹೇಳಿ.
-ಮುನಿಗಳೇ, ಅನ್ನವಿಲ್ಲದೆ ಬದುಕಿಲ್ಲ. ಇದು ಎಲ್ಲರಿಗೆ ಗೊತ್ತು. ಆದರೆ ನಾವು ಉಣ್ಣುವ ‘ಅನ್ನ’ ನಮ್ಮನ್ನು ಉಣ್ಣುತ್ತೆ ಎನ್ನುವುದು ಮಾತ್ರ ಯಾರಿಗೂ ಗೊತ್ತಾದಂತಿಲ್ಲ. ನಮ್ಮ ಮೈ; ‘ಮನ’ ನಾವು ಉಣ್ಣುವ ಅನ್ನದ ಪರಿಣಾಮವಲ್ಲವೆ? ನಾವು ‘ಅನ್ನ’ದಿಂದ ಪ್ರಭಾವಿತರಾದವರಲ್ಲವೇ? ಹಾಗೆಂದರೆ ನಾವು ಉಣ್ಣುವ ‘ಅನ್ನ’ ನಮ್ಮಿಂದ ಉಣ್ಣಲ್ಪಟ್ಟು ತಾನೂ ನಮ್ಮನ್ನು ಉಣ್ಣುವುದಿಲ್ಲವೆ? ನಾವು ಅನ್ನ ಉಣ್ಣುವ ಕ್ರಿಯೆ, ಏಕ ಕಾಲದಲ್ಲಿ ಅನ್ನವು ನಮ್ಮನ್ನು ಉಣ್ಣುವ ಕ್ರಿಯೆಯೂ ಆಗಿದೆಯಲ್ಲವೆ? ನಾವು ಉಂಡು, ಅನ್ನವನ್ನು ಅನುಭವಿಸಿದೆವು, ಎಂದು ಕೊಳ್ಳುವೆವು. ನಾವು ಉಣ್ಣಲ್ಪಡುತ್ತಿರುವ ಆ ಇನ್ನೊಂದು ಮುಖವನ್ನು ಮರೆಯುವೆವು. ಮುನಿಗಳೇ ಕೃಷ್ಣ, ಇದನ್ನು ನಮಗೆ ತಿಳಿಸಿಕೊಟ್ಟ. ಅನ್ನದಿಂದ ನಾವು ಮರಳಿ ಉಣ್ಣಲ್ಪಡುತ್ತಿದ್ದೇವೆ ಎಂದು ಅನುಭವವಾದಾಗ ನಾವು ವಿಶ್ವದ ಸೊತ್ತಾಗುವೆವು ಎಂದು ಗೊತ್ತು ಮಾಡಿಸಿದ. ಅವನು ತನ್ನನ್ನು ತಾನು, ನಾವು ಉಂಡ ಅನ್ನವನ್ನು ನಮ್ಮೊಡಲಲ್ಲಿದ್ದು ಕರಗಿಸುವ ‘ಜೀರ್ಣಾಗ್ನಿ’ ಎಂದು ಕರೆದುಕೊಂಡಿದ್ದಾನೆ. ಗೊತ್ತೇನು? ಅಂದಹಾಗೆ ಆ ಜೀರ್ಣಾಗ್ನಿಗೆ, ಶಾಸ್ತ್ರದ ಭಾಷೆಯಲ್ಲಿ ಏನು ಹೇಳುತ್ತಾರೆ ಮುನಿಗಳೇ?

-‘ವೈಶ್ವಾನರಾಗ್ನಿ’ ಎನ್ನುತ್ತಾರೆ ತಾಯಿ.
-ಹೋ. ನೋಡಿ! ಅದು ವಿಶ್ವ ಸಂಬಂಧಿಯಾದ ಮಾತು. ವಿಶ್ವದ ನರರೆಲ್ಲರಲ್ಲೂ ಇರುವ ಜೀರ್ಣಾಗ್ನಿ. ಅನ್ನವನ್ನು ಹೀಗೆ ಅನುಸಂಧಾನ ಮಾಡಿದರೆ ಕುಟುಂಬ ವಿಶ್ವಕುಟುಂಬವಾಗುವುದು ಎಂದ ನಮ್ಮ ಕೃಷ್ಣ!

-ಇನ್ನು ‘ಕಾಮ’ದ ಮಾತೇನು ತಾಯಿ?
-‘ಅನ್ನ’ಕ್ಕೂ ‘ಕಾಮ’ಕ್ಕೂ ನಿಕಟ ಸಂಬಂಧವಲ್ಲವೆ ಮುನಿಗಳೇ. ಕೃಷ್ಣನನ್ನು ತುಂಬ ಪ್ರೀತಿಸುವ ದಾಸನೊಬ್ಬ ಹಾಡಿದ್ದು ಕೇಳಲಿಲ್ಲವೇನು?- ಅನ್ನದಿಂದ ಬಂದ ‘ಕಾಮ’ ನಿನ್ನದೇನೆಲೋ. ನಾವು ಕಾಮವನ್ನು ಅನುಭವಿಸುವುದೆನ್ನುವುದು ಅರ್ಧಸತ್ಯದ ಮಾತು. ‘ಕಾಮ’ವೇ ನಮ್ಮನ್ನು ಅನುಭವಿಸುವುದು. ಇದು ತಿಳಿದಾಗ ಪೂರ್ಣ ಸತ್ಯ. ತನ್ನನ್ನು ತಾನು ‘ಜೀರ್ಣಾಗ್ನಿ’ ಎಂದು ಕರೆದುಕೊಂಡ ಕೃಷ್ಣನನ್ನು ಅದೇ ಕಾರಣಕ್ಕೇ ನಾವು ‘ಕಾಮಾಗ್ನಿ’ ಎಂದು ಕೂಡ ಕರೆಯಬಲ್ಲೆವು. ಅವನು ‘ಕಾಮಜನಕ’. ಅವನು ವಿಶ್ವ- ಕಾಮಜನಕ  ‘ಅನ್ನ’ ‘ಕಾಮ’ಗಳ ಇನ್ನೊಂದು ಮುಖ ಅವನು ತೋರಿಸಿದ ಮೇಲೆ, ನಾವು ತುತ್ತು ತುತ್ತಿಗೆ, ಮುತ್ತು ಮುತ್ತಿಗೆ ‘ಕೃಷ್ಣಾರ್ಪಣ’ ಎನ್ನುವೆವು- ಮುನಿಗಳೇ. ಹೀಗಲ್ಲದ ಸಂಸಾರ ಒಂದು ಸೆರೆಮನೆ. ಹೀಗಾದಾಗ ‘ಬಿಡುಗಡೆ’ ಅದು ವಿಶ್ವ-ಕುಟುಂಬ.

-ನಾರದ ಬೆರಗಾಗಿ ಕೇಳುತ್ತಿದ್ದ. ಆಗ ಕೇಳಿಸಿತು. ನಾರದರಂಥ ದೊಡ್ಡ ಜ್ಞಾನಿಗಳಿಗೆ ಈ ಹೆಣ್ಣು ಮಕ್ಕಳದೆಷ್ಟು ಪ್ರವಚನ ಎಂಬ ಹುಸಿಗದರಿಕೆ. ನೋಡಿದರೆ, ಪೀತಾಂಬರದ ನೆರಿ ಸರಿಪಡಿಸಿಕೊಳ್ಳುತ್ತಿದ್ದ ಕೃಷ್ಣ ಕಾಣಿಸಿದ.

ತೋಳ್ಪಾಡಿ ಭಾಗವತ 33:ಸ್ತುತಿಯನ್ನು ಕೇಳಿದ ಕೃಷ್ಣ ನಿಂದೆಯನ್ನೂ ಕೇಳಿದ

ಜ್ಞಾನಿಯೊಬ್ಬ ಹೇಳುತ್ತಿದ್ದನಂತೆ: ನನ್ನ ಕೈಗೆ ಉದ್ದದ ಒಂದು ಸನ್ನೆಗೋಲು ಕೊಡಿ. ಮತ್ತು ಈ ಭೂಮಿಯ ಆಚೆಗೆ ಆಗಸದಲ್ಲಿ ನಿಲ್ಲಲೊಂದಿಷ್ಟು ಬಿಡು ಬೀಸಾದ ಜಾಗಕೊಡಿ. ಆಗ ಏನು ಮಾಡಬಲ್ಲೆನೆಂದರೆ, ಸನ್ನೆಗೋಲಿನಿಂದ ಮೀಟಿ ಭೂಮಿಯನ್ನೇ ತಿರುಗಿಸಬಲ್ಲೆ. ಇರಬಹುದು. ಭೂಮಿಯ ಆಚೆಯಿಂದ ಭೂಮಿಯನ್ನು ನೋಡಲು ಸಾಧ್ಯವಾದರೆ, ಭೂಮಿಯು ತಾನೇ ತಿರುಗುತ್ತಿರುವುದನ್ನು ಕಾಣಬಹುದಂತೆ. ಅದನ್ನು ಹಾಗೆ ಬಿಡುಗಣ್ಣನಾಗಿ ಕಂಡರೆ; ಅಂದರೆ ತಾನು ತಿರುಗದ ಜಾಗದಲ್ಲಿ ತಾನು ‘ನಿಶ್ಚಲ’ನಾಗಿ ನಿಂತು ‘ಚಲನೆ’ಯನ್ನು ನೋಡಿದರೆ- ಯಾವುದೇ ಚಲನೆಗೆ ನಿಶ್ಚಲತೆಯೊಂದರ ಹಿನ್ನೆಲೆ ಇದ್ದೇ ಇರಬೇಕು; ಇರುತ್ತದೆ; ನಿಶ್ಚಲ ಹಿನ್ನೆಲೆ ಇಲ್ಲದಿದ್ದರೆ ಚಲನೆಯೇ ಇಲ್ಲ- ಎಂದು ಹೊಳೆಯಬಹುದಂತೆ. ಹಾಗೆ ಹೊಳೆದರೆ- ನಿಶ್ಚಲತೆಯ ಹಿನ್ನೆಲೆ ಇಲ್ಲದೆ ಚಲನೆ ಎಂಬುದೇ ಇಲ್ಲ ಎಂದು ಹೊಳೆದರೆ- ತಾನು ‘ನಿಶ್ಚಲ’ನಾಗಿರುವುದರಿಂದ, ಈ ಭೂಮಿಯನ್ನು ತಿರುಗುವಂತೆ ಮಾಡುತ್ತಿರುವುದೂ ತಾನೇ ಎಂಬ ಹೊಳಹೂ ಉಂಟಾಗಬಹುದಂತೆ!

ಇದು ‘ಅಹಂಕಾರ’ವಲ್ಲ. ಇದು ‘ಅರಿವು’. ತಾನು ನಿಶ್ಚಲನಾದಾಗ, ತನ್ನೆದುರು ನಡೆಯುತ್ತಿರುವ ಚಲನೆಯ ಜೊತೆಗೆ ತನ್ನ ಸಂಬಂಧವೇನೆಂಬುದರ ಅರಿವು. ಈ ಅರಿವಿನಲ್ಲಿ ‘ಪ್ರೀತಿ’ ಇದೆ. ‘ಚಲನೆ’ಯು ‘ನಿಶ್ಚಲತೆ’ಗೆ ವಿರೋಧಿಯಾದದ್ದೆಂಬ ವಿರೋಧ ಭಾವ- ಲೌಕಿಕ ತರ್ಕದಿಂದಹುಟ್ಟಿದ ವಿರೋಧ ಭಾವ- ಇಲ್ಲ. ದ್ವಂದ್ವವಲ್ಲ. ಆದುದರಿಂದ ನಿಶ್ಚಲತೆಯಿಂದ ಚಲನೆಯು ಉಂಟಾದ ಬಗ್ಗೆ ವಿಸ್ಮಯವಿದೆ! ಏಕೆಂದರೆ, ಚಲನೆಯೂ ‘ಇದೆ’ ಮತ್ತು ನಿಶ್ಚಲತೆಯೂ ‘ಇದೆ’. ಇರುವಿಕೆಯ ಎರಡು ಮುಖಗಳಿವು. ಅಂದ ಮೇಲೆ ಇರುವಿಕೆಯ ಅರಿವಿನಲ್ಲಿ, ಒಂದೇ ಇರುವಿಕೆಯ ಎರಡು ಮುಖಗಳಲ್ಲಿ ಪರಸ್ಪರ ವಿರೋಧವಿರುವುದು ಸಾಧ್ಯವೇ ಇಲ್ಲ. ವಿರೋಧವಿಲ್ಲವೆಂದ ಮೇಲೆ- ಪ್ರೀತಿಯೇ.

ಚಕಿತಗೊಳಿಸುವ ಸಂಗತಿ ಏನೆಂದರೆ- ಭೂಮಿಯಲ್ಲೇ ಇರುವ ಮನುಷ್ಯ ಜೀವಿಗೂ ಹೀಗೆಯೇ- ಕಿಂಚಿತ್ ವ್ಯತ್ಯಾಸದಲ್ಲಿ- ಅನ್ನಿಸುತ್ತಿರುತ್ತದೆ! ಇದೆಲ್ಲ ತನ್ನದು, ಎಂದ ಮೇಲೆ ತನ್ನಿಂದಲೇ ಎಲ್ಲ, ಭೂಮಿ ತಿರುಗುತ್ತಿರುವುದೂ ತನಗಾಗಿಯೇ ಎಂದ ಮೇಲೆ ಅದನ್ನು ತಿರುಗಿಸುತ್ತಿರುವವನೂ ತಾನೇ ಎಂದರೂ ತಪ್ಪಿಲ್ಲ- ಎಂಬ ಮಟ್ಟದ ಅನ್ನಿಸಿಕೆ ಈ ಜೀವಿಯನ್ನು ಆವರಿಸಿರುತ್ತದೆ. ಇದು ‘ಅಹಂಕಾರ’ ಮತ್ತು ‘ಅಹಂಕಾರ’ವೆಂದರೆ, ವೇಷಾಂತರದಲ್ಲಿರುವ ಜ್ಞಾನವೇ. ‘ಜೀವ’ನೆಂದರೆ ಮುಸುಕು ಹೊದ್ದ ‘ದೇವ’ನೇ! ಅದಿರಲಿ.

ಭೂಮಿಯನ್ನು ತಿರುಗಿಸಬಲ್ಲೆನೆಂದನಲ್ಲ ಜ್ಞಾನಿ! ಅದರಲ್ಲೊಂದು ವಿಶೇಷ ಇದೆ. ಏನೆಂದರೆ- ನಿಶ್ಚಲತೆಗೆ ತನ್ನಂತಿಲ್ಲದ ಚಲನೆಯನ್ನು ಕಂಡರೆ ‘ಪ್ರೀತಿ’ ಉಂಟಾಗುವಂತೆ, ಚಲನೆಗೆ ತನ್ನಂತಿಲ್ಲದ ನಿಶ್ಚಲತೆಯ ಹೊಳಹು ಸಿಕ್ಕಿದರೆ, ಚಲನೆಗೆ ಒಂದು ಆವೇಶ ಉಂಟಾಗುತ್ತದೆ. ನಿರಾಸಕ್ತ ಪ್ರೇಕ್ಷಕನನ್ನು ತನ್ನ ಪರವಾಗಿ ಒಲಿಸಿಕೊಳ್ಳಲೇಬೇಕೆಂಬ ಹುಮ್ಮಸದಲ್ಲಿ ರಂಗವನ್ನು ತುಂಬಿಸುತ್ತ ಕುಣಿದೇ ಕುಣಿಯುವ ಮಹಾನ್ ನಟ ನಟಿಯಂತೆ, ಚಲನೆಗೆ ತೀವ್ರಗತಿ; ಏರುಗತಿ ಉಂಟಾಗುತ್ತದೆ. ಮತ್ತು ವಿಚಿತ್ರವೆಂದರೆ, ಚಲನೆಗೆ ಈ ತೀವ್ರ ಗತಿ ಉಂಟಾದರೆ, ‘ನಿಲುಗಡೆ’ ಹತ್ತಿರ ಇದೆ ಎಂದೂಹಿಸಬಹುದು! ನಾಟಕವೊಂದರ ಉಚ್ಛಾಂಕದ- ಅಟಟಚಿಥ- ಅನಂತರ ಅಂಕದ ಪರದೆ ಇಳಿ ಬೀಳುತ್ತದೆ ಎಂದೂಹಿಸಬಹುದು! ಇಲ್ಲಿಯೂ ನಮ್ಮ ಲೌಕಿಕ ಲೆಕ್ಕಾಚಾರದ ತರ್ಕದ ಕೆಲಸ ನಡೆಯುವುದಿಲ್ಲ. ನಾವೇ ಮಾಡಿಕೊಂಡ ತರ್ಕದ ಚೌಕಟ್ಟು ಕುಸಿದು ಬೀಳುತ್ತದೆ. ನಿಶ್ಚಲತೆಯು ತಾನು ಚಲಿಸದೆ, ಸಾಕ್ಷಿಯಾಗಿದ್ದುಕೊಂಡೇ, ಚಲನೆಯ ಆವೇಶಕ್ಕೆ ಕಾರಣವಾಗಿದೆ ಎಂದರೆ, ಅದನ್ನು ತರ್ಕದ ಯಾವ ಸಮೀಕರಣದಿಂದ ಸಾಧಿಸಲಾಗುತ್ತದೆ? ಸಾವಿನ ಅರಿವಿನಿಂದ ಬದುಕಿನಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ ಎಂಬ ಅರಿವಿನಂತೆ ಇದು. ಕ್ರಿಯಾಶೀಲತೆ ಒಂದು ಉನ್ನತ ಮಟ್ಟವನ್ನು ಮುಟ್ಟಿದರೆ, ಆ ಉನ್ನತ ಮಟ್ಟದಲ್ಲಿ ‘ಬದುಕು’ ಮತ್ತು ‘ಸಾವು’, ವಿರೋಧವಿಲ್ಲದೆ ಕೂಡಿರುತ್ತದೆ! ‘ಬದುಕು’ ಮತ್ತು ‘ಸಾವು’ ಕೂಡಿಕೊಂಡಿರುವ ಸ್ಥಿತಿಯನ್ನೇ ‘ಇದ್ದು ಇಲ್ಲದ ಸ್ಥಿತಿ’ ಎನ್ನುವುದು. ಇದ್ದು ಇಲ್ಲದ ಸ್ಥಿತಿಯಲ್ಲಿರುವ- ನಿಶ್ಚಲ ಅವಸ್ಥೆಯಲ್ಲಿರುವ ಅವತಾರಪುರುಷನೊಬ್ಬ ಲೋಕದ ನಡುವೆ ಇದ್ದರೆ, ಲೋಕದ ಕ್ರಿಯಾಶೀಲತೆ ಒಂದು ಆವೇಶದಂತೆ ಉಕ್ಕಬಹುದು. ಮತ್ತು ಹಾಗೆ ಉಕ್ಕಿದರೆ, ಒಂದು ಯುಗವೇ ಅಂತ್ಯಗೊಳ್ಳಬಹುದು. ಯುಗಾಂತ್ಯಕ್ಕೆ ಸಾಕ್ಷಿಯಾಗುವುದು ‘ಇದ್ದು ಇಲ್ಲದ ಸ್ಥಿತಿ’ಯಲ್ಲಿರುವವನಿಗೆ ಮಾತ್ರ ಸಾಧ್ಯವೆನ್ನಿಸುತ್ತದೆ!

ಯುಗ ಯುಗಗಳಲ್ಲೂ ನಾನಿಳಿದು ಬರುವೆ ಎನ್ನುವುದು ಕೃಷ್ಣನ ವಚನ. ಆ ಮಾತನ್ನು ದಿಟ್ಟಿಸಿ ನೋಡಿದರೆ, ಯುಗ ಯುಗಗಳಲ್ಲಿ- ಸಂಭವಾಮಿ ಯುಗೇ ಯುಗೇ- ಎನ್ನುವಲ್ಲಿ ಯುಗಗಳು ಅಂತ್ಯಗೊಳ್ಳುವ ಧ್ವನಿ ಇದೆ. ಹೊಸಯುಗವೊಂದರ ಸೂಚನೆಯೂ ಇರಬಹುದು!

ಲೋಕದ ಕ್ರಿಯಾಶೀಲತೆ ಉಕ್ಕದೆ ಯುಗದ ಅಂತ್ಯವಾಗದು. ಕ್ರಿಯಾಶೀಲತೆ ಎಂದಾಗ ಅವರವರ ಸ್ವ-ಭಾವ, ಸ್ವ-ಧರ್ಮ ತನ್ನ ಉಚ್ಚಾಂಕವನ್ನು ಮುಟ್ಟುವುದು. ಗೋಪಿಕೆಯರಲ್ಲಿ- ಕೃಷ್ಣನ ಕೊಳಲು ಕೇಳಿದಾಗ- ಪ್ರೇಮಭಾವ ಉಕ್ಕಿತು. ಪ್ರೇಮ, ಗೋಪಿಕೆಯರ ಸ್ವ-ಧರ್ಮದಲ್ಲಿತ್ತು. ಆಳುವ ಕ್ಷತ್ರಿಯರದು ರಾಜಸ; ತಾಮಸ ಸ್ವಭಾವ. ಇದು ಉಕ್ಕಿದರೆ, ಧರ್ಮದ ಗ್ಲಾನಿ. ಧರ್ಮಗ್ಲಾನಿಯೂ ತನ್ನ ತಾರ್ಕಿಕ ಅಂತ್ಯವನ್ನು ಕಾಣದೆ ಹೊಸ ಧರ್ಮದ ಉದಯವಾಗದು! ಕ್ಷತ್ರಿಯರ ಕ್ರಿಯಾಶೀಲತೆ ಉಕ್ಕುವುದೆಂದರೆ ಮಹಾಯುದ್ಧವೊಂದಕ್ಕೆ ಮುನ್ನುಡಿ ಬರೆದಂತೆ. ಕುರುಕ್ಷೇತ್ರದ ಬಯಲು ವಿಸ್ತಾರವಾದಂತೆ. ಇದಕ್ಕೆಲ್ಲ- ಯುಗಾಂತ್ಯದ ಈ ಚಟುವಟಿಕೆಗಳಿಗೆಲ್ಲ ಕೃಷ್ಣನು ಸಾಕ್ಷಿಯಾಗಬೇಕು!

ಕೃಷ್ಣನ ಕಾಲದಲ್ಲಿ ರಾಜಸ-ತಾಮಸಗಳು ಉಕ್ಕುವುದಕ್ಕೆ ಏನೆಂಥ ರುಜುವಾತುಗಳು:

ಒಲೆಹಚ್ಚಿ ಅಕ್ಕರೆಯ ಹಾಲುಕ್ಕಿಸಬೇಕಾದ ಮನೆಯನ್ನು ಅರಗಿನಲ್ಲಿ ಕಟ್ಟುವವರುಂಟೆ!

‘ಅರಗಿನ ಮನೆ’ ಎನ್ನುವುದು ದ್ವಾಪರಕ್ಕೆ ರೂಪಕವಾಗಿಬಿಟ್ಟಿತು!

ಯಜ್ಞ ಯಾಗಗಳಲ್ಲಿ ಎರೆಯುವ ತುಪ್ಪ ಉಂಡು ಅಜೀರ್ಣವಾಗಿ ಬಿಟ್ಟಿತು ಎಂದು ಸಾಕ್ಷಾತ್ ಅಗ್ನಿ ಹೇಳುವುದುಂಟೆ? ಈ ಅಜೀರ್ಣಕ್ಕೆ ಮದ್ದಾಗಿ, ಖಾಂಡವವನದ ವನಸ್ಪತಿಗಳನ್ನು ತಿನ್ನಬೇಕಲ್ಲದೆ ಬೇರೆ ದಾರಿ ಇಲ್ಲ; ಆದುದರಿಂದ ಖಾಂಡವದಾಹಕ್ಕೆ ಅನುವು ಮಾಡಿಕೊಡಿ ಎಂದು ಅಗ್ನಿ ಯಾಚನೆ ಮಾಡುವುದುಂಟೆ? ಈ ಕೇಳಿಕೆಗೆ ಕೃಷ್ಣ; ಅರ್ಜುನ ಅನುಕೂಲರಾಗುವುದುಂಟೆ? ಏನು, ಯಜ್ಞ-ಯಾಗ ಸಂಸ್ಕೃತಿಯು ಪ್ರಕೃತಿಯಿಂದ ದೂರಹೋಗಿ, ಮರಳಿ ಅದನ್ನು ಪ್ರಕೃತಿಯತ್ತ ಸಮ್ಮುಖಗೊಳಿಸಬೇಕಾಗಿದೆಯೇ? ಈ ಪ್ರಯತ್ನದಲ್ಲಿ ಒಂದು ಯುಗವೇ ಕೊನೆಗೊಳ್ಳುವುದೇ?

ಇಚ್ಚಾಮರಣಿಯಾದ ಭೀಷ್ಮನಿಗೆ, ಶರಶಯ್ಯೆಯೇ ತನ್ನ ಮರಣ ಶಯ್ಯೆಯಾಗಬೇಕೆಂಬ ಅಭೂತಪೂರ್ವವಾದ ಇಚ್ಛೆಯುಂಟಾಗಬೇಕೇಕೆ? ರಣರಂಗದಲ್ಲಿ ಸಾಯುವುದಲ್ಲದೆ ಬೇರೆ ಸಾವನ್ನು ಭೀಷ್ಮ ಊಹಿಸಲಾರನೆ? ಇದು ಯುಗಾಂತ್ಯದ ಶಯ್ಯೆಯೇ?

ಏಕಲವ್ಯನಂಥ ಏಕಲವ್ಯನಿಗೆ, ತಾನೂ ಶಸ್ತ್ರಾಸ್ತ್ರ ವಿಜ್ಞಾನವನ್ನು ಸಾಧಿಸಿ, ಕ್ಷತ್ರಿಯ ಕುಮಾರರ ಜತೆ- ನಿಮಗೆ ಸಮನಾವೆಂದು- ತೋರಿಸಬೇಕೆಂದು ಅನ್ನಿಸುವುದೇಕೆ? ಕಾಡಿಗೆ ಕುರುಕ್ಷೇತ್ರದ ಬಯಲಿನ ಕನಸು ಬೀಳುವುದು ಯುಗಾಂತ್ಯದ ಸೂಚನೆಯೇ?

ಇದಕ್ಕೆಲ್ಲ ಕೃಷ್ಣನು ಸಾಕ್ಷಿಯಾಗಬೇಕು!
ಮತ್ತು ಕೃಷ್ಣನೇ ಈ ಎಲ್ಲ ಚಟುವಟಿಕೆಗಳಿಗೆ ಅಧ್ಯಕ್ಷನೆಂಬಂತೆ; ಪಾಂಡವರು ನಡೆಯಿಸಿದ ಮಹೋನ್ನತವಾದ ರಾಜಸೂಯದಲ್ಲಿ ಕೃಷ್ಣನಿಗೆ ‘ಅಗ್ರಪೂಜೆ’ಯ ಗೌರವ ಕೊಡಲಾಯಿತು. ಹಳೆಯ ತಲೆಮಾರಿನ ಭೀಷ್ಮ, ಅಗ್ರಪೂಜೆಗೆ ಕೃಷ್ಣನನ್ನು ಸೂಚಿಸಿದ. ಹೊಸ ತಲೆಮಾರಿನ ಸಹದೇವ ಇದನ್ನು ಅನುಮೋದಿಸಿದ. ‘ಪೂರ್ವಿಕ’ ‘ನೂತನ’ರಿಬ್ಬರೂ ಸೇರಿದಂತಾಯಿತು. ‘ಶಿಶುಪಾಲ’ ಮಾತ್ರ ಉರಿದೆದ್ದ. ಬಹಿರಂಗವಾಗಿ ಪ್ರತಿಭಟಿಸಿದ. ರುಕ್ಮಿಣೀ ಹರಣ ಪ್ರಸಂಗದಿಂದಾಗಿ ಕೃಷ್ಣನ ಮೇಲೆ ಶಿಶುಪಾಲನಿಗೆ ಕಡು ಹಗೆ ಇತ್ತು. ಶಿಶುಪಾಲ ಬೊಬ್ಬಿರಿದ: ‘ಜ್ಞಾನಿ’ ಎಂದು ಕೃಷ್ಣನಿಗೆ ನೀವು ಅಗ್ರಪೂಜೆ ಸಲ್ಲಿಸುವಿರಾದರೆ, ಪರಮಜ್ಞಾನಿಗಳಾದ ವ್ಯಾಸರಿದ್ದಾರೆ. ಅಥವಾ ಎಲ್ಲ ಬಲ್ಲ ಭೀಷ್ಮರೇ ಇದ್ದಾರೆ! ಹಿರಿಯನೆಂದು ಹೇಳುವಿರಾದರೆ, ಸ್ವಯಂ ಕೃಷ್ಣನ ತಂದೆಯೇ ಆದ ವಸುದೇವನಿದ್ದಾನೆ! ಪರಾಕ್ರಮಿ ಎನ್ನುವಿರಾದರೆ, ಜರಾಸಂಧನಿಗೆ ಹೆದರಿ ಓಡಿದವನೀತ! ಇದು, ಸಮಸ್ತ ಕ್ಷತ್ರಿಯರಿಗೆ ಅಪಮಾನ ಎಂದು ಗುಡುಗಿದ ಶಿಶುಪಾಲ.

ವ್ಯಾಸರಿದ್ದರು; ಭೀಷ್ಮರಿದ್ದರು- ನಿಜ. ಆದರೆ, ವೇದಗಳನ್ನು ತಪ್ಪಾಗಿ ಓದುತ್ತಿದ್ದೀರಿ; ಇದು ಅರಿವಿನ ಕೇಡು ಎಂದವ ಕೃಷ್ಣ ಮಾತ್ರ! ಅಧ್ಯಯನದಲ್ಲಿ ಕ್ರಾಂತಿ ಮಾಡಬಲ್ಲವ; ಓದಿಗೆ ಹೊಸ ತಿರುವು ತೋರಿಸಬಲ್ಲವ- ಇಂಥವನನ್ನು ಗುರುತಿಸುವುದು ಯಾವಾಗ? ಕೃಷ್ಣನಿಗಿಂತ ಹಿರಿಯರಿದ್ದರು ನಿಜ. ಹಿರಿಯರನ್ನು ಮನೆಯಲ್ಲಿ ಚೆನ್ನಾಗಿ ನೋಡಿಕೊಂಡರೆ ಸಾಕು. ವಯಸ್ಸನ್ನು ಮೀರಿದ ಪ್ರತಿಭೆಯನ್ನು ಗುರುತಿಸುವುದು ಯಾವಾಗ? ಒಂದು ರೀತಿಯಲ್ಲಿ ಕೃಷ್ಣನಿಗಿಂತ ಪರಾಕ್ರಮಿಗಳೂ ಇರಬಹುದೇನೋ. ಆದರೆ, ಜರಾಸಂಧನಂಥವನನ್ನು ಸೀಳಿ ಎಸೆವಾಗ, ಆ ಸೀಳುಗಳನ್ನು ಹಿಂದು ಮುಂದಾಗುವಂತೆ ಸೀಳಿ ಎಸೆ; ಅಂದರೆ, ಆ ಸೀಳುಗಳು ಮತ್ತೆ ಕೂಡಿಕೊಳ್ಳಲಾರವು ಎನ್ನುವ ಪರಮ ಸೂಕ್ಷ್ಮ ಯಾರಲ್ಲಿತ್ತು? ಕೃಷ್ಣನಲ್ಲಿ ಅಲ್ಲದೆ!

ಶಿಶುಪಾಲ ಟೀಕಿಸುತ್ತಲೇ ಇದ್ದ. ಕೃಷ್ಣ ನಿತಾಂತ ಮೌನದಲ್ಲಿ ಇದ್ದವ; ಇದ್ದಕಿದ್ದಂತೆ ಹೇಳಿದ: ನೂರು ನಿಂದೆಯ ಮಾತು ಕೇಳುವೆ; ಕೇಳಬಲ್ಲೆ, ಮೀರಿದರೆ, ಕೇಳಬಾರದು. ನೆನಪಿರಲಿ. ಇದು ಕೇಳುತ್ತಿದ್ದಂತೆ ಶಿಶುಪಾಲನಿಗೆ ಆಗ್ರಹವುಕ್ಕಿತು. ನಿಂದಿಸುತ್ತಲೇ ಹೋದ. ಕೃಷ್ಣನಂತೆ ಸ್ತುತಿ ನಿಂದೆಗಳನ್ನು ಕೇಳಿದ ದೈವ ಮತ್ತೊಂದಿರಲಾರದು! ಶಿಶುಪಾಲನ ಮಾತು ಮೀರಿತು. ಕೃಷ್ಣ, ತನಗೆ ಅಗ್ರಪೂಜೆ ಸಲ್ಲಿಸಿದ ತಳಿಗೆಯಲ್ಲಿ ಚಕ್ರವನ್ನು ಅನುಸಂಧಾನ ಮಾಡಿದ. ಅದು ಶಿಶುಪಾಲನ ತಲೆ ತರಿಯಿತು. ರಾಜಸೂಯದ ಕೊನೆಯಲ್ಲಿ, ರಕ್ತ ತರ್ಪಣದ ಜತೆಗೇ, ಅಗ್ರಪೂಜೆ ಸಂಪನ್ನವಾಯಿತು!

ತಿಳಿಯುವವರು ತಿಳಿಯಬಹುದಿತ್ತು. ನಿಜವಾದ ರಾಜಸೂಯ ಇನ್ನು ಮುಂದೆ ನಡೆಯಲಿದೆ! ತಳಿಗೆಯನ್ನು ಚಕ್ರವಾಗಿಸುವವ, ಚಕ್ರಹಿಡಿಯಲೇ ಬೇಕಿಲ್ಲ. ಅವನು ಹಿಡಿದದ್ದು ಚಕ್ರವಾಗುತ್ತದೆ. ಶಸ್ತ್ರಾಸ್ತ್ರ ಸಂಗ್ರಹದ ಹುಚ್ಚಿನಲ್ಲಿ ಮುಳುಗಿರುವ ಕ್ಷತ್ರಿಯರ ನಾಶಕ್ಕಾಗಿಯೇ ಇವನು ಬಂದವನೇನು? ಇವನು ಬಂದುದರಿಂದಲೇ ಕ್ಷತ್ರಿಯರಿಗೆ ಹೀಗೊಂದು ಉಕ್ಕು ಉಂಟಾದುದೇನು? ಹಿಡಿದದ್ದು ಚಕ್ರವಾಗುವ ಈ ಮಹಾನುಭಾವನನ್ನು ನಾವು ಹಿಡಿಯುವುದಾದರೂ ಹೇಗೆ?