ಗಂಟಿಚೋರ ಸಮುದಾಯ ಬಹುಶಃ ಹೊಟ್ಟೆಪಾಡಿನ ಕೆಲಸವಾಗಿ ಈ ಭಾಗದಲ್ಲಿ ಸ್ಥಳೀಯವಾಗಿ ಬಾವಿ ತೋಡುವ ಕೆಲಸಕ್ಕೆ ಹೊಂದಿಕೊಂಡಿರಬಹುದು ಅನ್ನಿಸುತ್ತದೆ. ಹಾಗಾಗಿ ಪರ್ಯಾಯ ವೃತ್ತಿಗಳನ್ನು ಕೈಗೊಳ್ಳಲು ಸರಕಾರ ತನ್ನ ಯೋಜನೆಗಳಲ್ಲಿ ಸಹಾಯ ಮಾಡಿದರೆ, ಈ ಸಮುದಾಯ ಈ ಅಪಾಯಕಾರಿ ವೃತ್ತಿಯಿಂದ ಬಿಡುಗಡೆ ಪಡೆಯಲು ಸಾಧ್ಯವಿದೆ. ಅಂತೆಯೇ ಇದೇ ವೃತ್ತಿಯನ್ನು ಸುರಕ್ಷಿತವಾಗಿ ಮುಂದುವರೆಯಲು ಸರಕಾರ ಆಧುನಿಕ ತಾಂತ್ರಿಕ ಸೌಲಭ್ಯವನ್ನು ಪಡೆಯಲು ಸಹಕರಿಸಬಹುದಾಗಿದೆ.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯ ಕೊನೆಯ ಕಂತು

ಗಂಟಿಚೋರ್ಸ್ ಸಮುದಾಯದ ಕಥನಗಳ ಕೊನೆಯ ಬರಹವಿದು. ಇಲ್ಲಿ ಮುಖ್ಯವಾಗಿ ಗಂಟಿಚೋರ್ಸ್ ಸಮುದಾಯದ ನಿರುದ್ಯೋಗ, ವಸತಿ, ಸಂಘಟನೆಯ ಮುಂತಾದ ಹಲವು ಬಿಕ್ಕಟ್ಟುಗಳ ಬಗೆಗೆ ಚರ್ಚಿಸಲಾಗಿದೆ. ಹಾಗೆಯೇ ಆಯಾ ಬಿಕ್ಕಟ್ಟುಗಳಿಗೆ ಪೂರಕವಾದ ಪರಿಹಾರ ಸಾಧ್ಯತೆಯನ್ನೂ ಸೂಚಿಸಲಾಗಿದೆ. ಬುಡಕಟ್ಟು ಸಮುದಾಯಗಳ ಬಿಕ್ಕಟ್ಟುಗಳಿಗೆ ಪರಿಹಾರವಿಲ್ಲವೇ? ಒಂದು ಸಮುದಾಯವನ್ನು ಅಧ್ಯಯನ ಮಾಡುವ ಅಧ್ಯಯನಕಾರರು ಆಯಾ ಸಮುದಾಯದ ಬಿಕ್ಕಟ್ಟುಗಳಿಗೆ ಪರಿಹಾರ ಸೂಚಿಸಬೇಕಲ್ಲವೇ? ಮುಂತಾದ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ. ಎಷ್ಟೋ ಬಾರಿ ಒಂದು ಸಮುದಾಯ ಅಧ್ಯಯನ ಆಯಾ ಸಮುದಾಯದ ಹೋರಾಟಕ್ಕೆ ಸಂಗಾತಿ ಆಗಬೇಕು. ಹಾಗಲ್ಲದಿದ್ದರೆ ಸಮುದಾಯ ಅಧ್ಯಯನಕ್ಕೆ ಪ್ರಸ್ತುತತೆ ಇರುವುದಿಲ್ಲ. ಹಾಗಾಗಿ ಇಲ್ಲಿ ಗಂಟಿಚೋರ ಸಮುದಾಯದ ಬಿಕ್ಕಟ್ಟು ಮತ್ತು ಪರಿಹಾರ ಸಾಧ್ಯತೆಗಳನ್ನು ಪಟ್ಟಿ ಮಾಡಲಾಗಿದೆ.

ಬಿಕ್ಕಟ್ಟು: ಗಂಟಿಚೋರ್ಸ್ ಸಮುದಾಯದಲ್ಲಿ ಯುವಜನತೆಯಲ್ಲಿ ನಿರುದ್ಯೋಗ ಸಮಸ್ಯೆಯಿದೆ. ಸಮೀಕ್ಷೆಯಿಂದ ತಿಳಿಯುವುದೇನೆಂದರೆ ಸಮುದಾಯದ ಒಟ್ಟು ಜನಸಂಖ್ಯೆಯಲ್ಲಿ 861 ಜನರು ನಿರುದ್ಯೋಗಿಗಳಾಗಿದ್ದಾರೆ. ಇದರಲ್ಲಿ ಗಂಡು 233 ಇದ್ದರೆ, ಹೆಣ್ಣುಮಕ್ಕಳು 617 ರಷ್ಟಿದ್ದಾರೆ. ಇದರಲ್ಲಿ ಮಹಿಳಾ ನಿರುದ್ಯೋಗಿಗಳ ಸಂಖ್ಯೆ ಶೇ 17 ರಷ್ಟಿದೆ. ಉಳಿದಂತೆ ಶೇ 6.4 ರಷ್ಟು ಗಂಡುಮಕ್ಕಳು ನಿರುದ್ಯೋಗಿಗಳಿದ್ದಾರೆ. ಪ್ರಾದೇಶಿಕವಾಗಿ ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಈ ಸಂಖ್ಯೆ ದೊಡ್ಡದಿದೆ.

ಪರಿಹಾರ ಸಾಧ್ಯತೆ: ಪರಿಶಿಷ್ಟಜಾತಿಯ ಅಭಿವೃದ್ಧಿ ಯೋಜನೆಗಳಲ್ಲಿ ನಿರುದ್ಯೋಗವನ್ನು ಕೊನೆಗಾಣಿಸುವ ಯೋಜನೆಗಳು ಇವೆ. ಈ ಯೋಜನೆಗಳ ಫಲಾನುಭವಿಗಳಲ್ಲಿ ಬಹುಪಾಲು ಪರಿಶಿಷ್ಠ ಜಾತಿಯ ಬಹುಸಂಖ್ಯಾತರು ಪಡೆಯುತ್ತಿದ್ದಾರೆ. ಆದರೆ ಈ ಯೋಜನೆಗಳ ಆಧ್ಯತೆಯ ಆಧಾರದ ಮೇಲೆ ಗಂಟಿಚೋರ್ಸ್ ಸಮುದಾಯಕ್ಕೂ ಲಭ್ಯವಾಗುವ ಹಾಗೆ ಸಮಾಜ ಕಲ್ಯಾಣ ಇಲಾಖೆಯು ಕ್ರಮವಹಿಸಬೇಕಾಗಿದೆ. ಉದಾ: ಚಾಲಕ ಪರವಾನಗಿ ಇರುವ ಯುವಜನತೆಗೆ ಪ್ರವಾಸೋದ್ಯಮ ಇಲಾಖೆ ಮತ್ತು ಪರಿಶಿಷ್ಟ ಜಾತಿಯವರಿಗೆ ಸಬ್ಸಿಡಿ ಆಧಾರದ ಮೇಲೆ ಕಾರುಗಳನ್ನು ಕೊಡುವ ಯೋಜನೆ.

ಬಿಕ್ಕಟ್ಟು: ಎಲ್ಲಾ ಬುಡಕಟ್ಟುಗಳಲ್ಲಿ ಇರುವ ಏಕರೂಪಿ ಸಮಸ್ಯೆಯೆಂದರೆ ಮೂಲಭೂತ ಅವಶ್ಯಕತೆಯಾದ ವಸತಿ ಸಮಸ್ಯೆ. ಗಂಟಿಚೋರ್ಸ್ ಸಮುದಾಯದಲ್ಲಿಯೂ ವಸತಿ ಸಮಸ್ಯೆ ದೊಡ್ಡದಾಗಿದೆ. ಕ್ಷೇತ್ರಕಾರ್ಯದಲ್ಲಿ ಸಮುದಾಯದವರು ಇಟ್ಟ ಬೇಡಿಕೆಯಲ್ಲಿಯೂ ವಸತಿ ಸಮಸ್ಯೆಗೆ ಪ್ರಾತಿನಿಧ್ಯ ಕೊಡಲಾಗಿತ್ತು. ಸಮೀಕ್ಷೆಯ ಪ್ರಕಾರ ಒಟ್ಟು 1549 ಕುಟುಂಬಗಳಲ್ಲಿ ಶೇ 0.2 ನಷ್ಟು ಟೆಂಟುಗಳಲ್ಲಿ ವಾಸಮಾಡುತ್ತಿದ್ದಾರೆ. ಶೇ 17.5 ರಷ್ಟು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ, ಶೇ 23 ರಷ್ಟು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಉಳಿದಂತೆ ಶೇ 9.9 ರಷ್ಟು ಮಾತ್ರ ಸರಕಾರಿ ಆಶ್ರಯ ಮನೆಗಳು ಲಭ್ಯವಾಗಿವೆ.

ಪರಿಹಾರ ಸಾಧ್ಯತೆ: ಸರಕಾರವು ಗುಡಿಸಲು ಮುಕ್ತ ಕರ್ನಾಟಕದ ಯೋಜನೆಯನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಅಂತೆಯೇ ಗಂಟಿಚೋರ್ಸ್ ಸಮುದಾಯದ ಶೇ. 0.2 ರಷ್ಟಿರುವ ಟೆಂಟು ವಾಸಿಗಳಿಗೂ, ಶೇ 17.5 ರಷ್ಟಿರುವ ಗುಡಿಸಲುವಾಸಿಗಳಿಗೂ, ಶೇ 23 ರಷ್ಟಿರುವ ಬಾಡಿಗೆ ಮನೆದಾರರಿಗೂ ಸರಕಾರ ವಸತಿಯನ್ನು ಕಲ್ಪಿಸಬೇಕಾಗಿದೆ. ಪರಿಶಿಷ್ಠಜಾತಿ ಮತ್ತು ಪಂಗಡಗಳಿಗಿರುವ ವಸತಿ ಯೋಜನೆಗಳಲ್ಲಿ ಸಂಖ್ಯಾವಾರು ಈ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡುವ ಮೂಲಕ ವಸತಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

ಬಿಕ್ಕಟ್ಟು: ಪ್ರಸ್ತುತ ಸಮೀಕ್ಷೆಯಲ್ಲಿ ಗಂಟಿಚೋರ್ಸ್ ಸಮುದಾಯದ 1201 ರಷ್ಟು ಭೂರಹಿತ ಕುಟುಂಬಗಳು ದಾಖಲಾಗಿದೆ. ಗ್ರಾಮೀಣ ಪ್ರದೇಶದ ಭೂರಹಿತ ಕುಟುಂಬಗಳೆಲ್ಲಾ ಸಮಾನ್ಯವಾಗಿ ಕೃಷಿ ಕೂಲಿಯನ್ನು ಅವಲಂಬಿಸಿರುವುದು ಕಾಣುತ್ತದೆ. ಅಂತೆಯೇ ಕ್ಷೇತ್ರಕಾರ್ಯದ ಸಂದರ್ಭದಲ್ಲಿಯೂ ಈ ಸಂಖ್ಯೆ ಹೆಚ್ಚಾಗಿ ಬೆಳಗಾವಿ ಜಿಲ್ಲೆಯ ಹಳ್ಳಿಗಳು ಮತ್ತು ಗದಗ ಜಿಲ್ಲೆ ಬಾಲೆಹೊಸೂರು, ಬಿಜಾಪುರ ಜಿಲ್ಲೆಯ ಬರಗುಡಿ ಮುಂತಾದ ಕಡೆ ಪ್ರಧಾನವಾಗಿ ಕಂಡುಬಂದಿತು. ಸದ್ಯಕ್ಕೆ 1982 ಜನರು ಕೃಷಿ ಕೂಲಿಗಳಾಗಿ ದುಡಿಯುತ್ತಿದ್ದಾರೆ. ಈ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ 71.68 ರಷ್ಟಿರುವುದನ್ನು ಗಮನಿಸಬೇಕು.

ಪರಿಹಾರ ಸಾಧ್ಯತೆ: ಮುಖ್ಯವಾಗಿ ಆಯಾ ಭಾಗದಲ್ಲಿ ಮಾರಾಟಕ್ಕೆ ಲಭ್ಯವಿದ್ದ ಭೂಮಿಯನ್ನು ಸಮಾಜ ಕಲ್ಯಾಣ ಇಲಾಖೆಯು ಕೊಂಡು ನಿಯಮಾನುಸಾರ ಭೂಮಿಯನ್ನು ಹಂಚುವ ಕೆಲಸವನ್ನು ಮಾಡಬೇಕಿದೆ. ಅಂತೆಯೇ ಶೇ 71.68 ಕೃಷಿ ಕೂಲಿಗಳಿಗೆ ಪರ್ಯಾಯವನ್ನು ಕಲ್ಪಿಸಲು ವೃತ್ತಿ ತರಬೇತಿ ಕೇಂದ್ರ, ಗುಡಿಕೈಗಾರಿಕೆಗಳ ಅಂತೆಯೇ ತರಬೇತಿಯನ್ನು ಕೊಡುವ ಅಗತ್ಯವಿದೆ.

ಬಿಕ್ಕಟ್ಟು: ವಯೋಮಾನವಾರು ಗಂಟಿಚೋರ್ಸ್ ಮಹಿಳೆಯರ ಸಂಖ್ಯೆಯು ಹೀಗಿದೆ: 0-5 ವರ್ಷದ ಮಕ್ಕಳಲ್ಲಿ 266 ಹೆಣ್ಣು ಮಕ್ಕಳಿದ್ದಾರೆ. 6-17 ವರ್ಷದ ಯುವತಿಯರ ಸಂಖ್ಯೆ 607 ರಷ್ಟಿದೆ, 18-40 ರ ವಯೋಮಾನದ ಮಹಿಳೆಯರ ಸಂಖ್ಯೆ 1297 ರಷ್ಟಿದೆ. ಈ ವಯೋಮಾನದ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದು ಕಂಡುಬಂದಿದೆ. ಉಳಿದಂತೆ 41-60 ರಲ್ಲಿ 546 ಮಹಿಳೆಯರೂ, 61 ವರ್ಷ ಮೇಲ್ಪಟ್ಟ ವೃದ್ಧ ಮಹಿಳೆಯರು 218 ರಷ್ಟಿದ್ದಾರೆ. ಇದು ಮಹಿಳೆಯರ ವಯೋಮಾನದ ಅಂಕಿ ಸಂಖ್ಯೆಯಾಗಿದೆ. ದುಡಿಯುವ ಮಹಿಳೆಯರ ಸಂಖ್ಯೆಯು ಹೆಚ್ಚಿದ್ದು ಆ ಮಹಿಳೆಯರಿಗೆ ದುಡಿಯುವ ಅವಕಾಶಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ ಇದೆ.

ಪರಿಹಾರ ಸಾಧ್ಯತೆ: ಇಲ್ಲಿ ಸಾಮಾನ್ಯವಾಗಿ ದುಡಿಯುವ ವಯೋಮಾನ 18-40 ರಲ್ಲಿ ಮಹಿಳೆಯರ ಸಂಖ್ಯೆಯು ಹೆಚ್ಚಾಗಿರುವ ಕಾರಣ ಇವರನ್ನು ಉದ್ಯೋಗಗಳಲ್ಲಿ ತೊಡಗಿಸುವ ಯೋಜನೆಗಳನ್ನು ರೂಪಿಸಬೇಕಾಗಿದೆ. ಸಾಂಪ್ರದಾಯಿಕ ವೃತ್ತಿಗಳ ಆಚೆ ಆಧುನಿಕ ವೃತ್ತಿ ತರಬೇತಿಗಳನ್ನು ಸಮಾಜ ಕಲ್ಯಾಣ ಇಲಾಖೆಯು ಯೋಜಿಸಬಹುದಾಗಿದೆ. ಅಂತೆಯೇ ಪರಿಶಿಷ್ಟ ಜಾತಿಯ ಮಹಿಳಾ ಮೀಸಲಾತಿಯಲ್ಲಿ ಈ ಸಮುದಾಯದ ಆದ್ಯತೆಯನ್ನು ಹೆಚ್ಚಿಸಬೇಕಾಗಿದೆ.

ಬಿಕ್ಕಟ್ಟು: ಒಟ್ಟು ಗಂಟಿಚೋರ್ಸ್ ಜನಸಂಖ್ಯೆಯಲ್ಲಿ 1233 ರಷ್ಟು ಅವಿವಾಹಿತ ಮಹಿಳೆಯರಿದ್ದರೆ, 1342 ರಷ್ಟು ವಿವಾಹಿತ ಮಹಿಳೆಯರಿದ್ದಾರೆ. ಇದರಲ್ಲಿ 352 ರಷ್ಟು ವಿಧವೆಯರಿರುವುದು ಕಂಡುಬಂದಿದೆ. ಮುಖ್ಯವಾಗಿ ಇಲ್ಲಿ 37 ರಷ್ಟು ವಿಧುರರು ಕಂಡು ಬಂದರೆ ವಿಧವೆಯರ ಸಂಖ್ಯೆಯೇ ದೊಡ್ಡದಿದೆ. ಇಲ್ಲಿ ವಿಧುರರಿಗೆ ಸಾಮಾನ್ಯವಾಗಿ ಮರುಮದುವೆಗೆ ಅವಕಾಶವಿರುವ ಕಾರಣ ವಿಧುರ ಮತ್ತೆ ವಿವಾಹಿತನಾಗಿ ಬದಲಾಗುತ್ತಾನೆ. ಆದರೆ ಇಲ್ಲಿ ಮಹಿಳೆಯರು ಮರುಮದುವೆ ಸಾಧ್ಯತೆ ಕಡಿಮೆ ಇರುವ ಕಾರಣ ವಿಧವೆಯರಾಗಿಯೇ ಉಳಿಯುತ್ತಾರೆ. ಸಾಂಪ್ರದಾಯಿಕವಾಗಿ ಗಂಟಿಚೋರ ಸಮುದಾಯದಲ್ಲಿ ವಿಧವಾ ವಿವಾಹವು ಇದ್ದರೂ ಇದೀಗ ಈ ಸಮುದಾಯದಲ್ಲಿ ವಿಧವಾ ವಿವಾಹ ಕಡಿಮೆಯಾದಂತಿರುವುದು ಈ ಅಂಕೆಸಂಖ್ಯೆಗಳು ಹೇಳುತ್ತಿವೆ.

ಪರಿಹಾರ ಸಾಧ್ಯತೆ: ಇಲ್ಲಿ ಕೆಲವು ವಿಧವೆಯರಿಗೆ ಸರಕಾರದ ವಿಧವಾ ವೇತನವು ಲಭ್ಯವಾಗಿಲ್ಲ. ಅಂತಹವರನ್ನು ಗುರುತಿಸಿ ವಿಧವಾ ವೇತನವನ್ನು ಕೊಡಲು ಅನುವಾಗುವಂತೆ ಆಯಾ ತಾಲೂಕಿನ ತಹಶೀಲ್ದಾರರಿಗೆ ಮನವಿ ಮಾಡಬೇಕಿದೆ. ಅಂತೆಯೇ ಕಡಿಮೆ ವಯೋಮಾನದ ವಿಧವೆಯರಿಗೆ ಉದ್ಯೋಗವಕಾಶಗಳನ್ನೂ, ಮತ್ತು ಮರುಮದುವೆಗೆ ಸಹಾಯಧನವನ್ನೂ ಕೊಡುವ ಯೋಜನೆಯೊಂದನ್ನು ರೂಪಿಸಬೇಕಾಗಿದೆ.

ಬಿಕ್ಕಟ್ಟು: ಪಡಿತರ ಚೀಟಿಯನ್ನು ಹೊಂದಿದ ಕುಟುಂಬಗಳ ಸಂಖ್ಯೆ 1196 ರಷ್ಟಿದೆ. ಅಂದರೆ ಶೇ 77.612 ರಷ್ಟು ಫಲಾನುಭವಿಗಳಾಗಿ ಸರಕಾರದ ಪಡಿತರ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದರಲ್ಲಿ ಸಮೀಕ್ಷೆಯ ಪ್ರಕಾರ 345 ಕುಟುಂಬಗಳು ಅಂದರೆ ಶೇ 22.388 ರಷ್ಟು ಪಡಿತರ ಚೀಟಿಯ ಸೌಲಭ್ಯವನ್ನು ಹೊಂದಿಲ್ಲ.

ಪರಿಹಾರ ಸಾಧ್ಯತೆ: ಸಮೀಕ್ಷೆಯ ಕಂಡುಬಂದ 345 ಕುಟುಂಬಗಳು ಅಂದರೆ ಶೇ 22.388 ರಷ್ಟು ಪಡಿತರ ಚೀಟಿಯ ಸೌಲಭ್ಯವನ್ನು ಹೊಂದಿಲ್ಲದ ಕಾರಣ ಈ ಕುಟುಂಬಗಳಿಗೆ ಪಡಿತರ ಚೀಟಿಯ ಸೌಲಭ್ಯವನ್ನು ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಒದಗಿಸಬೇಕಾಗಿದೆ. ಈ ವಿಷಯವಾಗಿ ಇಂದು ಪಡಿತರ ಚೀಟಿಗಾಗಿ ಆನ್ ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕಾಗಿರುವುದರಿಂದ, ಗಂಟಿಚೋರ್ ಸಮುದಾಯ ಸಂಘಟನೆಗಳು ಜಾಗೃತಿ ಮೂಡಿಸಬೇಕಾಗಿದೆ.

ಬಿಕ್ಕಟ್ಟು: ಬೆಳಗಾಂ ಜಿಲ್ಲೆಯ ರಾಯಭಾಗ ತಾಲೂಕಿನ ಶಾಹುಪಾರ್ಕ ಎಂಬ ಹಳ್ಳಿಯಲ್ಲಿ 1955 ರಲ್ಲಿ ಒಂದು ಆಶ್ರಮ ಶಾಲೆಯು ಆರಂಭವಾಗಿತ್ತು. ಈ ಆಶ್ರಮ ಶಾಲೆಯು ಮುಖ್ಯವಾಗಿ ಶಾಹುಪಾರ್ಕ ಮತ್ತು ಸುತ್ತಮುತ್ತಣ ಹಳ್ಳಿಗಳಲ್ಲಿರುವ ಗಂಟಿಚೋರ್ಸ್ ಒಳಗೊಂಡಂತೆ ಇತರೆ ಬುಡಕಟ್ಟು ಸಮುದಾಯದ ಮಕ್ಕಳು ಕಲಿಯಲು ಅನುಕೂಲವಾಗಿತ್ತು. ಆದರೆ ಈ ಆಶ್ರಮ ಶಾಲೆಯು ಈಗ್ಗೆ ಸುಮಾರು 6 ವರ್ಷಗಳಿಂದ ಸ್ಥಗಿತವಾಗಿದೆ. ಹೀಗೆ ಸ್ಥಗಿತವಾದ ಶಾಲೆಯಲ್ಲಿ ಶಾಲಾ ಬೆಂಚು ಮೇಜುಗಳನ್ನು ಒಳಗೊಂಡಂತೆ, ಹಾಸ್ಟೆಲಿನ ಹಾಸಿಗೆ ದಿಂಬು ಅಡಿಗೆ ಸಾಮಾನುಗಳೆಲ್ಲಾ ದೂಳಿಡಿದು ತುಕ್ಕು ಹಿಡಿಯುತ್ತಿವೆ

ಪರಿಹಾರ ಸಾಧ್ಯತೆ: 1955 ರಲ್ಲಿ ಆರಂಭವಾದ ಈ ಆಶ್ರಮ ಶಾಲೆಯಲ್ಲಿ ಸಾವಿರಾರು ಮಕ್ಕಳು ಕಲಿತು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇಂದು ಈ ಶಾಲೆ ಸ್ಥಗಿತವಾದ ಕಾರಣ ಗಂಟಿಚೋರ್ಸ್ ಒಳಗೊಂಡಂತೆ ಸ್ಥಳೀಯ ಪರಿಶಿಷ್ಟ ಜಾತಿ/ಪಂಗಡಗಳ ಮಕ್ಕಳು ಕಲಿಯಲು ತೊಡಕಾಗಿದೆ. ಈ ಆಶ್ರಮಶಾಲೆಯನ್ನು ಆರಂಭಿಸಲು ಹೊಸದಾಗಿ ಏನನ್ನೂ ಖರ್ಚುಮಾಡುವಂತಿಲ್ಲ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯು ಕೂಡಲೆ ಈ ಶಾಲೆಯನ್ನು ಪುನರ್ ಆರಂಭಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಬುಡಕಟ್ಟು ಮಕ್ಕಳಿಗೆ ಕಲಿಯಲು ಅವಕಾಶ ಮಾಡಿಕೊಡಬೇಕಿದೆ.

ಬಿಕ್ಕಟ್ಟು: ಸೆಟ್ಲಮೆಂಟ್ ಮನೆಗಳು ಆಯಾ ಭಾಗದ ಕಂಪನಿಗಳ ಹೆಸರಲ್ಲಿದೆ. ಆಯಾ ಮನೆಗಳಲ್ಲಿ ವಾಸವಿರುವ ವಾರಸುದಾರರ ಹೆಸರಲ್ಲಿ ಈ ಮನೆಗಳು ಖಾಯಂ ಇಲ್ಲದ ಕಾರಣ, ಇಂತಹ ಕಡೆಗಳಲ್ಲಿ ವಾಸದ ಮನೆಯ ಅಭಧ್ರತೆ ಗಂಟಿಚೋರ ಸಮುದಾಯಕ್ಕೆ ನಿರಂತರವಾಗಿ ಕಾಡುವ ಒಂದು ಸಂಗತಿಯಾಗಿದೆ. ಇದು ಗೋಕಾಕಫಾಲ್ಸ್, ಹುಬ್ಬಳ್ಳಿ, ಗದಗ-ಬೆಟಗೇರಿ ಸೆಟ್ಲಮೆಂಟ್, ಬಿಜಾಪುರ, ವಿಶೇಷವಾಗಿ ನರಗುಂದದಲ್ಲಿ ಕಂಡುಬಂದಿದೆ.

ಪರಿಹಾರ ಸಾಧ್ಯತೆ: ಮೂಲತಃ ಸೆಟ್ಲಮೆಂಟ್ ವಾಸಿಗಳಾದ ಗಂಟಿಚೋರ ಸಮುದಾಯದ ಮನೆಗಳನ್ನು ಸರಕಾರವು ಗುರುತಿಸಿ, ಆಯಾ ಸೆಟ್ಲಮೆಂಟುಗಳನ್ನು ಪರಿಶೀಲಿಸಿ ಅಲ್ಲಿನ ಮನೆಗಳ ಒಡೆತನವನ್ನು ಆಯಾ ಮನೆಗಳಲ್ಲಿ ನೆಲೆಸಿದ ಗಂಟಿಚೋರ ಸಮುದಾಯದವರ ಹೆಸರಿಗೆ ಖಾಯಂ ನೋಂದಣಿ ಮಾಡಿಸುವ ಕೆಲಸ ಆಗಬೇಕಿದೆ. ಇದನ್ನು ಸಮಾಜ ಕಲ್ಯಾಣ ಇಲಾಖೆಯು ಕಂದಾಯ ಇಲಾಖೆಯ ಜತೆ ಚರ್ಚಿಸಿ ಈ ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳುವ ಅಗತ್ಯವಿದೆ. ಮುಖ್ಯವಾಗಿ ನರಗುಂದದ 49 ಕುಟುಂಬಗಳು ಗಿರಣಿ ಲಾಕ್ ಔಟ್ ಆದ ಕಾರಣ ವೃತ್ತಿಯೂ ಇಲ್ಲದೆ, ಮಿಲ್ಲುಗಳು ಕೊಟ್ಟ ಮನೆಗಳು ಅಥವಾ ಗುಡಿಸಲುಗಳನ್ನು ತೆರವುಗೊಳಿಸಿದರೆ ಬಯಲೇ ಗತಿಯಾಗುವ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೀಗೆ ನೋಡುವುದಾದರೆ ಗೋಕಾಕ ಫಾಲ್ಸ್ ನಲ್ಲಿರುವ ಗಿರಣಿ ವಡ್ಡರ್ ಕೂಡ ಇದೀಗ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇಂಥವರುಗಳಿಗೆ ಇತರೆ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ವ್ಯವಸ್ಥೆ ಮಾಡುವುದು ಮತ್ತು ಅವರುಗಳ ವಸತಿಯನ್ನು ಖಾಯಂಗೊಳಿಸಬೇಕಿದೆ.

ಬಿಕ್ಕಟ್ಟು: ಗಂಟಿಚೋರ್ ಸಮುದಾಯದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳಿದ್ದಾರೆ. ಅಂತೆಯೇ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಿದ ಸಮುದಾಯದ ಯುವತಿ ಯುವಕರಿದ್ದಾರೆ. ಈ ಬಗ್ಗೆ ಕೃತಿಯಲ್ಲಿ ಚರ್ಚಿಸಲಾಗಿದೆ. ಅಧ್ಯಯನದ ಸಂದರ್ಭದಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ಕೆಲವು ಕ್ರೀಡಾಪಟುಗಳಿಗೆ ನಿವೃತ್ತಿಯ ನಂತರದ ಸೌಲಭ್ಯಗಳು ಸಿಗುತ್ತಿಲ್ಲ. ಅಂತೆಯೇ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಇರುವ ಸಮುದಾಯದ ಯುವ ಜನತೆಗೆ ಸರಿಯಾದ ಪ್ರೋತ್ಸಾಹವೂ ಸಿಗುತ್ತಿಲ್ಲ. ಕ್ರೀಡಾ ವಸತಿ ಶಾಲೆಗಳಲ್ಲಿ ಹೆಚ್ಚುವರಿಯಾಗಿ ನೋಂದಣಿಗೆ ಅವಕಾಶವಿಲ್ಲವಾಗಿದೆ. ಕ್ರೀಡೆಗಳಿಗಾಗಿ ಇರುವ ಕ್ರೀಡಾ ಕ್ಲಬ್ಬುಗಳಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲ.

ಪರಿಹಾರ ಸಾಧ್ಯತೆ: ಗಂಟಿಚೋರ ಸಮುದಾಯದವನ್ನು ಒಳಗೊಂಡಂತೆ ಅಪರಾಧಿ ಬುಡಕಟ್ಟುಗಳೆಂಬ ಹಣೆಪಟ್ಟಿ ಕಳಚಿಕೊಂಡು ಬದುಕುತ್ತಿರುವ ಬುಡಕಟ್ಟುಗಳಲ್ಲಿ ಕ್ರೀಡೆಯ ಬಗ್ಗೆ ವಿಶೇಷ ಆಸಕ್ತಿ ಇದೆ. ಇಂತಹ ಸಮುದಾಯಗಳ ಕ್ರೀಡಾಪಟುಗಳಿಗೆ ವಿಶೇಷ ಆಧ್ಯತೆಯನ್ನು ಕೊಡಬೇಕಾಗಿದೆ. ವೃದ್ಧರಾದ ಕ್ರೀಡಾಪಟುಗಳಿಗೆ ಸರಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಆಯಾ ಜಿಲ್ಲಾ ಕ್ರೀಡಾ ವಸತಿಶಾಲೆಗಳಲ್ಲಿ ಈ ಸಮುದಾಯದ ಮಕ್ಕಳಿಗೆ ವಿಶೇಷ ಆಧ್ಯತೆಯನ್ನು ನೀಡಿ ಹೆಚ್ಚುವರಿ ನೊಂದಣಿ ಮಾಡಿಕೊಳ್ಳಬೇಕಿದೆ. ಸಮುದಾಯದ ಕ್ರೀಡಾ ಕ್ಲಬ್ಬುಗಳಿಗೆ ಹೆಚ್ಚುವರಿ ಧನ ಸಹಾಯ ನೀಡಬೇಕಾಗಿದೆ.

ಬಿಕ್ಕಟ್ಟು: ವಿಶೇಷವಾಗಿ ಗಂಟಿಚೋರ ಸಮುದಾಯ ಬಾವಿ ತೋಡುವ ವೃತ್ತಿಯು ಬೆಳಗಾಂವ ಜಿಲ್ಲೆ ಕೋಕಾಕ ತಾಲೂಕಿನ ಹಳ್ಳೂರನ್ನು ಒಳಗೊಂಡಂತೆ ಈ ವೃತ್ತಿಯನ್ನು ರಾಯಭಾಗ ತಾಲೂಕಿನ ದ್ಯಾವಪ್ರಹಟ್ಟಿ, ಕಡಕಭಾವಿ, ಶಾಹುಪಾರ್ಕ, ಚಿಕ್ಕೋಡಿ ತಾಲೂಕಿನ ಕೆ.ಕೆ.ಮಮದಾಪುರ ಮುಂತಾದ ಕಡೆಗಳಲ್ಲಿ ಕಂಡುಬರುತ್ತದೆ. ಈ ಊರುಗಳಲ್ಲಿ ವಿಚಾರಿಸಲಾಗಿ ಬಹುಪಾಲು ಕುಟುಂಬಗಳು ಬಾವಿತೋಡುವ ಕೆಲಸದಲ್ಲಿ ನಿರತರಾಗಿದ್ದಾರೆ.. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಹಳ್ಳೂರಿನಲ್ಲಿ ಭಾವಿ ತೋಡುತ್ತಿದ್ದ ಹೊಲವೊಂದಕ್ಕೆ ಹೋಗಿ `ಬಾವಿ ತೋಡುವ’ ಈ ಕೆಲಸವನ್ನು ನೋಡಲಾಯಿತು. ಇದು ತುಂಬಾ ಅಪಾಯಕಾರಿ ವೃತ್ತಿ ಎನ್ನಿಸಿತು. ಇಂತಹ ಅಪಾಯಕಾರಿ ವೃತ್ತಿಯಲ್ಲಿ ಪರ್ಯಾಯಗಳಿಲ್ಲದೆ ಈ ಸಮುದಾಯ ತೊಡಗಿಕೊಂಡಿದೆ.

ಪರಿಹಾರ ಸಾಧ್ಯತೆ: ಗಂಟಿಚೋರ ಸಮುದಾಯ ಬಹುಶಃ ಹೊಟ್ಟೆಪಾಡಿನ ಕೆಲಸವಾಗಿ ಈ ಭಾಗದಲ್ಲಿ ಸ್ಥಳೀಯವಾಗಿ ಬಾವಿ ತೋಡುವ ಕೆಲಸಕ್ಕೆ ಹೊಂದಿಕೊಂಡಿರಬಹುದು ಅನ್ನಿಸುತ್ತದೆ. ಹಾಗಾಗಿ ಪರ್ಯಾಯ ವೃತ್ತಿಗಳನ್ನು ಕೈಗೊಳ್ಳಲು ಸರಕಾರ ತನ್ನ ಯೋಜನೆಗಳಲ್ಲಿ ಸಹಾಯ ಮಾಡಿದರೆ, ಈ ಸಮುದಾಯ ಈ ಅಪಾಯಕಾರಿ ವೃತ್ತಿಯಿಂದ ಬಿಡುಗಡೆ ಪಡೆಯಲು ಸಾಧ್ಯವಿದೆ. ಅಂತೆಯೇ ಇದೇ ವೃತ್ತಿಯನ್ನು ಸುರಕ್ಷಿತವಾಗಿ ಮುಂದುವರೆಯಲು ಸರಕಾರ ಆಧುನಿಕ ತಾಂತ್ರಿಕ ಸೌಲಭ್ಯವನ್ನು ಪಡೆಯಲು ಸಹಕರಿಸಬಹುದಾಗಿದೆ.

ಬಿಕ್ಕಟ್ಟು: ಗಂಟಿಚೋರ ಸಮುದಾಯವು ಇದೀಗ ಸಂಘಟಿತವಾಗುತ್ತಿದೆ. ರಾಜ್ಯ, ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿ ಈ ಸಮುದಾಯದ ಸಂಘಟನೆಗಳು ರಚನೆಗೊಂಡು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಈ ಸಂಘಟನೆಗಳ ಧ್ಯೇಯ ಮತ್ತು ಗುರಿಗಳಲ್ಲಿ ಸಮುದಾಯದ ಸರ್ವೋದಯದ ಬಗ್ಗೆ ಕನಸುಗಾರಿಕೆ ಇದೆ. ಆದರೆ ಈ ಕನಸನ್ನು ಈಡೇರಿಸಿಕೊಳ್ಳಲು ಸರಕಾರದಿಂದ ಈ ಸಮುದಾಯ ಸಂಘಟನೆಗಳಿಗೆ ನೆರವಾಗಲಿ, ಬೆಂಬಲವಾಗಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿಲ್ಲ.

ಪರಿಹಾರ ಸಾಧ್ಯತೆ: ಇವುಗಳು ನೊಂದಾಯಿತ ಸಂಘಟನೆಗಳಾಗಿರುವುದರಿಂದ, ಸರಕಾರದ ಸಮುದಾಯ ಅಭಿವೃದ್ಧಿಯ ಕೆಲವು ಯೋಜನೆಗಳನ್ನು ಆದ್ಯತೆಯ ಮೇರೆಗೆ ನಿಬಂಧನೆಗೊಳಪಟ್ಟಂತೆ ಹಣಕಾಸಿನ ನೆರವನ್ನು ಅಥವಾ ಯೋಜನೆಗಳನ್ನು ಕೊಡಬಹುದಾಗಿದೆ. ಕಾರಣ ಈ ಸಂಘಟನೆಯ ಕಾರ್ಯಕಾರಿ ಸದಸ್ಯರುಗಳಿಗೆ ಸಮುದಾಯದ ಬಗ್ಗೆ ಸರಿಯಾದ ತಿಳುವಳಿಕೆ ಇರುವುದರಿಂದ ಅವರು ಸಮುದಾಯಕ್ಕೆ ನೇರವಾಗಿ ಯೋಜನೆಗಳನ್ನು ತಲುಪಿಸುವ ಸಾಧ್ಯತೆ ಇದೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯು ತನ್ನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಾಗ ಈ ಸಮುದಾಯಗಳ ಸಂಘಟನೆಗಳ ಸಹಭಾಗಿತ್ವ ತತ್ವವನ್ನು ಅನುಸರಿಸಬೇಕಾಗಿದೆ.

ಬಿಕ್ಕಟ್ಟು: ನಗರದಲ್ಲಿ ನೆಲೆಸಿದ ಗಂಟಿಚೋರರ ನಗರ ಸಂಬಂಧಿ ವೃತ್ತಿಗಳಲ್ಲಿ ಆಟೋ ಓಡಿಸುವ ವೃತ್ತಿಯನ್ನು ಅವಲಂಬಿಸಿದವರ ಸಂಖ್ಯೆ ಹೆಚ್ಚಿದೆ. ಇದರಲ್ಲಿ ಬಾಡಿಗೆ ಆಟೋ ಓಡಿಸುವವರೇ ಹೆಚ್ಚಾಗಿದ್ದಾರೆ. ಈ ಪ್ರಮಾಣ ಮುಖ್ಯವಾಗಿ ಹುಬ್ಬಳ್ಳಿ ಗದಗ ಗೋಕಾಕ ಬಿಜಾಪುರ ಸೆಟ್ಲಮೆಂಟುಗಳಲ್ಲಿ ಹೆಚ್ಚಾಗಿ ಕಾಣುತ್ತದೆ. ಇದರಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದು ಬೇರೆಯ ವಾಹನಗಳನ್ನು ಓಡಿಸುವವರ ಸಂಖ್ಯೆಯೂ ಇದೆ. ಇವರುಗಳೆಲ್ಲಾ ಸ್ವಂತ ವಾಹನ ಪಡೆಯಲಾರದ ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾರೆ.

ಪರಿಹಾರ ಸಾಧ್ಯತೆ: ಆಟೋ ಕೊಳ್ಳಲು ಪರಿಶಿಷ್ಟ ಜಾತಿ ಸಬ್ಸಿಡಿ ಸಾಲದಡಿ ಸಾಲ ಪಡೆದವರು ಬೆರಳೆಣಿಕೆಯಷ್ಟಿದ್ದಾರೆ. ಈ ಸೌಲಭ್ಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸಿಗಬೇಕಾಗಿದೆ. ಅಂತೆಯೇ ಡ್ರೈವಿಂಗ್ ಲೈಸೆನ್ಸ್ ಪಡೆದು ಬೇರೆಯ ವಾಹನಗಳನ್ನು ಓಡಿಸುವವರಿಗೆ ಸ್ವಂತ ವಾಹನವನ್ನು ಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯು ಸ್ವಂತ ವಾಹನ ಕೊಳ್ಳಲು ಸಬ್ಸಿಡಿ ಕೊಡುವ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ಗಂಟಿಚೋರ ಸಮುದಾಯವನ್ನು ಪರಿಗಣಿಸಬೇಕಾಗಿದೆ.

ಬಿಕ್ಕಟ್ಟು: ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಸಮುದಾಯವಾರು ಸ್ತ್ರೀಶಕ್ತಿ ಗುಂಪುಗಳು ರಚನೆಯಾಗಿವೆ. ಇದರಲ್ಲಿ ಪ್ರದೇಶವಾರು ಗಂಟಿಚೋರ ಸಮುದಾಯದ ಮಹಿಳೆಯರ ಪ್ರತ್ಯೇಕ ಸ್ತ್ರೀಶಕ್ತಿ ಗುಂಪುಗಳೂ ಸಕ್ರಿಯವಾಗಿವೆ. ಅಂತೆಯೇ ಹಲವು ಜಾತಿ ಮಹಿಳೆಯರು ಕೂಡಿದ ಸ್ತ್ರೀಶಕ್ತಿ ಗುಂಪುಗಳಲ್ಲಿಯೂ ಗಂಟಿಚೋರ ಸಮುದಾಯದ ಮಹಿಳೆಯರಿದ್ದಾರೆ. ಹೀಗಿರುವಾಗ ಸಾಮಾನ್ಯ ಸ್ತ್ರೀಶಕ್ತಿಗುಂಪುಗಳಿಗೆ ಸರಕಾರ ನೀಡುವ ಸೌಲಭ್ಯಗಳು ಮಾತ್ರ ಸಲ್ಲುತ್ತಿವೆ.

ಪರಿಹಾರ ಸಾಧ್ಯತೆ: ಪ್ರತ್ಯೇಕವಾಗಿ ಗಂಟಿಚೋರ್ ಸಮುದಾಯದ ಮಹಿಳೆಯರ ಸ್ತ್ರೀಶಕ್ತಿ ಗುಂಪುಗಳು ಪರಿಶಿಷ್ಠಜಾತಿಯ ಸೌಲಭ್ಯಗಳ ಅಡಿಯಲ್ಲಿ ಬರುವಂತೆ ಸಮಾಜ ಕಲ್ಯಾಣ ಇಲಾಖೆಯು ಕ್ರಮವಹಿಸಬೇಕಾಗಿದೆ. ಹೀಗೆ ಕ್ರಮವಹಿಸಿದಲ್ಲಿ ಗಂಟಿಚೋರ್ಸ್ ಸಮುದಾಯದ ಮಹಿಳೆಯರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಸ್ತ್ರೀಶಕ್ತಿ ಗುಂಪುಗಳ ಮೂಲಕ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಾಧ್ಯತೆ ಇದೆ.

ಬಿಕ್ಕಟ್ಟು: ಗಂಟಿಚೋರ್ಸ್ ಸಮುದಾಯದ ಮಕ್ಕಳು ಎಸ್.ಎಸ್.ಎಲ್.ಸಿ. ನಂತರದ ವಿದ್ಯಾಭ್ಯಾಸಕ್ಕೆ ಸರಕಾರೇತರ ಶಿಕ್ಷಣ ಸಂಸ್ಥೆಗಳಲ್ಲಿಯೂ, ಖಾಸಗಿ ವಸತಿ ಊಟದ ವ್ಯವಸ್ಥೆಯಲ್ಲಿಯೂ ತಮ್ಮ ಶಿಕ್ಷಣವನ್ನು ಪೂರೈಸಿಕೊಳ್ಳಬೇಕಾಗುತ್ತದೆ. ಇಂತಹವರು ಪರಿಶಿಷ್ಠಜಾತಿಯ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಹೀಗೆ ಕಲಿಯುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಸೇರಿದವರಾಗಿರುತ್ತಾರೆ.

ಪರಿಹಾರ ಸಾಧ್ಯತೆ: ಹೀಗಿರುವವರನ್ನು ಗುರುತಿಸಿ ಸಮಾಜ ಕಲ್ಯಾಣ ಇಲಾಖೆಯು ಫೀ ತುಂಬುವ ಅಥವಾ ಪ್ರತ್ಯೇಕ ವಸತಿ ಮತ್ತು ಊಟದ ಖರ್ಚನ್ನು ಭರಿಸುವ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಇದು ಸಾಧ್ಯವಾದರೆ ಗಂಟಿಚೋರ್ಸ್ ಸಮುದಾಯದ ಮಕ್ಕಳು ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣವನ್ನು ಕಲಿಯಲು ನೆರವಾಗುತ್ತದೆ, ಮತ್ತು ಮೇಲಿನ ಬಿಕ್ಕಟ್ಟಿನಲ್ಲಿ ಹೇಳಿದ ಕೊರತೆಯಿಂದ ವಿದ್ಯಾಭ್ಯಾಸವನ್ನು ಮೊಟುಕುಗೊಳಿಸುವವರು ಶಿಕ್ಷಣವನ್ನು ಮುಂದುವರಿಸಲು ನೆರವಾಗುತ್ತದೆ.