1952ರಲ್ಲಿ ಅದೊಂದು ದಿನ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಒಂದಾದ ಅರ್ಜಂಟೀನಾದಲ್ಲಿ ಮೆಡಿಕಲ್ ಓದುತ್ತಿದ್ದ ಸ್ನೇಹಿತರಾದ ಅರ್ನೆಸ್ಟೋ ಚೆಗೆವಾರ ಮತ್ತು ಆಲ್ಬರ್ಟೋ ಗ್ರೆನಾಡೋಗೆ ಒಂದು ಅಪೂರ್ವವಾದ ಉಮೇದು ಉಂಟಾಗುತ್ತದೆ. ಅದು ಎಂಥವರನ್ನೂ ಬೆಚ್ಚಿಬೀಳಿಸುವಂಥಾದ್ದು. ಸುಮಾರು ಎಂಟು ಸಾವಿರ ಮೈಲಿ ವಿಸ್ತಾರದ ಇಡೀ ದಕ್ಷಿಣ ಅಮೆರಿಕವನ್ನು 1939ನೇ ಮಾಡೆಲ್ಲಿನ ಮೋಟಾರ್ ಬೈಕಿನಲ್ಲಿ ಸುತ್ತಾಡಿಕೊಂಡು ಬರಬೇಕು, ಎಂದು. ಹಾಗೆಂದೇ ಪ್ರಯಾಣ ಹೊರಟ ಗೆಳೆಯರಿಬ್ಬರ ಸ್ವಭಾವ, ನಡವಳಿಕೆ ಒಂದಕ್ಕೊಂದು ತಾಳಮೇಳವಿಲ್ಲದ್ದು.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಬ್ರೆಜಿ಼ಲ್‌ನ ʻಮೋಟಾರ್ ಸೈಕಲ್ ಡೈರೀಸ್ʼ ಸಿನಿಮಾದ ವಿಶ್ಲೇಷಣೆ

ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರಖ್ಯಾತರಾದವರ ಬಗ್ಗೆ ಚಲನಚಿತ್ರ ನಿರ್ಮಾಣವಾಗಿರುವುದು ಅಪರೂಪವೇನಲ್ಲ. ಹಲವು ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ ಮಹಾತ್ಮ ಗಾಂಧಿಯನ್ನು ಕುರಿತು ಸರ್ ರಿಚರ್ಡ್ ಅಟೆನ್‌ಬೆರೋ ನಿರ್ದೇಶನದ ʻಗಾಂಧಿʼಯ ಬಗ್ಗೆ ನಮಗೆ ಗೊತ್ತೇ ಇದೆ. ಶ್ಯಾಮ್ ಬೆನಗಲ್ ಸುಭಾಷ್‌ಚಂದ್ರಬೋಸ್ ಜೀವನವನ್ನು ಆಧರಿಸಿದ ಚಿತ್ರ ʻದ ಫರ್‌ಗಾಟನ್ ಹೀರೋʼ ಚಿತ್ರ ಇತ್ತೀಚಿನದು. ಇವೆರಡೂ ಚಿತ್ರಗಳು ಆ ವ್ಯಕ್ತಿಗಳ ವ್ಯಕ್ತಿತ್ವದ ಹಿರಿಮೆಯನ್ನು ಸಮಗ್ರವಾಗಿ ಹಿಡಿದಿಡಲು ಮಾಡಿದ ಪ್ರಯತ್ನಗಳೆಂದು ಗುರುತಿಸಲಾಗಿದೆ.

(ವಾಲ್ಟರ್ ಸ್ಯಾಲೆಸ್‌)

ಈ ಚಿತ್ರಗಳಿಗೂ ಬ್ರೆಜಿ಼ಲ್‌ನ ನಿರ್ದೇಶಕ ವಾಲ್ಟರ್ ಸ್ಯಾಲೆಸ್‌ನ 2004ರ ʻಮೋಟಾರ್ ಸೈಕಲ್ ಡೈರೀಸ್’ಗೂ ಮೂಲಭೂತ ವ್ಯತ್ಯಾಸವಿದೆ. ಇದು ವ್ಯಕ್ತಿಯೊಬ್ಬ ಖ್ಯಾತನಾಗುವ ಮುಂಚಿನ ಹಂತವನ್ನು ಕುರಿತ ಚಿತ್ರ-ಅನೇಕ ಮೆರಗುಗಳಿಂದ ಪಕ್ಕಾಗಿ ಎದೆ ಹದವಾಗುವ ಪ್ರತಿಕ್ರಿಯೆಯನ್ನು ಕುರಿತದ್ದು: ತನ್ನ ಒಳಗಿನ ದನಿಗೆ ತೀರ ಸಹಜವಾದ ಕಾರಣಗಳಿಂದ ಕಿವಿ ತೆರೆದು ತನ್ನನ್ನು ತಾನೇ ಹೊಸ ಬಗೆಯಲ್ಲಿ ಕಂಡುಕೊಂಡಿದ್ದನ್ನು ಕುರಿತದ್ದು. 2004ರಲ್ಲಿ ವಾಲ್ಟರ್ ಸ್ಯಾಲೆಸ್ ನಿರ್ದೇಶಿಸಿದ ಸ್ಪಾನಿಷ್ ಭಾಷೆಯ ಈ ಚಿತ್ರಕ್ಕೆ ಅರ್ನೆಸ್ಟೋ ಚೆಗೆವಾರನ ಜೀವನದ ಘಟನೆಗಳೇ ಆಧಾರ.

1956ರಲ್ಲಿ ಬ್ರೆಜಿ಼ಲ್‌ನಲ್ಲಿ ಹುಟ್ಟಿದ ವಾಲ್ಟರ್ ಸ್ಯಾಲೆಸ್‌ನ ತಂದೆ ರಾಜತಾಂತ್ರಿಕ ಹುದ್ದೆಯಲ್ಲಿದ್ದವನು. ಆದ್ದರಿಂದ ಅವರು ವೃತ್ತಿಯ ಕಾರಣ ನೆಲೆಸಿದ ಕಡೆ ಅವನ ವಿದ್ಯಾಭ್ಯಾಸ ಜರುಗಿತು. ಅನಂತರ ಅವನು ಪೋರ್ಚುಗೀಸ್, ಸ್ಪ್ಯಾನಿಷ್, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳನ್ನು ಕಲಿತ. ಚಲನಚಿತ್ರ ನಿರ್ಮಿಸುವುದನ್ನು ಕೇವಲ ವೃತ್ತಿಯನ್ನಾಗಿ ಮಾಡಿಕೊಂಡಿರುವುದನ್ನು ಇಷ್ಟಪಡದ ಅವನು ಅದರಿಂದ ವಿಶಿಷ್ಟವಾದ ಜೀವಂತ ಅನುಭವವನ್ನು ಕೊಡುವುದು ತನ್ನ ಉದ್ದೇಶವೆಂದು ಹೇಳುತ್ತಾನೆ. ಜೊತೆಗೆ ತಾನು ಈಗಷ್ಟೇ ಅಸ್ತಿತ್ವವನ್ನು ರೂಪಿಸಿಕೊಳ್ಳುತ್ತಿರುವ ದೇಶದವನೆಂದು ತಿಳಿಸುತ್ತ ತಮ್ಮ ಸಿನಿಮಾಗಳಲ್ಲಿ ಒಂದು ಬಗೆಯ ತುರ್ತನ್ನು ಕಾಣಬಹುದು ಮತ್ತು ಲ್ಯಾಟಿನ್ ಅಮೆರಿಕ ದೇಶದ ಕಥೆಗಳಲ್ಲಿ ಗಾಢವಾದ ಪ್ರಭಾವ ಬೀರುವ ಕಥೆಗಳಿವೆ ಎನ್ನುತ್ತಾನೆ. ಅವನು ಇಲ್ಲಿಯ ತನಕ ನಿರ್ದೇಶಿಸಿರುವ ಹನ್ನೆರಡು ಚಿತ್ರಗಳಲ್ಲಿ ʻಫಾರಿನ್ ಲ್ಯಾಂಡ್ʼ [1997] ಮತ್ತು ಬಿಹೈಂಡ್ ದ ಸನ್ (2001) ಮಿಡ್ ನೈಟ್ (1998) ಸೆಂಟ್ರಲ್ ಸ್ಟೇಷನ್ (1999) ಪ್ರಮುಖವಾದವು.

1952ರಲ್ಲಿ ಅದೊಂದು ದಿನ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಒಂದಾದ ಅರ್ಜಂಟೀನಾದಲ್ಲಿ ಮೆಡಿಕಲ್ ಓದುತ್ತಿದ್ದ ಸ್ನೇಹಿತರಾದ ಅರ್ನೆಸ್ಟೋ ಚೆಗೆವಾರ ಮತ್ತು ಆಲ್ಬರ್ಟೋ ಗ್ರೆನಾಡೋಗೆ ಒಂದು ಅಪೂರ್ವವಾದ ಉಮೇದು ಉಂಟಾಗುತ್ತದೆ. ಅದು ಎಂಥವರನ್ನೂ ಬೆಚ್ಚಿಬೀಳಿಸುವಂಥಾದ್ದು. ಸುಮಾರು ಎಂಟು ಸಾವಿರ ಮೈಲಿ ವಿಸ್ತಾರದ ಇಡೀ ದಕ್ಷಿಣ ಅಮೆರಿಕವನ್ನು 1939ನೇ ಮಾಡೆಲ್ಲಿನ ಮೋಟಾರ್ ಬೈಕಿನಲ್ಲಿ ಸುತ್ತಾಡಿಕೊಂಡು ಬರಬೇಕು, ಎಂದು. ಹಾಗೆಂದೇ ಪ್ರಯಾಣ ಹೊರಟ ಗೆಳೆಯರಿಬ್ಬರ ಸ್ವಭಾವ, ನಡವಳಿಕೆ ಒಂದಕ್ಕೊಂದು ತಾಳಮೇಳವಿಲ್ಲದ್ದು. ನೋಡಿದ್ದನ್ನು ರೆಪ್ಪೆ ಬಡಿಯದೆ ಇನ್ನೂ ಕೆಲವು ಕ್ಷಣ ಹೆಚ್ಚು ಸಮಯ ನೋಡಿ, ಅಷ್ಟನ್ನೂ, ಮತ್ತಷ್ಟನ್ನೂ ಒಳಗೆ ಇಳಿಸಲು ಹವಣಿಸುವ ಅಂತರ್ಮುಖಿಯ ಸ್ವಭಾವ ಅರ್ನೆಷ್ಟೋನದು. ಹೆಚ್ಚಿನ ಲವಲವಿಕೆಯ, ಸದಾ ಸ್ನೇಹಿತನನ್ನು ಛೇಡಿಸುತ್ತ, ರೇಗಿಸುತ್ತ, ಉತ್ಸಾಹದಿಂದ ಬಡಬಡಿಸುವ ರೀತಿಯವನು ಅರ್ನಾಲ್ಡೋ.

ಚಿತ್ರದಲ್ಲಿ ಸ್ನೇಹಿತರ ಒಟ್ಟಾರೆ ರೀತಿಯನ್ನು ಕುರಿತು ನಮ್ಮ ಮನಸ್ಸಿನಲ್ಲಿ ಒಂದು ನೆಲೆಯನ್ನು ನಿರ್ಮಿಸಿದ ಮೇಲೆ ಅರ್ನೆಸ್ಟೋಗೆ ಪ್ರೇಯಸಿಯೊಬ್ಬಳು ಇರುವುದನ್ನು ತೀರ ಸಂಕ್ಷಿಪ್ತವಾಗಿ ದಾಖಲಿಸುವಾಗ ಅವಳು ಅವನಿಗೆ ಕೊಡುವ ಒಂದಿಷ್ಟು ಹಣವನ್ನು ಮುಂದೆ ಜರುಗುವ ಘಟನೆಯೊಂದರಲ್ಲಿ ಉಪಯೋಗಿಸುತ್ತಾನೆ. ಅನಂತರ ನಿರ್ದೇಶಕ ವಾಲ್ಟರ್ ಸ್ಯಾಲೆಸ್ ಸಮಯ ವ್ಯರ್ಥ ಮಾಡದೆ ಚಿತ್ರದ ಆಶಯದ ಕಡೆ ಗಮನ ಹರಿಸುತ್ತಾನೆ.

ಚಲನಚಿತ್ರ ನಿರ್ಮಿಸುವುದನ್ನು ಕೇವಲ ವೃತ್ತಿಯನ್ನಾಗಿ ಮಾಡಿಕೊಂಡಿರುವುದನ್ನು ಇಷ್ಟಪಡದ ಅವನು ಅದರಿಂದ ವಿಶಿಷ್ಟವಾದ ಜೀವಂತ ಅನುಭವವನ್ನು ಕೊಡುವುದು ತನ್ನ ಉದ್ದೇಶವೆಂದು ಹೇಳುತ್ತಾನೆ. ಜೊತೆಗೆ ತಾನು ಈಗಷ್ಟೇ ಅಸ್ತಿತ್ವವನ್ನು ರೂಪಿಸಿಕೊಳ್ಳುತ್ತಿರುವ ದೇಶದವನೆಂದು ತಿಳಿಸುತ್ತ ತಮ್ಮ ಸಿನಿಮಾಗಳಲ್ಲಿ ಒಂದು ಬಗೆಯ ತುರ್ತನ್ನು ಕಾಣಬಹುದು ಮತ್ತು ಲ್ಯಾಟಿನ್ ಅಮೆರಿಕ ದೇಶದ ಕಥೆಗಳಲ್ಲಿ ಗಾಢವಾದ ಪ್ರಭಾವ ಬೀರುವ ಕಥೆಗಳಿವೆ ಎನ್ನುತ್ತಾನೆ.

ಅರ್ನೆಸ್ಟೋ ಮತ್ತು ಆಲ್ಬರ್ಟೋರ ಪ್ರಯಾಣದ ಪ್ರಾರಂಭದಲ್ಲಿ ಅರ್ಜಂಟೀನಾದ ಮಣ್ಣಿನ ರಸ್ತೆಗಳಲ್ಲಿ ಮೋಜಿನಿಂದ ಮೋಟಾರು ಸೈಕಲ್ ಓಡಿಸುವ ಅವರ ಮೂಗಿನ ಹೊಳ್ಳೆಗಳಲ್ಲಿ ಅವರಿಗೆ ಅರಿವಾಗದಂತೆ ಅದರ ವಾಸನೆ ಒಳಗಿಳಿಯುತ್ತದೆ. ಇದರೊಂದಿಗೆ ನೆಲ-ಮುಗಿಲು, ಬೆಟ್ಟ-ಗುಡ್ಡಗಳ ವಿಸ್ತಾರದ ಬಣ್ಣಗಳ ಹಬ್ಬದ ಲಾಂಗ್ ಶಾಟ್ ದೃಶ್ಯಗಳು ನಮ್ಮ ಕಣ್ಣು ತುಂಬುತ್ತವೆ. ಯಾವುದೇ ಕಥನದ ಚೌಕಟ್ಟಿಲ್ಲದೆ, ಕೇವಲ ಪ್ರಾಸಂಗಿಕ ಘಟನೆಗಳೇ ಜೀವಾಳವಾಗಿರುವ ಈ ಚಿತ್ರದಲ್ಲಿ ನಾವು ನಿರ್ದೇಶಕನ ಬೆರಳು ಹಿಡಿದುಕೊಂಡು ಹೆಜ್ಜೆ ಹಾಕುವುದನ್ನು ಬಿಟ್ಟು ಬೇರೆ ದಾರಿಯೇ ಇರುವುದಿಲ್ಲ. ಇದರ ಜೊತೆಗೆ ಮುಂದಾಗುವುದನ್ನು ನಿರೀಕ್ಷಿಸುವ ಪ್ರಶ್ನೆಗೆ ಸುತಾರಾಂ ಅವಕಾಶವಿರುವುದಿಲ್ಲ.

ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿರುವಾಗ ಅವರು ಅನೇಕ ಬಾರಿ ಅದರಿಂದ ಕೆಳಗೆ ಬೀಳುತ್ತಾರೆ, ಎದ್ದು ಕೊಚ್ಚೆ-ಕೆಸರಲ್ಲಿ ಬಿದ್ದೇಳುತ್ತಾರೆ. ಇಂತಹ ಸಣ್ಣ ಸಣ್ಣ ಪ್ರಸಂಗಗಳಲ್ಲಿ ತೀರ ಸಹಜವೆಂದು ಕಾಣುವ ಅವರಿಬ್ಬರ ಅಭಿನಯ ಮತ್ತು ನಡವಳಿಕೆಯಿಂದ ಚಿತ್ರಕೆಗಳ ಏಕತಾನತೆಗೆ ಅವಕಾಶವೇ ಕೊಡದ ಹಾಗೆ ದೃಶ್ಯ ವೈವಿಧ್ಯಗಳಿಂದ ಅಂದರೆ ದೂರ, ಹತ್ತಿರ ಸಮೀಪ ಚಿತ್ರಿಕೆಗಳಿಂದ(ಲಾಂಗ್ ಶಾಟ್, ಮಿಡ್ ಶಾಟ್ ಮತ್ತು ಎಕ್ಸ್ಟ್ರೀಮ್ ಕ್ಲೋಸ್ ಶಾಟ್) ನಮ್ಮ ರೆಪ್ಪೆಯ ಅಂಚಿಗೆ ಬೇಸರ ನುಸುಳದಂತೆ ವಾಲ್ಟರ್ ಸ್ಯಾಲೆಸ್ ಎಚ್ಚರ ವಹಿಸಿದ್ದಾನೆ. ಅವನು ಇದರಲ್ಲಿ ನಿರತನಾಗಿರುವಾಗ ಚಿತ್ರದ ಹಿನ್ನೆಲೆ ಸಂಗೀತ ಅವನಿಗೆ ಬೆಂಬಲವಾಗಿ ನಿಲ್ಲುತ್ತದೆ.

ಚಿತ್ರದಲ್ಲಿ ಅತಿ ಕಡಿಮೆ ಮಾತನಾಡುವ ಅರ್ನೆಸ್ಟೋ ಚೆಗೆವಾರ ಹೆಚ್ಚು ಮಾತನಾಡುವ ಆಲ್ಬರ್ಟೋ ಗ್ರೆನಾಡೋಗಿಂತ ಹೆಚ್ಚು ಪ್ರಭಾವ ಬೀರುತ್ತಾನೆ. ಅರ್ನೆಸ್ಟೋನ ಪಾತ್ರ ವಹಿಸಿರುವ ಗಾಲ್ ಗಾರ್ಸಿಯಾ ಬರ್ನಾಲ್‌ನ ಸೂಕ್ಷ್ಮ ರೂಪದ ಅಭಿನಯ ಸಾಮರ್ಥ್ಯ ಎದ್ದು ಕಾಣುವುದು ಅವನ ಕಿರಿದಾದ ಕಣ್ಣುಗಳ ಚಲನೆಯಲ್ಲಿ. ಯೋಚನಾಮಗ್ನ ಮುಖಭಾವದಲ್ಲಿ, ಆಲ್ಬರ್ಟೋ ಅಬ್ಬರಿಸುತ್ತ, ಕುಣಿದಾಡುತ್ತ, ಮಾತಾಡುತ್ತ, ನಿರರ್ಥಕವೆನ್ನಿಸುವ ಘಟನೆಗಳಲ್ಲಿ ಭಾಗವಹಿಸುತ್ತಿದ್ದರೆ ಅರ್ನೆಸ್ಟೋನ ಒಂದು ನೋಟ, ಒಂದು ಮಾತು ಅದೆಲ್ಲವನ್ನೂ ಮೀರಿ ನಿಲ್ಲುತ್ತದೆ.

ಸ್ನೇಹಿತರಿಬ್ಬರು ಅರ್ಜಂಟೀನ, ಚಿಲಿ ಮತ್ತು ಪೆರು ದೇಶಗಳಲ್ಲಿ ಪ್ರಯಾಣಿಸುತ್ತಾರೆ. ದೇಶದಿಂದ ದೇಶಕ್ಕೆ ಹೋದಂತೆ ಹಿನ್ನೆಲೆ ದೃಶ್ಯಗಳಲ್ಲಿ ತೀವ್ರತರ ಬದಲಾವಣೆ ಕಂಡರೂ ಗುಣಮಟ್ಟ ಅಷ್ಟೇ ಇರುತ್ತದೆ. ಜನರ ಬದುಕಿಗೆ ಮುಖಾಮುಖಿಯಾಗಿ ನಿಂತು, ಕಣ್ಣಿನ ಪಾಪೆಯಿಂದ ಆಚೆ ಅವರ ವೇದನೆ ಹಾರಿ ಹೋಗದಂತೆ, ಮೈ-ಮುಖ ಚಲಿಸದೆ, ಅನಾಮತ್ತಾಗಿ ಸಂಕಟದಿಂದ ಸ್ವೀಕರಿಸುತ್ತಾನೆ ಅರ್ನೆಸ್ಟೋ. ಅಮೆರಿಕದ ಬಂಡವಾಳಶಾಹಿ ದಬ್ಬಾಳಿಕೆಯಲ್ಲಿ ಜನರು ಸುಮ್ಮನೆ ಮುರುಟಿ ಹೋಗುವುದನ್ನು ಕಂಡು ಜರ್ಜರಿತನಾಗುತ್ತಾನೆ. ಚಿಲಿಯಲ್ಲಿನ ಮೈನಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು ಈಗ ಕೆಲಸವಿಲ್ಲದೆ ಅಸಹಾಯಕರಾದವರ ನೋಟ ಎಂಥವರನ್ನೂ ನಡುಗಿಸುವಂಥಾದ್ದು. ಈ ಸಂಗತಿಯನ್ನು ನಮ್ಮ ಮನಮುಟ್ಟಿಸಲು ನಿರ್ದೇಶಕ ಯಕ್ತವಾದ ದೃಶ್ಯವೊಂದನ್ನು ಬಳಸಿದ್ದಾನೆ. ಅದರಲ್ಲಿ ಮೊದಲು ಒಂದೆರಡು ದೂರ ಚಿತ್ರಿಕೆ (ಲಾಂಗ್ ಶಾಟ್)ಗಳಲ್ಲಿ ಆ ಪ್ರದೇಶ ಬರಡಾಗಿರುವುದನ್ನು ಕಾಣುತ್ತೇವೆ. ಅಲ್ಲೊಂದು ಕಡೆ ನರಪೇತಲ ದಂಪತಿಗಳು, ಪರಸ್ಪರ ಆಸರೆಯಾಗಿ ಕುಳಿತಿರುತ್ತಾರೆ. ಅವರ ದೃಷ್ಟಿ ಅಷ್ಟು ದೂರದಲ್ಲಿ ಕುಳಿತ ಅರ್ನೆಷ್ಟೋನ ಮೇಲೆ. ಇದರ ನಂತರ ಹತ್ತಿರದಲ್ಲಿ ಕೊಂಚ ಹೆಚ್ಚಿನ ಸಮಯ ಅವರ ನಿರ್ಭಾವ ನೋಟ ನಮಗೆದುರಾಗುತ್ತದೆ. ಅವು ಅವರ ಆಗಿನ ಪರಿಸ್ಥಿತಿಯ ಬಗ್ಗೆ ಸುದೀರ್ಘ ವ್ಯಾಖ್ಯಾನ ನೀಡುತ್ತವೆ. ಅವರಲ್ಲೇ ದೃಷ್ಟಿ ನೆಟ್ಟಿದ್ದ ಅರ್ನೆಷ್ಟೋ ತನ್ನ ಪ್ರೇಯಸಿ ದಾರಿ ಖರ್ಚಿಗೆಂದು ಕೊಟ್ಟಿದ್ದ ಹದಿನೈದು ಡಾಲರನ್ನು ಕೊಡುತ್ತಾನೆ. ಅವರ ಸಂಗಡ ಅತಿ ಕಡಿಮೆ ಮಾತುಗಳಲ್ಲಿ ಅಹಂಕಾರ, ದಬ್ಬಾಳಿಕೆ. ಶೋಷಣೆ ಮತ್ತು ತುಳಿತಕ್ಕೆ ಒಳಗಾದವರ ಬಗ್ಗೆ ತನ್ನ ಕಾಳಜಿಯನ್ನು ವ್ಯಕ್ತಪಡಿಸುತ್ತಾನೆ. ಆಗ ಹತ್ತಿರದಲ್ಲಿ ಕಾಣುವ ಅವನ ಮುಖಭಾವವನ್ನು ವಿವರಿಸುವುದು ಕಷ್ಟ. ಈ ಪ್ರಸಂಗ ಅವನಲ್ಲಿ ಎಷ್ಟು ತುಂಬಿಕೊಂಡಿರುತ್ತದೆ ಎಂದರೆ ಮುಂದೆ ದುಡ್ಡಿನ ಅಗತ್ಯ ಉಂಟಾದಾಗ ಒಂದೆರಡು ಸಲ ಆಲ್ಬರ್ಟೋ ಗ್ರೆನಾಡೋ ಕೇಳಿದರೂ ಅವನು ಬಾಯಿ ಬಿಡುವುದಿಲ್ಲ. ಕೊನೆಗೊಮ್ಮೆ ಮೋಟಾರ್ ಸೈಕಲ್ಲನ್ನು ರಿಪೇರಿ ಮಾಡಿಸಬೇಕಾದಾಗ ನಿಜ ಸಂಗತಿಯನ್ನು ಹೇಳಿ ಆಲ್ಬರ್ಟೋನನ್ನು ಬೆಚ್ಚಿ ಬೀಳಿಸುತ್ತಾನೆ. ಅವರು ಮೋಟಾರ್ ಸೈಕಲ್ಲನ್ನು ಅಲ್ಲಿಯೇ ಬಿಟ್ಟು ಹೋಗಬೇಕಾಗುತ್ತದೆ.

ಅರ್ನೆಸ್ಟೋ ಮತ್ತು ಆಲ್ಬರ್ಟೋರೊಂದಿಗೆ ನಾವು ಪೆರು ದೇಶವನ್ನು ಪ್ರವೇಶಿಸುವುದಕ್ಕಿಂತ ಮುಂಚಿನಿಂದಲೂ ಚಿತ್ರದ ಸಮರ್ಥ ಫೋಟೋಗ್ರಾಫರ್ ಮೂಲಕ ದಕ್ಷಿಣ ಅಮೆಕದ ಪ್ರಕೃತಿಯ ಸಿರಿ ನಮ್ಮ ಮೈಯನ್ನು ತುಂಬಿಕೊಳ್ಳುತ್ತದೆ. ಇವುಗಳಿಂದ ಹೊರತಾದ ವಿಸ್ತೃತ ದೃಶ್ಯಗಳಿಂದ ಅರ್ನೆಸ್ಟೋನ ಅಂತರಾಳದಲ್ಲಿ ಹುದುಗಿದ್ದ ತನ್ನವರ ಬಗ್ಗೆ ಪ್ರೀತಿಯನ್ನು ಮತ್ತು ಅಂತಃಕರಣ ಸಾಂದ್ರಗೊಂಡ ರೂಪವನ್ನು ಕಾಣುತ್ತೇವೆ. ಇದು ನಡೆಯುವುದು ಅಲ್ಲಿನ ಸ್ಯಾನ್ ಪಾಬ್ಲೋ ಎನ್ನುವ ಕುಷ್ಠ ರೋಗಿಗಳ ಪುನರ್ವಸತಿಯ ಕಾಲೋನಿಯಲ್ಲಿ. ದೇಶ-ಪ್ರದೇಶಗಳ `ಸ್ಥಿತಿ-ಗತಿ’ಗಳಿಗೆ ಬದಲಾಗಿ ನಿರ್ದೇಶಕ ಈಗ ಕೇವಲ ಮನುಷ್ಯರಿಗೆ ಸಂಬಂಧಿತ ವಿಷಯಗಳಲ್ಲಿ ತೊಡಗುತ್ತಾನೆ. ಕುಷ್ಠ ರೋಗಿಗಳ ಬದುಕು, ಸಂಕಟ, ಪ್ರತ್ಯೇಕ ವಾಸ ಹಾಗೂ ಅವರ ಒಟ್ಟಾರೆ ಮಾನಸಿಕ ಸ್ಥಿತಿಯನ್ನು ಮಂಡಿಸುತ್ತಾನೆ ಅಲ್ಲಿರುವ ಗಂಡಸರು-ಹೆಂಗಸರ ಜೊತೆ ಅರ್ನೆಸ್ಟೋ ಯಾವುದೇ ರೀತಿಯ ಅಂತರವನ್ನು ಭಾವಿಸದಂತೆ ಚರ್ಚಿಸುವುದರ ಮೂಲಕ ನಿರ್ದೇಶಕ ವಾಲ್ಟರ್ ಸ್ಯಾಲೆಸ್ ಅರ್ನೆಸ್ಟೋನ ಇಂಗಿತವನ್ನು ನಮ್ಮಲ್ಲಿ ನೆಲೆಯೂರಿಸುತ್ತಾನೆ. ಕುಷ್ಠ ರೋಗಿಗಳ ಪುನರ್ವಸತಿಯಲ್ಲಿ ತೊಡಗಿರುವವರು ಹಲಕೆಲವು ನಿಬಂಧನೆಗಳನ್ನು ಆಚರಣೆಗೆ ತಂದಿರುತ್ತಾರೆ. ನಿರ್ದಿಷ್ಟ ಸಮಯದಲ್ಲಿ ಏಸುವಿಗೆ ಪ್ರಾರ್ಥನೆ ಸಲ್ಲಿಸಬೇಕು ಮತ್ತು ಅವರ ಮೈ-ಕೈ ಮುಟ್ಟುವವರು ಕೈಗವಸುಗಳನ್ನು ಹಾಕಿಕೊಳ್ಳಬೇಕು, ಎಂದು. ಅರ್ನೆಸ್ಟೋ ಇವುಗಳನ್ನು ಧಿಕ್ಕರಿಸುತ್ತಾನೆ. ಜೀವನೋತ್ಸಾಹವೇ ಸೊನ್ನೆಯಾದ ಅವರಿಗೆ ಸಾಧ್ಯವಾದಷ್ಟು ಸಂತೋಷ ಕಾಣಲು ಹುರಿದುಂಬಿಸುತ್ತಾನೆ. ಅವರಿಗೆ ಒದಗಿಸಲಾಗಿದ್ದ ವಸತಿ ನದಿಯ ಆಚೆಯ ದಡದಲ್ಲಿರುತ್ತದೆ ಮತ್ತು ಈಚೆಯ ಕಡೆ ಅವರ ಯೋಗಕ್ಷೇಮದ ನಿರ್ವಹಣೆಯ ತಂಡವಿರುತ್ತದೆ. ಈಗ ಚಿತ್ರ ಬಿಗಿ ಎನಿಸುವ ಹಂತ ತಲುಪುತ್ತದೆ. ಅದರ ಗತಿ ಕೊಂಚ ನಿಧಾನವಾಗುತ್ತದೆ. ಅಂದು ಅರ್ನೆಸ್ಟೋ ಇಪ್ಪತ್ನಾಲ್ಕನೇ ವರ್ಷದ ಹುಟ್ಟು ಹಬ್ಬ ಆಚರಿಸುವ ಸಂದರ್ಭ ಇದಕ್ಕೆ ಕಾರಣ.

ನಮ್ಮೆದುರಿನ ದೂರ ಚಿತ್ರಿಕೆ (ಲಾಂಗ್ ಶಾಟ್)ಗಳಲ್ಲಿ ಈಗ ಕತ್ತಲಿಳಿದ, ದೂರದಲ್ಲಿ ಕುಷ್ಠ ರೋಗಿಗಳ ಬೀಡು ಆಚೆಯ ದಡದಲ್ಲಿ. ಈಚೆಯ ದಡಲ್ಲಿ ನಿರ್ವಹಣಾ ತಂಡದೊಡನೆ ಅರ್ನೆಸ್ಟೋ ಮತ್ತು ಆಲ್ಬರ್ಟೋ ಇರುತ್ತಾರೆ. ಮಧ್ಯೆ ಎಲ್ಲವನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತ ಕಪ್ಪು ಛಾಯೆಯ ನದಿ ಸುಮ್ಮನೆ ಹರಿಯುತ್ತಿರುತ್ತದೆ. ಅಲ್ಲಿನ ಮೇಲ್ವಚಾರಕರು ಹುಟ್ಟುಹಬ್ಬದ ಸಮಾರಂಭದ ಆಚರಣೆಗಾಗಿ ವ್ಯವಸ್ಥೆ ಮಾಡಿರುತ್ತಾರೆ. ಅರ್ನೆಸ್ಟೋ ಈಗ ಮತ್ತಷ್ಟು ಭಾವುಕನಾಗುತ್ತಾನೆ ಸ್ವಲ್ಪ ಸಮಯದ ನಂತರ ಅವನು ಕುಷ್ಠರೋಗಿಗಳ ಜೊತೆ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವ ಆಭಿಲಾಷೆಯನ್ನು ಪ್ರಕಟಿಸುತ್ತಾನೆ. ಆಲ್ಬರ್ಟೋನಿಂದ ಹಿಡಿದು ಯಾರೂ ಅದನ್ನು ಒಪ್ಪುವುದಿಲ್ಲ. ಆದರೆ ಅವನು ಅವರೆಲ್ಲರ ಪ್ರತಿರೋಧವನ್ನು ಲೆಕ್ಕಿಸದೆ ಕೊರೆಯುವ ನದಿಯಲ್ಲಿ ಈಜಿಕೊಂಡು ರೋಗಿಗಳು ಇರುವ ಕಡೆ ಹೋಗುತ್ತಾನೆ. ನಿರ್ದೇಶಕನಿಗೆ ಈಗ ಸಾಂದ್ರಗೊಂಡ ಮೂರು ಸ್ಥಳಗಳು ಒದಗುತ್ತವೆ – ಅರ್ನೆಸ್ಟೋ ಮತ್ತು ಎರಡು ದಡದಲ್ಲಿರುವವರು.

ವಾಲ್ಟರ್ ಸ್ಯಾಲೆಸ್ ಇಲ್ಲಿ ನಾವು ಮತ್ತಷ್ಟು ಬಿಗಿಯಾಗುವಂತೆ ಹೆಚ್ಚಿನ ಹತ್ತಿರದ ದೃಶ್ಯಗಳನ್ನು ಉಪಯೋಗಿಸಿದ್ದಾನೆ. ಅರ್ನೆಸ್ಟೋ ರೋಗಿಗಳಿದ್ದಲ್ಲಿಗೆ ಹೋಗಿ, ಅವರ ಅಂತಃಕರಣವನ್ನು ಕಲಕಿ ಪುಳಕಗೊಳ್ಳುವಂತೆ ಮಾಡಿ, ಅವರು ನಡೆಸುವ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗವಹಿಸುತ್ತಾನೆ. ಮಾನವಕುಲ ಮತ್ತು ದೇಶ-ಜನರ ಬಗ್ಗೆ ಅರ್ನೆಸ್ಟೋನಲ್ಲಿ ಇರುವ ಕಾಳಜಿಯನ್ನು, ಶೋಷಿತರ ಬಗ್ಗೆ ಇರುವ ತೀವ್ರತರ ಪ್ರತಿಕ್ರಿಯೆಯನ್ನು, ಮಾನವೀಯ ಪರಿಧಿಯಲ್ಲಿ ಎಲ್ಲರನ್ನೂ ಒಂದುಗೂಡಿಸಬೇಕು   ಎನ್ನುವ ಹಂಬಲವನ್ನು ಯಾವುದೇ ರೀತಿಯ ಘೋಷಣೆಗಳಿಲ್ಲದೆ, ಯಾವುದೇ ಸೂಕ್ಷ ವಿಷಯವನ್ನು ವಾಚ್ಯವಾಗಿಸದೆ ನಿರ್ದೇಶಕ ಸಮರ್ಥವಾಗಿ ಪ್ರಕಟಿಸುತ್ತಾನೆ; ತನ್ನ ಆಶಯವನ್ನು ಈಡೇರಿಸಿಕೊಳ್ಳುತ್ತಾನೆ. ಯಾವುದೇ ರೀತಿಯ ಕಥಾವಸ್ತುವಿನ ಬೆಂಬಲವಿಲ್ಲದೆ ಕೇವಲ ಸಾಕ್ಷ್ಯಚಿತ್ರವಾಗಿಬಿಡುವ ಅಪಾಯದಿಂದ ಪಾರಾಗುವುದೆಂದರೆ ಅದು ನಿರ್ದೇಶಕನ ಸಾಮರ್ಥ್ಯಕ್ಕೆ, ಪರಿಭಾವಿಸುವ ಕ್ರಮಕ್ಕೆ ನಿಜಕ್ಕೂ ದೊಡ್ಡ ಸವಾಲು. ಈ ಪರೀಕ್ಷೆಯಲ್ಲಿ ಔಟ್‌ ಆಫ್ ಔಟ್‌ ಎನ್ನುತ್ತಾರಲ್ಲ ಹಾಗೆ ನೂರಕ್ಕೆ ನೂರು ಅಂಕ ಕೊಡದಿರಲು ಯಾವ ಪರೀಕ್ಷಕನಿಗೆ ಸಾಧ್ಯ ಎನ್ನಿಸುವುದು ತೀರ ಸಹಜ.

ಹೀಗೆ ಹುಟ್ಟು ಪಡೆದ ಅರ್ನೆಸ್ಟೋ ಗೆವಾರ ಕ್ರಾಂತಿಕಾರಿ ಚೆಗೆವಾರನಾಗಿ ರೂಪುಗೊಂಡು ಪ್ರಖ್ಯಾತನಾದದ್ದು ಅನಂತರದ ಬೆಳವಣಿಗೆ. `ಚೆ’ ಎಂದರೆ ಅರ್ಜಂಟೀನಾದ ಆಟಕ್ಕೊಂದು ಅಡ್ಡ ಹೆಸರು. ಅವನು ದಕ್ಷಿಣ ಅಮೆರಿಕವನ್ನೆಲ್ಲ ಒಂದಾಗಿಸುವುದು ಮುಂತಾದ ಇನ್ನೂ ಕೆಲವು ಉದ್ದೇಶಗಳನ್ನು ಹೊಂದಿದ್ದನ್ನು ಒಪ್ಪದಿರುವವರು ಕಡಿಮೆ. ಆದರೆ ಅವನು ಆರಿಸಿಕೊಂಡ ಮಾರ್ಗ ಪ್ರಶ್ನಾರ್ಹ ಎನ್ನುವವರಿದ್ದಾರೆ. ಈ ಕಾರಣಕ್ಕೋ ಅಥವ ಮತ್ತಾವುದಕ್ಕೋ ಅವನು ಪ್ರಾಣ ತೆರಬೇಕಾಗಿ ಬಂದದ್ದು ನಂತರದ ರಾಜಕೀಯ ಬೆಳವಣಿಗೆ. ಅದೇನೇ ಇದ್ದರೂ ಸುಮಾರು ಎರಡು ಗಂಟೆಯ ಈ ಚಿತ್ರಕ್ಕೆ ಹಲವು ದೇಶದವರ ಕೊಡುಗೆ ಇದೆ – ನಿರ್ದೇಶಕರು ಬ್ರೆಜಿ಼ಲ್, ನಿರ್ಮಾಪಕರು ಅಮೆರಿಕ, ಚಿತ್ರಕಥೆ ಬರೆದವರು ಪೋರ್ಟೋ ರೀಕ, ಅರ್ನೆಷ್ಟೋ ಪಾತ್ರಧಾರಿ ಗಾಲ್ ಗಾರ್ಸಿಯಾ ಬರ್ನಾಲ್ ಮೆಕ್ಸಿಕೋ ಮತ್ತು ಆಲ್ಬರ್ಟೋ ಪಾತ್ರಧಾರಿ ರೋಡ್ರಿಗೋ ದೆಲಾ ಸೆರ್ನ ಅರ್ಜಂಟೀನ. ಇವರೆಲ್ಲರ ಒಟ್ಟು ಪ್ರಯತ್ನದ ಫಲವಾಗಿ 2005ರ ಇಂಗ್ಲಿಷ್ ಭಾಷೆಯಲ್ಲದ ಅತ್ಯುತ್ತಮ ಚಲನಚಿತ್ರವೆಂದು ಬಾಫ್ತಾ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನೂ ಒಳಗೊಂಡಂತೆ ಇತರ ಒಂಬತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವ ಈ ಚಿತ್ರವನ್ನು ನೋಡಿದ ಮೇಲೆ ನಮ್ಮ ಕೈ ಚಪ್ಪಾಳೆ ಹೊಡೆಯದೆ ಹೇಗೆ ಸುಮ್ಮನಿರುತ್ತದೆ, ಹೇಳಿ?