ಆರ್ಥಿಕ ಅನನುಕೂಲತೆಗಳಿಂದಾಗಿ ಬೋರ್ಡಿಂಗ್ ಶಾಲೆ ಮುಚ್ಚಿಹೋಗುವ ಪರಿಸ್ಥಿತಿ ಬಂದಾಗ ಕಂಗಾಲಾಗಿ ತನ್ನ ಜೀವನ ಮತ್ತೆ ಹಳ್ಳಿಯ ಬದುಕಿಗೆ ಸೀಮಿತ ಎನ್ನುವ ಚಿಂತೆ ಏನೇನೆಲ್ಲವನ್ನು ಮಾಡಿಸುತ್ತದೆ ಎನ್ನುವುದನ್ನು ಆ ಸಮಯದ ದುಗುಡದಿಂದಲೇ ಬರೆದಿದ್ದಾರೆ. ಆದರೆ ಮತ್ತೆ ಶಾಲೆ ತನ್ನ ಕಷ್ಟಗಳನ್ನು ನಿವಾರಿಸಿಕೊಂಡು ಮುಂದುವರೆಯುತ್ತದೆ, ಶಿಲ್ಪಾ, ಶಾಂತಿಭವನದ ಶಿಕ್ಷಣ ಮುಗಿಸಿ ಉನ್ನತ ಶಿಕ್ಷಣಕ್ಕೆ ಅಣಿಯಾಗುತ್ತಾರೆ.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

 

ನೆಟ್‍ಫ್ಲಿಕ್ಸ್‌ನಲ್ಲಿ ‘ವಿಧಿಯ ಹೆಣ್ಣುಮಕ್ಕಳು’ (Daughters of Destiny) ಎನ್ನುವ ನಾಲ್ಕು ಕಂತುಗಳ ಸಾಕ್ಷ್ಯಚಿತ್ರವಿದೆ. ಈ ಸಾಕ್ಷ್ಯಚಿತ್ರವನ್ನು ಮಾಡಿದವರು, ಆಸ್ಕರ್ ಪ್ರಶಸ್ತಿ ವಿಜೇತ ಅಮೇರಿಕದ ವೆನೆಸಾ ರಾತ್ ಎನ್ನುವವರು. ವೆನೆಸಾ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸೂಕ್ಷ್ಮಸಂವೇದನೆಯ ಸಾಕ್ಷ್ಯಚಿತ್ರ ನಿರ್ದೇಶಕಿ.

ಈ ಸಾಕ್ಷ್ಯಚಿತ್ರಕ್ಕೆ ಅವರು ಆರಿಸಿಕೊಂಡಿದ್ದು ಒಂದು ಬೋರ್ಡಿಂಗ್ ಸ್ಕೂಲನ್ನು. ಇದು ಅಮೇರಿಕದಲ್ಲಿರುವ ಬೋರ್ಡಿಂಗ್ ಶಾಲೆಯ ಕತೆಯಲ್ಲ, ಭಾರತದ ಹಳ್ಳಿಯೊಂದರಲ್ಲಿ ಇರುವ ‘ಶಾಂತಿಭವನʼ ಎಂಬ ಬೋರ್ಡಿಂಗ್ ಶಾಲೆ; ಈ ಶಾಲೆ ಬೆಂಗಳೂರಿನಿಂದ ಒಂದು ಗಂಟೆ ದೂರದಲ್ಲಿ ನೆರೆಯ ತಮಿಳುನಾಡಿನ ಹಳ್ಳಿಯೊಂದರಲ್ಲಿದೆ.

(ಅಬ್ರಹಾಂ ಜಾರ್ಜ್)

ವೆನೆಸಾ ಅವರು ಅಮೇರಿಕದಿಂದ ಭಾರತದ ಈ ಹಳ್ಳಿಯಲ್ಲಿರುವ ಬೋರ್ಡಿಂಗ್ ಶಾಲೆಗೆ ಬರುತ್ತಾರೆ. ನಾಲ್ಕು ವರ್ಷದ ನಾಲ್ಕು ಪುಟ್ಟ ಹೆಣ್ಣುಮಕ್ಕಳು ಬೋರ್ಡಿಂಗ್ ಶಾಲೆಯನ್ನು ಸೇರಿ ವಯಸ್ಕರಾಗಿ ತಮ್ಮ ಉನ್ನತ ಶಿಕ್ಷಣಕ್ಕೆ ಹೋಗುವವರೆಗೆ, ಅವರ ಜೀವನವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುತ್ತ ಹೋಗುತ್ತಾರೆ. ನಾಲ್ಕು ಗಂಟೆಗಳಲ್ಲಿ ಅಷ್ಟು ವರ್ಷಗಳ ಕತೆಯನ್ನು ಕುತೂಹಲಭರಿತವಾಗಿ ಹೇಳುತ್ತ ಹೋಗುತ್ತಾರೆ. ಈ ಸಾಕ್ಷ್ಯಚಿತ್ರಕ್ಕೆ ನವಿರಾಗಿ ಎ.ಆರ್.ರೆಹಮಾನ್ ಸಂಗೀತವನ್ನು ಕೂಡ ಕೊಟ್ಟಿದ್ದಾರೆ.

ಈ ಸಾಕ್ಷ್ಯಚಿತ್ರವನ್ನು ನೋಡುತ್ತ ಕಣ್ಣು ಆಗಾಗ ಒದ್ದೆಯಾಗುತ್ತದೆ, ಮನಸ್ಸು ಭಾರವಾಗುತ್ತದೆ, ‘Pauseʼ ಬಟನ್ ಒತ್ತಿ ಚಿಂತಿಸುವಂತೆ ಮಾಡುತ್ತದೆ. ನಮ್ಮನ್ನು ‘ಶಾಂತಿಭವನʼದ ಮಕ್ಕಳ ನಡುವೆ ನಿಲ್ಲಿಸಿಬಿಡುತ್ತದೆ.

‘ಶಾಂತಿಭವನʼವೆಂಬ ಶಾಲೆ:

ಕೇರಳ ಮೂಲದ ಅಬ್ರಹಾಂ ಜಾರ್ಜ್ ಎನ್ನುವವರು ಭಾರತೀಯ , ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ, 1962ರ ಚೈನಾದ ಯುದ್ಧದಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲಿ ಅಪ್ಪಳಿಸಿದ ಬಾಂಬಿನ ಭಯಂಕರ ಶಬ್ದದಿಂದ ತಮ್ಮ ಚಿಕ್ಕ ವಯಸ್ಸಿನಲ್ಲೇ ಶ್ರವಣ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅಮೇರಿಕದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ ತಾಯಿ ಅವರ ಶ್ರವಣ ಚಿಕಿತ್ಸೆಗಾಗಿ ಅಮೇರಿಕಕ್ಕೆ ಕರೆಸಿಕೊಳ್ಳುತ್ತಾರೆ. ಅಲ್ಲಿ ಕಿವಿಯ ಶಸ್ತ್ರಚಿಕಿತ್ಸೆಯಾಗುತ್ತದೆ. ಅಲ್ಲಿಯೆ ಉಳಿದುಕೊಂಡ ಅಬ್ರಹಾಂ, ಅಮೇರಿಕದಲ್ಲಿ ಬ್ಯುಸಿನೆಸ್ ಸ್ಕೂಲ್ ಸೇರಿ, ಅಲ್ಲಿಯ ಉನ್ನತ ಶಿಕ್ಷಣ ಪಡೆಯುತ್ತಾರೆ. ಅಲ್ಲಿನ ಪ್ರತಿಷ್ಟಿತ ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಾರೆ, ನಂತರ ತಮ್ಮದೇ ಸ್ವಂತ ಕಂಪನಿ ಕಟ್ಟಿಕೊಂಡು ದೊಡ್ಡ ಉದ್ಯಮಿಯಾಗುತ್ತಾರೆ.

ಆದರೆ ಅಬ್ರಹಾಂ ಸೆಳೆತವೆಲ್ಲ ಭಾರತದೆಡೆಗೇ. ಭಾರತದ ಸಮಾಜಕ್ಕೆ ತಮ್ಮಿಂದ ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿ ‘ಶಾಂತಿಭವನʼವೆಂಬ ಬೋರ್ಡಿಂಗ್ ಶಾಲೆಯನ್ನು ಆರಂಭಿಸುತ್ತಾರೆ…

ಕರ್ನಾಟಕದ ಗಡಿಗೆ ತುಂಬ ಹತ್ತಿರದಲ್ಲಿ ತಮಿಳುನಾಡಿನ ಹಳ್ಳಿಯೊಂದರಲ್ಲಿರುವ ಈ ‘ಶಾಂತಿಭವನʼ ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಣ ನೀಡುವ ಬೋರ್ಡಿಂಗ್ ಶಾಲೆ. ಈ ಬೋರ್ಡಿಂಗ್ ಸ್ಕೂಲಿನಲ್ಲಿ ಪ್ರತಿ ತಿಂಗಳು ಪ್ರತಿ ಮಗುವಿನ ಶಿಕ್ಷಣಕ್ಕೆ (ವಸತಿ, ಆಹಾರ ಮತ್ತು ಆರೋಗ್ಯ ಸೇರಿ) ಹನ್ನೊಂದು ಸಾವಿರ ರೂಪಾಯಿ ಬೇಕಾಗುತ್ತದೆ! ಭಾರತದಲ್ಲಿ ಎಷ್ಟು ಜನರಿಗೆ ಇಂಥ ಬೋರ್ಡಿಂಗ್ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸಲು ಸಾಧ್ಯವಿದೆ? ಮೇಲ್ಮಧ್ಯಮವರ್ಗ ಅನಿಸಿಕೊಂಡವರೂ ಇಂಥ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುವ ಕನಸನ್ನು ಕಾಣಲಾಗದು. ಹಾಗಾದರೆ ಇದು ಅಬ್ರಹಾಂ ಜಾರ್ಜ್ ಅವರು ಶ್ರೀಮಂತ ಮಕ್ಕಳಿಗಾಗಿ ತೆರೆದ ಬೋರ್ಡಿಂಗ್ ಶಾಲೆ ಎಂದು ನೀವು ಅಂದುಕೊಂಡಿದ್ದರೆ ಅದು ಖಂಡಿತ ತಪ್ಪು.

ಬಡತನ, ದಾರಿದ್ರ್ಯ, ಅನಕ್ಷರತೆ ಮತ್ತು ‘ಕೆಳಜಾತಿʼ ಅಥವಾ ‘ಅಸ್ಪೃಶ್ಯತೆ ಎಲ್ಲ ಸೇರಿ, ನಗರಗಳಿಂದ ದೂರ ಚಿಕ್ಕ ಹಳ್ಳಿಗಳಲ್ಲಿ ಬದುಕುವವರ ಮನೆಯಲ್ಲಿ ಹುಟ್ಟಿದ ನತದೃಷ್ಟ ಮಕ್ಕಳನ್ನು ಹುಡುಕಿ ತಂದು ಈ ಶಾಲೆಯಲ್ಲಿ ಸೇರಿಸುತ್ತಾರೆ ಅಬ್ರಹಾಂ. ಆಧುನಿಕ ಜಗತ್ತು ಬದುಕಲೆತ್ನಿಸುತ್ತಿರುವ ಜಾತ್ಯತೀತತೆ, ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ಕನಸಗಳನ್ನು ಚಿಕ್ಕ ವಯಸ್ಸಿನಲ್ಲೇ ಕಲಿಸಿ, ಆ ಕನಸುಗಳನ್ನು ಸಾಕಾರ ಮಾಡಲು ಈ ಬೋರ್ಡಿಂಗ್ ಶಾಲೆ ಪಣತೊಟ್ಟು ನಿಂತಿದೆ. ವಸತಿ, ಊಟ, ಆರೋಗ್ಯ ಮತ್ತು ಶಿಕ್ಷಣ ಸೇರಿ ಪ್ರತಿ ಮಗುವಿಗೆ ತಿಂಗಳಿಗೆ ಆಗುವ ಸುಮಾರು 11,000 ರೂಪಾಯಿ ವೆಚ್ಚವನ್ನು ಶಾಂತಿಭವನದ ದತ್ತಿಸಂಸ್ಥೆಯೇ ನೋಡಿಕೊಳ್ಳುತ್ತದೆ. ಮೊದಮೊದಲಿಗೆ ಎಲ್ಲ ಖರ್ಚನ್ನೂ ಸ್ವತಃ ಅಬ್ರಹಾಂ ಜಾರ್ಜ್ ಅವರೇ ತಮ್ಮ ಅಮೇರಿಕದ ಉದ್ಯಮದ ವಹಿವಾಟಿನಿಂದ ಬಂದ ಹಣದಲ್ಲಿ ನಡೆಸುತ್ತಿದ್ದರು; ಇತ್ತೀಚೆಗೆ ದೇಣಿಗೆ ಪಡೆಯುತ್ತಿದ್ದಾರೆ. ಈಗ ಇಲ್ಲಿ ಮುನ್ನೂರಕ್ಕೂ ಹೆಚ್ಚು ಇಂಥ ಮಕ್ಕಳು ಅತ್ಯುತ್ತಮ ಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

(ಶಿಲ್ಪಾ)

ಭಾರತದಲ್ಲಿ ಎಷ್ಟು ಜನರಿಗೆ ಇಂಥ ಬೋರ್ಡಿಂಗ್ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸಲು ಸಾಧ್ಯವಿದೆ? ಮೇಲ್ಮಧ್ಯಮವರ್ಗ ಅನಿಸಿಕೊಂಡವರೂ ಇಂಥ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುವ ಕನಸನ್ನು ಕಾಣಲಾಗದು.

‘ಆನೆ ಓಡಿಸುವವನ ಮಗಳುʼ:

ಬೆಂಗಳೂರಿನಿಂದ ತುಂಬ ದೂರವೇನೂ ಇಲ್ಲದ, ಆದರೆ ನಾಗರಿಕ ಜೀವನದ ಮೂಲಭೂತ ಸೌಕರ್ಯಗಳೂ ಇಲ್ಲದ ಚಿಕ್ಕ ಹಳ್ಳಿ. ಅಲ್ಲಿ ಕಳ್ಳಭಟ್ಟಿ ಮಾಡಿಕೊಂಡು ಬಡತನದ ರೇಖೆಗಿಂತ ಬಹಳ ಕೆಳಗೆ ಬದುಕುತ್ತಿರುವ ಕ್ರೈಸ್ತ ಧರ್ಮಕ್ಕೆ ಸೇರಿದ ದಲಿತನ ಸಂಸಾರ. ಗಂಡು ಸಂತಾನಕ್ಕಾಗಿ ಹಾತೊರೆಯುತ್ತಿರುವಾಗ ಹುಟ್ಟಿದ ಮಗು ಹೆಣ್ಣು ಮಗು ಶಿಲ್ಪಾ. ಶಿಲ್ಪಾಳ ಬದುಕು, ಆ ಹಳ್ಳಿಯಲ್ಲಿ ಹುಟ್ಟಿರುವ ಎಲ್ಲ ಹುಡುಗಿಯರಂತೆ, ನಾಕಾರು ವರ್ಷ ಅಲ್ಲಿರುವ ಸರಕಾರಿ ಕನ್ನಡ ಶಾಲೆಯಲ್ಲಿ ಓದಿದ ಶಾಸ್ತ್ರ ಮಾಡಿ, ಹದಿಮೂರೋ ಹದಿನಾಲ್ಕೋ ಆಗುವಷ್ಟರಲ್ಲಿ ಮದುವೆ ಮಾಡಿಕೊಂಡು, ನಾಕಾರು ಮಕ್ಕಳ್ಳನ್ನು ಹೆತ್ತು, ಇನ್ನೂ ಹೆಚ್ಚಿನ ಬಡತನವನ್ನು ಹೊತ್ತು, ಹೆಣ್ಣಾಗಿ ಹುಟ್ಟಿದ ‘ತಪ್ಪಿʼಗೆ ನರಕದ ಬದುಕನ್ನು ಸವೆಸಬೇಕಾಗುತ್ತಿತ್ತೇನೋ! ಆದರೆ ಹಾಗಾಗಲಿಲ್ಲ. ಶಿಲ್ಪಾ ಇರುವ ಹಳ್ಳಿಗೆ ‘ಶಾಂತಿಭವನʼದ ತಂಡ ಬಂದು ಶಿಲ್ಪಾಳನ್ನು ಶಾಂತಿಭವನಕ್ಕೆ ಹೊತ್ತೊಯ್ಯುತ್ತದೆ!

ಶಿಲ್ಪಾ ಎಂಬ ಈ ಹುಡುಗಿ ಶಾಲೆ ಸೇರಿದಾಗಿನಿಂದ ಹಿಡಿದು ಶಾಂತಿಭವನ ತೊರೆದು ಕಾಲೇಜು ಸೇರುವವರೆಗಿನ ಸಂದರ್ಭಗಳನ್ನು ವೆನೆಸಾ ರಾತ್ ತಮ್ಮ ಸಾಕ್ಷ್ಯಚಿತ್ರದಲ್ಲಿ ಸೆರೆಹಿಡಿಯುತ್ತ ಹೋಗುತ್ತಾರೆ. ಶಿಲ್ಪಾ ನಮ್ಮ ಕಣ್ಣ ಮುಂದೆ ಬೆಳೆಯುತ್ತ ಹೋಗುತ್ತಾಳೆ, ಈ ಚಿತ್ರದಲ್ಲಿ. ಕ್ಯಾಮರಾದ ಮುಂದೆ ಈ ಹುಡುಗಿ ತನ್ನ ಕುಟುಂಬದ ಕತೆಯನ್ನು, ತನ್ನ ಹಳ್ಳಿಯ ಬದುಕನ್ನು, ಸಂತೋಷವನ್ನು, ದುಃಖವನ್ನು, ದುಗುಡಗಳನ್ನು, ಆಸೆಗಳನ್ನು, ಕನಸುಗಳನ್ನು ಹೇಳುತ್ತ ಹೋಗುತ್ತಾಳೆ. ರಜೆಗೆ ತನ್ನ ಹಳ್ಳಿಗೆ ಹೋದಾಗ ವೆನೆಸಾ ಕ್ಯಾಮರಾವನ್ನು ಅಲ್ಲಿಯೂ ತೆಗೆದುಕೊಂಡು ಹೋಗಿ ಶಿಲ್ಪಾಳ ಅಪ್ಪ, ಅಮ್ಮ, ತಂಗಿ, ತಮ್ಮಂದಿರನ್ನು ಮಾತಾಡಿಸುತ್ತಾರೆ, ಅವಳ ಹಳ್ಳಿಯ ಬದುಕನ್ನು ಸೆರೆಹಿಡಿಯುತ್ತಾರೆ.

ಕಾಲೇಜು ಬಿಟ್ಟು ಹೋದ ಶಿಲ್ಪಾ ‘ಆನೆ ಓಡಿಸುವವನ ಮಗಳು (The Elephant Chaser’s daughter)ʼ ಎನ್ನುವ ನೆನಪಿನ ಕತೆಯನ್ನು (Memoir) ಬರೆಯುತ್ತಾರೆ. ವನೆಸಾ ರಾತ್ ತಮ್ಮ ಸಾಕ್ಷ್ಯಚಿತ್ರದಲ್ಲಿ ಹಿಡಿದಿಡಲಾಗದ ಘಟನೆಗಳನ್ನು, ದುಗುಡಗಳನ್ನು, ತಲ್ಲಣಗಳನ್ನು ಈ ಕತೆಯಲ್ಲಿ ತುಂಬ ಪರಿಣಾಮಕಾರಿಯಾಗಿ ಶಿಲ್ಪಾ ಬರೆದಿದ್ದಾರೆ. ಕನ್ನಡದ ದಲಿತ ಹುಡುಗಿಯೊಬ್ಬಳು ಇಂಗ್ಲೀಷಿನಲ್ಲಿ ಬರೆದ ಮೊಟ್ಟಮೊದಲ ಆತ್ಮಕತೆ ಇದೇ ಇರಬಹುದು ಎಂದು ನನ್ನ ಊಹೆ.

ತಂಗಿ ಕಾವ್ಯಾಳ ಅಸಹಜ ಸಾವಿನಿಂದ ಆರಂಭವಾಗುವ ಈ ಪುಸ್ತಕ, ಫ್ಲ್ಯಾಷ್‌ಬ್ಯಾಕಿಗೆ ಹೋಗುತ್ತದೆ. ನೀಲಿ ಬಣ್ಣದ ಜೀಪು ಹಳ್ಳಿಗೆ ಬಂದು, ತನ್ನನ್ನು ತನ್ನ ಅಪ್ಪ-ಅಮ್ಮನಿಂದ ದೂರಾಗಿಸಿ, ‘ಶಾಂತಿಭವನʼದಲ್ಲಿ ಸೇರಿಸಿದ್ದನ್ನು ಪುಟ್ಟ ಹುಡುಗಿಯ ಬೆರಗು ಕಣ್ಣಿಂದ ಬರೆಯುತ್ತಾರೆ. ಬೋರ್ಡಿಂಗ್ ಶಾಲೆಯಲ್ಲಿ ಹೊಂದಿಕೊಳ್ಳಲು ಕಷ್ಟ ಪಟ್ಟಿದ್ದು, ಜೊತೆಗೆ ಅಲ್ಲಿ ಸಿಗುವ ಸೌಕರ್ಯಗಳನ್ನು ಆನಂದಿಸಿದ್ದು – ಒಟ್ಟೊಟ್ಟಿಗೆ ಹೇಗೆ ಪುಟ್ಟ ಮಗುವಿನ ಮೇಲೆ ಪರಿಣಾಮ ಮಾಡುತ್ತಿದ್ದವು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಬರೆಯುತ್ತಾರೆ. ರಜೆಯ ವೇಳೆಯಲ್ಲಿ ಹಳ್ಳಿಗೆ ಹೋಗಿ ಅಲ್ಲಿ ಹೊಂದಿಕೊಳ್ಳಲು ಕಷ್ಟ ಪಡುವುದನ್ನು, ತಂಗಿಯ ಜೊತೆ ಆಟವಾಡುವುದನ್ನು, ತಾಯಿಯು ತಮ್ಮನ್ನೆಲ್ಲ ತೊರೆದು ದೂರದ ಸಿಂಗಾಪೂರಿಗೆ ಕೆಲಸದಾಳಾಗಿ ಹೋಗುವುದನ್ನು, ಯೌವನದ ಹೊಸ್ತಿಲಲ್ಲಿ ಬಂದಾಗ ಆಗುವ ನವಿರು ಭಾವಗಳನ್ನು ಮತ್ತು ಆಗವ ಘಟನೆಗಳನ್ನು ಬಿಚ್ಚುತ್ತ ಹೋಗುತ್ತಾರೆ.

ಆರ್ಥಿಕ ಅನನುಕೂಲತೆಗಳಿಂದಾಗಿ ಬೋರ್ಡಿಂಗ್ ಶಾಲೆ ಮುಚ್ಚಿಹೋಗುವ ಪರಿಸ್ಥಿತಿ ಬಂದಾಗ ಕಂಗಾಲಾಗಿ ತನ್ನ ಜೀವನ ಮತ್ತೆ ಹಳ್ಳಿಯ ಬದುಕಿಗೆ ಸೀಮಿತ ಎನ್ನುವ ಚಿಂತೆ ಏನೇನೆಲ್ಲವನ್ನು ಮಾಡಿಸುತ್ತದೆ ಎನ್ನುವುದನ್ನು ಆ ಸಮಯದ ದುಗುಡದಿಂದಲೇ ಬರೆದಿದ್ದಾರೆ. ಆದರೆ ಮತ್ತೆ ಶಾಲೆ ತನ್ನ ಕಷ್ಟಗಳನ್ನು ನಿವಾರಿಸಿಕೊಂಡು ಮುಂದುವರೆಯುತ್ತದೆ, ಶಿಲ್ಪಾ ಶಾಂತಿಭವನದ ಶಿಕ್ಷಣ ಮುಗಿಸಿ ಉನ್ನತ ಶಿಕ್ಷಣಕ್ಕೆ ಅಣಿಯಾಗುತ್ತಾರೆ.

ಅತ್ತ ಅಪ್ಪ ಕಳ್ಳಭಟ್ಟಿ ವ್ಯವಹಾರವನ್ನು ಬಿಟ್ಟು ಆನೆ ಓಡಿಸುವ ಸರಕಾರಿ ನೌಕರಿ ಹಿಡಿಯುತ್ತಾರೆ, ತಾಯಿ ಸಿಂಗಾಪೂರಿನಿಂದ ವಾಪಸ್ ಬರುತ್ತಾರೆ, ಆದರೆ ಅನಿರೀಕ್ಷಿತವಾಗಿ ತಂಗಿ ಕಾವ್ಯಾಳ ಅಸಹಜ ಸಾವು ಸಂಭವಿಸುತ್ತದೆ. ಅಲ್ಲಿಗೆ ಪುಸ್ತಕ ಮತ್ತೆ ಮೊದಲನೇ ಅಧ್ಯಾಯಕ್ಕೆ ಬರುತ್ತದೆ. ಈ ಪುಸ್ತಕವನ್ನು ತನ್ನ ತಂಗಿ ಕಾವ್ಯಾಗೆ ಮತ್ತು ಡ್ಯಾಡ್ (ಅಬ್ರಹಾಂ) ಅವರಿಗೆ ಅರ್ಪಿಸಿದ್ದಾಳೆ (ಶಿಲ್ಪಾ ತನ್ನ ತಂದೆಗೆ ಅಪ್ಪಾ ಎಂದೂ, ಅಬ್ರಹಾಂ ಅವರನ್ನು ಡ್ಯಾಡ್ ಎಂದೂ ಕರೆಯುತ್ತಾಳೆ).

ಕರ್ನಾಟಕದ ಕಗ್ಗ ಹಳ್ಳಿಯೊಂದರ ಬಡತನ ತುಂಬಿ ತುಳುಕುತ್ತಿರುವ ದಲಿತರ ಮನೆಯಲ್ಲಿ ‘ಹೆಣ್ಣಾʼಗಿ ಹುಟ್ಟಿದ ಶಿಲ್ಪಾ, ಇಂಗ್ಲೀಷ್ ಭಾಷೆಯಲ್ಲಿ ಪುಸ್ತಕವನ್ನು ಬರೆದು, ಭಾರತದಲ್ಲಿ ಉನ್ನತ ಶಿಕ್ಷಣವನ್ನು ಪಡೆದು, ಇಂದು ಅಮೇರಿಕದ ನ್ಯುಯಾರ್ಕ್‌ ನಗರದ ಮನಶಾಸ್ತ್ರದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ! ಒಂದಕ್ಕೊಂದು ಸಂಬಂಧಗಳಿಲ್ಲದ ಅಬ್ರಹಾಂ, ವೆನೆಸಾ ಮತ್ತು, ಶಿಲ್ಪಾ ಅವರು ಕಟ್ಟಿಕೊಟ್ಟ ಒಂದು ಶಾಲೆ, ಒಂದು ಸಾಕ್ಷ್ಯಚಿತ್ರ ಮತ್ತು ಒಂದು ಪುಸ್ತಕ – ಈ ಮೂರೂ ಸೇರಿ, ಬದುಕಿನ ಬಗ್ಗೆ, ಮಾನವತೆಯ ಬಗ್ಗೆ ಒಂದು ಪುಟ್ಟ ಆಶಾವಾದವನ್ನು ಮೂಡಿಸುತ್ತವೆ. ಮನುಷ್ಯತ್ವ ಜಾಗತಿಕವಾಗಿ ಹಬ್ಬಿ ಸೃಷ್ಟಿಸುತ್ತಿರುವ ಈ ಬಾದರಾಯಣ ಸಂಬಂಧಗಳು ಆಧುನಿಕ ಜಗತ್ತಿನ ಹೊಸ ಕೊಂಡಿಗಳಾಗುತ್ತಿವೆ.

ಸಮಾಜದಲ್ಲಿರುವ ಜಾತೀಯತೆ, ಲಿಂಗ ಅಸಮಾನತೆ ಪೀಳಿಗೆಯಿಂದ ಪೀಳಿಗೆಗೆ ಕಡಿಮೆಯಾಗುವ ಭರವಸೆ ಮೂಡಿಸುತ್ತಿವೆ. ಜಗತ್ತು ಸಣ್ಣದಾದಂತೆಲ್ಲ, ಭಾಷೆಯ ಭಾರ ಕಡಿಮೆಯಾದಂತೆಲ್ಲ, ಮಾನವತೆಯ ಸಾಂಕ್ರಾಮಿಕ ಜಗತ್ತಿನ ಮೂಲೆಮೂಲೆಯನ್ನೂ ತಲುಪುತ್ತಿದೆ.