‘ತಡವಾಗಿದೆ. ಯುದ್ಧವು ರಸ್ತೆಬದಿಯಲ್ಲಿ ಮಲಗಿದೆ, ತಲೆದಿಂಬಿಗಾಗಿ  ಜೀವಗಳನ್ನು ತುಂಬಿದ ಗೋಣಿಯನ್ನು ಇಟ್ಟುಕೊಂಡಿದೆ, ಎಷ್ಟು ತಡವಾಗಿದೆಯೆಂದರೆ, ಕವಿಗಳು ಎಚ್ಚರವಾಗುತ್ತಿದ್ದಾರೆ’ ಎಂದು ಬರೆಯುವ ಲ್ಯಾಟ್ವಿಯಾ ದೇಶದ ಕವಿ ಅಮಾಂಡ ಐಜಪ್ಯುರಿಯೆತ್ರ, ಪತ್ರಿಕೆಗಳ ಸಾಹಿತ್ಯ ವಿಭಾಗದ ಸಂಪಾದಕರಾಗಿದ್ದರು. ಬಹಿಷ್ಕೃತರೆಂದು ಪರಿಗಣಿಸಲ್ಪಟ್ಟ ಅನೇಕ ಕವಿಗಳ ಕವನಗಳನ್ನು ಪ್ರಕಟಿಸಿದರು. ಅನಾಗರಿಕ ಜಗತ್ತಿನಲ್ಲಿ ಆವಾಗಾವಾಗ ಕಾಣುವ ಅಲ್ಪ ಸೌಂದರ್ಯವನ್ನು ಗುರುತಿಸಿ ತಾವೂ ಕವನಗಳನ್ನು ಬರೆದಿದ್ದಾರೆ. ಅವರ ಕವನಗಳಲ್ಲಿ ಕಾವ್ಯವಿಷಯದ ವಿಸ್ತಾರವಿದೆ. ಕಾವ್ಯಸೃಷ್ಟಿ, ಸ್ವ-ಮನನ, ಯುದ್ದದ ಭೀತಿ, ದಬ್ಬಾಳಿಕೆಯ ಆಡಳಿತದಡಿಯಲ್ಲಿನ ಬದುಕಿನ ಕುರಿತ ಪ್ರತಿಬಿಂಬಗಳಿವೆ. ಅವರ ಕವಿತೆಗಳು ಇಂ‍ಗ್ಲಿಷ್ ಗೆ ಅನುವಾದಗೊಂಡಿದ್ದು,  ಇಂಗ್ಲಿಷ್‍ ಮೂಲದಿಂದ ಎಸ್‍. ಜಯಶ್ರೀನಿವಾಸ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.  

 

ಲ್ಯಾಟ್ವಿಯಾ (LATVIA) ದೇಶದ ಕವಿ ಅಮಾಂಡ ಐಜ಼ಪ್ಯುರಿಯೆತ್ರ
(AMANDA AIZPURIETE) ಐದು ಕವನಗಳು

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

1956ರಲ್ಲಿ ಜನಿಸಿದ ಅಮಾಂಡ ಐಜ಼ಪ್ಯುರಿಯೆತ್ ಲ್ಯಾಟ್ವಿಯನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ 1974-1979ರ ಅವಧಿಯಲ್ಲಿ ಭಾಷಾವಿಜ್ಞಾನ ಹಾಗೂ ತತ್ವಶಾಸ್ತ್ರವನ್ನು ಕಲಿತರು ಹಾಗೂ ಮಾಸ್ಕೋದಲ್ಲಿರುವ ಮ್ಯಾಕ್ಸಿಮ್ ಗೋರ್ಕಿ ಲಿಟ್ರೆಚರ್ ಇನ್ಸ್ಟಿಟ್ಯೂಟ್ ನಲ್ಲಿ ಭಾಷಾಂತರ ಕ್ಷೇತ್ರದಲ್ಲಿ ತರಬೇತಿ ಪಡೆದರು. ಇಲ್ಲಿರುವಾಗ ಅವರು ಯುಕ್ರೇಯಿನ್ ಹಾಗೂ ಅಜ಼ರ್ಬೈಜಾನಿನ ಹಲವಾರು ಅನುವಾದಕರನ್ನು ಭೇಟಿಯಾದರು ಹಾಗೂ ಆ ದೇಶಗಳಿಂದ ಹೊರಬರುತ್ತಿರುವ ಮಹತ್ವದ ಬರವಣಿಗೆಗಳ ಬಗ್ಗೆ ತಿಳಿದುಕೊಂಡರು. 1980ರ ದಶಕದಲ್ಲಿ ಅವರು ‘ಅವೊಟ್ಸ’ (ಚಿಲುಮೆ) ಎಂಬ ಹೆಸರಿನ ಪತ್ರಿಕೆಯ ಕಾವ್ಯ ವಿಭಾಗದ ಸಂಪಾದಕರಾಗಿದ್ದಾಗ ಈ ಹಿಂದೆ ಸೋವಿಯತ್ ಬೆಂಬಲಿತ ಆಡಳಿತದಡಿಯಲ್ಲಿ ಬಹಿಷ್ಕೃತರಾದ ಹಲವಾರು ಲ್ಯಾಟ್ವಿಯನ್ ಬರಹಗಾರರ ಮೊದಲ ಬರಹಗಳನ್ನು ಪ್ರಟಸಿದರು. ‘ಅವೊಟ್ಸ’ ಅಲ್ಲದೇ ಅವರು ‘ಅಸ್ಪಸಿಜ’ ಹೆಸರಿನ ದಿನಪತ್ರಿಕೆಯ, ‘ಕರೊಗ್ಸ’ (ಬಾವುಟ) ಮತ್ತು ‘ವಿಡೆಸ್ ವೆಸ್ಟಿಸ್’ (ಹರಿಕಾರ) ಹೆಸರಿನ ಮ್ಯಾಗಝಿನ್ಗಳ ಸಹ-ಸಂಪಾದಕರಾಗಿದ್ದರು.

ಲ್ಯಾಟ್ವಿಯಾ ದೇಶವು ಸೋವಿಯತ್ ಯೂನಿಯನಿನ ಕಮ್ಯೂನಿಸ್ಟ್ ಆಡಳಿತದಡಿಯಲ್ಲಿದ್ದ ಕಾಲದಿಂದ ಅವರ ಕವನ ಸಂಕಲನಗಳು ಪ್ರಕಟವಾಗುತ್ತಿವೆ. ಆಗಿನ ಕಾಲದಲ್ಲಿ ಒಬ್ಬರೇ ಪ್ರಕಾಶಕರಿದ್ದರು ಹಾಗೂ ‘ಆಂತರಿಕ ಸಮೀಕ್ಷೆ’ ಎಂಬುದು ಅತಿ ಮುಖ್ಯವಾಗಿತ್ತು. ಈ ‘ಆಂತರಿಕ ಸಮೀಕ್ಷೆ’ಯ ಪ್ರಕಾರ ಪ್ರಕಟಣೆಗಾಗಿ ಸಲ್ಲಿಸಿದ ಪುಸ್ತಕವು ಒಬ್ಬ ಹೆಸರಾಂತ ಲೇಖಕರ ವಿಮರ್ಶೆಗೆ ಒಳಗಾಗಬೇಕಿತ್ತು ಹಾಗೂ ಅವರ ಶಿಫಾರಸು ನೀಡಿದ ನಂತರವೇ ಪ್ರಕಟಣೆಗೆ ಒಪ್ಪಿಗೆ ಕೊಡಲಾಗುತ್ತಿತ್ತು.

ಅಮಾಂಡ ಐಜ಼ಪ್ಯುರಿಯೆತ್ರ ಕಾವ್ಯವು ಒಂದು ಕ್ರೂರ, ಅನಾಗರಿಕ ಜಗತ್ತಿನಲ್ಲಿ ಆವಾಗಾವಾಗ ಕಾಣುವ ಅಲ್ಪ ಸೌಂದರ್ಯವನ್ನುದ್ದೇಶಿಸಿ ಮಾತಾಡುತ್ತದೆ; ಹಾಗೂ ಈ ಸೌಂದರ್ಯವನ್ನು ಸಂಬಂಧಗಳಲ್ಲಿ ಕಂಡುಬರುವ ತಾತ್ಕಾಲಿಕವಾದ ಉತ್ಸಾಹದ ಕ್ಷಣಗಳನ್ನಾಗಿ ಪರಿವರ್ತಿಸುತ್ತದೆ. ಹೆಚ್ಚಿನ ಲ್ಯಾಟ್ವಿಯದ ಕವಿಗಳ ಹಾಗೆ “ಕ್ಲಾಸಿಕ್ಸ”ಗಳನ್ನು ಕಲಿತ ಇವರು, ತಮ್ಮ ಕಾವ್ಯದಲ್ಲಿ ಪಾಶ್ಚಾತ್ಯ ಪುರಾಣಗಳನ್ನು ಉಲ್ಲೇಖಿಸುತ್ತಾ ಅವುಗಳಲ್ಲಿರುವ ಅಮರತ್ವದ ಹಾಗೂ ಅಳಿವಿನ ಸಂಕೇತಗಳನ್ನು ಉಪಯೋಗಿಸುತ್ತಾರೆ. ಅಮಾಂಡ ಐಜ಼ಪ್ಯುರಿಯೆತ್ರು ಒಬ್ಬ ಅನುಭಾವಿ ಕವಿಯಂತೆ. “ನಾನು ಅತಿ ನಾಟಕೀಯವಾದ ಬದಲಾವಣೆಗಳ ಸಮಯಗಳಲ್ಲಿ ಬದುಕನ್ನು ನೋಡಿರುವೆ. ಹೋಗದ ಸ್ಥಳಗಳ ಬಗ್ಗೆ, ಜೀವಿಸದ ಬದುಕುಗಳ ಬಗ್ಗೆ ನಾನು ಬರೆಯುತ್ತೇನೆ,” ಎಂದೆನ್ನುತ್ತಾರೆ. ಯುದ್ಧವು ನಾಡಿನ ಮೇಲೆ ಹರಿದು ಹೋಗುವ ಅಲೆಯ ಹಾಗೆ; ಅದು ಅನಿವಾರ್ಯವೆಂದು ಅಮಾಂಡ ಐಜ಼ಪ್ಯುರಿಯೆತ್ರು ತಮ್ಮ ಒಂದು ಕವನದಲ್ಲಿ ಹೇಳುತ್ತಾರೆ:

ತಡವಾಗಿದೆ. ಯುದ್ಧವು ರಸ್ತೆಬದಿಯಲ್ಲಿ ಮಲಗಿದೆ
ತಲೆದಿಂಬಿಗಾಗಿ
ಜೀವಗಳನ್ನು ತುಂಬಿದ ಗೋಣಿಯನ್ನು ಇಟ್ಟುಕೊಂಡಿದೆ
ಎಷ್ಟು ತಡವಾಗಿದೆಯೆಂದರೆ, ಕವಿಗಳು ಎಚ್ಚರವಾಗುತ್ತಿದ್ದಾರೆ.

ಗತಕಾಲದ ಬಗ್ಗೆ ಬರೆಯುವಾಗ ಅಮಾಂಡ ಐಜ಼ಪ್ಯುರಿಯೆತ್ರು ಗದ್ಯ ಮತ್ತು ಪದ್ಯದ ಸಂಯೋಗವೊಂದನ್ನು ತಮ್ಮ ಕಾವ್ಯದಲ್ಲಿ ಬರಮಾಡಿಕೊಳ್ಳುತ್ತಾರೆ. ಇದರಿಂದ ಓದುಗರಿಗೆ ಕವಿಯು ಆಲ್ಲಿಯೇ ಇದ್ದಹಾಗಿನ ವಿಶ್ವಾಸ ಹುಟ್ಟುತ್ತದೆ.

ಅಮಾಂಡ ಐಜ಼ಪ್ಯುರಿಯೆತ್ರ ಎಂಟು ಕವನ ಸಂಕಲನಗಳು ಹಾಗೂ ಒಂದು ಕಾದಂಬರಿ ಪ್ರಕಟವಾಗಿವೆ ಹಾಗೂ ಇವರ ಕವನಗಳು ಸುಮಾರು ಹದಿನಾಲ್ಕು ಭಾಷೆಗಳಲ್ಲಿ ಅನುವಾದವಾಗಿವೆ. ಜರ್ಮನಿ, ಫ಼್ರಾನ್ಸ, ರಶ್ಯಾ, ಕ್ಯಾನಡಾ, ಅಮೇರಿಕ, ಐಸ್ಲ್ಯಾಂಡ್, ಸ್ಕ್ಯಾಂಡಿನೇವಿಯಾ ಹಾಗೂ ಬಾಲ್ಟಿಕ್ ದೇಶಗಳಲ್ಲಿ ಪ್ರಕಟವಾದ ಹಲವಾರು ಕವನ ಸಂಗ್ರಹಗಳಲ್ಲಿ ಅಮಾಂಡ ಐಜ಼ಪ್ಯುರಿಯೆತ್ರ ಕವನಗಳು ಪ್ರಕಟವಾಗಿವೆ. ಅಮಾಂಡ ಐಜ಼ಪ್ಯುರಿಯೆತ್ ಅವರು ಉತ್ತಮ ಅನುವಾದಕರೂ ಆಗಿದ್ದು ಆನಾ ಅಖ್ಮತೊವಾ, ಜೊಸೆಫ಼್ ಬ್ರಾಡ್ಸ್ಕಿ, ಜಾರ್ಜ್ ಟ್ರಾಕ್ಲ್, ಫ಼್ರಾಂಜ಼್ ಕಾಫ಼್ಕ್, ಮತ್ತು ವರ್ಜೀನಿಯಾ ವುಲ್ಫ್ ಅವರ ಕೃತಿಗಳನ್ನು ಲ್ಯಾಟ್ವಿಯನ್ ಭಾಷೆಗೆ ಅನುವಾದ ಮಾಡಿದ್ದಾರೆ.

ಇಲ್ಲಿ ಅನುವಾದಿಸಿರುವ ಐದು ಕವನಗಳಲ್ಲಿ ಅವರ ಕಾವ್ಯವಿಷಯದ ವಿಸ್ತಾರವನ್ನು ನೋಡಬಹುದು. ಕಾವ್ಯಸೃಷ್ಟಿ, ಸ್ವ-ಮನನ, ಯುದ್ಧ, ಯುದ್ದದ ಭೀತಿ, ದಬ್ಬಾಳಿಕೆಯ ಆಡಳಿತದಡಿಯಲ್ಲಿನ ಬದುಕು – ಹೀಗೆ ಇಲ್ಲಿ ಅವರ ಕಾವ್ಯದಲ್ಲಿ ಹಲವಾರು ಛಾಯೆಗಳಿವೆ. ಜೀವನದ, ಮನಸ್ಸಿನ ಬಹು ಆಯಾಮಗಳನ್ನು ಅವರು ತಮ್ಮ ಕಾವ್ಯದಲ್ಲಿ ಚಿತ್ರಿಸಿದ್ದಾರೆ.

– 1 –
ಬಹುಶಃ ಅದೇ ಉತ್ತಮೆವೆಂದನಿಸುತ್ತದೆ

ಬಹುಶಃ ಅದೇ ಉತ್ತಮೆವೆಂದನಿಸುತ್ತದೆ –
ಮುದ್ರಣಾಲಯಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಇರುವುದು,
ಆ ಅಚ್ಚುಕಟ್ಟಾದ ಗಂಭೀರ ಅಕ್ಷರಗಳಿಗೆ ನನ್ನ ಪದಗಳ ತನಕ
ಬರುವುದಕ್ಕೆ ಅನುಮತಿ ಕೊಡದೇ ಇರುವುದು –
ಎಲ್ಲವನ್ನೂ ನನ್ನ ಕೈಬರಹದ ಕೊಂಕು ರೇಖೆಗಳಲ್ಲೇ ಬಿಟ್ಟುಬಿಡುವುದು,
ಅಂಕುಡೊಂಕು, ಏರುಪೇರು, ಜೀವನದ ಹಾಗೆ.

ಬರಹದಿಂದ ತುಂಬಿದ ಹಾಳೆಗಳನ್ನು ಮಡಿಸಿ
ಹಡಗುಗಳನ್ನಾಗಿ, ಹಕ್ಕಿಗಳನ್ನಾಗಿ, ಚಿಟ್ಟೆಗಳನ್ನಾಗಿ ಮಾಡಿ,
ಅವುಗಳನ್ನು ಆಕಾಶಕ್ಕೆ ಎಸೆಯಬೇಕು,
ಗಾಳಿಯೊಳಗೆ, ಬೆಂಕಿಯೊಳಗೆ, ನೀರಿನೊಳಗೆ ಎಸೆಯಬೇಕು.
ನಂತರ ಅವು ಬೂದಿಯಾಗಿ,
ಒದ್ದೆ ಕಾಗದದ ಚೂರುಗಳಾಗಿ, ಅಥವಾ ಬಳಲಿದ ಚಿಟ್ಟೆಗಳಾಗಿ ಬಂದು
ಪೂಜ್ಯಭಾವದಲ್ಲಿ ಭೂಮಿಯನ್ನು ಸ್ಪರ್ಶಿಸುವವು.

ಭೂಮಿಯು ನಾಲ್ಕು ಅರ್ಧಚಂದ್ರಾಕಾರದ ಎಸಳುಗಳ
ಹೂವೊಂದನ್ನು ಚಿಗುರಿಸುವುದು –
ನನ್ನ ಅತಿ ಸುಂದರವಾದ ಚೌಪದಿ.
ಗಾಳಿಯಲ್ಲಿ ಸಿಕ್ಕ ಪರಾಗವು ಹಾರುವುದು ಹೊಸ ಮಣ್ಣನ್ನು ಹುಡುಕಿ,
ಜನರು ಈ ವಿಲಕ್ಷಣ ಸುವಾಸನೆಯ ಗಾಳಿಯನ್ನು ಆಘ್ರಾಣಿಸುವರು …

ಮತ್ತೆ ಬೇರೊಂದು ಬದುಕಿನಲ್ಲಿ
ಬಂದು ನನ್ನನ್ನು ಅಪ್ಪಿಕೊಳ್ಳುವುದು ಪ್ರೇಮಿಯಾಗಿ ಮಾರ್ಪಟ್ಟ ಕವನವೊಂದು,
ನಾನು ಎಂದೋ ಮರೆತುಹೋದ ಕವನವೊಂದು.

ಮೂಲ: THAT PROBABLY WOULD BE BEST
ಲ್ಯಾಟ್ವಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದ: Ieva Lešinska

– 2 –
ನಾನು ನನ್ನ ಮರಿಮರಿಮರಿಮಗಳನ್ನು ಹೋಲುತ್ತೇನೆ

ನಾನು ನನ್ನ
ಮರಿಮರಿಮರಿಮಗಳನ್ನು ಹೋಲುತ್ತೇನೆ.
ಅವಳ ಹಾಗೆ, ನಾನೂ ಕಪ್ಪು ಉಡುಪುಗಳನ್ನು
ತೊಡಲು ಬಯಸುವೆ, ಹಳೇ ಚಿತ್ರಗಳನ್ನು ನೋಡಲು,
ಬರಿಗಾಲಲ್ಲಿ ನಡೆಯಲು – ಈಗಲೂ ನಡೆಯಲು
ಸಾಧ್ಯವಾಗುವ ಕೆಲವೇ ಕೆಲವು ರಸ್ತೆಗಳಲ್ಲಿ.
ಅವಳ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ.
ಸಮಯದ ಗಾಜಿನ ಎರಡೂ ಕಡೆ ಧೂಳು ಮುಚ್ಚಿದೆ,
ಆದರೂ ಕೆಲವು ಹೋಲಿಕೆಗಳನ್ನು ಗುರುತಿಸಬಹುದು:
ನನ್ನ ಹಾಗೆ, ಅವಳಿಗೂ ಕತ್ತಲ ಭಯವಿಲ್ಲ,
ಹೇಗೆ ಖುಷಿಯಾಗಿರಬೇಕೆಂದು ಗೊತ್ತಿಲ್ಲ.
ಅವಳಾಡುವ ಮಾತು ನನಗೆ ಕೇಳಿಸಲ್ಲ
ಅಥವಾ ಆರ್ಥವಾಗಲ್ಲ.
ಯಾರಂದರು ನನ್ನ ಕಣ್ಗಳಲ್ಲಿ ವಿಚಿತ್ರ ನೋಟವಿದೆಯೆಂದು?
ನಾನೊಂದು ಹಳೇ ಹೊಗೆಕವಿದ ಕನ್ನಡಿ
ಅದರೊಳು ನೋಡಿದಳು ಬಹಳ ಹೊತ್ತು
ನನ್ನ ಮರಿಮರಿಮರಿಮಗಳು
ಈ ದಿನ ಬೆಳಗ್ಗೆ.

ಮೂಲ: I RESEMBLE MY GREATGREATGREATGRANDDAUGHTER
ಲ್ಯಾಟ್ವಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದ: Ieva Lešinska

– 3 –
ದಿನಾ ಬೆಳಗ್ಗೆ ನಾವು ಯುದ್ಧಕ್ಕಿಳಿಯುತ್ತೇವೆ

ದಿನಾ ಬೆಳಗ್ಗೆ ನಾವು ಯುದ್ಧಕ್ಕಿಳಿಯುತ್ತೇವೆ
ನನ್ನ ವಿರುದ್ಧ ನೀನು
ನಿನ್ನ ವಿರುದ್ಧ ನಾನು

“ಹೋಗಲು ಬಿಡು ನನ್ನನ್ನು ಮರುಭೂಮಿಗೆ
ಶತ್ರುಗಳಿಲ್ಲದ ಕಡೆಗೆಲ್ಲಾದರೂ ಹೋಗಬೇಕು ನನಗೆ”
“ಮರುಭೂಮಿಗಳನ್ನೆಲ್ಲಾ ಬಹಳ ಹಿಂದೆಯೇ ಮುಚ್ಚಲಾಗಿದೆ”

“ಕುಡಿಯಲು ಬಿಡು ಸ್ವಲ್ಪ ನದಿಯ ನೀರನ್ನು
ಪರಾಗದಂತೆ ಆಕಾಶದಂತೆ ರುಚಿಯಾಗಿರುವ ಆ ಸಿಹಿ ನೀರನ್ನು
ನನ್ನ ಗಂಟಲಲ್ಲಿ, ಆತ್ಮದಲ್ಲಿ ನೆತ್ತರುಗಟ್ಟಿವೆ”
“ಎಲ್ಲರಂತೆ ನೀನೂ ನಿನ್ನ ನೆತ್ತರಿನ ಶೀಶೆಯಿಂದ ಕುಡಿ
ಆ ನದಿನೀರು ನಮಗೆ ವಿಷದ ಹಾಗೆ
ನಮ್ಮ ಆಕಾಶ ಉಪ್ಪು ಮತ್ತು ಹೊಗೆಯ ಆಕಾಶವಾಗಿದೆ.”

ನಾಳೆ ಮತ್ತದೇ ಸಮರ

ಬದಲಾಗಿರುವ ನೀನು
ಬದಲಾಗಿರುವ ನಾನು

ಮೂಲ: EACH MORNING WE GO TO WAR
ಲ್ಯಾಟ್ವಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದ: Mārta Ziemelis

– 4 –
ಆ ಶೀತಕಾಲ ಎವರೆಸ್ಟಿನ ಶಿಖರದಲ್ಲಿದ್ದಷ್ಟು ಛಳಿ ಇತ್ತು

ಆ ಶೀತಕಾಲ ಎವರೆಸ್ಟಿನ ಶಿಖರದಲ್ಲಿದ್ದಷ್ಟು ಛಳಿ ಇತ್ತು
ಅಸಹಾಯಕತೆಯ ಗಡಿಯಲ್ಲಿ ತಣ್ಣಗಿರುವ ಚೆಕ್ಪಾಯಿಂಟಿನ ಹಾಗೆ
ನಾವು ಹಲಗೆಗಳನ್ನು ಒಗೆದೆವು ನಮ್ಮ ಚಿಕ್ಕ ಒಲೆಯೊಳಗೆ
ಶ್ವೇತ ಶೂನ್ಯತೆಯೊಂದು ಕಿಟಕಿಗಾಜುಗಳನ್ನು ನೆಕ್ಕುತ್ತದೆ
ನಾವು ಕೋಣೆಯನ್ನು ಬೆಚ್ಚಗಾಗಿಸಿದೆವು
ಈಗ ದೊಡ್ಡವರಾಗಿ ಮನೆಬಿಟ್ಟಿರುವ ಕೂಸುಗಳ
ಮಂಚಗಳನ್ನು ಒಲೆಗೆ ಒಗೆಯುತ್ತಾ
ಫೋಟೊ ಫ಼್ರೇಮುಗಳನ್ನ, ಸ್ಟೂಲುಗಳನ್ನ ಒಲೆಗೆ ಒಗೆಯುತ್ತಾ
ನಂತರ, ನಾನು ಬೆಂಕಿಗೆ ಪುಸ್ತಕಗಳನ್ನು ಉಣಿಸಿದೆ
ಮತ್ತೆ ಮತ್ತೆ ಓದುತ್ತಾ
ಮೆದುಳಲ್ಲಿ ತಂತಾನೆ ಕೊರೆದಿರುವ ಸಾಲುಗಳನ್ನ
ಬೆಂಕಿಯ ಭಯವಿಲ್ಲದ ಸಾಲುಗಳನ್ನ
ಕಿಟಕಿಗಳು ಹೊಗೆಮಸಿಯಿಂದ ಮೆಲ್ಲ ಮೆಲ್ಲನೆ ಕಪ್ಪಾದವು
ನಾವು ಅದೃಶ್ಯರಾದೆವು
ಆ ಬಿಸಿಯಲ್ಲಿ

ಮೂಲ: THAT WINTER IT WAS AS COLD AS ON THE PEAK OF EVEREST
ಲ್ಯಾಟ್ವಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದ: Mārta Ziemelis

– 5 –

ಇನ್ನುಮುಂದೆ ನಮಗೆ ಭಯ ಭೀತಿ ಬೇಕಿಲ್ಲ

ಇನ್ನುಮುಂದೆ ನಮಗೆ ಭಯ ಭೀತಿ ಬೇಕಿಲ್ಲ
ತಮ್ಮ ಪೂರ್ವಜನ್ಮಗಳ ಹೆಣಗಳ ರಾಶಿಯ ಮಧ್ಯೆ
ಹಾದುಹೋಗುತ್ತಿದ್ದಾರೆ ಸೈನಿಕರು
ಒಂದು ಕಾಲದಲ್ಲಿ ನಗರಗಳಿದ್ದ ಜಾಗದಲ್ಲಿ
ಈಗ ಟ್ಯಾಂಕುಗಳು ಮರೀಚಿಕೆಗಳನ್ನ ಇರಿಸಿವೆ
ಎಂದೇ, ನಮಗೀಗ
ಗುಲಾಬಿಹೂ ಅರಳುವುದನ್ನ ನೋಡುವ ಅಗತ್ಯವಿದೆ
ಉದ್ಯಾನಗಳು ಇನ್ನೂ ಉಳಿದಿರುವಾಗ
ಗತಕಾಲದ ಫ಼್ರೆಂಚ್ ಕಾವ್ಯವನ್ನ ಓದುವ ಅಗತ್ಯವಿದೆ
ಗ್ರಂಥಾಲಯಗಳು ಇನ್ನೂ ಉಳಿದಿರುವಾಗ
ಮಕ್ಕಳನ್ನ ಪ್ರೀತಿಸಬೇಕು
ಈ ಜಗತ್ತಿನ ಎಲ್ಲಾ ಮಕ್ಕಳನ್ನ
ನಮ್ಮದೇ ಮಕ್ಕಳಂತೆ
ಈಗಲೇ
ಅವರು ಸೈನಿಕರಾಗಿ ಬದಲಾಗುವ ಮುನ್ನ

ಮೂಲ: WE DON’T NEED HORROR OR FEAR ANYMORE
ಲ್ಯಾಟ್ವಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದ: Mārta Ziemelis