ನಾವು ಬರೆದದ್ದನ್ನು ಯಾರು ಓದುತ್ತಾರೆ, ಯಾರು ನೋಡುತ್ತಾರೆ, ಹೇಗೆ ಪ್ರತಿಕ್ರಿಯೆ ತೋರುತ್ತಾರೆ ಇವೆಲ್ಲ ಬರಹಗಾರರಿಗೆ ನಿತ್ಯ ಕುತೂಹಲದ ಸಂಗತಿಗಳು. ವಿಮರ್ಶಕರಿಗೆ, ಸಂಶೋಧಕರಿಗೆ ಸಂಶೋಧನೆಯ ವಸ್ತುಗಳು. ಇಗೋ ಇಲ್ಲೊಬ್ಬ ‘ಮೀನಾಕ್ಷಮ್ಮ’ ಎಂಬ ಹೆಸರಿನ ‘ಅನಾಮಧೇಯ’ ‘ಅದೃಶ್ಯ’ ಓದುಗ, ರಸಿಕ ವ್ಯಕ್ತಿಯ ಜೀವಂತ ಚಿತ್ರಣ ಇದೆ. ನೀವೂ ಇಂಥವರನ್ನು ನೋಡಿರಬಹುದೇ?
ಕನ್ನಡದ ಅನುಪಮ ಲೇಖಕಿ ವೈದೇಹಿ ಬರೆದಿರುವ ಈ ಅಂಕಣ ಓದಿ ನೋಡಿ.

ಹಳೆಯ ನೆನಪೇನಾದರೂ ಹೇಳಲು ಹೊರಡಿ, ಆಯಿತು ಹೋಯಿತು ಅಂತಿಲ್ಲ. ಎಂತಲೇ ‘ಹೇಳಲು ಹೋದರೆ ಮೂರು ರಾತ್ರಿ ಮೂರು ಹಗಲು ಬೇಕು’ ಎಂಬ ಸಾಲು ಹುಟ್ಟಿಕೊಂಡಿರಬೇಕು. ಕೂಲಂಕುಷ ಹೇಳಿಕೊಳ್ಳುವುದೆಂದರೇನು ಎಲ್ಲ ಕಟ್ಟಿತಂದು ಒಗೆದಷ್ಟು ಸುಲಭವೆ? ಮುಗಿವಾದರೂ ಉಂಟೆ ಅದಕ್ಕೆ? ಗೊತ್ತೆ? ನೆನಪುಗಳು ಕದ ತಟ್ಟುವುದನ್ನೇ ಕಾಯುತ್ತವಂತೆ. ತಟ್ಟಿದ್ದೇ ಸೈ, ಒಮ್ಮೊಮ್ಮೆ ಗಾಢ ನಿದ್ದೆಯಲಿದ್ದವೂ ಗಢಕ್ಕನೆ ಎದ್ದು ಬಾಗಿಲು ತೆರೆದು ನುಗ್ಗಿ ಬರುತ್ತವಂತೆ. ಎಂತಲೇ ನೆನಪುಗಳ ಧಾರೆ ಓ ಇದೊಂದು ಓ ಅದೊಂದು ಅಂತ ಮುಂದರಿಯುತ್ತಲೇ ಇರುತ್ತದೆ. ಹಾಗೆ, ಅನೇಕವನ್ನು ಮುಂದೊಂದು ದಿನ ಕರೆಯುವೆ, ಆಗ ಬನ್ನಿ ಎಂದು ಹಿಂದೆ ಕಳಿಸಿದರೂ ಅಂದು ನಾ ಕೇಳಿದ ಕಥಾವಾಚನದ ಕುರಿತು ಮಾತ್ರ ಈಗಲೇ ಹೇಳದೆ ತಣಿಯೆನಲ್ಲ!.

(ಲೇಖಕಿ ವೈದೇಹಿ ಫೋಟೋ:ರಶೀದ್)

ಸಾಲಾನುಸಾಲು ಹೆಣ್ಣುಮಕ್ಕಳಿರುವ ನಮ್ಮ ಮನೆಗೆ ಬಟ್ಟೆ ಹೊಲಿದುಕೊಡುವವರು ಮೀನಾಕ್ಷಮ್ಮ ಅಂತ. ಅವರ ಮನೆಯಿದ್ದುದು ನರಿಬೇಣದ ತಲೇಯಲ್ಲಿ. ಹೆದ್ದಾರಿಯಿಂದ ಪೂರ್ವಕ್ಕೆ ಇಳಿಯುವ ದಾರಿಯಲ್ಲಿ. ಮಾವು ಗೇರು ಮರಗಳು ತುಂಬಿದ ಇಡೀ ದೊಡ್ಡ ಹಿತ್ತಲಲ್ಲಿ ಒಂದು ಪುಟ್ಟ ಮಣ್ಣ, ತಣ್ಣನೆಯ, ನೆಲದ ಮನೆ ಅವರದು. ಅದರಲ್ಲೊಂದು ಚಾವಡಿ. ಚಾವಡಿಯಲ್ಲಿ ಅವರದೊಂದು ಸಿಂಗರ್ ಮೆಶಿನು, ಸದಾ ಹೊಲಿಗೆ ನಿರತೆ ಮೀನಾಕ್ಷಮ್ಮ. ಮಗ್ಗದ ‘ಮನೆಸೀರೆ’ಯನ್ನು ಹೊರನೆರಿಗೆ ಹಾಕಿ ಉಟ್ಟು ಎತ್ತಿ ಸಿಕ್ಕಿಸಿಕೊಂಡು ಬಿಳಿ ಸಡಿಲ ರವಕೆ (ತನಗೆ ಬಟ್ಟೆ ಹೊಲಿದುಕೊಳ್ಳುವಾಗ ಮಾತ್ರ ಅವರು ಮೈ, ನೆಕ್‌ ಗಿಕ್ಕು ಫಿಟಿಂಗುಗಳ ಗೊಡವೆಗೇ ಹೋದವರಲ್ಲ ಅಂತ ಅವರನ್ನು ನೋಡಿದೊಡನೆ ತಿಳಿಯುತ್ತಿತ್ತು)ಯಲ್ಲಿ ಮಿಶನುಮುಂದಿನ ಸ್ಟೂಲಿನ ಮೇಲೆ ಕಾಲಮೇಲೆ ಕಾಲು ಹಾಕಿ ಕುಳಿತು ಬಲಗಾಲ ಪಾದದಿಂದ ಮಾತ್ರ ಮೆಶಿನು ತುಳಿಯುತ್ತಾ ಬಂದವರೊಡನೆ ಮಾತಾಡುತ್ತಾ ಇರುವ ಮೀನಾಕ್ಷಮ್ಮನನ್ನು ಕಂಡರೆ ಎಲ್ಲರಿಗೂ ಅಷ್ಟು ಅರ್ತಿ. ಮೋಟರು ಗದ್ದಲವಿಲ್ಲದ ಅಂದಿನ ವಾತಾವರಣದಲ್ಲಿ ಅವರ ಮನೆಗೆ ತಿರುಗುವ ಹಾದಿಗೆ ಇಳಿಯುತ್ತಲೇ ಆ ಸಿಂಗರ್‌ಮೆಶಿನಿನ ಕಟಕಟಕಟ ಸಾಂಗು ಕಿವಿಗೆ ಬಿದ್ದು ಪುಳಕಗೊಳಿಸುತ್ತಿತ್ತು. ಆ ಶಬ್ದದ ಹಿಂದಿರುವವರು ಮೀನಾಕ್ಷಮ್ಮ. ಅವರು ಹೊಲಿಯುತ್ತಿರುವುದು ನಮ್ಮ ಅಂಗಿಯನ್ನೇ ಇರಬಹುದೆ? ಹೆಜ್ಜೆ ಸ್ಪೀಡಾಗುತ್ತಿತ್ತು. ಆಗೆಲ್ಲ ಹೆಂಗಸರು ಹೆಂಗಸರ ಹತ್ತಿರವೇ ಬಟ್ಟೆಹೊಲಿಸುತ್ತಿದ್ದುದರಿಂದಲೂ ಊರಲ್ಲಿ ಹೊಲಿಗೆ ಮಾಡುತ್ತಿದ್ದ ಹೆಂಗಸರಲ್ಲೆಲ್ಲ ಅವರೇ ಮುಖ್ಯರಾದುದರಿಂದಲೂ ಎಲ್ಲ ಮನೆಗಳಿಗೂ ಅವರು ಬೇಕಾದವರಾಗಿದ್ದರು. ಮದುವೆ ಮುಂಜಿ ಬಂತೆಂದರೆ ಅವರ ಕಷ್ಟ ಅವರಿಗೇ ತಿಳಿಯದು. ಬಟ್ಟೆಗಳ ಕಟ್ಟುಕಟ್ಟು ರಾಶಿಯೇ ಬೀಳುತ್ತಿತ್ತು. ರಾತ್ರಿ ಹಗಲು ದುಡಿದು ಅಂತೂ ಮದುವೆಯ ಹಿಂದಿನ ದಿನ ರಾತ್ರಿ ಧಾರೆಯ ರವಕೆ ಮುಗಿಸಿಕೊಟ್ಟ ಪ್ರಸಂಗಗಳು ಎಷ್ಟೋ. ನಿದ್ದೆಕೆಟ್ಟುಕೆಟ್ಟು ಅವರ ಕಣ್ಣುಗಳು ಕೆಂಪುಕಂದು ಮಿಶ್ರವಾಗಿ ನಿದ್ದೆಯೆಂಬುದನ್ನೇ ತಿಳಿಯದಂತೆ ಒಲ್ಲದಂತೆ ಇದ್ದುವು.

(ರೇಖಾಚಿತ್ರಗಳು: ಎಂ.ಎಸ್.ಮೂರ್ತಿ)

ಅಂಥಾ ಮೀನಾಕ್ಷಮ್ಮ, ತನ್ನ ಬಿಡುವಿಲ್ಲದ ಹೊಲಿಗೆ ನಡುವೆಯೂ, ಪರಿಚಯದ ಮನೆಯಲ್ಲಿ ಹೊಸಮಗು ಹುಟ್ಟಿತೆಂದರೆ ಎರಡೋ ಮೂರೋ ಜುಬಲಾ ಹೊಲಿದು ರಾತ್ರಿಯಾದರೂ ಸರಿಯೆ, ಗುಡುಗುಡುಗುಡು ಓಡುನಡಿಗೆಯಲ್ಲಿ ಬಂದು ಬಾಣಂತಿ ಮಗುವನ್ನು ಕಂಡು ಸುಖದುಃಖ ಕೇಳಿ ಮಾತಾಡಿ ಜುಬಲಾಗಳ ಕಟ್ಟನ್ನು ಮೆಲ್ಲ ಸಂಕೋಚದಿಂದ ಕೊಟ್ಟು ಇನ್ನೂ ಬೇಗ ಬರಬೇಕೆಂತ ಮಾಡಿದೆನೆಂದೂ ಆಗಲೇ ಇಲ್ಲವೆಂದೂ, ಇನ್ನೂ ಕೆಲ ಅಂಗಿಗಳನ್ನು ಹೊಲಿಯಬೇಕೆಂದಿದ್ದೆನೆಂದೂ ಆಗಲೇ ಇಲ್ಲವೆಂದೂ, ತನ್ನ ಅಮ್ಮನಿಗೆ ಹುಶಾರಿಲ್ಲದುದೋ ಮುಹೂರ್ತ ನೋಡಿದ ಹಾಗೆ ಅರ್ಜಂಟ್ ವಸ್ತ್ರ ಕೊಡಬೇಕಾದ ಸಮಯದಲ್ಲೇ, ಮೈದಿನಿ ಮುಟ್ಟಾಗಿ ಅಡುಗೆ ಹಟ್ಟಿಕೆಲಸ ಎಲ್ಲ ಈ ಮೂರು ದಿನ ತನಗೇ ಬಿದ್ದುದೋ ಇನ್ನೇನೋ ಎರಡು ಸುಖದುಃಖದ ಮಾತುಗಳನ್ನೂ ಹಂಚಿ ತೆರಳುವವರು. ಮೀನಾಕ್ಷಮ್ಮ ಎಂದರೆ ಬರೀ ಮಿಶನಿನ ಮೇಲೇ ಕಂಡು ಅಭ್ಯಾಸವಾದ ನಮಗೆ ಅವರು ದನ ಎಮ್ಮೆ ಕರೆದದ್ದು ಅಡುಗೆ ಮಾಡಿದ್ದು ಎಲ್ಲ ಆಶ್ಚರ್ಯ ತರುತ್ತಿತ್ತು. ಅವರಿಗೂ ತಾನು ಮತ್ತು ಮಿಶನು ಅಭ್ಯಾಸವಾಗೀ ಆಗೀ ಒಳಮನೆಯ ಕೆಲಸವೆಂದರೇನೆ ಅಷ್ಟಷ್ಟೆ. ದಾಕ್ಷಿಣ್ಯವೆಂದರೆ ದಾಕ್ಷಿಣ್ಯದವರು. ಬಂದಾಗ ಒತ್ತಾಯ ಮಾಡಿ ಏನಾದರೂ ಕುಡಿಯಲು ತಿನ್ನಲು ಕೊಟ್ಟರೆ ಸ್ವೀಕರಿಸಲೂ ಸಂಕೋಚ. ಅವರು ಸರಿಯಾಗಿ ಅಂಡೂರಿ ಕುಳಿತು ಸಮಾಧಾನವಾಗಿ ಮಾತಾಡಿದ್ದಾಗಲೀ ತಿಂದದ್ದಾಗಲೀ ಕಂಡ ನೆನಪೇ ನನಗಿಲ್ಲ. ಸರಿಯಾಗಿ ಮೈಮಂಡೆ ಮಾಡಿಕೊಳ್ಳಲೂ ಸಮಯವಿಲ್ಲದಷ್ಟು, ಮಾನಸಿಕವಾಗಿಯೂ ವ್ಯಸ್ತವಿದ್ದರಾಕೆ. ಸದಾ ಇದನ್ನು ಮುಗಿಸಿ ಮುಂದಿನ ಕಟಿಂಗ್‌ಗೆ ಎಷ್ಟೊತ್ತಿಗೆ ದಾಟಿಕೊಂಡೇನು ಎಂಬ ಧಾವಂತ ಧಾವಂತ.

ಏನು ಕಾರಣವೋ, ಮದುವೆಯಾಗಿಯೂ ಒಬ್ಬಂಟಿಯಿದ್ದರು. ಬರೆಯುತ್ತಿದ್ದಂತೆ, ಉಸಿರನ್ನು ನಡುನಡುವೆ ಸಶಬ್ದ ಒಳಗೆಳೆದುಕೊಂಡು ಸೇಂಕಿ ಮಾತಾಡುವ ಅವರ ಪರಿ ಅಚ್ಚ ನೆನಪಿನಿಂದ ಹೇಗೆ ಎದ್ದು ಬರುತ್ತಿದೆ! ಹೋಗಲಿ, ಹೊಲಿಗೆ ದುಡ್ಡು ಇಷ್ಟಾಯಿತು ಅಂತ ಹೇಳುವುದರಲ್ಲಾದರೂ ಸಂಕೋಚ ಬಿಡುವರೆ? ಇಲ್ಲ. ಹೇಳಿದ ಮೇಲೆ ಈಗ ಇಟ್ಟುಬಿಡಿ ಅಂತ ಅಂದವರೂ ಅಲ್ಲ. ಸ್ವಲ್ಪ ಕೊಟ್ಟು ಉಳಿದದ್ದು ಎರಡುದಿನ ಬಿಟ್ಟು ಕಳಿಸಿಕೊಡುತ್ತೇನೆ ಎಂದರೆ ‘ಆಯಿತಪ್ಪ, ಅಡ್ಡಿಲ್ಲ ಅಡ್ಡಿಲ್ಲ’. ಕೊಟ್ಟ ದುಡ್ಡನ್ನು ಎದುರೇ ಎಣಿಸಿದವರೂ ಅಲ್ಲ. ನನಗೆ ತಿಳಿದಂತೆ ದುಡ್ಡಿನ ಮಟ್ಟಿಗೆ ಅವರಿಗೆ ಮೋಸಮಾಡಿದ ಮನೆಗಳೂ ಇಲ್ಲ. ಬಿಡಿ. ಅದು ಸಂದ ಕಾಲದ ಇಂದು ಕಾಣದ ಮನುಷ್ಯ ಸಂಬಂಧ ಧರ್ಮ. ಇನ್ನಿಲ್ಲದ ಮುನ್ನಿಲ್ಲದ ಎನ್ನುತ್ತಾರಲ್ಲ, ಅಂತಹದು. ಮೀನಾಕ್ಷಮ್ಮ ನಮ್ಮ ಮನೆಯ ಎಲ್ಲರ ಮನದಲ್ಲಂತೂ ಈಗಲೂ ಅತ್ಯಂತ ಪ್ರಿಯ ವ್ಯಕ್ತಿಯಾಗಿ, ನೆನೆದರೆ ಅವರು ಬಂದಾಗ ಉಂಟಾಗುವ ಸಂಭ್ರಮ ಮರುಕಳಿಸಿದಂತಾಗಿ ಉಳಿದಿದ್ದಾರೆ. ಅವರ ಮನದಲ್ಲಿಯೂ ನಾವೆಲ್ಲರೂ ಖಂಡಿತವಾಗಿಯೂ ಇದ್ದೇಇದ್ದೆವು. ನಮ್ಮ ನಮ್ಮ ಪ್ರಪಂಚದಲ್ಲಿ ನಾವೂ ಅವರೂ ತೇಲಿಹೋಗುತ್ತ ವರ್ಷಗಟ್ಟಲೆ ಭೇಟಿಯೇ ಆಗದೆಯೂ.

ಇದನೆಲ್ಲ ಹೇಳಹೊರಟರೆ ಇಷ್ಟಕ್ಕೆ ಮುಗಿಯುವುದಿಲ್ಲ. ಇರಲಿ. ಈ ಮೀನಾಕ್ಷಮ್ಮನಿಗೆ ಕತೆ ಕಾದಂಬರಿ ಅಂದರೆ ಒಂದು ಪ್ರೀತಿ ಅಷ್ಟಿಷ್ಟಲ್ಲ. ಇಷ್ಟೆಲ್ಲ ಸುತ್ತುಬಳಸಿ ಬಂದದ್ದು ಇದನ್ನು ಹೇಳಲಿಕ್ಕೆ, ನಾನಂದು ಅವರ ಮನೆಯಲ್ಲಿ ಕೇಳಿದ ಕಥಾ ವಾಚನದ ಕುರಿತು ಹೇಳಲಿಕ್ಕೆ. ಮಗಳಿಗೆ ಕಥೆ ಕಾದಂಬರಿಯೆಂದರೆ ಪ್ರೀತಿ, ಆಯಿತಲ್ಲ; ಮಗಳಿಗೆ ಸರಿಯಾಗಿ, ತಾಯಿ. ವಿಧವೆ ಆಕೆ. ಬಿಳಿಸೀರೆಯುಟ್ಟು ಕೆಳಗೆ ನೆಲದಲ್ಲಿ ಮಣೆಯ ಮೇಲೆ ಕುಳಿತು ರಾಮಾಯಣ ಭಾರತ ಮಾತ್ರವಲ್ಲ, ಅಂದಿನ ಜನಪ್ರಿಯ ಕಾದಂಬರಿಗಳನ್ನೂ ಮೆಶಿನಿನ ಹಲಿಗೆಯೋಟದ ಕಟಕಟ ಸದ್ದಿಗೆ ಸಮಾನಾಂತರವಾಗಿ, ತನ್ನದೇ ಓದು ರಾಗದಲ್ಲಿ ಪಾತ್ರಕ್ಕೆ ತಕ್ಕಂತೆ ದನಿಯ ಏರಿಳಿತವನ್ನು ಬದಲಾಯಿಸಿ ಏಕ ಪಾತ್ರಾಭಿನಯದಂತೆ ಓದಲು ಸುರುಮಾಡಿದರೆಂದರೆ ಕೇಳುವವರು ಮೀನಾಕ್ಷಮ್ಮ ಮಾತ್ರವೆ? ಹೊಲಿಗೆ ಕಲಿಯಲು ಬಂದವರು, ಬಟ್ಟೆ ಕೊಡಲು ಬಂದವರು, ಒಯ್ಯಲು ಬಂದವರು ಎಲ್ಲರೂ. ಕತೆ ಕೇಳುತ್ತ ಅವರವರ ಸಮಯ ಆಗುತ್ತಲೂ ಎದ್ದು ಹೋಗುವರು, ಬರುವವರು. ಇದರ ನಡುವೆ ಹೊಲಿಗೆ ಕಲಿಯುವವರಿಗೆ ಎಡೆಯಲ್ಲಿ ಕಲಿಸುವಿಕೆ, ಕುತ್ತಿಗೆಯ ಅಳತೆಗೆ ಅರ್ಧ ಇಂಚು ಹೆಚ್ಚಿಗೆ ಇಟ್ಟು ಉರುಟಾಗಿ ಶೇಪ್ ತೆಗೆದು… ಹೊಲಿಗೆ ವಿವರಣೆ, ಪುಟ್ಟ ಪುಟ್ಟ ಇಂಟರವಲ್‌ಗಳು, ಮತ್ತೆ ಮಿಶನಿನ ಓಟ, ವಾಚನ ಸಾಗುತ್ತಿದ್ದಂತೆ ನಡುವೆ ಇದ್ದಕ್ಕಿದ್ದದಂತೆ ಕತೆಯಲ್ಲಿ ಹೌಹಾರುವ ಪ್ರಸಂಗ ಬರುವುದು. ಆಘಾತಕರ ಘಟನೆಯಾಗುವುದು. ಮೀನಾಕ್ಷಮ್ಮನ ಮಿಶನು ಥಟ್ಟನೆ ನಿಲ್ಲುವುದು. ಗಲ್ಲಕ್ಕೆ ಕೈಯೂರಿ ‘ಹ್ಹ’ ಅಂತ ಅವರು ಉದ್ಗರಿಸುವರು. ಹಾಗೆಲ್ಲ ಮಾಡಬಹುದೆ? ಮುಂತಾಗಿ ಅಲ್ಲಿದ್ದವರೂ ಎಲ್ಲ ಸೇರಿ ಸಂದರ್ಭಾನುಸಾರದ ಸರಿತಪ್ಪಿನ ಚರ್ಚೆಯೂ ಆಗುವುದು. ಮತ್ತೆ ಅವರ ಬಲಪಾದ ಪೆಡಲು ತುಳಿಯುವುದು. ಮಿಶನಿನ ಜೊತೆ ವಾಚನ ರಾಗವೂ ಸೇರಿ ಅದೊಂದು ವಾಚನ ಕೂಟವೇ ಆಗಿ ಬಿಡುವುದು. ನಾನು ಪ್ರಥಮವಾಗಿ ಕಥಾವಾಚನವನ್ನು ಕೇಳಿದ್ದು ಹೀಗೆ, ಇಲ್ಲಿಯೇ. ಮೀನಾಕ್ಷಮ್ಮ, ಅವರ ತಾಯಿ, ಅವರ ಕಥಾವಾಚನ, ಆ ಚಾವಡಿ, ಅಲ್ಲಿಗೆ ಬಂದು ಹೋಗುವವರು, ಅಲ್ಲಿನ ಹಸಬಟ್ಟೆಯ ಪರಿಮಳ, ಸವೆದ ಸಿಂಗರು ಮಿಶನು, ಅದರ ತಲೆಯ ಮೇಲೆ ಗರ್ರ ತಿರುಗುವ ಬಿಳಿದಾರದುಂಡೆ, ದಾರಖಾಲಿಯಾದಾಗ ತಿರುಗಿ ರುಂಯ್ಯ ತುಂಬಿಸುವ ಬಾಬಿನ್, ಬದಿಯಲ್ಲಿರುವ ಪುಟ್ಟ ಡ್ರಾವರು, ಕರಕರಕತ್ತರಿಸುವ ಹಳೆಯ ದೊಡ್ಡ ಕತ್ತರಿ, ಎಲ್ಲ ನನ್ನ ಸ್ಮೃತಿಯಲ್ಲಿ ಅಳಿಯದಂತೆ ಉಳಿದು ಜೀವಕ್ಕೆ ತ್ರಾಣ ನೀಡಿವೆ.

ಆ ಸಿಂಗರ್ ಮಿಶನು ತನ್ನ ಹಾಡನ್ನು ಶಾಶ್ವತವಾಗಿ ನಿಲ್ಲಿಸಿದ ಸುದ್ದಿ ಬಂದಾಗ ಆಪ್ತವಿಯೋಗದ ವೇದನೆಯೊಂದು ಕರುಳ ಸುತ್ತ ಝುಮ್ಮನೆ ತಿರುಪಿದಂತಾಗಿ ಮಾತು, ಮನಸ್ಸು, ಇಡಿಯ ಚೇತನವೇ ಸ್ತಬ್ದವಾದ ಆ ಗಳಿಗೆಯನ್ನು ಯಾಕೆ ಶಬ್ದವಾಗಿಸಲಿ?
ಮೀನಾಕ್ಷಮ್ಮನ ಮನೆ, ಚಾವಡಿ, ಆ ತೋಟ, ಅಲ್ಲಿನ ಮರಗಳ ಚಿತ್ರ ಥಟ್ಟನೆ ಒಮ್ಮೊಮ್ಮೆ ಕಣ್ಣಮುಂದೆ ಬರುವುದಿದೆ. ಹೊಲಿದ ಬಟ್ಟೆ ತರಲು ಹೋದ ನನ್ನ ಅಣ್ಣಂದಿರು ಹತ್ತಿ ಹಾರಿದ ಮರಗಳು ಅವೆಲ್ಲ. (ಮೀನಾಕ್ಷಮ್ಮ ಅಣ್ಣಂದಿರ ಚಡ್ಡಿಗಳನ್ನೂ ಹೊಲಿಯುತ್ತಿದ್ದರು. ಗಂಡು ಟೈಲರ್‌ಗಳ ಪ್ರಾಬಲ್ಯ ಅಷ್ಟೇನೂ ಇರದ ಕಾಲವದು. ಅಥವಾ ಹೊಲಿದ ಹಾಗೆ ತೊಡುವ ಪಾಪದ ಗಂಡುಮಕ್ಕಳ ಕಾಲವೋ. ಪಾಪ…) ಅಲ್ಲಿಗೆಲ್ಲ ಒಮ್ಮೆ ಹೋಗಿ ಸುತ್ತಿ ಬರುವ ಅನಿಸುತ್ತಿರುತ್ತದೆ. ಆದರೆ ನೋಡಿ ಬಂದ ಮೇಲೆ ಈಗ ಮನದಲ್ಲಿರುವ ಆ ಹಿತ್ತಲಿನ ಆ ಮನೆಯ ಹಳೆಯ ಚಿತ್ರ ಬದಲಾದರೆ? ಅಥವಾ ಮಾಯವಾದರೆ?

ರಾವೋಯಿ ಚಂದಮಾಮ.. (ಅಡ್ಡಗತೆ)

ಮೀನಾಕ್ಷಮ್ಮನಿಗೆ ಕತೆ ಕಾದಂಬರಿ ಮಾತ್ರವಲ್ಲ, ಸಿನೆಮಾವೆಂದರೂ ಪಂಚಪ್ರಾಣವಿತ್ತು. ಹೊಸ ಸಿನೆಮಾ ಬಂತೆಂದರೆ ಹೇಗಾದರೂ ಬಿಡುವು ಮಾಡಿಕೊಂಡು ಸೆಕೆಂಡ್ ಶೋಗೆ ಎದ್ದೇ ಬಿಡುವರು ಅವರು. ನೋಡುವುದೆಂದರೆ ಬರಿದೆ ನೋಡುವುದೆ? ಮರುದಿನ ಹೊಲಿಗೆ ಚಾವಡಿಯಲ್ಲಿ ಅದರ ಕತೆ, ವಿಮರ್ಶೆ ಎಲ್ಲ ಬಂದವರ ಜೊತೆ ಆಗಬೇಕು. ಅದು ಖಂಡಿತವಾಗಿಯೂ ನಡೆದದ್ದೇ ಅಂತ ನಾವು ಮಕ್ಕಳು ಅಂದುಕೊಳ್ಳಬೇಕು, ಹಾಗೆ. ಕುಂದಾಪುರ ಆಗ ಮದರಾಸು ಪ್ರಾಂತ್ಯಕ್ಕೆ ಸೇರಿತ್ತಾಗಿ ಟಾಕೀಸಿನಲ್ಲಿ ಬರೀ ತಮಿಳು ಸಿನೆಮಾ ಬರುತಿದ್ದೇ ಹೆಚ್ಚು. ಹಾಗೆ ಬಂದ ತಮಿಳು ಸಿನೆಮಾಗಳಲ್ಲೊಂದು ಮಿಸ್ಸಮ್ಮ (ಮಿಸ್ ಮೇರಿ). ಆರ್ ಗಣೇಶನ್ ಮತ್ತು ಸಾವಿತ್ರಿ ತಾರಾಗಣ. ಅದರ ತಮಿಳು ಮಾತ್ರವಲ್ಲ ತೆಲುಗು ಅವತರಣಿಕೆಯನ್ನೂ ಅವರು ಮಾತ್ರವಲ್ಲ, ನಾವೆಲ್ಲರೂ ಹುಚ್ಚುಕಟ್ಟಿ ನೋಡಿ ಬಂದಿದ್ದೆವು. ಸುಮಾರು ದಿನ ಆ ಹೊಲಿಗೆಯ ಚಾವಡಿಯಲ್ಲಿ ಮಿಸ್ಸಮ್ಮನದೇ ಕತೆ. ಆರ್ ಗಣೇಶನ್ ಕಡೆಗೆ ಹಾಗೆ ಹೇಳಿದ, ಸಾವಿತ್ರಿ ಹೀಗೆ ಹೇಳಿದಳು ಅಂತ ಅವರೆಲ್ಲ ಮನೆ ಮಂದಿಯ ಹಾಗೆ. ಅವರ ಪಾತ್ರಗಳ ಹೆಸರಿನ ಹಂಗೇ ಇಲ್ಲದೆ. ‘ರಾವೋಯಿ ಚಂದಮಾಮಾ, ರಾವಂತ ಗಾನ ವಿನುಮಾ. . .’ ಅಂತೇನೋ ಒಂದು ಪದ್ಯ, ಬಾಯಿ ತೆರೆದರೆ ಅದೇ ನಮಗೆ ಆಗ. ಮುನಿಸಿಕೊಂಡ ಅವರಿಬ್ಬರೂ ರಾತ್ರಿಯ ಚಂದಮಾಮನ ಬಳಿ ಹಾಡುತ್ತ ತಂತಮ್ಮ ದೂರು ಹೇಳಿಕೊಂಡದ್ದೂ ಆ ಉರುಟಾನುರುಟು ಚಂದ್ರಮ ಅದನ್ನು ಆಲಿಸುತ್ತ ನಿಧಾನವಾಗಿ ಚಲಿಸುತಿದ್ದದ್ದೂ ಎಲ್ಲ ನಿಜವಾಗಿಯೂ ಈ ಪ್ರಪಂಚದಲ್ಲಿ ಜೀವಂತ ನಡೆದವು ಎಂದೇ! ‘ಮಾವನ ಮಗಳು’ ಚಿತ್ರ ಬಂದಾಗಂತೂ… ನಮ್ಮನೆಯ ಎದುರಿನ ಟಾಕೀಸಿಗೇ ಬಂದಿದೆ. ನನ್ನ ಬಾಣಂತಿ ಅಕ್ಕ, ಹಸುಮಗುವನ್ನು ನೋಡಿ ಜುಬಲಾ ಕೊಟ್ಟು ‘ಎರಡು ಮಾತಾಡಿ ಹೋಗುವ ಅಂತ’ ಬಂದ ಮೀನಾಕ್ಷಮ್ಮ ಹೇಳಿದ ಕತೆ ಕೇಳಿ ತಾನು ಆ ಸಿನೆಮಾ ನೋಡಲೇಬೇಕೆಂದು ಹೊರಟೇ ಬಿಟ್ಟಳು. ಇನ್ನೂ ಒಂದು ತಿಂಗಳಷ್ಟೇ, ದೇವಸ್ಥಾನಕ್ಕೆ ಕೂಡ ಇನ್ನೂ ಹೋಗಿಲ್ಲ. ದೇವಸ್ಥಾನಕ್ಕೆ ಮೊದಲೊಮ್ಮೆ ಹೋದ ಮೇಲೆ ಎಲ್ಲಿಗೆ ಹೋಗಲೂ ಬಾಣಂತಿಗೆ ಪರವಾನಗಿ ಉಂಟು. ಆದರೆ ಆಕೆ ಕೇಳಬೇಕಲ್ಲ. ಪಾರ್ತಕ್ಕ, ಅಮ್ಮ ಯಾರು ಹೇಳಿದರೂ ಊಹೂಂ. ಕೇಳದೆ ಮ್ಯಾಟಿನಿ ಶೋಗೆ ನಡೆದದ್ದೇ. ಹೇಗೂ ಮನೆಯೆದುರೇ ಟಾಕೀಸು, ಇಂಟರ್‍ವಲ್‌ನಲ್ಲಿ ಬಂದು ಮಗುವಿಗೆ ಹಾಲೂಡಿ ಹೋಗುತ್ತೇನೆ ಅಂತ. ಸಾಲು ಸಾಲು ಚಿಕ್ಕಮ್ಮಂದಿರು ನಾವು, ಮಗು ಅಳದಂತೆ ನಾನು ತಾನು ಅಂತ ಜಗಳಾಡಿ ತೊಟ್ಟಿಲು ತೂಗುವ ಭರದಲ್ಲಿ ಎಷ್ಟು ಹಾಡುಗಳನ್ನು ಖಾಲಿಮಾಡಿದೆವೋ.

(ರೇಖಾಚಿತ್ರಗಳು: ಎಂ.ಎಸ್.ಮೂರ್ತಿ)

ಆ ಸಿನೆಮಾದಲ್ಲಿ ಪಾಪ, ಆರ್ ಗಣೇಶನ್‌ಗೆ ತಲೆಗೆ ದೊಣ್ಣೆಯೇಟು ಹೇಗೆ ಬಿದ್ದಿತ್ತು. ಬಿದ್ದದ್ದೇ ಆತ ಪೆದ್ದನಾದ. ಆಗ ಒಬ್ಬ ಸಾಧು ಒಂದು ತಾಯತವನ್ನು ಅವನಿಗೆ ಕೊಟ್ಟು ಅದು ಇರುವವರೆಗೂ ಅವನನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲವೆನ್ನುವ. ನಮಗೂ ಹಾಗೆ ಒಂದು ತಾಯತ ಸಿಕ್ಕಿದ್ದರೆ… ತಾಯತದ ಬಲದಿಂದ ಆರ್. ಗಣೇಶನ್ ಗೆಲ್ಲುವುದು, ಉದುರಿಹೋದಾಗ ಸೋಲುವುದು, ಆಗ ಅತನನ್ನು ಪ್ರೀತಿಸುವ ಸಾವಿತ್ರಿ (ನಮಗವಳು ಪಾತ್ರವಲ್ಲ. ಸಾವಿತ್ರಿಯೇ.) ಅದನ್ನು ಹುಡುಕಿ ಕೊಟ್ಟು, ಶತ್ರುವಿಗೆ ಆತ ಒದೆ ಕೊಟ್ಟು ಹಾಗೂ ತಾನೂ ಇನ್ನಷ್ಟು ಮತ್ತಷ್ಟು ಒದೆ ಕೊಡು ಎಂಬಂತೆ ಖಾಲಿ ಕೈ ಬೀಸಿ ಗಾಳಿಗೆ ಗುದ್ದುವುದು… ಅಬ್ಬಾ, ಕೊನೆಗೆ ಮೊದಲು ಪೆಟ್ಟು ಬಿದ್ದಲ್ಲೇ ಮತ್ತೊಂದು ಪೆಟ್ಟು ಬಿದ್ದು ಅವನು ಮುಂಚಿನಂತಾಗಿ ಅವಳನ್ನು ಮದುವೆಯಾಗುವವರೆಗೂ ಉಸಿರು ಆಡಲು ನಮಗೆ ಪುರುಸೋತಿದ್ದರೆ! ಇಂಥ ಕಣ್ಣುಕಟ್ಟು ಕಥೆಗಳೆಲ್ಲ ಉದಯವಾಗುತ್ತಿದ್ದ ಕಾಲವಾಗಿತ್ತು ಅದು. ಜಾನಪದದಿಂದ ಪ್ರಭಾವಿತವಾದ ಸಿನಿ ನಾಟಕಗಳು. ಅಂದು ಸುರುವಾಗಿದ್ದು ಇನ್ನೂ ನಿಲ್ಲದೆ ನಾನಾ ರೂಪಗಳಲ್ಲಿ ಬರುತ್ತಲೇ ಇವೆಯಲ್ಲ, ಏನೆನ್ನಲಿ!