ಸರ್ಮದ್ ಶಹೀದ್

ರಾಜ ಬೆತ್ತಲಾಗಿದಾನೆ!
ಮುಗ್ಧ ಮಗುವೊಂದು ಕೂಗಿ ಹೇಳಿತು
ಅಧಿಕಾರವೂ ಬೆತ್ತಲಾಗಿದೆ
ಒರೆಯಿಂದ ಹೊರಗೆಳೆದ ಖಡ್ಗವೂ
ಹಾಗೆ ನೋಡಿದರೆ ಸತ್ಯವೂ ಬೆತ್ತಲೆಯೆ!
ಮಗುವಿನಂತಹ ಮುಗ್ಧತೆ ಮಾತ್ರವೇ ಇದನ್ನು ಗುರುತಿಸಬಲ್ಲುದು
ಯುದ್ಧದಲ್ಲಿ ಸದಾ ಇಬ್ಬರ ನಡುವೆ ಘರ್ಷಣೆಯಾಗುತ್ತದೆ, ಕಿಡಿಗಳು ಹಾರುತ್ತವೆ
ಅಂತಿಮವಾಗಿ ಸತ್ಯವನ್ನು ಹೇಳುವುದೆಂದರೆ ಬೆತ್ತಲಾಗುವುದು!
ಅದನ್ನೇ ಸರ್ಮದ್ ಮಾಡಿದ, ಸ್ಥಾಪಿತ ಚೌಕಟ್ಟುಗಳ ಹೊರಗೆ ಜಿಗಿದು
ಸಂಪೂರ್ಣ ಅಸಂಗತವಾದುದನ್ನು ಹೇಳಿದ
ಮನ್ಸೂರ್ ಅಲ್ ಹಲ್ಲಾಸ್ ‘ಅನಾಲ್ ಹಕ್’ ಎನ್ನುವುದರ ಮೂಲಕ
“ನಾನೇ ಸತ್ಯ” ಎಂದು ಘೋಷಿಸಿದಂತೆ,
ಸರ್ಮದ್ ಅದನ್ನೇ ಇನ್ನೊಂದು ಬಗೆಯಲ್ಲಿ ಹೇಳಿದ
ಕಲೀಮಾದ ‘ಲಾ ಇಲ್ಲಾಹ್’ ಭಾಗವನ್ನು ಮಾತ್ರವೇ ಉಚ್ಛರಿಸಿ
‘ಇಲ್ಲಲ್ಲಾಹು’ ಎಂದು ಪೂರ್ಣಗೊಳಿಸದೇ ಹೋದ
ಅವನ ಮಾತಿನ ಮರ್ಮ ಬಹುಶಃ ಹೀಗಿರಬಹುದೇನೊ?
‘ದೇವರು ಹೊರಗೆಲ್ಲೂ ಇಲ್ಲ, ನನ್ನೊಳಗೇ ಇದ್ದಾನೆ’
ಬೆತ್ತಲೆಯ ಅನಾವರಣಕ್ಕೆ ಬೆಚ್ಚಿಬಿದ್ದ ಔರಂಗಜೇಬ
ಜಾಮಾ ಮಸೀದಿಯ ಪೂರ್ವದ್ವಾರದ ಹೊರಗೆ ಅವನ ಶಿರಚ್ಛೇದ ಮಾಡಿದ!
ಶಿರವಿಲ್ಲದ ಸರ್ಮದ್, ಕತ್ತರಿಸಿದ ತನ್ನ ತಲೆಯನ್ನು ಕೈಯಲ್ಲಿ ಹಿಡಿದು
ಮಸೀದಿಯ ಮೆಟ್ಟಿಲುಗಳ ಮೇಲೆ ನರ್ತಿಸಿದ
ಪ್ರೇತಗಳಿಗೆ ಆಹುತಿಯಾಗುವ ಮೊದಲು…
ದಂತಕತೆಗಳು ಹೀಗೆಂದು ಬಣ್ಣಿಸುತ್ತವೆ
ನಾನೀಗ ಅದೇ ಮೆಟ್ಟಿಲುಗಳ ಮೇಲೆ ನಿಂತಿರುವೆ!
ಉತ್ಕೃಷ್ಟವಾದ ಕೋಟೆಯೊಂದು ಕಾಲದ ಹೊಡೆತದಿಂದ ಕುಸಿದು
ವರ್ತಮಾನದ ವಾಸ್ತವಕ್ಕನುಗುಣವಾಗಿ ‘ಲಾಲ್ ಕ್ವಿಲಾ’ವಾಗಿದೆ
ನಾನು ಕ್ವಿಲಾ ಇ ಮುಲ್ಲಾದೊಂದಿಗೆ ಕೆಳಗಿರುವ ಕೆಂಪು ದರ್ಗಾವನ್ನು ಚಿತ್ರಿಸುತ್ತೇನೆ
ಆಕಾಶದ ಹಿನ್ನೆಲೆಯಲ್ಲಿ ಅದು ಮೆಲ್ಲನೆ ರೂಪುಗೊಳ್ಳುತ್ತಿದೆ

ಬಲ್ಲಿಮಾರನ್ ರಸ್ತೆಯಲ್ಲಿರುವ ಗಾಲೀಬನ ಹವೇಲಿ

ಕಾಲಾತೀತನಾದ ಕವಿ ಈಗ ತನ್ನ ಮನೆಯನ್ನು
ಒಂದು ಸಾಮಾನ್ಯ ಅಂಗಡಿಯೊಂದಿಗೆ ಹಂಚಿಕೊಂಡಿದ್ದಾನೆ, ಏನೂ ಅಭ್ಯಂತರವಿಲ್ಲದೆ
ಗಂಗಾ ಜಮುನಾ ಸಂಸ್ಕೃತಿಯೊಂದಿಗೆ ಥಳಕು ಹಾಕಿಕೊಂಡ ಅನೇಕ
ಮಹಾನ್ ಕವಿಗಳಿಗಿಂತ ಭಿನ್ನವಾಗಿದ್ದಾನೆ, ಎಲ್ಲ ಹಂಚಿಕೊಂಡು
ಯಾವುದೇ ಐಹಿಕ ಕುರುಹುಗಳನ್ನಿಲ್ಲಿ ಉಳಿಸಿಹೋಗಿಲ್ಲ
ವ್ಯಕ್ತಿಯೊಬ್ಬನ ಉಸಿರಿನಲ್ಲಿ ಹತ್ತಿಯುಂಡೆಯನ್ನಿಟ್ಟ ಬಳಿಕ
ದೇಹದ ಕುರುಹುಗಳು ಮಾಯವಾಗುತ್ತವೆ
ಜೀವನದ ಕುರುಹುಗಳನ್ನಷ್ಟೇ ಉಳಿಸಿ.
ಅವನ ಆರ್ದೃಗರ್ವ, ಪದಕೌಶಲ, ಹಾಸ್ಯಪ್ರಜ್ಞೆ
ಇತಿಹಾಸದ ಅನೂಹ್ಯ ತಿರುವುಗಳಿಂದ ದಂಡನೆಗೊಳಗಾದ ಗೌರವ ಪ್ರಜ್ಞೆ
ಮಾತ್ರವೇ ಇಲ್ಲಿ ಉಳಿದುಕೊಂಡಿವೆ
ಶಾಶ್ವತ ಸಾಲಗಾರನಾಗಿದ್ದರೂ ಅವನೆಂದಿಗೂ
ಆತ್ಮಸಾಕ್ಷಿಯಿಂದ ವಿಚಲಿತನಾಗಲಿಲ್ಲ
ಮನೆಯಿಲ್ಲದವರು ಮಾತ್ರವೇ ಅದ್ಭುತ ಸಂಚಾರಿಯಾಗಬಲ್ಲರು!
ಭವ್ಯ ವಾಸಸ್ಥಾನಕ್ಕೆ ಅವನು ನೀಡುವ ಮೌಲ್ಯ ಅತ್ಯಲ್ಪ
ಅವನ ದೀರ್ಘವಾಸದ ಮನೆಗೆ ಸುರೂಪ ಚಿಕಿತ್ಸೆ ನೀಡಿದವರನ್ನೂ
ಬಹುಶಃ ಅವನು ಕ್ಷಮಿಸಬಹುದೇನೊ?
ಅಸಂಖ್ಯಾತ ಸಂಪುಟಗಳು ಅವನ ಸಂದೇಶಗಳನ್ನು ಮಥಿಸಿವೆ
ನೆನಪುಗಳನ್ನು ಚಿರಸ್ಥಾಯಿಯಾಗಿಡಲು ಶ್ರಮಿಸಿವೆ
ಅದನ್ನೂ ಅವನು ಕ್ಷಮಿಸುತ್ತಾನೆ
ನನ್ನ ಈ ಕಿರುಗವನವನ್ನೂ ಮನ್ನಿಸುತ್ತಾನೆ

(ಸ್ವಲ್ಪ ಸಮಯದ ಹಿಂದೆ ನಾನು ದೆಹಲಿಯ ಜುಮ್ಮಾ ಮಸೀದಿ ಮತ್ತು ಬಲ್ಲಿಮಾರನ್ ರಸ್ತೆಯ ಪ್ರದೇಶಗಳಿಗೆ ಭೇಟಿ ನೀಡಿದೆ. ಆ ಭೇಟಿಯು ನನ್ನಿಂದ ಎರಡು ಕವಿತೆಗಳನ್ನು ಬರೆಸಿತು. ಒಂದು ಕವಿತೆ ಸರ್ಮದ್ ಶಹೀದ್ ಅವರ ಕುರಿತಾಗಿದೆ. ಸರ್ಮದ್ ಶಹೀದ್ ಔರಂಗಜೇಬನಿಂದ ಕೊಲೆಗೀಡಾದ ಸಂತ. ಇನ್ನೊಂದು ಕವಿತೆ ಕವಿ ಗಾಲೀಬ್‍ನ ಕುರಿತಾಗಿದೆ.)