ನನ್ನ ಇತಿ ಮಿತಿಯಲ್ಲಿ ಅವುಗಳಲ್ಲಿ ಬೇಕಾದವನ್ನು ಆಯ್ದುಕೊಂಡೆ. ಬರೆವ ಬಣ್ಣಗಳು ಆಗಲೇ ಹೈಸ್ಕೂಲು, ಪಿಯು ಕಾಲೇಜಿನಲ್ಲೆ ಅಂಟಿಕೊಂಡಿದ್ದವು ಎಂದು ಹೇಳಿದ್ದೆ. ಲೈಬ್ರರಿಯ ತರಾವರಿ ಗ್ರಂಥಗಳ ಬೆಟ್ಟ ಕಂಡ ಕೂಡಲೆ ಬರೆಯುವುದನ್ನೆ ಮರೆತುಬಿಟ್ಟಿದ್ದೆ. ಸುತ್ತುವುದರಲ್ಲಿ ಏನೊ ಸುಖವಿತ್ತು. ಒಬ್ಬನೇ ಅಲೆದಾಡುತ್ತಿದ್ದೆ. ಹಾಗೆ ಹಾದಿ ಬೀದಿಯಲ್ಲಿ ಅಲೆವಾಗ ಎಷ್ಟೊಂದು ಚೆಲುವೆಯರ ಕಂಡೆ; ನಗರದ ಮೂಲೆ ಮೂಲೆಯ ನರಕವ ಕಂಡೆ… ಮಜಾ ಮಾಡಲು ಕಾಸೇ ಇರಲಿಲ್ಲ. ಗೆಳೆಯರ ಕಾಯುತ್ತಿದ್ದೆ. ನಗರ ಸುತ್ತಲು ಕರೆದೊಯ್ಯುತ್ತಿದ್ದರು. ಅವರ ಕಾಸಿನ ಬೈಟೂ ಚೋಟಾ ಚಹಾನೇ ಸ್ವರ್ಗ ಸುಖ ಎನಿಸಿದ್ದೂ ಇದೆ.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಹತ್ತೊಂಭತ್ತನೆಯ ಕಂತು.

ಅಪ್ಪನ ಮುಂದೆ ಎಷ್ಟು ಸಲ ನನ್ನ ತಾಯಿ ಮಂಡಿಯೂರಿ ಕೂತು ತಲೆ ತಗ್ಗಿಸಿ; ‘ವಡಿತಿಯಾ? ಅದೆಷ್ಟು ವಡಿತಿಯೊ ವಡೀ. ತುಳಿತಿಯಾ ಪಾತಾಳುಕ್ಕೇ ತುಳೀ. ಜೀವ ತಗಿತಿಯಾ ತಗೀ… ಬಲಿ ತಕಬೇಕೇ; ನನ್ನ ಜೊತೆ ನನ್ಮಗುನ್ನೂ ಬಲಿ ತಕೊ… ನೀ ಸುಖುವಾಗಿರ್ಬೇಕೇ… ಬೂಮಿ ಮ್ಯಾಲಿದ್ದು ಮೆರಿಬೇಕೊ ಅದೆಷ್ಟು ಮೆರಿತಿಯೊ ಮೆರೀ… ಬಾ ಕಡ್ದಾಕು, ಇಲ್ಲೇ ಇವತ್ತೇ ನಂಜೀವ ವಂಟೋಗ್ಲೀ’ ಎಂದು ಹಣೆಯ ಹೊಸಿಲ ಮೇಲಿಟ್ಟು ಒಂದು ಕೈಯಲ್ಲಿ ನನ್ನನ್ನೂ ಹಿಡಿದುಕೊಂಡು ಆಕ್ರಂದಿಸುವಾಗ; ಅಪ್ಪ ಆಯುಧ ಬಿಸಾಡಿ ಎಂಡದ ಪೆಂಟೆಯ ಅಮಲಿನ ಹೆಂಗಸರ ಸಹವಾಸಕ್ಕೆ ಹೊರಟು ಹೋಗುತ್ತಿದ್ದ. ನನ್ನ ಜೀವ ನಡುಗುತ್ತಿತ್ತು. ಅಪ್ಪ ಆ ಕಾಳಗದ ಹುಂಜಗಳ ಕಡಿದಂತೆಯೇ ಮಚ್ಚ ಬೀಸಿಬಿಟ್ಟರೆ… ಆಯ್ತು; ನನ್ನ ತಾಯಿಯ ಜೊತೆಯೇ ಹೋಗುವೆ ಎಂದುಕೊಳ್ಳುತ್ತಿದ್ದೆ.

ಆ ಗಾಂಧಿವಾದಿಗಳು ಅಹಿಂಸೆ, ಅಸಹಕಾರ, ಮೌನ, ಸತ್ಯಾಗ್ರಹ, ಉಪವಾಸಗಳ ಬಗ್ಗೆ ಕೊಂಡಾಡುವಾಗ ಅವರ ಕೊಂಡಾಟ ನನಗೆ ಹಿತ ಎನಿಸುತ್ತಿರಲಿಲ್ಲ. ಅವೆಲ್ಲವೂ ನನ್ನ ತಾಯಿ ಬದುಕಿನಲ್ಲಿ ಹಿಡುಕಿರಿದಿದ್ದವು. ಮುತ್ತಜ್ಜಿಯರೆಲ್ಲ ಅದರಲ್ಲೆ ಮುಳುಗಿ ಹೋಗಿದ್ದರು. ಅಪ್ಪನ ಹಿಂಸೆಯ ಮುಂದೆ ತಾಯಿ ಮೊದಲು ಬಳಸುತ್ತಿದ್ದ ಹೋರಾಟದ ಹೆಜ್ಜೆ ಎಂದರೆ ‘ಮೌನ’. ಎಲ್ಲರ ಜೊತೆ ಮಾತು ಬಿಟ್ಟು ಪ್ರತಿಭಟಿಸುತ್ತಿದ್ದಳು. ಸಹಕರಿಸದೆ ಅಸಹಕಾರ ಒಡ್ಡುತ್ತಿದ್ದಳು. ಊಟ ಬಿಟ್ಟು ಮುನಿಸು ಉಪವಾಸ ಕೂರುತ್ತಿದ್ದಳು. ತಾನು ಅಂತವಳಲ್ಲ ಎಂದು ತನ್ನ ಸತ್ಯಶೀಲಕ್ಕಾಗಿ ಆಗ್ರಹಿಸುತ್ತಿದ್ದಳು. ಕೊನೆಗೆ ಕೊಂದರೆ ಕೊಂದು ಬಿಡಲಿ ಎಂದು ಸಾವಿಗೆ ಆಹ್ವಾನ ನೀಡುತ್ತಿದ್ದಳು. ನನ್ನತಾಯಿ ಒಬ್ಬಳಲ್ಲೇ ಇದ್ದ ಮೌಲ್ಯಗಳಲ್ಲ ಇವು. ಲೋಕದ ಎಲ್ಲ ಮಹಿಳೆಯರ ಹೋರಾಟದ ಹೆಜ್ಜೆಗಳು ಇವಾಗಿರಬಹುದು. ಗಾಂಧೀಜಿಯ ಹೋರಾಟದಲ್ಲಿ ಇದೇ ಸಂಗತಿಗಳು ಮಹಾ ಪ್ರತಿರೋಧವಾಗಿದ್ದವು. ಅಂತವನನ್ನು ನಮ್ಮವರೇ ಯಾಕೆ ಕೊಂದರು ಎಂಬುದು ಆಗ ನನಗೆ ತಿಳಿಯದ ವಿಚಾರವಾಗಿತ್ತು. ನನ್ನ ತಾಯಿಯ ನೆರಳನ್ನು ದಾಟಿ ಹೋದಂತಿತ್ತು ಗಾಂಧಿವಾದ. ಅದಕ್ಕಾಗಿಯೊ ಏನೊ ಗಾಂಧಿ ನನ್ನ ಮನದಾಳದಲ್ಲಿ ಮಿಡಿಯುತ್ತಲೇ ಇದ್ದರಾದರೂ ಬಾಹ್ಯ ಒತ್ತಡಗಳಿಂದ ಗಾಂಧಿಯ ಚಹರೆಯನ್ನು ನಿರಾಕರಿಸುತ್ತಿದ್ದೆ.

ವಿಸ್ತಾರವಾದ ಮಹಾರಾಜ ಕಾಲೇಜಿನ ಹಾಸ್ಟೆಲಲ್ಲಿ ಎಲ್ಲ ತರದವರೂ ಸಿಗುತ್ತಿದ್ದರು. ಮೆಲ್ಲಗೆ ವಿಚಾರವಾದ ಬಾಗಿಲು ಬಡಿಯುತ್ತಿತ್ತು. ಹೆಚ್ಚಾಗಿ ತರಗತಿಗಳಲ್ಲಿ ಅಂತಹ ಮಾತುಗಳು ಮೊಳಗುತ್ತಿದ್ದವು. ರಾಮ್‌ದಾಸ್ ಅವರಂತೂ ನಿಗದಿಯಾಗಿದ್ದ ಪಠ್ಯದ ನೆಪದಲ್ಲಿ ಪ್ರಪಂಚವನ್ನೆಲ್ಲ ಸುತ್ತಿಸಿಬಿಡುತ್ತಿದ್ದರು. ಅವರ ವಾಗ್ಜರಿಯೇ ಅಂಥಾದ್ದು. ಒಂದು ಗಂಟೆಯ ಪಾಠ ಅವರಿಗೆ ಸಾಕಾಗುತ್ತಿರಲಿಲ್ಲ. ಗಂಟೆಗಟ್ಟಲೆ ಅವರ ವಿಚಾರಗಳನ್ನು ದಾಹದಲಿ ಗಟಗಟನೆ ಕುಡಿದುಬಿಡಬೇಕು ಎನಿಸುತ್ತಿತ್ತು. ಅವರು ನನಗೆ ಒಂದು ಮಾದರಿಯಾಗಿದ್ದರು. ವಿಶಾಲವಾದ ಬಯಲಿನಂತೆ ಕಾಣುತ್ತಿದ್ದರು. ಅವತ್ತು ಸತ್ಯದ ಬಗ್ಗೆ ತರಗತಿಯಲ್ಲಿ ಒಂದು ಮಾತನ್ನು ಹೇಳಿದ್ದು ಈಗಲೂ ನನ್ನ ಒಳಗಿವಿಯಲ್ಲಿ ರಿಂಗಣಿಸುತ್ತಲೇ ಇದೆ. ‘ವಾಕ್ ಅಲೋನ್ ಎಂದು ಟಾಲ್‌ಸ್ಟಾಯ್ ಹೇಳ್ತಾರೆ ಒಂದು ಕಡೆ. ಹಾಗೆಂದರೆ ಏನೆಂದು ಗೊತ್ತೇ ನಿಮಗೇ… ಯಾರಾದ್ರೂ ಹೇಳ್ತೀರಾ… ಅಂದ್ರೇ ಏಕಾಂಗಿಯಾಗಿ ಸಾಗು ಎಂದರ್ಥ. ಯಾಕೆ ಸಾಗಬೇಕೂ… ಯಾಕೆ ಅಂದ್ರೇ ಸತ್ಯ ಯಾವತ್ತೂ ಒಂಟಿ. ಅದು ಸುಳ್ಳುಗಳ ಗುಂಪಲ್ಲ. ಸುಳ್ಳುಗಳು ಸುಳ್ಳನ್ನಷ್ಟೇ ಸೃಷ್ಠಿ ಮಾಡ್ತಾ ಇರ್ತವೆ. ನೀವು ಜೀವನದಲ್ಲಿ ಇದನ್ನು ಪ್ರಯೋಗ ಮಾಡಿ ನೋಡಿ. ಒಂದು ಸುಳ್ಳನ್ನು ಹೇಳಿ. ನಂಬೋದಿಲ್ಲ ತಕ್ಷಣಕ್ಕೆ ಯಾರೂ. ಆದರೆ ಒಂದು ಸುಳ್ಳಿಗೆ ಇನ್ನೊಂದು ಸುಳ್ಳನ್ನು ಬೆಳೆಸುತ್ತಾ ಹೋಗಿ. ಸುಳ್ಳನ್ನು ಒಮ್ಮೆ ಹಿಡಿದರೆ; ಆ ಮೇಲೆ ಅದು ನಿಮ್ಮನ್ನು ಜೀವಮಾನ ಪೂರ್ತಿ ಆವರಿಸಿಕೊಳ್ಳುತ್ತದೆ. ಅದರಿಂದ ನಿಮಗೆ ಬಿಡುಗಡೆಯೇ ಇಲ್ಲ. ಸುಳ್ಳಿಗೆ ಸುಳ್ಳು ಪ್ರತಿ ಸುಳ್ಳಿನ ಹತ್ತಾರು ಸುಳ್ಳುಗಳು ಬೆಳೆಯುತ್ತ ಅವೇ ನಿಜ ಎಂದು ನಂಬಿಸಿಬಿಡುತ್ತವೆ. ನಮ್ಮ ಧರ್ಮ ಜಾತಿ ತಾರತಮ್ಯ… ವ್ಯವಸ್ಥೆಯ ಕಪಿಮುಷ್ಠಿಗಳು ಈ ಸುಳ್ಳಿನ ಬುನಾದಿಯ ಮೇಲೆ ಕಟ್ಟಲ್ಪಟ್ಟಂತವು. ಇವನ್ನು ಒಂದು ದುರ್ಬಲ ಮೋಟುಗೋಡೆಯನ್ನು ಉರುಳಿಸಿದಷ್ಟು ಸುಲಭ ಅಲ್ಲ. ಒಬ್ಬ ಅಮಾಯಕ ಅಸ್ಪೃಶ್ಯನ ಕೊಂದಷ್ಟು ಸಲೀಸಲ್ಲ. ಅದಕ್ಕಾಗಿಯೇ ಜಗತ್ತಿನ ಮಹಾ ಲೇಖಕ ಟಾಲ್‌ಸ್ಟಾಯ್ ಹೇಳಿದ್ದು; ಈ ಎಲ್ಲ ಸುಳ್ಳುಗಳ ಆಚೆ ಒಂದೇ ಒಂದು ಸತ್ಯವಿದೆ. ಅದನ್ನು ಪಡೆಯಬೇಕಾದರೆ ಸುಳ್ಳುಗಳ ನಿರಾಕರಿಸಿ ಒಬ್ಬನೇ ಹೊರಡಬೇಕು. ಇಡೀ ಜಗತ್ತಿನ ಎಲ್ಲ ಸುಳ್ಳಿನ ಶಕ್ತಿಗಳು ಒಂದಾಗಿ; ಎದುರಾಗಿ ನೀನು ಏಕಾಂಗಿಯಾಗಿ ನಿಂತರೂ ಅಂಜಬಾರದು. ಅದು ಸತ್ಯದ ಹಾದಿಯ ಧೀರ ನಡೆ’.

ಅದೊಂದು ಬಗೆಯ ವೈಚಾರಿಕ ಪ್ರವಚನವಾಗಿತ್ತು. ತರಾವರಿ ತರಗತಿಗಳು. ಆ ನಡುವೆ ಎಸ್. ನಾರಾಯಣ್ ಎಂಬುವವರು ಇಂಗ್ಲೀಷ್ ಸಾಹಿತ್ಯದ ಹಿರಿಯ ಪ್ರಾಧ್ಯಾಪಕರು. ಗಾಂಧಿವಾದಿಯಂತೆ ಒಂದು ತುಂಡು ಅಂಗಿ ಪಂಚೆ ಉಟ್ಟು ಬರುತ್ತಿದ್ದರು. ಪಶ್ಚಿಮದ ಸಾಹಿತ್ಯವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಇಂಗ್ಲೀಷ್ ಸಾಹಿತ್ಯವನ್ನು ರಸವತ್ತಾಗಿ ಕನ್ನಡದಲ್ಲಿ ಪಾಠ ಮಾಡುತ್ತಿದ್ದರು. ನಂಜುಂಡಯ್ಯ ಎಂಬ ಒಬ್ಬ ಪ್ರಚ್ಛನ್ನ ಕನ್ನಡ ಪಂಡಿತರಿದ್ದರು. ಹಳೆಗನ್ನಡ ಕಾವ್ಯಗಳನ್ನು ಬಿಡಿಸಿ ರಾಗಬದ್ಧವಾಗಿ ಎತ್ತರದ ಧನಿಯಲ್ಲಿ ಮಾಡುತ್ತಿದ್ದ ಪಾಠ ಒಂದು ಭಾಷೆಯ ಒಳಗೆ ಎಷ್ಟೊಂದು ಅರ್ಥ ಪದರುಗಳಿವೆ ಎಂಬುದನ್ನು ಕಲಿಸುತ್ತಿತ್ತು. ಬಿ.ನಂ.ಚಂದ್ರಯ್ಯ ಎಂಬುವವರು ಗ್ರೀಕ್‌ರೋಮನ್ ಭಾಷೆಗಳ ಅಸಲಿಯಾಗಿ ಬಲ್ಲವರಾಗಿದ್ದು ಪರ್ಶಿಯನ್, ಅರೇಬಿಕ್, ಸಂಸ್ಕೃತ, ಪಾಲಿ, ಪ್ರಾಕೃತ ಪದ ಮೂಲಗಳ ಶೋಧಿಸಿ ಒಂದೇ ಪದ ಹೇಗೆ ಜಗತ್ತಿನಾದ್ಯಂತ ಚಲಾವಣೆಗೆ ಬಂದಿದೆ ನೋಡಿ ಎಂದು ಸಂವಾದಿ ಪದಗಳನ್ನೆಲ್ಲ ಬೋರ್ಡಿನ ತುಂಬ ಬರೆದು ವಿಸ್ಮಯ ಮೂಡಿಸುತ್ತಿದ್ದರು. ಭಾಷೆ, ನಾಗರೀಕತೆ, ಸಂಸ್ಕೃತಿಗಳ ಮಳೆಯಲ್ಲಿ ತೋಯ್ದು ಬೆರಗಾಗಿ ಒಬ್ಬನೇ ಮನುಷ್ಯನಿಗೆ ಇದೆಲ್ಲ ಹೇಗೆ ಸಾಧ್ಯವಾಯಿತೆಂದು ಒಬ್ಬಂಟಿಯಾಗಿಬಿಡುತ್ತಿದ್ದೆ. ಹಾಗೆ ಏಕಾಂಗಿ ಆಗುವುದರಲ್ಲಿ ಬಹಳ ಆನಂದ ಕಂಡಿರುವೆ. ಆ ಸ್ಥಿತಿಯಲ್ಲಿ ಅರಿವಿಲ್ಲದೆ ಏನೇನೊ ಪಡೆದಿರುವೆ. ನನ್ನೊಳಗೆ ಹಲವು ಧಾರೆಗಳು ಒಟ್ಟಿಗೇ ನುಗ್ಗಿ ಬಂದಿದ್ದವು.

ನನ್ನ ಇತಿ ಮಿತಿಯಲ್ಲಿ ಅವುಗಳಲ್ಲಿ ಬೇಕಾದವನ್ನು ಆಯ್ದುಕೊಂಡೆ. ಬರೆವ ಬಣ್ಣಗಳು ಆಗಲೇ ಹೈಸ್ಕೂಲು, ಪಿಯು ಕಾಲೇಜಿನಲ್ಲೆ ಅಂಟಿಕೊಂಡಿದ್ದವು ಎಂದು ಹೇಳಿದ್ದೆ. ಲೈಬ್ರರಿಯ ತರಾವರಿ ಗ್ರಂಥಗಳ ಬೆಟ್ಟ ಕಂಡ ಕೂಡಲೆ ಬರೆಯುವುದನ್ನೆ ಮರೆತುಬಿಟ್ಟಿದ್ದೆ. ಸುತ್ತುವುದರಲ್ಲಿ ಏನೊ ಸುಖವಿತ್ತು. ಒಬ್ಬನೇ ಅಲೆದಾಡುತ್ತಿದ್ದೆ. ಹಾಗೆ ಹಾದಿ ಬೀದಿಯಲ್ಲಿ ಅಲೆವಾಗ ಎಷ್ಟೊಂದು ಚೆಲುವೆಯರ ಕಂಡೆ; ನಗರದ ಮೂಲೆ ಮೂಲೆಯ ನರಕವ ಕಂಡೆ… ಮಜಾ ಮಾಡಲು ಕಾಸೇ ಇರಲಿಲ್ಲ. ಗೆಳೆಯರ ಕಾಯುತ್ತಿದ್ದೆ. ನಗರ ಸುತ್ತಲು ಕರೆದೊಯ್ಯುತ್ತಿದ್ದರು. ಅವರ ಕಾಸಿನ ಬೈಟೂ ಚೋಟಾ ಚಹಾನೇ ಸ್ವರ್ಗ ಸುಖ ಎನಿಸಿದ್ದೂ ಇದೆ.

ರಾಮಸ್ವಾಮಿ ಸರ್ಕಲ್ಲಿನ ಕೆಳಗೆ ಜೋಡಿ ರಸ್ತೆಯಲ್ಲಿ ಕೃಷ್ಣಾ ಬೇಕರಿ ಇತ್ತು. ಅವತ್ತಿಗೆ ಅಲ್ಲಿ ಅದು ಪ್ರತಿಷ್ಠಿತವಾಗಿತ್ತು. ಬೈಟೂ ಪಫ್ಸ್ ಬೈಟೂ ಬಾದಾಮಿ ಹಾಲು ಅಪರೂಪಕ್ಕೆ ಸಿಗುತ್ತಿತ್ತು. ಊರಿಂದ ಮನಿ ಆರ್ಡರ್ ತೆಗೆದುಕೊಂಡವರು ಹಾಗೆ ಗೆಳೆಯರಿಗೆ ಕೊಡಿಸಬೇಕು ಎಂಬ ಸಂಪ್ರದಾಯವಿತ್ತು. ಜೇಪಿಗೆ ಹಣ ಬರುತ್ತಿತ್ತು. ಹಾಗೆ ಬೇವಿನಕಟ್ಟಿ ಮಂಜುನಾಥ ಎಂಬ ಜಟ್ಟಿಗನೂ ಇದ್ದ. ಇವರಿಬ್ಬರೂ ಬಹಳ ಸಲ ನನಗಾಗಿ ಖರ್ಚು ಮಾಡಿದ್ದಾರೆ. ನನಗೆ ಒಂದು ಪೈಸೆಯೂ ಹಳ್ಳಿಯಿಂದ ಬರುತ್ತಿರಲಿಲ್ಲ. ಊರು ಬಿಟ್ಟಿದ್ದ ನಾನು ಯಾರಿಗೂ ತಿಳಿಯದಂತೆ ಕಾಲೇಜು ಸೇರಿದ್ದೆ. ಎಲ್ಲೊ ಗತಿಗೆಟ್ಟು ಯಾವುದಾದರೂ ಹೋಟೆಲಲ್ಲಿ ಎಂಜಲೆತ್ತಿಕೊಂಡು ಇರ್ತಾನೆ ಎಂದು ನಂಬಿದ್ದರು. ಅವರಿಂದ ದೂರ ಮರೆಯಾಗಿರಬೇಕು ಎಂದು ನನ್ನನ್ನು ನಾನೆ ಬಚ್ಚಿಟ್ಟುಕೊಂಡಿದ್ದೆ.

ಮಧ್ಯಂತರ ರಜೆಗಳು ಬಂದಿದ್ದವು. ತಾತನ ನೋಡಬೇಕೆಂದು ಮನಸು ಮಿಸುಕಾಡಿತು. ಸಪ್ಪೆ ಮೋರೆಯಲ್ಲಿ ಬಟ್ಟೆ ತೊಳೆದು ಒಣ ಹಾಕಿ ಕೂತಿದ್ದೆ ಒಂದು ಟವಲ್ ಸುತ್ತಿಕೊಂಡು. ಹೆಚ್ಚುವರಿ ಬಟ್ಟೆಗಳಿರಲಿಲ್ಲ. ಮೂರು ಜೋಡಿ ಮಾತ್ರ ಇದ್ದವು. ಮಳವಳ್ಳಿಯ ಆ ಪೈಲ್ವಾನ ಬಂದ. ‘ಏನಾಯ್ತು’ ಎಂದ ‘ಊರಿಗೆ ಹೋಗಬೇಕು ಸಾರ್’ ಎಂದೆ. ಬಿ.ಎ. ಕೊನೆಯ ವರ್ಷದಲ್ಲಿದ್ದ ಹಿರಿಯ ಆತ. ಅವನ ಮುಂದೆ ಗಳಗಳನೆ ಅತ್ತು ಬಿಟ್ಟಿದ್ದೆ ಸಂತೈಸಿದ್ದ. ಬಸ್ ಚಾರ್ಜಿಗೆ ಕಾಸು ಕೊಟ್ಟಿದ್ದ. ಅಳಬಾರದು… ಎಷ್ಟೇ ಕಷ್ಟ ಬಂದರೂ ಜಯಿಸಬೇಕೂ… ಅಂಬೇಡ್ಕರ್‌ಗಿಂತ ಕಷ್ಟ ಪಟ್ಟಿದೀಯಾ ನೀನೂsss; ಚೆನ್ನಾಗಿ ಓದು ಎಂದು ಧೈರ್ಯ ತುಂಬಿದ್ದ. ಚನ್ನಪಟ್ಟಣದ ಬಸ್ಸಿಗೆ ಹತ್ತಿದ್ದೆ. ಹಳ್ಳಿಯ ಬಸ್ಸೇರಿ ಇಳಿದು ಊರು ಕೇರಿಯಲ್ಲಿ ನಡೆಯುತ್ತಿದ್ದಂತೆಯೇ ವಿಚಿತ್ರ ಗಾಭರಿ ಆವರಿಸಿತು. ಆ ಹೊತ್ತಿಗೆ ನನ್ನ ಹಳ್ಳಿಯಿಂದ ಪೇಟೆಯ ಕಾಲೇಜು, ಹೈಸ್ಕೂಲಿಗೆ ಹೋಗುತ್ತಿದ್ದ ಹುಡುಗಿಯರು ಅದೇ ಬಸ್ಸಿನಲ್ಲಿ ಜೊತೆಗೇ ಇಳಿದು ಹಿಂಬಾಲಿಸಿ ನಗುತ್ತ ಗಮನ ಸೆಳೆದಿದ್ದರು. ಜೀನ್ಸ್ ಬೆಲ್‌ಬಾಟಮ್ ಪ್ಯಾಂಟು ಹಾಕಿದ್ದೆ. ಮೇಲೆ ಒಂದು ನೀಲಿ ಟೀಷರ್ಟು ಧರಿಸಿದ್ದೆ. ಅವನ್ನು ಕಡಿಮೆ ಬೆಲೆಗೆ ದೊಡ್ಡ ಗಡಿಯಾರದ ಎದುರು ರಸ್ತೆಯ ಫುಟ್‌ಪಾತಲ್ಲಿ ಖರೀದಿಸಿದ್ದೆ. ಗೆಳೆಯರು ಸಾಲಕೊಟ್ಟು ವಾಪಸ್ಸು ಕೇಳುತಿರಲಿಲ್ಲ. ಆ ಹುಡುಗಿಯರನ್ನು ಸ್ಪಷ್ಟವಾಗಿ ಗುರುತಿಸಲು ಆಗಲಿಲ್ಲ. ಏಳು ವರ್ಷ ಆಗಿತ್ತು ಊರ ತೊರೆದು. ಬಸ್ಸಲ್ಲಿ ಕಾಟ ಕೊಟ್ಟಿದ್ದು ಇದೇ ಹುಡುಗಿಯರು ಎನಿಸಿತು. ಅವರು ನನ್ನ ಗುರುತು ಹಿಡಿದಿದ್ದರು. ಎದೆಗೆ ಪುಸ್ತಕಗಳ ಮರೆಮಾಡಿ ಹಿಡಿದುಕೊಂಡು ಮೆಲ್ಲಗೆ ಗಿಂಡಿದ್ದರು. ಒಬ್ಬಳು ಗುಂಡು ಪಿನ್ನಿಂದ ಶಾಕ್ ಕೊಟ್ಟಿದ್ದಳು. ತಡವಾಗಿ ಹೊಳೆಯಿತು; ಒಹ್! ಇವರು ಇಂತಿಂತಹ ಮನೆಯವರೆಂದು. ಆ ಐದು ವರ್ಷಗಳ ಕಣ್ಮರೆಯಲ್ಲಿ ನಾನು ಸಾಕಷ್ಟು ಪ್ರಾಯಕ್ಕೆ ಬಂದು ಬಿಟ್ಟಿದ್ದೆ. ತಮ್ಮ ಮನೆಗಳ ತಿರುವು ಮರೆಗಳಲ್ಲಿ ಅವರು ಮರೆಯಾಗುತ್ತ; ‘ನಾಳೆಗೆ ಬರ್ತಿಯಾ; ಸಿಕ್ತಿಯಾ… ನೋಡೆ ಇಲ್ಲೀ ಈ ಕಡೆ ನೋಡೊ’ ಎಂದು ಕರೆದದ್ದು ನನಗಾಗಿಯೇ! ನೋಡಿದ್ದೆ. ಕಿಸಕ್ಕನೆ ನಕ್ಕು ಕೈ ಬೀಸಿ ಮಾಯವಾಗಿದ್ದರು. ಯಾವುದೊ ನೆರಳು ಅಡ್ಡ ಬಂದಂತಾಯಿತು. ನನ್ನನ್ನು ಫೂಲ್ ಮಾಡಿದರೇನೊ ಎನಿಸಿತು. ಎಷ್ಟೇ ಆಗಲಿ ಊರುಕೇರಿ ಕೆಟ್ಟದ್ದು. ‘ಅಯ್ಯೋ ಆ ಊರ ಸವಾಸ ಸರಿ ಇಲ್ಲಾ; ಯಾಮಾರಿದ್ರೆ ಯೆಣ್ಣೈಕಳು ಬೀಜಾನೇ ಉದುರಿಸ್‌ಬಿಡ್ತರೆ’ ಎಂಬ ಅಪಕ್ಯಾತಿ ಇತ್ತು. ಅದೆಲ್ಲ ನನ್ನ ಕಣ್ಣ ಮುಂದೆಯೇ ಒಂದು ಕಾಲಕ್ಕೆ ಸಾದ ಸೀದ ನಡೆದಿತ್ತಲ್ಲವೇ ಎನಿಸಿ ಎಚ್ಚರಗೊಂಡೆ. ಅಂತಹ ಮೈಸೂರಿನ ಸುಂದರ ಕನ್ನೆಯರಿರುವಾಗ ಈ ಹಳ್ಳಿಯವರ ವ್ಯವಹಾರ ನನಗೇಕೆ ಎನಿಸಿ ಮನೆ ಮುಂದೆ ನಿಂತಿದ್ದೆ.

ಬೀದಿ ಬಿಕೋ ಎನ್ನುತ್ತಿತ್ತು. ನನ್ನ ಮನೆಯೇ ನನಗೆ ಭೀಕರವಾಗಿ ಕಂಡಿತ್ತು. ಬಾಗಿಲು ಮುಚ್ಚಿತ್ತು. ಪಡಸಾಲೆ ಮೇಲೆ ಕೂತೆ. ಯಾರನ್ನಾದರೂ ಕರೆಯಬೇಕು ಎನಿಸಲಿಲ್ಲ. ಆ ಲಲನಾ ಮಣಿಯರಲ್ಲಿ ಇಬ್ಬರು ಬಂದಿದ್ದರು. ಆಚೆ ಕೇರಿಯವರು; ಸಂಬಂಧಿಕರು. ಮರೆತಿದ್ದೆ. ಆಗ ಅವರು ತುಂಡು ಲಂಗ ಧರಿಸಿ ಸಿಂಬಳ ತೆಗೆದುಕೊಳ್ಳುತ್ತಿದ್ದರು. ‘ಅಣ್ಣಾ ನೀವು ಕೆಲ್ಸುಕೆ ಸೇರ್ಕಂದಿದೀರಾ… ಕಾಲೇಜ್ಗೆ ವೊಯ್ತಿದೀರಾ’ ಎಂದು ವಿಚಾರಿಸಿದರು. ‘ಕಾಲೇಜಲ್ಲಿ ಓದ್ತಾ ಇದ್ದೀನಿ. ಮೈಸೂರಲ್ಲಿದ್ದೀನಿ’ ಎಂದೆ. ನಂಬದಾದರು. ‘ಮತೇ ಅವ್ರೆಲ್ಲ ಅಂಗಂತರಲ್ಲಾ’… ‘ಅವ್ರು ಅಂದ್ರೆ ಯಾರೂ’… ಅದೇ ನಿಮ್ಮ ಚಿಕ್ಕಪ್ಪ ಅವರು ಇವರೂ…’ ‘ಹೌದಾ! ಏನಂತಿದ್ರು’ ‘ಬೆಂಗಳೂರೆಲಿ ಹೋಟೆಲ್ ಸಪ್ಲಯರ್ ಆಗಿ ಊರು ಬಿಟ್ಟವನೆ ಅಂತಾ ಅಂತಿದ್ರು… ಒಳ್ಳೆದಾಯ್ತು ಬಿಡಣ್ಣಾ ಕಾಲೇಜು ಸೇರಿದ್ದೀರಲ್ಲಾ.. ನೀವು ನಮ್ಗೆ ಮರ್ತೆ ಹೋಗಿದ್ರೀ’ ಎಂದಾಗ ಆ ಇಬ್ಬರು ಹುಡುಗಿಯರ ಮನದುಂಬಿತ್ತು. ಒಂದು ಕ್ಷಣ ಶಾಕ್ ಆಯಿತು. ಒಳ್ಳೆಯ ಹುಡುಗಿಯರು ಎನಿಸಿತು. ಏನದು ಸದ್ದು ಎಂದು ನನ್ನ ಅಜ್ಜಿ ಹೊರಗೆ ಬಂದಳು. ಮೂಲೆಯಲ್ಲಿ ಮಲಗಿದ್ದಳು ಎನಿಸಿತು. ವಿಚಿತ್ರವಾಗಿ ನೋಡಿ; ‘ಒಹ್ ನೀನ್ಲಾ…… ಯಾವಾಗ್ಬಂದೇ, ಎಲ್ಲೊ ವಂಟೊಗವ್ನೆ ಅಂತಿದ್ರೂ ಅದೆಂಗ್ ಬಂದೆ ತಿರ್ಗಾ’ ಎಂದು ಕೊಂಕು ನುಡಿದಳು. ಅದು ಅವಳ ಮೂಲ ಗುಣ ಎಂದು ನಿರ್ಲಕ್ಷಿಸಿ; ‘ಅಪ್ಪ ಎಲ್ಲಿಗೆ ಹೋಗವ್ನೆ’ ಎಂದೆ. ‘ಇಂತಾತಕೆ ವೊಯ್ತಿನ ಅಂತಾ ನನುಗೇಳ್ಬುಟ್ಟು ವೋದನೆ ಅವ್ನು… ಯಾವ್ ಕೆಲ್ಸುಕ್ಕೆ ಸೇರ್ಕಂದಿದ್ದಿಲಾ’ ಎಂದು ಸೊಟ್ಟ ಮುಸುಡಿಯಲ್ಲಿ ಕೇಳಿದಳು. ಆ ಹುಡುಗಿಯರೆ ಹೇಳಿದರು. ಕೆಟ್ಟ ಮುದುಕಿ ಇದು. ಮಾತಾಡಬಾರದು ಎಂದು ತಾತನಿಗಾಗಿ ಕಾದೆ. ಕಾಳ ಬಂದ. ಆತ ಪಕ್ಕದ ಮನೆಯ ಕಾಳಮ್ಮನ ಏಕಮಾತ್ರ ಪುತ್ರ. ಚನ್ನಪಟ್ಟಣದಲ್ಲಿ ಆಗಲೆ ಬೀಕಾಂಗೆ ಸೇರಿ ಪೂರೈಸದೆ ತಾಯಿಗೆ ಆಸರೆಯಾಗಿರುವೆ ಎಂದು ತನ್ನ ಗುಡಿಸಲು ಮನೆಯಲ್ಲೆ ಸೇರಿಕೊಂಡಿದ್ದ. ಬಹಳ ಬುದ್ಧಿವಂತನಿದ್ದ. ಆ ಊರ ಸಹವಾಸ ಸರಿ ಇರಲಿಲ್ಲ. ಅವರ ಅಪ್ಪ ಹಿಂದೆಯೆ ತೀರಿಕೊಂಡಿದ್ದ. ಅವನೊಬ್ಬ ಸಂಸಾರ ಕಟ್ಟಿಕೊಂಡೂ ಯೋಗಿ ಆಗಿಬಿಟ್ಟಿದ್ದ. ಒಂದು ದಿನ ರಕ್ತಕಾರಿ ಸತ್ತಿದ್ದ. ಅದೆಲ್ಲ ಬಹಳ ಹಳೆಯ ವ್ಯಥೆ. ಕಾಳನ ದಾರಿ ಮೊದಲಿಂದಲೂ ಕೆಟ್ಟು ಹೋಗಿತ್ತು. ಇಸ್ಪೇಟ್ ಆಡುವುದರಲ್ಲಿ ನಿಸ್ಸೀಮ! ನನಗಿಂತ ಮೂರು ವರ್ಷ ದೊಡ್ಡವನಿದ್ದ. ಹೆಂಗಸರ ಹುಚ್ಚು! ಸ್ವೇಚ್ಛೆಯಾಗಿ ಎಂಡ ಕುಡಿಯುತ್ತಿದ್ದ. ನಾನು ತಾತನ ಆ ದೊಡ್ಡ ಮನೆಯಲ್ಲಿ ಮಲಗುವ ಬದಲು ಎಲ್ಲೆಲ್ಲೊ ಮಲಗುತ್ತಿದ್ದೆ. ಕಾಳನ ತಾಯಿ ಕಾಳಮ್ಮನ ಉಪ್ಪೆಸರು ಕಾರವೇ ನನಗೆ ಹಿತ ಎನಿಸಿ ಅವರ ಗುಡಿಸಲಲ್ಲಿ ಕಾಲ ಕಳೆಯುವುದು ಹಿಂದಿನಿಂದಲೂ ಇತ್ತು. ನನ್ನ ತಾತ ಅವನಿಗೆ ದೊಡ್ಡಪ್ಪನಾಗಬೇಕಿತ್ತು. ‘ಎಲ್ಲೊ ಹೋಗವ್ನೆ ಬಾರೊ ಸುತ್ತಾಕಂಡು ಬರೋಣ’ ಎಂದ. ವಿಚಿತ್ರ ಒಂಟಿತದಿಂದ ಅವನ ಹಿಂಬಾಲಿಸಿದೆ. ನನ್ನ ಬಗ್ಗೆ ಅವನಿಗೆ ಅಸೂಯೆ ಎನಿಸಲಿಲ್ಲ.

ತೋಟದ ದಾರಿ ಹಿಡಿದು ಪೆಂಟೆಗೆ ಬಂದೆವು. ಅದು ಇನ್ನೂ ಎಂಜಿಆರ್ ಸಿನಿಮಾ ಲೋಕದಲ್ಲೆ ಇತ್ತು. ಸಂಜೆಯ ಸಿಹಿ ಎಂಡವ ಹೆಂಗಸರು ಪೀಪಾಯಿಗೆ ತುಂಬಿ ತಂದು ಅರಬಿಗಳಿಂದ ಸುರಿಯುತ್ತಿದ್ದರು. ಎಂಡದ ಸಿಹಿಗೆ ಜೇನುನೊಣ ಮುತ್ತಿಕೊಂಡಿದ್ದವು. ಎಂಡದ ಬಾಬತ್ತಿನವರು ಇವನ್ಯಾರು ಎಂಬಂತೆ ನೋಡಿದರು. ನನ್ನ ಅಪ್ಪ ಅವನಿಗೆ ಅಣ್ಣ ಆಗಬೇಕು. ನಮ್ಮಣ್ಣನ ಮಗ ಎಂದು ಪರಿಚಯಿಸಿದ… ಆ ಕೆಲವು ಹೆಂಗಸರ ಗುರುತು ಹಿಡಿದು ನಗಾಡಿದೆ. ತಮಿಳು ಮಿಶ್ರಿತ ಭಾಷೆಯಲ್ಲಿ ಮಿಜಾರಿಟಿಗೆ ಬಂದು ಬಿಟ್ಟಿದ್ದೀಯೆ ಎಂದರು. ನೀಳ ಹೊಟ್ಟೆಯನ್ನು ತೋರುವಂತೆ ತುಂಡು ಸೆರಗ ಸರಿಸಿದರು. ಆ ನೀಲಿಗಪ್ಪು ಬಣ್ಣದಲ್ಲಿ ಅವರ ಹೊಕ್ಕುಳೇ ಕಾಣಲಿಲ್ಲ. ಕಾಳ ಶೇಂದಿ ಸೂರ. ಅರ್ಧ ಅರಬಿ ಎಂಡ ತಂದ. ಅಲ್ಲೆ ಒಂದು ಗುಡಿಸಲಲ್ಲಿ ಕೂರಿಸಿದ್ದ. ಸಲೀಸಾಗಿ ಕುಡಿಸಿ ಬಿಟ್ಟ. ಹಿಂದೆ ಮುಂದೆ ಯೋಚಿಸಿರಲಿಲ್ಲ. ಏನೊ ನೆರಳು ತಲೆ ಮೇಲಿಂದ ಹೋದಂತಾಯಿತು. ನೆತ್ತಿಯಲ್ಲಿ ಬೆವೆತಿದ್ದೆ. ನಿಶೆ ಏರಿತ್ತು. ನಮ್ಮ ಊರು ಕೇರಿಯಲ್ಲಿ ಅದೆಲ್ಲ ಮಾಮೂಲಾಗಿತ್ತು. ಅದೇ ಮೊದಲ ಬಾರಿಗೆ ಸೇವಿಸಿದ್ದು. ತಲೆ ತೂಗಾಡುತ್ತಿತ್ತು. ವಿಪರೀತ ಮಾತುಗಳು ತೇಲಿ ಬರುತ್ತಿದ್ದವು. ಬಾಲ್ಯದಲ್ಲೆ ಯುಗಾದಿ ಹಬ್ಬಗಳಲ್ಲಿ ಎಲ್ಲರೂ ಕುಡಿಯುವುದಿತ್ತು ತೀರ್ಥದಂತೆ. ತಾತ ಬೇಸರ ಮಾಡಿಕೊಳ್ಳುವುದಿಲ್ಲ ಎಂದು ಗೊತ್ತಿತ್ತು.

ಭಾಷೆ, ನಾಗರೀಕತೆ, ಸಂಸ್ಕೃತಿಗಳ ಮಳೆಯಲ್ಲಿ ತೋಯ್ದು ಬೆರಗಾಗಿ ಒಬ್ಬನೇ ಮನುಷ್ಯನಿಗೆ ಇದೆಲ್ಲ ಹೇಗೆ ಸಾಧ್ಯವಾಯಿತೆಂದು ಒಬ್ಬಂಟಿಯಾಗಿಬಿಡುತ್ತಿದ್ದೆ. ಹಾಗೆ ಏಕಾಂಗಿ ಆಗುವುದರಲ್ಲಿ ಬಹಳ ಆನಂದ ಕಂಡಿರುವೆ. ಆ ಸ್ಥಿತಿಯಲ್ಲಿ ಅರಿವಿಲ್ಲದೆ ಏನೇನೊ ಪಡೆದಿರುವೆ. ನನ್ನೊಳಗೆ ಹಲವು ಧಾರೆಗಳು ಒಟ್ಟಿಗೇ ನುಗ್ಗಿ ಬಂದಿದ್ದವು.

ಸಂಜೆಯ ಕತ್ತಲು ಆವರಿಸಿತ್ತು. ತಾತ ಪಡಸಾಲೆಯಲ್ಲಿ ಕಾಯುತ್ತಾ ಕೂತಿದ್ದ. ಗಮನಿಸಿದ. ಕೊಂಚ ಬೇಸರಗೊಂಡ. ಕಾಳನಿಗೆ ಬೈಯ್ದ. ಪುಟ್ಟ ತೋಟದಲ್ಲಿ ಗುಡಿಸಲಿತ್ತು. ‘ಅಲ್ಲಿಗೋಗ್ಮ ನಡೀ; ಯೀ ಜಾಗ ಸರಿಯಿಲ್ಲಾ… ನಿಂತಾವೂ ಮಾತಾಡ್ಬೇಕು’ ಎಂದ ತಾತ. ಕಾಳ ಅತ್ತ ಹೋಗಿದ್ದ. ನನ್ನ ಆ ಬಾಲ್ಯದ ಅತ್ತೆಯರು ಪೇಟೆಯ ತಮ್ಮ ದಂದೆ ಮುಗಿಸಿ ಇನ್ನೂ ಬಂದಿರಲಿಲ್ಲ. ‘ಒಂಬತ್ಗಂಟೆಗೆ ಊಟವ ಕಾಳನ ಕೈಲಿ ಕೊಟ್ಟು ಕಳಿಸು’ ಎಂದು ತಾತ ಅಜ್ಜಿಗೆ ಹೇಳಿದ. ತೋಟದ ಗುಡಿಸಲೇ ನನಗೆ ಬೇಕಾಗಿದ್ದುದು. ಇದು ಮೊದಲ ಸಲ; ಏನಾದರೂ ಆದೀತು ಎಂದು ಸ್ವಲ್ಪ ಕುಡಿದಿದ್ದೆ. ಅಪ್ಪನ ನೆನಪೇ..? ಅಸಹ್ಯ ಎನಿಸಿತ್ತು. ಅವನ ಮುಖ ನೋಡಬಾರದು ಎಂದು ಊರ ಬಿಟ್ಟ ದಿನವೇ ನಿರ್ಧರಿಸಿದ್ದೆ. ಅವನೇನಾದರೂ ಖ್ಯಾತೆ ತೆಗೆದ ಎಂದರೆ ಬಡಿದು ಬಿಡಬೇಕೆನಿಸಿತು. ತೋಟದ ದಾರಿ ತಂಪಾಗಿತ್ತು. ಅಲ್ಲೇ ಹತ್ತಿರದಲ್ಲೆ ಹೊಳೆ ಇತ್ತು. ಬಾಲ್ಯದ ನರಕದ ಕೂಪದ ನೆನಪುಗಳೆಲ್ಲ ನನ್ನ ಹೆಜ್ಜೆಯ ಧೂಳ ಮೂಸುತ್ತ; ಇವನೇ ಅವನೇ ಎಂಬಂತೆ ಭಾಸವಾಗುತ್ತಿತ್ತು. ಮೈ ಮೇಲೆ ಗುಳ್ಳೆ ಎದ್ದವು. ನನ್ನನ್ನು ನಾನೇ ನಂಬದಾಗಿದ್ದೆ. ಬಂದ ಮೇಲೆ ಅನಿಸಿತು; ಮತ್ತೆ ಇಲ್ಲಿಗೆ ಬರಬಾರದಿತ್ತೆಂದು.

ತಾತ ಲಾಟೀನು ಹಚ್ಚಿ ನೇತು ಹಾಕಿದ. ಅಹಾ; ತಂಗಾಳಿ ಹೊತ್ತಲ್ಲಿ ಎಂತಹ ದಿವ್ಯ ಬೆಳಕು ಎನಿಸಿತು. ಪುಟ್ಟ ತೋಟದ ತೆಂಗಿನ ಮರಗಳು ಹಾಗೇ ಇದ್ದವು. ಗುಡಿಸಲ ಮುಂದೆ ತಾತ ಬೆಂಕಿ ಹಾಕಿದ. ಸೌದೆ ಒಡ್ಡಿದ. ನಿಧಾನಕ್ಕೆ ಕೆಂಡಗಳು ಬಿರಿಯುತ್ತಿದ್ದವು. ಅಂತಹ ಕೆಂಬಳಕೇ ಆ ಕತ್ತಲಲ್ಲಿ ಮಾಯಾವಿಯಾದುದು. ನಿಶೆಯ ಮಂಪರಿತ್ತು. ತಾತ ಮೂರು ಜನ್ಮಕ್ಕೆ ಆಗುವಷ್ಟು ಬುದ್ದಿ ಹೇಳಿದ್ದ. ನನ್ನ ಸ್ವಭಾವ ಗೊತ್ತಿತ್ತು ಚೆನ್ನಾಗಿ ತಾತನಿಗೆ. ಹಾಗಾಗಿಯೆ ತೋಟಕ್ಕೆ ಕರೆತಂದಿದ್ದೆ. ಕಾಳ ಊಟ ತಂದಿಟ್ಟು ಹೋಗಿದ್ದ. ಚಿದುಕು ಕಾಳಿನ ಗಟ್ಟಿ ಸಾಂಬಾರು ಅನ್ನ ಮುದ್ದೆ ಇತ್ತು. ಆ ಊಟ ತಾತನ ಸಂಪಾದನೆಯ ಅನ್ನ. ಮನಸಾರೆ ಉಂಡೆ. ನನ್ನ ಅಪ್ಪ ತಾತನಿಂದ ಬೇರೆ ಆಗಿದ್ದ. ಶಾಂತಿ ನನ್ನ ಅಜ್ಜಿ ಮನೆಗೆ ಹೋಗಿದ್ದಳು. ತೀವ್ರವಾದ ಕುತೂಹಲವಿತ್ತು ಅವಳ ನೋಡಬೇಕೆಂದು. ಆಗಿರಲಿಲ್ಲ. ಚಿಕ್ಕಮ್ಮ ಮಾದೇವಿಯ ನೆನಪೇ ಮತ್ತೆ ಮತ್ತೆ ಬರುತ್ತಿತ್ತು. ತೋಟದ ಈ ದಾರಿಯಲ್ಲೇ ಶಾಂತಿಯನ್ನು ಯಾರದೊ ಕೈಗಿತ್ತು ಹೊರಟು ಹೋಗಿದ್ದುದು. ತಾಯ ನೆನಪು ನೆರಳಿನಂತೆ ನನ್ನೊಳಗೇ ಅಂಟಿಕೊಂಡಿತ್ತು.

ತಾತನಿಗೆ ಬಿಡಿಸಿ ಹೇಳಿದ್ದೆ… ನಾನು ಹೇಗೆ ಕಾಡಿ ಬೇಡಿ ಅವರಿವರ ಸಹಾಯದಿಂದ ಬಿ.ಎ. ಓದಲು ಕಾಲೇಜಿಗೆ ಸೇರಿದ್ದೇನೆಂದು. ತಾತನ ಕಣ್ಣುಗಳು ಒದ್ದೆಯಾಗಿದ್ದವು. ಆ ಪರಮಾತ್ಮ ನಿನ್ನ ಬೆನ್ನಿಗಿದ್ದಾನೆ ಎಂದಿದ್ದ. ತೆಂಗಿನ ಬಳುಕುವ ಗರಿಯ ನೆರಳೊ ಏನೋ ಆ ಬೆಳದಿಂಗಳಲ್ಲಿ ನನ್ನ ತಲೆ ಸವರಿದಂತಾಯಿತು. ಏನೆಲ್ಲ ಓದಿದ್ದೆನೊ ಅದನ್ನೆಲ್ಲ ಈ ಒಂದೇ ರಾತ್ರಿಯಲ್ಲಿ ತಾತನಿಗೆ ಹೇಳಿಬಿಡಬೇಕೆಂದು ಬಹಳ ಉತ್ಸಾಹದಲ್ಲಿದ್ದೆ. ತಾತ ತಡೆದು ತಡೆದು ಪ್ರಶ್ನೆ ಮಾಡುತ್ತಿದ್ದ. ಅವನು ಮೆಚ್ಚುವಂತೆ ವಿವರ ನೀಡುತ್ತಿದ್ದೆ. ತಲೆದೂಗಿ; ‘ಇಂಗಾಗಿದೇ ಈ ಮಟ್ಟಕ್ಕೆ ವೋಗಿವ್ನಿ ಅಂತಾ ನಿಮ್ಮ ಚಿಕ್ಕಪ್ಪ ದೊಡ್ಡಪ್ಪ ಎಲ್ರುಗೂ ತಿಳಿಸಿದ್ದಿಯಾ’ ಎಂದು ತಾತ ಕೇಳಿದ. ತಕ್ಷಣ ಅದೊಂದು ಅನವಶ್ಯಕ ಮಾತಿನಂತೆ ಕಂಡಿತು. ‘ಅವ್ರಿಗೆಲ್ಲ ಯಾಕಪ್ಪ ತಿಳಿಸ್ಬೇಕೂ… ನಿನ್ನೊಬ್ಬುನ್ಗೆ ಹೇಳಿದ್ರೆ ಸಾಕು ಅಂತಾ ಬಂದೆ… ಅವುರ್ಯಾರ್ಗೂ ಗೊತ್ತಿಲ್ಲ’ ಎಂದೆ. ‘ಯೇಳ್ಬೇಕಾಯ್ತದೆ ಮೊಗಾ; ನಾಳೆ ದಿನಾ ನಮ್ಮ ಕಡೆಗೆ ಒಂದು ಮಾತು ಉಳ್ಕಬಾರ್ದು… ಅವುರು ಸಂತೋಸ ಪಡ್ಲಿ ಬಿಡ್ಲೀ… ಉಪುಕಾರ ಮಾಡ್ಲಿ ಮಾಡ್ದೇ ಇರ್ಲೀ… ಯೇಳಿದ್ರೆ ಸರಿಯಿತ್ತು ಕನಪಾsss’ ಎಂದು ಏನೊ ತಪ್ಪಾಗಿದೆ ಎಂಬುದನ್ನು ಬಿಂಬಿಸಿದ. ರಾತ್ರಿ ಎರಡು ಗಂಟೆ ಆಗಿದೆ ಎಂದು ನಕ್ಷತ್ರಗಳ ಚಲನೆಯ ಆಧರಿಸಿ ತಾತ ಸಮಯ ಹೇಳಿದ. ದಣಿದು ಬಂದಿದ್ದೀಯೆ ಮಲಿಕಳಪ್ಪಾ ಎಂದ. ಕೆಂಡಗಳು ಕರಗಿ ಬೂದಿಯಾಗುತ್ತಿದ್ದವು. ಲಾಟೀನಿನ ಬೆಳಕ ಕಡಿಮೆ ಮಾಡಿ ತಾತನ ಪಕ್ಕದಲ್ಲೆ ಮಲಗಿದೆ.

ನಿದ್ದೆ ಬರಲಿಲ್ಲ. ಆ ಮೈಸೂರಿನ ಅಲಂಕಾರಗಳೆಲ್ಲಿ; ತರಗತಿಗಳಲ್ಲಿ ತೇಲಿ ತೇಲಿ ಬರುತ್ತಿದ್ದ ಲೋಕದ ಅರಿವಿನ ಮಾತುಗಳೆಲ್ಲಿ; ಈ ಕೂಪದ ವಿಕಾರ ದೃಶ್ಯಗಳೆಲ್ಲಿ ಎಂಬ ಹೋಲಿಕೆ ಬಂದು ತಲೆ ಇನ್ನಷ್ಟು ಕೆಟ್ಟಿತು. ತಾತನಿಗೂ ನಿದ್ದೆ ಬಂದಿರಲಿಲ್ಲ. ಅವನದೆಲ್ಲಾ ಯೋಗ ನಿದ್ದೆ. ಗಾಢವಾಗಿ ಮಲಗಿಯೂ ತನ್ನ ಸುತ್ತ ಏನಾಗುತ್ತಿದೆ ಎಂದು ಗ್ರಹಿಸಬಲ್ಲವನಾಗಿದ್ದ. ಆತ್ಮದ ಜೊತೆ ಮಾತನಾಡಬಹುದು ಎಂದು ಮೊದಲು ಅವನೇ ಹೇಳಿಕೊಟ್ಟಿದ್ದು. ಯಾವುದೊ ಲೋಕದಲ್ಲಿ ತೇಲುತ್ತಿರುವಂತೆ ಅಸ್ಪಷ್ಟವಾಗಿ ಕನಸಿನ ನುಡಿಗಳ ಮಂತ್ರ ಪಠಿಸಿದಂತೆ ಸದ್ದು ಮಾಡುತ್ತಿದ್ದ. ವಿಚಿತ್ರ ತಾತ. ಅವನ ಇಬ್ಬರು ತಮ್ಮಂದಿರೂ ಹಾಗೇ ಇದ್ದರು. ಇರುವ ಈ ಲೋಕದ ಒಳಗೇ ಇನ್ನೊಂದು ಜಗತ್ತು ಇದೆ ಎಂದು ಅದರ ಜೊತೆ ಸಂವಾದ ಮಾಡುತ್ತಿದ್ದರು. ನಿದ್ದೆಯಲ್ಲಿ ಆ ಲೋಕದ ಜೊತೆ ಅದೆಂತಹ ಬಾಳಾಟ ಅವರದಾಗಿತ್ತೊ! ಈ ರಾತ್ರಿ ನಿದ್ದೆಯಲ್ಲಿ ಹೀಗಾಯಿತು ಎಂದು ಮರುದಿನ ಹೇಳುವಾಗ ನನಗೆ ನಂಬಲು ಆಗುತ್ತಿರಲಿಲ್ಲ. ತಾತ ಅವಧೂತರಂತೆ ಒಮ್ಮೊಮ್ಮೆ ವರ್ತಿಸುತ್ತಿದ್ದ. ಮತ್ತೆ ಅದೇ ನರಕದಲ್ಲಿ ಸಿಲುಕಿ ಬಡಿದಾಡುತ್ತಿದ್ದ. ನನ್ನ ಗ್ರಹಿಕೆಗೆ ಮೀರಿದ್ದ. ಅಂತಹ ಹೊತ್ತಲ್ಲೂ ಅಮರಾವತಿ ಎಂಬ ಹುಚ್ಚಿ ನೆನಪಾದಳು. ಬೆಳಿಗ್ಗೆ ಕೇಳಬೇಕು ಎಂದುಕೊಂಡು ಮಗ್ಗಲು ಬದಲಿಸಿದೆ. ಹಗಲಿಗೆ ಸಮಯ ಸಮೀಪಿಸುತ್ತಿತ್ತು. ಇನ್ನೇನೊ ನಿದ್ದೆ ಬಂತು ಎನ್ನುವಷ್ಟರಲ್ಲಿ ತೋಟದ ಮನೆಗಳ ಆ ತೋಟ ಮಾಳವೆಲ್ಲ ಒಮ್ಮೆಲೆ ಎದ್ದು ಎದ್ದು ಕೂರುವಂತೆ ಹುಂಜಗಳು ಕೂಗ ತೊಡಗಿದವು. ನಿದ್ದೆ ಎಳೆದು ಮಲಗಿಸಿತ್ತು. ಮಾಯದ ನಿದ್ದೆಯಿರಬೇಕು. ಚಳಿ ಎನಿಸಿತ್ತು. ತಾತ ಎದ್ದಿದ್ದ. ಮುಂಗೋಳಿ ಬೆಳಕು ರೆಕ್ಕೆ ತೆರೆಯುತ್ತಿತ್ತು. ಏಳಲು ಮನಸ್ಸೇ ಇರಲಿಲ್ಲ. ತಾತ ತೋಟವನ್ನು ಸುತ್ತು ಹಾಕಿ ಬಂದು ಎಬ್ಬಿಸಿದ. ಅಲ್ಲೇ ಮೂಲೆಯಲ್ಲಿ ಬಾನಿಯಲ್ಲಿ ನೀರಿತ್ತು ಮುಖ ತೊಳೆಸಿದ. ಮೈಸೂರಿಗೆ ಇಂದೇ ಹಿಂತಿರುಗುವುದೊ, ನಾಳಿದ್ದೋ ಎಂಬ ಗೊಂದಲವಿತ್ತು. ಊರ ನನ್ನ ಆಪ್ತ ತಾಣಗಳನೆಲ್ಲ ಒಮ್ಮೆ ನೋಡಿ ಬಿಡುವ; ಮತ್ತೆ ಇಲ್ಲಿಗೆ ಬರುತ್ತೇನೊ ಇಲ್ಲವೊ ಎಂದು ಯೋಚಿಸುತ್ತಿದ್ದೆ. ಬಾ ಎಂದ ತಾತ. ಎಲ್ಲಿಗಪ್ಪಾ ಎಂದೆ ಬಾರೊ ಯೇಳ್ತೀನಿ ಎನ್ನುತ್ತ ಮುಂದೆ ನಡೆದ. ಹಿಂಬಾಲಿಸಿದೆ.

ಬೇಲಿ ದಾಟಿ ಕಾಲು ದಾರಿಗೆ ಬಂದೆವು. ಅಲ್ಲೇ ಬಾಚಾಳಪ್ಪನ ಕಟ್ಟೆ ಇತ್ತು. ಭವ್ಯವಾದ ಅರಳಿ ಮರದ ಬುಡದಲ್ಲಿ ಒಂದು ಕಲ್ಲಿತ್ತು. ಎತ್ತರದ ಮರ. ನೂರಾರು ವರ್ಷಗಳ ಕಂಡಿದೆ. ಈಗಲೂ ಇದೆ. ಕಟ್ಟೆ ಮೇಲೆ ಕರೆದ. ನನಗಾಗಲೆ ದೇವರ ಬಗ್ಗೆ ವಿಶ್ವಾಸ ಹೊರಟು ಹೋಗಿತ್ತು. ರಾಮ್‌ದಾಸ್ ನೆನಪಾದರು. ‘ಕೈ ಮುಗಿಯೆಪ್ಪಾ’ ಎಂದ ತಾತ. ಅವನ ಮನಸ್ಸಿಗೆ ಬೆಳಬೆಳಿಗ್ಗೆಯೆ ನೋಯಿಸಬಾರದು ಎಂದು ಕೈಮುಗಿದೆ. ಈ ಮರದ ಸುತ್ತ ಮೂರು ಸುತ್ತು ಹಾಕಪ್ಪ ಎಂದ. ಹಾಗೇ ಮಾಡಿದೆ. ಮತ್ತೊಮ್ಮೆ ಮಂಡಿಯೂರಿ ನಮಸ್ಕರಿಸು ಎಂದ. ಯಾಕೆ? ಎಂದೆ. ಮಾಡಪ್ಪಾ ಎನ್ನುವಂತೆ ಕೈ ತೋರಿ ಕತ್ತು ಆಡಿಸಿದ. ತಾತ ಭಕ್ತಿ ಪರವಶನಾಗಿದ್ದ. ಎಲ್ಲಿಯ ವೈಚಾರಿಕತೆ, ದೇವರ ಅಸ್ತಿತ್ವ, ಅಪ್ಪನ ಹಿಂಸೆ, ಈ ಲೋಕದ ನರಕ ಎಂದುಕೊಳ್ಳುತ್ತಲೆ ಮಂಡಿಯೂರಿದೆ. ಏನೊ ನೆರಳು ಬೆನ್ನ ಹಿಂದೆ ನಿಂತಿರುವಂತೆ ಭಾಸವಾಯಿತು. ಎದ್ದು ನಿಂತೆ. ಮರಕ್ಕೆ ಎತ್ತರದಿಂದ ದೊಡ್ಡ ಗಂಟೆ ಒಂದನ್ನು ನೇತುಹಾಕಿದ್ದರು. ಬಾಲ್ಯದಲ್ಲಿ ಆ ಗಂಟೆಯ ಸದ್ದು ಬಹಳ ದೂರದ ತನಕ ನೀರವ ಹೊತ್ತಲ್ಲಿ ಕೇಳಿಸುತ್ತಿತ್ತು. ಯಾರೊ ಪೂಜೆ ಮಾಡುತ್ತಿದ್ದಾರೆಂದು ಓಡಿ ಹೋಗುತ್ತಿದ್ದೆವು. ಪ್ರಸಾದ ಕೊಡುತ್ತಿದ್ದರು. ಅದಷ್ಟೇ ಪ್ರಸಾದದ ಸಿಹಿ ಸಿಹಿ ಬಹಳ ದಿನಗಳ ತನಕ ನಾಲಿಗೆಯ ಮೇಲೇ ಇರುತ್ತಿತ್ತು. ಮುಂಜಾವಿನ ನಿದ್ದೆಗಣ್ಣುಗಳು ಇನ್ನೂ ತೂಕಡಿಕೆಯಲ್ಲಿದ್ದವು. ಮೆಟ್ಟಿಲು ಇಳಿಯುತ್ತಿದ್ದೆ, ‘ದೇವುರ ಮುಂದೆನೂ ಆತುರವೇನಪ್ಪಾ; ಗಂಟೆ ಬಾರಿಸಪ್ಪ’ ಎಂದ ತಾತ ಆದ್ರವಾಗಿ. ದೇವರ ಪ್ರಜ್ಞೆಯೇ ಇಲ್ಲದಿದ್ದಾಗ ಗಂಟೆ ಹೊಡೆಯುವುದು ಆಗ ಒಂದು ಆಟಿಕೆ ಆಗಿತ್ತು. ದೇವರೇ ಇಲ್ಲ ಎಂದಿರುವಾಗ ಆ ಗಂಟೆಯ ಅವತ್ತಿನ ದಿವ್ಯ ಸದ್ದು ಇವತ್ತು ಅನವಶ್ಯಕ ಎನಿಸಿತ್ತು. ‘ಗಂಟೆ ಬಾರಿಸಿದ್ದರಿಂದ ಏನಾಗುತ್ತೆ ಅಪ್ಪಾ’ ಎಂದಿದ್ದೆ ಅಸಹನೆಯಿಂದ. ‘ಆ ಮೇಲಿರೋನ್ಗೆ ನೀನು ಕರೆದ ಸದ್ದು ಮುಟ್ಟುತ್ತೆ ಕನಪ್ಪಾ… ನಿನ್ನ ಮನದಲ್ಲಿ ಏನು ಆಸೆ ಆಮಿಷ ಇದೆಯೊ ಅದು ಮೀರಿದ್ದು ಆ ದೈವಕ್ಕೆ ಗಂಟೆ ಸದ್ದಿನಿಂದ ತಿಳಿಯುತ್ತೆ ಕನೊ..’ ಎಂದಿದ್ದ. ತಾತನ ಆಲೋಚನೆಯ ರೀತಿಯೇ ಬೇರೆ. ಗಂಟೆ ಹೊಡೆದೆ. ಅದರ ಶಬ್ದ ನನ್ನ ಬೆರಳಿಗೆ ಅಂಟಿ ಎದೆಯೊಳಗೆ ಇಳಿದಂತಾಯಿತು. ಆ ಪ್ರಾತಃಕಾಲದ ಆ ಗಂಟಾನಾದ ಹಿಂದೆಂದೂ ಅಷ್ಟು ಮಾಂತ್ರಿಕವಾಗಿ ಕೇಳಿಸಿರಲಿಲ್ಲ.

ಅಲ್ಲಿಂದ ತೊರೆಗೆ ಕರೆದೊಯ್ದ. ಜುಳು ಜುಳು ಹೊಳೆ. ಹಾಲು ಬೆರೆಸಿದಂತೆ ನೀರು ಸಾಗುತ್ತಿತ್ತು. ಸ್ನಾನ ಮಾಡಪ್ಪ ಎಂದ. ಕೈಕಾಲು ಮುಖ ತೊಳೆದುಕೊಳ್ಳುವೆ; ಅಷ್ಟೇ ಸಾಕು ಎಂದೆ. ‘ನೀರೆಲಿ ಮೂರ್ಸಲ ಮುಳುಗೇಳಪ್ಪಾ; ಕೆಟ್ಟದ್ದೆಲ್ಲ ಕಳೆದೋಯ್ತದೆ’ ಎಂದ. ಇದಾಗಬಹುದು ಎಂದು ಅವನಿಚ್ಚೆಯಂತೆಯೆ ತಲೆ ತೊಳೆದುಕೊಂಡೆ. ದಾರಿಯಲ್ಲಿ ಕೇಳಿದ; ‘ಮೊದಲ್ನೆ ಬಸ್ಸಿಗೋದಿಯೊ, ಎರುಡ್ನೆದ್ಕೊದಿಯೊ ಮಗಾ’ ಎಂದ. ತಕ್ಷಣ ಉತ್ತರಿಸಲು ಆಗಲಿಲ್ಲ. ಇಲ್ಲಿ ಇನ್ನೊಂದೆರಡು ದಿನ ಇರಬಹುದಲ್ಲಾ ಎಂಬ ಏನೊ ಆಸೆ. ಮಾರ್ಮಿಕವಾಗಿ ಯಾವುದೊ ಒಂದು ಬಾಣವ ನನ್ನೆದೆಗೆ ಬಿಟ್ಟ; ‘ವಳ್ಳೆದು ಯಾವತ್ತೂ ಯಾರ ಮುಂದೆನೂ ವೋಗಿ ಬಾರಪ್ಪಾ ನಂಜೊತೆ ಅಂತಾ ಅದು ಯಾರ್ನೂ ಕರಿಯುದಿಲ್ಲ ಕನಪ್ಪಾ… ನಾವು ಮನುಸ್ರು; ನರ ಪ್ರಾಣಿಗಳು ಆ ವಳ್ಳೇದ ಕಾಲೆಲಿ ವದ್ದು ಬುಟ್ಟು ಕುರುಡ್ರಾಗಿ ಮುಂದೆ ವಂಟೋಯ್ತಿವಿ. ಕೆಟ್ಟದ್ದು ಅದೆಯಲ್ಲಾ… ಮಾಯಾವಿ ಅದು. ಬ್ಯಾಡ ಬ್ಯಾಡ ಅಂದ್ರೂ ಕಾಲಿಗೆ ಬಂದು ತೊಡುರ್ಕತದೆ. ನಮ್ಮ ಕೈಯ ಹಿಡ್ಕಂದು ಅದು ತನ್ದಾರಿಗೆ ಕರ್ಕಂದು ದಿಕ್ತಪ್ಪಿಸ್ಕಂದು ಎಳ್ಕವಂಟೋಯ್ತದೆ. ಎಲ್ಲಿದ್ದೀವಿ ಅಂತಾ ಆಗ ಯಿಂತಿರ್ಗು ನೋಡುದ್ರೇ; ಯಿಂದ್ಕೂ ಬರುಕಾಗುದಿಲ್ಲಾ ಮುಂದ್ಕೂ ದಾರಿ ಕಾಣುದಿಲ್ಲಾ… ಅಂಗದೆ ಕನಪ್ಪಾ ನಮ್ಮ ಪಾಡೂ. ಮೊದುಲ್ನೆ ಬಸ್ಗೇ ಕಳಿಸ್ತಿನಿ ನಡಿಯಪ್ಪ’ ಎಂದು ಮುಂದೆ ಬಿಟ್ಟ. ನೀ ಮುಂದೆ ನಡಿಯಪ್ಪಾ; ನಿನ್ನಿಂದೆ ನಾನು ಎಂದೆ. ‘ಇಲ್ಲ ಇಲ್ಲಾ; ನಾನ್ಯಾವತ್ತೊ ಯಿಂದೆ ಆದೆ. ಮುಂದೆ ನಾಳೆ ಇರ್ಬೇಕಾದೋನು ನೀನು. ಮುಂದೆ ನಡಿಯಪ್ಪಾ’ ಎಂದು ನನ್ನ ಬೆನ್ನ ಪರೀಕ್ಷಿಸುವಂತೆ ನಿಂತ.

ಮನೆಗೆ ಬಂದೆವು. ಗಮಗಮಿಸುವ ದೋಸೆ ಇಡ್ಲಿ ಸಾಂಬರಿನ ಗಮಲು ಬೀದಿಗೆಲ್ಲ ಆವರಿಸಿತ್ತು. ಒಂದು ಕಾಲಕ್ಕೆ ಆ ಹೋಟೆಲಲ್ಲಿ ಎಂಜಲು ಎತ್ತುತ್ತಿದ್ದವನು… ನನ್ನ ತಾಯಿ ಇದೇ ಹಿತ್ತಲಲ್ಲಿ ಏನಾದರೂ ಒಂದು ಕೆಲಸದಲ್ಲಿ ಈ ಜೀವನ ಸಾಕು ಎಂಬಂತೆ ತೊಡಗಿರುತ್ತಿದ್ದಳು. ಹಿತ್ತಲನ್ನು ಕಣ್ತುಂಬಿಕೊಂಡೆ. ಆ ಹೊಂಗೆ ಮರ ಹೂ ತುಂಬಿತ್ತು. ಬಾ ಎಂದು ಕರೆಯುತ್ತಿತ್ತು. ಅವತ್ತಿನ ಕಾಲಕ್ಕೆ ಅದೊಂದು ದೈತ್ಯ ಮರದಂತೆ ಕಾಣುತ್ತಿತ್ತು. ಈಗ ಅದೇ ಮರ ಮುತ್ತಜ್ಜಿ ಒಬ್ಬಳು ದಣಿದು ಬಾಳ ಪಯಣದಲ್ಲಿ ಕೋಲೂರಿ ನಿಂತಿರುವಂತೆ ಕಂಡಿತು! ಕಾಳಮ್ಮ ಗೌಡರ ಕೊಟ್ಟಿಗೆಯ ಕಸ ಬಳಿವ ಕೆಲಸಕ್ಕೆ ಮುಂಗೋಳಿಗೇ ಹೊರಟು ಹೋಗಿದ್ದಳು. ಹೆಂಗಸರು ಕೂಲಿಗೆ ಹೋಗುವ ಸಡಗರದಲ್ಲಿದ್ದರು. ಹೋಟೆಲು ಗಿಜಿಗುಟ್ಟುತ್ತಿತ್ತು. ಅಪ್ಪನ ಠೇಂಕಾರದ ಮಾತುಗಳು ಕಿವಿಗೆ ಅಪ್ಪಳಿಸಿದವು. ‘ಬಿಸಿಬಿಸಿ ದ್ವಾಸೆ ತತ್ತಿನೀ ತಿನ್ಕಂದು ರೆಡಿಯಾಗಪ್ಪ’ ಎಂದ ತಾತ. ಕಿವಿ ಬೆಚ್ಚಗಾದವು. ‘ಅಲ್ಲಿಂದ ಏನ್ನೂ ತರ್ಬೇಡ. ಒಂದು ಗ್ಲಾಸು ನೀರನ್ನೂ ನಾನು ಕುಡಿಯೋದಿಲ್ಲ’ ಎಂದೆ. ‘ಯಾಕಪ್ಪಾ; ಅದು ನನ್ನ ವೋಟ್ಲು. ನಿಮ್ಮಪ್ಪ ನಡಿಸ್ತಿರಬೋದು. ಅದೆಲ್ಲ ನಂದೇ… ಅದ್ರೆಲಿ ನಿನ್ಗೆ ಅಜ್ನ ಪಾಲಿದೆ’ ಎಂದ. ‘ಅಪ್ಪಾ; ನಾನು ನೆಮ್ದಿಯಾಗಿ ಮೈಸೂರ್ಗೆ ವೋಗ್ಬೇಕೊ ಬ್ಯಾಡವೊ? ಆ ಪಾಪಿ ಕೈಯಿಂದ ಮಾಡಿದ್ದ ನಾನು ಎಡಗೈಲೂ ಮುಟ್ಟೋದಿಲ್ಲಾ. ಅದು ವಿಷ…’ ಎಂದು ಸಿಟ್ಟಾದೆ. ‘ಅಂಗಾದ್ರೆ ಊರ್ಮುಂದ್ಲ ಅಯ್ನೋರ ವೋಟ್ಲುಗೆ ವೋಗಿ ಇಡ್ಲಿ ಚಟ್ನಿ ತತ್ತಿನಿ ತಾಳಪ್ಪಾ’ ಎಂದು ಮುಂದಾದ. ಅದೂ ಬ್ಯಾಡಾ… ನೀನು ದುಡ್ದು ಹಾಕೊ ಅನ್ನ ಅದೆಯಲ್ಲಾ ಅದಾ ತಿಂತೀನಿ. ಅಳಿಸ್ಕಂದಿದ್ರೂ ತೊಳ್ಕಂದು ತಿಂತೀನಿ. ಆ ಪಾಪಿಯ ಹಂಗು ನನಗೆ ಬ್ಯಾಡಾ’ ಎಂದು ರಾತ್ರಿ ಮಾಡಿದ್ದ ಮಡಕೆಗೆ ಕೈ ಹಾಕಿದೆ. ಒಂದು ಜಿರಕಲು ಮುದ್ದೆ ಇತ್ತು. ಕಾರ ಇತ್ತು. ಮುದ್ದೆಯ ಮಿದ್ದಿಸಿ ಮಿದ್ದಿಸಿ ಇದು ತಾತ ನನ್ನ ಪಾಲಿಗೆ ಕೊಟ್ಟ ಕೊನೆಯ ತುತ್ತು ಎಂಬಂತೆ ಕಾರಕ್ಕೆ ತಟ್ಟಿಕೊಂಡು ಉಂಡೆ. ಅದೇ ಹಳೆಯ ಮಡಕೆ ಗುಡಾಣ ತೊಂಬೆಗಳ ಸಾಲು ಪೂರ್ವಿಕರು ಧ್ಯಾನಸ್ಥರಾಗಿ ಕೂತಿರುವಂತೆ ಕಂಡವು. ನನ್ನ ತಾಯಿ ಯಾವತ್ತೂ ಹಜಾರಕ್ಕೆ ಹೊಂದಿಕೊಂಡಿದ್ದ ಕೊಠಡಿಯ ಬಾಗಿಲ ಗೋಡೆಗೆ ಒರಗಿ ಕೂತು ಕೂತು ತಲೆಯ ಎಣ್ಣೆಯಿಂದ ಜಿಡ್ಡುಗಟ್ಟಿದ್ದ ಗುರುತು ಸುಣ್ಣ ಬಣ್ಣ ಬಳಿದಿದ್ದರೂ ಮಸುಕಾಗಿ ಕಾಣುತ್ತಲೆ ಇತ್ತು. ನನ್ನನ್ನು ನಾನೇ ಸಂತೈಸಿಕೊಂಡು ಪಡಸಾಲೆಗೆ ಬಂದೆ. ಆ ಪಾಪಿ ಹೋಟೆಲಿನ ಸಂದಿಯ ಹಾಸುಗಲ್ಲುಗಳ ಮೇಲೆ ದಡಬಡ ಗುಟ್ಟಿಸುತ್ತ ಬರುತ್ತಿರುವುದು ಗೊತ್ತಾಯಿತು.

ತಾತನ ಕಣ್ಣುಗಳಲ್ಲಿ ಏನೋ ಆದ್ರತೆ ಒದ್ದೆಯಾಗಿ ತೇಲಿದಂತೆ ಗೋಚರಿಸಿತು. ಅತ್ತ ತಿರುಗಿದೆ. ಮನೆ ಮುಂದೆಯೆ ಲಡಾಸು ಸೈಕಲ್ಲು ಇತ್ತು. ಅದನ್ನೇರಿ ನನ್ನತ್ತ ತಿರುಗಿಯೂ ನೋಡದೆ ಹೊರಟು ಹೋದ. ತಾತ ನಿಟ್ಟುಸಿರು ಬಿಟ್ಟು ಮುಖ ನೋಡಿ; ‘ಆಗ್ಲೇ ಎಂಡದ ಪೆಂಟೆಗೆ ವಂಟ ನೋಡು’ ಎಂದ. ಕೇಳಿಸಲಿಲ್ಲ ಎಂಬಂತೆ ಷೂ ಹಾಕಿಕೊಂಡೆ. ಗೆಳೆಯನ ಷೂ ಅದಾಗಿತ್ತು. ‘ಬಸ್ಚಾರ್ಜ್‌ಗೆ ಕಾಸಿದ್ದದೇ’ ಎಂದು ಕೇಳಿದ. ಇದೆ ಎಂದು ತಲೆಯಾಡಿಸಿದೆ. ‘ಇರ್ಲಿ ತಕಪ್ಪಾ’ ಎಂದು ಮೂವತ್ತ ಐದು ರೂಪಾಯಿಗಳ ಕೊಟ್ಟ ಮನಸ್ಸಿಲ್ಲದಿದ್ದರೂ ಪಡೆದಿದ್ದೆ. ಅಜ್ಜಿ ಮನೆ ಒಳಗೆ ಗೊಣಗುತ್ತಿದ್ದಳು. ಅಪ್ಪ ಬಹಳ ನೀಚ ಎಂದು ಎಷ್ಟು ಸಲ ಹೇಳಿದರೂ ಸಾಲದು. ಮಾದೇವಿ ಚಿಕ್ಕಮ್ಮ ಹಾಗೆ ಸತ್ತ ಮೇಲೆ ಆತ ತನ್ನ ಅಣ್ಣನ ಮೂಲಕ ಮೈಸೂರಿನ ಅಶೋಕಪುರಂನಿಂದ ಒಂದು ಹೆಣ್ಣನ್ನು ಕೂಡಾವಳಿ ಮಾಡಿಕೊಂಡಿದ್ದ. ಅದೆಲ್ಲ ಗೊತ್ತಿತ್ತು. ನನ್ನನ್ನು ಕಂಡರೇ ಅವಳಿಗಾಗುತ್ತಿರಲಿಲ್ಲ. ಚಿಕ್ಕದೊಂದು ಹೆಣ್ಣು ಮಗು ಇತ್ತು ಅವಳಿಗೆ. ನೋಡಿದ್ದೆ; ಹತ್ತಿರ ಕರೆದು ಮಾತನಾಡಿಸಲು ಆಗಿರಲಿಲ್ಲ. ಆಕೆ ತಾಯ ಜೊತೆ ಹೋಟೆಲಲ್ಲಿದ್ದಳು.

‘ಬರ್ತೀನಪ್ಪಾ’ ಎಂದೆ. ‘ಆಯ್ತು ವೋಗ್ಬಾರಪ್ಪಾ’ ಎಂದು ಕಳಿಸಿಕೊಟ್ಟ. ಊರ ಸರ್ಕಲ್ಲಿಗೆ ಬಂದೆ. ಜನ ಬಸ್ಸಿಗಾಗಿ ಕಾಯುತ್ತಿದ್ದರು. ಮರ ಒಂದರ ಕೆಳಗೆ ನಿಂತೆ. ಆನ ‘ಅವುನ್ಯಾರ್ಲಾ’ ಎಂಬಂತೆ ಗಮನಿಸಿ ಮಾತಾಡಿಕೊಳ್ಳುತ್ತಿದ್ದರು. ಆ ಕಡೆ ಮರೆಯಲ್ಲಿದ್ದ ಹುಡುಗಿಯರು ಈ ಕಡೆ ನನ್ನತ್ತ ಬಂದರು. ಆ ಇಬ್ಬರು ಉಳಿದವರ ಪರಿಚಯ ಮಾಡಿಕೊಟ್ಟರು. ಆಸಕ್ತಿ ಇರಲಿಲ್ಲ ಮಾತಾಡಲು. ಏನೋ ಹೊರೆ ಬಾರ. ‘ತಪ್ಪದೆ ನಿಮ್ಮ ದೊಡ್ಡಪ್ಪನ ಮೈಸೂರೆಲಿ ಕಂಡು ಯೇಳುಬುಟ್ಟು ಮುಂದೆ ವೋಗ್ಬೇಕಪ್ಪಾ’ ಎಂದು ತಾತ ಕೋರಿದ್ದು ನೆನಪಾಗಿ ಗೊಂದಲದಲ್ಲಿದ್ದೆ. ಹೋಗಲೋ ಬೇಡವೊ ಎಂಬ ತಾಕಲಾಟ. ಆ ಹುಡುಗಿಯರು ವಿಚಿತ್ರ ಉತ್ಹಾಹದಲ್ಲಿದ್ದರು. ಬಸ್ಸಿಗಾಗಿ ಕಾತರಿಸುತ್ತಿದ್ದ ಜನ. ಅವರವರದೇ ಏನೇನೊ ಗೊಡವೆ. ತುದಿಗಾಲಲ್ಲಿದ್ದರು. ಏಳೆಂಟು ಹಳ್ಳಿನ ತಿರುಗಿ ಆ ಬಸ್ಸು ನಮ್ಮ ಊರಿಗೆ ಬರುವಷ್ಟರಲ್ಲಿ ತುಂಬಿದ ಬಸುರಿಯಂತಾಗಿ ಬಿಡುತ್ತಿತ್ತು. ನೂಕು ನುಗ್ಗಲಾಗಬೇಕಿತ್ತು. ಬಸ್ಸು ಬಂತು. ಅನಾಗರೀಕವಾಗಿ ಮುನ್ನುಗ್ಗಿದರು. ಆ ಹುಡುಗಿಯರು ಯಾವ ಬಾಗಿಲತ್ತ ಹತ್ತುವರು ಎಂಬುದನ್ನು ಗಮನಿಸಿದೆ. ಹತ್ತುವ ತರಾತುರಿಯಲ್ಲಿದ್ದರು. ಕೆಲವರು ಟಾಪ್‌ಗೆ ಏರುತ್ತಿದ್ದರು. ನಾನು ಮುಂಬಾಗಿಲತ್ತ ಬಂದು ಒಳ ನುಗ್ಗಿದೆ. ಅವರು ಹಿಂಬಾಗಿಲಲ್ಲೆ ಸಿಕ್ಕಿ ಹಾಕಿಕೊಂಡಿದ್ದರು. ನನ್ನತ್ತ ಬರಲು ಎಡೆಯೆ ಇರಲಿಲ್ಲ. ಪೇಟೆಗೆ ಹತ್ತಿರದ ದಾರಿ. ಬಂದಿತ್ತು ಬಸ್ ನಿಲ್ದಾಣ. ಎಲ್ಲರೂ ಇಳಿದರು. ಮೈಸೂರಿನ ಕಡೆಗೆ ಬಸ್ಸು ನಿಂತಿತ್ತು. ಏರಿಕೊಂಡೆ. ತಬ್ಬಿಬ್ಬಾಗಿ ಇವನೆಲ್ಲಿ ಎಂದು ನೋಡುತ್ತಿದ್ದರು. ನಿರಾಶೆಯಲ್ಲಿ ಕಾಲೇಜಿನತ್ತ ನಡೆದರು. ಕಳ್ಳನಂತೆ ಬಸ್ಸಿನ ಮರೆಯಲ್ಲಿ ಅವರ ಗಮನಿಸುತ್ತಿದ್ದೆ. ದೂರದಲ್ಲಿ ಕಾಣುತ್ತಿದ್ದರು. ಅವರ ದಾರಿ ಅವರದು; ನನ್ನ ದಾರಿ ನನ್ನದು ಎಂದು ಮೈಸೂರಿಗೆ ಹೊರಟೆ.