ಯಾವುದಕ್ಕೆ ಉತ್ತರ ಸಿಗುತ್ತಿಲ್ಲವೊ ಅದನ್ನು ಶಾಸ್ತ್ರ ಹೇಳುತ್ತದೆ ಅಂದ ಮೇಲೆ ಉತ್ತರ ಸಿಗದೇ ನಮಗೆ ಸಮಾಧಾನವಾಗುವ ಹಾಗೆ ಅಥವಾ ಮುಂದಿನ ಚರ್ಚೆ ತಾತ್ಕಾಲಿಕಯಾಗಿಯಾದರೂ ಕೊನೆಗೊಳ್ಳುವಂತೆ ರಸ ಸಿದ್ಧಾಂತವು ‘ಶಾಸ್ತ್ರ’ವಾಗುತ್ತದೆ. ಸಮಾಜದ ಎಲ್ಲ ಘಟಕಗಳಲ್ಲೂ ಮನುಷ್ಯ ವ್ಯವಹರಿಸುವಾಗ ಈ ‘ಶಾಸ್ತ್ರ’ಕ್ಕೆ  ಸಂವಾದಿಯಾಗುವ ಹಲವು ಪರಿಕರಗಳನ್ನು ಬಳಸಿ ಆ ಸಂದರ್ಭಕ್ಕೆ ಅಂತ್ಯ ಹಾಡುವುದು ಸಾಮಾನ್ಯವೇ.  ಇದೇ ಹಿನ್ನೆಲೆಯಲ್ಲಿ, ಯಕ್ಷಗಾನದ ಅಳತೆಗೋಲುಗಳ ಮೇಲಿನ ಪರಿಣಾಮಗಳೇನು ಎಂಬ ಚರ್ಚೆಯನ್ನು ಕೃತಿ ಪುರಪ್ಪೇಮನೆ ಅವರು ಯಕ್ಷಾರ್ಥ ಚಿಂತಾಮಣಿ ಸರಣಿಯಲ್ಲಿ ಪ್ರಸ್ತುತಪಡಿಸಿದ್ದಾರೆ. 

 

ಔಚಿತ್ಯವು ರುಚಿಯ ಪ್ರಮಾಣವೂ, ನೀತಿ ಬೋಧೆಯೂ ಆಗಿರುವುದು ಕೂಡ ಹೊಸ ವಿಷಯವೇನಲ್ಲ. ಅಥವಾ ಕಲೆಯ ಪ್ರಮುಖ ಕೆಲಸ ಸಂತೋಷ ಕೊಡುವುದು ಮಾತ್ರವೊ ಅಥವಾ ನೀತಿಯನ್ನು ಹೇಳುವುದೊ ಎನ್ನುವ ಜಿಜ್ಞಾಸೆ ಎಲ್ಲಾ ಕಾಲದಲ್ಲೂ ಎಲ್ಲಾ ಮೀಮಾಂಸಕರೂ ಎದುರಿಸಿದ ವಿಷಯವೇ. ಸಮಾಜದಲ್ಲಿ ಆ ಕಲೆಯ ಕೆಲಸವೇನು ಎನ್ನುವುದರ ಅಭಿಪ್ರಾಯಗಳ ಮೇಲೆ ಆ ಕಲೆಯ ಔಚಿತ್ಯದ ನಿರ್ಧಾರ ಕೂಡ ಆಗುತ್ತದೆ.
‘ಭಾರತೀಯ’ ರಸ ಸಿದ್ಧಾಂತವು ಔಚಿತ್ಯದ ಚರ್ಚೆಗಳಲ್ಲಿ ಬರುವುದು ಕುತೂಹಲಕರವಾಗಿದೆ. ರಸ ಸಿದ್ಧಾಂತದ ಕೆಲವು ಪ್ರಮೇಯಗಳು, ಮುಖ್ಯವಾಗಿ ರಸದ ಪರಿಕಲ್ಪನೆ ಜನಮಾನಸದಲ್ಲಿ ರೂಪುಗೊಂಡಿರುವ ಮತ್ತು ಅದನ್ನು ಬಳಸುವ ಬಗೆಯನ್ನು ಪ್ರಸ್ತಾಪಿಸದೇ ಇರುವಂತಿಲ್ಲ ಎನ್ನುವಷ್ಟು ಅದು ಕೆಲವು ವರ್ಗಗಳಲ್ಲಿ, ಮತ್ತು ಕೆಲವು ರೀತಿಯ ಚರ್ಚೆಗಳಲ್ಲಿ ಸಾಮಾನ್ಯವಾಗಿದೆ. ರಸ ಸಿದ್ಧಾಂತದ ಪರಂಪರೆಯಲ್ಲಿ ಬಂದ ಬುದ್ಧಿಜೀವಿಗಳ ಮತ್ತು ಪಠ್ಯಗಳ ಹೆಸರುಗಳು ಯಕ್ಷಗಾನದ ಚರ್ಚೆಗಳಲ್ಲಿ ಬಳಸಲ್ಪಡುವುದು ಒಂದು ‘ಶಾಸ್ತ್ರ’ವಾಗಿ. ಶಾಸ್ತ್ರವೆಂದರೆ ಜೀವಶಾಸ್ತ್ರ, ಸೌಂದರ್ಯಶಾಸ್ತ್ರ ಎಂದು ಬಳಸುವ ಇಂಗ್ಲೀಷಿನ ಗ್ರಾಂಥಿಕ ಅನುವಾದದ ಪದದಂತಲ್ಲ. ದಿನ ನಿತ್ಯ ಜೀವನದಲ್ಲಿ ಧಾರ್ಮಿಕವಾದ ಆಚರಣೆಯಲ್ಲಿ, ಅಥವಾ ರಂಗದ ಯಾವುದೊ ಒಂದು ಅಂಗವನ್ನು ಕಲಿಯುವಾಗ ಬರುವ ‘ಯಕ್ಷಗಾನದಲ್ಲಿ ಹೀಗೆ, ಭರತನಾಟ್ಯದಲ್ಲಿ ಹೀಗೆ’ ಎಂದು ನಾವು ಬಳಸುವ ಅರ್ಥದಲ್ಲಿ ಇವು ಪ್ರಯೋಗಿಸಲ್ಪಡುತ್ತದೆ.

ಒಂದು ಧಾರ್ಮಿಕ ಆಚರಣೆಯಲ್ಲಿ, ‘ಮುಟ್ಟಾದ ಹೆಂಗಸರು ಮುಟ್ಟುವಂತಿಲ್ಲ’, ‘ಹೀಗೆಯೇ ಪೂಜೆ ಮಾಡಬೇಕು’ ಎನ್ನುವುದು ಯಾಕೆ ಎಂದು ಕೇಳಿದರೆ ‘ಹಾಗಂತ ಶಾಸ್ತ್ರ ಹೇಳುತ್ತದೆ’ ಎನ್ನುವುದು ಕೊನೆಯ ಮಾತಿನಂತೆ ಜನರು ಬಳಸುವಂತೆಯೇ ಇಲ್ಲಿ ರಸ ಸಿದ್ಧಾಂತದ ಯಾವುದೋ ಪ್ರಮೇಯ ಅಥವಾ ರಸಗಳ ವರ್ಗೀಕರಣಗಳು ಬರುತ್ತದೆ. ಯಾವುದಕ್ಕೆ ಉತ್ತರ ಸಿಗುತ್ತಿಲ್ಲವೊ ಅದನ್ನು ಶಾಸ್ತ್ರ ಹೇಳುತ್ತದೆ ಅಂದ ಮೇಲೆ ಉತ್ತರ ಸಿಗದೇ ನಮಗೆ ಸಮಾಧಾನವಾಗುವ ಹಾಗೆ ಅಥವಾ ಮುಂದಿನ ಚರ್ಚೆ ತಾತ್ಕಾಲಿಕಯಾಗಿಯಾದರೂ ಕೊನೆಗೊಳ್ಳುವಂತೆ ರಸ ಸಿದ್ಧಾಂತವು ‘ಶಾಸ್ತ್ರ’ವಾಗುತ್ತದೆ. ಸಮಾಜದ ಎಲ್ಲ ಘಟಕಗಳಲ್ಲೂ ಮನುಷ್ಯ ವ್ಯವಹರಿಸುವಾಗ ಈ ‘ಶಾಸ್ತ್ರ’ ಕ್ಕೆ ಸಂವಾದಿಯಾಗುವ ಹಲವು ಪರಿಕರಗಳನ್ನು ಬಳಸಿ ಆ ಸಂದರ್ಭಕ್ಕೆ ಅಂತ್ಯ ಹಾಡುವುದು ಸಾಮಾನ್ಯವೇ ಆದರೂ ಯಕ್ಷಗಾನದಲ್ಲಿ ಹೀಗೆ ಬಳಸಲ್ಪಟ್ಟಾಗ ಯಕ್ಷಗಾನದ ಅಳತೆಗೋಲುಗಳ ಮೇಲಿನ ಪರಿಣಾಮಗಳೇನು ಎನ್ನುವುದು ಈ ಲೇಖನಕ್ಕೆ ಮುಖ್ಯ.

ರಸ ಸಿದ್ಧಾಂತ ಬೆಳೆದು ಬಂದ ಬೌದ್ಧಿಕ ಚರಿತ್ರೆಯನ್ನು, ಕಡಿಮೆ ಗೊತ್ತಿರುವ ನನಗೂ ಇಲ್ಲಿ ಸ್ಥೂಲವಾಗಿ ಕೊಡುವುದೂ ಕಷ್ಟವೇ. ಅಷ್ಟು ದೀರ್ಘವಾಗಿ ಮತ್ತು ಹಲವಾರು ಸ್ಥಳ, ಕಾಲಮಾನದಲ್ಲಿ, ಒಬ್ಬರ ಪಠ್ಯಕ್ಕೆ ಒಬ್ಬರು ವ್ಯಾಖ್ಯಾನಿಸುತ್ತಾ ಬೆಳೆದಿರುವ ಪರಂಪರೆಗೆ ಅದರದ್ದೇ ಆದ ಕಾಲಮಾನಕ್ಕೆ ಸ್ಪಂದಿಸುವ, ಗ್ರಹಿಸುವ, ತರ್ಕ, ಭಾಷೆ, ಪರಿಕಲ್ಪನೆಗಳಿವೆ. ಅದನ್ನು ನಮ್ಮ ಅವಕಾಶಕ್ಕೆ, ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವಲ್ಲಿ ಎಚ್ಚರ ವಹಿಸಬೇಕಾಗುತ್ತದೆ. ಹಾಗಾಗಿಯೇ ಅದು ಏನು ಹೇಳುತ್ತದೆ ಅನ್ನುವುದನ್ನು ಬಿಟ್ಟು, ಈಗ ಹೇಗೆ ಉಪಯೋಗಿಸುತ್ತಿದ್ದಾರೆ ಎಂದು ನೋಡುವುದು ಸೂಕ್ತ.

ವೀರ ರಸ, ಕರುಣಾ ರಸ, ಶೃಂಗಾರ ರಸ, ಬೀಭತ್ಸ ಇತ್ಯಾದಿ ಹೆಸರುಗಳು ಮತ್ತು ಕೆಲವೊಂದು ಅಂಗ ಮುದ್ರೆಗಳು, ರಾಗ, ಅದನ್ನು ಹೇಳುವ ರೀತಿಯಿಂದ ವೀರ ರಸವೊ ಶೃಂಗಾರ ರಸವೊ ನೋಡುವ ಪ್ರೇಕ್ಷಕನಲ್ಲಿ ಉದ್ಭವವಾಗುತ್ತದೆ ಎನ್ನುವುದು ಬಹಳ ಪ್ರಚಲಿತ. ಹಾಗೆ ನಿರ್ದಿಷ್ಟ ರಸ ಉತ್ಪತ್ತಿಯಾಗುವಂತೆ ನಟಿಸಿದ, ಅಥವ ಬರೆದ ಕಲಾವಿದ, ಕವಿಯ ಇಂಗಿತ ಪ್ರೇಕ್ಷಕನಿಗೆ ತಲುಪಿ ಅವನಿಗೆ ಆನಂದವಾಗಬೇಕಾದರೆ ಅವನು ಸಹೃದಯ (ಸಹೃದಯ ಯಾವಾಗಲೂ ಗಂಡಸು) ಆಗಿರಬೇಕು. ಸಹೃದಯ ಆಗುವುದು ಹೇಗೆ? ಈಗ ನನಗೆ ಸಂದರ್ಶನ, ಚರ್ಚೆಗಳಲ್ಲಿ ಕಂಡದ್ದು, ರಂಗ ಪರಂಪರೆಯ ಪರಿಚಯವಿದ್ದರೆ ಮಾತ್ರ ಸಾಲದು, ರಸಗಳ ಹೆಸರುಗಳೂ, ರಸ ಸಿದ್ಧಾಂತವೂ ಗೊತ್ತಿರಬೇಕು, ಸಂಸ್ಕಾರವಂತನಾಗಿರಬೇಕು, ಜೊತೆಗೆ ಸಹೃದಯನ ಆತ್ಮಸಂಸ್ಕಾರ ಗುರುತಿಸುವುದಕ್ಕೆ ಬರದೆ ಎಷ್ಟು ಗೂಢವಾಗಿದೆ ಎಂದರೆ ಅದು ‘ಹುಟ್ಟಿನಿಂದಲೇ’ ಬಂದಿರಬೇಕು ಎನ್ನುವುದೂ ಇಂಗಿತವಾಗಿ ಕೇಳಿಸುತ್ತದೆ. ಪ್ರೇಕ್ಷಕನ ಆನಂದವೊ, ಅವನಲ್ಲಿ ಹುಟ್ಟುವ ಭಾವವೊ ಇನ್ನೂ ವಿವರಿಸುವುದಕ್ಕೆ ಕಷ್ಟವಾಗುವುದರಿಂದ ‘ಹುಟ್ಟಿನಿಂದಲೇ’ ಬಂದಿರಬೇಕೆಂಬುದು ಅಥವಾ ‘ಸಂಸ್ಕಾರ’ ಇರಬೇಕೆಂಬುದಕ್ಕೆ ಕೊನೆಯಾಗುತ್ತದೆ. ಸಂಸ್ಕಾರವನ್ನು, ವಾತಾವರಣ, ಓದು, ಅನುಭವ ಕೊಡುವ ಕಲಿಕೆ ಅಂದುಕೊಂಡರೆ ಆ ಕಲಿಕೆಯ ಸಾಧ್ಯತೆ ಕೂಡ ಜಾತಿ, ಲಿಂಗ ಆಧಾರಿತ ಸಮಾಜದಲ್ಲಿ ಸಾಧ್ಯವಾಗುವುದು ‘ಹುಟ್ಟಿನಿಂದಲೇ’ ಎನ್ನುವುದಕ್ಕೆ ಬಂದು ನಿಲ್ಲುತ್ತದೆ.
ಇದರ ಮುಂದಿನದ್ದು, ಕಲೆಯಲ್ಲಿನ ಮೌಲ್ಯದ ಬಗ್ಗೆ, ಅಂದರೆ ರಂಗದಲ್ಲಿ ತೋರಿಸುವ ಕತೆಯಲ್ಲಿ ಹೀಗೆ ಮಾಡಿದರೆ ಹೀಗಾಗುತ್ತದೆ ಎನ್ನುವುದನ್ನು ಹೇಳುವುದರಿಂದ ಅದಕ್ಕೆ ತಕ್ಕುದಾಗಿಯೇ ಔಚಿತ್ಯವನ್ನೂ, ರಸವನ್ನೂ ಪ್ರದರ್ಶಿಸಬೇಕಾಗುತ್ತದೆ ಮತ್ತು ಅದನ್ನು ಆದರ್ಶ ಪ್ರೇಕ್ಷಕ ಒಳಗಿಳಿಸಿಕೊಳ್ಳಬೇಕು. ಇದೆಲ್ಲ ರಸ ಸಿದ್ಧಾಂತದ ಪರಂಪರೆಯಿಂದಲೇ ಬಂದಿದ್ದಾದರೂ, ಅದರ ಕಾಲಮಾನವೇ ಬೇರೆ. ಅದರಿಂದೇನಾದರೂ ನಾವು ಪಡೆಯುವುದಿದ್ದರೆ ಅಥವಾ ಅಲ್ಲಿಯ ಜಿಜ್ಞಾಸೆಯನ್ನು ಮುಂದುವರೆಸುವುದಿದ್ದರೆ, ಆ ಪರಂಪರೆಯಲ್ಲಿನ ವಿಷಯಗಳನ್ನು ನಮ್ಮ ಇವತ್ತಿನ ಕಲೆಯಲ್ಲಿ ಪ್ರೇಕ್ಷಕರಾಗಿಯೋ, ಕಲಾವಿದರಾಗಿಯೊ ತೊಡಗಿಸಿಕೊಂಡ ಅನುಭವದ ಮೇಲೆ ಪರೀಕ್ಷಿಸಬೇಕೇ ಹೊರತು, ಅವೇ ನಮಗೇ ಮಾರ್ಗದರ್ಶನ ಮಾಡುವ ಪಠ್ಯಗಳಾಗಬಾರದು. ಚರ್ಚೆಗಳಲ್ಲಿ ಈ ಪರಂಪರೆ ಬೆತ್ತ ಹಿಡಿದುಕೊಂಡು ನಿಂತಿರುವ ಟೀಚರ್‌ನಂತೆ ಭಾಸವಾಗುತ್ತದೆ. ಭರತನಾಟ್ಯದಲ್ಲಿರುವ ನನ್ನ ಕೆಲವು ಗೆಳತಿಯರ ಪ್ರಕಾರ ಈ ಬೆತ್ತ ಯಕ್ಷಗಾನದ ಚರ್ಚೆಯಲ್ಲಿ ‘ಕಂಡಂತೆ ಭಾಸ’ವಾದರೆ, ಅಲ್ಲಿ ಅದು ನಿಜಕ್ಕೂ ‘ಕಾಣಿಸುತ್ತದಂತೆ’. ಗುರು, ಬೆತ್ತ, ಚರ್ಚೆಯಲ್ಲಿ ಕೊನೆಯ ಮಾತು ಎನ್ನುವುದೆಲ್ಲ ಏನನ್ನು ಹೇಳುತ್ತದೆ? ಅಧಿಕಾರವನ್ನಲ್ಲವೇ?

ಆದರೆ ನಿಜವಾದ ಯಕ್ಷಗಾನ ಪ್ರದರ್ಶನದಲ್ಲಿ ಇದೆಲ್ಲ ಕಾಣುವುದಿಲ್ಲ. ಈ ರಸಗಳ, ಔಚಿತ್ಯದ ಗಣನೆ, ಮೇಲೆ ಹೇಳಿದ ಚರ್ಚೆಯಲ್ಲಿ ಬರುವ ಮಾತುಗಳು ಅಷ್ಟು ಪರಿಣಾಮ ಬೀರುತ್ತಿಲ್ಲ ಎನ್ನುವುದು ಸಮಾಧಾನಕರವಾದ ವಿಷಯ. ಪ್ರದರ್ಶನಗಳು, ಭಾವಗಳನ್ನು ಕೆಲವು ಹೆಸರಿಸಿದ ಮುಖ್ಯ ರಸಕ್ಕೇ ಸೀಮಿತಗೊಳಿಸದೇ ಯಾವುದ್ಯಾವುದೊ ರಸದ ಜೊತೆಗೆ ಅದಕ್ಕೆ ಹೊಂದದ ಮತ್ಯಾವುದೊ ಭಾವವು ಸೇರಿ ಸಂಕೀರ್ಣವಾಗಿರುವುದನ್ನೇ ಕೊಡುತ್ತಿವೆ. ರಸ ಸಿದ್ಧಾಂತದ ಪರಂಪರೆಯಲ್ಲಿಯೇ ರಸಗಳ ಸಂಖ್ಯೆ ಬೆಳೆಯುತ್ತಾ ಹೋಗಿದೆ, ಅದು ಬೇರೆ ವಿಷಯ. ‘ಭಕ್ತಿ’ ರಸವಾಗಿ ಒಪ್ಪಿತವಾದದ್ದು ನಾಟ್ಯಶಾಸ್ತçದ ಕಾಲದಲ್ಲಲ್ಲ್ಲವಲ್ಲ. ಕಲೆ, ಕತೆ ಮತ್ತು ಮೌಲ್ಯಗಳ ಸಂಬಂಧವೂ ಅಷ್ಟೆ. ಪ್ರದರ್ಶನವು ರಂಗ ಭೂಮಿಯೊ, ಆಚರಣೆಯೊ, ಅದರಿಂದ ಬರುವುದು ಶೃಂಗಾರವೊ, ಭಕ್ತಿಯೊ ಎನ್ನುವುದೂ ಅಷ್ಟು ನಿಖರವಾಗಿಲ್ಲ ಅನ್ನುವುದೂ ಒಂದು ಇತ್ಯಾತ್ಮಕವಾದ ವಿಷಯವೇ. ಏಕೆಂದರೆ, ಭಕ್ತಿ, ಭಕ್ತನ ನಿಜ ಜೀವನದ ಭಾವವಾದರೆ ಅದು ರಂಗದ ಮೇಲಿನ ರಸವಾಗುವುದಕ್ಕಾಗುವುದಿಲ್ಲ.

ಇದರ ಅನುಭವ ನನಗೆ ವೈಯಕ್ತಿಕವಾಗಿ ಆಗಿರುವುದೂ ಕೂಡ ಎಲ್ಲೆಲ್ಲಿ ಔಚಿತ್ಯವಿಲ್ಲ, ರಸಾಭಾಸ ಆಗಿದೆ ಅನ್ನುವುದನ್ನು ಚರ್ಚಿಸಿದ ಸಂದರ್ಭಗಳಲ್ಲಿ. ‘ಅಂಬೆ ಮತ್ತು ಸಾಲ್ವನ ಪ್ರೇಮ ಶೃಂಗಾರ ರಸ ಅಲ್ಲ, ಅದು ರಸಾಭಾಸ. ಯಾಕೆಂದರೆ ಸಾಲ್ವ ಉತ್ತಮ ನಾಯಕನಲ್ಲ. ಬಸುರಿಯಾಗಿರುವ ಸೀತೆ ಕುಣಿಯುವುದು ಔಚಿತ್ಯವಾಗುವುದಿಲ್ಲ. ಹೀಗೆ ಮಾಡಿದರೆ ಇಂತಹ ರಸವೇ ಉತ್ಪತ್ತಿಯಾಗುತ್ತದೆ ಎಂದು ಪ್ರೂವ್ ಆಗಿದೆ.’ ನಮಗೆ ಆ ಭಾವ ಅಲ್ಲಿ ಕಾಣುವುದಿಲ್ಲವಾದರೆ ನಾವು ಸಹೃದಯರಲ್ಲ ಅಷ್ಟೆ.

ಯಕ್ಷಗಾನವು ಭಕ್ತಿ ಚಳುವಳಿಯ ಕಾಲದ್ದೆಂದೂ, ಅದು ವೈಷ್ಣವ ಮತ ಪ್ರಚಾರದ ಸಾಧನವೆಂದೂ ಕೆಲವರು ಹೇಳಿದ್ದಾರೆ. ಆ ಕಾಲದ ಚಾರಿತ್ರಿಕ ಅಧ್ಯಯನಗಳಾಗದೇ ಇರುವುದರಿಂದ ಅದರ ಸತ್ಯಾಸತ್ಯತೆ ಗೊತ್ತಿಲ್ಲ. ಆದರೆ ದೇವಸ್ಥಾನಗಳ ಮೇಳಗಳು, ಭಕ್ತರು ಬೆಳಕಿನ ಸೇವೆಯಾಗಿ ಆಟ ಮಾಡಿಸುವುದು, ಮತ್ತು ಹಲವು ಪ್ರಸಂಗಗಳಲ್ಲಿ ಮಹಾತ್ಮೆ, ಏಕಾದಶಿ ಆಚರಣೆಯ ಮಹತ್ವ, ಶಿವ ಮತ್ತು ವಿಷ್ಣು ಭಕ್ತರ ನಡುವಿನ ವಾಗ್ವಾದವಿರುವ ಪ್ರಸಂಗಗಳು ರಂಗದ ಮೇಲಿರುವುದರಿಂದ, ದೇವರ ಮೇಲಿನ ಭಕ್ತಿಯ ಸಂಪರ್ಕ ಅಂತೂ ಇದೆ ಎಂದು ಗೊತ್ತಾಗುವುದಕ್ಕೆ ದೊಡ್ಡ ಪುರಾವೆ ಏನು ಬೇಕಾಗುವುದಿಲ್ಲ. ಅಂದರೆ ಯಕ್ಷಗಾನವನ್ನು ಯಥಾವತ್ತಾಗಿ ನಾಟ್ಯಶಾಸ್ತ್ರದ ಕಾಲಕ್ಕೆ ಹೋಲಿಸುವುದು ಬೇರೆ ಬೇರೆ ಕಾಲದಲ್ಲಿ ಬಂದ ಪರಂಪರೆಗಳ ಸರಳೀಕರಣವಾಗುತ್ತದೆ.

‘ಅಂಬೆ ಮತ್ತು ಸಾಲ್ವನ ಪ್ರೇಮ ಶೃಂಗಾರ ರಸ ಅಲ್ಲ, ಅದು ರಸಾಭಾಸ. ಯಾಕೆಂದರೆ ಸಾಲ್ವ ಉತ್ತಮ ನಾಯಕನಲ್ಲ. ಬಸುರಿಯಾಗಿರುವ ಸೀತೆ ಕುಣಿಯುವುದು ಔಚಿತ್ಯವಾಗುವುದಿಲ್ಲ. ಹೀಗೆ ಮಾಡಿದರೆ ಇಂತಹ ರಸವೇ ಉತ್ಪತ್ತಿಯಾಗುತ್ತದೆ ಎಂದು ಪ್ರೂವ್ ಆಗಿದೆ.’ ನಮಗೆ ಆ ಭಾವ ಅಲ್ಲಿ ಕಾಣುವುದಿಲ್ಲವಾದರೆ ನಾವು ಸಹೃದಯರಲ್ಲ ಅಷ್ಟೆ.

ಕತೆಯನ್ನು ನೋಡುವುದೆಂದರೆ ಅದರ ಮೌಲ್ಯವನ್ನು ನಮ್ಮ ಜೀವನದಲ್ಲಿ ಇಳಿಸಿಕೊಳ್ಳುವುದು. ಈ ದೃಷ್ಟಿಕೋನ, ಭಕ್ತಿ ಚಳುವಳಿಯಿಂದ ಬಂದಿದ್ದಿರಬಹುದು. ಕರ್ಮ, ವರ್ಣಾಶ್ರಮ, ದ್ವಿಲಿಂಗಿ ವ್ಯವಸ್ಥೆಯನ್ನು ಪುರಾಣದ ಕತೆಗಳು ಯಕ್ಷಗಾನದಲ್ಲಿ ಹೇಳುತ್ತಲೆ ಇರುತ್ತವೆ. ಇದರಲ್ಲಿರುವ ನೀತಿ ಬೋಧೆಯನ್ನು ಅಥವಾ ಮೌಲ್ಯವನ್ನು ಪುಷ್ಟೀಕರಿಸುವುದಕ್ಕೆ ರಸವೂ ಔಚಿತ್ಯವೂ ಬಳಕೆಯಾಗುತ್ತದೆ. ಹಾಗಿರುವಾಗ ಅಂಬೆ ಮತ್ತು ಸಾಲ್ವನ ಪ್ರೇಮ ಶೃಂಗಾರ ರಸಾಭಾಸವಾಗದೇ, ನಾಯಕ ನಾಯಕಿಯ ಶೃಂಗಾರವಾಗಿಯೇ ಕಂಡರೆ ಮಾತ್ರ ಮತ್ತೇನೊ ಆಗುವ ಸಾಧ್ಯತೆ ಇರುವುದು. ಪುರಾಣದ ಕತೆಯ ಮೌಲ್ಯಕ್ಕೆ ಹೊಸ ಅರ್ಥಗಳು ಬರುವುದು. ಬರೀ ಪುರಾಣದ ಕಥೆ ತಿಳಿಯುವುದಕ್ಕೆ ಈಗ ಎಷ್ಟು ಜನ ಬೆಳಗಿನತನಕ ಕೂರುವುದಕ್ಕೆ ತಯಾರಿದ್ದಾರೆ? (ದೂರದರ್ಶನ)ಟೀವಿಯಲ್ಲಿಯೇ ರಾಮಾಯಣ, ಮಹಾಭಾರತ ಎಲ್ಲರೂ ನೋಡಿಯಾಗಿದೆ.

ಈ ರಸಾಭಾಸಗಳು ಮತ್ತು ಅನೌಚಿತ್ಯಗಳು ಕತೆಯಲ್ಲಿ ಏನನ್ನು ಮಾಡುತ್ತಿವೆ ಅನ್ನುವುದು ನಮಗೆ ಮುಖ್ಯವಾಗಬೇಕಾದ ಕಾಲದಲ್ಲಿ ನಾವಿದ್ದೇವೆ. ರಸಾಭಾಸಗಳಿಲ್ಲದೆ ಯಾವುದೇ ಕತೆ ಹುಟ್ಟುವುದಕ್ಕಾಗುತ್ತದೆಯೇ? ಅಂಬೆಯೂ ಸಾಲ್ವನೂ ಒಂದೇ ಪಂಕ್ತಿಯವರಾಗಿದ್ದರೆ ಕತೆಯೇ ಇರುತ್ತಿರಲಿಲ್ಲ. ಅಲ್ಲದೆ ರಸಾಭಾಸ, ಔಚಿತ್ಯದ ಅರ್ಥಗಳು ರಸ ಸಿದ್ಧಾಂತದಲ್ಲಿ ಈ ರೀತಿಯದ್ದಾಗಿವೆಯೇ ಅನ್ನುವುದೂ ಅನುಮಾನವೇ. ಒಂದೆರಡು ಓದಿಗೆಲ್ಲ ಅದರ ಸಾರವನ್ನು ಹೇಳುವುದೇ ಕಷ್ಟ. ಆದರೆ ಈ ಪ್ರಶ್ನೆಯನ್ನು ಇವತ್ತು ನಾನು ಎತ್ತಲು ಸಾಧ್ಯವಾಗಿದ್ದೇ ಇವತ್ತಿನ ಕಾಲಮಾನದ, ಇವತ್ತಿನ ಸಮಷ್ಟಿ ನೀತಿ ಬೇರೆಯಾಗಿದ್ದರಿಂದ. ಇಲ್ಲದಿದ್ದರೆ ನಾನು ಹೆಂಗಸಾಗಿ ಇಷ್ಟೆಲ್ಲಾ ಚರ್ಚಿಸುವುದೇ ರಸಾಭಾಸವೊ ಅನೌಚಿತ್ಯವೊ ಆಗುವ ಸಾಧ್ಯತೆ ಇರುತಿತ್ತು. ರಸವೆಂದರೆ ರಂಗದಲ್ಲಿ ತೋರಿಸಬಹುದಾದ ಭಾವಗಳು(ನಿಜ ಜೀವನದ್ದು ರಸವಲ್ಲ, ಬರಿ ಭಾವ ಮಾತ್ರ) ಸರಿ. ಆದರೆ ಅದು ಸಾಮಾಜಿಕವಾಗಿ ಆಗಿನ ಕಾಲ ಒಪ್ಪಿಕೊಂಡದ್ದು. ಇಲ್ಲದಿದ್ದರೆ ಶೃಂಗಾರ ರಸವು ಮೇಲಿನ ಸ್ತರದಲ್ಲಿ ಹುಟ್ಟಿದ ಗಂಡು ಹೆಣ್ಣಿನ ಮಧ್ಯದಲ್ಲಿ ಮಾತ್ರ ಎಂದಿರುತ್ತಿರಲಿಲ್ಲ.

ಕೆಳ ಜಾತಿಯವರು, ಹೆಂಗಸರು ಏನು ಯೋಚಿಸುತ್ತಾರೆ ಎಂಬುದು ಮುಖ್ಯವಲ್ಲದ ಸಾಮಾಜಿಕ ಸಂರಚನೆ ಇದ್ದ ಕಾಲದಲ್ಲಿ ಬಂದ ಕೃತಿಗಳ ಮೂಲಕ ನಾವು ಇವತ್ತಿನ ಕಾಲದ ಕಲೆಯನ್ನು ಸರಳವಾಗಿ ರಸಗಳ ಪಟ್ಟಿ ಇಟ್ಟುಕೊಂಡು ಅಳೆಯಲು ಸಾಧ್ಯವಿಲ್ಲ. ಆ ಸ್ತರದಲ್ಲಿ ಅದನ್ನು ಇವತ್ತಿನ ಹೆಣ್ಣಾಗಿ ಒಪ್ಪಿಕೊಳ್ಳಲೇ ಸಾಧ್ಯವಿಲ್ಲ. ಮತ್ತು ಅಂತಹ ಪ್ರಶ್ನೆಗಳನ್ನು ಎತ್ತುವುದೂ ಅನವಶ್ಯಕ. ರಸ ಸಿದ್ಧಾಂತವೂ ಒಂದು ಚಿಂತನೆಯ ಪರಂಪರೆ, ಅದನ್ನು ಬಳಸಿಕೊಳ್ಳುವುದಾದರೆ ನಮ್ಮ ದಾರಿ ಬೇರೆ ರೀತಿಯದ್ದಾಗಿರಬೇಕು. ರಸವು ಮುಟ್ಟಬೇಕಾಗಿರುವುದು, ಆನಂದ ಪಡುವವನು ಪ್ರೇಕ್ಷಕ ಅನ್ನುವುದನ್ನೇ ತೆಗೆದುಕೊಂಡರೆ, ಜನಪ್ರಿಯ (ಔಚಿತ್ಯ ಮೀರಿದ) ಪ್ರಸಂಗಗಳಲ್ಲಿನ ಪ್ರೇಕ್ಷಕನಿಗೆ ಸಿಗುವ ಆನಂದ ಯಾವುದು? ಎಂತದ್ದು? ಅನ್ನುವುದನ್ನು ರಸ ಸಿದ್ಧಾಂತದ ಮೂಲಕ ಅರ್ಥ ಮಾಡಿಕೊಳ್ಳಬಹುದೇ ಎನ್ನುವುದನ್ನು ನೋಡಬಹುದೆನಿಸುತ್ತದೆ. ಅಥವಾ ಇಂತಹ ಹಲವು ವಿಷಯಗಳು ಆ ಪರಂಪರೆಯೊಳಗೆ ನಮಗೆ ಸಿಗಬಹುದು. ಅಂತಹ ಅಧ್ಯಯನಗಳು ಬಂದಂತೆ ನನಗೆ ಕಂಡಿಲ್ಲ. ನನಗೆ ಅಷ್ಟು ಆಸಕ್ತಿ ಇಲ್ಲದ್ದರಿಂದ ಕಾಣಿಸದಿದ್ದದ್ದು ನನ್ನ ಮಿತಿಯೂ ಇರಬಹುದು. ಆದರೆ ಒಂದು ಬೌದ್ಧಿಕ ಪರಂಪರೆಯನ್ನು ಅಧಿಕಾರಕ್ಕೆ ಬಳಸುವುದು ಅಂತಹ ಆಶಾದಾಯಕವಾಗಿ ಕಾಣುತ್ತಿಲ್ಲ.

ಆದರೆ ಮೊದಲೇ ಹೇಳಿದಂತೆ ಯಕ್ಷಗಾನದ ಪ್ರದರ್ಶನಗಳು ‘ಶಾಸ್ತç’ ದಿಂದ ತಪ್ಪಿಸಿಕೊಳ್ಳುತ್ತವೆ. ಭಕ್ತ ಸುಧನ್ವ ಸುಧನ್ವಾರ್ಜುನವಾಗುತ್ತದೆ. ಭೀಷ್ಮ ವಿಜಯ ಅಂಭಾ ಶಪಥವೂ ಆಗುತ್ತದೆ. ರಾಮ ಮತ್ತು ಶೂರ್ಪಣಕಿಯ ಸಂಭಾಷಣೆ ಕೆಲವೊಮ್ಮೆ ಉತ್ತಮ ನಾಯಕ ನಾಯಕಿಯ ಪ್ರಣಯದಂತೆ ಬಂದಿರುತ್ತದೆ. ಒಮ್ಮೆ ಒಂದು ಬಯಲಾಟದಲ್ಲಿ ದೇವಿ ಮಹಾತ್ಮೆಯ ದೇವಿ ಮೈಮೇಲೆ ಬಂದವರಂತೆ ಕುಣಿದು ಪ್ರೇಕ್ಷಕರಿಗೆ ಬೇರೆ ರೀತಿಯ ಭಕ್ತಿಯನ್ನೂ ಪರಿಚಯಿಸಿದ್ದಳು. ಭೀಷ್ಮ ವಿಜಯದಲ್ಲಿ ಅಂಬೆಯ ಪಾತ್ರ ತರ್ಕವಿಲ್ಲದ, ಬರೀ ಭಾವನಾತ್ಮಕವಾಗಿ ಮಾತ್ರ ಸ್ಪಂದಿಸಲು ಸಾಧ್ಯವಿರುವ, ಹಠಮಾರಿಯಾಗಿ ಕೂಗುವ ಪಾತ್ರವಾಗಿ ಬಂದಂತೆಯೇ (ಕೂಗುವುದು, ಹಠ ಇಲ್ಲವೇ ಅಳು, ತರ್ಕವಿಲ್ಲದೆ ಭಾವನೆಯ ಮೇಲೆಯೇ ವ್ಯವಹರಿಸುವುದು-ಇವೆಲ್ಲವೂ ದ್ವಿಲಿಂಗಿ ವ್ಯವಸ್ಥೆಯು ನಂಬುವ ಹೆಣ್ಣಿನ ಗುಣಲಕ್ಷಣಗಳು) ಅದಕ್ಕೆ ವಿರುದ್ಧವಾದ ಪಾತ್ರ ಚಿತ್ರಣವೂ ಬರುತ್ತದೆ. ಅಂಬೆಯ ನಿಲುವುಗಳು ಹಠವಾಗದಂತೆ ಕಾಣುವುದು ರಂಗದಲ್ಲಿ ಸಾಲ್ವ ಮತ್ತು ಅಂಬೆಯ ಶೃಂಗಾರದಿಂದಲೇ ಅನ್ನಿಸುವಷ್ಟು ಪರಿಣಾಮಕಾರಿಯಾಗಿ ಆಗಿ ಕೆಲವು ಪ್ರದರ್ಶನಗಳಲ್ಲಿ ಬಂದಿವೆ. ಪ್ರೇಕ್ಷಕರಿಗೆ ಅವರ ಪ್ರೇಮವು ಸ್ವೀಕೃತವಾಗಿ ಕಾಣುವಾಗ, ಮುಂದೆ ಪ್ರೇಮ ಭಂಗದಿಂದ ಆಗುವ ನಿರಾಸೆಯೂ, ನಿಲುವುಗಳೂ ಸ್ವೀಕೃತವಾಗುತ್ತದೆ.

ಹೊಸ ಪ್ರಸಂಗಗಳಲ್ಲಿ ಮೌಲ್ಯವೂ, ಕತೆಯೂ ಪುರಾಣವಲ್ಲದೇ ಬೇರೆಯದೇ ಆಗಿರುವಾಗ ಔಚಿತ್ಯ ಮತ್ತು ರಸಗಳ ವಿಷಯ ಚರ್ಚೆಗಳಲ್ಲಿ ಅಷ್ಟಾಗಿ ಬರದಿರುವುದೂ ಗಮನಾರ್ಹವೇ. ಇಡೀ ಪ್ರಸಂಗವೇ ಔಚಿತ್ಯವಿಲ್ಲದಂತೆ ಕಂಡು, ರಸ ಸಿದ್ಧಾಂತಂಕ್ಕೆ ಸಂಬಂಧಿಸಿದ ಪುರಾತನ ಪವಿತ್ರ ಪಠ್ಯದ ಪರಿಕಲ್ಪನೆಗಳನ್ನು ಅಂತಹ ಪ್ರಸಂಗಗಳಿಗೆ ಉಪಯೋಗಿಸುವುದೂ ಅಪರಾಧವಾಗಿರಬಹುದು. ಈಗ ಉಪಯೋಗಿಸುವ ರೀತಿಯನ್ನು ನೋಡಿದರೆ, ಅದನ್ನು ವಿಮರ್ಶೆಗೆ ಒಡ್ಡುವುದನ್ನೂ ಸಮಾಜವೇ ತಡೆಹಿಡಿಯುವಂತಹ ವಾತಾವರಣವುದು ರಸ ಸಿದ್ಧಾಂತದ ಬಳಕೆಗೆ ಇರುವ ಇನ್ನೊಂದು ಸಮಸ್ಯೆ. ಒಂದು ಅರ್ಥದಲ್ಲಿ ಹಾಗೆ ತಡೆ ಹಿಡಿಯುವುದೇ ರಸ ಸಿದ್ಧಾಂತದ ಪರಂಪರೆಗೆ ವಿರುದ್ಧವಾಗಿರುವುದು.

‘ಭಾರತೀಯ’ ರಸ ಸಿದ್ಧಾಂತ ಎಂದು ಹೇಳಿದ ಮೇಲೆ, ಇಲ್ಲಿಯೇ ಇನ್ನೊಂದು ‘ಭಾರತೀಯ’ ಅನ್ನಿಸುವ ಅಂಶವನ್ನೂ ಪ್ರಸ್ತಾಪಿಸಬಹುದೆನ್ನಿಸುತ್ತದೆ. ಉಳಿಸಿಕೊಳ್ಳುವುದಕ್ಕೂ, ಶುದ್ಧವಾಗಿಡುವುದಕ್ಕೂ, ರಸ ಸಿದ್ಧಾಂತಕ್ಕೂ ಏನಾದರೂ ಸಂಬಂಧವಿದೆಯೇ ಎನ್ನುವ ಕುತೂಹಲ ಹುಟ್ಟುತ್ತದೆ. ದೇವದಾಸಿಗಳಿಂದ ಬಂದು ಈಗ ಮಧ್ಯಮ ವರ್ಗದ, ಹೆಚ್ಚೂಕಡಿಮೆ ಮೇಲ್ಜಾತಿಯ ಕಲೆಯಾಗಿ ಬದಲಾದ ಭರತನಾಟ್ಯದಲ್ಲೇ ಈ ‘ಪರಂಪರೆಯ ಶುದ್ಧತೆ’ ಎನ್ನುವುದು ಮುಖ್ಯವಾದ ಸ್ಥಾನ ಪಡೆದುಕೊಂಡಿದೆ ಎನ್ನುವುದನ್ನು ನೋಡಿದಾಗಲೆಲ್ಲ ಈ ಪ್ರಶ್ನೆ ನನ್ನನ್ನು ಕಾಡಿದೆ. ಆಚರಣೆಯಾಗಿರುವ ಯಾವುದೇ ಆದರೂ ಅದನ್ನು ಶುದ್ಧವಾಗಿಟ್ಟುಕೊಂಡರೆ ಮಾತ್ರ ಅದರ ಮೌಲ್ಯಕ್ಕೆ ಬೆಲೆ. ಒಂದು ವ್ರತವನ್ನು ಅದರ ನಿಯಮಗಳ ಪ್ರಕಾರ ಮಾಡದಿದ್ದರೆ ವ್ರತಾಚರಣೆ ಪೂರ್ತಿಯಾಗುವುದಿಲ್ಲ. ಆದರೆ ಮನೋರಂಜನೆಗೆ(ಅದರಲ್ಲಿ ಭಕ್ತಿಯೂ, ಬೇರೆ ಮೌಲ್ಯಗಳು ಇದ್ದರೂ) ಇರುವ ಕಲಾಪ್ರಕಾರಗಳು, ಪ್ರೇಕ್ಷಕ ಮತ್ತು ಸಮಾಜಗಳೆರಡರ ಬದಲಾವಣೆಯನ್ನು ಗಮನಿಸದೇ ಶುದ್ಧ ಎನ್ನುವುದನ್ನು ಹೇಗೆ ಪ್ರತಿಪಾದಿಸುತ್ತವೆ, ಆ ಹೊಸ ‘ಶುದ್ಧ ಪರಂಪರೆ’ಗೆ ಪ್ರೇಕ್ಷಕರನ್ನು ಹೇಗೆ ಸೃಷ್ಟಿಸಿಕೊಂಡಿವೆ ಅನ್ನುವುದು ಕುತೂಹಲಕರ.