“ಈ ಜಗತ್ತು ತಾನು ಎಷ್ಟೇ ಪ್ರಗತಿಪರ ಎಂದು ಹೇಳಿಕೊಂಡರೂ, ಯಾವುದೇ ಬಗೆಯ ಅಲ್ಪಸಂಖ್ಯಾತರನ್ನು ಅದು ಅಹಂಕಾರದಿಂದ, ಉಪೇಕ್ಷೆಯಿಂದಲೇ ನೋಡುತ್ತದೆ. ಈ ನೋಟಕ್ಕೆ ಜಗತ್ತಿಡೀ ಬಲಿಯಾಗುವವರು ಲೈಂಗಿಕ ಅಲ್ಪಸಂಖ್ಯಾತರು.ಯಾವುದೇ ದೇಶ ತನ್ನ ನಾಗರೀಕರಿಗೆ ಕೊಡುವ ಮೂಲಭೂತ ಹಕ್ಕುಗಳನ್ನು ಸಹ ಅವರು ಹೋರಾಡಿಯೇ ಪಡೆಯಬೇಕಾಗುತ್ತದೆ. ಅವರ ಬದುಕಿನ ಧಾರುಣತೆಯನ್ನು ಈ ಚಿತ್ರ ಸತ್ಯ ಕಡೆಗಾಣದಂತೆ, ಕಲೆಗೆ ಅವಗಣನೆ ಆಗದಂತೆ ಕಟ್ಟಿಕೊಡುತ್ತದೆ.”
ಲೇಖಕಿ ಸಂಧ್ಯಾರಾಣಿ ಬರೆಯುವ ಲೋಕ ಸಿನೆಮಾ ಟಾಕೀಸ್ ಇಂದಿನಿಂದ ಆರಂಭ.

 

‘ನನಗೆದುರಾದ, ನನ್ನನ್ನು ನೋಡಿದ, ಮಾತನಾಡಿದ,
ಮುಗುಳ್ನಕ್ಕ ಸಹ, ಹಳೆಯ ಯಾವುದೋ ನೆನಪಿನ ಋಣ,
ಎಷ್ಟಾದರೂ ಹಳೆಯ ಪತ್ರಿಕೆ, ನೋಡಿದ್ದಾಯ್ತು, ಪಕ್ಕಕ್ಕೆ ಇಟ್ಟೂ ಆಯ್ತು’

ಎಂದೋ ಓದಿದ ಗುಲ್ಜಾರ್ ಕವಿತೆಯೊಂದು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದ, ಚಿಲಿ ದೇಶದ ಚಿತ್ರವೊಂದರಲ್ಲಿ ಹಾಗೆ ಎದುರಾಗಬಹುದೆಂದು ನಾನು ಊಹಿಸಿಯೇ ಇರಲಿಲ್ಲ. ಚಿತ್ರ : ಫೆಂಟಾಸ್ಟಿಕ್ ವುಮನ್, ಚಿತ್ರೋತ್ಸವದಲ್ಲಿ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿದ್ದ, ಈ ಸಲದ ಆಸ್ಕರ್ ಬಹುಮಾನವೊಂದನ್ನು ಪಡೆದ ಚಿತ್ರ.

ಚಿತ್ರ ಪ್ರಾರಂಭವಾದಾಗ ತೆರೆಯ ಮೇಲೆ, ನಾನು ಮೇಲೆ ಬರೆದ ಅರ್ಥವನ್ನು ಹೊಳೆಯಿಸುವ ಹಾಡನ್ನು ಕ್ಲಬ್ ಒಂದರಲ್ಲಿ ಮರೀನಾ ಹಾಡುತ್ತಿರುತ್ತಾಳೆ, ಆಕೆ ಒಬ್ಬ ಟ್ರ್ಯಾನ್ಸ್ ಜೆಂಡರ್. ಅವಳನ್ನು ದೇವತೆಯಂತೆ ಆರಾಧಿಸುವ ಓರ್ಲಾಂಡೊ ಅವಳೆದುರಿಗೆ ಕುಳಿತಿರುತ್ತಾನೆ, ಆಕೆಗಿಂತ ೨೫-೩೦ ವರ್ಷಗಳಿಗೆ ಹಿರಿಯ, ಅವಳ ಪ್ರೇಮಿ. ಇನ್ನಿಲ್ಲದ ಹೆಮ್ಮೆ ಮತ್ತು ಸಂಭ್ರಮದಿಂದ ಅವಳ ಹುಟ್ಟುಹಬ್ಬವನ್ನು ಆಚರಿಸುತ್ತಾನೆ. ಇಬ್ಬರೂ ಒಟ್ಟಾಗಿ ಅವನ ಮನೆಗೆ ಹೋಗುತ್ತಾರೆ, ಅವನೊಂದಿಗೇ ನೆಲೆಸಲು ಅವಳು ತಂದ ಸೂಟ್ ಕೇಸ್ ಅಲ್ಲೇ ಇದೆ, ಇನ್ನೂ ಆಕೆ ಆ ಬಟ್ಟೆಗಳನ್ನು ಜೋಡಿಸಿಯೂ ಇಲ್ಲ. ಅದೇ ರಾತ್ರಿ ಓರ್ಲಾಂಡೋನ ಆರೋಗ್ಯ ಹದಗೆಡುತ್ತದೆ. ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆತ ಬದುಕುವುದಿಲ್ಲ. ಚಿತ್ರ ಮತ್ತು ಮರೀನಾಳ ಬದುಕು ಅಲ್ಲಿಂದ ತಿರುವು ತೆಗೆದುಕೊಳ್ಳುತ್ತದೆ.

ಅಲ್ಲಿನ ವೈದ್ಯರು ಅವಳನ್ನು ಕೇವಲವಾಗಿ ನೋಡುತ್ತಾರೆ. ತನಿಖೆಗೆ ಬರುವ ಪೋಲೀಸ್ ಅವಳ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ, ಆಕೆ ಗಂಡಾಗಿದ್ದು ನಂತರ ಹೆಣ್ಣಾದವಳು ಮತ್ತು ಅವಳ ದಾಖಲೆಗಳು ಇನ್ನೂ ಹಳೆಯ ಹೆಸರಿನಲ್ಲೇ ಇದೆ ಎಂದು ಗೊತ್ತಾಗುತ್ತದೆ. ಮುಂದೆ ಅವನು ಅವಳನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಓರ್ಲಾಂಡೋನ ಸಹೋದರನಿಗೆ ವಿಷಯ ತಿಳಿಸಲು ಆಕೆ ಕರೆ ಮಾಡಿದಾಗ ಅವನ ದನಿಯಲ್ಲಿ ಕಂಡೂ ಕಾಣದಂತಹ ಅಸಹನೆ, ನೀನು ಯಾರಿಗೂ ನಿನ್ನ ಬಗ್ಗೆ ಹೇಳಬೇಡ ಎನ್ನುವ ಎಚ್ಚರಿಕೆ. ಒಂದೇ ರಾತ್ರಿಯಲ್ಲಿ ಅವಳು ದೇವತೆಯಿಂದ ಶಾಪಗ್ರಸ್ಥಳಾಗಿ ಬದಲಾಗುತ್ತಾಳೆ. ಆ ಪಲ್ಲಟ ಅವಳಂತೆಯೇ ನಮಗೂ ಆಘಾತಕಾರಿ.

ಈ ಜಗತ್ತು ತಾನು ಎಷ್ಟೇ ಪ್ರಗತಿಪರ ಎಂದು ಹೇಳಿಕೊಂಡರೂ, ಯಾವುದೇ ಬಗೆಯ ಅಲ್ಪಸಂಖ್ಯಾತರನ್ನು ಅದು ಅಹಂಕಾರದಿಂದ, ಉಪೇಕ್ಷೆಯಿಂದಲೇ ನೋಡುತ್ತದೆ. ಈ ನೋಟಕ್ಕೆ ಜಗತ್ತಿಡೀ ಬದಲಾಗುವವರು ಲೈಂಗಿಕ ಅಲ್ಪಸಂಖ್ಯಾತರು. ಅವರು ಗೇ ಆಗಿರಬಹುದು, ಲೆಸ್ಬಿಯನ್ ಆಗಿರಬಹುದು, ಟ್ರ್ಯಾನ್ಸ್ ಜೆಂಡರ್ ಆಗಿರಬಹುದು. ಯಾವುದೇ ದೇಶ ತನ್ನ ನಾಗರೀಕರಿಗೆ ಕೊಡುವ ಮೂಲಭೂತ ಹಕ್ಕುಗಳನ್ನು ಸಹ ಅವರು ಹೋರಾಡಿಯೇ ಪಡೆಯಬೇಕಾಗುತ್ತದೆ. ಅವರ ಬದುಕಿನ ಧಾರುಣತೆಯನ್ನು ಈ ಚಿತ್ರ ಸತ್ಯ ಕಡೆಗಾಣದಂತೆ, ಕಲೆ ಅವಗಣನೆ ಆಗದಂತೆ ಕಟ್ಟಿಕೊಡುತ್ತದೆ. ಅದಕ್ಕಾಗಿ ಚಿತ್ರ ಬಳಸುವ ರೂಪಕಗಳು ಬಹಳ ಪರಿಣಾಮಕಾರಿಯಾಗಿದೆ. ಮದುವೆಯಾಚೆಗಿನ ಸಂಬಂಧಗಳಲ್ಲಿ ಹೊರಗೆ ಹೇಳಲಾಗದ, ಒಳಗೊಳಗೇ ಕೊರೆಯುತ್ತಾ ಹೋಗುವ ಒಂದು ಹೆದರಿಕೆ ಇರುತ್ತದೆ. ಅಕಸ್ಮಾತ್ ಅವನಿಗೆ/ಅವಳಿಗೆ ಏನಾದರೂ ಆದರೆ…? ಕಾಯುತ್ತಾ ಕುಳಿತವರಿಗೆ ಯಾರೂ ಫೋನ್ ಮಾಡಿ ವಿಷಯ ತಿಳಿಸುವುದಿಲ್ಲ, ಅವರನ್ನು ಯಾರೂ ಸಂತೈಸುವುದಿಲ್ಲ, ಅಷ್ಟೇ ಏಕೆ ಅವರು ಗಟ್ಟಿ ದನಿ ತೆಗೆದು ಅಳಲೂ ಸಾಧ್ಯವಿಲ್ಲ. ಬದುಕಿನಂತೆ, ಸಾವಿನ ಮಟ್ಟಿಗೂ ಅವರದು ಕತ್ತಲ ಬದುಕು. ಇನ್ನು ಆ ಸಂಬಂಧದಲ್ಲಿ ಟ್ರಾನ್ಸ್ಜೆಂಡರ್ ಒಬ್ಬಳಿದ್ದರೆ ಅದು ಮತ್ತೆಷ್ಟು ಸಂಕೀರ್ಣವಾಗಬಹುದು?

ಆಸ್ಪತ್ರೆಯಿಂದ ಮನೆಗೆ ಬರುವಷ್ಟರಲ್ಲಿ ಓರ್ಲಾಂಡೋನಾ ವಿಚ್ಛೇದಿತ ಪತ್ನಿ ಮರೀನಾಗೆ ಫೋನ್ ಮಾಡುತ್ತಾಳೆ. ಅವಳು ಮೊದಲಿಗೆ ಕೇಳುವ ಮಾತು, ‘ನಿನ್ನ ಬಳಿ ಇರುವ ಅವನ ಕಾರನ್ನು ನಾಳೆಯೇ ತಂದೊಪ್ಪಿಸು’. ಕಾರು ಹಿಂದಿರುಗಿಸಲು ಮರೀನಾ ಹೋದಾಗ ಆಕೆ ಅವಳನ್ನು ಕುರಿತು ಅತ್ಯಂತ ಹೀನಾಯವಾಗಿ ಮಾತನಾಡುತ್ತಾಳೆ. ಅಳದೆ, ಕೂಗಾಡದೆ ಅತ್ಯಂತ ಘನತೆಯಿಂದ ಅದನ್ನು ಎದುರಿಸುವ ಮರೀನ ಆ ಕ್ಷಣದಲ್ಲಿ ಆ ಸಿರಿವಂತ ‘ಕುಲೀನ’ ಮನೆತನದ ಹೆಣ್ಣಿಗಿಂತ ಎಷ್ಟೋ ದೊಡ್ಡವಳಾಗುತ್ತಾಳೆ.

ಮದುವೆಯಾಚೆಗಿನ ಸಂಬಂಧಗಳಲ್ಲಿ ಹೊರಗೆ ಹೇಳಲಾಗದ, ಒಳಗೊಳಗೇ ಕೊರೆಯುತ್ತಾ ಹೋಗುವ ಒಂದು ಹೆದರಿಕೆ ಇರುತ್ತದೆ. ಅಕಸ್ಮಾತ್ ಅವನಿಗೆ/ಅವಳಿಗೆ ಏನಾದರೂ ಆದರೆ…? ಕಾಯುತ್ತಾ ಕುಳಿತವರಿಗೆ ಯಾರೂ ಫೋನ್ ಮಾಡಿ ವಿಷಯ ತಿಳಿಸುವುದಿಲ್ಲ, ಅವರನ್ನು ಯಾರೂ ಸಂತೈಸುವುದಿಲ್ಲ, ಅಷ್ಟೇ ಏಕೆ ಅವರು ಗಟ್ಟಿ ದನಿ ತೆಗೆದು ಅಳಲೂ ಸಾಧ್ಯವಿಲ್ಲ.

ಇನ್ನು ಓರ್ಲಾಂಡೋನ ಮಗ ಮನೆಗೇ ಬರುತ್ತಾನೆ, ಮನೆ ಖಾಲಿ ಮಾಡು ಎಂದು ಒತ್ತಡ ಹಾಕುತ್ತಾನೆ. ಕಡೆಗೆ ತಂದೆ ಅವಳಿಗೆ ಕೊಟ್ಟ ನಾಯಿಯನ್ನು ಸಹ ಬಿಡುವುದಿಲ್ಲ. ಓರ್ಲಾಂಡೋ ಆಸ್ಪತ್ರೆಗೆ ಹೋಗುವಾಗ ಬಿದ್ದು ಮೈಮೇಲೆ ಗಾಯಗಳಾಗಿರುತ್ತವೆ, ಅದರ ತನಿಖೆಗೆಂದು ಬರುವ ಅಧಿಕಾರಿಣಿ ಮರೀನಾಳ ಮೇಲೆ ಕರುಣೆ ಇರುವಂತೆ ಮಾತನಾಡುತ್ತಲೇ ಅವಳನ್ನು ಅವಮಾನಿಸುತ್ತಾಳೆ. ಅವಳ ದೈಹಿಕ ಪರೀಕ್ಷೆಗೆಂದು ಕರೆದುಕೊಂಡು ಹೋಗಿ, ಅವಳು ವಿವಸ್ತ್ರಳಾದಾಗ ಅವಳ ಮುಖದ ಮೇಲೆ ಹಾದುಹೋಗುವ ಆ ಅಸಹ್ಯ ಅವಳ ಮನಸ್ಸಿನ ಭಾವನೆಯನ್ನು ಹೇಳುತ್ತದೆ. ಈ ಎಲ್ಲಾ ಘಟನೆಗಳು ಬಾಹ್ಯದಲ್ಲಿ ಮರೀನಾಳನ್ನು ಕುಗ್ಗಿಸಿದಂತೆ ಕಂಡರೂ ಆಂತರಿಕವಾಗಿ ಅದು ಅವಳನ್ನು ಗಟ್ಟಿಯಾಗಿಸುತ್ತಾ ಇರುತ್ತದೆ.

ಚಿತ್ರದಲ್ಲಿ ಕನ್ನಡಿಯನ್ನು ಬಹಳ ಪರಿಣಾಮಕಾರಿಯಾಗಿ ಬಳಸಿದ್ದಾರೆ. ಒಂದು ದೃಶ್ಯದಲ್ಲಿ ರಸ್ತೆಯಲ್ಲಿ ಮರೀನಾ ನಡೆಯುವಾಗ ಅವಳೆದುರಲ್ಲಿ ಯಾರೋ ಒಂದು ದೊಡ್ಡ ಕನ್ನಡಿ ಸಾಗಿಸುತ್ತಿರುತ್ತಾರೆ, ಅದರಲ್ಲಿ ಅವಳ ಬಿಂಬ ವಿರೂಪವಾಗಿ ಕಾಣಿಸುತ್ತದೆ, ಜಗ ಅವಳನ್ನು ನೋಡುವುದು ಹಾಗೆ. ಮತ್ತೊಮ್ಮೆ ಮನೆಯಲ್ಲಿ ಅವಳು ಕಾಲುಗಳ ನಡುವೆ ಕನ್ನಡಿ ಇಟ್ಟುಕೊಂಡು ತನ್ನನ್ನು ತಾನು ನೋಡಿಕೊಳ್ಳುತ್ತಾಳೆ : ಕದಡದ, ಕಲಕದ ಬಿಂಬ ಅಲ್ಲಿ. ಚಿತ್ರದುದ್ದಕ್ಕೂ ಕ್ಯಾಮೆರಾ ಅವಳನ್ನು ಹಿಂಬಾಲಿಸುತ್ತದೆ, ಅವಳ ಜೊತೆಗಿರುತ್ತದೆ, ತನ್ನ ಚೌಕಟ್ಟಿನ ನಡುವೆ ಅವಳಿರುವಂತೆ ನೋಡಿಕೊಳ್ಳುತ್ತದೆ.

ಒಂದು ದೃಶ್ಯದಲ್ಲಿ ರಸ್ತೆಯಲ್ಲಿ ಮರೀನಾ ನಡೆಯುವಾಗ ಅವಳೆದುರಲ್ಲಿ ಯಾರೋ ಒಂದು ದೊಡ್ಡ ಕನ್ನಡಿ ಸಾಗಿಸುತ್ತಿರುತ್ತಾರೆ, ಅದರಲ್ಲಿ ಅವಳ ಬಿಂಬ ವಿರೂಪವಾಗಿ ಕಾಣಿಸುತ್ತದೆ, ಜಗ ಅವಳನ್ನು ನೋಡುವುದು ಹಾಗೆ. ಮತ್ತೊಮ್ಮೆ ಮನೆಯಲ್ಲಿ ಅವಳು ಕಾಲುಗಳ ನಡುವೆ ಕನ್ನಡಿ ಇಟ್ಟುಕೊಂಡು ತನ್ನನ್ನು ತಾನು ನೋಡಿಕೊಳ್ಳುತ್ತಾಳೆ : ಕದಡದ, ಕಲಕದ ಬಿಂಬ ಅಲ್ಲಿ. ಚಿತ್ರದುದ್ದಕ್ಕೂ ಕ್ಯಾಮೆರಾ ಅವಳನ್ನು ಹಿಂಬಾಲಿಸುತ್ತದೆ, ಅವಳ ಜೊತೆಗಿರುತ್ತದೆ, ತನ್ನ ಚೌಕಟ್ಟಿನ ನಡುವೆ ಅವಳಿರುವಂತೆ ನೋಡಿಕೊಳ್ಳುತ್ತದೆ.

ಚಿಲಿಯ ನಿರ್ದೇಶಕ ಸೆಬಾಸ್ಟಿಯನ್ ಲೆಲಿಯೋ ವಾಸ್ತವ ಮತ್ತು ಭ್ರಮೆ ಎರಡನ್ನೂ ಬಳಸಿಕೊಂಡು ಕಟ್ಟಿದ್ದಾರೆ. ಲ್ಯಾಟಿನ್ ಅಮೇರಿಕಾ ದೇಶಗಳ ಮ್ಯಾಜಿಕಲ್ ರಿಯಾಲಿಸಂ ಇಲ್ಲೂ ಹದವಾಗಿ ಮೂಡಿಬಂದಿದೆ. ಚಿತ್ರ ಜಗತ್ತಿನ ದೃಷ್ಟಿಯಲ್ಲಿ ಅವಳನ್ನು ಕಟ್ಟುವುದಿಲ್ಲ, ಅವಳ ದೃಷ್ಟಿಯಲ್ಲಿ ಜಗತ್ತನ್ನು ಕಟ್ಟುತ್ತಾ ಇನ್ನೊಂದೆಡೆ ನಮ್ಮ ಮನಸ್ಸಿನಲ್ಲಿ ಅವಳನ್ನು ಕಟ್ಟುತ್ತಾ ಹೋಗುವ ರೀತಿಯಲ್ಲಿ ಅವನ ಕಸುಬುದಾರಿಕೆ ಇದೆ. ಮರೀನಾ ಆಗಿ ಸ್ವತಃ ಟ್ರಾನ್ಸ್ಜೆಂಡರ್ ಆಗಿರುವ ಡೇನಿಯೆಲಾ ವೆಗಾ ತಮ್ಮ ಪಾತ್ರ ಎಲ್ಲೂ ಅನುಕಂಪ ಬೇಡದಂತೆ ಘನತೆಯಿಂದ ನಟಿಸಿದ್ದಾರೆ.

ಮೊದಲು ಚಿತ್ರ ನೋಡಿದಾಗ ಸಾಧಾರಣ ಚಿತ್ರ ಅನ್ನಿಸಿತ್ತು, ನಂತರ ನಿಧಾನವಾಗಿ ಅದು ಮನಸ್ಸಿನಲ್ಲಿ ಬೆಳೆಯುತ್ತಾ ಹೋಯಿತು. ಚಿತ್ರದಲ್ಲಿ ಅಂತ್ಯಕ್ಕಿಂತ ಪಯಣ ಮುಖ್ಯ. ಪಯಣ ಮುಗಿಯುವಾಗ ಅವಳು ’ಏನನ್ನು’ ಪಡೆಯುತ್ತಾಳೆ ಎನ್ನುವುದಕ್ಕಿಂತ ’ಏನಾಗುತ್ತಾಳೆ’ ಎನ್ನುವುದು ಮುಖ್ಯವಾಗುತ್ತದೆ. ಇದು ಕಲ್ಲಿದ್ದಲೊಂದು ವಜ್ರವಾಗುವ ಪಯಣ. ಪ್ರಶ್ನೆಗಳಿಗೆ ಹೆದರಿ ಆಸ್ಪತ್ರೆಯಿಂದ ಓಡಿಹೋಗುವ ಅವಳು, ಕಾರನ್ನು ನಿಲ್ಲಿಸಿ, ಅದರ ಮೇಲೆ ಹತ್ತಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಗಟ್ಟಿತನ ಸಂಪಾದಿಸಿಕೊಳ್ಳುವ ಪಯಣ. ಜಗತ್ತಿನ ಅನಾದರ ಅವಳನ್ನು ಶೀತಲಗೊಳಿಸುತ್ತಾ ಹೋಗುತ್ತದೆ, ಅವಳ ಭ್ರಮಾ ಜಗತ್ತಿನಲ್ಲಿರುವ ಓರ್ಲಾಂಡೋ ಮಾತ್ರ ಅವಳನ್ನು ಜೀವಂತವಾಗಿರಿಸುವ ಬಿಸುಪು.

ಅವನ ಕೊನೆಯ ಕಾರ್ಯಗಳಿಗೂ ನೀನು ಬರುವಂತಿಲ್ಲ ಎಂದು ಜಗತ್ತು ಅಬ್ಬರಿಸಿ, ಬದುಕಿರುವಾಗ ಏನೆಲ್ಲಾ ಆಗಿರುವ ಸಂಬಂಧವನ್ನು ಸಾವು ಇಲ್ಲಿ ಮುಲಾಜಿಲ್ಲದೆ ಅನೈತಿಕಗೊಳಿಸಿಬಿಟ್ಟಿದೆ. ಏನಾದರಾಗಲಿ ಕಡೆಗೊಮ್ಮೆ ಹೋಗಿ ಅವನಿಗೊಂದು ಕೊನೆಯ ಬೀಳ್ಕೊಡುಗೆ ಕೊಡಬೇಕು ಎಂದು ಹೋದಾಗ ಮರೀನಾಳಲ್ಲಿ ’ಗಟ್ಟಿಯಾಗಿ ಗುನುಗುನಿಸಲಾಗಂದಂತಹ ಹಾಡನ್ನು ಕಾಲವೇ ನನ್ನ ಪಾಲಿಗೇಕೆ ಕೊಟ್ಟೆ’ ಎನ್ನುವ ಹತಾಶೆ, ಆರ್ದ್ರತೆ, ಅವನ ತಣ್ಣನೆಯ ದೇಹ ಸ್ಪರ್ಶಿಸಿದಾಗಲೂ ಅವಳಲ್ಲಿ ಅರಳುವ ಹೆಣ್ತನ ಅವಳನ್ನು ಮೃದುವಾಗಿಸುವ ಬಗೆ ನೋಡಬೇಕು. ಭಾವನೆಗಳು ದೇಶಾತೀತ, ಕಾಲಾತೀತ.

ಏನಾದರಾಗಲಿ ಕಡೆಗೊಮ್ಮೆ ಹೋಗಿ ಅವನಿಗೊಂದು ಕೊನೆಯ ಬೀಳ್ಕೊಡುಗೆ ಕೊಡಬೇಕು ಎಂದು ಹೋದಾಗ ಮರೀನಾಳಲ್ಲಿ ’ಗಟ್ಟಿಯಾಗಿ ಗುನುಗುನಿಸಲಾಗಂದಂತಹ ಹಾಡನ್ನು ಕಾಲವೇ ನನ್ನ ಪಾಲಿಗೇಕೆ ಕೊಟ್ಟೆ’ ಎನ್ನುವ ಹತಾಶೆ, ಆರ್ದ್ರತೆ, ಅವನ ತಣ್ಣನೆಯ ದೇಹ ಸ್ಪರ್ಶಿಸಿದಾಗಲೂ ಅವಳಲ್ಲಿ ಅರಳುವ ಹೆಣ್ತನ ಅವಳನ್ನು ಮೃದುವಾಗಿಸುವ ಬಗೆ ನೋಡಬೇಕು. ಭಾವನೆಗಳು ದೇಶಾತೀತ, ಕಾಲಾತೀತ.

ಪ್ರೇಮ, ಅಸ್ಮಿತೆಯ ಘನತೆ, ಕಳೆದುಕೊಳ್ಳುವಿಕೆ, ಒಲಿದವನನ್ನು ಕಳೆದುಕೊಂಡಾಗ ಕನಿಷ್ಠ ಗಟ್ಟಿದನಿ ತೆರೆದು ಅಳಲೂ ಆಗದ ದುಃಖ ಅವಳದ್ದು. ಜಗತ್ತಿನೆಲ್ಲಾ ನಿರಾಕರಣೆಯನ್ನೂ ಅವಳು ಸಹಿಸಿದ್ದಾಳೆ, ಹಾಗೆ ಸಹಿಸುವಾಗ ದನಿ ಹೊರ ಬಿಡಲಾಗದ ಅಸಹಾಯಕತೆ ಅವಳದು. ಅರ್ಥವಾಗದ್ದನ್ನೆಲ್ಲಾ ನಾಶ ಮಾಡಲು ಹೊರಡುವ ಜಗತ್ತು ಅವಳೆದುರಲ್ಲಿ ಮತ್ತು ಅವಳ ಸುತ್ತಲೂ. ಆದರೆ ಅವಳೊಳಗೆ ಒಂದು ಜಗತ್ತಿದೆ, ಅಲ್ಲಿ ಓರ್ಲಾಂಡೋ ಇದ್ದಾನೆ, ಅವಳಿಗೆ ಸಂಗೀತ ಕಲಿಸುವ ಗುರು ಇದ್ದಾನೆ. ಅವರಿಬ್ಬರೂ ಅವಳ ಜಗತ್ತನ್ನು ಬೆಚ್ಚಗಿಟ್ಟಿದ್ದಾರೆ, ಆ ಬಿಸುಪಿನ ತಾಕತ್ತಿನಲ್ಲಿ ಅವಳು ಜಗತ್ತಿನೆದುರು ಹೆಜ್ಜೆ ಊರಿ ನಿಲ್ಲುತ್ತಾಳೆ. ಜಗತ್ತಿನಲ್ಲಿ ನಾನಾ ಕಾರಣಗಳಿಂದ ನಿರಾಕರಣೆಗೊಂಡ ಎಲ್ಲರೂ ಅವಳ ಆ ಬಿಗಿಯ ತುಟಿಯ ಹಿಂದಿನ ಮೌನವನ್ನು ಅರ್ಥಮಾಡಿಕೊಳ್ಳುತ್ತಾರೆ. ಉಳಿದಂತೆ ತಣ್ಣಗೆ ಸಾಗುವ ಚಿತ್ರಕ್ಕೆ ಜೀವಾಳ ಸಂಗೀತ. ಲ್ಯಾಟಿನ್ ಅಮೇರಿಕಾದ ಸಂಗೀತಕ್ಕೆ ನಮ್ಮ ಆಳದ ಭಾವಗಳನ್ನು ಬಡಿದೆಬ್ಬಿಸುವ ತಾಕತ್ತಿದೆ. ಪ್ರೇಮಿಯ ಹೆಮ್ಮೆ, ಜಗತ್ತಿನ ಅವಮಾನ ಅವಳು. ಸ್ಪ್ಯಾನಿಶ್ ಭಾಷೆಯಲ್ಲಿ ಫೆಂಟಾಸ್ಟಿಕ್ ಎಂದರೆ ಅದ್ಭುತವೂ ಹೌದು, ಭ್ರಮೆಯೂ ಹೌದು.

(ಕನ್ನಡಪ್ರಭದಲ್ಲಿ ಪ್ರಕಟವಾದ ಬರಹದ ವಿಸ್ತೃತ ರೂಪ)