ಮೋಹನ ಸ್ವಾಮಿ ಒಂದು ಕಥಾ ಸಂಕಲನವಾದರೂ ನಿಧಾನವಾಗಿ LGBT ಸಮುದಾಯದೆಡೆಗಿನ ನನ್ನ ಮನೋಭಾವನೆಯನ್ನು ಬದಲಾಯಿಸಿಕೊಳ್ಳಲು ಸಹಾಯಮಾಡಿತು. ನನ್ನೆದುರು ಆ ಸಮುದಾಯದ ವ್ಯಕ್ತಿಗಳು ಸಿಕ್ಕಾಗ ಮಾಮೂಲಿ ಗಂಡು ಹೆಣ್ಣುಗಳ ಹಾಗೇ (ಸ್ಟ್ರೇಟ್‌ಗಳು ಎಂಬರ್ಥದಲ್ಲಿ) ಮಾತನಾಡಲು, ಹರಟೆ ಹೊಡೆಯಲು ಸಾಧ್ಯವಾಯಿತು. ಹಾಗಾದರೆ ನಾನು ಈ ವಿಚಾರಲ್ಲಿ ನನ್ನ ಯೋಚನೆಯನ್ನು ನೂರಕ್ಕೆ ನೂರು ಬದಲಿಸಿಕೊಂಡೆನೇ? ಎಂದು ಕೇಳಿದರೆ ಉತ್ತರ ಗೊತ್ತಿಲ್ಲ, ಅಥವಾ ಇಲ್ಲವೆನ್ನಿಸುತ್ತದೆ.
ಓದುವ ಸುಖ ಅಂಕಣದಲ್ಲಿ ವಸುಧೇಂದ್ರರ “ಮೋಹನಸ್ವಾಮಿ” ಕೃತಿಯ ಕುರಿತು ಬರೆದಿದ್ದಾರೆ ಗಿರಿಧರ್ ಗುಂಜಗೋಡು

ಯಾವುದೇ ಒಂದು ಭಾಷೆಯ ಸಾಹಿತ್ಯ ಶ್ರೀಮಂತಗೊಳ್ಳುವುದು ಎಲ್ಲಾ ವಿಧದ ಜನರು ಬರೆಯಲು ಶುರುಮಾಡಿದಾಗ. ವಿವಿಧ ವೃತ್ತಿಗಳಲ್ಲಿ ಇರುವವರು, ವಿಭಿನ್ನ ಆರ್ಥಿಕ ಹಿನ್ನೆಲೆಯುಳ್ಳವರು, ಬೇರೆ ಬೇರೆ ಪ್ರದೇಶಗಳಿಂದ ಬಂದವರು, ಬೇರೆ ಬೇರೆ ಸಮುದಾಯಗಳಿಂದ ಬಂದವರು ಇತ್ಯಾದಿ. ಹೀಗೆ ವೈವಿಧ್ಯತೆ ಬೆಳೆದಷ್ಟೂ ವಿವಿಧ ರೀತಿಯ ಅನುಭವಗಳು ಬಂದು ಸಾಹಿತ್ಯ ಶ್ರೀಮಂತಗೊಳ್ಳುತ್ತಲೇ ಹೋಗುವುದು. ಈ ಸಾಲಿನಲ್ಲಿ ಇನ್ನೊಂದೆಂದರೆ, ಇತ್ತೀಚಿನ ದಶಗಳಲ್ಲಷ್ಟೇ ಕೇಳಲಾರಂಭಿಸಿದ ಧ್ವನಿ ಲೈಂಗಿಕ ಅಲ್ಪಸಂಖ್ಯಾತರದ್ದು. ಅಂದರೆ LGBT ಸಮುದಾಯದ್ದು.

ಹೆಚ್ಚಿನವರ ಲೈಂಗಿಕಾಸಕ್ತಿ ಇರುವುದು ವಿರುದ್ಧ ಲಿಂಗದವರ ಮೇಲೆ. ಅಂದರೆ, ಗಂಡಿಗೆ ಹೆಣ್ಣಿನ ಮೇಲೂ ಹೆಣ್ಣಿಗೆ ಗಂಡಿನ ಮೇಲೂ ದೈಹಿಕ ಆಕರ್ಷಣೆಯುಳ್ಳ ಸ್ಟ್ರೈಟ್ ಅಥವಾ ನೇರ ಲೈಂಗಿಕಾಸಕ್ತಿಯುಳ್ಳ ಜನರು. ಲೈಂಗಿಕ ಅಲ್ಪ ಸಂಖ್ಯಾತರ ವಿಷಯಕ್ಕೆ ಬಂದಾಗ, ಅವರನ್ನು ಸ್ಥೂಲವಾಗಿ ನಾಲ್ಕು ಪ್ರಕಾರಗಳಲ್ಲಿ ವಿಂಗಡಿಸಿದ್ದಾರೆ. ಹೆಣ್ಣಿಗೆ ಹೆಣ್ಣಿನ ಮೇಲೆ ಆಕರ್ಷಣೆಯುಳ್ಳ ‘ಲೆಸ್ಬಿಯನ್’, ಗಂಡಿಗೆ ಗಂಡಿನ ಮೇಲೆ ಆಸಕ್ತಿಯುಳ್ಳ ‘ಗೇ’, ಎರಡೂ ಲಿಂಗಿಗಳ ಮೇಲೆ ಆಕರ್ಶಿತರಾಗುವ ‘ಬೈ ಸೆಕ್ಶುವಲ್’ ಮತ್ತು ಲಿಂಗ ಬದಲಾವಣೆ ಮಾಡಿಕೊಂಡ ಟ್ರಾನ್ಸ್‌ಜೆಂಡರ್ ಸಮಯದಾಯ, ಇದರಲ್ಲೂ ಹಲವಾರು ಉಪ ಪ್ರಕಾರಗಳಿವೆ. ಈ ಪ್ರಕಾರದ ಲೈಂಗಿಕಾಸಕ್ತಿಯುಳ್ಳ ಜನರು ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದ್ದಾಗಲೀ ಅಥವಾ ಪ್ರವೇಶಿಸಿದರೂ ತಮ್ಮ ಸಂವೇದನೆಗಳನ್ನು ವ್ಯಕ್ತಪಡಿಸಿದ್ದಾಗಲೀ ಮುಂದುವರೆದ ದೇಶಗಳಲ್ಲೇ ಬಹಳ ವಿರಳ. ಕನ್ನಡದಲ್ಲಿ ಮತ್ತೂ ವಿರಳ.

ಮುಖ್ಯವಾಹಿನಿಯ ಕನ್ನಡ ಸಾಹಿತಿಗಳಲ್ಲಿ ವಸುಧೇಂದ್ರ ಅವರು ಮಾತ್ರ ಈ ಸಮುದಾಯದಿಂದ ಬಂದವರು. ಅವರು ಮೊತ್ತಮೊದಲು ತಮ್ಮ ‘ಮೋಹನ ಸ್ವಾಮಿ’ ಕೃತಿಯ ಮೂಲಕ ಈ ಸಮುದಾಯದ ಕುರಿತು ಬರೆಯತೊಡಗಿದರು.

ವಸುಧೇಂದ್ರ ಅವರ ಹೆಸರು ಕನ್ನಡ ಸಾಹಿತ್ಯಪ್ರಿಯರಿಗೆ ಹೊಸದಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿದ್ದವರು ಆ ಕ್ಷೇತ್ರವನ್ನು ಬಿಟ್ಟು ಪ್ರಕಾಶನ ಕ್ಷೇತ್ರವನ್ನು ಪ್ರವೇಶಿಸಿದವರು. ಅನೇಕ ಪ್ರಬಂಧ ಸಂಕಲನಗಳು, ಕಥಾ ಸಂಕಲನಗಳು, ಅನುವಾದ ಮತ್ತು ಕಾಂದಬರಿಗಳು ಪ್ರಸಿದ್ಧವಾಗಿದ್ದರೂ ಸಹ ಅತ್ಯಂತ ವಿಶಿಷ್ಟವಾಗಿ‌ ನಿಲ್ಲುವುದು ಅವರ ‘ಮೋಹನಸ್ವಾಮಿ’.

ಮೋಹನಸ್ವಾಮಿಯನ್ನು ಸ್ವಲ್ಪ ಪಕ್ಕಕ್ಕಿಟ್ಟು ವಸುಧೇಂದ್ರ ಅವರ ಬಗ್ಗೆ ಹೇಳುವುದಾದರೆ, ನನಗೆ ಮತ್ತು ನನ್ನ ಗೆಳೆಯರ ಬಳಗಕ್ಕೆ ಅವರ ಪರಿಚಯವಾಗಿದ್ದು ಪದವಿಯ ಸಮಯದಲ್ಲಿ. ಆಗ ಅವರ ಕೃತಿಗಳ ಮತ್ತು ಅವರ ಕುರಿತು ಮಾತಾಡುವಾಗ – ಅವರು ದೊಡ್ಡ ಸಾಫ್ಟ್‌ವೇರ್ ಇಂಜಿನಿಯರಂತೆ, ಲಕ್ಷಗಟ್ಟಲೇ ಸಂಬಳವಂತೆ, ದೊಡ್ಡ ಕೆಲಸವಂತೆ ಆದರೆ ಮದುವೆಯಾಗಿಲ್ಲವೆಂದಾಗ ಅವರಿಗೆ ಲವ್ ಫೇಲ್ಯೂರೋ ಇಲ್ಲಾ ಸಂನ್ಯಾಸಿಯಾಗ ಹೊರಟವರೋ ಅಂತ ಅಂದುಕೊಂಡಿದ್ದೆವು. ಮುಂದೆ ಅವರು ‘ಗೇ‌’ ಅನ್ನುವ ವಿಚಾರ ತಿಳಿದುಬಂದಾಗ, ಅದು ನನಗೆ ನಂಬುವುದಕ್ಕೆ ಕಷ್ಟವಾದ ಸಂಗತಿಯಾಗಿತ್ತು. ಅತಿಯಾಗಿ ಸಲಿಗೆಯಿಂದ ಗೆಳೆಯರನ್ನು ಛೇಡಿಸಲು, ಜೋಕು ಮಾಡಲು ಮಾತ್ರ ಬಳಸುತ್ತಿದ್ದ ‘ಹೋಮೋ’ ಪದ ಮತ್ತು ಹೋಮೋಗಳು ಸಾಧಾರಣ ಮನುಷ್ಯರಲ್ಲ ಅನ್ನುವುದೇ ದಟ್ಟವಾಗಿ ನಂಬಿದ್ದ ದಿನಗಳವು. ನಾನಂತೂ ಅವರುಗಳು ಆರೋಗ್ಯಕರ ಸಮಾಜದಲ್ಲಿ ಇರಲು ಲಾಯಕ್ಕಲ್ಲದ ಜನಸಮೂಹವೆಂದೇ ನಂಬಿದ್ದೆ.

೭-೮ ವರ್ಷಗಳ ಹಿಂದಿನ ಘಟನೆ. ಅಂದು ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಅವರು ಮುಖ್ಯ ಅತಿಥಿಯಾಗಿ ಬಂದಿದ್ದರು. ಸಭಾ ಕಾರ್ಯಕ್ರಮದ ಆರಂಭಕ್ಕೆ ಮುನ್ನ ಬಿಡುಗಡೆಯಾಗಿ ಕೆಲವೇ ತಿಂಗಳಾಗಿದ್ದ ಮೋಹನಸ್ವಾಮಿ ಕೃತಿಗೆ ಅವರಿಂತ ಹಸ್ತಾಕ್ಷರವನ್ನು ಪಡೆದೆ. ಆಮೇಲೆ ಸಾಹಿತ್ಯಾಸಕ್ತರಿಗೆಂದೇ ಅವರೊಟ್ಟಿಗೆ ಚಿಕ್ಕ ಸಂವಾದ ಇತ್ತು. ಆಗ ಅವರು ತಾವು ಗೇ ಅನ್ನುವ ಬಗ್ಗೆ ಮತ್ತು ಮೋಹನಸ್ವಾಮಿ ಕೃತಿಯ ಬಗ್ಗೆ ನಾಲ್ಕು ಮಾತುಗಳನ್ನಾಡಿದರು. ತಮ್ಮ ಭಿನ್ನ ಲೈಂಗಿಕಾಸಕ್ತಿಯ ಬಗ್ಗೆ ಅರಿವಾಗಿದ್ದು ಹೇಗೆ, ಅದನ್ನು ಸಾಮಾಜಿಕವಾಗಿ ಒಪ್ಪಿಕೊಂಡ ಬಗೆ ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಹೇಳಿದರು. ಹಾಗೇ ಕನ್ನಡದಲ್ಲಿ ಲೆಸ್ಬಿಯನ್ ಬರಗಾರ್ತಿಯರು ಬರಬೇಕೆನ್ನುವ ಆಶಯವನ್ನೂ ಹೇಳಿದ್ದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿದ್ದವರು ಆ ಕ್ಷೇತ್ರವನ್ನು ಬಿಟ್ಟು ಪ್ರಕಾಶನ ಕ್ಷೇತ್ರವನ್ನು ಪ್ರವೇಶಿಸಿದವರು. ಅನೇಕ ಪ್ರಬಂಧ ಸಂಕಲನಗಳು, ಕಥಾ ಸಂಕಲನಗಳು, ಅನುವಾದ ಮತ್ತು ಕಾಂದಬರಿಗಳು ಪ್ರಸಿದ್ಧವಾಗಿದ್ದರೂ ಸಹ ಅತ್ಯಂತ ವಿಶಿಷ್ಟವಾಗಿ‌ ನಿಲ್ಲುವುದು ಅವರ ‘ಮೋಹನಸ್ವಾಮಿ’.

ಅದನ್ನು ಓದಿದಾಗ, ಅಲ್ಲಿ ಬರುವ ಸಲಿಂಗ ಪ್ರೇಮದ ವಿವರಣೆಗಳನ್ನು ನೋಡಿ ಛೀ ಎಂದೇ ಅನ್ನಿಸಿತ್ತು. ನಿಜಕ್ಕೂ ಅಸಹ್ಯವಾಯಿತು. ಆದರೆ ಮನಸ್ಸು ನಿಧಾನವಾಗಿ ಮತ್ತೊಂದು ಕೋನದಲ್ಲಿ ಆಲೋಚಿಸತೊಡಗಿತು. ಹೇಗೆ ನನಗೆ ಹೆಣ್ಣಿನ ಮೇಲೆ ಆಕರ್ಷಣೆಯಾಗುವುದೋ ಅವರಿಗೆ ಗಂಡಿನ ಮೇಲೆ ಆಗುತ್ತದೆ. ಹೇಗೆ ನನಗೆ ಎಲ್ಲಾ ಹೆಣ್ಣುಗಳ ಮೇಲೆ ಅಂತ ಭಾವನೆ ಬರುವುದಿಲ್ಲವೋ ಅವರಿಗೂ ಹಾಗೇ ಆಗಬಹುದು. ಹೇಗೆ ನಾನು ನನ್ನ ಅಕ್ಕ ತಂಗಿಯರನ್ನು, ಗೆಳತಿಯರನ್ನು ಸ್ಪರ್ಷಿಸಿದಾಗ ಲೈಂಗಿಕಾಸಕ್ತಿ ಮೂಡುವುದಿಲ್ಲವೋ ಹಾಗೇ ಅವರಿಗೂ ಅಷ್ಟೇ ಅನ್ನುವ ವಿಚಾರ ನಿಧಾನಕ್ಕೆ ಹೊಳೆಯತೊಡಗಿತು. ಹೀಗೆ ಮೋಹನ ಸ್ವಾಮಿ ಒಂದು ಕಥಾ ಸಂಕಲನವಾದರೂ ನಿಧಾನವಾಗಿ LGBT ಸಮುದಾಯದೆಡೆಗಿನ ನನ್ನ ಮನೋಭಾವನೆಯನ್ನು ಬದಲಾಯಿಸಿಕೊಳ್ಳಲು ಸಹಾಯಮಾಡಿತು. ನನ್ನೆದುರು ಆ ಸಮುದಾಯದ ವ್ಯಕ್ತಿಗಳು ಸಿಕ್ಕಾಗ ಮಾಮೂಲಿ ಗಂಡು ಹೆಣ್ಣುಗಳ ಹಾಗೇ (ಸ್ಟ್ರೇಟ್‌ಗಳು ಎಂಬರ್ಥದಲ್ಲಿ) ಮಾತನಾಡಲು, ಹರಟೆ ಹೊಡೆಯಲು ಸಾಧ್ಯವಾಯಿತು. ಹಾಗಾದರೆ ನಾನು ಈ ವಿಚಾರಲ್ಲಿ ನನ್ನ ಯೋಚನೆಯನ್ನು ನೂರಕ್ಕೆ ನೂರು ಬದಲಿಸಿಕೊಂಡೆನೇ? ಎಂದು ಕೇಳಿದರೆ ಉತ್ತರ ಗೊತ್ತಿಲ್ಲ, ಅಥವಾ ಇಲ್ಲವೆನ್ನಿಸುತ್ತದೆ. ಕೆಲವೊಮ್ಮೆ ಆ ಸಮುದಾಯದ ಬಗ್ಗೆ ಹಾಸ್ಯಗಳು ಅಂಕೆ ತಪ್ಪಿ ಬರುತ್ತವೆ. ಮತ್ತೇ, ನನ್ನದೇ ಕುಟುಂಬವರ್ಗದಲ್ಲಿ ಯಾರಾದರೂ ಆ ಸಮಯದಾಯದವರಾದರೆ ನಾನದನ್ನು ಇಷ್ಟೇ‌ ಮುಕ್ತವಾಗಿ ಸ್ವೀಕರಿಸಬಲ್ಲೆನೇ ಎಂಬುದಕ್ಕೆ ನನ್ನಲ್ಲಿ ಉತ್ತರಗಳಿಲ್ಲ.

ಹಾಗೆ ನೋಡಿದಲ್ಲಿ ಸ್ಟ್ರೇಟ್‌ ಗಳಿಗಿಂತ ಗೇ ಮತ್ತು ಲೆಸ್ಬಿಯನ್‌ ಜನರಿಗೆ ಬೇರೆಯೇ ತರಹದ ಸಮಸ್ಯೆಗಳಿವೆ. ನಮಗಾದರೆ ಹುಡುಗ ಹುಡುಗಿಯರ ಮಧ್ಯೆ ಎಲ್ಲೆಡೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಸ್ಪರ್ಷದಲ್ಲೂ ವಿರುದ್ಧ ಲಿಂಗಿಗಳ ಮುಟ್ಟುವಾಗ ಮಿತಿ ಕಾಯ್ದುಕೊಳ್ಳಲೂ ಕಲಿಸಲಾಗುತ್ತದೆ. ಆದರೆ ಹುಡುಗ ಹುಡುಗರ ಮಧ್ಯೆ ಹುಡುಗಿ ಹುಡುಗಿರ ಮಧ್ಯೆ ಅಷ್ಟು ದೂರವಿರುವುದು ಬೇಕಾಗೋಲ್ಲ. ಇಂತಹ ಸಂದರ್ಭದಲ್ಲಿ ಅವರು ವಿಚಿತ್ರವಾದ ಸಂಕಟ ಅನುಭವಿಸಬೇಕಾಗುತ್ತದೆ.

ನನ್ನ ಗೆಳೆಯನೊಬ್ಬ, ತನ್ನ ತಾಯಿ ಊರಿಂದ ಬಂದಿದ್ದಾರೆ, ಅವರಿಗೆ ಇಲ್ಲಿ ಬೋರಾಗ್ತಾ ಇದೆಯಂತೆ. ಯಾವುದಾದರೂ ಕನ್ನಡ ಪುಸ್ತಕಗಳಿದ್ದರೆ ಕೊಡು ಮಾರಾಯಾ ಅಂದ. ಆಗ ಮೋಹನ ಸ್ವಾಮಿ ತೆಗೆದುಕೊಟ್ಟಿದ್ದೆ. ಮರುದಿನ ಬಂದವನೇ ಹೋಗಿ ಹೋಗಿ ಹೋಮೋಗಳ ಪುಸ್ತಕ ಕೊಟ್ಟಿದ್ಯಾ, ಸ್ವಲ್ಪನೂ ಗೊತ್ತಾಗೋಲ್ವಾ… ಅಮ್ಮ ನನ್ನ ಬೈದರು ಅಂದ. ಅದು ನನ್ನ ತಪ್ಪೇ ಆಗಿತ್ತು, ನಾಲ್ಕು ಮಾತು ಹೇಳಿ ಅಥವಾ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಬೆಳೆದ ಜನರ ಯೋಚನಾ ಶೈಲಿಯನ್ನು ಊಹಿಸಿ ನಡೆದುಕೊಳ್ಳಬೇಕಾಗಿತ್ತು ಎಂದು ಅನ್ನಿಸಿತ್ತು.

ನಾವು ಪರಿಪೂರ್ಣ ಸಮಾಜದತ್ತ ಹೆಜ್ಜೆಯಿಟ್ಟಾಗ ಅನೇಕ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ದಲಿತ ಮತ್ತು ಬುಡಕಟ್ಟು ಜನಾಂಗಗಳ ಮೇಲೆ ನಡೆದ ಸಾಮಾಜಿಕ ಶೋಷಣೆಗಳಿರಬಹುದು, ಕಪ್ಪು ವರ್ಣದವರ ಮೇಲೆ ನಡೆದ ಶೋಷಣೆಗಳಿರಬಹುದು ಅಥವಾ ನಾಸ್ತಿಕರೂ ಸೇರಿ ವಿವಿಧ ನಂಬಿಕೆಯುಳ್ಳವರ ಧಾರ್ಮಿಕ ಹಕ್ಕುಗಳಿರಬಹುದು ಇತ್ಯಾದಿಗೆಳೆಡೆಗಿನ ನಮ್ಮ ಹಳೆಯ ದೃಷ್ಟಿಕೋನ ಬದಲಾಯಿಸಿಕೊಳ್ಳಬೇಕಾಗುತ್ತದೆ. ಹಾಗೂ ಬಹಳ ದೊಡ್ಡ ಸಂಖ್ಯೆಯ ಜನರು ಆ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ ಕೂಡ. ಆದರೆ ಲೈಂಗಿಕ ಅಲ್ಪಸಂಖ್ಯಾತರೆಡೆಗೆ ಸರಿದಾರಿಯಲ್ಲಿ ಯೋಚನೆ ಮಾಡುತ್ತಿರುವವರ ಸಂಖ್ಯೆ ಸ್ವಲ್ಪ ಕಮ್ಮಿಯೇ. ಭಾರತದಲ್ಲಿ ಮಾತ್ರವಲ್ಲ, ನಾನು ವಾಸವಾಗಿದ್ದ ಅಮೆರಿಕಾದ ಅನುಭವಗಳನ್ನೂ ಸೇರಿಸಿ ಹೇಳುತ್ತಾ ಇದ್ದೇನೆ. ಆದರೆ ನಾನು ಕೆಲಸ ಮಾಡುತ್ತಿರುವ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಈ ಬಗ್ಗೆ ಬಹಳ ಒಳ್ಳೆಯ ತಿಳುವಳಿಕೆ ಕೊಡುತ್ತಿದ್ದಾರೆ. ಅವರಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡಲು ಎಲ್ಲಾ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

ಮೋಹ‌ನ ಸ್ವಾಮಿ ಓದಿದಾಕ್ಷಣ ಪವಾಡವಾಗುತ್ತದೆಯೆಂಬ ಕಲ್ಪನೆ ಬೇಡ. ಆದರೆ ಈ ಹೊತ್ತಿಗೆ ನಿಮಗೆ ಆ ಕುರಿತು ಚೂರು ಮೈಛಳಿ ಬಿಟ್ಟು ಯೋಚಿಸಲು, ನಿಧಾನವಾಗಿ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. LGBT ಸಮುದಾಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವಂತೆ ಪ್ರೇರೇಪಣೆ ಕೊಡುತ್ತದೆ. ಹೆಚ್ಚೆಂದರೆ ಎರಡು ಮೂರು ಗಂಟೆಗಳಲ್ಲಿ ಓದಿ ಮುಗಿಸಬಹುದಾದ, ಜಾಸ್ತಿ ತಾಳ್ಮೆ ಬೇಡದ ಪುಸ್ತಕ. ಸಲಿಂಗಿ ಹುಡುಗನೊಬ್ಬನ ಕುರಿತ ಮೂರ್ನಾಲ್ಕು ಕತೆಗಳಿವೆ. ವ್ಯಾಪಕವಾಗಿ ಪ್ರಶಂಸೆಗೊಳಪಟ್ಟ, ವಿವಿಧ ಭಾರತೀಯ ಮತ್ತು ವಿದೇಶೀ ಭಾಷೆಗಳಿಗೆ ಅನುವಾದಗೊಂಡಿದೆ. ದಯವಿಟ್ಟು ಕೊಂಡು ಓದಿ.