ನೋವಿನಲ್ಲೂ ನಗುವನ್ನು ಹುಡುಕುವ, ಅಷ್ಟು ಯಾತನಾಮಯವಾದ ಬರಹಗಳನ್ನು ಬರೆಯುವಾಗಲೂ ನಮ್ಮನ್ನು ನಗಿಸಲು ಪ್ರಯತ್ನಿಸುವ ಅವರ ಬರಹಗಳ ಮೆಚ್ಚಲೇಬೇಕು. ಇದು ಅವರ ಯಾತನಾಮಯವಾದ ಒಂದು ವರ್ಷದ ವಿವರಣೆ ಮಾತ್ರವಲ್ಲ. ಹೇಗೆ ಅವರು ಅದನ್ನು ಎದುರಿಸಿ ಎದ್ದು‌ನಿಂತರು, ಹೇಗೆ ಮನೋಬಲ ಬೆಳೆಸಿಕೊಂಡರು, ನಂತರ ಹೆದರಿ ಮನೆಯಲ್ಲಿ ಕೂರದೇ, ತಮ್ಮ ವೃತ್ತಿಗೆ ತೆರೆದುಕೊಂಡರು, ಬರೆಯಲಾರದಷ್ಟು ನಿಶ್ಯಕ್ತಿಯಿದ್ದರೂ ಕತೆ ಕವನಗಳ ಬರೆದರು, ತಮ್ಮ ಹವ್ಯಾಸಗಳನ್ನು ಕೂಡಾ ಆ ಮಿತಿಯ ನಡುವೆ ಅನುಭವಿಸಿದರು ಅನ್ನುವುದನ್ನು ಕಟ್ಟಿಕೊಟ್ಟ ರೀತಿಯಿದೆಯಲ್ಲಾ ಅದು ಮಾತ್ರ ನಿಜಕ್ಕೂ ಅದ್ಭುತ.
‘ಓದುವ ಸುಖ’ ಅಂಕಣದಲ್ಲಿ ಭಾರತಿ ಬಿ.ವಿ. ಯವರ ಪುಸ್ತಕಗಳ ಕುರಿತು ಬರೆದಿದ್ದಾರೆ ಗಿರಿಧರ್ ಗುಂಜಗೋಡು

 

ಭಾರತಿ ಬಿ.ವಿ. ಅವರ ಪರಿಚಯವಾಗಿದ್ದು ಫೇಸ್‌ಬುಕ್ಕಿನಲ್ಲಿ ೨-೩ ವರ್ಷಗಳ ಮುಂಚೆ. ಕೆಂಡಸಂಪಿಗೆಯಲ್ಲಿ ಮತ್ತು ಇತರ ವೆಬ್ ಸೈಟ್‍ ಗಳಲ್ಲಿ  ಅವರು ಬರೆದ ಕೆಲ ಲೇಖನಗಳ‌ನ್ನು ಓದಿದ ನೆನಪಿತ್ತು. ಅದಕ್ಕೇ ಎಫ್‌ಬಿಯಲ್ಲಿ ಕಂಡ ನಂತರ ಕೋರಿಕೆ ಕಳುಹಿಸಿದ್ದೆ. ತದನಂತರದಲ್ಲಿ ನನ್ನ ಕೆಲ ಬರಹಗಳಿಗೆ ಅವರು ಪ್ರತಿಕ್ರಿಯಿಸಿದ್ದನ್ನು ನೋಡಿದ ನಂತರ ನನ್ನ ಗೆಳೆಯನೊಬ್ಬ ‘ಭಾರತಿ ಬಿ.ವಿ’ ಅವರೆಲ್ಲಾ ನಿಂಗೆ ಕಮೆಂಟ್ ಮಾಡ್ತಾರಾ ಮಾರಾಯಾ? ಬಹಳ ಒಳ್ಳೆ ಲೇಖಕಿ ಅವರು, ಅವರ ‘ಸಾಸಿವೆ ತಂದವಳು’ ಓದಿಲ್ವಾ? ಬಹಳ ಉತ್ತಮ ಪುಸ್ತಕ ಎಂದು ಹೇಳಿದ್ದ.  ಆ ಕ್ಷಣ ನನಗೆ ಜಾಸ್ತಿ ಖುಷಿಯಾಗಿದ್ದು ಅಂತವರೂ ನನ್ನ ಬರಹಕ್ಕೆ ಪ್ರತಿಕ್ರಿಯೆ ನೀಡುತ್ತಾರೆ ಅನ್ನುವುದೇ ಆಗಿತ್ತು. ಆ ಕ್ಷಣಕ್ಕೆ ಖುಷಿಯನ್ನು ಆನಂದಿಸಿದೆ ಬಿಟ್ಟರೆ ದುರದೃಷ್ಟವಶಾತ್ ಅದನ್ನು ಕೊಂಡು ಓದಬೇಕೆಂಬ ಯೋಚನೆ ಬರಲೇ ಇಲ್ಲ.

ಮೊದಲು ಅವರ ‘ಮಿಸಳ್ಬಾಜಿ’ ಓದಿದ್ದೆ. ಅದಾದ ಮೇಲೆ ಮೊನ್ನೆ ಅವರ ಪೋಸ್ಟ್ ಒಂದನ್ನು ಫೇಸ್‌ಬುಕ್ಕಿನಲ್ಲಿ ನೋಡಿದ ನಂತರ ಅವರ ಮೂರು ಕೃತಿಗಳ ತರಿಸಿಕೊಂಡೆ. ಒಂದನ್ನು ಮುಂಚೆ ಓದಿದ್ದೆ, ಉಳಿದವನ್ನು ಆಮೇಲೆ ಓದಿ ಮುಗಿಸಿದೆ. ಆ ಮೂರು ಕೃತಿಗಳ ಬಗೆಗೆ ಇಲ್ಲಿ ಬರೆದಿದ್ದೇನೆ.

ಮಿಸಳ್ಬಾಜಿ:

ಕಳೆದ ಡಿಸೆಂಬರಿನಲ್ಲಿ ಕಾಲೇಜಿನ ಗೆಳೆಯನಾದ ಕಿರಣನ ಮದುವೆಗೆ ಕುಂದಾಪುರಕ್ಕೆ ಹೋದಾಗ ಹಿಂದಿನ ದಿನ ಗೆಳೆಯನಾದ ಅಮೃತ್ ಕಿರಣನ ಮಣಿಪಾಲದ ಮನೆಯಲ್ಲಿ ಉಳಿದಿದ್ದೆ. ಕಾರವಾರದಿಂದ ೫ ಗಂಟೆಗೆ ಬರಬೇಕಾಗಿದ್ದ ಇನ್ನೊಬ್ಬ ಗೆಳೆಯ ಚೈತನ್ಯ ರೈಲು ತಡವಾದ ಕಾರಣ ಒಂದು ಗಂಟೆ ತಡವಾಗಿ ತಲುಪಿದ. ಬಂದಾಕ್ಷಣವೇ, ‘ಕೆಲ ದಿನಗಳ ಹಿಂದೆ ಭಾರತಿ ಬಿವಿ ಅವರ ಒಂದು ಬರಹ ಶೇರ್ ಮಾಡಿದ್ದೆಯಲ್ಲಾ ಅದು ಈ ಪುಸ್ತಕದಲ್ಲೇ ಇರೋದು ಬಹಳ ಚನ್ನಾಗಿದೆ’  ಎಂದು ಹೇಳಿ ‘ಮಿಸಳ್ ಭಾಜಿ’ಯನ್ನು ನನ್ನೆದುರು ಇಟ್ಟ. ಕೂಡಲೇ ಅದನ್ನು ಕೊಡು ಎಂದು ದಂಬಾಲು ಬಿದ್ದೆ. ಇದು ನನ್ನ ‘ಓದುಗ ಕೂಟದ್ದು’, ನಾಳೆಯೇ ಅದನ್ನು ಇನ್ನೊಬ್ಬರು ಮೇಡಂಗೆ ತಲುಪಿಸಬೇಕು ಆಗೋಲ್ಲ ಎಂದು ಖಡಾಖಂಡಿತವಾಗಿ ಅಂದ. ಆಮೇಲೆ ೪-೫ ಬಾರಿ ಗೋಗರೆದರೂ ಅವನು  ಸೊಪ್ಪು ಹಾಕಲಿಲ್ಲ.

ಬೇರೆ ವಿಧಿಯಿಲ್ಲದೇ ಬೆಳಗ್ಗೆ ನಿಧಾನಕ್ಕೆ ಅವನ ಚೀಲದಿಂದ ಆ ಪುಸ್ತಕವನ್ನು ಕದಿಯಲು ಪ್ರಯತ್ನಿಸುತ್ತಿರುವಾಗ ಎಲ್ಲಿಂದಲೋ ಡಾಬರ್‌ಮನ್ ನಾಯಿಯಂತೆ ವಾಸನೆ ಹಿಡಿದುಕೊಂಡು ಬಂದು ನನ್ನನ್ನು ತಡೆದ. ಇನ್ನೆಷ್ಟು ಪ್ರಯತ್ನಪಟ್ಟರೂ ಸಾಧ್ಯವಿಲ್ಲವೆಂದೆಣಿಸಿ, ‘ಸರಿ ಇಲ್ಲಿಂದ ಕುಂದಾಪುರಕ್ಕೆ ಹೋಗುವ ಸಮಯದಲ್ಲಾದರೂ ಓದ್ತೀನಿ ಕೊಡು’ ಎಂದು ತೆಗೆದುಕೊಂಡೆ. ಕಾರಿನಲ್ಲಿ ಮುಂದಿನ ಸೀಟಿನಲ್ಲಿ ಕುಳಿತ ನನ್ನ ಸ್ಥಿತಿ ಹೇಗಪ್ಪಾ ಅಂದರೆ, ಅದ್ಭುತವಾದ ಊಟ ಎದುರಿಗಿದೆ ಆದರೆ ಬಸ್ಸು ಹೊರಡಲು ಐದೇ ನಿಮಿಷವಿದೆ ಅನ್ನುವಾಗಿನ ಪರಿಸ್ಥಿತಿ . ಲಗುಬಗೆಯಿಂದ ಓದುತ್ತಿರಬೇಕಾದರೆ ನನ್ನ ಸ್ಥಿತಿ ನೋಡಲಾಗದೇ ವಾಹನ ಚಲಾಯಿಸುತ್ತಿದ್ದ ಗೆಳೆಯ ಅಮೃತ ಕಿರಣ ನೀನು ಪುಸ್ತಕ ಮೈಸೂರಿಗೆ ತೆಗೆದುಕೊಂಡು ಹೋಗು ಎಂದು ಅವನ ಪರವಾಗಿ ಅನುಮತಿ ನೀಡಿದ. ಅವನ ಮಾತೆಂದರೆ ಶಾಸನ. ಅವನೇ ಅನುಮತಿ ಕೊಟ್ಟಾದ ಮೇಲೆ ಈತನ ಅನುಮತಿ ಯಾವ ಲೆಕ್ಕಕ್ಕೆ ಎಂದು ಪುಸ್ತಕವನ್ನು ಮಡಚಿಟ್ಟೆ.

೩.೩೦ ಕ್ಕೆ ಮಂಗಳೂರಿನಿಂದ ಬಸ್ಸಿರುವ ಕಾರಣ ಊಟ ಮಾಡದೇ ಹೊರಡಬೇಕಾಯಿತು. ದಾರಿಯಲ್ಲಿ ಹೋಗುತ್ತಾ ಈ ಪುಸ್ತಕ ಓದಿದ ಕಾರಣ ಮದುವೆ ಊಟ ಮಾಡಿದಷ್ಟೇ ಖುಷಿ ಆಯಿತು.  ಬರೀ ನಿಂದೇ ಕತೆ ಹೇಳ್ತಿದೀಯಾ ಪುಸ್ತಕದಲ್ಲಿ ಏನಿದೆ ಅಂತ ಒಂದಕ್ಷರ ಹೇಳಿಲ್ಲವೆಂದು ಬೈಕೋಬೇಡಿ. ಅಲ್ಲಿ ಬಹಳ ಚಂದದ, ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಗಿಸುತ್ತಲೇ ಚಂದದ ಸಂದೇಶ ಕೊಡುವಂತಹ ಲಲಿತ ಪ್ರಬಂಧಗಳಿವೆ. ಕೆಲವಂತೂ ಒಂದು ಬಾರಿಯ ಓದಿಗೆ ತೃಪ್ತಿಯಾಗುವಂತೆ ಮಾಡದೇ ಮತ್ತೆ ಮತ್ತೆ ಓದುವಂತೆ ಮಾಡುವ ಪ್ರಬಂಧಗಳು. ಓದಿಯೇ ಆನಂದಿಸಬೇಕು.

ಸಾಸಿವೆ ತಂದವಳು:

ಭಾರತಿಯಕ್ಕನ ಚೇತೋಹಾರಿ ಬರಹಗಳನ್ನು ಮಾತ್ರ ಓದಿದ್ದೆ. ಹಾಗೆಯೇ ಫೇಸ್ಬುಕ್ಕಿನಲ್ಲಿ ಕೂಡಾ ಯಾರ ಮೇಲೂ ನಂಜಿಟ್ಟುಕೊಳ್ಳದೆ ಎಲ್ಲರೊಟ್ಟಿಗೂ ಕಾಲೆಳೆಯುತ್ತಾ ಚಿಕ್ಕ ತರಲೆ ಮಾಡುತ್ತಾ ನಗುನಗುತ್ತಾ ಸಂಭಾಷಿಸುವುದನ್ನು ನೋಡಿ ಗೊತ್ತಿತ್ತು. ಮೊದಲ ಬಾರಿಗೆ ಅವರು ‘ಸಾಸಿವೆ ತಂದವಳು’ ಅನ್ನೋ ಪುಸ್ತಕ ಬರೆದಿದ್ದಾರೆ ಅಂತ ಕೇಳಿದಕೂಡಲೆ ಆ ಹೆಸರಿನಿಂದಲೇ ಹಿನ್ನೆಲೆಯ ಊಹಿಸಿದೆ. ಅದು ಸಾವನ್ನು ಗೆದ್ದುಬಂದ ಕತೆಯೆಂದು. ಅದರಲ್ಲೂ ಅವರು ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಎದುರಿಸಿ ಬಂದವರೆಂಬ ವಿಷಯ ಆಮೇಲೆ ಗೊತ್ತಾಯಿತು. ಓದುವ ಮನಸ್ಸಾದರೂ ಧೈರ್ಯವಿರಲಿಲ್ಲ. ಎಷ್ಟೇ ಧನಾತ್ಮಕ ಯೋಚನೆಗಳುಳ್ಳ ಬರಹಗಳನ್ನು ಬರೆಯುವವರಾದರೂ ಅತ್ಯಂತ ನೋವುಳ್ಳ ಘಟನೆಗಳು ಇರಬಹುದಾಗಿದ್ದ ಈ ವಿಷಯ ಓದಲು ಮನಸ್ಸು ಅಷ್ಟು ಸುಲಭಕ್ಕೆ ಬರಲಿಲ್ಲ. ಆಮೇಲೆ ಒಂದಿನ ಮನಸ್ಸನ್ನು ಗಟ್ಟಿಮಾಡಿ ತರಿಸಿಕೊಂಡೆ.

ಪುಸ್ತಕ ಬಂದ ದಿನವೇ ಲಗುಬಗೆಯಲ್ಲಿ ಓದಲು ಕುಳಿತವನಿಗೆ ಮುಗಿದಿದ್ದೇ ತಿಳಿಯಲಿಲ್ಲ. ಇದು ಭಾರತಿಯವರು ಸಾವಿನ ಮನೆಯ ಕದತಟ್ಟಿ ವಾಪಾಸಾದ ಕತೆ. ಇಲ್ಲಿ ಖಂಡಿತವಾಗಿಯೂ ಆಳವಾದ ನೋವಿದೆ, ಅವರು ಪಟ್ಟ ಕಷ್ಟಗಳ ಬಗ್ಗೆ ನೀಳವಾದ ವಿವರಗಳಿವೆ. ರೋಗಲಕ್ಷಣಗಳಿಂದ ಹಿಡಿದು ಚಿಕಿತ್ಸೆ ಮುಗಿಯುವವರೆಗೆ ಅವರು ಪಟ್ಟ ಕಷ್ಟಗಳು, ಅನುಭವಿಸಿದ ನೋವುಗಳು ಕಣ್ಣೀರು ತರಿಸಿವೆ.

ಕಾರಿನಲ್ಲಿ ಮುಂದಿನ ಸೀಟಿನಲ್ಲಿ ಕುಳಿತ ನನ್ನ ಸ್ಥಿತಿ ಹೇಗಪ್ಪಾ ಅಂದರೆ, ಅದ್ಭುತವಾದ ಊಟ ಎದುರಿಗಿದೆ ಆದರೆ ಬಸ್ಸು ಹೊರಡಲು ಐದೇ ನಿಮಿಷವಿದೆ ಅನ್ನುವಾಗಿನ ಪರಿಸ್ಥಿತಿ ನನ್ನದಾಗಿತ್ತು. ಲಗುಬಗೆಯಿಂದ ಓದುತ್ತಿರಬೇಕಾದರೆ ನನ್ನ ಸ್ಥಿತಿ ನೋಡಲಾಗದೇ ವಾಹನ ಚಲಾಯಿಸುತ್ತಿದ್ದ ಗೆಳೆಯ ಅಮೃತ ಕಿರಣ ನೀನು ಪುಸ್ತಕ ಮೈಸೂರಿಗೆ ತೆಗೆದುಕೊಂಡು ಹೋಗು ಎಂದು ಅವನ ಪರವಾಗಿ ಅನುಮತಿ ನೀಡಿದ.

ಇದಿಷ್ಟೇ ಅಲ್ಲ. ಆ ನೋವಿನಲ್ಲೂ ನಗುವನ್ನು ಹುಡುಕುವ, ಅಷ್ಟು ಯಾತನಾಮಯವಾದ ಬರಹಗಳನ್ನು ಬರೆಯುವಾಗಲೂ ನಮ್ಮನ್ನು ನಗಿಸಲು ಪ್ರಯತ್ನಿಸುವ ಅವರ ಬರಹಗಳ ಮೆಚ್ಚಲೇಬೇಕು. ಇದು ಅವರ ಯಾತನಾಮಯವಾದ ಒಂದು ವರ್ಷದ ವಿವರಣೆ ಮಾತ್ರವಲ್ಲ. ಹೇಗೆ ಅವರು ಅದನ್ನು ಎದುರಿಸಿ ಎದ್ದು‌ನಿಂತರು, ಹೇಗೆ ಮನೋಬಲ ಬೆಳೆಸಿಕೊಂಡರು, ನಂತರ ಹೆದರಿ ಮನೆಯಲ್ಲಿ ಕೂರದೇ ವೃತ್ತಿಗೆ ತೆರೆದುಕೊಂಡರು, ಬರೆಯಲಾರದಷ್ಟು ನಿಶ್ಯಕ್ತಿಯಿದ್ದರೂ ಕತೆ ಕವನಗಳ ಬರೆದರು, ತಮ್ಮ ಹವ್ಯಾಸಗಳನ್ನು ಕೂಡಾ ಆ ಮಿತಿಯ ನಡುವೆ ಅನುಭವಿಸಿದರು ಅನ್ನುವುದನ್ನು ಕಟ್ಟಿಕೊಟ್ಟ ರೀತಿ ನಿಜಕ್ಕೂ ಅದ್ಭುತ. ಒಟ್ಟಾರೆ ಹೇಳುವುದಾದರೆ ಅಂತ ಸಂದಿಗ್ಧ ಪರಿಸ್ಥಿತಿಯಲ್ಲೂ ಸಂತಸವ ತಂದುಕೊಂಡರು.

ಇದು ನಾನು ಓದಿದ ಅತ್ಯುತ್ತಮ ಪುಸ್ತಗಳ ಪಟ್ಟಿಗೆ ನಿಸ್ಸಂಶಯವಾಗಿ ಸೇರುತ್ತದೆ. ಬರೀ ಓದುವ ಹವ್ಯಾಸವಿದ್ದವರಿಗೆ ಮಾತ್ರವಲ್ಲ, ಉಳಿದವರಿಗೂ ಒತ್ತಾಯ ಮಾಡಿಯಾದರೂ ಓದಿಸಬೇಕಾದ ಇಲ್ಲವಾದರೆ ನೀವು ಓದಿ ಕೇಳಿಸಬೇಕಾದ ಪುಸ್ತಕ. ಇದು ನೂರಾರು ಕನ್ನಡಿಗರಲ್ಲಿ ಜೀವನೋತ್ಸಾಹ ತುಂಬಿದೆ. ದಯವಿಟ್ಟು ಓದಿ ಒಮ್ಮೆ.

ನಕ್ಷತ್ರಗಳ ಸುಟ್ಟ ನಾಡಿನಲ್ಲಿ:

ಭಾರತದ ಹೊರಗೆ ನಾನು ಮೊದಲು ಭೇಟಿಕೊಟ್ಟ ದೇಶ ಪೋಲ್ಯಾಂಡ್. ಯಾವುದೇ ಊರಿಗೆ ಹೋಗಬೇಕಾದರೂ ಅದರ ಇತಿಹಾಸ, ಭೂಗೋಳ, ರಾಜಕೀಯ ಇತ್ಯಾದಿಗಳ ಕುರಿತಾದ ಸಂಗತಿಗಳ ಕೆದಕುವುದು ನನ್ನ ಅಭ್ಯಾಸ. ನೇಮಿಚಂದ್ರ ಅವರ ‘ಯಾದ್ ವಶೇಂ’ ಕೃತಿಯ ಮೂಲಕ, ಎರಡನೇ ಮಹಾಯುದ್ಧದ ಕುರಿತ ಕೃತಿಗಳ ಓದುವಾಗ, ಕೋಪರ್ನಿಕಸ್, ಮೇರಿ ಕ್ಯೂರಿಯರ ಕುರಿತ ವಿಚಾರಗಳ ಓದುವಾಗ ಪೋಲ್ಯಾಂಡ್ ಬಗ್ಗೆ ಚೂರುಪಾರು ತಿಳಿದುಕೊಂಡಿದ್ದೆ. ಇದು ಇತಿಹಾಸವಾಯಿತು. ಇನ್ನು ವರ್ತಮಾನಕ್ಕೆ ಬಂದರೆ ನನಗೆ ಪೋಲ್ಯಾಂಡ್ ಅನ್ನುವುದು ಶ್ರೀಮಂತರ ಓಣಿಯಲ್ಲಿರುವ ಮಧ್ಯಮ ವರ್ಗದ ಮನೆಯಂತೆ ಅನ್ನಿಸುತ್ತದೆ. ಯುರೋಪಿನ ಶ್ರೀಮಂತ ದೇಶಗಳನ್ನು ನೋಡಿ ಅಲ್ಲಿಗೆ ಹೋಗಬೇಕು, ಅವರಂತೆ ಆಗಬೇಕು, ಇಂಗ್ಲಿಷ್ ಮತ್ತು ಜರ್ಮನ್ ಕಲಿಯಬೇಕು ಎಂಬ ಆಸೆ ಹೊತ್ತ ನೂರಾರು ಕಂಗಳನ್ನು ಅಲ್ಲಿ ಕಂಡಿದ್ದೆ.

ಹೇಗೇ ಇದ್ದರೂ ಪ್ರವಾಸ ಕಥನಗಳೆಂದರೆ ನನಗೆ ಇಷ್ಟ. ಬರೀ ‘ಉಂಡೆ ತಿಂದೆ…’  ಅನ್ನುವ ಪ್ರವಾಸ ಕಥನಗಳನ್ನು ಕೂಡ ಬೈದುಕೊಂಡಾರೂ ಓದುವಾಗ ಸಮರ್ಥ ಬರಹಗಾರರ ಪ್ರವಾಸಕಥನಗಳ ಕುರಿತು ಕೇಳೋದೇ ಬೇಡ. ಬಹಳ ಇಷ್ಟಪಟ್ಟು ಓದುತ್ತೇನೆ. ಅದರಲ್ಲಿ ಹೃದಯಕ್ಕೆ ಬಹಳ ಹತ್ತಿರವೆನಿಸುವ ಪೋಲ್ಯಾಂಡ್ ಬಗ್ಗೆ ಬರೆದುದನ್ನು ಓದದೇ ಬಿಡಲು ಸಾಧ್ಯವೇ ಇಲ್ಲ. ಅಂಜಲಿ ರಾಮಣ್ಣ ಅವರ ಮತ್ತು ಭಾರತಿ ಬಿ.ವಿ. ಅವರ ಬರಹಗಳು ಮೊದಲೇ ಇಷ್ಟ. ಅವರಿಬ್ಬರೂ ಪೋಲ್ಯಾಂಡಿಗೆ ಹೋಗಿ ಅಲ್ಲಿನ ಬಗ್ಗೆ ಬರೆದಿದ್ದು ಇನ್ನೂ ಇಷ್ಟ. ಬಹಳ ಕುತೂಹಲದಿಂದ ಓದಿದ್ದೇನೆ.

ಅದಕ್ಕೇ ಭಾರತಿಯಕ್ಕನ ಪೋಲ್ಯಾಂಡ್ ಕಥಾನಕವನ್ನು ಅವರು ಅಂತರ್ಜಾಲದಲ್ಲಿ ಪ್ರಕಟಿಸಿದಾಗಲೇ ಅರ್ಧಕ್ಕರ್ಧ ಓದಿ‌ ಮುಗಿಸಿದ್ದೆ. ದೀಪ್ತಿ ಮತ್ತು ಮಗ ಎರಡು ದಿನಗಳ ಮಟ್ಟಿಗೆ ತವರಿಗೆ ಹೋದಕಾರಣ ಒಂದೇ ದಿನದಲ್ಲಿ ಓದಿ ಮುಗಿಸುವಂತಾಯಿತು.

ನಾನು ಬಹಳ ಹತ್ತಿರದಿಂದ ನೋಡಿದ, ಬಹಳ ಓದಿದ ಮತ್ತು ಅಂತರ್ಜಾಲದಲ್ಲಿ ಓದಿದ ಜಾಗಗಳಿಗೆ ಇವರು ಹೋಗಿಬಂದ ಕಾರಣ ನಾನೇ ಅಲ್ಲಿಗೆ ಇನ್ನೊಮ್ಮೆ ಹೋಗಿ ಬಂದಂತಾಯಿತು. ಲೇಖಕಿ ಇಲ್ಲಿ ಬರೀ ಪ್ರವಾಸಿ ತಾಣಗಳ ಬಗ್ಗೆಯಾಗಲೀ ಅಲ್ಲಾದ ಅನುಭವಗಳ ಬಗ್ಗೆಯಾಗಲೀ ಬರೆಯುವುದಿಲ್ಲ. ಜೊತೆಗೆ ಹಿಟ್ಲರಿನ ಕ್ರೌರ್ಯದ ಬಗ್ಗೆ, ಹಿಂದೆ ದೇಶದ ಜನ ಪಟ್ಟ ಪಾಡಿನ ಬಗ್ಗೆ, ಯಹೂದಿ ಸಂತ್ರಸ್ತರ ದಾರುಣ ಕತೆಗಳ ಬಗ್ಗೆ ಮತ್ತು ಪೋಲ್ಯಾಂಡ್ ದೇಶದ ಇತಿಹಾಸದ ಬಗ್ಗೆಯೂ ಬೆಳಕು ಚೆಲ್ಲುತ್ತಾರೆ.

ನಾನು ಅಲ್ಲಿ ಭೇಟಿ ಕೊಟ್ಟಿದ್ದು ಬರೀ ಅಲ್ಲಿನ ರಾಜಧಾನಿಯಾದ ವಾರ್ಸಾ (ವಾರ್ಸಾವಾ, ಅಲ್ಲಿನ ಭಾಷೆಯಲ್ಲಿ) ನಗರಕ್ಕೆ. ಆದರೆ ಭಾರತಿ ಮೇಡಂ ವಾರ್ಸಾದೊಟ್ಟಿಗೆ ವ್ರೋಟ್ಝ್ವಾ, ಕ್ರಕಾವ್ ಮುಂತಾದ ನಗರಗಳಿಗೂ ಹೋಗಿಬಂದಿದ್ದಾರೆ. ಬರೀ ಸುತ್ತಾಟದ ಮನೋರಂಜನೆಗಳಿಗೆ ಸೀಮಿತವಾಗಬಹುದಾಗಿದ್ದ ಈ ಪ್ರವಾಸವನ್ನು ಹಾಗಾಗಲು ಅವಕಾಶ ಮಾಡಿಕೊಡದೇ ಒಂದು ಉತ್ತಮ ಕೃತಿಯನ್ನು ಕೊಡುವುದರ ಮೂಲಕ ಸಾರ್ಥಕಗೊಳಿಸಿದ್ದಾರೆ.

ಭಾರತಿಯಕ್ಕನ ಇನ್ನುಳಿದ ಕೃತಿಗಳನ್ನು ಓದಬೇಕಿದೆ.  ಈ ಓದು  ನನ್ನ ಯೋಚನೆಯನ್ನು ವಿಸ್ತರಿಸುತ್ತದೆ ಎಂಬ ಆತ್ಮವಿಶ‍್ವಾಸ ಮೂಡಿಸಿದೆ. ಇನ್ನಷ್ಟು ಓದುವುದಕ್ಕೆ ಇದಕ್ಕೆ ಬೇರೆ ಪ್ರೇರಣೆ ಏನು ಬೇಕು…