ಸ್ನೇಹಿತರೆ, ನಮಸ್ಕಾರ.

ನಿಮಗೆಲ್ಲರಿಗೂ ಸುಗ್ಗಿಯ ಹಬ್ಬ ‘ಸಂಕ್ರಾಂತಿ’ಯ ಶುಭ ಹಾರೈಕೆಗಳು. ಒಂದು ಕಾಲದಲ್ಲಿ ನಿಮ್ಮೆಲ್ಲರ ಯೋಚನೆಯ, ಓದಿನ. ಬರವಣಿಗೆಯ ಒಂದು ಭಾಗವೇ ಆಗಿಹೋಗಿದ್ದ ‘ಕೆಂಡಸಂಪಿಗೆ’ ಅಂತರ್ಜಾಲ ಪತ್ರಿಕೆಯ ಹಳೆಯ ಬರಹಗಳು ಇದೀಗ ಹೊಸ ವಿನ್ಯಾಸದಲ್ಲಿ ನಿಮ್ಮ ಮುಂದಿವೆ. ಮುಂದಿನ ದಿನಗಳಲ್ಲಿ ಕನ್ನಡದ ಹೊಸ ಬರಹಗಳನ್ನೂ ಓದಿನ ಖುಷಿಗಾಗಿ ನಿಮ್ಮ ಮುಂದಿಡಬೇಕು ಎನ್ನುವುದು ನಮ್ಮ ಆಸೆ. ಒಂದು ಕಾಲದಲ್ಲಿ ಕನ್ನಡದ ಅಂತರ್ಜಾಲ ಆಕಾಶದಲ್ಲಿ ಒಂದು ರೀತಿಯ ಹೊಸ ಉಲ್ಲಾಸವನ್ನೂ, ವಿನ್ಯಾಸಗಳನ್ನೂ, ಬಣ್ಣ, ಪರಿಮಳ, ಆಲೋಚನೆಗಳನ್ನೂ ಮೂಡಿಸಿದ್ದ ಕೆಂಡಸಂಪಿಗೆ ಅತೀವವಾಗಿ ಬದಲಾಗಿರುವ ಈ ಕಾಲಘಟ್ಟದಲ್ಲಿ ಎಷ್ಟು ಚೈತನ್ಯದಾಯಕವಾಗಿರಬಲ್ಲದು ಎಂಬ ಕುತೂಹಲ ಮತ್ತು ಆತಂಕ ನಿಮ್ಮ ಹಾಗೆ ನಮ್ಮ ತಂಡಕ್ಕೂ ಇದೆ.

ಇಲ್ಲಿ ಈಗ ನಿಮ್ಮ ಮುಂದಿರುವುದು ಕೆಂಡಸಂಪಿಗೆಯಲ್ಲಿ ಈ ಹಿಂದೆ ಪ್ರಕಟವಾಗಿದ್ದ ಬರಹಗಳಲ್ಲಿ ಕೆಲವು ಅಷ್ಟೇ. ಒಂದು ಕಾಲದಲ್ಲಿ ಇಲ್ಲಿ ಮೂಡುತ್ತಿದ್ದ ಬರಹಗಳ ವಿಷಯ ವೈವಿಧ್ಯಗಳಿಗೆ ಈ ಬರಹಗಳು ಸಣ್ಣದೊಂದು ಬೆಳಕಿಂಡಿ ಮಾತ್ರ. ಕೆಂಡಸಂಪಿಗೆಯ ಹಳೆಯ ಬರವಣಿಗೆಗಳನ್ನು ಇಲ್ಲಿ ಜೋಡಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ನಮ್ಮ ಪ್ರೀತಿಯ ಬರಹಗಾರರು ತಮ್ಮ ಹಳೆಯ ಬರಹಗಳನ್ನು ಕಳಿಸುತ್ತಿದ್ದಾರೆ. ಇನ್ನು ಕೆಲವರು ಕಳುಹಿಸಲಿದ್ದಾರೆ, ಇನ್ನೂ ಕೆಲವರು ಯಾಕೋ ಸುಮ್ಮಗಿದ್ದಾರೆ. ವೆಬ್ ಆರ್ಕೈವ್.ಆರ್ಗ್ ನಿಂದ ಕೂಡಾ ಹಳೆಯ ಬರಹಗಳನ್ನು ಹೆಕ್ಕುವ ಕೆಲಸವೂ ನಡೆಯುತ್ತಿದೆ.

‘ಹಳೆಯದರ ಕುರಿತ ಮಾತುಗಳನ್ನು ಬಿಡಿ.ಹೊಸದೇನೆಂದು ಹೇಳಿ’ ಎಂದು ನೀವಾದರೂ ಕೇಳಬಹುದು. ಬದಲಾಗಿರುವ ಈ ಕಾಲಘಟ್ಟದಲ್ಲಿ ಕೆಂಡಸಂಪಿಗೆ ಹೊಸತಾಗಿ ಹೇಗಿರಬೇಕು ಎಂಬ ಕುರಿತ ನಿಮ್ಮ ಪ್ರತಿಕ್ರಿಯೆಗಳಿಗೆ ನಾವು ಕಾಯುತ್ತೇವೆ. ಯಾವುದೇ ಉದ್ರೇಕ, ಅತಿರೇಕಗಳಿಗೆ ಒಳಗಾಗದ, ಜೀವನದ ಕುರಿತ ಅದಮ್ಯ ಪ್ರೀತಿ ಮತ್ತು ಕುತೂಹಲವುಳ್ಳ ಬರಹಗಳನ್ನ ಪ್ರಕಟಿಸಬೇಕು ಎನ್ನುವುದು ನಮ್ಮ ಸ್ಪಷ್ಟ ಉದ್ದೇಶ. ಪ್ರೀತಿ, ಸಿಟ್ಟು, ತಮಾಷೆ, ವ್ಯಂಗ್ಯ ಎಲ್ಲವೂ ಜೀವಪರವಾಗಿರಬೇಕು ಎನ್ನುವುದು ನಮ್ಮ ಕಠಿಣ ವ್ರತ. ಜೊತೆಗೆ ಹೊಸ ಕೆಂಡಸಂಪಿಗೆಯಲ್ಲಿ ಒಳ್ಳೆಯ ಚಿತ್ರಗಳು, ಒಳ್ಳೆಯ ಸಂಗೀತ, ಉತ್ತಮ ಚರ್ಚೆಗಳೂ ಇರಬೇಕೆಂಬುದು ನಮ್ಮ ಆಶೆ. ಇಲ್ಲಿ ಪ್ರಕಟವಾಗುವ ಬರಹಗಳಿಗೆ ಇರುವ ಏಕೈಕ ಅಳತೆಗೋಲು ಎಂದರೆ ಅವುಗಳ ಸರಳತೆ ಮತ್ತು ಗುಣಮಟ್ಟ ಮತ್ತು ಸಂಯಮ.

ಈ ಕುರಿತ ಇನ್ನೂ ಹೆಚ್ಚಿನ ಮಾತುಗಳನ್ನು ಇನ್ನು ಮುಂದಿನ ದಿನಗಳಲ್ಲಿ ಆರಾಮವಾಗಿ ಆಡಬಹುದು. ನಿಮ್ಮ ಮುಂದಿರುವ ಕೆಂಡಸಂಪಿಗೆಯ ವಿನ್ಯಾಸ, ವರ್ಣ ಸಂಯೋಜನೆ, ಪುಟಶೈಲಿ, ಸಂಚಾರಯಾನ, ಮತ್ತು ಬರಹಗಳ ವಿಂಗಡನೆ ಕುರಿತು ನಿಮಗೇನನಿಸಿತು ಎಂಬುದನ್ನೂ ತಿಳಿಸಿ. ಇನ್ನೂ ಹೊಸತಾಗಿ, ಸರಳವಾಗಿ ಏನೆಲ್ಲ ಮಾಡಬಹುದು ಎಂಬುದನ್ನೂ ತಿಳಿಸಿ. ಕೆಂಡಸಂಪಿಗೆ ಮತ್ತೆ ಅರಳಿರುವುದನ್ನು ನಿಮ್ಮ ಗೆಳೆಯರಿಗೆ, ಮನೆಯವರಿಗೆ, ನೆಂಟರಿಗೆ, ಇಷ್ಟರಿಗೆ ತಿಳಿಸಿ. ಹೊಸ ತಲೆಮಾರಿನ ಹುಡುಗ ಹುಡುಗಿಯರಿಗೆ ಕೆಂಡಸಂಪಿಗೆ ಅಂದರೆ ಏನು ಎಂಬುದನ್ನೂ ವಿವರಿಸಿ.

ನಿಮ್ಮ ಹೊಸ ಬರಹಳನ್ನು, ಆಲೋಚನೆಗಳನ್ನು, ಪ್ರತಿಕ್ರಿಯೆಗಳನ್ನು ks.kendasampige@gmail.com ಈ ವಿಳಾಸಕ್ಕೆ ಕಳುಹಿಸಿ.

ನಿಮಗೆಲ್ಲರಿಗೂ ಮತ್ತೊಮ್ಮೆ ಸಂಕ್ರಾಂತಿಯ ಒಲವಿನ ಹಾರೈಕೆಗಳು.

ಕೆಂಡಸಂಪಿಗೆ ತಂಡ