ಮಧ್ಯಾಹ್ನದ ಉರಿಬಿಸಿಲ ನಡುವೆ ತೂರಿಬರುತ್ತಿದ್ದ ಕಪ್ಪುಮೋಡಗಳ ಮಬ್ಬು ಬೆಳಕಿನಲ್ಲಿ ಬೆಟ್ಟ ಏರಿದೆವು. ಹತ್ತುತ್ತಾ, ಹತ್ತುತ್ತಾ ಕೆಳಗೆ ಆಳವಾದ ದಾರಿ, ಮೇಲೆ ಹತ್ತಿರಾದ ಬೆಟ್ಟದ ಸಾಲುಗಳು, ಅಲ್ಲೇ ಮೇಲೆ ಹತ್ತಿದಾಗ “ನನ್ನಷ್ಟು ಎತ್ತರ ನೀವಲ್ಲ, ನಾನೇರಿದೆತ್ತರಕೆ ನೀನೇರಬಲ್ಲೆಯಾ? ಎನ್ನುತ್ತಾ ನೋಡುತ್ತಿದ್ದ ದಪ್ಪ ದಪ್ಪ ಗಾತ್ರದ ಬಂಡೆಗಲ್ಲುಗಳು, ಮೋಡ ತಾನು ತಿನ್ನಲು ರೆಡಿ ಮಾಡಿಟ್ಟಿದ್ದ ಉಂಡೆಗಳಂತೆ ಕಾಣತೊಡಗಿದವು. ಅಲ್ಲೇ ಹಾವಿನಂತಿದ್ದ ದಪ್ಪಗಿನ ಕಾಂಡಗಳು ಕಂಡದ್ದೇ, ಇದರ ತುದಿಯನ್ನು ಕತ್ತಿಯಲ್ಲಿ ಸೀಳಿ, ಆ ಮೇಲೆ ಸ್ಟ್ರಾನಂತೆ ಹೀರಿದರೆ ನೀರು ಸಿಗುತ್ತದೆ. ಆ ನೀರನ್ನು ಹೀರುತ್ತಾ ದಾರಿ ಸಾಗಬಹುದು ಎಂದ ರಾಮಣ್ಣ. ಹುಡುಗ ಪ್ರವೀಣ, ಕತ್ತಿಯಿಂದ ತುದಿ ಸೀಳಿದ. ರಾಮಣ್ಣ ಆ ಕಾಂಡಕ್ಕೆ ಬಾಯಿಕೊಟ್ಟು ಹೀರಿದರು.
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಹದಿನೇಳನೇ ಕಂತು

 

“ಇವತ್ತು ಮಧ್ಯಾಹ್ನ ಜೋರು ಮಳೆ ಇದೆ ಅನ್ನಿಸ್ತಿದೆ. ನಿನ್ನೆ ಮಧ್ಯಾಹ್ನ ಅಲ್ಲಿ ಮಳೆ ಇತ್ತಂತೆ, ಮಳೆ ಬಂದರೆ ಕಾಡಿನಲ್ಲಿ ನಡೆಯುವ ಸುಖ ಇದೆಯಲ್ಲಾ ಅದನ್ನು ಮೀರಿಸಿದ್ದು ಯಾವುದೂ ಇಲ್ಲ, ಆದಷ್ಟು ಬೇಗ ಅಲ್ಲಿಗೆ ಹೋಗಿಬಿಡೋಣ” ದೂರದಲ್ಲಿ ಮುಗಿಲಿಗೊಂದು ಪಪ್ಪಿ ಕೊಟ್ಟಂತೆ ನಿಂತಂತಿರುವ ವಾಲಿಕುಂಜ ಬೆಟ್ಟವನ್ನು ತೋರಿಸುತ್ತಲೇ ಹೇಳಿದ ರಾಮಣ್ಣ. ಮಳೆ, ಕಾಡು, ನಡೆಯೋದು ಅಂತೆಲ್ಲಾ ಹೇಳಿ ಅವನು ಆಸೆ ಹುಟ್ಟಿಸಿಬಿಟ್ಟಿದ್ದರಿಂದ ನಾನು ದೂರದಲ್ಲಿದ್ದ ಆ ವಾಲಿಕುಂಜವನ್ನೇ ನೋಡತೊಡಗಿದೆ. ತೆಳ್ಳಗೇ ಬಿಸಿಲು, ನಾವು ನಿಂತೆಲ್ಲೆಲ್ಲಾ ಆವರಿಸಿದ್ದ ಗೇರು ತೋಪಿನ ನೆರಳು, ಕನಸಿನ ಚಿತ್ರಗಳಂತೆ ಉದುರುತ್ತಿದ್ದ ತರಗೆಲೆಗಳ ಗೆಜ್ಜೆ ಸದ್ದು, ಸುಯ್ ಅಂತ ಒಮ್ಮೆ ದೂರದಿಂದ ಹತ್ತಿರ ಬಂದಂತೆ ಮಾಡಿ, ಮತ್ತೆ ಬೆಟ್ಟದತ್ತ ಓಡುಹೋಗುತ್ತಿದ್ದ ಬಿಮ್ಮನೆ ಗಾಳಿ, ಎಲ್ಲಕ್ಕಿಂತಲೂ ಹೆಚ್ಚಾಗಿ ಒಂಚೂರು ಮಾತಾಡದೇ ಸುಮ್ಮನೇ ಬಿದ್ದುಕೊಂಡಿದ್ದ ಮೌನ, ಇವನ್ನೆಲ್ಲಾ ಅನುಭವಿಸುತ್ತಲೇ, ಅಲ್ಲೇ ನೆರಳಲ್ಲಿ ನಿಂತು ನಮಗೆ ಬೆಟ್ಟ ಹತ್ತಲು ದಾರಿ ತೋರಿಸುವ ಹುಡುಗ ಪ್ರವೀಣನಿಗಾಗಿ ಕಾಯುತ್ತಲೇ ನಿಂತಿದ್ದೆವು.

ಅಲ್ಲೇ ಮರವೊಂದರಲ್ಲಿ ಕೂತಿದ್ದ ಕಾಡು ಪಾರಿವಾಳವೊಂದರ ಮೇಲೆ ಬಿಸಿಲು ಪೂರ್ತಿಯಾಗಿ ಬೀಳೋ ಹೊತ್ತಿಗೆ ನಮಗೆ ದಾರಿ ತೋರಿಸೋ ಹುಡುಗ ಪ್ರವೀಣ ನಮ್ಮನ್ನು ಕೂಡಿಕೊಂಡ. ವಾಲಿಕುಂಜ ಬೆಟ್ಟದ ಕೆಳಗಿದ್ದ ಅವನ ಮನೆಗೆ ಹೋಗಿ ಬಾಟ್ಲಿ ತುಂಬಾ ನೀರು ತುಂಬಿಸಿಕೊಂಡು, ವ್ಯಾಪಾರಕ್ಕಾಗಿ ಇಟ್ಟಿದ್ದ ರಾಶಿ ರಾಶಿ ಕಬ್ಬುಗಳ ಪೈಕಿ ಕೆಲವೊಂದನ್ನು ಆಯ್ದುಕೊಂಡು, ಬೆಟ್ಟದ ಏರು ಏರುವ ಹೊತ್ತಿಗೆ ಬಿಸಿಲು ವಿವರ್ಣವಾಗಿತ್ತು, ಬಿಸಿಲುಗಾಲದ ಉರಿ ತಡೆದುಕೊಳ್ಳಲಾಗದೇ ಕಾಡಿನ ಮುಖವೂ ಕಪ್ಪಿಟ್ಟಿತ್ತು. ಕಾಡಿನ ಸಂದುಗೊಂದುಗಳಲ್ಲಿ ಮಳೆಗಾಲದಲ್ಲಿ ಮಳೆರಾಯನ ಸೋದರಮಾವನಂತೆ ಹರಿಯುತ್ತಾ, ಕೆಲವೊಮ್ಮೆ ಪಾಪವಾಗುತ್ತ, ಕೆಲವೊಮ್ಮೆ ಸಿಟ್ಟಿಗೇಳುತ್ತಾ ಧುಮುಕುತ್ತಿದ್ದ ಜಲಪಾತದಲ್ಲಿ ಈಗ ಬಿಸಿಲೇ ಧುಮುಕುತ್ತಿತ್ತು ಬಿಟ್ಟರೆ, ನೀರು ಒಂಚೂರು ಇರಲಿಲ್ಲ. ಆದರೂ ಎಂತದ್ದೇ ಹೇಳಿ, ಬಿಸಿಲುಗಾಲದ ಕಾಡು ಒಂಥರಾ ಚೆಂದ. ಬಿಸಿಲುಗಾಲದಲ್ಲಿ ಮಾತ್ರ ಜಲಪಾತದ ಗುಂಡಿಯಲ್ಲಿ ನಮ್ಮ ದೇಹದೊಳಗಿನ ಕೋಶಗಳಂತಿರುವ ಹಾಗಿರುವ ಕಲ್ಲು, ಮಣ್ಣು, ಬೇರುಗಳು ಕಾಣಿಸುತ್ತದೆ. ಮಕ್ಕಳ ಪುಟ್ಟ ಪುಟ್ಟ ಪಾದಗಳಂತಿರುವ ಬಣ್ಣ ಬಣ್ಣದ ಬೆಣಚು ಕಲ್ಲುಗಳು ಸಿಕ್ಕುತ್ತದೆ, ಮಳೆಗಾಲದಲ್ಲಿ ಮಳೆರಾಯನ ಜೊತೆ ಶಾಮೀಲಾಗಿ ತನ್ನ ಭಯಂಕರ ಹರಿವಿನಿಂದ ನಮ್ಮನ್ನು ಪುಕ್ಕಲರಾಗುವಂತೆ ಮಾಡುವ ಇದೇ ಜಲಪಾತ, ಬಿಸಿಲುಗಾಲದಲ್ಲಿ ತನ್ನಷ್ಟು ಪಾಪ ಈ ಜಗತ್ತಲ್ಲಿ ಯಾರೂ ಇಲ್ಲ ಎನ್ನುವಂತೆ ಪೂರ್ತಿ ಶರಣಾಗತಿ ಭಾವದಿಂದ ಮಲಗಿಕೊಂಡಿರುವುದನ್ನು ನೋಡುವಾಗ ಎಷ್ಟು ಪಾಪ ಅಲ್ವಾ ಈ ಜಲಪಾತ ಅಂತಲೂ, ಆದರದಿಂದ ಹೋಗಿ ‘ನಿನ್ನ ಜೊತೆ ನಾನಿದ್ದೇನೆ ಮಾರಾಯ’ ಅಂತ ತಬ್ಬಿಡಿದು ಮುತ್ತುಕೊಡಬೇಕು ಅನ್ನಿಸುತ್ತದೆ.

ನಾವು ದಾರಿ ಸಾಗಿದಂತೆಲ್ಲಾ ಮೇಲಕ್ಕೆ ಮೇಲಕ್ಕೆ ಹೋಗುವಂತೆ ಭಾಸವಾಗುತ್ತಿತ್ತು, ಹೊರಡುವಾಗ ಬಾಯಿಗಿಟ್ಟಿದ್ದ ಕಬ್ಬು ಜಗಿದು ಜಗಿದು ರಸ ನುಂಗಿದ ತಕ್ಷಣ ಗಂಟಲಿಗೆ ಅಮೃತ ಸೇಚನವಾಗುತ್ತಲೇ ಇತ್ತು. ಎತ್ತರದ ಮರಗಳ ಬೇರುಗಳು, ಕೇರೆ ಹಾವಿನಂತೆ ಬಳುಕುತ್ತಾ, ಕಲ್ಲುಗಳ ಅಡಿಗೂ ಇಳಿದಿದ್ದವು. ನಮಗೆ ದಾರಿ ತೋರಿಸುತ್ತಿದ್ದ ಪ್ರವೀಣ, ಕಾಲೇಜು ಓದುತ್ತಿರುವ ಹುಡುಗ, ರಜೆ ಇದ್ದಾಗೆಲ್ಲಾ ವ್ಯಾನಿನಲ್ಲಿ ಕಬ್ಬಿನ ಹಾಲು ಮಾರುತ್ತಾ, ವ್ಯವಹಾರದ ಪಟ್ಟನ್ನೂ ಕಲಿಯುತ್ತಿದ್ದ ಕನಸುಕಂಗಳ ಹುಡುಗ, ಇವತ್ತೊಂದಿನ ವ್ಯಾಪಾರಕ್ಕೆ ರಜೆ ಹಾಕಿ, ನಮಗೆ ಕಾಡು ಸುತ್ತಿಸಬೇಕೆಂದೂ, ನಮ್ಮ ಕ್ಯಾಮರಾದಿಂದ ಒಂದಷ್ಟು ಚಿತ್ರಗಳನ್ನು ತೆಗೆಸಿಕೊಳ್ಳಬೇಕೆಂದೂ, ಒಂದು ದಿನದಲ್ಲಿ ಎಲ್ಲೆಲ್ಲಿ ನಮ್ಮನ್ನು ಸುತ್ತಿಸಲು ಸಾಧ್ಯವೋ, ಅಲ್ಲಿಗೆಲ್ಲಾ ಕರಕೊಂಡು ಹೋಗಬೇಕೆಂದೂ ತುಂಬಿದ ಮನಸ್ಸಿನಿಂದ ಬಂದಿದ್ದ ಪ್ರವೀಣನ ಯೌವನದ ಕಣ್ಣುಗಳಲ್ಲಿ ಕಾಡು ಸುತ್ತುವ ಹುಮ್ಮಸ್ಸಿತ್ತು. ದಾರಿಯಲ್ಲಿ ನಿಲ್ಲಿಸಿ ಒಂದು ಫೋಟೋ ತೆಗೆದರೆ ಅವನು ನಾಚಿಕೊಂಡೇ ಚಂದದ ಫೋಸು ನೀಡುತ್ತಿದ್ದ. ಫೋಟೋ ತೋರಿಸಿದರೆ ತನ್ನ ಸಹಜ ಅಂದ ನೋಡಿ ಖುಷಿಯಾಗುತ್ತಿದ್ದ, ಹೀಗೆ ಸಹಜತೆಯ ಕಂಡು ಖುಷಿಯಾಗೋದು, ಕ್ಷಣ ಕ್ಷಣಕ್ಕೂ ಬೆರಗಾಗಿ ಕಾಡು ಸುತ್ತಿಸಿ ನಮಗೂ ಖುಷಿ ಪಡಿಸಬೇಕು ಎನ್ನುವ ಮನಸ್ಸಿರೋದು ಹಳ್ಳಿ ಹುಡುಗರಿಗೆ ಮಾತ್ರವೇನೋ ಅನ್ನಿಸುತ್ತದೆ. ಕಾಡಿನ ಮಣ್ಣಿನ ಪರಿಮಳದಲ್ಲಿ, ಹಸಿರಿನ ಆಹ್ಲಾದದಲ್ಲಿ, ಪಚ್ಚೆ ತೆನೆಗಾಳಿ ಜೀಕಾಟದಲ್ಲಿಯೇ ಬೆಳೆದ ಇವರಿಗೆಲ್ಲಾ ಸರಳತೆ, ಸಹಜತೆ, ಹಾಗೂ ಮುಗ್ಧತೆ ಎಲ್ಲರಿಗಿಂತಲೂ ಜಾಸ್ತಿ ಇದೆ ಅನ್ನಿಸೋದು ನಂಗೆ. ಇಂತವರಿಂದ ನಾವು ಕಲಿಯಬೇಕಾದದ್ದು ಇದೇ ಅಂತಲೂ ಅನ್ನಿಸುತ್ತದೆ.

“ನೋಡಿ ಇದು ಕತ್ತಲ ಕಾಡು, ಕೆರುವಾಸೆ, ಅಜೆಕಾರು ಹಾಗೂ ಇಡೀ ಪಶ್ಚಿಮಘಟ್ಟದ ಜೀವವಿದು, ಇಲ್ಲೇ ಒಂದು ಹೊಳೆ ಇರಬೇಕು, ಅಲ್ಲಿ ಚಂದದ ಬಿಸಿಲ ಸ್ನಾನ ಮಾಡಿ, ಬುತ್ತಿ ಊಟ ಮಾಡಿ ಸಂಜೆಯೊಳಗೆ ವಾಲಿಕುಂಜ ಗುಡ್ಡ ತಲುಪಿದರೆ ಸಾಕು” ಎಂದ ರಾಮಣ್ಣ.

ದೂರದಿಂದ ವಾಲಿಕುಂಜದ ಮುಸುಂಟು ಒಮ್ಮೆ ಹನುಮನಂತೆ ದಪ್ಪಗಾಗಿ, ಮತ್ತೊಮ್ಮೆ ರಾಮನಂತೆ ಸುಂದರವಾಗಿ, ಮತ್ತೊಮ್ಮೆ ಅಲ್ಲಿ ತೂಗುತ್ತಿದ್ದ ಕಾಡು ಮಲ್ಲಿಗೆಯ ಮರಗಳಲ್ಲೆಲ್ಲಾ ಸೀತೆಯ ಮುಡಿಯಂತೆ ಮೋಹಕವಾಗಿ ಕಾಣುತ್ತಿತ್ತು. ಮತ್ತು ಅಷ್ಟೇ ಹಿತವಾಗಿ ಕಾಡು ಮಲ್ಲಿಗೆಯ ಘಮಲು ಬೆಟ್ಟದಿಂದ ಹಾರಿ ಎಲ್ಲಿಗೆಲ್ಲಿಗೋ ಹೋಗಿ ಕಚಕುಳಿ ಇಡುತ್ತಿತ್ತು. ಕಾಡ ಪೊದೆ, ಬಳ್ಳಿಗಳನ್ನೆಲ್ಲಾ ದಾಟಿ ಇನ್ನೂ ಸರಿಯಾಗಿ ವಾಲಿಕುಂಜದ ಏರು ತಲುಪಿಯೇ ಇಲ್ಲದ ನಮಗೆ ಅಲ್ಲೇ ಕೆಳಗೊಂದು ಕಡು ನೀಲಿಯಾಗಿ, ಮೈಯೆಲ್ಲಾ ಹಸಿರು ಮಾಡಿ ತುಂಬಿಕೊಂಡು ಮಲಗಿದ್ದ ಕೆರೆಯೊಂದು ಕಂಡಿದ್ದೇ ಆ ಕೆರೆಯಲ್ಲಿಯೇ ಹೋಗಿ ಬೀಳಬೇಕು ಎನ್ನಿಸುವಷ್ಟು ಆಸೆಯಾಯ್ತು. ಆ ಕೆರೆ ಎಷ್ಟು ಮುದ್ದಾಗಿ ಕಾಣುತ್ತಿತ್ತೆಂದರೆ, ನೀವು ತುಂಬಾ ಪ್ರೀತಿಸುವ ವ್ಯಕ್ತಿಯ ಕಣ್ಣನ್ನು ಆಳವಾಗಿ ನೋಡಿದಾಗ ಅವರ ಕಣ್ಣಲ್ಲಿ ನಮ್ಮ ಕಣ್ಣಿನ ಬೆಳಕು, ನಮ್ಮ ಕಣ್ಣಲ್ಲಿ ಅವರ ಕಣ್ಣಿನ ಹೊಳಪು ಹೊಳೆಯುತ್ತಲ್ಲಾ, ಹಾಗೆ ಹೊಳೆದು ಎರಡೂ ಕಣ್ಣುಗಳು ಯಾವುದೋ ಶುದ್ಧವಾದ ಭಾವವೊಂದನ್ನು ಒಮ್ಮೆಗೇ ಅರ್ಥಮಾಡಿಕೊಳ್ಳುತ್ತಲ್ಲಾ, ಅಂತಹ ಶುಭ್ರತೆಯಿತ್ತು ಆ ನೀರಿನೊಳಗೆ. ಅಲ್ಲಿ ನೀಲಾಕಾಶದ ಕಣ್ಣೂ, ಕೆರೆಯ ಕಣ್ಣೂ ಒಂದಾಗಿತ್ತು. ನಾವೆಲ್ಲಾ ನೀರಿಗಿಳಿದಾಗ ಇಡೀ ಮೈಗೆ ಹೊಸ ಜೀವ, ಆ ಕೆರೆಯಲ್ಲಿ ಬಿದ್ದುಕೊಂಡು ಮೇಲಿನ ಆಕಾಶ, ಎತ್ತರದಲ್ಲಿ ಕಾಣುತ್ತಿರುವ ವಾಲಿಕುಂಜ ಬೆಟ್ಟ, ಸುತ್ತಲೂ ಹಬ್ಬಿದ ಮಲೆಯ ಸೊಗಸನ್ನು ನೋಡುವಷ್ಟು ಸುಖ ಬೇರೆ ಯಾವ ಸಂಗತಿಯಲ್ಲಿದೆ ಅನ್ನಿಸುತ್ತಿತ್ತು.

ಹಾಗೇ ಬಿದ್ದುಕೊಂಡಾಗ ಕೆರೆಯ ಬೊಳ ಬೊಳ ಸದ್ದು, ದೂರದಲ್ಲಿ ರೆಕ್ಕೆ ಬಡಿದು ಹೋದ ಬೆಳ್ಳಕ್ಕಿಯ ಸದ್ದಷ್ಟೇ ಕೇಳಿ, ಕಾಡು ಇನ್ನಷ್ಟು ಅರ್ಥವಾಗತೊಡಗಿತ್ತು. ಒಂದೆರಡು ಸುಂದರ ಲಹರಿಯ ಸದ್ದುಗಳಿಗೆ ನಮ್ಮೆಲ್ಲಾ ಚಿಂತೆಯನ್ನು ಕ್ಷಣಾರ್ಧದಲ್ಲಿಯೇ ಆವಿಮಾಡಿಬಿಡುವ ಶಕ್ತಿ ಇದೆ, ಅದಕ್ಕೆ ಹೇಳೋದು ಸುಮ್ಮನೇ ಕಿವಿಗೆ ಬೀಳುವ ಸದ್ದನ್ನೆಲ್ಲಾ ಕೇಳುತ್ತಿರಬೇಕು, ಪ್ರತೀ ಸದ್ದುಗಳು ನಮ್ಮ ನೆನಪನ್ನು, ನಮ್ಮ ಬಾಲ್ಯವನ್ನು, ನಮ್ಮ ಕನಸನ್ನು ಎಚ್ಚರಗೊಳಿಸುತ್ತದೆ. ಆ ಸದ್ದೇ ಬದುಕೆಷ್ಟು ಸುಂದರವಾಗಿದೆ ನೋಡು ಅಂತ ಕೆನ್ನೆ ಸವರಿ ಪಾಠ ಮಾಡುತ್ತದೆ.

ನಾವು ಎಷ್ಟೊತ್ತು ಹಾಗೇ ನೀರಿನಲ್ಲಿ ಆಟವಾಡಿದೆವೋ ಗೊತ್ತಿಲ್ಲ. ಮೇಲೆ ಮೋಡಗಳು ಒಟ್ಟಾಗಿ ಕಾಡೆಲ್ಲಾ ಚೂರು ಚೂರು ಕಪ್ಪಾಗಲು ತೊಡಗಿದಾಗ, ಬೇಗ ಊಟ ಮಾಡಿ ಬೆಟ್ಟವೆರುವುದೊಳಿತು ಎಂದುಕೊಂಡು ತಂದಿದ್ದ ಬುತ್ತಿ ಬಿಚ್ಚಿದೆವು, ಗಮಗಮ ಪಲಾವು, ಬನ್ಸ್, ಸಾಂಬಾರ್, ಪರೋಟ ಗಸಿ, ಮೂಸಂಬಿ ಹಣ್ಣು, ಕೆನೆಮೊಸರು ಎಲ್ಲಾ ಗಡದ್ದಾಗಿ ತಿಂದಾಗ ಹೊಟ್ಟೆ ತುಂಬಿ ಕಾಡು ಇನ್ನಷ್ಟು ಚೆಂದವಾಗಿ ಕಾಣಲು ಶುರುವಾಯ್ತು. ಮಧ್ಯಾಹ್ನದ ಉರಿಬಿಸಿಲ ನಡುವೆ ತೂರಿಬರುತ್ತಿದ್ದ ಕಪ್ಪುಮೋಡಗಳ ಮಬ್ಬು ಬೆಳಕಿನಲ್ಲಿ ಬೆಟ್ಟ ಏರಿದೆವು. ಹತ್ತುತ್ತಾ, ಹತ್ತುತ್ತಾ ಕೆಳಗೆ ಆಳವಾದ ದಾರಿ, ಮೇಲೆ ಹತ್ತಿರಾದ ಬೆಟ್ಟದ ಸಾಲುಗಳು, ಅಲ್ಲೇ ಮೇಲೆ ಹತ್ತಿದಾಗ “ನನ್ನಷ್ಟು ಎತ್ತರ ನೀವಲ್ಲ, ನಾನೇರಿದೆತ್ತರಕೆ ನೀನೇರಬಲ್ಲೆಯಾ? ಎನ್ನುತ್ತಾ ನೋಡುತ್ತಿದ್ದ ದಪ್ಪ ದಪ್ಪ ಗಾತ್ರದ ಬಂಡೆಗಲ್ಲುಗಳು, ಮೋಡ ತಾನು ತಿನ್ನಲು ರೆಡಿ ಮಾಡಿಟ್ಟಿದ್ದ ಉಂಡೆಗಳಂತೆ ಕಾಣತೊಡಗಿದವು. ಅಲ್ಲೇ ಹಾವಿನಂತಿದ್ದ ದಪ್ಪಗಿನ ಕಾಂಡಗಳು ಕಂಡದ್ದೇ, ಇದರ ತುದಿಯನ್ನು ಕತ್ತಿಯಲ್ಲಿ ಸೀಳಿ, ಆ ಮೇಲೆ ಸ್ಟ್ರಾನಂತೆ ಹೀರಿದರೆ ನೀರು ಸಿಗುತ್ತದೆ. ಆ ನೀರನ್ನು ಹೀರುತ್ತಾ ದಾರಿ ಸಾಗಬಹುದು ಎಂದ ರಾಮಣ್ಣ. ಹುಡುಗ ಪ್ರವೀಣ, ಕತ್ತಿಯಿಂದ ತುದಿ ಸೀಳಿದ. ರಾಮಣ್ಣ ಆ ಕಾಂಡಕ್ಕೆ ಬಾಯಿಕೊಟ್ಟು ಹೀರಿದರು.

ನಾವು ದಾರಿ ಸಾಗಿದಂತೆಲ್ಲಾ ಮೇಲಕ್ಕೆ ಮೇಲಕ್ಕೆ ಹೋಗುವಂತೆ ಭಾಸವಾಗುತ್ತಿತ್ತು, ಹೊರಡುವಾಗ ಬಾಯಿಗಿಟ್ಟಿದ್ದ ಕಬ್ಬು ಜಗಿದು ಜಗಿದು ರಸ ನುಂಗಿದ ತಕ್ಷಣ ಗಂಟಲಿಗೆ ಅಮೃತ ಸೇಚನವಾಗುತ್ತಲೇ ಇತ್ತು. ಎತ್ತರದ ಮರಗಳ ಬೇರುಗಳು, ಕೇರೆ ಹಾವಿನಂತೆ ಬಳುಕುತ್ತಾ, ಕಲ್ಲುಗಳ ಅಡಿಗೂ ಇಳಿದಿದ್ದವು.

“ನೀರು ಉಂಟಾ ಅದ್ರಲ್ಲಿ” ಅಂದೆ. “ಹೌದು ಬಂತು ನೋಡಿ ಎಂದು ರಾಮಣ್ಣ ಅದರಲ್ಲಿ ನೀರು ಹನಿಯುತ್ತಿದ್ದುದನ್ನು ತೋರಿಸಿದರು. ನಾನೂ ಇನ್ನೊಂದು ದಪ್ಪಗಿನ ತುಂಡು ಹಿಡಿದುಕೊಂಡು ಹೀರಿದಾಗ, ಅಬ್ಬಾ ರುಚಿಯಾದ ನೀರು ಹನಿಯುತ್ತಿತ್ತು. ಹನಿ ಹನಿ ನೀರಷ್ಟೇ ಉದುರುತ್ತಿದ್ದರೂ ಪುಟ್ಟ ಪುಟ್ಟ ಹನಿಗಳೇ ನಿಜವಾದ ಅಮೃತ ಅನ್ನಿಸಿತು. ಮತ್ತೆ ಮತ್ತೆ ಏರುತ್ತಲೇ ಬೆಟ್ಟದ ತುದಿ ತಲುಪಿದಾಗ ಸಂಜೆಯೋ, ಮಧ್ಯಾಹ್ನವೋ, ಇರುಳೋ ಅನ್ನುವುದು ಗೊತ್ತೇಯಾಗದ ಹಾಗೆ ಮೋಡಗಳೆಲ್ಲಾ ಆಕಾಶದಲ್ಲಿ ಸುತ್ತಿದ್ದವು. “ಈಗೊಂದು ಮಳೆ ಬರಬೇಕು ಆಹಾ.” ಅಂದರು ಕೆಲವರು.

ಎತ್ತರದಿಂದ ಕಾಣೋ ಪಶ್ಚಿಮಘಟ್ಟದ ಪರ್ವತಶ್ರೇಣಿಗಳು, ಆಗುಂಬೆಯನ್ನು, ಕುದುರೆಮುಖದ ಕಾನನಗಳನ್ನು, ಗದ್ದೆ ತೋಟಗಳನ್ನು ನೋಡುತ್ತ ಹೋದ ಹಾಗೆ, ನಾವು ಬದುಕುತ್ತಿರುವ ಈ ಲೋಕ ಅದೆಷ್ಟು ಸುಂದರ ಅಲ್ವಾ ಅನ್ನಿಸಿತು. ಆದರೂ ನಾವು ಇದರ ಮೇಲೆಲ್ಲಾ ನಂಬಿಕೆಯೇ ಇಡದೇ, ಯಾವುದಕ್ಕೋ ಬೇಸರಪಡುತ್ತ, ವೈರಾಗ್ಯ ಬಂದವರ ಹಾಗೆ ಆಡುತ್ತಿರೋದೆಲ್ಲಾ ಎಷ್ಟೊಂದು ಬಾಲಿಶ ಅಲ್ಲವೇ ಅನ್ನಿಸಿತು. ಅಷ್ಟೊತ್ತಿಗೆ ಮತ್ತೊಂದು ಮೋಡದ ಮುಸುಕು ತಣ್ಣಗೇ ಇಡೀ ಕಾಡಿಗೇ ಹಾಸಿಕೊಂಡಿತು. ಭಾರೀ ದೂರದಲ್ಲಿ ಅಮ್ಮ ಪುಟ್ಟದಾಗಿ ಜೋಗುಳ ಹಾಡುವ ಹಾಗೆ ಮಳೆ ಧೋ ಧೋ ಎಂದು ಕೂಗತೊಡಗಿದ್ದು ಮೊದಲು ಎಲ್ಲೋ ಸಣ್ಣ ಆಲಾಪದಂತೆ ಕೇಳಿತು. ಕೊನೆಗೆ ಆ ಆಲಾಪ ಚೂರು ಹತ್ತಿರಾಗಿ, ಇನ್ನೂ ಸ್ವಲ್ಪ ಹತ್ತಿರಾಗಿ ನಾವಿದ್ದ ಬೆಟ್ಟದತ್ತ ಬರತೊಡಗಿ, ಕೊನೆಗೆ ಸುರಿದೇ ಸುರಿಯಿತು ಒಂದು ದೊಡ್ಡ ಮಳೆ. ಒಂದೇ ಒಂದು ಮಳೆ ಬಿದ್ದಿದ್ದೇ ಆಹಾ ಮಣ್ಣಿನ ಪರಿಮಳ, ಕಾಡು ಹೂವಿನ ತಂಪಗಿನ ಪರಿಮಳ, ಎಲ್ಲೋ ಹಾಳಾಗಿ ಕೊಳೆತ ಮರದ ಪರಿಮಳ ಎಲ್ಲವೂ ಮೂಗಿಗೆ ಬಡಿಯತೊಡಗಿತು. ನೀವೆಷ್ಟು ಮಂದಿ ಮಳೆ ಒಮ್ಮೆ ಸುರಿಯುವ ಮೊದಲು ದೂರದಲ್ಲಿ ಅದು ಕೂಗುವುದನ್ನು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಆದರೆ ಇಷ್ಟು ದೊಡ್ಡ ಬೆಟ್ಟದ ಕಾಡಲ್ಲಿ ಮಳೆ ಕೂಗುತ್ತ ದೂರದಿಂದ ಹತ್ತಿರ ಬರುವುದುನ್ನು ಕೇಳುವ ಸುಖವಿದೆಯಲ್ಲಾ, ಆ ಸುಖಕ್ಕೆ ಮೈ ಎಲ್ಲಾ ಕಂಪನವಾಗುತ್ತದೆ, ರೋಮವೆಲ್ಲಾ ಬಿರಿಯುತ್ತದೆ, ಜಗತ್ತಿನ ಅತ್ಯಂತ ದೊಡ್ಡ ಸಂಗೀತವದು ನನ್ನ ಪಾಲಿಗೆ. ಮಳೆ ಈಗ ಒಂದೇ ಸಮನೆ ಸುರಿಯತೊಡಗಿತು. ಜೊತೆಜೊತೆಗೆ ಗುಡುಗು ಮಿಂಚುಗಳ ವಾದ್ಯ ಸಂಗೀತ ಬೇರೆ ಬರತೊಡಗಿತು.

ನಾವು ಎತ್ತರದಲ್ಲಿರುವುದರಿಂದ ಆಕಾಶ ವಿಶಾಲವಾಗಿ ಕಂಡಿತು. ಸುತ್ತಲಿರುವ ಹಸಿರ ಬೆಟ್ಟಗಳೆಲ್ಲಾ ಮಳೆ ಈಗ ಒಂದೇ ಸಮನೆ ಸುರಿಯುತ್ತಿರುವುದರಿಂದ ಬಿಳಿ ಬಿಳಿ ಪರದೆಯಂತೆ ಕಾಣತೊಡಗಿತು. ಅಷ್ಟೊತ್ತು ಬಿಸಿಲುಗಾಲದ ಬಿಸಿಲೇ ಆಗಿಹೋಗಿದ್ದ ನಾವು, ಈಗ ಪೂರ್ತಿ ಚಂಡಿಯಾಗಿ ಮಳೆಯೇ ಆಗಿಹೋದೆವು. “ಇಲ್ಲೇ ಸ್ವಲ್ಪ ಹೊತ್ತು ಕೂರೋಣ, ಮಳೆ ನಿಲ್ಲುತ್ತದೆ ಎಂದ ರಾಮಣ್ಣ. ಆದರೆ ಮಳೆಯ ಬದಲು ಯಾವಾಗ ಸಿಡಿಲು ಮಿಂಚು ಹೊಳೆಯತೊಡಗಿತೋ, ಆಗ ಪ್ರವೀಣ “ನಾವು ಹೊರಡೋದೇ ಒಳ್ಳೇದು, ಈ ಸಿಡಿಲು ಬರುವಾಗ ಕಲ್ಲಲ್ಲಿ ಕೂರೋದು ಡೇಂಜರ್, ನಮ್ಮ ಜಾಗ್ರತೆ ನಾವು ಮಾಡಬೇಕಲ್ಲ” ಎಂದು ಹೇಳಿದ ಮೇಲೆ ನಮಗೆಲ್ಲಾ ಅಲ್ಲಿ ಕೂರುವ ಧೈರ್ಯ ಎಲ್ಲಿಂದ ಬರಬೇಕು? ಪೂರ್ತಿ ವಾಲಿಕುಂಜ ಹತ್ತಲು ಇನ್ನೂ ಬಾಕಿ ಇದ್ದರೂ, ಮಳೆಯಲ್ಲಿಯೇ ನೆನೆದು ಬೆಟ್ಟವಿಳಿಯತೊಡಗಿದೆವು.

ಸುರಿವ ಮಳೆ ತೊಟ್ಟ ಮೂಗುತಿಯ ಹೊಳಪಂತೆ ಮಿಂಚು ಹೊಳೆಯುತ್ತಿತ್ತು. ಅರ್ಧ ಕೆಳಗಿಳಿಯುತ್ತಿದ್ದಂತೆಯೇ ಮಳೆ ಕಡಿಮೆಯಾಯ್ತು. ಈಗ ಹಿಂತಿರುಗಿ ನೋಡುತ್ತೇನೆ. ಅಬ್ಬಾ ಎಂಥಾ ನೋಡೋದು, ಅಳು ನಿಲ್ಲಿಸಿದ ಮಗು, ಕಿಲಕಿಲನೆ ನಕ್ಕಂತೆ ನಾವು ಸಾಗಿ ಬಂದ ದಾರಿ ನಗುತ್ತಿತ್ತು. ಹತ್ತಿ ಬಂದ ಬೆಟ್ಟ, ದೂರದಿಂದಲೇ ನೋಡಿಕೊಂಡು ಬಂದ ಗುಡ್ಡದ ಹಸಿರು ಎಲ್ಲವೂ ಎಷ್ಟು ಚೆಂದ ಕಾಣುತ್ತಿತ್ತೆಂದರೆ ಆಗ ನಾವು ಬಿಸಿಲಲ್ಲಿ ನೋಡಿದ್ದು ಇದೇ ಬೆಟ್ಟವನ್ನಾ? ಎನ್ನುವ ಭ್ರಮೆ ಕಾಡತೊಡಗಿತು. ಬೆಟ್ಟಗಳ ಸೆರಗು ಈಗ ಹಸಿರಿನಿಂದ ಮುದ್ದು ಮುದ್ದಾಗಿ ಮೋಹಕವಾಗಿ ಕಾಣುತ್ತಿತ್ತು. ಮಳೆಯಲ್ಲಿ ನೆನೆದು ಕೆಂಪಗೇ ಹೊಳೆಯುತ್ತಿದ್ದ ಕಾಡಿನ ಕೋಕಂ ಹಣ್ಣು ಕಿತ್ತು ಬಾಯಿಗಿಳಿಸಿದರೆ ಆಹಾ ಎಂಥಾ ರುಚಿ. ಮತ್ತೆ ಮಳೆಯಿಂದ ಒದ್ದೆ ಒದ್ದೆಯಾಗಿದ್ದ ಕಾಡ ದಾರಿಯಲ್ಲಿ ನಡೆಯುವಾಗ ಸೆಖೆಯೆಲ್ಲಾ ಓಡಿಹೋಗಿತ್ತು. ಕಾಡ ದಾರಿ ಕಳೆದು ನಾಡ ದಾರಿ ಬಂದಾಗ ಅಲ್ಲೂ ಸಾಕಷ್ಟು ಮಳೆ ಸುರಿದು ಮಣ್ಣಿನ ರಸ್ತೆಯಲ್ಲಿ ನೀರು ನಿಂತಿತ್ತು. ಆ ನೀರಿನಲ್ಲೇ ಮಕ್ಕಳು ಬೇಕಂತಲೇ ಸೈಕಲ್ ಓಡಿಸಿ, ನೀರೆಬ್ಬಿಸಿ ಆಟವಾಡುತ್ತಿದ್ದರು.

ಬೆಟ್ಟದ ಹಸಿರಿನ ಹಿನ್ನೆಲೆಯಲ್ಲಿ ಪುಟ್ಟ ಅಕ್ಕ ಪುಟ್ಟ ತಮ್ಮ ಕೊಡೆ ಹಿಡಿದುಕೊಂಡು ಬರುತ್ತಿದ್ದರು. ಎತ್ತರದಲ್ಲಿ ಮಂಜಿನಿಂದ ಮುದುಡಿಕೊಂಡು ನಿಂತಿದ್ದ ವಾಲಿಕುಂಜ ಬೆಟ್ಟ, “ನನ್ನ ಮೇಲೆ ಪೂರ್ತಿ ಹತ್ತಿಲ್ಲವಲ್ಲ ನೀವು, ನಾನೇರುವೆತ್ತರಕೆ ನೀನೇರಬಲ್ಲೆಯಾ” ಅಂತ ಮತ್ತೆ ಪಿಸುನುಡಿಯಿತು.
ಪ್ರಸಾದ್ ಶೆಣೈ