ಹಳೇ ಆಲೂರಿನ ಅರ್ಕೇಶ್ವರ ದೇವಾಲಯವು ಐತಿಹಾಸಿಕ ವಿಜಯವೊಂದರ ಸಂಕೇತವಾಗಿ ನಿರ್ಮಾಣಗೊಂಡ ಸ್ಮಾರಕಕಟ್ಟಡ. ಗಂಗದೊರೆಗಳ ವಾಸ್ತುಶಿಲ್ಪದ ಪ್ರಮುಖ ಮಾದರಿಗಳಲ್ಲೊಂದು. ದಕ್ಷಿಣಭಾರತದ ಪ್ರಮುಖ ಮಾಂಡಲಿಕ ರಾಜವಂಶಗಳಲ್ಲೊಂದಾದ ಗಂಗಮನೆತನದ ರಾಜರು ರಾಷ್ಟ್ರಕೂಟರಿಗೂ ಚಾಲುಕ್ಯರಿಗೂ ಅಧೀನರಾಗಿದ್ದರೂ ತಮ್ಮ ಸ್ವಾತಂತ್ರ್ಯವನ್ನು ಕಾಯ್ದುಕೊಂಡು ಸ್ವಸಾಮರ್ಥ್ಯಪರಾಕ್ರಮಗಳಿಂದ ಇತಿಹಾಸದಲ್ಲಿ ವಿಶಿಷ್ಟಸ್ಥಾನ ಪಡೆದವರಾಗಿದ್ದಾರೆ. ಕ್ರಿ.ಶ. 936ರಲ್ಲಿ ಇಮ್ಮಡಿ ಬೂತುಗನೆಂಬ ರಾಜಪುರುಷನು ರಾಷ್ಟ್ರಕೂಟರ ನೆರವಿನಿಂದ ಸಿಂಹಾಸನವನ್ನೇರಿದನು. ಈ ನೆರವಿನ ಋಣವನ್ನು ತೀರಿಸಲೋ ಎಂಬಂತೆ, ರಾಷ್ಟ್ರಕೂಟರಿಗೂ ಚೋಳರಿಗೂ ನಡೆದ ಯುದ್ಧದಲ್ಲಿ ರಾಷ್ಟ್ರಕೂಟರ ಪರವಹಿಸಿ ಕಾದಿದ ಬೂತುಗನು ತಕ್ಕೊಳದ ರಣಾಂಗಣದಲ್ಲಿ ಚೋಳ ಅರಸನನ್ನು ಸಂಹರಿಸಿ ವಿಜಯ ಸಾಧಿಸಿದನು.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಐವತ್ತಾರನೆಯ ಕಂತು

 

ಹಳೇ ಆಲೂರು ಚಾಮರಾಜನಗರ ಜಿಲ್ಲೆಯ ಒಂದು ಗ್ರಾಮ. ಚಾಮರಾಜನಗರದಿಂದ ಯಳಂದೂರಿಗೆ ಹೋಗುವ ರಸ್ತೆಯಲ್ಲಿ ಒಂಬತ್ತು ಕಿ.ಮೀ. ಸಾಗಿದರೆ ಹಳೇ ಆಲೂರನ್ನು ತಲುಪಬಹುದು. ರಸ್ತೆಯ ಬದಿಯಲ್ಲಿ ಕಾಣುವ ಅರ್ಕೇಶ್ವರ ದೇವಾಲಯದ ನಾಮಫಲಕವನ್ನು ಅನುಸರಿಸಿ ಎಡದಿಕ್ಕಿನ ತೋಟದ ಹಾದಿಯಲ್ಲಿ ಮುಂದೆ ಸಾಗಿದರೆ ಚಿಕ್ಕದೊಂದು ದೇಗುಲದ ಆವರಣ ಕಾಣಸಿಗುತ್ತದೆ. ನೋಡಲು ಚಿಕ್ಕ ನಿರ್ಮಾಣವಾದರೂ ಐತಿಹಾಸಿಕವಾಗಿ ಬಲು ಮಹತ್ವದ ತಾಣವಿದು.

ಹಳೇ ಆಲೂರಿನ ಅರ್ಕೇಶ್ವರ ದೇವಾಲಯವು ಐತಿಹಾಸಿಕ ವಿಜಯವೊಂದರ ಸಂಕೇತವಾಗಿ ನಿರ್ಮಾಣಗೊಂಡ ಸ್ಮಾರಕಕಟ್ಟಡ. ಗಂಗದೊರೆಗಳ ವಾಸ್ತುಶಿಲ್ಪದ ಪ್ರಮುಖ ಮಾದರಿಗಳಲ್ಲೊಂದು. ದಕ್ಷಿಣಭಾರತದ ಪ್ರಮುಖ ಮಾಂಡಲಿಕ ರಾಜವಂಶಗಳಲ್ಲೊಂದಾದ ಗಂಗಮನೆತನದ ರಾಜರು ರಾಷ್ಟ್ರಕೂಟರಿಗೂ ಚಾಲುಕ್ಯರಿಗೂ ಅಧೀನರಾಗಿದ್ದರೂ ತಮ್ಮ ಸ್ವಾತಂತ್ರ್ಯವನ್ನು ಕಾಯ್ದುಕೊಂಡು ಸ್ವಸಾಮರ್ಥ್ಯಪರಾಕ್ರಮಗಳಿಂದ ಇತಿಹಾಸದಲ್ಲಿ ವಿಶಿಷ್ಟಸ್ಥಾನ ಪಡೆದವರಾಗಿದ್ದಾರೆ. ಕ್ರಿ.ಶ. 936ರಲ್ಲಿ ಇಮ್ಮಡಿ ಬೂತುಗನೆಂಬ ರಾಜಪುರುಷನು ರಾಷ್ಟ್ರಕೂಟರ ನೆರವಿನಿಂದ ಸಿಂಹಾಸನವನ್ನೇರಿದನು. ಈ ನೆರವಿನ ಋಣವನ್ನು ತೀರಿಸಲೋ ಎಂಬಂತೆ, ರಾಷ್ಟ್ರಕೂಟರಿಗೂ ಚೋಳರಿಗೂ ನಡೆದ ಯುದ್ಧದಲ್ಲಿ ರಾಷ್ಟ್ರಕೂಟರ ಪರವಹಿಸಿ ಕಾದಿದ ಬೂತುಗನು ತಕ್ಕೊಳದ ರಣಾಂಗಣದಲ್ಲಿ ಚೋಳ ಅರಸನನ್ನು ಸಂಹರಿಸಿ ವಿಜಯ ಸಾಧಿಸಿದನು. ಈ ಮಹತ್ವದ ವಿಜಯದ ಸ್ಮಾರಕವಾಗಿ ಗಂಗರಾಜನು ಹಳೇ ಆಲೂರಿನಲ್ಲಿ ಈ ಅರ್ಕೇಶ್ವರ ದೇವಾಲಯವನ್ನು ಕಟ್ಟಿಸಿದನೆಂದು ಹೇಳಲಾಗಿದೆ.

ಅರ್ಕೇಶ್ವರ ದೇವಾಲಯದೊಳಕ್ಕೆ ಕಾಲಿರಿಸುತ್ತಿರುವಂತೆ ನಂದಿ ಮಂಟಪವು ಇದಿರಾಗುತ್ತದೆ. ಈ ಮಂಟಪದ ನಾಲ್ಕು ಕಂಬಗಳ ಮೇಲೆ ಯುದ್ಧದೃಶ್ಯಗಳು ಚಿತ್ರಿತವಾಗಿವೆ. ಚೋಳ ಅರಸ ಆದಿತ್ಯನ ಮೇಲೆ ಬೂತುಗನ ವಿಜಯವನ್ನು ಈ ದೃಶ್ಯಗಳು ನಿರೂಪಿಸುತ್ತವೆ. ಕಪ್ಪು ಕಲ್ಲಿನ ನಂದಿ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಮುದ್ದಾಗಿದೆ. ಯುದ್ಧರಥಗಳು, ಆಶ್ವಿಕರು, ಆನೆಗಳು, ಆಯುಧಗಳನ್ನು ಧರಿಸಿ ಹೋರಾಡುತ್ತಿರುವ ಯೋಧರು, ಅರಸನ ವಿಜಯಯಾತ್ರೆ ಎಲ್ಲವೂ ಈ ಕಂಬಗಳ ಮೇಲೆ ಸೊಗಸಾಗಿ ಚಿತ್ರಿತವಾಗಿವೆ. ನೀರಿನಲ್ಲಿ ಸಾಗುತ್ತಿರುವ ನೌಕೆಯ ಚಿತ್ರಣವು ಕುತೂಹಲ ಮೂಡಿಸುತ್ತದೆ.

ಮುಂದೆ ಪ್ರತ್ಯೇಕವಾದ ಕಟ್ಟಡದೊಳಗೆ ನವರಂಗ ಹಾಗೂ ಗರ್ಭಗುಡಿಗಳಿವೆ. ಗುಡಿಯೊಳಕ್ಕೆ ಹೋಗಲು ಸೋಪಾನವೇರುತ್ತಿರುವಂತೆಯೇ ಬಾಗಿಲವಾಡದ ಪಟ್ಟಿಕೆಯ ಮೇಲೆ ಕಾಣುವ ನರ್ತಕಿಯರ ಸಾಲು ಆಕರ್ಷಕವಾಗಿದೆ. ಪಕ್ಕದ ಗೋಡೆಯಲ್ಲಿ ಕಲ್ಲುಕಂಬಗಳ ನಡುವೆ ಅಳವಡಿಸಿರುವ ವಾದ್ಯಗಾರರ ಪಟ್ಟಿಕೆಗಳಂತೂ ಅತಿವಿಶಿಷ್ಟವಾಗಿವೆ. ಗರ್ಭಗುಡಿಯ ಬಾಗಿಲ ಇಕ್ಕೆಲಗಳಲ್ಲಿ ಕಂಡುಬರುವ ಈ ಪಟ್ಟಿಕೆಗಳ ಮೇಲೆ ತಲಾ ನಾಲ್ಕು ಚೌಕಗಳೊಳಗೆ ಮೃದಂಗ ಮತ್ತಿತರ ವಾದ್ಯಗಳನ್ನು ಬಾರಿಸುತ್ತಿರುವ ಕಲಾವಿದರ ಉಬ್ಬುಚಿತ್ರಗಳು ಸೊಗಸಾಗಿವೆ. ಮೃದಂಗ, ತಾಳ, ಕೊಳಲು, ಚಂಡೆಮದ್ದಲೆ ಮತ್ತಿತರ ವಾದ್ಯಗಳನ್ನು ಬಾರಿಸುತ್ತ ನರ್ತಿಸುತ್ತಿರುವ ಈ ಪುರುಷಕಲಾವಿದರ ತಂಡವು ಮತ್ತೊಂದು ಪಟ್ಟಿಕೆಯಲ್ಲಿನ ನರ್ತಕಿಯರೊಡನೆ ವಿಜಯೋತ್ಸವವನ್ನೇ ಆಚರಿಸುತ್ತಿರುವುದರಲ್ಲಿ ಸಂದೇಹವಿಲ್ಲ.

ದೇವಾಲಯದ ಒಳಮಂಟಪದಲ್ಲಿರುವ ವಿಗ್ರಹಗಳಲ್ಲಿ ಕೇಶವ, ದಕ್ಷಿಣಾಮೂರ್ತಿ ಹಾಗೂ ದುರ್ಗೆಯರ ವಿಗ್ರಹಗಳು ಗಮನಾರ್ಹವಾಗಿವೆ. ಶಂಖಚಕ್ರಗದಾಧಾರಿಯಾದ ಕೇಶವನ ವಿಗ್ರಹವು ನಿಂತಿರುವ ಭಂಗಿಯಲ್ಲಿದ್ದರೆ ದಕ್ಷಿಣಾಮೂರ್ತಿ ಶಿವನ ರೂಪವು ಸುಖಾಸೀನ ಭಂಗಿಯಲ್ಲಿ ಕಂಡುಬರುತ್ತದೆ. ಶಂಖಚಕ್ರಧಾರಿಯಾಗಿ ಮಹಿಷನ ತಲೆಯ ಮೇಲೆ ನಿಂತಿರುವ ದುರ್ಗೆಯು ಅಭಯಹಸ್ತೆಯಾಗಿ ಶೋಭಿಸುತ್ತಾಳೆ. ಒಳಗುಡಿಯಲ್ಲಿ ಅರ್ಕೇಶ್ವರನೆಂದು ಹೆಸರಾದ ಶಿವಲಿಂಗವಿದೆ.

ನವರಂಗದ ಕಂಬಗಳ ಮೇಲೂ ಯುದ್ಧದೃಶ್ಯಗಳ ನಿರೂಪಣೆ ಮುಂದುವರೆದಿದೆ. ಭೀಮ-ದುರ್ಯೋಧನರ ಯುದ್ಧ, ಭೀಷ್ಮರ ಶರಶಯ್ಯೆ ಮೊದಲಾದ ಮಹಾಭಾರತದ ದೃಶ್ಯಗಳಲ್ಲದೆ ತತ್ಕಾಲದ ಕಾಳಗದ ಚಿತ್ರಣವೂ ಕಾಣಿಸುತ್ತದೆ. ನಡುವಣ ಭುವನೇಶ್ವರಿಯತ್ತ ತಲೆಯೆತ್ತಿ ನೋಡಿದರೆ, ನಡುವೆ ವಿವಿಧ ಕಲಾಭಂಗಿಗಳನ್ನು ತೋರ್ಪಡಿಸುವ ಅಷ್ಟಭುಜಗಳ ನಟರಾಜ; ಆತನ ಸುತ್ತ ತಮ್ಮ ಪತ್ನಿಯರೊಡಗೂಡಿ ವಾಹನಾರೂಢರಾದ ದಿಕ್ಪಾಲಕರು ಕಂಡುಬರುತ್ತಾರೆ.

ಹಳೇ ಆಲೂರಿನಲ್ಲೇ ಇರುವ ಇನ್ನೊಂದು ಗುಡಿ ದೇಶೇಶ್ವರ ದೇವಾಲಯವು ಶಿಥಿಲವಾಗಿರುವುದರಿಂದಲೋ ಏನೋ ಅಲ್ಲಿನ ಕೆಲವು ವಿಗ್ರಹಗಳನ್ನೂ ಈ ಗ್ರಾಮಪರಿಸರದಲ್ಲಿ ದೊರೆತ ಹಲವು ವೀರಗಲ್ಲುಗಳನ್ನೂ ಪುರಾತತ್ವ ಇಲಾಖೆಯವರು ಅರ್ಕೇಶ್ವರ ಗುಡಿಯ ಆವರಣದಲ್ಲಿ ತಂದಿರಿಸಿದ್ದಾರೆ. ಈ ವಿಗ್ರಹಗಳು ಸಾಕಷ್ಟು ದೊಡ್ಡ ಆಕಾರದವಾಗಿದ್ದು ಗಮನ ಸೆಳೆಯುವಂತಿವೆ. ಗಣಪತಿ, ವೀರಭದ್ರ, ಸಪ್ತಮಾತೃಕೆಯರು, ಚಾಮುಂಡಿ ಮೊದಲಾದ ಎತ್ತರದ ವಿಗ್ರಹಗಳು ಗಂಗರ ಕಾಲದ ಶಿಲ್ಪಕಲೆಗೆ ಅತ್ಯುತ್ತಮ ಮಾದರಿಗಳಾಗಿವೆ. ಬ್ರಾಹ್ಮಿ, ವಾರಾಹಿ, ವೈಷ್ಣವಿ ಮೊದಲಾದ ಸಪ್ತಮಾತೃಕೆಯರು ಸುಖಾಸೀನಭಂಗಿಯಲ್ಲಿ ಕಂಡುಬರುತ್ತಾರೆ.

(ಫೋಟೋಗಳು: ಲೇಖಕರವು)

ಅಷ್ಟಭುಜಗಳ ಚಾಮುಂಡೀದೇವಿಯ ರೂಪವು ಭೀಭತ್ಸಕರವಾಗಿದೆ. ಬಿಚ್ಚಿದ ಜಡೆ, ಜಟಾಭಾಗದಲ್ಲಿ ತೋರುವ ಕಪಾಲ, ರುಂಡಗಳ ಮಾಲೆ, ಬಾಯಿಂದ ಹೊರಚಾಚಿದ ಕೋರೆಹಲ್ಲುಗಳು- ವಿಗ್ರಹದ ಸ್ವರೂಪದ ಭಯಾನಕತೆಯನ್ನು ಮಿಗಿಲುಗೊಳಿಸಿವೆ. ಬಲಮುರಿ ಸೊಂಡಿಲ ಗಣಪ, ದಕ್ಷಿಣಾಮೂರ್ತಿ, ಸೂರ್ಯ, ವೀರಭದ್ರ ಮೊದಲಾದವು ಇಲ್ಲಿನ ಇತರ ಮುಖ್ಯಶಿಲ್ಪಗಳು.

ಗುಡಿಯ ಆವರಣದಲ್ಲಿರುವ ವೀರಗಲ್ಲುಗಳೂ ಮಾಸ್ತಿಕಲ್ಲುಗಳೂ ಇಲ್ಲಿನ ಗತವೈಭವದ ಸಾಕ್ಷಿಗಳಾಗಿ ಉಳಿದುಕೊಂಡಿವೆ. ಚಾಮರಾಜನಗರದತ್ತ ಬರುವಾಗ ಮರೆಯದೆ ಹಳೇ ಆಲೂರಿಗೆ ಬಂದು ಕನ್ನಡನಾಡಿನ ಇತಿಹಾಸದ ಮಹತ್ವದ ಅಧ್ಯಾಯವೊಂದರ ಪರಿಚಯ ಪಡೆದುಕೊಳ್ಳಿರಿ