ಅದೇ ಅವನು ನಮ್ಮಪ್ಪ ನರಭಕ್ಷಕ ಬಾಂಡ್ಲಿಯಲ್ಲಿ ಬೋಂಡ ಹಾಕುತಿದ್ದ. ಅವನ ಹೆಂಡತಿ ಸಪ್ಲೆರ‍್ರಾಗಿದ್ದಳು. ಪುಟ್ಟ ಹುಡುಗಿ; ಅವಳ ಹೆಸರು ಮೀನಾಕ್ಷಿ, ಶಾಲೆಗೆ ಸೇರಿದ್ದಳೊ ಇಲ್ಲವೊ ಗೊತ್ತಿರಲಿಲ್ಲ. ಅವಳ ತಾಯ ತದ್ರೂಪ. ಅಲಲಲಾ… ಎಂತಹ ಪಾಳೆಯಗಾರ… ಇಲ್ಲಿ ಫುಟ್‌ಪಾತಲ್ಲಿ ಬಂದು ಬಿದ್ದಿದ್ದಾನಲ್ಲಾ. ಇವನೆನಾ ನಮ್ಮಪ್ಪ! ಕೊಂದು ಬಿಡಲು ಎಷ್ಟು ಸಲ ಯತ್ನಿಸಿ ವಿಫಲನಾಗಿದ್ದನಲ್ಲಾ! ಈಗ ಇಲ್ಲಿ ಈ ಪಾಡಿನಲ್ಲಿ. ಮೆರೆದಿದ್ದವನ ಗತಿಯೇ ಇದೂ ಎಂದು ಗಕ್ಕನೆ ನಿಂತೆ. ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯಲ್ಲಿ ಮೊಗಳ್ಳಿ ಗಣೇಶ್ ಬರೆದ ಆತ್ಮಕತೆಯ  ಇಪ್ಪತ್ತನಾಲ್ಕನೆಯ ಕಂತು ಇಲ್ಲಿದೆ. 

 

ಹೆಚ್ಚು ಕಡಿಮೆ ಶಿವರಾಂ ನಮ್ಮ ಸಹವಾಸ ಬಿಟ್ಟಿದ್ದ. ಅವನ ತಾಯಿಯ ಆರೋಗ್ಯದ ಹೊಣೆ ಅವನ ತಲೆ ಮೇಲೆ ಬಿದ್ದಿತ್ತು. ಅವನ ಅಪ್ಪನೂ ನನ್ನ ಅಪ್ಪನಂತೆಯೇ ಕೇಡಿಯಾಗಿದ್ದ. ಮುಂದೆ ಎಂ.ಎ. ಓದುವ ಉತ್ಸಾಹ ಇಲ್ಲ ಎಂದಿದ್ದ. ಭಾಗಶಃ ಮತ್ತೆ ಆ ಇಂಗ್ಲೀಷಿನಲ್ಲಿ ಫೇಲಾಗುವ ಭಯ ಇತ್ತೇನೊ. ನನ್ನ ನೂರೆಂಟು ಆಸಕ್ತಿಗಳನ್ನು ಖಚಿತ ದಾರಿಗೆ ತಂದುಕೊಳ್ಳಲಾರದೆ ಅಲ್ಲೊ ಇಲ್ಲೊ ಎಲ್ಲೊ ಎಂಬ ಪರದಾಟದಲ್ಲಿದ್ದೆ. ಆಗಲೇ ಸಾಕೇತ್ ರಾಜ್ ಹತ್ತಿರವಾದದ್ದು. ರಶೀದ್‌ಗೆ ಆತ ಆಪ್ತನಾಗಿದ್ದ. ಅವನ ಸಲಹೆ ಮೇರೆಗೆ ರಶೀದ್ ‘ವಿಮೋಚನಾ’ ಪತ್ರಿಕೆ ತರುತ್ತಿದ್ದಾನೆಂದು ಕಾಲೇಜಿನ ಕಾರಿಡಾರಿನಲ್ಲಿ ಗೆಳೆಯರು ಮಾತಾಡುತ್ತಿದ್ದರು. ಸಾಕೇತ್ ನಕ್ಸಲ್‌ವಾದಿ ಆಗಿದ್ದ. ರಶೀದ್ ಉದಾರವಾದಿ ಸ್ನೇಹಿತನಾಗಿದ್ದ. ಅವನಲ್ಲಿ ಅಂತಹ ವೆಪನ್ ಮಾತುಗಳೇ ಇರಲಿಲ್ಲ. ಜೋರಾಗಿ ಯಾರನ್ನಾದರೂ ರಶೀದ ಗದರಿದ್ದನ್ನೆ ಕಂಡಿರಲಿಲ್ಲ. ಬಹಳ ಸೌಮ್ಯ ಕೋಮಲ ಸ್ವಭಾವದವನಾಗಿದ್ದ. ಅಂತವನು ಉಗ್ರವಿಚಾರವಾದಿ ಆಗಲು ಸಾಧ್ಯವೇ ಇರಲಿಲ್ಲ. ಆ ಕಾಲದಲ್ಲಿ ನಾವು ಎಂತಹ ಸುಂದರ ಪ್ರಜಾಸತ್ತೆಯ ಬಳಗದಲ್ಲಿ ಬೆಳೆಯುತ್ತಿದ್ದೆವು ಎಂದು ನೆನೆದರೆ ಇದು ಹೇಗೆ ಸಾಧ್ಯವಾಗಿತ್ತು ಎಂದು ಅಚ್ಚರಿಯಾಗುತ್ತದೆ. ಒಂದೇ ವೇದಿಕೆಯಲ್ಲಿ ಮಾರ್ಕ್ಸ್ವಾದಿ, ಮಾವೋವಾದಿ, ಅಂಬೇಡ್ಕರ್‌ವಾದಿ, ಸಮಾಜವಾದಿ, ಗಾಂಧಿವಾದಿಗಳು ಒಟ್ಟಾಗಿ ಕೂತು ತಮ್ಮ ವಿಚಾರಗಳ ಮಂಡಿಸುತ್ತಿದ್ದರು. ಯಾರೊಬ್ಬರಲ್ಲು ಒಡಕಿರಲಿಲ್ಲ. ಅತ್ತ ಗಾಂಧಿವಾದಿ ಸಂಜೀವಯ್ಯ ಕೂತಿದ್ದರೆ ಇತ್ತ ಮಾವೋವಾದಿ ರಾಮಲಿಂಗಮ್ ಆಸೀನರಾಗಿ ನಗುನಗುತ್ತ ಮಾನವ ಸಂಬಂಧಗಳನ್ನು ಹಂಚಿಕೊಳ್ಳುತ್ತಿದ್ದರು. ಎಲ್ಲಾ ವಾದಗಳ ಆಚೆ ಮಾನವತಾವಾದವೇ ಶ್ರೇಷ್ಠ ಎಂದು ದಲಿತ ಸಂಘರ್ಷ ಸಮಿತಿಯವರು ಆರ್ದ್ರವಾಗಿ ನಡೆದುಕೊಳ್ಳುತ್ತಿದ್ದರು.

ಅಂತಹ ಪಕ್ವಕಾಲ ಮತ್ತೊಮ್ಮೆ ಬರುತ್ತದೊ ಇಲ್ಲವೊ ಗೊತ್ತಿಲ್ಲ. ರೈತ ಸಂಘದ ನಂಜುಂಡ ಸ್ವಾಮಿಯವರು ಆಗ ತಾನೆ ತಮ್ಮ ಬಾರುಗೋಲು ಬೀಸಿ ಬಿಸಿ ಮುಟ್ಟಿಸಿದ್ದರು. ದೇವನೂರು ಮಹದೇವ ಅವರು ಅವತ್ತಿಗೂ ರೈತ ಸಂಘದ ಜೊತೆಗೆ ದಸಂಸವನ್ನು ಸಂಯೋಗಿಸಿಕೊಂಡಿದ್ದರು. ಅತ್ತ ಪ್ರೊ.ಬಿ.ಕೃಷ್ಣಪ್ಪ ಅವರು ಭಿನ್ನವಾಗಿದ್ದರು. ಜಾತಿ ವ್ಯವಸ್ಥೆ ಹಾಗೂ ಊಳಿಗಮಾನ್ಯ ವ್ಯವಸ್ಥೆಯ ಕೊಂಡಿಯಂತಿರುವ ರೈತಸಂಘದ ಜೊತೆ ತಮಗೇಕೆ ಸ್ನೇಹ ಎಂದು ಭೂ ಹೋರಾಟಗಳಲ್ಲಿ ಮುಳುಗಿ ದಲಿತರಿಗೆ ಜೀತ ಬೇಡ , ಭೂಮಿ ಬೇಕೆಂದು ಸರ್ಕಾರದ ವಿಧಾನಸೌಧದ ಮುಂದೆ ಘರ್ಜಿಸಿ ತಮಟೆ ಚಳುವಳಿ ಮಾಡಿ ಅರೆಬೆತ್ತಲೆಯಾಗಿ ಕೂಗಿ ಮಾರ್ದನಿಸಿದ್ದರು. ಅತ್ತ ಸಿದ್ಧಲಿಂಗಯ್ಯ ಮಾರ್ಕ್ಸ್ವಾದಿ ಬಂಡಯಗಾರನಾಗಿ ದಲಿತ ಕವಿಯಾಗಿ ಗಮನ ಸೆಳೆದಿದ್ದರು.

ಅಂತಹ ಸಲಿಗೆ ಆಪ್ತತೆ ಹೊಂದಾಣಿಕೆ ಸಿದ್ಧಲಿಂಗಯ್ಯ, ದೇವನೂರು ಮಹಾದೇವ,  ಕೃಷ್ಣಪ್ಪ ಅವರ ನಡುವೆ ಇರಲಿಲ್ಲ. ಮೂರು ಜನ ಮೂರು ದಾರಿಯಲ್ಲಿದ್ದರು. ನಾನೊ; ಈ ಮೂರು ನಾಯಕರಿಂದ ದೂರವೇ ಇದ್ದೆ. ಆ ಮೇಲೆ ಹತ್ತಿರವಾದದ್ದು ಬರಹಗಾರ ಎಂದು ಗುರುತಾದ ನಂತರದಲ್ಲಿ. ಇವರ ನಡುವೆ ವ್ಯಕ್ತಿಗತ ಅಂತರವಿತ್ತು. ನಮಗೆ ಅದರ ಅವಶ್ಯಕತೆ ಇರಲಿಲ್ಲ. ಎಲ್ಲರನ್ನೂ ಗೌರವಿಸಿ ಹಿಂಬಾಲಿಸುತ್ತಿದ್ದೆವು. ಸಾಕೇತ್ ಈ ಬಗೆಯ ಯಾವ ವ್ಯಕ್ತಿಗಳ ಬಗೆಗೂ ಚಕಾರವನ್ನೇ ಎತ್ತಿರಲಿಲ್ಲ. ಅವನದೆಲ್ಲ ವಿಶ್ವಚರಿತ್ರೆಯ ವಿಸ್ಮಯ ಪಾಠ. ತಣ್ಣಗೆ ಮಲೆನಾಡಿನ ಕಾಡಿನಲ್ಲಿ ಮಳೆ ಹಿಡಿದಂತೆ ಧೋ ಎಂದು ಮಾನವ ಸಮಾಜಗಳ ವಿಕಾಸದ ಏಳು ಬೀಳುಗಳನ್ನು ತಗ್ಗಿದ ದನಿಯಲ್ಲಿ ಮಾಂತ್ರಿಕವಾಗಿ ಹೇಳುತ್ತಿದ್ದ. ಅಬ್ಬರವೇ ಇಲ್ಲದ ಮಿಣುಕು ನಕ್ಷತ್ರದಂತೆ ಗೋಚರಿಸುತ್ತಿದ್ದ. ಅದೂ ದಟ್ಟ ಅಮವಾಸ್ಯೆಯ ನಟ್ಟಿರುಳಲ್ಲಿ ಅಸ್ಪಷ್ಟವಾಗಿ ಕಾಣುವಂತಿದ್ದ. ಒಮ್ಮೊಮ್ಮೆ ಪಿಸುಮಾತಿನಂತಿದ್ದವು ಅವನ ಆಳದ ನುಡಿಗಳು. ಕಿವಿ ನಿಮಿರಿಸಿ ಕೇಳಿಸಿಕೊಳ್ಳಬೇಕಿತ್ತು.

ಆತನ ಆ ಮಾತುಗಳನ್ನು ಅರಿಯಬೇಕಾದರೆ ವ್ಯಾಪಕವಾದ ಓದಿನ ಹರವು ಬೇಕಿತ್ತು. ಅಂತಹ ಪುಸ್ತಕಗಳ ಪಟ್ಟಿಯನ್ನೇ ಕೊಡುತ್ತಿದ್ದ. ಓದಿ ಇಡೀಯಾಗಿ ಗ್ರಹಿಸಲು ಕಷ್ಟವಾಗುತ್ತಿತ್ತು. ಆ ತರದ ಯಾವ ಕೃತಿಗಳೂ ಪಠ್ಯ ಪುಸ್ತಕವಾಗಿರಲಿಲ್ಲ. ಅವನ್ನು ಓದಿ ಯಾವ ಪರೀಕ್ಷೆ ಬರೆಯಬೇಕು ಎಂದು ಆಲಸ್ಯ ತೋರುತ್ತಿದ್ದೆ. ಆದರೆ ಆದಾಗಲೆ ನಕ್ಸಲ್ ಪರ ಧೋರಣೆ ನನ್ನ ಕಣ್ಣಲ್ಲಿ ಇಣುಕಿ ನೋಡುತಿತ್ತು. ವ್ಯತ್ಯಾಸಗಳೇ ಇಲ್ಲದೆ ಹೀಗೆ ಎಲ್ಲವನ್ನೂ ಸ್ವೀಕರಿಸುವುದು ಸರಿಯೇ ಎಂದು ಶ್ರೀಧರ ಕೇಳಿದ್ದ. ಅವನು ಇವೆಲ್ಲವನ್ನು ಕೇಳಿಸಿಕೊಂಡು ಬಿಟ್ಟು ಮುಂದೆ ಹೊರಟು ಹೋಗುತ್ತಿದ್ದ. ‘ಆ ಸಾಕೇತ್ ಸರಿ ಇಲ್ಲಾ; ಉಷಾರಾಗಿರು’ ಎಂದಿದ್ದ. ಅವನಿಂದೇನು ಅಪಾಯ ಎಂದು ಕೇಳಿದ್ದೆ. ‘ಆ ಕೂಡಲೆ ಕಾಣುವ ಅಪಾಯದ ದಾರಿ ಅವನದಲ್ಲಾ… ಆ ದಾರಿಯಲ್ಲಿ ಬಹಳ ಮುಂದೆ ಸಾಗಿ ಹೋಗಿ ಜಾರಿಬಿದ್ದಾಗಲೇ ಅದು ಎಂತಹ ಅಪಾಯ ಎಂಬುದು ತಿಳಿಯುವುದು’ ಎಂದು ಓದಿನಲ್ಲಿ ಮುಳುಗಿದ್ದ. ಅರ್ಥ ಆಗ್ಲಿಲ್ಲ ಎಂದಿದ್ದೆ. ‘ಮುಂದೆ ನಿನಗೇ ಗೊತ್ತಾಗುತ್ತೆ ಬಿಡೊ’ ಎನ್ನುತ್ತ ಉತ್ಸಾಹ ತೋರಲಿಲ್ಲ. ಮುಗ್ಧನಾಗಿದ್ದೆ.

ಆಗ ನಾವು ಗೆಳೆಯರು ಮಧ್ಯ ರಾತ್ರಿ ತನಕ ಬೇಕಾದ್ದು ಬೇಡವಾದ್ದು ಎಲ್ಲವನ್ನು ಇಡಿಯಾಗಿ ಓದುತ್ತಿದ್ದೆವು. ರತಿ ವಿಜ್ಞಾನವನ್ನೂ ಬಿಡುತ್ತಿರಲಿಲ್ಲ. ಒಂದು ರೂಮಿನಿಂದ ಇನ್ನೊಂದು ರೂಮಿಗೆ ಆ ರತಿವಿಜ್ಞಾನ ಪತ್ರಿಕೆ ಹರಿದಾಡಿ ಏನೇನೊ ಆಗಿಬಿಟ್ಟಿರುತ್ತಿತ್ತು. ಎಷ್ಟೋ ಹಳೆಯ ಸಂಚಿಕೆಗಳ ಬಚ್ಚಿಟ್ಟುಕೊಂಡಿದ್ದ ಒಬ್ಬ ಗೆಳೆಯ ಇದ್ದ… ಎತ್ತಣಿಂದೆತ್ತ ಸಂಬಂಧ… ಆ ಮಾವೋವಾದಿ ವಿಚಾರಗಳ ನಡುವೆಯೇ ರತಿ ಸಂಭ್ರಮದ ಬರಹ ಮೈತುಂಬ ಹರಿದಾಡಿ ಬಿಡುತ್ತಿತ್ತು. ಏನೋ ಗಿಲ್ಟ್ ಕಾಡುವುದಿತ್ತು. ನನ್ನ ತಾಯಿ ಆಗ ಯಾವತ್ತೂ ಹೇಳುತ್ತಿದ್ದ ‘ನಾಕಕ್ಸರವ ಕಲ್ತಕಲಾ’ ಎನ್ನುತ್ತಿದ್ದ ನುಡಿ ಮತ್ತೆ ಮತ್ತೆ ಮನದಲ್ಲಿ ಪಿಸುಗುಡುತ್ತಿತ್ತು. ಎಲ್ಲರಂತೆ ನಾನೂ ಒಂದು ಪುಸ್ತಕದ ಹುಳುವಾಗಿ ಚಿಟ್ಟೆಯಾಗಿಬಿಡಬಹುದಲ್ಲವೇ… ಯಾಕಿದೆಲ್ಲ ನನಗೆ ಎಂದು ಹಿಂದೆ ಸರಿಯುವಂತಾಗುತ್ತಿತ್ತು.

ಅದಾಗಲೇ ಎಲ್ಲ ಪೂರ್ವನಿರ್ಧಾರ ಆಗಿಬಿಟ್ಟಿದೆ ಎಂದು ಎಡವುತ್ತ ನಡೆದಿದ್ದೆ. ಹೋಗಿ ತಲುಪುವ ದಡವನ್ನು ಮೊದಲೆ ಯಾರು ತೀರ್ಮಾನಿಸಿರುತ್ತಾರೇ… ತಂದೆ ತಾಯಿ ಬಂಧುಗಳೇ; ಗುರು ಹಿರಿಯ ಮಾದರಿಗಳೇ; ನಮ್ಮ ನಮ್ಮ ಅಪಮಾನ ಸುಖದುಃಖಗಳೇ… ಯಾವುವು ನಮ್ಮ ಗತಿಯನ್ನು ನಿರ್ಣಯಿಸುವ ಸಂಗತಿಗಳು? ಗೊತ್ತಾಗುತ್ತಿರಲಿಲ್ಲ. ವಿಧಿಯನ್ನು ನಂಬುತ್ತಿರಲಿಲ್ಲ. ನಮ್ಮ ಸತತ ಯತ್ನವೇ ಸಾಗುವ ಸೂಕ್ತ ದಾರಿಯ ದಡವೇ; ಅದಕ್ಕೆ ಕೊನೆಯೇ ಇಲ್ಲವಲ್ಲಾ ಎಂದು ಅವನ್ನೆಲ್ಲ ಬಿಟ್ಟು ಕ್ರಿಕೆಟ್ ಮೈದಾನಕ್ಕೆ ಓಡಿ ಹೋಗುತಿದ್ದೆ. ಆ ವಸಾಹತುಶಾಹಿ ಬ್ರಿಟೀಷರು ಕಲಿಸಿರುವ ಆ ಆಟಕ್ಕೆ ನಾವ್ಯಾಕೆ ಇಷ್ಟೋಂದು ಮುಗಿ ಬೀಳಬೇಕು ಎಂದು ವಿಚಾರವಾದಿಗಳು ತಡೆದಿದ್ದರು. ಕ್ರಿಕೆಟ್ ಆಟ ನನ್ನ ಯಾವತ್ತಿನ ಸುಖವಾಗಿತ್ತು. ಅದೇ ಕಾಲೇಜಿನ ಗ್ರೌಂಡಿನಲ್ಲಿ ಸಂಜೆ ವೇಳೆ ಪ್ರಾಕ್ಟೀಸ್ಗೆ ಹೋಗುತ್ತಿದ್ದೆ. ಕೋಚ್ ರೇಗುತ್ತಿದ್ದರು. ನೀನು ಇಷ್ಟೋಂದು ರ‍್ರೆಗ್ಯುಲರ್ ಆದರೆ ಜೀವನದಲ್ಲಿ ಏನು ಶಿಸ್ತು ರೂಢಿಸಿಕೊಳ್ಳುವೆ ಎಂದು ಎಚ್ಚರಿಸುತ್ತಿದ್ದರು.

ಅದಾಗಲೇ ಎಲ್ಲ ಪೂರ್ವನಿರ್ಧಾರ ಆಗಿಬಿಟ್ಟಿದೆ ಎಂದು ಎಡವುತ್ತ ನಡೆದಿದ್ದೆ. ಹೋಗಿ ತಲುಪುವ ದಡವನ್ನು ಮೊದಲೆ ಯಾರು ತೀರ್ಮಾನಿಸಿರುತ್ತಾರೇ… ತಂದೆ ತಾಯಿ ಬಂಧುಗಳೇ; ಗುರು ಹಿರಿಯ ಮಾದರಿಗಳೇ; ನಮ್ಮ ನಮ್ಮ ಅಪಮಾನ ಸುಖದುಃಖಗಳೇ… ಯಾವುವು ನಮ್ಮ ಗತಿಯನ್ನು ನಿರ್ಣಯಿಸುವ ಸಂಗತಿಗಳು? ಗೊತ್ತಾಗುತ್ತಿರಲಿಲ್ಲ.

ಆ ಕಬಡ್ಡಿ ಆಟವನ್ನು ತಮಾಷೆಗಾಗಿ ನೋಡುತ್ತಿದ್ದೆ. ಹಿಡಿಯಲು ಹೋಗಿ ಬಿದ್ದು ಮಂಡಿ ತರಚಿಕೊಂಡು ಕೂತವರ ಕಂಡರೆ ನಗು ಬರುತ್ತಿತ್ತು. ಕ್ರಿಕೆಟ್‌ನಲ್ಲಿ ಜಾಣ್ಮೆಗೆ ವಿಶೇಷ ಅವಕಾಶ ಕಂಡಿತ್ತು. ಈಗ ಯಾರೂ ನಂಬುವುದಿಲ್ಲ ನಾನೊಬ್ಬ ಕ್ರಿಕೆಟ್ ಆಟಗಾರ ಆಗಿದ್ದೆ ಎಂದು ಹೇಳಿಕೊಂಡರೆ. ನಾನೀಗಲೂ ಅಂಗಳಕ್ಕಿಳಿದು ಆಟ ಆಡಬಲ್ಲೆ. ಚಾಣಾಕ್ಷತೆಯಿಂದ ಆಡುತ್ತಿದ್ದೆ. ಕೋಚ್ ಬೆನ್ನುತಟ್ಟಿ ನಿನಗೆ ಇದರಲ್ಲಿ ಭವಿಷ್ಯ ಇದೆ ಎಂದು ಹೊಗಳಿದ್ದರು. ಆ ಕಾಲಕ್ಕಾಗಲೇ ಇನ್‌ಸ್ವಿಂಗ್ ಔಟ್‌ಸ್ವಿಂಗ್‌ಗಳನ್ನು ಹಾಕುತ್ತಿದ್ದೆ. ವಿಕೆಟ್‌ಗಳು ಉರುಳಿ ಬೀಳುವುದನ್ನು ನೋಡುವುದೆ ಪರಮಾನಂದವಾಗಿತ್ತು. ‘ಅಣ್ಣಾ; ನಾನು ಕ್ರಿಕೆಟ್ ಎಂಗೆ ಆಡ್ತಿನಿ ಅಂತಾ ಒಂದ್ಸಲ ಬಂದು ನೋಡಣ್ಣಾ’ ಎಂದು ಮಳವಳ್ಳಿ ಪೈಲ್ವಾನನನ್ನು ಕೋರಿಕೊಂಡಿದ್ದೆ. ಜಿಮ್ ಮುಗಿಸಿ ಬಂದು ಬೌಂಡರಿ ಲೈನಲ್ಲಿ ನಿಂತು ಆತ ನನ್ನ ಬೌಲಿಂಗ್ ಸಾಮರ್ಥ್ಯವನ್ನು ನೋಡಿ ಅಳೆದಿದ್ದ. ನಾನು ಕಾಲೇಜು ಟೀಂನ ಆಟಗಾರನಾಗಿದ್ದೆ. ಕ್ರಿಕೆಟ್ ಆಟದ ಎಲ್ಲ ತಂತ್ರಗಳನ್ನು ಕಲಿತಿದ್ದೆ.

ಹಾಸ್ಟಲಿಗೆ ಬಂದು ಕೂತಿದ್ದಾಗ ಆ ಪೈಲ್ವಾನ್ ಮೆಚ್ಚಿ ಮಾತಾಡಿದ್ದ. ‘ಅಲ್ಲೋ ಇಷ್ಟು ಒಣಕಲಾಗಿದ್ದೀಯೇ; ಅದೆಂಗೊ ಬಿರುಗಾಳಿಯಂಗೆ ನುಗ್ಗಿ ಬಂದು ಬೌಲಿಂಗ್ ಮಾಡ್ತಿಯಲ್ಲೊ… ಬೇಸ್… ಚೆನ್ನಾಗಾಡ್ತಿಯೇ’ ಎಂದಿದ್ದ. ಅಂತಹ ಪೈಲ್ವಾನನಿಂದ ಹೊಗಳಿಸಿಕೊಂಡೆ ಎಂದು ಗೆಳೆಯರಿಗೆಲ್ಲ ಹೇಳಿಕೊಂಡಿದ್ದೆ. ವಿಚಿತ್ರ ಎಂದರೆ ಗೆಳೆಯರ ಬಳಗದಲ್ಲಿ ನಾನೊಬ್ಬನೆ ಕ್ರಿಕೆಟ್ ಆಡುತಿದ್ದುದು. ಫೀಲ್ಡಿಂಗಿನಲ್ಲಿ ಬಹಳ ಕಳಪೆಯಾಗಿದ್ದೆ. ಬ್ಯಾಟಿಂಗ್‌ನಲ್ಲಿ ಸಾಧಾರಣ ಇದ್ದೆ. ಆಗೆಲ್ಲ ಕ್ರಿಕೆಟ್, ಹಾಕಿ, ವಾಲಿಬಾಲ್ ಆಡುತ್ತಿದ್ದವರಲ್ಲಿ ಕೊಡಗು ಮಂಗಳೂರು ಸೀಮೆಗಳಿಂದ ಬಂದವರೇ ಹೆಚ್ಚಿದ್ದರು. ಇನ್ನೂ ಕಬಡ್ಡಿಯಲ್ಲಿ ಮಂಡ್ಯದವರದೆ ಮೇಲುಗೈ. ನನ್ನ ಮಿತ್ರರಲ್ಲಿ ಕ್ರೀಡೆಯತ್ತ ಗಮನವೇ ಇರಲಿಲ್ಲ. ಹಾಗಾಗಿ ಅಲ್ಲಿ ಆಟದಲ್ಲಿ ಅನ್ಯ ಎನ್ನುವ ಕೊರತೆ ಎದುರಾಗುತಿತ್ತು. ಹಳ್ಳಿಯ ನನ್ನಂತಹ ಬಡವನನ್ನು ಸಹ ಆಟಗಾರರು ನಿರ್ಲಕ್ಷö್ಯ ಮಾಡುತಿದ್ದರು. ಬೇಸರವಾಗಿ ಕ್ರೀಡಾಂಗಣದ ಸಹವಾಸವನ್ನೇ ಬಿಟ್ಟಿದ್ದೆ. ಆಟಕ್ಕೆ ಬೇಕಾದ ಪರಿಕರಗಳನ್ನು ಕೊಳ್ಳಲು ನನ್ನ ಬಳಿ ಯಾವ ದುಡ್ಡೂ ಕೂಡ ಇರಲಿಲ್ಲ. ಒಂದೇ ಒಂದು ಕ್ರಿಕೆಟ್ ಕ್ಯಾಪ್ಗಾಗಿ ನಾನು ಗೆಳೆಯರ ಮುಂದೆ ಹಪಹಪಿಸಿ ಬೇಡುತ್ತಿದ್ದೆ.

ಕ್ರಿಕೆಟ್ನಲ್ಲಿ ನನಗೆ ಪೂರ್ವ ನಿರ್ಧಾರ ಏನಾಗಿತ್ತು ಎಂಬುದು ಬೇಗನೆ ಗೊತ್ತಾಗಿತ್ತು. ಹೋರಾಟ ಮಾಡಲು ಕಾಸು ಬೇಕಿರಲಿಲ್ಲ. ಮಹಾತ್ಮಗಾಂಧೀಜಿ ಸ್ವಾತಂತ್ರö್ಯ ಹೋರಾಟಕ್ಕಾಗಿ ಎಷ್ಟು ಮಹಾಕೋಟಿ ಖರ್ಚು ಮಾಡಿದ್ದರು? ಅಂಬೇಡ್ಕರ್ ತಮ್ಮ ಪ್ರಾಣವನ್ನೇ ನ್ಯಾಯಕ್ಕಾಗಿ ಪಣವಿಟ್ಟಿದ್ದರು. ಕ್ರಾಂತಿಗಳು ಬಂಡವಾಳ ಹಾಕಿ ಹೋರಾಟ ಮಾಡಿದ್ದರಿಂದ ಆದವಲ್ಲ… ಅವು ಬಂಡವಾಳಶಾಹಿ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದವು ಅಲ್ಲವೇ? ಆ ಕ್ರಿಕೆಟ್ ಕೂಡ ಶ್ರೀಮಂತರ ಶೋಕಿ ಆಟವಾಗಿ ಕಂಡು ಹತಾಶೆಯಿಂದ ಅದರಿಂದ ದೂರವಾದೆ. ದಿಕ್ಕಾರವ ಮೊಳಗಿಸಲು ಒಂದು ಬೈಟೂ ಟೀ ಇದ್ದರೆ ಸಾಕಿತ್ತು. ನಮ್ಮ ಗಂಟಲಿಗೆ ಸಿಂಹದನಿ ಬಂದುಬಿಡುತ್ತಿತ್ತು. ಸಾವಿರಾರು ವರ್ಷಗಳ ಅಪಮಾನಗಳ ವಿರುದ್ಧ ದಂಗೆ ಏಳಲು ಬಿಡಿಗಾಸು ತಾನೆ ಯಾಕೆ ಬೇಕಿತ್ತು? ನ್ಯಾಯ ಪ್ರಜ್ಞೆ ಸಾಕಿತ್ತು! ಇತಿಹಾಸದಲ್ಲಿ ಆದ ಎಲ್ಲ ಕ್ರಾಂತಿಗಳು ದಟ್ಟ ದರಿದ್ರರಿಂದಲೇ ತಾನೆ ಘಟಿಸಿದ್ದೂ… ಶ್ರೀಮಂತರು ಯಾವ ಕ್ರಾಂತಿ ಮಾಡಿದ್ದಾರೆ? ಯಾವ ಯುದ್ಧಗೆದ್ದಿದ್ದಾರೆ? ಯಾವ ಮಹಾನ್ ಪರಂಪರೆಗಳನ್ನು ಬೆಳಗಿಸಿದ್ದಾರೆ? ಸಾಮಾನ್ಯವಾಗಿದ್ದು ಅಸಾಮಾನ್ಯನಾಗುವುದು ಹೇಗೆ ಎಂದು ದಾರಿ ಹುಡುಕುತ್ತಿದ್ದೆ. ಮೊದಲ ಬಾರಿಗೆ ಸಾಕೇತ್ ನನ್ನ ಕೊಠಡಿಗೆ ವಿಶೇಷವಾಗಿ ಬಂದ. ಎರಡನೇ ವರ್ಷದಲ್ಲಿ ನನ್ನ ಕೊಠಡಿಯ ಸಹವಾಸಿ ಯಾರಾಗಿದ್ದರು ಎಂದರೆ ಸ್ವತಃ ನಾನೇ ಅನುಮಾನ ಪಡುವಂತಿದೆ. ಅವನು ಯಾವಾಗಲೂ ಹೊರಗೇ ಇರುತ್ತಿದ್ದ. ರಾತ್ರಿ ತಡವಾಗಿ ಬರುತ್ತಿದ್ದ. ಅವನ ತಂದೆ ತಾಯಿ ಅಕ್ಕ ಮಾವ ಎಲ್ಲರೂ ಇಂಗ್ಲೆಂಡಿನಲ್ಲಿದ್ದರು. ಥೇಟ್ ಮಧ್ಯ ಏಷ್ಯಾದವನಂತಿದ್ದ. ಅಂತಹ ಚಲುವಾಂಗ. ಆ ಮೇಲೆ ಅವನ ಬಗ್ಗೆ ಬರೆದರಾಯ್ತು…

ಸಾಕೇತ್ ತಣ್ಣಗೆ ನನ್ನ ಬಾಲ್ಯಕಾಲದ ವಿವರಗಳನೆಲ್ಲ ವಿಚಾರಿಸಿಕೊಂಡ. ನಾನು ಭಾವುಕನಾಗಿ ಅದೇ ನನ್ನ ಅಪ್ಪ ತಾಯಿಯನ್ನು ಹೇಗೆ ಕೊಂದುಬಿಟ್ಟ ಎಂದು ದುಃಖಳಿಸುತ್ತ ವಿವರಿಸುತ್ತಿದ್ದೆ. ಅವನ ಕಣ್ಣುಗಳು ಒದ್ದೆಯಾಗಿದ್ದವು. ಸಂತೈಸಿದ. ಕರೆದೊಯ್ದು ಚಹಾ ಬನ್ನು ಕೊಡಿಸಿದ. ಅವನ ಬಳಿ ದುಡ್ಡು ಇದ್ದದ್ದನ್ನೆ ನಾನು ಕಂಡಿರಲಿಲ್ಲ. ಹಸಿವನ್ನು ಗೆಲ್ಲುವ ಯತಿಯಂತಿದ್ದ. ಯಾವತ್ತು ಮಾಸಿದ ಹಳೆ ಬಟ್ಟೆಯಲ್ಲೇ ಇರುತ್ತಿದ್ದ. ಸುಡೋ ಕ್ರಾಂತಿಕಾರಿಗಳ ವೇಷ ಅದಾಗಿರಲಿಲ್ಲ. ಅಕ್ಷರಶಃ ಅನಾಥನಂತಿದ್ದ. ನಾವು ಗೆಳೆಯರೆ ಅವನ ಕನಸಾಗಿದ್ದೆವು. ಅವನೇನು ಬಡತನವನ್ನು ನಟಿಸುತ್ತಿರಲಿಲ್ಲ. ಅವನ ತಂದೆ ಮಿಲಿಟರಿಯಲ್ಲಿದ್ದವರು. ಆಸ್ತಿಪಾಸ್ತಿ ಇದ್ದ ಕುಟುಂಬದಿಂದ ಬಂದಿದ್ದ. ಅವುಗಳ ಬಗ್ಗೆ ನಿರ್ಮೋಹವಿತ್ತು. ಹೋರಾಟದ ಕಲ್ಲು ಮುಳ್ಳಿನ ದಾರಿಯಲ್ಲಿ ಕಾಡುಕೊಂಪೆ ಕಗ್ಗತ್ತಲ ಪೊಟರೆ ಮರೆಯಲ್ಲಿ ಬಾಯಿ ರುಚಿಗೆ ಸಮಯವಿದೆಯೇ… ಸಾಧ್ಯವಿಲ್ಲಾ. ಅದಕ್ಕಾಗಿಯೇ ಈಗಿನಿಂದಲೆ ಕಠಿಣ ಬದುಕನ್ನು ಸಾಕೇತ್ ರೂಢಿಸಿಕೊಳ್ಳುತ್ತಿದ್ದ.

ಆಗ ಆತ ‘ಕಲಂ’ ಎಂಬ ಪತ್ರಿಕೆಯನ್ನು ತಾನೇ ಬರೆದು ಪ್ರಕಟಿಸುತ್ತಿದ್ದ. ಯಾವ ಪ್ರೆಸ್ಸಿನಲ್ಲಿ ನಿಗೂಢವಾಗಿ ಪ್ರಿಂಟಾಗುತ್ತಿತ್ತೋ ಏನೊ. ಶ್ರೀ ರಾಘವೇಂದ್ರಾಯ ನಮಃ ತರದ ಪತ್ರಿಕೆ ಅದಾಗಿರಲಿಲ್ಲ. ಕ್ರಾಂತಿಯ ಸಮರ ವೀರರಿಗೆ ಮಾತ್ರ ಸಂಬಂಧಿಸಿದ್ದ ಬರಹ ಅದರಲ್ಲಿದ್ದವು. ಕನ್ನಡ ಇಂಗ್ಲೀಷ್ ಎರಡೂ ಭಾಷೆಯಲ್ಲಿ ಪ್ರಕಟವಾಗಿ ಗೌಪ್ಯವಾಗಿ ಪ್ರಸಾರವಾಗುತ್ತಿದ್ದ ಪತ್ರಿಕೆ ಅದಾಗಿತ್ತು. ನಾನೆಂತಹ ಸಮರ ವೀರ! ನನ್ನ ಒಂದು ಕವಿತೆಯನ್ನು ಸಾಕೇತ್ ಪಡೆದು ಇಂಗ್ಲೀಷಿಗೂ ಅನುವಾದಿಸಿ ಪ್ರಕಟಿಸಿದ್ದ. ಅದು ಪ್ರಿಂಟಾಗಿ ಕೈ ತಲುಪಿದಾಗಲೇ ಗೊತ್ತಾಗಿದ್ದುದು. ನನಗಿಂತಲೂ ಒಳ್ಳೆಯ ಕವಿಗಳಿದ್ದರು. ಯಾಕೊ ಸಾಕೇತ್ ನನ್ನ ಪದ್ಯವನ್ನು ಆಯ್ಕೆ ಮಾಡಿಕೊಂಡಿದ್ದ. ನಾನು ಬರೆದಿದ್ದ ಆ ಕವಿತೆಯನ್ನು ಒಂದು ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಅಂಜುತ್ತ ಅಳುಕುತ್ತ ಓದಿದ್ದೆ. ಮಹಾರಾಜ ಕಾಲೇಜಿನ ಸೀನಿಯರ್ ಬಿ.ಎ.ಹಾಲ್‌ನಲ್ಲಿ ಜಿ.ಎಚ್.ನಾಯಕರ ಅಧ್ಯಕ್ಷತೆಯಲ್ಲಿ ವಾಚಿಸಿದ್ದೆ. ‘ಬಿಟ್ಟು ಬಿಡೀ ನನ್ನನ್ನು ಬಿಟ್ಟು ಬಿಡೀ; ಈ ರಕ್ತ ಸಿಕ್ತ ಬೀದಿಗಳನ್ನು ನೋಡಲಾರೆ, ಊರು ಕೇರಿಯಲ್ಲಿ ಧಗದಗಿಸುವ ಕೆನ್ನಾಲಿಗೆಯ ತಡೆಯಬೇಕು… ಹೋಗುವೆ ಬಿಟ್ಟು ಬಿಡೀ ನನ್ನ ನರಕಕ್ಕೆ’ ಹೀಗೆ ಸಾಗಿದ್ದ ಪೂರ್ಣ ಪದ್ಯವ ಆಲಿಸಿದ್ದ ಜಿ.ಎಚ್.ನಾಯಕರು ಸೂಕ್ಷ್ಮವಾಗಿ ಚುಚ್ಚುತ್ತಲೇ… ‘ಯಾರೂ ತಡೆದಿಲ್ಲವಲ್ಲಾ ನಿಮ್ಮನ್ನೂ. ಹಾಗೆ ಹೋಗಲೇ ಬೇಕೆನಿಸಿದರೆ ಹೊರಡಿ ಈಗಲೇ…. ಕಾವ್ಯ ಕರೆದೊಯ್ಯುವುದು ಕವಿಯನ್ನೆ, ಅವನ ಕಾಲಮಾನವನ್ನೆ, ಅವನ ಸಮುದಾಯವನ್ನೇ… ಕಟ್ಟಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ತಮಾಷೆಯಲ್ಲೇ ಮೆಚ್ಚಿದ್ದರು.

ಅವತ್ತು ಬಂಜಗೆರೆಯೂ ಕವಿತೆ ವಾಚಿಸಿದ್ದ. ಮೂಲೆ ಮರೆಯಲ್ಲಿದ್ದ ಸಾಕೇತ್ ಆಗಲೇ ಆ ಕವಿತೆಯನ್ನು ಪಡೆದು ಮರುವಾರವೆ ಪ್ರಕಟಿಸಿದ್ದು. ನಾನು ಕವಿಯೇ ಎಂದು ಪ್ರಕಟವಾಗಿದ್ದ ಕವಿತೆಯನ್ನು ಕದ್ದು ಮುಚ್ಚಿ ಅದೆಷ್ಟು ಸಲ ಓದಿದ್ದೆನೊ… ಇಂಗ್ಲೀಷಿನಲ್ಲಿ ನಾನು ಕವಿತೆ ಬರೆಯಲು ಸಾಧ್ಯವೇ ಎಂದು ಯತ್ನಿಸಿ ವಿಫಲನಾಗಿದ್ದೆ. ಏನೋ ವಿಶ್ವಾಸ ಮೂಡಿತ್ತು. ಭೂಗಳ ಚಳುವಳಿ ಎಂಬ ಹೊಸದೊಂದು ನುಡಿಗಟ್ಟು ಆಗಲೇ ನನ್ನ ಕಿವಿ ಮೇಲೆ ಬಿದ್ದದ್ದು. ಬಸವಣ್ಣನ ವಚನಕಾರರ ಚಳುವಳಿಯ ಧ್ವನಿಯಷ್ಟು ಸಲೀಸಾಗಿರಲಿಲ್ಲ ಆ ಮಾತು. ಆ ಶಬ್ಧ ಹತ್ತಾರು ನಿಗೂಢ ಜಾಲಗಳ ಶಸಸ್ತ್ರ ಹೋರಾಟಗಳ ಕಷ್ಟ ನಷ್ಟಗಳನ್ನೆಲ್ಲ ಮೈದುಂಬಿಕೊಂಡಿತ್ತು. ಬಹಿರಂಗವಾಗಿ ಆ ಪದವನ್ನು ಬಳಸುವಂತಿರಲಿಲ್ಲ. ಮುಕ್ತವಾಗಿ ವಿಚಾರ ಮಾಡಲು ಆಗುತ್ತಿರಲಿಲ್ಲ. ಅದರದೇ ಸಂಕೇತ ಪರಿಕಲ್ಪನೆಗಳಿದ್ದವು. ಮಾತುಗಳನ್ನು ಕೂಡ ಅಪಾಯಕಾರಿ ಆಯುಧಗಳ ಎಚ್ಚರದಿಂದ ಚಾಣಾಕ್ಷತೆಯಲ್ಲಿ ಬಳಸುವಂತಗೆ ನುಡಿಯಬೇಕಿತ್ತು. ಕಠಿಣ ಮಾರ್ಗ, ಆದರೆ ವಿಚಿತ್ರ ತಬ್ಬಲಿತನದಲ್ಲಿ ಅದು ನನ್ನನ್ನು ಸೆಳೆಯುತ್ತಲೆ ಇತ್ತು. ಸಾಕೇತ್ ನಿಗೂಢವಾಗಿ ಬಂದು ಹೊರಟು ಹೋಗುತಿದ್ದ. ಅತ್ತ ಕಾಲೇಜು, ಪಾಠ ಪ್ರವಚನ, ಪರೀಕ್ಷೆ ಇತ್ತ ಕ್ರಾಂತಿಕಾರಿಗಳ ಸಾಹಿತ್ಯ, ಸಾಮೀಪ್ಯ ಎರಡೂ ಕೂಡಿ ನನ್ನಲ್ಲಿದ್ದ ಹಾಸ್ಯ ಸ್ವಭಾವವೇ ಕಳಚಿಕೊಂಡು ಕೆಲವೇ ಗೆಳೆಯರ ಜೊತೆ ಮಾತ್ರ ಸಂಪರ್ಕ ಉಳಿಸಿಕೊಂಡೆ.

ಎಷ್ಟೋ ಬಾರಿ ಬಂಜಗೆರೆ, ರಶೀದ್‌ರಿಂದಲೂ ದೂರವಾಗಿ ನಿಗೂಢವಾಗಿರುತ್ತಿದ್ದೆ. ಸುಮ್ಮನೆ ಗಂಟೆಗಟ್ಟಲೆ ಲೈಬ್ರರಿಯಲ್ಲೇ ಓದುತ್ತ ಕಳೆದು ಹೋಗುತ್ತಿದ್ದೆ.
ಊರಿನತ್ತ ಮನಸೇ ಇರಲಿಲ್ಲ. ಅಲ್ಲಿನದ ನೆನೆದಂತೆಲ್ಲ ಏನೋ ವ್ಯಗ್ರತೆ. ಅವರೇ ನನ್ನ ಮೊದಲ ಶತ್ರುಗಳು ಎಂದು ಮನಸ್ಸಿನ ಗಾಯ ಒಸರಿದಂತಾಗುತ್ತಿತ್ತು. ಅದು ವಾಸಿಯಾಗದ ಗಾಯ; ಕಣ್ಣಿಗೆ ಕಾಣದ ಗಾಯ…. ಮದ್ದಿಲ್ಲದ ಗಾಯ ಮಾಯದ ಗಾಯ, ದೇಹದ ಯಾವ ಮೂಲೆಯಲ್ಲಿ ಹೊಕ್ಕಿದೆಯೊ ಎಂದು ಹುಡುಕಿದಂತೆಲ್ಲ ತಲೆ ನೋವು ವಿಪರೀತವಾಗುತ್ತಿತ್ತು. ಸಂತೈಸಿಕೊ ನಿನ್ನ ನೀನೇ ಎಂದು ಹೇಳಿದಂತೆ ತಾಯ ಮುಖ ಗೋಚರಿಸುತ್ತಿತ್ತು. ದಿನದಿಂದ ದಿನಕ್ಕೆ ಸೂಕ್ಷö್ಮವಾಗುತ್ತಿದ್ದೆ. ನಾಳೆ ಏನು ಎಂಬ ಚಿಂತೆ ಬಂದಾಗಲೆಲ್ಲ; ಇದ್ದಾನಲ್ಲ ಸಾಕೇತ್… ಅವನ ಹಿಂದೆ ಹೆಗಲಿಗೆ ಬಂದೂಕು ಏರಿಸಿಕೊಂಡು ಕಾಡಿಗೆ ಹೊರಟುಬಿಡುವುದಷ್ಟೇ ಉಳಿದಿರುವ ದಾರಿ ಎಂದು ನಿಟ್ಟುಸಿರು ಬಿಡುತ್ತಿದ್ದೆ.

ಹಾಗೆ ಸಂಕಟದಲ್ಲಿ ಒಂದು ದಿನ ಕೊಠಡಿಯಲ್ಲಿ ಗೋಡೆಗೆ ಒರಗಿ ಪುಸ್ತಕ ಹಿಡಿದು ಕಾಲು ನೀಡಿ ಯೋಚಿಸುತ್ತಿರುವಾಗ… ಯಾರೊ ಜೋರಾಗಿ ಬಾಗಿಲು ಬಡಿದರು. ಸಿಟ್ಟಾಯಿತು. ಒಂದು ಸಣ್ಣ ಅಶಿಸ್ತಿಗೂ ರೇಗುತ್ತಿದ್ದೆ. ‘ಯಾರೊ’ ಎಂದು ಗದರಿದಂತೆ ಕೇಳಿದೆ. ‘ನಾನು ಕಣ್ಲೇ ನಿನ್ನ ದೊಡ್ಡಣ್ಣ… ತಗಿಲಾ ಬಾಗ್ಲಾ’ ಎಂದ. ಅಹಾ ಪಾಪೀ ನೀನಿಲ್ಲಿ ತನಕ ಹುಡುಕಿಕೊಂಡು ಬಂದು ಬಿಟ್ಟೆಯಾ… ನನ್ನ ಮಾನ ಮರ್ಯಾದೆ ತೆಗೆಯಲು ಬಂದೆಯಾ ಎಂದು ಬಾಗಿಲು ತೆರೆದೆ. ಗಪ್ ಎಂದು ಸಾರಾಯಿ ವಾಸನೆ ಬಡಿಯಿತು. ಅವನಿಗೆ ನಾನಿದ್ದ ಜಾಗ ಚೆನ್ನಾಗಿ ಗೊತ್ತಿತ್ತು. ಅವನ ಇಬ್ಬರು ತಮ್ಮಂದಿರು ಇದೇ ಕ್ಯಾಂಪಸ್ಸಿನಲ್ಲಿ ಬಿ.ಎ. ಏಗಲಾರದೆ ಬಿಟ್ಟು ಹೋಗಿದ್ದರು. ಏನು ಎಂಬಂತೆ ದುರುಗುಟ್ಟಿ ನೋಡಿದೆ. ರೂಮಿನ ಒಳಕ್ಕೆ ನುಗ್ಗಿ ಬಂದ. ಅಹಂಕಾರದಲ್ಲಿ ತೆಗಳಿದ. ಅವನ ಸದ್ದಿಗೆ ಅಕ್ಕಪಕ್ಕದ ಕೊಠಡಿಯವರು ಬಂದರು. ‘ ಎಲ್ಲಿದ್ದಾವ್ಲ ನಿನ್ಕೆಕಾರ್ಡ್ಸು; ಕೊಡ್ಲಾಯಿಲ್ಲಿ ಅವಾ ನೋಡ್ಬೇಕೂ’ ಎಂದು ಸವಾಲು ಎಸೆದ. ‘ನನ್ಗೂ ನಿನ್ಗೂ ಸಂಬಂಧ ಇಲ್ಲಾ… ನೀನ್ಯಾವನು ಕೇಳುಕೇ… ಎದ್ದಾಚೆ ವೋಗೂ! ಇಲ್ಲಾ ಅಂದ್ರೆ ಆಚೆಗೆಸಿಬೇಕಾಯ್ತದೆ’ ಎಂದು ಉರಿಯ ತೊಡಗಿದೆ. ಕೈಮಿಲಾಯಿಸಲು ಬಂದ. ನೂಕಿದೆ. ಅದೆಲ್ಲಿದ್ದನೊ ಆ ಬ್ಲೇಡೇಟ್ ಚಿಕ್ಕಣ್ಣ. ಸದಾ ಆಯುಧ ಸನ್ನದ್ದನಾಗಿರುತ್ತಿದ್ದ ಅವನು ಮಧ್ಯೆ ಪ್ರವೇಶಿಸಿದ. ಇವನಿಗೇನು ಮಾಡಲಿ ಎಂದು ಕಣ್ಣಲ್ಲೆ ಕೇಳಿದೆ. ‘ಅದು ಬೇಡಾ’ ಎಂದೆ. ದರದರನೆ ಎಳೆದುಕೊಂಡು ಗೇಟಿಂದ ಆಚೆಗೆ ಹಾಕಿದ ಚಿಕ್ಕಣ್ಣ. ಪೈಲ್ವಾನ್ ಇದ್ದಿದ್ದರೆ ಆ ದೊಡ್ಡಣ್ಣನ ಮುಸುಡಿಯೇ ಹರಿದು ಹೋಗುತಿತ್ತು. ಆದರೂ ಮುಸುಕಿನ ಗುದ್ದುಗಳು ಬಿದ್ದಿದ್ದವು. ಅವನು ಲಡಾಸು ಸೈಕಲಲ್ಲಿ ಬಂದಿದ್ದ. ಚಿಕ್ಕಣ್ಣ ಎರಡೂ ಚಕ್ರಗಳ ಟಯರನ್ನು ಹೇಗೋ ಬ್ಲೇಡಿನಿಂದ ಮಾರ್ಕ್ ಮಾಡಿ ಕಳಿಸಿದ್ದ. ಪಂಚರ್ ಹಾಕಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ನನ್ನ ರಕ್ಷಣೆಗೆ ಇಲ್ಲಿ ಎಷ್ಟೋಂದು ಗೆಳೆಯರಿದ್ದಾರೆ ಎಂಬುದ ಕಂಡು ಭೇದಿ ಮಾಡಿಕೊಂಡಿದ್ದ. ಅದು ಅವನ ರೋಗವಾಗಿತ್ತು. ನನ್ನನ್ನು ಹುಡುಕಿ ಬಂದು ಅಪಮಾನಿಸಬೇಕು ಎಂದರೆ ಇವನಿಗೆ ಅದೆಷ್ಟು ದ್ವೇಷ ಅಸೂಯೆ ಇರಬಹುದು ಎಂದು ಲೆಕ್ಕ ಹಾಕಿದೆ. ನಾನೊಬ್ಬ ಹಳ್ಳಿಯ ಜೀತಗಾರನಾಗಿದ್ದಿದ್ದರೆ ಇವನಿಗೆ ಪರಮಾನಂದವಾಗುತ್ತಿತ್ತೇನೋ… ನನ್ನ ತಮ್ಮನನ್ನು ದತ್ತು ಮಗ ಎಂದು ಎತ್ತಿಕೊಂಡು ಹೋಗಿ ಬೀದಿ ಪಾಲು ಮಾಡಿದ ಇವನು ನನ್ನನ್ನು ಏನು ಮಾಡಬೇಕೆಂದು ಕನಸು ಕಾಣುತ್ತಿದ್ದನೊ… ಛೀ; ಮತ್ತೊಮ್ಮೆ ಬಂದರೆ ತಕ್ಕ ಗತಿ ಕಾಣಿಸಿಬಿಡಬೇಕು ಎಂದು ನಿರ್ಧರಿಸಿದೆ. ಭಾಗಶಃ ಮತ್ತೆ ಬರಲಾರ.

ಹಾಗೆ ಸಂಕಟದಲ್ಲಿ ಒಂದು ದಿನ ಕೊಠಡಿಯಲ್ಲಿ ಗೋಡೆಗೆ ಒರಗಿ ಪುಸ್ತಕ ಹಿಡಿದು ಕಾಲು ನೀಡಿ ಯೋಚಿಸುತ್ತಿರುವಾಗ… ಯಾರೊ ಜೋರಾಗಿ ಬಾಗಿಲು ಬಡಿದರು. ಸಿಟ್ಟಾಯಿತು. ಒಂದು ಸಣ್ಣ ಅಶಿಸ್ತಿಗೂ ರೇಗುತ್ತಿದ್ದೆ. ‘ಯಾರೊ’ ಎಂದು ಗದರಿದಂತೆ ಕೇಳಿದೆ. ‘ನಾನು ಕಣ್ಲೇ ನಿನ್ನ ದೊಡ್ಡಣ್ಣ… ತಗಿಲಾ ಬಾಗ್ಲಾ’ ಎಂದ.

ಅದಾಗಲೆ ಅವನ ಗತಿ ಮುಗಿದಿತ್ತು. ಕುಡಿದು ಕುಡಿದು ಹೆಣವಾಗುತ್ತಿದ್ದ. ಅಂತಹ ಸ್ಥಿತಿಯಲ್ಲೂ ನನ್ನನ್ನು ಬೇಟೆ ಆಡಲು ಬಂದಿದ್ದನಲ್ಲ ಈ ನರಭಕ್ಷಕ! ಎನಿಸಿ ಮೈಯನ್ನೆಲ್ಲ ಕೊಡವಿಕೊಂಡೆ. ನನ್ನಂತವನ ಬಳಿ ಯಾವತ್ತೂ ಲೋಡೆಡ್ ವೆಪನ್ ಇರಬೇಕೆನಿಸಿತು. ಹೀಗೆ ಬಂದು ತನಗೆ ತಾನೆ ಅಪಮಾನ ಮಾಡಿಕೊಂಡು ಹೋಗಬೇಕಾಗಿತ್ತೇ… ಅವನಿಗೆ ತಕ್ಕ ಉತ್ತರ ಕೊಟ್ಟಾಗಿತ್ತು. ಇವನ ಶವ ಸಂಸ್ಕಾರಕ್ಕೂ ಹೋಗಬಾರದು ಎನಿಸಿತ್ತು. ನಾನು ಇನ್ನಷ್ಟು ಗಟ್ಟಿಯಾಗಿದ್ದೆ. ಅಪಮಾನಗಳಿಂದ ಹೆಚ್ಚು ಕಲಿತಿದ್ದೆ. ಸಂಬಂಧಿಕರ ನರಕದಲ್ಲೇ ನಾಳೆಗಳನ್ನು ಕಂಡಿದ್ದೆ. ಎಷ್ಟೋಂದು ತೊಳಲಾಟ ತುಮುಲ ಈ ನರಭಕ್ಷರಿಂದ! ಎಲ್ಲವನ್ನು ಸಹಿಸಿಕೊಳ್ಳುತ್ತಿದ್ದೆ.

ನೋಡ ನೋಡುತ್ತಿದ್ದಂತೆಯೇ ಕಾಲ ಮಾಯವಾಗುತ್ತಿತ್ತು. ಮೂರನೆ ವರ್ಷದ ಬಿ.ಎ. ತರಗತಿಗೆ ಬಂದಿದ್ದೆ. ಅಂತಿಮ ವರ್ಷದಲ್ಲಿ ಓದುವುದು ಬಹಳ ಇತ್ತು. ಅದೇನು ಕಷ್ಟವಿರಲಿಲ್ಲ. ಅದೇ ನನ್ನ ಸಾಮರ್ಥ್ಯವಾಗಿತ್ತು. ಚಿಕ್ಕಣ್ಣ ಹಾಗೂ ಪೈಲ್ವಾನ್ ಕೊನೆ ದಿನ ಬಂದು ಮಾತಾಡಿಸಿ ಇನ್ನಷ್ಟು ಎಚ್ಚರದಿಂದಿರು ಎಂದು ಹೇಳಿ ಹೋಗಿದ್ದರು. ಅದೇ ಕೊನೆ; ಮತ್ತೆ ಅವರು ನನಗೆ ಸಿಗಲೇ ಇಲ್ಲ. ಆದರೆ ಅವರ ಧೈರ್ಯ ಸಾಮರ್ಥ್ಯ ಜಾತಿಯ ಅಭಿಮಾನ ಗಾಢವಾಗಿ ಪ್ರಭಾವಿಸಿದ್ದವು. ದಲಿತ ಗೋಡೆ ಪತ್ರಿಕೆಯ ನಿಲ್ಲಿಸಿ ಬಿಟ್ಟಿದ್ದೆ. ಭಾಗಶಃ ರಶೀದನೂ ಮೌನವಹಿಸಿ ದಾರಿ ಬದಲಿಸಿಕೊಳ್ಳುತ್ತಿದ್ದ. ಆಗೊಮ್ಮೆ ನೀಲಿಗಿರಿ ಮರಗಳ ಸಾಲಿನ ಮರೆಯಲ್ಲಿ ಸಾಕೇತ್ ನಮ್ಮಿಬ್ಬರನ್ನು ಕೂರಿಸಿಕೊಂಡು ಆಂಧ್ರದಿಂದ ಬಂದಿದ್ದ ನಕ್ಸಲ್ ನಾಯಕನ ಪರಿಚಯಿಸಿದ್ದ. ನಮ್ಮಿಬ್ಬರಿಗೂ ಆ ಬೆಟ್ಟಿ ಯಾಕೊ ಆಪ್ತ ಎನಿಸಿರಲಿಲ್ಲ.
ಸರಿಯಾಗಿ ಓದದೆ ಉಡಾಫೆ ಮಾಡಿದರೆ ಫೇಲಾಗುವೆ ಎಂಬ ಭಯವಾಯಿತು.

ನಾನು ಮುಂದೆ ಎಂ.ಎ.ಗೆ ಸೇರುವೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. ಅನರ್ಹ ಎನಿಸಿಕೊಳ್ಳಬಾರದು ಎಂಬುದೆ ಏಕೈಕ ಗುರಿಯಾಗಿತ್ತು. ನಕ್ಸಲ್‌ವಾದವನ್ನು ಅತ್ತ ಇಟ್ಟೆ. ಮೊದಲು ಇದನ್ನು ಮುಗಿಸುವ ಎಂದು ಹೋರಾಟಗಳ ಗೊಡವೆಗೆ ಹೋಗಲಿಲ್ಲ. ಜ್ವರ ಬಂದಂತೆ ಓದುತ್ತಿದ್ದೆ. ಓದುವ ಆ ಜ್ವರದ ಕಾವು ಎಷ್ಟಿತ್ತು ಎಂದರೆ ಸಿಕ್ಕಿದ್ದನ್ನೆಲ್ಲ ಓದಿ ಓದಿ ದಣಿಯುತ್ತಿದ್ದೆ. ಆ ಮಹಾರಾಜ ಕಾಲೇಜಿನ ಹಾಸ್ಟಲಿಗೆ ಒಂದು ಜನ್ಮದ ಕೃತಜ್ಞತೆಯನ್ನು ಹೇಳಿದರೆ ಸಾಲದು. ಅಷ್ಟೊಂದು ಪೊರೆದಿತ್ತು ನನ್ನನ್ನು. ಅಲ್ಲಿ ಊಟ ತಿಂಡಿ ಬಡಿಸಿದವರೊ ಈಗಲೂ ನನ್ನೆದೆಯ ಕನ್ನಡಿಯಲ್ಲಿ ಇಣುಕಿ ನೋಡಿ ಊಟ ಆಯ್ತೇನಪ್ಪಾ ಎಂದು ಕೇಳಿದಂತಾಗುತ್ತದೆ. ಎಷ್ಟೊಂದು ಅನ್ನದ ಋಣ! ಒಬ್ಬರೇ ಇಬ್ಬರೇ ಅನ್ನ ನೀಡಿ ಬಟ್ಟೆ ಕೊಡಿಸಿ ಕೈ ಹಿಡಿದು ಸಂತೈಸಿ ನಡೆಸಿದವರೂ… ಅವರ್ಯಾರೂ ನನ್ನ ಬಂಧುಗಳಾಗಿರಲಿಲ್ಲ. ಊರುಕೇರಿಯವರಾಗಿರಲಿಲ್ಲ. ಎಲ್ಲೆಲ್ಲಿಯವರೊ! ಮರು ಭೂಮಿಯಲ್ಲಿ ಚಿಲುಮೆಯಂತೆ ಕಂಡವರು!

ಮೂರನೇ ವರ್ಷದಲ್ಲಿ ಎಲ್ಲರೂ ಗಂಭೀರವಾಗಿಬಿಟ್ಟಿರುತ್ತಾರೆ. ಖಾಸಗಿ ಸುತ್ತಾಟ ಹರಟೆಗಳಿಗೆ ಬಿಡುವಿರುವುದಿಲ್ಲ. ಸಾಕೇತ್ ಸಂದರ್ಭ ಅರಿತು ಬಿಟ್ಟು ಬಿಟ್ಟಿದ್ದ. ಬಿ.ಎ. ಮುಗಿದ ನಂತರ ಐ.ಎ.ಎಸ್‌ಗೆ ಗೆಳೆಯರು ಸಿದ್ದವಾಗಲು ಆಗಲೇ ತುದಿಗಾಲಲ್ಲಿದ್ದರು. ಅಷ್ಟೊತ್ತಿಗೆ ಆ ಗುರಿಯನ್ನು ಕಿತ್ತು ಬಿಸಾಡಿದ್ದೆ. ಭ್ರಷ್ಟ ವ್ಯವಸ್ಥೆಯ ಅಧಿಕಾರ ಕೂಡ ದೇಶದ್ರೋಹ ಎನಿಸಿತ್ತು. ಅಂತಹ ಒಬ್ಬ ಅಧಿಕಾರಿಯಾಗುವುದು ಇಷ್ಟವಿರಲಿಲ್ಲ. ಶ್ರೀಧರ ಅದರಲ್ಲು ಒಳಿತು ಸಾಧ್ಯ ಎಂದು ವಾದಿಸುತ್ತಿದ್ದ. ರೇಗಿದರೂ ನನ್ನನ್ನು ಬಿಡುತ್ತಿರಲಿಲ್ಲ. ಬೇರೆ ಯಾವ ಗೆಳೆಯರಿಗೂ ಇರದಿದ್ದ ನೆಂಟಸ್ತಿಕೆ ಅವನಿಗೂ ನನಗೂ ಇತ್ತು. ಗೇಲಿ ಕುಹಕ ವ್ಯಂಗ್ಯಗಳು ಧಾರಾಳವಾಗಿ ಅವನ ಹಲ್ಲಿನ ಸಂದಿಗಳಲ್ಲಿ ಯಾವಾಗಲೂ ಇರುತ್ತಿದ್ದವು. ನನ್ನ ಬಗ್ಗೆ ವಿಪರೀತ ಕಾಳಜಿ ಅವನಿಗೆ. ನಗುವುದನ್ನು ಬಿಟ್ಟೇ ಇರಲಿಲ್ಲ. ಎಷ್ಟೇ ಸೀರಿಯಸ್ಸಾಗಿದ್ದರೂ ಹಗುರವಾಗಿರುತ್ತಿದ್ದ. ನಡಿಯೊ ನಿಮ್ಮ ಅಕ್ಕಾರ ಊರಿಗೆ ಹೋಗಿದ್ದು ಬರೋಣ ಎಂದು ಅವನೇ ಮುಂದಾಗಿ ಬಂದಿದ್ದ. ನನ್ನ ಅಪ್ಪ ಅಷ್ಟೊಂದು ಕೆಟ್ಟವನು ಎಂದು ಹೇಳಿದರೂ ಅವನೆಂತವನೊ ರ‍್ಯಾಸ್ಕಲ್ ಎಂದು ಬಯ್ಯುತ್ತಲೆ ನಗುತ್ತಿದ್ದ. ಅವನನ್ನು ಒಮ್ಮೆ ನೋಡಿ ಮಾತಾಡಿಸಬೇಕಲ್ಲೊ ಎಂದು ಬಯಸುತ್ತಿದ್ದ.
ಎಂತಹ ವಿಚಿತ್ರ ನೋಡಿ! ಅವನಾಗಲೆ ದುರುಳ ಅಪ್ಪನ ಜೊತೆ ಮಾತಾಡಿದ್ದ. ಇವನೇ ಅವನು ಎಂದು ಗೊತ್ತಿರಲಿಲ್ಲ ಅಷ್ಟೇ. ‘ಬಲ್ಲಾಳ್ ಸರ್ಕಲ್ಲಿನ ಫುಟ್‌ಪಾತ್‌ನಲ್ಲಿ ಒಬ್ಬ ಬಜ್ಜಿ ಬೋಂಡ ವಡೆ ಸಕತ್ತಾಗಿ ಮಾಡ್ತನೆ ಕಣೋ; ಆ ರುಚಿಯ ಸವಿಯಬೇಕು ನೀನೂ! ರೆಗ್ಯುಲರ್ ಕಸ್ಟಮರ್ ಆಗೋಯ್ತಿಯೆ ಅವುನ್ಗೆ. ಸೂರ‍್ರಾಗಿ ಮಾಡ್ತನೆ ಕಣೊ, ನಾಳೆ ಅಲ್ಲಿಗೆ ರ‍್ಕಂಡೋಯ್ತಿನಿ ಬಾರೊ’ ಎಂದಿದ್ದ. ಉದಾಸೀನ ಮಾಡಿದ್ದೆ. ಬಿಡಲಿಲ್ಲ. ಸಂಜೆ ವೇಳೆ. ಕರೆದೊಯ್ದ. ಸುತ್ತಾಡಿ ಬಂದಂತಾಗುತ್ತದೆಂದು ಹೋಗಿದ್ದೆ. ಸರ್ಕಲ್ಲಿನ ಸುತ್ತ ಗಮನಿಸಿದೆ. ಬೆಚ್ಚಿದೆ.

ಅದೇ ಅವನು ನಮ್ಮಪ್ಪ ನರಭಕ್ಷಕ ಬಾಂಡ್ಲಿಯಲ್ಲಿ ಬೋಂಡ ಹಾಕುತಿದ್ದ. ಅವನ ಹೆಂಡತಿ ಸಪ್ಲೆರ‍್ರಾಗಿದ್ದಳು. ಪುಟ್ಟ ಹುಡುಗಿ… ಅವಳ ಹೆಸರು ಮೀನಾಕ್ಷಿ… ಶಾಲೆಗೆ ಸೇರಿದ್ದಳೊ ಇಲ್ಲವೊ ಗೊತ್ತಿರಲಿಲ್ಲ. ಅವಳ ತಾಯ ತದ್ರೂಪ. ಅಲಲಲಾ… ಎಂತಹ ಪಾಳೆಯಗಾರ… ಇಲ್ಲಿ ಫುಟ್‌ಪಾತಲ್ಲಿ ಬಂದು ಬಿದ್ದಿದ್ದಾನಲ್ಲಾ… ಇವನೆನಾ ನಮ್ಮಪ್ಪ… ಕೊಂದು ಬಿಡಲು ಎಷ್ಟು ಸಲ ಯತ್ನಿಸಿ ವಿಫಲನಾಗಿದ್ದನಲ್ಲಾ! ಈಗ ಇಲ್ಲಿ ಈ ಪಾಡಿನಲ್ಲಿ… ಮೆರೆದಿದ್ದವನ ಗತಿಯೇ ಇದೂ ಎಂದು ಗಕ್ಕನೆ ನಿಂತೆ. ‘ಯಾಕೊ, ಏನಾಯ್ತು’ ಎಂದ ಶ್ರೀಧರ ‘ಲೇ… ಹೇಳ್ತಾ ಇದ್ನಲ್ಲಾ… ಅವನೇ ಕಣೊ ನಮ್ಮಪ್ಪ’ ಎಂದೆ ನಾಲಿಗೆ ತೊಡರಿ. ‘ಹ್ಹ ಏನಂದೇ; ಅವ್ನು ನಿಮ್ಮಪ್ಪನೇ… ಇದೇನೊ’ ಎಂದು ಬೆರಗಾಗಿ ನೋಡಿದ. ಅದೇ ಪಾಪಿ ಕಣೋ ಇವನೂ… ಸುಳ್ಳಲ್ಲಾ ಸತ್ಯಾ ಎಂದೆ.

‘ಅಯ್ಯೋ ಮಾರಾಯಾ; ಅವುಳು ನಿಮ್ಮ ಚಿಕ್ಕಮ್ಮ ಏನೊ! ಲೋ ನಮ್ಮನೆ ಪಕ್ಕದಲ್ಲೇ ಕಣೋ ಇವರು ಬಾಡಿಗೆಗೆ ಇರೋದೂ! ಲೋ ನಿಮ್ಮಪ್ಪನ ಸಾಕಷ್ಟು ಸಲ ಮಾತಾಡ್ಸಿದ್ದೀನಪ್ಪಾ… ಸಕತ್ ಎಣ್ಣೆ ಮಾಸ್ಟರ್. ಆದ್ರೂ ಅದ್ಭುತವಾಗಿ ತಿಂಡಿ ತಯಾರಿಸ್ತಾನಲ್ಲಾ… ಇದೇನ್ಲಾ ವಿಚಿತ್ರಾ’ ಎಂದು ಅವರತ್ತಲೆ ನೋಡುತ್ತಿದ್ದ. ನಾನು ಮರೆಗೆ ಸರಿದಿದ್ದೆ. ಅವನಾಗಲೆ ಮೂರು ಪ್ಯಾಕೇಟ್ ಸಾರಾಯಿ ಹೀರಿದ್ದಾನೆ ಎಂದು ಅಂದಾಜಿಸಿದೆ. ‘ಬೇಡಾ ಅವನು ಮಾಡಿರೋದನ್ನು ನಾನು ತಿನ್ನೋದಿಲ್ಲ ಎಂದೆ.

ಶ್ರೀಧರನಿಗೆ ನನ್ನ ಮನಸ್ಥಿತಿ ಚೆನ್ನಾಗಿ ಗೊತ್ತಿತ್ತು. ಏನೋ ಮಾರಾಯಾ ಇದೂ ಎಂದು ಲೋಚಗುಟ್ಟಿದ. ‘ಲೋ ಆ ಪಾಪಿ ನಂಜೊತೆ ಕ್ಲೋಸಾಗಿ ಮಾತಾಡ್ತನಲ್ಲೊ! ನಿನ್ ಜೊತೆ ಅವುನ್ಮುಂದೆ ನಿಂತ್ಕಬೇಕಲ್ಲೊ’ ಎಂದು ಯಾವುದೊ ಉತ್ತರ ಕೊಡಲೆಂಬಂತೆ ಭಾವಿಸಿದೆ. ‘ಬೇಡ ಕಣೊ. ಆತ ಯಾವತ್ತೊ ಸತ್ತು ಹೋಗಿದ್ದಾನೆ ನನ್ನ ಮನದಲ್ಲಿ. ಈಗಲ್ಲಿ ಕಾಣ್ತಿರೋದು ಅವನ ದೆವ್ವ ಅಷ್ಟೇ’ ಎಂದೆ. ಹಿಂತಿರುಗಿ ರಾಮಸ್ವಾಮಿ ಸರ್ಕಲ್ಲಿಗೆ ಬಂದು ವಿನಾಕಾರಣ ಅಡ್ಡಾಡಿದೆವು. ಇಬ್ಬರಲ್ಲೂ ಮಾತಿರಲಿಲ್ಲ. ಚೆಲುವೆಯರತ್ತ ಚಂಚಲ ಕಣ್ಣು ಬೀರಿರಲಿಲ್ಲ. ತುಂಬ ಅಪಮಾನವಾಗಿತ್ತು. ಈ ನರಭಕ್ಷಕನೂ ಹಾಸ್ಟಲಿನ ಇಷ್ಟು ಹತ್ತಿರವೇ ಬಂದು ಬಿಟ್ಟಿದ್ದಾನಲ್ಲಾ… ಹೇಗೆ ತಪ್ಪಿಸಿಕೊಳ್ಳವುದು ಎಂದು ಯೋಚಿಸಿದೆ. ಪರೀಕ್ಷೆ ಬರೆದು ಪಾಸಾಗಲೊ ಇಲ್ಲವೇ ಈ ಪಾಪಿಗಳ ನೆರಳುಗಳಿಂದ ಪಾರಾಗಲೊ… ಯಾವ ದಾರಿಗೆ ಹೋಗಲಿ ಎಂದು ಹೊರಳಾಡಿದೆ. ನಿದ್ದೆ ಬರಲಿಲ್ಲ. ಅತ್ತ ಸುಳಿಯಬಾರದೆಂದು ತೀರ್ಮಾನಿಸಿದೆ.

ಮರುವಾರವೆ ಅಕ್ಕನ ಮನೆಗೆ ಒಬ್ಬನೆ ಹೋದೆ. ಅಷ್ಟಾಗಿ ಅಕ್ಕನ ಮೇಲೆ ಅಂತಹ ಪ್ರೀತಿ ಇರಲಿಲ್ಲ. ದಿಕ್ಕೆಟ್ಟಾಗ ಸುಮ್ಮನೆ ಒಂದು ನಿರಾಳ ಮಾತಿಗಾಗಿ ಹೋಗುತ್ತಿದ್ದೆ. ಹಾಗೆ ಹೋದರೂ ಅಕ್ಕ ಭಯಪಡುತ್ತಿದ್ದಳು. ಯಾಕೆ ಬಂದಾ ಏನಾಯ್ತು ಏನಾಪತ್ತೊ ಎಂದು ವಿಪರೀತ ಕಲ್ಪಿಸುತ್ತಿದ್ದಳು. ಅವಳ ಮಕ್ಕಳು ಬಹಳ ಚಿಕ್ಕವು. ಇಬ್ಬರು ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು. ರೈತ ಕುಟುಂಬ. ನನ್ನ ಅಕ್ಕನ ಗಂಡ ಪ್ರೈಮರಿ ಶಾಲೆಯ ಟೀಚರ್ ಆಗಿದ್ದರು. ಅವರಿಂದ ನಾನು ಯಾವ ಸಹಾಯವನ್ನೂ ನಿರೀಕ್ಷಿಸುತ್ತಿರಲಿಲ್ಲ. ಒಂದೇ ತಾಯ ಹೊಟ್ಟೆಯಿಂದ ಬಂದವರು ಎಂಬ ಕರುಳ ಬಳ್ಳಿಯ ಕೊಂಡಿ ಮಾತ್ರ ಇತ್ತು. ಹೇಳಿದೆ; ಆ ಪಾಪಿ ಅಲ್ಲಿ ಮೈಸೂರಲ್ಲಿ ರಸ್ತೆ ಬದಿಯಲ್ಲಿ ಬೋಂಡ ವಡೆ ಮಾಡ್ಕಂಡು ಹೆಂಡತಿಯ ಕೈಕೆಳಗೆ ಇದ್ದಾನೆಂದು. ನನ್ನ ಅಕ್ಕನಿಗೆ ಬಹಳ ನೋವಾಗಿತ್ತು. ನಮ್ಮಪ್ಪ ಅಂಗಿದ್ದ ಇಂಗಿದ್ದ ದೊರೆಯಂಗಿದ್ದ ಎಂದು ರಾಗ ತೆಗೆದಳು. ಅದೆಲ್ಲ ನನಗೆ ಬೇಕಾಗಿರಲಿಲ್ಲ.

ಅಕ್ಕನಿಗೆ ಆ ವಿಷಯ ಮೊದಲೆ ಗೊತ್ತಿತ್ತು. ಊರಲ್ಲಿ ಜಗಳ ಮಾಡಿಕೊಂಡು ಹೆಂಡತಿ ಜೊತೆ ಮೈಸೂರಿಗೆ ಓಡಿ ಬಂದಿದ್ದ. ‘ನೆಟ್ಟಗೆ ನ್ಯಾರವಾಗಿ ನಮ್ಮವ್ವನ ಜೊತೆ ನಗನಗ್ತಾ ಬದ್ಕಿದ್ರೆ ಇವತ್ತು ಇಂತಾಗತಿ ಬತ್ತಿತ್ತೇನಪ್ಪಾ’ ಎಂದು ಏನೇನೊ ಒಪ್ಪಿಸಿದಳು. ನನಗೇನು ದುಃಖ ಎನಿಸಲಿಲ್ಲ. ಇನ್ನೂ ಬಹಳ ಇದೆ ಮುಂದೆ ಅನುಭವಿಸಬೇಕಾದದ್ದು ಎಂದು ಹಿಂತಿರುಗಿದ್ದೆ. ಅಕ್ಕನಿಗೆ ಅಪ್ಪನ ಮೇಲೆ ಕುರುಡು ಪ್ರೀತಿ. ಹೆಣ್ಣು ಮಕ್ಕಳು ಹಾಗೆಯೇ; ತಂದೆಯ ಮೇಲೆಯೆ ಅವರಿಗೆ ಅಕ್ಕರೆ ಹೆಚ್ಚು ಎಂದು ಹೇಳುವರು. ಅಪ್ಪನ ಅರ್ಧ ರೂಪ ಅಕ್ಕನಲ್ಲಿತ್ತು. ಗಟ್ಟಿಗಿತ್ತಿ. ತನ್ನದೇ ನಡೆಯಬೇಕು ಎಂದು ಹಠ ಮಾಡುವವಳು. ಲೋಕಜ್ಞಾನ ಅಷ್ಟಾಗಿ ಇರದಿದ್ದರೂ ಬದುಕಿ ಉಳಿಯಲು ಬೇಕಿದ್ದ ವ್ಯವಹಾರ ಜಾಣ್ಮೆ ಸಾಕಷ್ಟಿತ್ತು. ನನ್ನ ಪಾಡೇ ಅವಳಿಗೆ ತಿಳಿಯುತ್ತಿರಲಿಲ್ಲ.

ನೆಲಮಂಗದಲ್ಲಿ ಪಿ.ಯು.ಸಿ ಓದುವಾಗ ನಾನು ಇನ್ನೇನೊ ಕ್ರೈಸ್ತ ಧರ್ಮಕ್ಕೆ ಸೇರಿಬಿಡುವನಿದ್ದೆ. ಕ್ರಾಸ್ ಅನ್ನು ಯಾವಾಗಲು ಧರಿಸಿರುತ್ತಿದ್ದೆ. ಅನೇಕರು ಕ್ರಿಶ್ಚಿಯನ್ ಎಂದೇ ಭಾವಿಸಿದ್ದರು. ನನ್ನ ನಡೆನುಡಿಯೂ ಹಾಗೇ ಇತ್ತು. ಪತ್ರ ಬರೆದು ಆಗ ಅಕ್ಕನಿಗೆ ತಿಳಿಸಿದ್ದೆ. ತನ್ನ ಗಂಡನನ್ನು ಕರೆದುಕೊಂಡು ಅಕ್ಕ ಗಾಬರಿಯಾಗಿ ಬಂದಿದ್ದಳು. ನಮ್ಮ ಮಾವನೇ ಬೇಡ ಎಂದು ಕರೆತಂದಿದ್ದ. ಹುಡುಗಾಟಿಕೆಯ ವಯಸ್ಸು. ಅಲ್ಲೊಬ್ಬ ರೇಡಿಯೊ ಮ್ಯೆಕಾನಿಕ್ ಇದ್ದ. ಪುಟ್ಟ ಅಂಗಡಿ ಇಟ್ಟಿದ್ದ. ರೇಡಿಯೊ ರಿಪೇರಿ ವಿಚಾರದಲ್ಲಿ ಪರಿಚಯ ಆಗಿದ್ದ. ಆಕರ್ಷಿಸಿದ್ದ. ಯಾಕೆ ಈ ಜಾತಿ ಪಾತಿ ಯೇತಿ… ಬಿಟ್ಟು ಬಂದು ಬಿಡೂ; ನಮ್ಮ ಫಾದರ್ ಮೂಲಕ ಕನ್ರ‍್ಟ್ ಮಾಡಿಸಿಬಿಡುವೆ ಎಂದಿದ್ದ. ರೆಡಿಯಾಗಿದ್ದೆ. ಆಗ ಅಕ್ಕ ಮಾವ ತಡೆದಿದ್ದರು. ನಿನ್ನ ಪಾಲಿಗೆ ಯಾವತ್ತೂ ನಾನರ‍್ತಿನಿ ಕನಪ್ಪಾ ಎಂದು ಅಕ್ಕ ಭರವಸೆ ಮೂಡಿಸಿದ್ದಳು. ಹಾಗಾಗಿ ಎಂದೊ ಒಮ್ಮೆ ಆ ಹಳ್ಳಿಗೆ ಹೋಗಿ ಒಂದೆರಡು ದಿನ ಇದ್ದು ಬಂದುಬಿಡುತ್ತಿದ್ದೆ. ಅವಳ ಇಬ್ಬರು ಹೆಣ್ಣು ಮಕ್ಕಳು ಏನು ಮಾಡಿದರೂ ಹತ್ತಿರ ಬರುತ್ತಿರಲಿಲ್ಲ. ಗಂಡು ಮಕ್ಕಳಿಬ್ಬರು ಬಂದು ತೊಡೆ ಮೇಲೆ ಕೂರುವಷ್ಟು ಸಲಿಗೆಯಲ್ಲಿದ್ದರು.
ಆ ಹಳ್ಳಿ ಮನೆಯಲ್ಲಿ ಒಬ್ಬ ಚೆಂದದ ತಾಯಂತೆ ಅಜ್ಜಿ ಇದ್ದರು. ಅವರು ನನ್ನ ಮಾವನವರ ತಾಯಿ. ಅಂತಹ ಬಾವುಣಿಕೆ ಅವರದು. ಅಂತವರೆಲ್ಲ ಕಾಲದ ಅಲೆಯಲ್ಲಿ ಕಳೆದೇ ಹೋಗುತ್ತಾರೆ. ಮತ್ತೆ ಅಂತವರು ಹುಟ್ಟಿ ಬರುವುದಿಲ್ಲ. ಎಲೆ ಅಡಿಕೆ ಮೆಲ್ಲುತ್ತ ಬಾಯಿ ತುಂಬಾ ಪ್ರೀತಿ ಕಾರುಣ್ಯ ತುಂಬಿಕೊಂಡು ಅವರು ನನ್ನನ್ನು ಮಾತನಾಡಿಸುತ್ತಿದ್ದರು. ಮೈಸೂರಲ್ಲಿ ಓದುತ್ತಾ ಇದ್ದೇನೆ ಎಂಬುದೇ ಅವರಿಗೆ ಅಭಿಮಾನದ ಸಂಗತಿ. ನನ್ನ ಅಕ್ಕನಿಗೂ ಅವರಿಗೂ ಅಂತಹ ಒಳ್ಳೆಯ ಅತ್ತೆ ಸೊಸೆಯರ ಸಂಬಂಧ ಇರಲಿಲ್ಲ. ನನ್ನ ಮೇಲೆ ಅಪಾರ ಪ್ರೀತಿ ಅವರಿಗೆ. ನನ್ನ ಪಾಡೇನಾದರೂ ಗೊತ್ತಿದ್ದರೆ ಖಂಡಿತ ಅವರು ಎಲ್ಲೂ ಹೋಗದಂತೆ ಬಿಡದೆ ಮನೆಯಲ್ಲೆ ಸಾಕಿಕೊಂಡು ಬಿಡುತ್ತಿದ್ದರು. ನನ್ನ ಸಂಕಟವನ್ನು ನಾನೇ ನುಂಗಬೇಕಿತ್ತು. ಯಾರಿಗೂ ಹೇಳುತ್ತಿರಲಿಲ್ಲ.

ಒಮ್ಮೆ ಹೀಗಾಯಿತು… ನನ್ನ ಅಕ್ಕ ಮುಟ್ಟಾಗಿ ಹೊರಗೆ ಕೂತಿದ್ದಳು. ಅಜ್ಜಿ ಕೋಳಿ ಕೊಯ್ದು ವಪ್ಪ ಮಾಡಿ ತಾನೇ ರುಚಿಯಾಗಿ ಅಡುಗೆ ಮಾಡಿ; ಮೊದಲೇ ನನಗೆ ಒಳ ಮನೆಯಲ್ಲಿ ಚಾಪೆ ಹಾಕಿ ಕೂರಿಸಿ ಕೈಗೆ ಬಿಸಿ ನೀರು ಬಿಟ್ಟು ಪಕ್ಕದಲ್ಲಿ ಕೈ ಒರೆಸಿಕೊಳ್ಳಲು ಟವಲ್ ಇಟ್ಟು ತಟ್ಟೆ ತುಂಬುವಂತೆ ಮಾಂಸ ಹಾಕಿ ಪುಟ್ಟ ರಾಗಿ ಮುದ್ದೆಯ ಜೊತೆಗೆ ತಂದಿತ್ತಳು. ‘ಅಯ್ಯೋ; ಅಜ್ಜೀ… ಇಷ್ಟೆಲ್ಲ ಮಾಂಸ ತಿನ್ನೋದಿಲ್ಲಾ ನಾನೂ… ಒಂದೆರಡು ಪೀಸುಗಳೆ ಸಾಕು’ ಎಂದೆ. ‘ಅಂಗನ್ನಬರ‍್ದು ಕನಪ್ಪಾ… ತಿನ್ನೊ ವಯ್ಸಲ್ಲುವೆ ನಿಂದೂ; ತಿನ್ನಪ್ಪಾ’ ಎಂದು ನಡು ಬಗ್ಗಿಸಿ ತಲೆ ಮೇಲೆ ಮೆಲ್ಲಗೆ ಕೈ ಇಟ್ಟು ಸವರಿ ಊಟ ಮಾಡಪ್ಪ ಎಂದಳು. ಎಷ್ಟು ಹೇಳಿದರು ಕೇಳಲಿಲ್ಲ. ಬಿಟ್ರೆ ಅಲ್ಲಿ ಹೊರಗೆ ಕೂತಿರುವ ನಮ್ಮಕ್ಕ ತಿಂತಾಳೆ ಎಂದು ಕೈ ಹಾಕಿದೆ.

ಮಂಡ್ಯ ಸೀಮೆಯ ನಾಟಿ ಕೋಳಿಯ ಸಾರಿನ ಆ ಗಮಲು ರುಚಿಗೆ ಯಾವುದೂ ಸಮನಿರಲಿಲ್ಲ. ಅಡುಗೆ ಮನೆಯ ಅಡ್ಡಗೋಡೆಯ ಒರಗಿ ನಿಂತ ಅಜ್ಜಿಗೆ ಏನೊ ಸುಖ. ತಾನು ಕಯ್ಯಾರೆ ಮಾಡಿ ಬಡಿಸಿದ್ದ ಸಂತೋಷದಿಂದ ಉಣ್ಣುತ್ತಿದ್ದಾನೆಂಬ ಹೆಮ್ಮೆ. ಮತ್ತೆ ಮಾಂಸ ತಂದು ಹಾಕಲು ಮುಂದಾದಳು. ಅನ್ನ ಬಡಿಸಿದಳು. ಅಷ್ಟು ಸುಖದಿಂದ ನಾನು ಊಟವನ್ನು ಆನಂದಿಸಿದ್ದು ಅದೇ ಮೊದಲು. ಅಜ್ಜಿ ತಲೆ ಸವರಿದಳು. ಏನೊ ಕೇಳಬೇಕೆಂದು ಕಾತರಿಸುತ್ತಿದ್ದಳು. ಕೃತಜ್ಞತೆಯಿಂದ ಮುಖನೋಡಿದೆ… ‘ನನ್ಮಮ್ಮಗಳು ಶೋಬಿಯ ಮದ್ವೆ ಮಾಡ್ಕಪ್ಪಾ… ದೊಡ್ಡಾಪೀಸರ್ ಆಯ್ತಿಯೇ; ನನ್ನಮ್ಮಗಳು ಸುಖುವಾಗರ‍್ತಳೇ… ಅಲ್ಲುವೇನಪ್ಪಾ… ಮದ್ವೆ ಆದಿಯೇನಪ್ಪಾ’ ಎಂದು ಕೋರಿದಳು. ಏನನ್ನೂ ಹೇಳಲಾರದೆ ಕಷ್ಟ ಪಡುತ್ತಿದ್ದೆ. ಹೊರಗಿದ್ದ ಅಕ್ಕ ತನ್ನ ಅತ್ತೆಯನ್ನು ಜೋರಾಗಿ ಕೂಗಿ; ‘ನಂತಮ್ಮುನ್ಗೆ ಚೆನ್ನಾಗಿರು ಬಾಡಾಕು… ಮೂಳೆ ಗೀಳೆ ಹಾಕ್ಬೇಡ’ ಎಂದು ಅಸಮಾಧಾನ ತೋರುತ್ತಿದ್ದಳು. ಸತ್ಯ ಹೇಳಬೇಕು! ನನ್ನ ಅಕ್ಕನೇ ಎಂದೂ ಅಷ್ಟು ಪ್ರೀತಿಯಿಂದ ಕಾರುಣ್ಯದಲ್ಲಿ ಊಟ ಬಡಿಸಿರಲಿಲ್ಲ. ಹಾಗೆ ತಟ್ಟೆ ತುಂಬ ಮಾಂಸವ ಹಾಕಿರಲಿಲ್ಲ. ಸಾಕಷ್ಟು ಪೀಸುಗಳ ತಟ್ಟೆಯಲ್ಲೇ ಬಿಟ್ಟಿದ್ದೆ. ಕೈ ತೊಳೆದಿದ್ದೆ. ನಾನು ಹಾಗೆ ಬಿಟ್ಟಿದ್ದನ್ನೆ ಅಜ್ಜಿ ಪ್ರೀತಿಯಿಂದ ತಾನೇ ತಿನ್ನುವುದಾಗಿ ಎತ್ತಿಟ್ಟುಕೊಂಡು ಉಳಿದವರಿಗೂ ಊಟ ಕೊಟ್ಟಿದ್ದಳು.

ಅಕ್ಕನ ಹೆಣ್ಣು ಮಕ್ಕಳು ಬೀದಿಯಲ್ಲಿ ತುಂಡು ಲಂಗ ಧರಿಸಿ ಆಟವಾಡುತ್ತಿದ್ದರು. ಅಕ್ಕನ ಮಗಳನ್ನು ಮದುವೆ ಆಗುವುದು ನಿಜವೇ, ತರವೇ ಸಾಧ್ಯವೇ ಎಂದು ಪಡಸಾಲೆಯಲ್ಲಿ ಕೂತು ಹಲ್ಲಿಗೆ ಕಡ್ಡಿ ಚುಚ್ಚಿಕೊಳ್ಳುತ್ತಿದ್ದೆ. ಅಕ್ಕ ಬಂದು ಎಲೆ ಅಡಿಕೆ ತಂದಿತ್ತಳು. ಮಾಂಸದ ಊಟ ಆದ ನಂತರ ಎಲೆ ಅಡಿಕೆ ತಿನ್ನುವುದು ರೂಢಿ. ನಾನು ತಿನ್ನಲಿಲ್ಲ. ಅಕ್ಕನದೂ ಅದೇ ಆಸೆ. ಮುಂದೆ ನನ್ನ ಮಗಳು ಬೆಳೆದು ದೊಡ್ಡವಳಾದ ಕೂಡಲೆ ತಮ್ಮನಿಗೆ ಮದುವೆ ಮಾಡಿಸಿಬಿಡಬಹುದು ಎಂಬ ಕನಸು. ಅವರ ಆ ಯಾವ ಆಸೆಗಳಿಗೂ ನಾನು ಸೊಪ್ಪು ಹಾಕಿರಲಿಲ್ಲ. ನಾನು ನಾಳೆ ಯಾರನ್ನಾದರೂ ಮದುವೆ ಮಾಡಿಕೊಳ್ಳುವೆ ಎಂಬ ಯಾವ ವಿಶ್ವಾಸವೂ ಇರಲಿಲ್ಲ. ಬಹಳ ಬೇಗ ಈ ಲೋಕಕ್ಕೆ ವಿದಾಯ ಹೇಳುವೆ ಎನಿಸುತ್ತಿತ್ತು. ಒಟ್ಟಿನಲ್ಲಿ ಈ ಯಾವ ಸಂಬಂಧಗಳಿಗೂ ಹಿಂತಿರುಗಿ ಬರಬಾರದು ಎಂದು ನನಗೆ ನಾನೆ ಷರತ್ತು ವಿಧಿಸಿಕೊಳ್ಳುತ್ತಿದ್ದೆ. ಅಕ್ಕನ ಊರಿಗೆ ಹೋಗುವುದಕ್ಕೆ ಒಂದು ಆಕರ್ಷಣೆ ಇತ್ತು. ಅಲ್ಲೊಂದು ಜೈನರ ಕಾಲದ ಗುಡ್ಡವಿತ್ತು. ಅದರ ಮೇಲೇರಿ ಸೂರ್ಯಸ್ತವನ್ನು ನೋಡುವುದೇ ಒಂದು ರಮಣೀಯ ಸುಖ. ಮುರಿದು ಬಿದ್ದಿದ್ದ ಜೈನ ಬಸದಿಗಳ ಬಳಿ ಕೂತರೆ ಧ್ಯಾನಕ್ಕೆ ಇಳಿದಂತಾಗುತಿತ್ತು. ಎತ್ತರದ ಆ ಕಲ್ಲುಗುಡ್ಡದ ಮೇಲೆ ಸುತ್ತ ನೋಡಿದರೆ ಹಸಿರು ಬಯಲು ನನ್ನ ತುಮುಲಗಳ ಕರಗಿಸುತ್ತಿತ್ತು. ಹಾಗೆಯೇ ಊರ ಮುಂದೆ ಕೆರೆ ಇತ್ತು. ಎತ್ತರದ ಏರಿ. ಗತಕಾಲದ ಹೆಮ್ಮಾರಿ ಹುಣಸೆ ಮರಗಳ ಸಾಲು. ಪ್ರಶಾಂತ ಸ್ಥಳ. ತೆಳು ಕೆನ್ನೀರ ಅಲೆಗಳು ಬೀಸುವ ಗಾಳಿಗೆ ಬಳುಕುತ್ತಿದ್ದವು. ಕನಸಿನಲ್ಲಿ ಬಂದು ಹೋದಂತಿದ್ದವು. ಅಕ್ಕನ ಮನೆಯ ದೃಶ್ಯಗಳು.
ವಾಸ್ತವಕ್ಕೆ ಮರಳಿದ್ದೆ. ಶ್ರೀಧರನಿಗೆ ಬಿಡಿಸಲಾಗದ ಒಗಟಾಗಿತ್ತು. ಆ ಪಾಪಿ ನನ್ನಪ್ಪನ ಬದುಕು. ಅಕ್ಕ ಹೇಳಿದ್ದನ್ನೆಲ್ಲ ಅವನಿಗೆ ಹೇಳಿದ್ದೆ. ‘ಮೋಸ್ಟ್ ಡೇಂಜರಸ್ ಫೆಲೊ ಕಣೋ… ಹಂತಕರು ಹೇಗಿರ‍್ತಾರೆ ಎನ್ನೋ ಒಂದು ಐಡಿಯಾ ಬಂತು. ನಟೋರಿಯಸ್ ಕಿಲ್ಲರ್ ಕಣೊ… ಅಬ್ಬಬ್ಬಬ್ಬಾ ಇವನಿಂದ ಎಂಗೆ ತಪ್ಪಿಸಿಕೊಂಡು ಬಂದೊ’ ಎಂದು ಮತ್ತೆ ಮತ್ತೆ ಕೇಳುತಿದ್ದ.

ಅಮಾಯಕನಂತೆ ‘ನಿನ್ನ ಮಕ್ಕಳು ಏನೇನು ಮಾಡ್ತಾ ಇದ್ದಾರೆ’ ಎಂದು ಶ್ರೀಧರ ವಿಚಾರಿಸಿದ್ದ. ಆ ಪಾಪಿ ತನಗೆ ಮಕ್ಕಳೇ ಆಗದೆ ಕೊನೆಗೆ ‘ಇವಳ ಹೊಟ್ಟೆಲಿ ಒಂದೆಣ್ಣು ಮಗ ಆಗದೆ’ ಎಂದಿದ್ದ. ತನ್ನ ಇಬ್ಬರು ಹೆಂಡಿರ ಬಗ್ಗೆ ಏನೂ ಹೇಳಿರಲಿಲ್ಲ. ಶ್ರೀಧರ ಹೀಗೆ ಅಂದ ಕಣೋ ಎಂದಾಗ ಒಳ್ಳೆದೇ ಆಯ್ತು ಬಿಡೊ; ಆ ಪಾಪಿಗೆ ನಾನ್ಯಕೆ ಮಗಾ ಅನಿಸ್ಕಬೇಕು ಎಂದು ಉಪೇಕ್ಷಿಸಿದ್ದೆ. ಅವನನ್ನು ಇಂಚಿಂಚು ಶ್ರೀಧರ ಗಮನಿಸಿದ್ದ. ಬಂದು ಹೇಳುತ್ತಿದ್ದ. ‘ಹೇಯ್ ಅವ್ನ ಬಗ್ಗೆ ಏನ್ನೂ ಹೇಳ್ಬೇಡಾ… ಅವನೆಂಗಾರ ಸಾಯ್ಲಿ… ನಿನ್ಗೆ ಯಾಕೆ ಅವನ ಬಗ್ಗೆ ಇಷ್ಟೊಂದು ಕುತೂಹಲ, ಬಿಟ್ಟುಬಿಡೊ’ ಎಂದು ರೇಗಿದ್ದೆ.

ನಿಧಾನವಾಗಿ ಶ್ರೀಧರ ದೂರ ಸರಿಯುತ್ತಿದ್ದ. ನಾನು ನಿಗೂಢವಾಗುತ್ತಿದ್ದೆ. ಅಕ್ಕನ ಊರು ಬೇಡ ಎಂದು ಬೇಲಿ ಹಾಕಿಕೊಂಡಿದ್ದೆ. ತಾತ ಒಂದೆರಡು ಬಾರಿ ಪತ್ರ ಬರೆದು ಊರಿಗೆ ಬಂದು ಹೋಗು ಎಂದಿದ. ಅತ್ತ ತಿರುಗಿಯೂ ನೋಡಿರಲಿಲ್ಲ. ಆದರೆ ಆಗೊಂದು ದಿನ ಊರ ಹಬ್ಬದಲ್ಲಿ ಬಾ ಎಂದು ಕರೆದಿದ್ದವಳು ಬೇಡ ಬೇಡ ಎಂದರೂ ಮನದ ಕಿಟಕಿಯಲ್ಲಿ ಇಣುಕಿ ನೋಡಿ ಹೊರಟು ಹೋಗುತ್ತಿದ್ದಳು. ಈಗವಳು ಏನಾಗಿರಬಹುದು? ಮದುವೆ ಆಗಿರಬಹುದೇ… ಅವತ್ತು ಮದುವಣಗಿತ್ತಿಯಂತೆ ಸಿಂಗರಿಸಿದ ಬಂಡಿಯಲ್ಲಿ ಕೂತು ನೆಂಟರ ಜೊತೆ ಯಾವುದೋ ಊರಿಗೆ ಹೋಗುತ್ತಿದ್ದಳಲ್ಲಾ… ಮೋಹದ ಕ್ಷಣಗಳು ಎಷ್ಟು ಸೂಕ್ಷ್ಮವಾರುತ್ತವಲ್ಲಾ. ಒಪ್ಪಿದರೆ ಆ ಕ್ಷಣವೇ ಮಿಲನ ಸರಸ ಸಂಭ್ರಮ ಸುಗ್ಗಿ! ಸಮ್ಮತಿಸದೇ ಹೋದರೆ ಆ ಕೂಡಲೆ ಎಂತಹ ತಿರಸ್ಕಾರ ವಿರಸ ವೈರಾಗ್ಯ! ಆ ಹುಡುಗಿಯನ್ನು ನಾನು ತಿರಸ್ಕರಿಸಿದೆನೊ ಆ ಪರಿಸ್ಥಿತಿಯೆ ನಿರಾಕರಿಸಿತೊ ಗೊತ್ತಾಗದು…

ಆದರೆ ಆ ಅತ್ತೆಯರು ನನ್ನನ್ನು ಎಷ್ಟೊಂದು ಮುದ್ದು ಮಾಡಿದ್ದರು! ಅವರದು ಅತಿಯಾಗಿತ್ತು ಎಂದು ಈಗ ಅನಿಸುತ್ತದೆ. ಕಾಲೇಜಿನ ಅಂಗಳದಲ್ಲಿ ಯಾವ ಹುಡುಗಿಯರ ಬಗೆಗೂ ಆಸಕ್ತಿ ಬರುತ್ತಿರಲಿಲ್ಲ. ನನ್ನ ಇನ್ನೊಬ್ಬ ಗೆಳೆಯ ಇದ್ದ. ಅವನು ಪಾಂಡವಪುರ ಬಸವರಾಜು. ಶ್ರೀಮಂತ ಕುಟುಂಬದಿಂದ ಬಂದಿದ್ದ. ಸನ್ಯಾಸಿಯಂತಿರುತ್ತಿದ್ದ ನನ್ನನ್ನು ಬಹಳ ಅನುಕಂಪದಿಂದ ಕಾಣುತ್ತಿದ್ದ. ಅವನು ಕೂಡ ನನ್ನ ಎಷ್ಟೋ ಕಷ್ಟಗಳ ಕಾಲದಲ್ಲಿ ಸಹಾಯ ಮಾಡಿದ್ದ. ಅವರನ್ನೆಲ್ಲ ಬಿಟ್ಟು ಹುಚ್ಚನಂತೆ ಓದುತ್ತಿದ್ದೆ. ಅಂತಿಮ ವರ್ಷದ ಪರೀಕ್ಷೆ ಬರೆದಿದ್ದೆ. ಸದ್ಯ ಪಾಸಾಗಿದ್ದೆ. ರಜೆಯನ್ನು ಹಾಸ್ಟಲಲ್ಲೆ ಕಳೆದಿದ್ದೆ. ಅವರು ಇವರು ಹೇಗೋ ಊಟ ನೀಡುತ್ತಿದ್ದರು. ತಾತ್ಕಾಲಿಕವಾಗಿ ಯಾವುದಾದರು ಒಂದು ಹೋಟೆಲಲ್ಲಿ. ಕೆಲಸಕ್ಕೆ ಸೇರಿಕೊಳ್ಳುವ ಆಸೆ ಇತ್ತು. ಹೋಟೆಲೊಂದರಲ್ಲಿ ಹೋಗಿ ಕೇಳಿದ್ದೆ. ಓನರ್ ವಿಚಾರಿಸಿದ್ದ. ಬುದ್ಧಿ ಹೇಳಿದ್ದ. ‘ಬಿ.ಎ.ಓದಿದ್ದೀಯೇ; ಪಾಸಾಗಿದ್ದೀನಿ ಅಂತೀಯೆ… ಮುಂದಕ್ಕೆ ಓದು… ಯಾರಾದ್ರು ಸಹಾಯ ಮಾಡ್ತಾರೆ’ ಎಂದು ಕಳಿಸಿಬಿಟ್ಟಿದ್ದ.

ಹೌದಲ್ಲವೇ… ಅಲ್ಲೂ ಕೂಡ ಹಾಸ್ಟಲಿವೆ. ಸೀಟು ಸಿಕ್ಕರೆ ಹೇಗೊ ಬದುಕು ದೂಡಬಹುದು ಎಂದು ಗೆಳೆಯರ ಮುಖ ಮುಖ ನೋಡಿದೆ. ಅವರವರು ಅವರವರ ಓದಿನ ದಾರಿಯಲ್ಲಿ ನನ್ನತ್ತ ನೋಡುವಷ್ಟು ವ್ಯವದಾನ ಇರಲಿಲ್ಲ. ‘ಶ್ರೀಧರಾ; ಏನು ಮಾಡ್ಲೊ?’ ಎಂದು ಕೇಳಿದೆ. ‘ಟ್ರೈ ಮಾಡೊ! ಒಂದು ಅಪ್ಲಿಕೇಷನ್‌ಗೆ ಫೈವ್ ರುಪೀಸ್ ಅಷ್ಟೇ…. ನಾಲ್ಕಾರು ಡಿಪಾರ್ಟ್ಮೆಂಟ್‌ಗಳಿಗೆ ಅಪ್ಲೈ ಮಾಡ್ಕೊ… ನನಗೂ ಖರ್ಚಿವೆ’ ಎಂದಿದ್ದ. ಆ ತುರ್ತಿಗೆ ಒಂದು ಐವತ್ತು ರೂಪಾಯಿ ಇದ್ದಿದ್ದರೆ ಸಾಕಿತ್ತು. ವದ್ದಾಡಿದೆ. ಕಾಡಿ ಬೇಡಿದೆ ಅಲ್ಲಿ ಇಲ್ಲಿ. ಅಕ್ಕನ ಮನೆಗೆ ಹೋಗಲೇ ಎನಿಸಿ ಸ್ವಾಭಿಮಾನ ತಡೆಯಿತು. ರಾಮದಾಸ್ ಅವರ ಬಳಿ ಮತ್ತೆ ಕೇಳುವುದು ಬೇಡ ಎನಿಸಿತು. ಈ ಸುಂದರ ನಗರದಲ್ಲಿ ಎಷ್ಟೊಂದು ಸಾಹಿತಿಗಳು, ಹೋರಾಟಗಾರರು ಇದ್ದಾರಲ್ಲಾ… ಅವರ ಮುಂದೆ ಬೇಡಲೇ… ಥತ್, ಇದ್ಯಾವುದೂ ಬೇಡ ಎನಿಸಿತು. ಅವತ್ತು ಒಂದು ಹತ್ತು ರೂಪಾಯಿಯು ನನಗೆ ಸಿಕ್ಕಿರಲಿಲ್ಲ. ಅಷ್ಟೊಂದು ಜನಾ, ಅದೆಲ್ಲ ಹೋರಾಟ, ವಿಚಾರ, ಎಚ್ಚರ ಇದ್ದರೂ ಸಕಾಲಕ್ಕೆ ಯಾವುದೂ ಕೂಡಿ ಬರುವುದಿಲ್ಲ ಯಾಕೆ ಎಂದು ತೊಳಲಾಡಿದೆ.

ಮುಳುಗುವವನಿಗೆ ಹುಲ್ಲುಕಡ್ಡಿ ಸಿಕ್ಕರೂ ಹಿಡಿದುಕೊಳ್ಳುವಂತೆ ಚಿಕ್ಕಪ್ಪ ಎಂಬ ಒಂದು ಪ್ರಾಣಿಗೆ ಪತ್ರ ಬರೆದಿದ್ದೆ. ಕೇವಲ ಐವತ್ತು ರೂಪಾಯಿ ಕಳುಹಿಸಿ ಎಂದು. ಆತ ಕಳಿಸಿರಲಿಲ್ಲ. ಯಾರೊ ಒಬ್ಬ ಗೆಳೆಯ ‘ಶಾಸ್ತ್ರಿ ’ ಎಂದು ಕರೆಯುತ್ತಿದ್ದರು ಅವನನ್ನು. ಆಗ ತಾನೆ ಪರಿಚಯವಾಗಿದ್ದ. ಚಿತ್ರದುರ್ಗದವನು. ಎಂಎಡ್ ಮಾಡುತ್ತಿದ್ದ. ಅವತ್ತಿಗೆ ಸಾಲ ಎಂದು ನೂರು ರೂಪಾಯಿ ಕೊಟ್ಟಿದ್ದ. ಐದು ವಿಭಾಗಗಳಿಗೆ ಅಪ್ಲೈ ಮಾಡಿದ್ದೆ. ಇತಿಹಾಸ, ಅರ್ಥಶಾಸ್ತ್ರ, ಸಮಾಜ ಕಾರ್ಯ, ಮಾನವ ಶಾಸ್ತ್ರ, ಪತ್ರಿಕೋದ್ಯಮ ವಿಷಯಗಳಲ್ಲಿ ಪ್ರವೇಶ ಬಯಸಿದ್ದೆ. ಮೊದಲ ಸುತ್ತಿನಲ್ಲೆ ಎಲ್ಲ ಕಡೆ ಸೀಟು ಸಿಕ್ಕಿದ್ದವು. ಅರ್ಥಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿದ್ದೆ. ನನ್ನ ಸಂತೋಷಕ್ಕೆ ಮೇರೆಯೆ ಇರಲಿಲ್ಲ. ಸುಲಭವಾಗಿ ಇಲ್ಲಿ ಎರಡು ವರ್ಷ ಬದುಕಿ ಉಳಿಯಲು ದಾರಿ ಸಿಕ್ಕಿದೆ ಎಂದು ಕುಣಿದಾಡಿದೆ. ಆದರೆ ಹಾಸ್ಟಲಲ್ಲಿ ಮೊದಲ ಸರದಿಯಲ್ಲಿ ಸೀಟು ಸಿಕ್ಕಿರಲಿಲ್ಲ. ಆ ವಾರ್ಡನ್ ಛತ್ರಿ ಎನಿಸಿತ್ತು. ಮುಲಾಜಿಗೆ ಬೇಕಾದಂತೆ ಸೀಟು ನೀಡಿದ್ದ. ಹೋಗಿ ಜಗಳ ಮಾಡಿದೆ. ಆತನೊಬ್ಬ ದರಿದ್ರ ಧಡೂತಿ ಹೊಟ್ಟೆಯ ದಲಿತ ಪ್ರಾಧ್ಯಾಪಕನೆ ಆಗಿದ್ದ. ‘ನೋಡೋಣ ತಾಡ್ರಿ’ ಎಂದು ಹೊರಗೆ ಕಳಿಸಿದ್ದ.

ಅದಾಗಲೆ ಎಂ.ಎ.ತರಗತಿಗಳು ಆರಂಭವಾಗಿದ್ದವು. ಪಿ.ಜಿ.ಒಲ್ಡ್ ಬ್ಲಾಕಿನಲ್ಲಿದ್ದ ಗೆಳೆಯರ ಕೊಠಡಿಯಲ್ಲೆ ಮಲಗಿ ಏನೊ ಸಿಕ್ಕಿದ್ದ ತಿಂದು ವಾರ ಕಳೆದ ನಂತರ ಹಾಸ್ಟಲಲ್ಲಿ ಸೀಟು ಸಿಕ್ಕಿತ್ತು. ಎಲ್ಲವೂ ಸಿಂಗಲ್ ರೂಂಗಳೇ. ಸುಸಜ್ಜಿತ ವ್ಯವಸ್ಥೆ. ಮರುಜೀವ ಬಂದಿತ್ತು. ಅದೇ ಬಂಜಗೆರೆ ಇತ್ಯಾದಿ ಗೆಳೆಯರೆಲ್ಲ ಒಟ್ಟಿಗೆ ಕಲೆತೆವು. ಒಂದು ಯೂನಿವರ್ಸಿಟಿಯ ವಿದ್ಯಾರ್ಥಿ ತಾನು ಎಂದು ನಂಬಲು ಆಗುತ್ತಲೆ ಇರಲಿಲ್ಲ. ಊರಿಗೆ ಹೋಗಿ ಇದನ್ನು ತಿಳಿಸಬಾರದು ಎಂದು ಕಣ್ಮರೆ ಆದೆ. ಹೊಸದೊಂದು ಜಗತ್ತು ತೆರೆದುಕೊಂಡಿತ್ತು. ನೇರ ರಾಮದಾಸ್ ಅವರ ಮನೆಗೆ ಹೋಗಿ ವಿಷಯ ತಿಳಿಸಿದೆ. ಹೆಮ್ಮೆ ಪಟ್ಟರು. ನಾಳಿನ ನಡೆ ಹೇಗಿರಬೇಕು ಎಂದು ವಿವರಿಸಿ ತಮ್ಮ ಬೈಕಲ್ಲಿ ಕೂರಿಸಿಕೊಂಡು ಗಂಗೋತ್ರಿಗೆ ತಂದು ಬಿಟ್ಟರು. ‘ನೀನು ಯಾವಾಗಲಾದರೂ ಏನೇ ಕಷ್ಟ ಎದುರಾದರೂ ನೇರ ನನ್ನ ಮನೆಗೆ ಬರಬೇಕು’ ಎಂದು ಹೇಳಿ ಹೋದರು. ಆ ದಿನ ಹಾಸ್ಟಲಲ್ಲಿ ಮೊದಲ ಬಾರಿಗೆ ಊಟ ಮಾಡುವಾಗ ತಟ್ಟೆಗೆ ಹಾಕಿದ್ದ ಅನ್ನವ ಮುಟ್ಟಿ ನಮಸ್ಕರಿಸಿ ಉಂಡೆ. ಏನೊ ಸಂಕಟ ಅನ್ನದ ಜೊತೆಯೇ ಕೆಳಗಿಳಿಯಿತು.

ಬೆಳದಿಂಗಳು ಚೆಲ್ಲಿತ್ತು ಗಂಗೋತ್ರಿಯ ತುಂಬ. ಅದೊಂದು ನಂದನವನದಂತಿತ್ತು. ವಿಶಾಲ ರಸ್ತೆಗಳು. ಉದ್ದಕ್ಕೂ ಬಣ್ಣ ಬಣ್ಣದ ಹೂ ಮರಗಳು… ಹಳದಿ ಬಣ್ಣದ ವಿದ್ಯುತ್ ದೀಪಗಳು… ಮೌನದಲ್ಲಿ ಬಿರಿಯುವ ಹೂ ಬಳ್ಳಿಗಿಡಗಳ ಕಂಪು. ಸ್ವಪ್ನ ಲೋಕದಲ್ಲಿದ್ದೇನೆ ಎನಿಸಿತ್ತು. ಅಲ್ಲಲ್ಲಿ ಪ್ರತ್ಯೇಕ ಪರಿಣಿತ ವಿಭಾಗಗಳು. ರಾತ್ರಿಕೂಡ ಅಲ್ಲಿ ವಿಜ್ಞಾನ ವಿದ್ಯಾರ್ಥಿಗಳು ಲ್ಯಾಬಲ್ಲಿ ಸಂಶೋಧನೆಯಲ್ಲಿ ತೊಡಗಿದ್ದರು. ಹೊರಗಿನ ಯಾರೂ ಅಲ್ಲಿ ಬರುವಂತಿರಲಿಲ್ಲ. ವಿಸ್ತಾರ ಕಟ್ಟಡಗಳು. ಅವುಗಳ ಮುಂದೆ ಅಲಂಕಾರಿಕ ಪಾರ್ಕುಗಳು… ಗುಂಪು ಗುಂಪಾದ ಮರಗಳು. ಅಲ್ಲಿಯ ಗಾಳಿಯೇ ಒಂಥರ ಪರಿಮಳ. ಯಾವುದೊ ವಿದೇಶದಲ್ಲಿರುವೆ ಎನಿಸುತ್ತಿತ್ತು. ಹಿತಮಿತ ಭಾಷೆ. ಬೊಗಳೆಗೆ ಅವಕಾಶವಿಲ್ಲ. ರಾತ್ರಿ ವೇಳೆ ಒಬ್ಬನೇ ಆ ಕ್ಯಾಂಪಸ್ಸಿನಲ್ಲಿ ಅಡ್ಡಾಡುವುದು ಸ್ವರ್ಗ ಎನಿಸಿತು. ಆ ನನ್ನೂರ ಅಮರಾವತಿ ಹುಚ್ಚಿ ನೆನಪಾದಳು. ತರ್ಕವೇ ಇಲ್ಲ; ಕಾರಣವೇ ಇಲ್ಲ ಎಷ್ಟೋ ನೆನಪುಗಳಿಗೆ ಹಾಗೆ ಬಂದು ಹಾಗೆ ಆವಿಯಾಗಿಬಿಡುತ್ತವೆ. ನನ್ನ ತಾಯಿ ಬದುಕಿದ್ದಿದ್ದರೆ ಖಂಡಿತ ಬಿಡುತ್ತಿರಲಿಲ್ಲಾ… ‘ನಾಲ್ಕಕ್ಷರ ಅಲ್ಲಾ… ಎಷ್ಟು ಅಕ್ಷರ ಕಲೀತಿದ್ದೀನಿ ನೋಡು’ ಎಂದು ಆ ಪರಿಸರದಲ್ಲಿ ತಾಯನ್ನೆ ಮೆರೆಸಿಬಿಡುತ್ತಿದ್ದೆ. ಏನೋ ನೆರಳು ಸರಿದಂತಾಯಿತು. ನೆರಳು ನಮ್ಮ ಬೆನ್ನು ಕಾಯುವ ಮಾಯದ ಶಕ್ತಿ ಎಂದುಕೊಂಡೆ. ಇಲ್ಲಿಗೆ ಬಂದ ಮೇಲೆ ಹೆಚ್ಚಿಗೆ ನಿದ್ದೆ ಮಾಡಬಾರದು. ಮತ್ತೆ ಈ ಲೋಕ ಸಿಗುವುದಿಲ್ಲ. ಈಗಲೇ ಅದನ್ನೆಲ್ಲ ಬಸಿದು ಬಸಿದು ತುಂಬಿಕೊಳ್ಳಬೇಕು ಎಂದು ತಡ ರಾತ್ರಿತನಕ ಪುಸ್ತಕಗಳಲ್ಲಿ ಕಳೆದು ಹೋಗುತ್ತಿದ್ದೆ. ಅವೆಲ್ಲ ನನ್ನೊಳಗೆ ಕರಗಿ ಹೋಗುತ್ತಿದ್ದವು. ಅವನ್ನು ಉಲ್ಲೇಖಿಸಿ ಹೇಳಲು ಬರುತ್ತಿರಲಿಲ್ಲ. ನನ್ನ ಭಾಷೆಯಲ್ಲಿ ಅವು ಬೇರೆ ರೂಪ ಧರಿಸುತ್ತಿದ್ದವು. ನನ್ನ ಭಾಷೆ, ಆಲೋಚನೆಯ ದಿಕ್ಕೇ ಬದಲಾಗಿದ್ದವು. ಆದರೆ ನಾಲ್ಕು ಜನರ ಮುಂದೆ ನಿಂತು ಮಾತಾಡು ಎಂದರೆ ಸಾಧ್ಯವಿಲ್ಲ ಎನ್ನುತ್ತಿದ್ದೆ. ಮುದುಡಿ ಹೋಗುತ್ತಿದ್ದೆ ಜನರ ನಡುವೆ. ಆದರೆ ಕೃತಿ ಒಂದರ ಓದಿನಲ್ಲಿ ಕುದುರೆ ಸವಾರನಂತೆ ಆರ್ಭಟಿಸಿ; ನನಗೆ ನಾನೇ ಕನಸಿನಲ್ಲಿ ಮಾತಾಡಿಕೊಂಡು ಸೇನಾನಿಯಾಗಿ ಬಿಡುತ್ತಿದ್ದೆ. ನೋಡಿದವರು ಮರುಕ ಪಡುತ್ತಿದ್ದರು.

ಗಂಗೋತ್ರಿಯ ಲೈಬ್ರರಿಯೇ ನನ್ನ ದೇಗುಲವಾಗಿತ್ತು. ಅಲ್ಲಿ ಕಾಲಕಳೆದಲ್ಲದೆ ಉಣ್ಣಲು ಮನಸ್ಸು ಬರುತ್ತಿರಲಿಲ್ಲ. ರಶೀದ್ ಎಂ.ಎ.ಗೆ ಇನ್ನೂ ಬಂದಿರಲಿಲ್ಲ. ಒಂದು ವರ್ಷ ಕಿರಿಯವನಿದ್ದ. ಶ್ರೀಧರ ಇತಿಹಾಸ ವಿಭಾಗ ಸೇರಿದ್ದ. ಹಾಗೆ ಒಂದೊಂದು ವಿಭಾಗಕ್ಕೆ ಹಂಚಿ ಹೋದೆವು ಎಂದರೆ; ಅಷ್ಟರ ಮಟ್ಟಿಗೆ ಸ್ನೇಹವೂ ತುಂಡಾಗುತ್ತಿತ್ತು. ಹೊಸಬರು ಸೇರಿಕೊಳ್ಳುತ್ತಿದ್ದರು. ಉಮಾಶಂಕರ ನನ್ನ ವಿಭಾಗದಲ್ಲೇ ಇದ್ದರೂ ವಿಲೇಜ್ ಹಾಸ್ಟೆಲ್ ಸೇರಿದ್ದ. ಆಗ ಕುವೆಂಪು ಅವರು ಕುಲಪತಿ ಆಗಿದ್ದಾಗ ಹಳ್ಳಿಗಾಡಿನ ಬಡ ರೈತಾಪಿ ವಿದ್ಯಾರ್ಥಿಗಳಿಗೆಂದೇ ಆ ವಿಲೇಜ್ ಹಾಸ್ಟಲ್ ಪರಿಕಲ್ಪನೆಯ ಜಾರಿಗೊಳಿಸಿದ್ದರಂತೆ. ಅಲ್ಲಿ ವಿದ್ಯಾರ್ಥಿಗಳೆ ಬೆಳೆ ಬೆಳೆದು ತಾವೇ ಪಡೆದು ಅಲ್ಲೇ ಹಂಚಿ ಅಡುಗೆ ಮಾಡಿಕೊಂಡು ಸ್ವಾವಲಂಬಿ ಜೀವನ ಸಾಗಿಸಲು ಅನುವು ಮಾಡಿಕೊಟ್ಟಿದ್ದರಂತೆ. ನಾವು ಹೋಗುವಷ್ಟರಲ್ಲಿ ವಿದ್ಯಾರ್ಥಿಗಳಿಗೆಂದೇ ಬೆಳೆಗೆಂದು ಬಿಟ್ಟುಕೊಟ್ಟಿದ್ದ ಭೂಮಿಯು ಕ್ರಿಕೆಟ್ ಮೈದಾನವಾಗಿ ಬದಲಾಗಿತ್ತು. ಉಮಾಶಂಕರ್ ಅಲ್ಲಿದ್ದ. ಅಪರೂಪಕ್ಕೆ ವಿಲೇಜ್ ಹಾಸ್ಟಲಿನ ಅವನ ಕೊಠಡಿಗೆ ಹೋಗಿಬರುತ್ತಿದ್ದೆ. ಎಂ.ಎ. ಅರ್ಥಶಾಸ್ತ್ರ ನಿಜಕ್ಕೂ ಕಷ್ಟವಾಗಿತ್ತು. ಇಂಗ್ಲೀಷ್ ಮಾಧ್ಯಮದಲ್ಲಿ ಪಾಠ ಮಾಡುತ್ತಿದ್ದರು. ಇಂಗ್ಲೀಷ್ ತಿಳಿಯದಷ್ಟು ದಡ್ಡನೇನಾಗಿರಲಿಲ್ಲ. ತರಗತಿಯ ಆ ಕೃತಕ ಪಾಠಗಳೇ ಮನಸ್ಸಿಗೆ ಒಗ್ಗುತ್ತಿರಲಿಲ್ಲ. ಒಂದೊಂದು ತಾಸು ಏನೇನೊ ಹೇಳಿ ಹೋಗುತ್ತಿದ್ದರು. ವಿಷಯದ ಆಳವೇ ಇರಲಿಲ್ಲ. ಪಶ್ಚಿಮದ ನಕಲು ಪಾಠಗಳಿಂದ ಸಮಯ ವ್ಯರ್ಥ ಎಂದು ಲೈಬ್ರರಿಗೆ ಹೋಗಿ ಬೇಕಾದ ಗ್ರಂಥಗಳನ್ನು ತಡಕಿ ಓದಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆ. ‘ಎಕನಾಮೆಟ್ರಿಕ್ಸ್’ ಎಂಬ ಒಂದು ವಿಷಯ ತಲೆ ತಿನ್ನುತ್ತಿತ್ತು. ಅದೆಲ್ಲ ಗಣಿತಮಯ. ಹತ್ತನೆ ತರಗತಿಯಲ್ಲಿ ಫೇಲಾಗಿ ನರಳಿದ್ದು ಮತ್ತೆ ಇಲ್ಲಿ ಮರುಕಳಿಸಿತ್ತು. ಈ ಹಂತದಲ್ಲಿ ಫೇಲ್ ಮಾಡುವುದಿಲ್ಲ ಎಂದುಕೊಂಡಿದ್ದೆ. ಕೆಲವೇ ತಿಂಗಳಲ್ಲಿ ನಾನು ಹೋರಾಟಗಾರರ ಕೈಗೊಂಬೆ ಆಗಿಬಿಟ್ಟಿದ್ದೆ. ನೀರಸ ತರಗತಿಗಳು ಬೋರು ಮಾಡಿದ್ದವು. ಅಷ್ಟೆಲ್ಲ ಕಷ್ಟಗಳು ನನಗೆ ನಯವಿನಯ ಕಲಿಸುವ ಬದಲು ಪ್ರಬುದ್ಧ ವಯಸ್ಸಿಗೆ ಬರುವಷ್ಟರಲ್ಲಿ ವ್ಯಗ್ರತೆ ಪ್ರತಿರೋಧಗಳನ್ನು ಬಲವಾಗಿ ಬೆಳೆಸಿಬಿಟ್ಟಿದ್ದವು. ತಾಳ್ಮೆಯೇ ಇರಲಿಲ್ಲ. ನುಗ್ಗು ಎಂದರೆ ದಾಳಿಯನ್ನ ಮಾಡಿಬಿಡುತ್ತಿದ್ದೆ. ರಟ್ಟೆಗೆ ಶಕ್ತಿಯೂ ತಲೆಗೆ ಯುಕ್ತಿಯೂ ಬಂದುಬಿಟ್ಟಿದ್ದವು. ಯಾರಿಗೂ ಯಾವುದಕ್ಕೂ ಹೆದರುತ್ತಿರಲಿಲ್ಲ. ಬಂಜಗೆರೆ ಸಮಚಿತ್ತದಲ್ಲೇ ಇರುತ್ತಿದ್ದ. ಮಂಜುನಾಥ ತಬ್ಬಲಿ ಹುಡುಗನಂತೆ ನಮ್ಮಿಬ್ಬರ ಬೆನ್ನ ಹಿಂದೆ ಇರುತ್ತಿದ್ದ. ನೋಡಲು ಐನಾತಿ ದೇಹ; ಆದರೆ ತುಂಬ ಹೆದರುತ್ತಿದ್ದ. ಅಂತಹ ಬಳ್ಳಾರಿ ಸೀಮೆಯಿಂದ ಬಂದಿದ್ದ ಅವನಿಗೆ ಮಂಡ್ಯದ ಹುಡುಗರ ಮುಂದೆ ಅಂಜಿಕೆ ಸಹಜವಾಗಿತ್ತು.

ಆ ಸಾಕೇತ್ ಅದ್ಯಾವ ಕಾಡಲ್ಲಿ ಬಚ್ಚಿಟ್ಟುಕೊಂಡಿದ್ದನೊ… ಪ್ರತ್ಯಕ್ಷನಾದ. ಸ್ವಾಗತಿಸಿದೆವು. ಅವನ ತಿಳುವಳಿಕೆಗೆ ತಲೆಬಾಗಲೆ ಬೇಕಿತ್ತು. ಅದೇ ಭೂಗತ ಚಳುವಳಿಯ ನಟ್ಟಿರುಳ ಮಾತುಗಳು ಮೊಳಕೆಯೊಡೆದವು. ಅದಾಗಲೇ ಕ್ಯಾಂಪಸ್ಸಿನಲ್ಲಿ ತರಾವರಿ ಹೋರಾಟಗಳಿದ್ದವು. ಅವೆಲ್ಲ ಸಂಗಮಿಸುತ್ತಿದ್ದುದು ಗಾಂಧಿಭವನದಲ್ಲಿ. ಗಾಂಧಿ ಅಧ್ಯಯನ ಕೇಂದ್ರವಿತ್ತು ಅಲ್ಲಿ. ಮುಕ್ತ ಸಭಾಂಗಣ ಗುಂಪು ಮರಗಳ ಮರೆ. ಮರದಡಿಯೆ ಕೂತು ಹೋರಾಟಕ್ಕೆ ಮುಂಚೆ ಹಾಗು ನಂತರದ ಗತಿಯ ಕುರಿತು ಹತ್ತಾರು ಮಂದಿ ಕಲೆತು ಸಭೆ ಮಾಡುತ್ತಿದ್ದೆವು. ಆ ಯಾವ ಸಭೆಗಳಲ್ಲು ಸಲಹೆ ನೀಡಲು ಮುಂದಾಗುತ್ತಿರಲಿಲ್ಲ. ಎಲ್ಲ ನಮೂನೆಯ ವಿಚಾರವಂತರು ಆ ಸಭೆಗಳಲ್ಲಿ ಒಟ್ಟಾಗಿ ಸೇರಿ ಆ ಕ್ಷಣದ ನ್ಯಾಯಕ್ಕಾಗಿ ಪ್ರತಿರೋಧ ಒಡ್ಡುತ್ತಿದ್ದೆವು. ಅವೆಲ್ಲ ಈಗ ಅಷ್ಟಾಗಿ ನೆನಪಿಲ್ಲ. ಒಟ್ಟಿನಲ್ಲಿ ಸರ್ಕಾರದ ನೀತಿಗಳ ವಿರುದ್ಧವೇ ಕಹಳೆ ಮೊಳಗಿಸುತ್ತಿದ್ದವು. ಆ ಬಗೆಯ ವಿದ್ಯಾರ್ಥಿಗಳನ್ನು ಕಂಡರೆ ಕರ್ಮಟ ಪ್ರಾಧ್ಯಾಪಕರಿಗೆ ಆಗುತ್ತಿರಲಿಲ್ಲ. ಮೆಚ್ಚುವವರೂ ಇದ್ದರು. ತೊಂಬತ್ತರ ದಶಕದ ಗಂಗೋತ್ರಿಯಲ್ಲಿ ನಮ್ಮ ಹೆಜ್ಜೆಗಳೇ ಎದ್ದು ಕಾಣುತಿದ್ದವು.

ಕಾಳೇಗೌಡ ನಾಗವಾರ ಅವರು ಆಪ್ತವಾಗಿದ್ದರು. ಕ್ರಾಂತಿಯನ್ನೆ ಕನ್ನೆ ಎಂಬ ರೂಪಕದಲ್ಲಿ ಹೇಳುತ್ತಿದ್ದರು. ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಕಾಣುತಿದ್ದರು. ಮೈಸೂರಿನ ಆ ಕಾಲದ ಸಮಾಜವಾದಿಗಳು ನಮ್ಮ ದನಿಯಿಂದ ಪ್ರಾಯ ಬಂದವರಂತೆ ಮಾತಾಡುತ್ತಿದ್ದರು. ನಕ್ಸಲ್‌ವಾದಿಗಳೂ ಜೊತೆಗೂಡಿದ್ದರು. ಪ್ರೊ.ರಾಮಲಿಂಗಂ ಬಾಟನಿ ವಿಭಾಗದಲ್ಲಿದ್ದರು. ಆ ಹೊತ್ತಿಗೆ ಜಗತ್ತಿನ ಅತಿ ಮುಖ್ಯ ಸಸ್ಯ ವಿಜ್ಞಾನಿಗಳಲ್ಲಿ ಒಬ್ಬರೆಂದು ಕರೆಸಿಕೊಂಡಿದ್ದರು. ತೆಲುಗು ಮೂಲದ ಅವರ ಕನ್ನಡ ತಮಾಷೆಯಾಗಿತ್ತು. ಹೋರಾಟ ಎಂದರೆ ಸಾಕು; ತರಗತಿಯ ನಿಲ್ಲಿಸಿ ಬೀದಿಗೆ ಬಂದು ಬಿಡುತ್ತಿದ್ದರು. ಅವರ ಎದೆಗಾರಿಕೆ ಅಸಾಧಾರವಾಗಿತ್ತು. ಗುಂಡು ಹೊಡೆದಂತೆ ಮಾತಾಡುತ್ತಿದ್ದರು. ಯಾರೂ ಅವರ ತಂಟೆಗೆ ಹೋಗುತ್ತಿರಲಿಲ್ಲ. ಯಾವುದಕ್ಕೂ ಸಿದ್ಧವಾಗಿದ್ದ ಹೋರಾಟಗಾರ ಅವರಾಗಿದ್ದರು. ಬದ್ಧತೆ ಎಂದರೆ ಪರಿಶುದ್ಧ ಬದ್ಧತೆ. ಒಂದಿಂಚೂ ರಾಜಿಯ ಪ್ರಶ್ನೆಯೇ ಇಲ್ಲ. ಯಾವೊಬ್ಬ ಅಪ್ರಮಾಣಿಕ ಸಾಹಿತಿಗಳನ್ನು ಬಿಡುತ್ತಿರಲಿಲ್ಲ. ಬಡಾಯಿ ಬೋಳೆ ಸಾಹಿತಿಗಳನ್ನು ‘ಗಂಡು ಸೂಳೆಗಳು’ ಎಂದು ಜರಿದು ಅದೇ ಹೆಸರಿನಲ್ಲಿ ಒಂದು ಕವನ ಸಂಕಲನವನ್ನು ಪ್ರಕಟಿಸಿ ಬಿಸಿ ಮುಟ್ಟಿಸಿದ್ದರು. ತಮ್ಮ ಮನೆಗೆ ಕರೆದೊಯ್ಯುತ್ತಿದ್ದರು. ನಾನೂ ಜೇಪಿ ಸಾಕಷ್ಟು ಬಾರಿ ಅವರ ಮನೆಯ ಚಹಾ ಕುಡಿದಿದ್ದೆವು. ಸಿಗರೇಟು ಸೇದುವುದು ಅವರ ಚಟ. ನಮಗೂ ಕೊಟ್ಟು ಜೊತೆಯಲ್ಲೇ ಸೇದಿಸುತ್ತಿದ್ದರು. ತಮ್ಮ ತೆಲುಗು ಮಿಶ್ರಿತ ಕನ್ನಡ ಕವಿತೆಗಳಿಗೆ ಟ್ಯೂನ್ ಹಾಕಿ ಹಾಡುತ್ತಿದ್ದರು. ಅವರ ಕ್ರಾಂತಿಯ ಗತ್ತಿನ ಮುಂದೆ ನಗು ಬರುತ್ತಿರಲಿಲ್ಲ. ಆಂಧ್ರದ ಪ್ರಸಿದ್ಧ ನಕ್ಸಲ್‌ವಾದಿಗಳೆಲ್ಲ ರಾಮಲಿಂಗಂ ಸಂಪರ್ಕದಲ್ಲಿದ್ದರು. ಕೆಲವರು ತಲೆ ಮರೆಸಿಕೊಂಡು ಬಂದು ಅವರ ಮನೆಯಲ್ಲಿದ್ದು ಹೋಗುತ್ತಿದ್ದರು. ಅರ‍್ಯಾರನ್ನೂ ನೇರವಾಗಿ ಪರಿಚಯಿಸುತ್ತಿರಲಿಲ್ಲ. ನೋಡಿದರೇ ಗೊತ್ತಾಗುತ್ತಿತ್ತು; ಇವರು ಈಗತಾನೆ ಯಾವುದೊ ಒಂದು ಕಾರ್ಯಾಚರಣೆಯ ನೀಲನಕ್ಷೆಗಾಗಿ ಇಲ್ಲಿಗೆ ಬಂದಿದ್ದಾರೆಂದು… ಕೆಟ್ಟ ಕುತೂಹಲಕ್ಕೆ ಮುಂದಾಗುತ್ತಿರಲಿಲ್ಲ.

ನಮಗೆ ನಾಳೆಯೇ ಕ್ರಾಂತಿ ಆಗಿಬಿಡಬೇಕು ಎಂಬ ಹಗಲುಗನಸಿನ ಯಾವ ತುರ್ತುಗಳೂ ಇರಲಿಲ್ಲ. ನಾವು ತಿಳಿಯುವುದು ಬಹಳ ಬಾಕಿ ಇತ್ತು. ಇವರ ಸಹವಾಸದಲ್ಲಿ ನಾನು ತರಗತಿಗಳನ್ನೆ ಮರೆತುಬಿಟ್ಟಿದ್ದೆ. ಪಾಸಾಗಲು ಎಷ್ಟು ಬೇಕೊ ಅಷ್ಟು ಸಾಕು ಎಂದು ಉಪೇಕ್ಷೆಯಲ್ಲಿದ್ದೋ… ಅಷ್ಟರಲ್ಲಿ ಅರ್ಥಶಾಸ್ತç ವಿಭಾಗದ ಪ್ರಾಧ್ಯಾಪಕರು ನನ್ನನ್ನು ಮೆಚ್ಚಿದ್ದರು. ಅವಿವಾಹಿತರಾಗಿ ಖಡಕ್ಕಾಗಿ ಒಂದು ಸೂಟ್ಕೇಸ್ ಹಿಡಿದು ವಿಭಾಗಕ್ಕೆ ಬರುತ್ತಿದ್ದ ಅವರು ವಿಚಿತ್ರ ಎಂಬಂತೆ ಹಸಿರು ಟವಲ್ ಹಾಕಿಕೊಂಡಿರುತ್ತಿದ್ದರು. ಆದಾಗಲೆ ನಮಗೆ ಪ್ರೊ.ನಂಜುಂಡಸ್ವಾಮಿ ಅವರು ಪರಿಚಯವಾಗಿದ್ದರು. ಮೈಸೂರಿನ ರಂಗಾಚಾರ್ಲು ಭವನದ ಎದುರಿನ ಬಯಲಿನಲ್ಲಿ ಅವರ ಭಾಷಣ ಇತ್ತು. ಜೇಪಿ ನಾನೂ ಹೋಗಿದ್ದೆವು. ಆಗ ‘ನಮ್ಮ ನಾಡು’ ಪತ್ರಿಕೆಯನ್ನು ನಂಜುಂಡ ಸ್ವಾಮಿಯವರು ಸಂಪಾದಿಸಿ ಪ್ರಕಟಿಸುತ್ತಿದ್ದರು. ಅದೊಂದು ರೈತ ನೀತಿಯ ವಾರ ಪತ್ರಿಕೆ ಆಗಿತ್ತು. ಅತ್ತ ಲಂಕೇಶ್ ಪತ್ರಿಕೆ ತರಂಗಗಳ ಎಬ್ಬಿಸಿತ್ತು. ಸಭೆಯ ನಂತರ ವಿದ್ಯಾರ್ಥಿಗಳೆಂದು ಪರಿಚಯಿಸಿಕೊಂಡಿದ್ದೆವು. ಬೆನ್ನು ತಟ್ಟಿದ್ದರು. ನಮ್ಮ ಪತ್ರಿಕೆಗೆ ಏನಾದರೂ ಹಳ್ಳಿಗಳ ಕಷ್ಟಸುಖದ ಬಗ್ಗೆ ಬರೆಯಿರಿ ಎಂದಿದ್ದರು. ‘ಅವನ ದಿನಗಳು’ ಎಂಬ ಎಳಸು ಕತೆಯ ಕಳಿಸಿದ್ದೆ. ಪ್ರಕಟವಾಗಿತ್ತು. ಗಾರ್ಕಿಯ ಪ್ರಭಾವದಿಂದ ಇನ್ನೊಂದು ಕಥೆ ‘ಪುಟ್ಟಿಯ ಪತ್ರ’ ಕಳಿಸಿದ್ದೆ. ಓದುಗರಿಗೆ ತಲುಪಿತ್ತು. ಯಾರಿಗೂ ಗೊತ್ತಾಗಿರಲಿಲ್ಲ. ರಶೀದನ ಮೂಲಕ ಪರಿಚಯವಾಗಿದ್ದ ಗೆಳೆಯ ಗಂಗಾಧರಯ್ಯ ಆ ಪತ್ರಿಕೆ ಕೊಂಡೊಯ್ದು ಕಳೆದು ಹಾಕಿದ್ದ. ಆಗ ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕವನ ಸ್ಪರ್ಧೆಯಲ್ಲಿ ಪ್ರತಿದಿನದ ಸೂರ್ಯ ಪ್ರತಿದಿನದಂತೆ ಇರುವುದಿಲ್ಲ ಎಂಬ ಅರ್ಥ ಪೂರ್ಣ ಕವಿತೆ ಬರೆದಿದ್ದ. ಅದರಲ್ಲಿ ರಶೀದ ನಾಲ್ಕು ಬಾರಿ ಬಹುಮಾನ ಪಡೆದಿದ್ದ. ಬಂಜಗೆರೆಯೂ ನಾನೂ ಎರಡೆರಡು ಸರತಿ ಗೆದ್ದಿದ್ದೆವು.

ಬೇಂದ್ರೆ ಕಾವ್ಯ ಸ್ಪರ್ಧೆ ಪ್ರತಿಷ್ಟಿತವಾಗಿತ್ತು. ಪ್ರತಿಭೆಗಳನ್ನು ಹುಡುಕಿ ಪ್ರೋತ್ಸಾಹಿಸುವ ತಕ್ಕ ವೇದಿಕೆಯನ್ನು ಕ್ರೈಸ್ಟ್ ಕಾಲೇಜಿನ ಚಿ.ಶ್ರೀನಿವಾಸ ರಾಜು ಅವರು ನಿರ್ವಹಿಸುತ್ತಿದ್ದರು. ಎಲ್ಲವೂ ಒಟ್ಟೊಟ್ಟಿಗೆ ಜರುಗುತ್ತಿದ್ದವು. ಎಲ್ಲಾ ಸಭೆಗಳಲ್ಲು ನಾವು ಖಾಯಂ ಸದಸ್ಯರಿದ್ದೆವು. ವಿಚಾರ ಬೇಧವೆ ಇರಲಿಲ್ಲ. ಪ್ರೇಮ ಪ್ರೀತಿಗಳಿಗೂ ಸಾಕಷ್ಟು ಬಿಡುವಿತ್ತು. ನನ್ನತ್ತ ಯಾರೂ ನೋಡುತ್ತಿರಲಿಲ್ಲ. ಅಷ್ಟರಲ್ಲಿ ನೆತ್ತಿಯ ಕೂದಲೆಲ್ಲ ಉದುರಿ ಹಿರಿಯನಂತೆ ಕಾಣುತಿದ್ದೆ. ಹುಡುಗಿಯರನ್ನು ಆಕರ್ಷಿಸುವ ಯಾವ ಸಾಹಸವನ್ನು ಮಾಡುತ್ತಿರಲಿಲ್ಲ. ಅವರಿಂದ ನಿರಾಕರಣೆಯ ಅಪಮಾನಕ್ಕೆ ಈಡಾಗುವುದೆ ಬೇಡ ಎಂದು ಎಚ್ಚರ ವಹಿಸುತ್ತಿದ್ದೆ. ಆ ಹಳ್ಳಿಯ ಹುಡುಗಿಯ ಕತೆ ಬೇರೆ. ನನಗೂ ಗೊತ್ತಿಲ್ಲ. ನನ್ನ ಆ ಸ್ಥಿತಿಯಲ್ಲಿ ಯಾವ ಮೋಹದಲ್ಲಿ ಕರೆದಿದ್ದಳೋ ಅಥವಾ ಬಪೂನ್ ಮಾಡಲು ಮುಂದಾಗಿದ್ದಳೊ. ಅವಳ ವಿಚಾರದಲ್ಲಿ ನಾನು ಅರ್ಧ ಕಮಂಗಿ ಆಗಿದ್ದೆ.

ಹುಡುಗಿಯರ ಮಧ್ಯೆ ಬಹಳ ಗಾಂಭೀರ್ಯ ತೋರುತಿದ್ದೆ. ಇವನು ಚಿಂತಕ ಎಂದು ಹುಡುಗಿಯರು ಬಿರುದು ಕೊಟ್ಟಿದ್ದರು. ಅವರು ಎಂ.ಎ.ಮುಗಿಸಿ ಹೋದಾಗಲೇ ಗೊತ್ತಾಗಿದ್ದುದು; ಚಿಂತಕ ಎಂದರೆ ಬಿಡಿಗಾಸಿಗೂ ಬೇಡವಾದವನು ಎಂದು! ಅರೇ ಅವರೆಲ್ಲ ಗೌರವ ಕೊಡುತ್ತಿದ್ದರಲ್ಲಾ… ಆ ಗೌರವಕ್ಕೂ ಒಂದು ಅರ್ಥ ಸಂದರ್ಭವಿತ್ತು. ‘ಇವನು ನಮ್ಮ ಸೇಫ್‌ಗಾರ್ಡ್’ ಎಂದಿದ್ದರು. ಅಂದರೆ ಕಾವಲುಗಾರ! ಛೇ; ಈ ಹುಡುಗಿಯರನ್ನು ನಾನು ಹೇಗೆ ಅರ್ಥ ಮಾಡಿಕೊಂಡಿರುವೆ… ಕದ್ದು ಮುಚ್ಚಿ ಚಕ್ಕಂದ ಆಡುವ ಇವರಿಗೆ ನಾನ್ಯಾಕೆ ಕಾವಲುಗಾರನಾಗಬೇಕು ಎಂದು ಮುದುಡಿಕೊಳ್ಳುತಿದ್ದೆ. ಹುಡುಗಿಯರ ಸಹವಾಸ ಎಂದರೇ ಭಯವಾಗುತ್ತಿತ್ತು. ಏನೊ ಅನುಮಾನ ಅವರ ಬಗ್ಗೆ. ಎಲ್ಲಿ ಬೀಳಿಸಿಬಿಡುತ್ತಾರೊ ಎಂಬ ಪೂರ್ವಾಗ್ರಹವಿತ್ತು. ಚೆಲ್ಲಾಟ ಆಡಬಾರದು ಎಂಬ ಸ್ವಯಂ ನಿರ್ಬಂಧ ವಿದಿಸಿಕೊಂಡಿದ್ದೆ. ನನ್ನ ವಂಶದ ಬಹುಪಾಲು ಎಲ್ಲ ಗಂಡಸರೂ ಆ ವಿಷಯದಲ್ಲಿ ಬಹಳ ಮುಂದಿದ್ದರು. ಅದೊಂದು ಚಟ, ಜಾಡ್ಯವಾಗಿತ್ತು. ಎಷ್ಟೋ ಅಮಾಯಕ ಹೆಂಗಸರ ಸಂಸಾರಗಳನ್ನು ಅಪ್ಪ ಅನೈತಿಕ ಸಂಬಂಧಗಳಿಂದ ಕೆಡಿಸಿಬಿಟ್ಟಿದ್ದ. ಅವರ ಸರದಿಯಲ್ಲಿ ನಾನೂ ನಿಲ್ಲುವುದು ಬೇಡವಾಗಿತ್ತು. ಈ ಹುಡುಗಿಯ ಸಂಬಂಧ ಇಷ್ಟೇ ಎಂದು ಮೊದಲೇ ಗಡಿ ಹಾಕಿಕೊಳ್ಳುತ್ತಿದ್ದೆ.