ಅವಳು ಹೀಗೆ ನಗಲು ಪ್ರಾರಂಬಿಸಿದಳೆಂದರೆ ಉಳಿದವರಿಗೆ ಗಾಬರಿಯಾಗುತ್ತಿತ್ತು. ನಕ್ಕು ನಕ್ಕು ಸುಸ್ತಾಗಿ ಕಣ್ಣ ತುದಿಯಿಂದ ಹರಿವ ನೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ, ಮುಖ ಕೆಂಪಗೆ ಮಾಡಿಕೊಂಡು, ನೂರರ ವೇಗದಲ್ಲಿ ಓಡುತ್ತಿರುವ ಗಾಡಿ ಸಡನ್ ಬ್ರೇಕ್ ಹಾಕಿದಂತೆ ಸುಮ್ಮನಾಗಿಬಿಡುತ್ತಿದ್ದಳು. ನಲವತ್ತೈದು ವರುಷದ ಅವಳ ದಾಂಪತ್ಯಕ್ಕೆ ವ್ಯಾಖ್ಯೆ ಬರೆದಂತೆ ಬಂಡೆಕಲ್ಲಿನಂತೆ ಕುಳಿತು ಬಿಡುತ್ತಿದ್ದಳು. ಸ್ವಲ್ಪ ಹೊತ್ತಾದ ಮೇಲೆ, ಒಂದಾನೊಂದು ಕಾಲದಲ್ಲಿ ಸೊಂಟದವರೆಗೆ ಇಳಿಬಿದ್ದ ಕೂದಲನ್ನು ಮೋಹದಿಂದ ಬಾಚಿಕೊಳ್ಳುತ್ತಿದ್ದ ಪದ್ದಕ್ಕ, ಕೊನೆ ಕೊನೆಗೆ ಅಳಿದುಳಿದ ನಾಲ್ಕು ಕೂದಲನ್ನು ಗಂಟು ಹಾಕಿಕೊಳ್ಳುತ್ತಾ ಹೊರಗೆ ನಡೆದುಬಿಡುತ್ತಿದ್ದಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಬರೆದ ಕತೆ ‘ನಕ್ಕ ನಗು!’ ನಿಮ್ಮ ಈ ಭಾನುವಾರದ ಓದಿಗೆ

“ಪದ್ದಕ್ಕ ತೀರ್ಕೊಂಡಳಂತೆ ಕಣೇ… ಮಿಷನ್ ಆಸ್ಪತ್ರೇಲಿ.. ಆದ್ರೆ ಬೇಗ ಬಾ, ಅಲ್ಲೇ ಸಿಕ್ತೀನಿ” ಎಂದು ಆಟೋರಿಕ್ಷಾ ನಿಲ್ಲಿಸಿಕೊಂಡೇ ಸುದ್ದಿ ಮುಟ್ಟಿಸಿದ ಅಚ್ಚಕ್ಕ, ಮಗಳು ಶಾಲಿನಿಯ ‘ಅಯ್ಯೋ’ ಎಂಬ ಉದ್ಗಾರವನ್ನೂ ಕೇಳದೇ ಹೊರಟು ಬಿಟ್ಟಿದ್ದಳು. ‘ಪದ್ದಕ್ಕನಿಗೆ ಇನ್ನೂ ಅರವತ್ತೈದು ವರ್ಷವಷ್ಟೇ ಛೇ..’ ದಿಕ್ಕುತೋಚದ ಶಾಲಿನಿ ಆಸ್ಪತ್ರೆಗೆ ಹೊರಡಲು ಅನುವಾದಳು.

ಪದ್ದಕ್ಕ ಕೊನೆಯುಸಿರೆಳೆದಾಗ, ಹೊರಗೆ ಆಂತರಿಕ ಭದ್ರತೆಯ ನೆಪದಲ್ಲಿ ಕಾಯುತ್ತಿದ್ದ ತುರ್ತು ಪರಿಸ್ಥಿತಿ ಬೇರೆ. ಕಷ್ಟಪಟ್ಟು ಹೇಗೋ ಶಾಲಿನಿ ಆಸ್ಪತ್ರೆಗೆ ಬಂದು ಸೇರುವವೇಳೆಗೆ ಪದ್ದಕ್ಕನ ಶವ ಹೊತ್ತ ವ್ಯಾನು ಹೊರಟಾಗಿತ್ತು. . “ಮೂಗುಬೊಟ್ಟನ್ನು ತೆಗ್ಯೋಕೇ ಆಗ್ಲಿಲ್ಲವಂತೆ.. ಮೂಗನ್ನು ಕತ್ತರಿಸಿ ತೆಗೆದರಂತೆ” ಅಚ್ಚಕ್ಕ ಮಗಳ ಕಿವಿಯಲ್ಲಿ ನುಡಿದಳು.

ವ್ಯಾನು ಚಲಿಸಿದಂತೆಲ್ಲಾ, ಪದ್ದಕ್ಕ ರಪ್ ರಪ್ ಎಂದು ಎತ್ತಿ ಎತ್ತಿ ಬಂಡೆಕಲ್ಲ ಮೇಲೆ ಬೀಸಿ ಬಟ್ಟೆ ಒಗೆಯುವ, ಒಂದಿಷ್ಟೂ ಕಿಲುಬಿಲ್ಲದಂತೆ ರಭಸದಿಂದ ಪಾತ್ರೆ ತಿಕ್ಕುವ, ಗುಡು ಗುಡು ಶಬ್ದ ಮಾಡುತ್ತಾ ರುಬ್ಬು ಕಲ್ಲಿನ ಮುಂದೆಯೋ, ರಾಗಿಕಲ್ಲಿನ ಮುಂದೆ ಹಿಂದಕ್ಕೆ ಮುಂದಕ್ಕೆ ಓಲಾಡುತ್ತಲೋ, ಸೌದೆ ಒಲೆಯನ್ನು ಊದಿ ಊದಿ ಕೆಂಪಾದ ಮುಖವನ್ನು ಸೆರಗಿನಿಂದ ಒರೆಸಿಕೊಳ್ಳುತ್ತಲೋ ಸೋತು ಕುಳಿತ, ಒಂದಲ್ಲ ಒಂದು ಆತಂಕದಿಂದ ಯಾವಾಗಲೂ ಹುಬ್ಬುಗಂಟಿಕ್ಕಿದ ಪದ್ದಕ್ಕನ ಮುಖವೇ ಶಾಲಿನಿಯ ಕಣ್ಣಮುಂದೆ ಬರುತ್ತಿತ್ತು. ಆದರೆ ಎಂತಹ ಕೆಟ್ಟ ಕ್ಷಣದಲ್ಲೂ ಅವಳ ಮೂಗುತಿ ಮಾತ್ರ ಫಳ ಫಳ ಹೊಳೆಯುತ್ತಿತ್ತಲ್ಲಾ ಎನ್ನುವುದು ಶಾಲಿನಿಗೆ ಆಶ್ಚರ್ಯವಾಗುತ್ತಿತ್ತು. ದಾದಿಯರು ಮೂಗುತಿಯನ್ನು ತೆಗೆಯಲಾರದ್ದಕ್ಕೆ ಅದರ ಸಮೇತ ಮನೆಯವರು ಅವಳನ್ನು ಸುಟ್ಟರೋ ಅಥವಾ ಆಸ್ಪತ್ರೆಯ ಸಿಬ್ಬಂದಿಗಳೇ ಅವಳ ಮೂಗು ಕೊಯ್ದು ಮೂಗುತಿಯನ್ನು ಹಾರಿಸಿದ್ದರೋ, ಈಗ ಶಾಲಿನಿಗೆ ಯಾವುದೂ ನೆನಪಿಲ್ಲ. ಅರವತ್ತರ ಪದ್ದಕ್ಕ ಎಂಬತ್ತರ ಮುದುಕಿಯಂತೇಕೆ   ಹಣ್ಣುಹಣ್ಣಾಗಿ ಹೋಗಿದ್ದಳು ಎಂಬ ಚಿಂತೆ ಅವಳಿಗೆ.

ಶಾಲಿನಿಯ ತಾಯಿ ಅಚ್ಚಕ್ಕ ಪದ್ದಕ್ಕನ ವಾರಗೆಯ ತಂಗಿ. ಶಾಲಿನಿಗೆ ಪದ್ದಕ್ಕ ವಾವೆಯಲ್ಲಿ ದೊಡ್ಡಮ್ಮನಾದರೂ ಎಲ್ಲರಿಗೂ ಅವಳು ಪ್ರೀತಿಯ ಪದ್ದಕ್ಕನೇ ಆಗಿದ್ದಳು. ಸ್ವತಃ ಅವಳ ಮಕ್ಕಳೂ ಅವಳನ್ನು ಪದ್ದಕ್ಕನೆಂದೇ ಕರೆಯುತ್ತಿದ್ದರು. ಎಲ್ಲಾ ಮಕ್ಕಳಿಗೂ ಅವಳೆಂದರೆ ಪ್ರಾಣ. ಎಲ್ಲಾ ಸುತ್ತಿಕೊಂಡು ಅವಳನ್ನು ಕೀಟಲೆ ಮಾಡಿ ಎಷ್ಟು ಗೋಳು ಹೊಯ್ದುಕೊಂಡರೂ ಎಂದೂ ಕೋಪಿಸಿಕೊಂಡವಳಲ್ಲ. ಬಹಳ ಮೃದು ಸ್ವಭಾವದ, ಹಾಲು ಬಣ್ಣದ, ಲಕ್ಷಣವಾದ ಹೆಂಗಸು. ಕತ್ತೆ ಜೀತ ಮಾಡಲಿಕ್ಕೆಂದೇ ಇದ್ದ ಗಟ್ಟಿಗಡತ ಎತ್ತರದ ಶರೀರ. ಎಲ್ಲಾ ಕೆಲಸದಲ್ಲೂ ಅಷ್ಟು ಅಚ್ಚುಕಟ್ಟು. ದೊಡ್ಡಮ್ಮನೆಂದರೆ ಶಾಲಿನಿಗೆ ಎಲ್ಲಿಲ್ಲದ ಮುಚ್ಚಟೆ. ಸಾಯುವ ಕೆಲವು ದಿನಗಳ ಹಿಂದೆ ಶಾಲಿನಿಯ ಮನೆಗೆ ಪದ್ದಕ್ಕ ಬಂದಿದ್ದಳು. ಎಂದಿನಂತೆ ಮಕ್ಕಳು ನಗೆ ಚಾಟಿಕೆ ಹಾರಿಸಿದರೆ ಎಲ್ಲರ ಜೊತೆ ಮೈಕುಲುಕಿ ನಗುತ್ತಿದ್ದಳು ಆದರೆ ಈಚೀಚೆಗೆ ಯಾಕೋ ನಗಲು ಪ್ರಾರಂಭಿಸಿದವಳು ಎಷ್ಟು ಹೊತ್ತಾದರೂ ನಗುವನ್ನು ನಿಲ್ಲಿಸುತ್ತಿರಲಿಲ್ಲ. ‘ನಗು ನಿಲ್ಲಿಸು… ಸಾಕು ಪದ್ದಕ್ಕ.. ಸಾಕು ನಿಲ್ಲಿಸು’ ಎಂದು ಯಾರು ಎಷ್ಟು ಹೇಳಿದರೂ ಅವಳ ನಗು ಕಡಿಮೆಯಾಗುತ್ತಿರಲಿಲ್ಲ. ಇಡೀ ದೇಹ ನಗುವಿನಿಂದ ಕುಲುಕಿ ಕುಲುಕಿ ಕಣ್ಣಿನಿಂದ ಕೆನ್ನೆಯಮೇಲೆ ಹರಿವ ನೀರು! ಅವಳ ನಗು ಅಸಹಜವಾಗಿ ಏರುತ್ತಲೇ ಹೋಗುತ್ತಿತ್ತು. ಅವಳ ಸುತ್ತ ನಗುತ್ತಿದ್ದವರೆಲ್ಲಾ ಒಮ್ಮಲೇ ಗಂಭೀರವಾಗಿ ಬಿಡುತ್ತಿದ್ದರು. ಆದರೂ ಅವಳ ನಗು ನಿಲ್ಲುತ್ತಿರಲಿಲ್ಲ. ದೇಹ ಮನಸ್ಸುಗಳನ್ನು ಮುದಗೊಳಿಸುವ ನಗು ಭಯಂಕರವಾಗುವುದೆಂದರೆ?! ನಲವತ್ತು ವರುಷಗಳು ಕಳೆದ ಮೇಲೂ ಶಾಲಿನಿಗೆ ಮಾತ್ರ ದೊಡ್ಡಮ್ಮನ ಆ ವಿಕೃತ ನಗು ಮನಸ್ಸಿನಿಂದ ಮಾಯವಾಗುವುದೇ ಇಲ್ಲ.

ಹದಿಮೂರು ವರುಷಕ್ಕೆಲ್ಲಾ ಪದ್ದಕ್ಕನಿಗೆ ಮದುವೆಯಾಯಿತು. ಹದಿನಾರು ವರುಷಕ್ಕೆ ಮೈನೆರೆದು ಗಂಡನ ಮನೆ ಸೇರಿದ ಹೊಸತರಲ್ಲಿ, ಪದ್ದಕ್ಕ ಮೂರು ಮೂರು ದಿನಗಳಿಗೂ ತಾಯಿಯ ಮನೆಗೆ ಓಡಿ ಬಂದು ಬಿಡಾರ ಹೂಡುತ್ತಿದ್ದಳು. ಅವಳ ತಂದೆ, ಮನೆಗೆ ಬಂದ ಮಗಳನ್ನು ನಾಲ್ಕು ದಿನ ಇರಿಸಿಕೊಂಡು, ಉಪಚಾರ ಮಾಡಿ, “ಇನ್ನು ಹೊರಡು….ಪದ್ಮಾವತಿ. ಬಟ್ಟೆ ಗಿಟ್ಟೆ ಜೋಡಿಸ್ಕೋ, ತಯಾರಾಗು” ಎನ್ನುತ್ತಿದ್ದರಂತೆ, ಒಳಗಿನಿಂದ ಅವಳ ತಾಯಿ “ಅತ್ತೆಯ ಮನೆಯವರು ಕರೆಯದೇ, ಅಳಿಯ ಬರದೇ ಮಗಳನ್ನು ಹೇಗೆ ಕಳಿಸುವುದು? ಬೇಡ, ಅವರೇ ಬರುತ್ತಾರೇನೋ ನೋಡೋಣ” ಎಂದರೆ, “ಅವಳ ಮನೆಗೆ ಅವಳು ಹೋಗಲು ಯಾರಾದರೂ ಯಾಕೆ ಕರೆಯಬೇಕು?…. ಹೊರಡಮ್ಮ ನೀನು” ಎಂದು ದುಮು ದುಮು ಮುಖದಿಂದ ಹೊರಗೆ ನಡೆದು ಗಾಡಿ ಕಟ್ಟಿಸಿಯೇ ಬಿಡುತ್ತಿದ್ದರು. ಅವರಪ್ಪ ಪದ್ದಕ್ಕನನ್ನು ಗಂಡನ ಮನೆಗೆ ಬಿಟ್ಟು ಬರುವುದು, ಅವಳು ಮತ್ತೆ ಮತ್ತೆ ತಾಯಿ ಮನೆಗೆ ಓಡಿ ಬರುವುದು…. ಹೀಗೆ ಕಾಲ್ಚೆಂಡಿನಾಟ ನಡೆದೇ ಇತ್ತು.

ಪದ್ದಕ್ಕ, ಸಕ್ಕರೆ ಪಟ್ಟಣದ ಒಬ್ಬ ಶ್ರೀಮಂತ ಜಮೀನ್ದಾರ ಕುಟುಂಬಕ್ಕೆ ಸೇರಿದವಳು. ಅವಳ ಜೊತೆಯಲ್ಲಿ ಹುಟ್ಟಿದವರು ಏಳು ಮಂದಿ ಅಕ್ಕ ತಂಗಿಯರು, ನಾಲ್ಕು ಮಂದಿ ಅಣ್ಣ ತಮ್ಮಂದಿರು. ಅದರಲ್ಲಿ ಶಾಲಿನಿಯ ತಾಯಿ ಅಚ್ಚಕ್ಕನೂ ಒಬ್ಬಳು. ಮನೆಯ ತುಂಬಾ ಆಳುಕಾಳುಗಳು. ತೋಟ, ಗದ್ದೆ, ಕೊಟ್ಟಿಗೆ ತುಂಬಾ ಕರೆಯುವ ಹಸುಗಳು. ಉಡಲು, ಉಣ್ಣಲು ತತ್ವಾರವಿಲ್ಲದ ಸುಖೀ ಸಂಸಾರ. ಪದ್ದಕ್ಕನ ದೊಡ್ಡಜ್ಜ ಅಂದರೆ, ಅವಳ ತಾಯಿಯ ದೊಡ್ಡಪ್ಪ ಅಮಲ್ದಾರರಾಗಿದ್ದರಂತೆ. ಊರ ಮೇಲೆ ಬರುವಾಗ ಅವರು, ಚಿಕ್ಕ ಮಕ್ಕಳಾಗಿದ್ದ, ಪದ್ದಕ್ಕನ ತಾಯಿ ಪಾತಮ್ಮನನ್ನೂ ಮತ್ತು ಅವಳ ಅಣ್ಣನನ್ನೂ ಕುದುರೆಯ ಮೇಲೆ ಕೂರಿಸಿಕೊಂಡು ಬರುತ್ತಿದ್ದರಂತೆ. ಊರಲ್ಲೆಲ್ಲಾ ರಾಜ ಮರ್ಯಾದೆ. ಇದನ್ನು ಶಾಲಿನಿ ತನ್ನ ಅಜ್ಜಿಯ ಬಾಯಿಂದ ಅನೇಕ ಸಲ ಕೇಳಿದ್ದಳು. ರಾಣಿಯ ಹಾಗೆ ಮೆರೆದ ಪದ್ದಕ್ಕನ ಅಮ್ಮ ಪಾತಮ್ಮ ಮಡಿ ಹೆಂಗುಸಾದರೂ, ಅಡುಗೆ ಕೆಲಸವೆಲ್ಲಾ ಮುಗಿದ ಮೇಲೆ, ಆ ದೊಡ್ಡ ಮನೆಯ ತೊಟ್ಟಿ ಕಂಭಗಳ ಹಜಾರದ ಅಂಚಿಗೆ ಕುಳಿತು ಪ್ರಜಾವಾಣಿ ಪತ್ರಿಕೆಯನ್ನು ಹರಡಿಕೊಂಡು, ಮಗ್ನವಾಗಿ ಓದುತ್ತಾ ತನ್ನ ಮಗನ ಜೊತೆ ರಾಜಕೀಯ ಚರ್ಚೆಯನ್ನು ಮಾಡುತ್ತಿದ್ದಳು. ಅವಳಿಗೆ ಒಳ್ಳೆಯ ರಾಜಕೀಯ ಪ್ರಜ್ಞೆ ಕೂಡ ಇತ್ತು. ಅವಳನ್ನು ಮೊಮ್ಮಕ್ಕಳೆಲ್ಲಾ ‘ಇಂದಿರಾಗಾಂಧಿ’ ಎಂದೇ ಹಾಸ್ಯ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅಜ್ಜಿ ಪಾತಮ್ಮ ಮಾಡುತ್ತಿದ್ದ ಸಾರಿನ ಪರಿಮಳ ಈಗಲೂ ಶಾಲಿನಿಯ ಕೈಯಲ್ಲಿ ಘಮ ಘಮಿಸುತ್ತಿದೆ. ಅವಳ ಕಸೂತಿ, ಕಲೆಗಳೆಲ್ಲಾ ಆ ದೊಡ್ಡಮನೆಯ ಹಜಾರದ ಗೋಡೆಯ ಮೇಲೆ ರಾರಾಜಿಸುತ್ತಿದ್ದವು. ಅಂತಹ ಎದೆಗಾರಿಕೆ, ತೀಕ್ಷ್ಣಮತಿ, ಚುರುಕುತನ, ಜಾಣ್ಮೆ ಅವಳು ಹೆತ್ತ ಯಾವ ಹೆಣ್ಣು ಮಕ್ಕಳಲ್ಲಿಯೂ ಇರಲಿಲ್ಲ. ತನ್ನ ಮಕ್ಕಳಿಗಿಂತ ಹತ್ತು ವರುಷವಾದರೂ ಅವಳು ಮುಂದಿದ್ದಳು. ಗಂಡು ಮಕ್ಕಳಂತೂ ತಮ್ಮಪ್ಪ ಕಷ್ಟಪಟ್ಟು ಗಳಿಸಿದ, ಅಂದಿನ ಕಾಲಕ್ಕೇ ಕೋಟ್ಯಾಂತರ ಬೆಲೆಬಾಳುವ ಆಸ್ತಿಯನ್ನು ಬೆಳೆಸುವುದಿರಲಿ, ಉಳಿಸಿಕೊಳ್ಳಲೂ ಇಲ್ಲ. ಎಲ್ಲಾ ಆಸ್ತಿಯನ್ನು ತಮ್ಮ ವಿಲಾಸಕ್ಕಾಗಿಯೇ ಕಳೆದುಬಿಟ್ಟರು. ಯಾರೂ ತಮ್ಮ ಬದುಕಿನಲ್ಲಿ ದೈವಭೀರುವಾದ ಅವರಪ್ಪನಂತೆ, ನಿಷ್ಠೆ, ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳಲಿಲ್ಲ. ಆಸ್ತಿ ಪಾಲುಮಾಡಿಕೊಳ್ಳುವ ವಿಷಯದಲ್ಲಿ ಕೂಡ ಹೊಡೆದಾಟ ಬಡಿದಾಟ!! ಸಾವಿನ ದವಡೆಯಲ್ಲಿದ್ದವನ ಬಳಿ ಕೂಡ ಹೆಬ್ಬೆಟ್ಟನ್ನೊತ್ತಿಸಿಕೊಂಡು ಆಸ್ತಿ ಲಪಟಾಯಿಸಿದರೆಂಬ ಗುಸು ಗುಸು ಪದ್ದಕ್ಕನ ಆ ಎಲ್ಲ ಸೋದರಿಯರ ಹೃದಯದಲ್ಲಿ ಗುಟ್ಟಾಗಿ ಉಳಿದಿತ್ತು. ಮನೆ ಮರ್ಯಾದೆಗಾಗಿ ಅದನ್ನು ಆ ಹೆಣ್ಣು ಮಕ್ಕಳು ಅಲ್ಲಿಯೇ ರಹಸ್ಯವಾಗಿ ದಫನ್ ಮಾಡಿಬಿಟ್ಟಿದ್ದರು. ಈ ಜಟಾಪಟಿಯಲ್ಲಿ ಆ ಅಣ್ಣ ತಮ್ಮಂದಿರು, ಹೆಣ್ಣು ಮಕ್ಕಳಿಗೆ, ಅರಿಸಿನ ಕುಂಕುಮಕ್ಕೆಂದು ಮೀಸಲಿಟ್ಟ ಅಲ್ಪ ಹಣವನ್ನೂ ನುಂಗಿ ನೀರು ಕುಡಿದುಬಿಟ್ಟರು. ಪಾಪದ ಹೆಣ್ಣು ಮಕ್ಕಳು ತೌರ ಸುಖವನ್ನೇ ಬಯಸಿ ತುಟಿ ಪಿಟ್ಟೆನ್ನಲಿಲ್ಲ. ಹೀಗೆ ಸದಾ ದಾನ, ಧರ್ಮಗಳಿಂದ, ಅತಿಥಿ, ಅಭ್ಯಾಗತರುಗಳಿಂದ ಗಿಜಿಗುಡುತ್ತಿದ್ದ ಸಕ್ಕರೆ ಪಟ್ಟಣದ ಆ ಪುಣ್ಯಧಾಮ ನಿರ್ನಾಮವಾಗಿ ಹೋಯಿತು.

ಇಂತಹ ಸಂಪದ್ಭರಿತ ಮನೆಯಲ್ಲಿ ಹುಟ್ಟಿದ ಪದ್ದಕ್ಕನನ್ನು ಪಕ್ಕದ ಹರಪನ ಹಳ್ಳಿಯಲ್ಲಿದ್ದ ಶ್ಯಾನುಭೋಗರ ಒಬ್ಬನೇ ಮಗ ಕೃಷ್ಣಯ್ಯನಿಗೆ ಮದುವೆ ಮಾಡಿಕೊಟ್ಟಿದ್ದರು. ಹುಡುಗನೂ ಲಕ್ಷಣವಾಗಿದ್ದ. ಸಾಕಷ್ಟು ಆಸ್ತಿ ಪಾಸ್ತಿಯ ಜೊತೆಗೆ ಪೋಸ್ಟ್ ಮ್ಯಾನ್ ಕೆಲಸಬೇರೆ. ಸರ್ಕಾರದ ಕೆಲಸ ದೇವರ ಕೆಲಸವೆಂದು ನಂಬಿದ್ದ ಕಾಲವದು. ಅಷ್ಟೇ ಮರ್ಯಾದೆಯೂ ಸಮಾಜದಲ್ಲಿತ್ತು. ಪದ್ದಕ್ಕ ಬಾಲ್ಯದಿಂದಲೂ ಸ್ವಲ್ಪ ಹಟಮಾರಿ ಹೆಣ್ಣು, ಗಂಡನ ಮನೆ ಸೇರಿದ ಮೇಲೆ, ಒಬ್ಬನೇ ಮಗನ ತಾಯಿಯಾದ ಅವಳ ಅತ್ತೆ, ಸೊಸೆಗೆ ಚಿತ್ರಹಿಂಸೆ ಕೊಡಲು ಪ್ರಾರಂಭಿಸಿದಳು. ಅನೇಕ ಸಲ ಭತ್ತವನ್ನು ಕುಟ್ಟಿ, ಕೇರಿ ಅದು ಅಕ್ಕಿಯಾದ ಮೇಲೆ ಅನ್ನಬೇಯಿಸಿಕೊಂಡು ಉಣ್ಣುತ್ತಿದ್ದಳಂತೆ- ತಾಯಿಮಗ ಉಂಡು ಸುಖವಾಗಿ ಮಲಗಿದ ಮೇಲೆ. ಹೀಗಿದ್ದೂ ಮನೆಯಲ್ಲಿ ಕತ್ತೆ ಜೀತವಂತೂ ತಪ್ಪುತ್ತಿರಲಿಲ್ಲ. ಇಂತಹ ಗಂಡನ ಪಕ್ಕಕ್ಕೆ ಹೇಗೆ ಒಲಿದು ಹೋದಾಳು ಅವಳು? ರಾತ್ರಿಯಾದರೆ ಮುದುಡಿಕೊಂಡು ಮಲಗಿಬಿಡುತ್ತಿದ್ದಳು. ಅವಳನ್ನು ಒಲಿಸಿಕೊಳ್ಳುವಷ್ಟು ಸುಸಂಸ್ಕೃತನೂ ಅವನಾಗಿರಲಿಲ್ಲ. ಸಣ್ಣ ಹುಡುಗಿಯ ದೊಡ್ಡ ಮೈ ಮನಸುಗಳಲ್ಲಿ ಪ್ರೀತಿ ಅರಳಲೇ ಇಲ್ಲ. ಗಂಡ ಕೃಷ್ಣಯ್ಯ ಮನೆಯ ಹೊರಗಿನ ಚಾಳಿಗೆ ಬಿದ್ದ. ಪದ್ದಕ್ಕನ ಮೊಂಡುತನ, ಅಸಹಕಾರದಿಂದ ಅವಳ ಗಂಡ ಹೊರಗಿನ ಚಟಕ್ಕೆ ಬಲಿಯಾದನೋ, ಇಲ್ಲ, ಗಂಡನ ಹೊರಗಿನ ಚಾಳಿಯಿಂದಾಗಿಯೇ ಪದ್ದಕ್ಕ ಜಗಮೊಂಡಿಯಾದಳೋ ಗೊತ್ತಿಲ್ಲ. ಈ ಕಾರಣಕ್ಕಾಗಿ ದಿನಾ ಅತ್ತೆಯಿಂದಲೋ, ಗಂಡನಿಂದಲೋ ಏಟು ತಿನ್ನುವುದು ತಪ್ಪುತ್ತಿರಲಿಲ್ಲ. ಒಮ್ಮೊಮ್ಮೆ ಬಾಸುಂಡೆಗಳೂ ಏಳುತ್ತಿದ್ದವು. ಒಟ್ಟಿನಲ್ಲಿ ಎತ್ತು ಏರಿಗೆ ಎಮ್ಮೆ ನೀರಿಗೆ.

ಪದ್ದಕ್ಕ ತವರಿಗೆ ಹೋದಾಗ ಕೃಷ್ಣಯ್ಯನ ಸವಾರಿಯೂ ಅತ್ತ ಒಮ್ಮೊಮ್ಮೆ ಸಾಗುತ್ತಿದ್ದುದುಂಟು. ಕಾರಣ ಪದ್ದಕ್ಕನ ತಂಗಿಯರು! ಅವರು ಬಹಳ ಸುಂದರಿಯರೆಂದು ಹೇಳಿಕೊಳ್ಳುವ ಹಾಗಿಲ್ಲದಿದ್ದರೂ ಕಣ್ಣು ಮೂಗು ನೇರವಾಗಿ ಲಕ್ಷಣವಾಗಿದ್ದವರು. ಅಳಿಯ ಹೀಗೆ ಹೋದಾಗಲೆಲ್ಲಾ ದೈವಭೀರು ಮಾವನಿಂದ ಎಲ್ಲಿಲ್ಲದ ಉಪಚಾರ ಬೇರೆ. ಇದೇ ಸಂದರ್ಭವನ್ನು ಬಳಸಿಕೊಂಡ ‘ಅಳೀಮಯ್ಯ’ ಮನೆತುಂಬಾ ಓಡಾಡುತ್ತಿದ್ದ ನಾದಿನಿಯರನ್ನು ಗುಟ್ಟಾಗಿ ತನ್ನ ಬಳಿಗೆ ಕರೆದು “ಎಲ್ಲಿ ಭಾಗೀ …ಕಮಲೀ.. ನನಗೊಂದು ಮುತ್ತು ಕೊಡು ನೋಡೋಣ? ಅಷ್ಟು ದೂರ ಯಾಕೆ…. ಇಲ್ಲಿ ಬಾ ನಿನ್ನ ಭಾವ ಅಲ್ವೇನೇ.. ಹೊಸಬನೇನೇ? ಇದು ನೋಡು ನಿನಗೆಂದೇ ಮೈಸೂರಿನಿಂದ ಹೊಸಾ.. ಟೇಪು, ಕುಚ್ಚು, ಸರ ಎಲ್ಲ ತಂದಿದ್ದೇನೆ. ಎಲ್ಲ ಹಾಕಿಕೊಂಡು ತೋರಿಸು ನೋಡೋಣ.. ಎಷ್ಟು ಚೆನ್ನಾಗಿದ್ದೀಯಾ” ಎಂದು ಕೆನ್ನೆ ಹಿಂಡಿ ಮೈಯೆಲ್ಲಾ ಸವರುವಾಗ, ಮಾವನೋ, ಆಳುಕಾಳುಗಳೋ ಕೆಮ್ಮಿದ ಸದ್ದು ಕೇಳಿ ತಟಕ್ಕನೇ ದೂರ ಸರಿಯುತ್ತಿದ್ದ. ಮಂಚದ ಮೇಲೆ ಹತ್ತಿರಬಂದು ಕುಳಿತುಕೊಳ್ಳಲು ಸನ್ನೆಮಾಡಿ ಹುಡುಗಿಯರನ್ನು ಕರೆಯುತ್ತಿದ್ದ, ತನ್ನ ಅಳಿಯನ ಕಚ್ಚೆಹರುಕತನ ಆ ದೈವಭೀರುವಾದ ಮಾವನಿಗೂ ಕ್ರಮೇಣ ತಿಳಿದು ತಮ್ಮ ಮದುವೆಯಾಗದ ಹೆಣ್ಣುಮಕ್ಕಳ ಮೇಲೆ ಹೆಚ್ಚು ನಿಗಾ ಇಡತೊಡಗಿದರು. ‘ಬೀದಿ ಬಾಗಲಲ್ಲಿ ಏನು ಕೆಲಸಾ? ನಡೀರಿ ಒಳಕ್ಕೆ’ ಎಂದು ಒಮ್ಮೆ ಅಪ್ಪ ಜೋರುದನಿ ಮಾಡಿದರೂ ಸಾಕು, ಸೀರೆ, ಲಂಗದ ನೆರಿಗೆಗಳನ್ನು ಮುದುರಿಕೊಂಡು ಒಳ ಓಡುತ್ತಿದ್ದರು ಆ ಹುಡುಗಿಯರು.

ಪದ್ದಕ್ಕನ ಸಂಸಾರ ಹೀಗೆ ಒಪ್ಪಗೆಟ್ಟರೂ, ಒಂದಕ್ಕಿಂತ ಒಂದು ದಷ್ಟ ಪುಷ್ಟವಾದ ಐದು ಮಕ್ಕಳನ್ನು ಹೆತ್ತಳು. ಗಂಡಹೆಂಡತಿ ಪ್ರೀತಿಯಿಂದ ಇಲ್ಲದಿದ್ದ ಮಾತ್ರಕ್ಕೆ ಮಕ್ಕಳಾಗಬಾರದೆಂದಿಲ್ಲವಲ್ಲ. ತಲಾ ಎರಡೆರೆಡು ವರುಷಗಳ ಅಂತರದಲ್ಲಿ ಪದ್ದಕ್ಕ ಹೆತ್ತದ್ದು, ಮೂರು ಗಂಡು ಎರಡು ಹೆಣ್ಣು. ತನಗೆ ದಕ್ಕದ ಪ್ರೀತಿಯ ಮಹಾಪೂರವನ್ನೇ ಮಕ್ಕಳ ಮೇಲೆ ಸುರಿದಳು. ಮಕ್ಕಳೆಂದರೆ ಅದೆಂತಹ ಪ್ರೀತಿ!!. ಎಷ್ಟು ಮುಚ್ಚಟೆಯಿಂದ ಸಾಕಿದಳು? ಒಬ್ಬಬ್ಬರೂ ಠೊಣಪರಾಗಿ ಬೆಳೆದರು.

ಧಾಂಡಿಗರಾದ ಗಂಡು ಮಕ್ಕಳಿಗೆ ಎಣ್ಣೆ ನೀವಿ ನೀವೀ, ಹಂಡೆಯಲ್ಲಿ ಕಾದ ನೀರನ್ನು ಬೋಸಿಯಿಂದ ರಪ ರಪನೆ ಹುಯ್ಯುತ್ತಾ, ಮರಿಗೆಯಲ್ಲಿ ಕಲಸಿದ ಸೀಗೆಪುಡಿಯನ್ನು, ಹಟಕ್ಕೆ ಬಿದ್ದವಳಂತೆ ತಲೆಗೆ ಗಸ ಗಸನೆ ತಿಕ್ಕುವ ವಿಚಿತ್ರ ದುಡಿತ! ಸ್ನಾನವೆಲ್ಲಾ ಆದಮೇಲೆ ಒಲೆಯೊಳಗಿಂದ ಹಂಡೆಗೆ ಹತ್ತಿದ ‘ಕರಿ’ಯನ್ನು ತೆಗೆದು ಮಕ್ಕಳ ಭ್ರೂಮಧ್ಯೆ ಹಚ್ಚಿ ದೃಷ್ಟಿತೆಗೆದ ಮೇಲೆಯೇ ಅವಳಿಗೆ ಸಮಾಧಾನ. ಯಜ್ಞೇಶ್ವರನ ರಕ್ಷೆ ಸಿಕ್ಕಂತೆಯೇ ಬೀಗುತ್ತಿದ್ದಳು!! ದಪ್ಪನೆಯ ಅರಿವೆಯಿಂದ ಬೆನ್ನು, ತಲೆಯನ್ನು ತಾನೇ ಒರೆಸಿದ ಮೇಲೂ “ಚೆನ್ನಾಗಿ ಒರೆಸ್ಕೋ,.. ಚೆನ್ನಾಗಿ ಒರೆಸ್ಕೋ.. ಶೀತ ನೆಗಡಿ ಆಗುತ್ತೆ.. ಆಮೇಲೆ..” ಎನ್ನುತ್ತಾ ಬೆನ್ನುಹತ್ತುತ್ತಿದ್ದಳಲ್ಲಾ? ಮಾರುದ್ದ ಕೂದಲಿನ ಹೆಣ್ಣು ಮಕ್ಕಳಿಗಂತೂ ಕೂದಲಿನ ಆರೈಕೆ ಮಾಡಿದಷ್ಟು ತೀರದು! ತಾನು ಕಾಲು ನೀಡಿ ಕುಳಿತು, ಒಲ್ಲೆನ್ನುತ್ತ ಹರಿದು ಹೋಗುತ್ತಿದ್ದ ಮಗಳನ್ನು ಎಳೆದು ಕೂರಿಸಿಕೊಂಡು ತನ್ನ ಕಾಲುಗಳ ಮಧ್ಯೆ ಮೆಟ್ಟಿ ಹಿಡಿದುಕೊಂಡು ನಿಧಾನವಾಗಿ ಎಣ್ಣೆ ತೀಡಿ ಊರಿ ಗೋರಿ ಬಾಚಿ, ಬಿಗಿಯಾಗಿ ಜಡೆ ಹೆಣೆದಳೆಂದರೆ ರಾತ್ರಿಯವರೆಗೂ ಅಲ್ಲಾಡಬಾರದು. “ಎಲ್ಲಿ ಮುಂದೆ ತಿರುಗು, ಇಲ್ಲದಿದ್ರೆ ಮುದುಕ ಗಂಡ ಸಿಗ್ತಾನಂತೆ” ಎಂದು ಗಲ್ಲ ಹಿಡಿದು ಮುದ್ದಾಗಿ ಮುಂದಲೆ ಬಾಚಿ ‘ಇನ್ನು ನಡಿ’ ಎನ್ನುತ್ತಿದ್ದಳು. ಹೊರಗೆ ಹೊರಟ ಮಕ್ಕಳಿಗೆ “ಜೋಕೆ .. ಜೋಕೆ” ಎಂದು ಎಷ್ಟು ಸಲ ಹೇಳಿದರೂ ತೀರದು. ಕೇವಲ ಗಂಡು ಮಕ್ಕಳೇ ಇದ್ದ ಮನೆಯಲ್ಲಿ, ಮಗಳು ಮೈನೆರೆದಾಗ ಗುಟ್ಟಾಗಿ ಅಡುಗೆ ಮನೆಯಲ್ಲಿಯೇ ಕೂರಿಸಿ ಆರೈಕೆ ಮಾಡಿ, ಮಡಿ ಮೈಲಿಗೆ ಮೀರಿದಳು.

ದಾದಿಯರು ಮೂಗುತಿಯನ್ನು ತೆಗೆಯಲಾರದ್ದಕ್ಕೆ ಅದರ ಸಮೇತ ಮನೆಯವರು ಅವಳನ್ನು ಸುಟ್ಟರೋ ಅಥವಾ ಆಸ್ಪತ್ರೆಯ ಸಿಬ್ಬಂದಿಗಳೇ ಅವಳ ಮೂಗು ಕೊಯ್ದು ಮೂಗುತಿಯನ್ನು ಹಾರಿಸಿದ್ದರೋ, ಈಗ ಶಾಲಿನಿಗೆ ಯಾವುದೂ ನೆನಪಿಲ್ಲ. ಅರವತ್ತರ ಪದ್ದಕ್ಕ ಎಂಬತ್ತರ ಮುದುಕಿಯಂತೇಕೆ ಹಣ್ಣುಹಣ್ಣಾಗಿ ಹೋಗಿದ್ದಳು ಎಂಬ ಚಿಂತೆ ಅವಳಿಗೆ.

ಶಾಲಿನಿಗಂತೂ ಎಲ್ಲರಿಗಿಂತ ಪದ್ದು ದೊಡ್ಡಮ್ಮನ ಮನೆಗೆ ಹೋಗುವುದೆಂದರೆ ಎಲ್ಲಿಲ್ಲದ ಪ್ರೀತಿ. ಆಗಾಗ ಅವಳ ಮನೆಗೆ ಹೋಗುತ್ತಿದ್ದಳು. ಎಲ್ಲರ ಜೊತೆ ಊಟಕ್ಕೆ ಸಾಲಾಗಿ ಕುಳಿತಾಗ ‘ಅಷ್ಟು ಬೇಡ.. ಇಷ್ಟು ಬೇಡ” ಎಂದು ಗೋಗರೆಯುವ ಶಾಲಿನಿಯ ತಟ್ಟೆಯ ಮುಂದೆ ನಿಂತು ನಾಲ್ಕು ಬೆರಳಲ್ಲಿ ಅನ್ನ ಹಿಡಿದು ‘ಇಷ್ಟು ಸಾಕಾ’ ಎಂದು ಕೇಳಿ ಅವಳು ಹೂಂ ಎನ್ನವಷ್ಟರಲ್ಲಿ ಯಾವ ಮಾಯದಲ್ಲೋ ಪಾತ್ರೆಯಿಂದ ಇನ್ನಷ್ಟು ಅನ್ನ ತೆಗೆದು ಸೇರಿಸಿ ತಟ್ಟೆಯೊಳಗೆ ಹಾಕಿಬಿಡುತ್ತಿದ್ದಳು. ತನ್ನ ಮಕ್ಕಳಂತೆಯೇ ಶಾಲಿನಿಗೂ ಹರಳೆಣ್ಣೆಯನ್ನು ಮೈತುಂಬಾ ಹಚ್ಚಿ, ನೀವಿ, ತಲೆಯ ಮೇಲೂ ಬಡಿದು, ರಪ ರಪ ನೀರು ಹಾಕುತ್ತಿದ್ದಳು. “ಬೇಡ.. ಪದ್ದಕ್ಕಾ …. ಬಿಡು ಪದ್ದಕ್ಕಾ” ಎಂದು ಎಷ್ಟು ಅಂಗಲಾಚಿದರೂ, ತಕ ಪಕ ಕುಣಿದರೂ ಬಿಡುತ್ತಿರಲಿಲ್ಲ. “ಸೀಗೆ ಪುಡಿಯನ್ನು ಮೈಗೆಲ್ಲಾ ಉಜ್ಜುತ್ತಾ, ಸಂದೀಲೆಲ್ಲಾ ಚೆನ್ನಾಗಿ ತೊಳ್ಕೋಬೇಕು ಗೊತ್ತಾಯ್ತಾ?” ಎಂದು ಬಚ್ಚಲು ಮನೆಯಲ್ಲಿ ಯಾರೂ ಇಲ್ಲದಿದ್ದರೂ ಪಿಸುಗುಟ್ಟಿ, ಎಣ್ಣೆಸ್ನಾನವೆಂಬ ರಣ ಶಿಕ್ಷೆ ಮುಗಿದ ಮೇಲೆ ಮೈಗೆ ಸೀರೆಯ ತುಂಡೊಂದನ್ನು ಸುತ್ತಿ, ತಲೆಗೊಂದು ತೆಳ್ಳನೆಯ ಚೌಕವನ್ನು ಕಟ್ಟಿ “ಸರಿಯಾಗಿ ಒರೆಸ್ಕೋ… ಆಮೇಲೆ ಶೀತ ಗೀತ ಆದ್ರೆ, ಅಚ್ಚಕ್ಕ ನನ್ನನ್ನು ಬೈತಾಳೆ ಅಷ್ಟೇ” ಎಂದು ಅಕ್ಕರೆಯಿಂದ ಬಚ್ಚಲು ಮನೆ ಬಾಗಿಲು ತೆರೆದು ಹೊರ ಬಿಡುತ್ತಿದ್ದಳು. ಪುನಃ ಹಂಡೆಗೆ ನೀರು ತೋಡಿ, ಒಲೆಯ ಸೌದೆ ಸರಿಪಡಿಸುತ್ತಾ ಊದುತ್ತಿದ್ದಳು. ಬಚ್ಚಲುಮನೆಯಿಂದ ಹೊರಬಂದ ಶಾಲಿನಿ ಹಣ್ಣಾದ ಟೊಮೋಟೋ ಆಗುತ್ತಿದ್ದಳು. “ಸಂಜೆ ನಾನು ಶಕ್ಕು ಚಿಕ್ಕಮ್ಮನ ಮನೆಗೆ ಹೋಗ್ಲಾ ಪದ್ದಕ್ಕಾ?” ಅಂತ ಕೇಳಿದ್ರೆ, “ತಡಿಯೇ, ಸಾಯಂಕಾಲ ಗುಳಪಾವಟೆ ಮಾಡ್ತೀನಿ, ನಾಳೆ ಬೆಳಿಗ್ಗೆ ಹೋಗುವಿಯಂತೆ” ಎನ್ನುತ್ತಲೇ, ಗೋಧಿಹಿಟ್ಟನ್ನು ಹುರಿದು ಬೆಲ್ಲದ ಪಾಕಕ್ಕೆ ಹಾಕಿ ಯಥೇಚ್ಚ ಡಾಲ್ಡ ಸುರಿದು ಉಂಡೆ ಮಾಡಿ ಕೈಗಿರಿಸಿಯೇ ಆಗುತ್ತಿತ್ತು. ಸುಮ್ಮನೇ ಕುಳಿತಿದ್ದರಂತೂ “ತಲೆ ನೋಡ್ತೀನಿ ಬಾರೇ..” ಎಂದು ಎಳೆದುಕೊಂಡು, ಕೂದಲಲ್ಲಿ ಬೆರಳಾಡಿಸುತ್ತಾ ಅದೂ ಇದೂ ಮಾತನಾಡುತ್ತಾ “ಯಾರಾದರೂ ಪೆಪ್ಪರಮೆಂಟು ತೋರಿಸಿ ಬಾ ಅಂತ ಕರೆದರೆ ಹೋಗಿಬಿಡಬೇಡ.. ಎನ್ನುತ್ತಲೇ “….ಅಯ್ಯೋ ಇಲ್ಲ ಕಣೆ…. .ಒಂದು ಸೀರೂ ಇಲ್ಲಾ.. ಹೋಗು..” ಎಂದು ಕೆದರಿದ ತಲೆ ಬಾಚಿ ಜಡೆ ಹೆಣೆದು ಪ್ರೀತಿಯಿಂದ ನೂಕುತ್ತಿದ್ದಳು.

ಶಾಲಿನಿ ತನ್ನ ಮಾವನ ಮಗಳ ಮದುವೆಗೆಂದು ಮೈಸೂರಿಗೆ ಬಂದಿದ್ದಳು. ಅವಳು ಬರಲು ಮುಖ್ಯ ಕಾರಣವೆಂದರೆ ನಾಲ್ಕೈದು ವರುಷಗಳಿಂದ ನೋಡಲಾಗದ ಪದ್ದಕ್ಕನನ್ನು ನೋಡುವ ಆಸೆ. ಛತ್ರದಲ್ಲಿ ಅವಳನ್ನು ಹುಡುಕಿಕೊಂಡು ಬಂದ ಪದ್ದಕ್ಕ “ಚೆನ್ನಾಗಿದಿಯೇನೇ ಎಷ್ಟು ದಿನ ಅಗೋಯ್ತು ನಿನ್ನ ನೋಡಿ” ಎನ್ನುತ್ತಾ ಅವಳ ಪಕ್ಕದಲ್ಲೇ ಕುಳಿತಳು. “ಏನು ಜನಾ.. ಏನು ಜನಾ.. ನಮ್ಮ ಸುಮನ ಮದುವೇಲೂ ಹೀಗೇ ಅಲ್ವೇ.. ತುಂಬಾ ಜನ” ಎಂದ ಅವಳ ಮಾತಿಗೆ ಹೌದೆಂದು ಶಾಲಿನಿ ತಲೆ ಅಲ್ಲಾಡಿಸಿದ ತಕ್ಷಣ ಪದ್ದಕ್ಕನ ಮಾತಿನ ವರಸೆಯೇ ಬದಲಾಗಿ ಹೋಯಿತು. “ಅವರೆಲ್ಲರ ಎದುರಿಗೇ ನನ್ನ ಹೀನಾಮಾನ ಬೈದ ಕಣೆ… ಅವನ ಸೋದರಮಾವನಿಗೆ ತಾಂಬೂಲ ಕೊಡಲಿಲ್ಲವಂತೆ.. ಇದರಲ್ಲಿ ನನ್ನ ತಪ್ಪೇನಿದೆ ಅಂತ ಕೇಳಿದ್ದಕ್ಕೆ ಜುಟ್ಟು ಹಿಡಿದು ಗೋಡೆಗೆ ಜಪ್ಪಿದ…. ಅವನ ಕೈ ಸೇದಿ ಹೋಗ.. ತಲೆಯೊಳಗೆ ನೋಡು ಇನ್ನೂ ಬೋರೆ ಹಾಗೇ ಉಳಿದಿದೆ” ಎನ್ನುತ್ತಾ ಕೂದಲು ಸರಿಸಿ ತಗ್ಗಿಸಿದ ತಲೆ ಮುಂದು ಮಾಡಿದ್ದಳು ಪದ್ದಕ್ಕ. “ಯಾರ ಮಾತು ಹೇಳತಿದೀ ಪದ್ದಕ್ಕ” ಎಂದು ಶಾಲಿನಿ ಕೇಳಿದರೆ “ಹೋಗಲಿ ಬಿಡೇ..” ಎಂದು ಸುಮ್ಮನೆ ಕುಳಿತು ಬಿಡುತ್ತಿದ್ದಳು. “ಆ ರಂಡೆಗೆ ಒಬ್ಬಳು ಮಗಳೂ ಇದ್ದಾಳಂತೆ.. ಸಾಯಲಿ…” ಎನ್ನುತ್ತಾ ಮತ್ತೆ ಏನೋ ನೆನಪಿಸಿಕೊಂಡಂತೆ ಹೊಟ್ಟೆ ಹಿಡಿದುಕೊಂಡು ನಗು..! “ಪ್ರಭಾಕರನ ಮುಂಜೀಲಿ ಇಡೀ ಲಾಡು ಬುಟ್ಟಿಯನ್ನೇ ತಂದು ನನ್ನ ತಲೆಮೇಲೆ ಸುರಿದನಲ್ಲಾ… ಅವನಿಗೆ ಏನು ರೋಗ ಬಂದಿತ್ತೋ ಕಾಣೆ” ಇದ್ದಕ್ಕಿದ್ದಂತೆ ಘೊಳ್ ಎಂದು ನಗು, “ಸುಮ್ನಿರೇ ಪದ್ದೀ ಇದು ಮದುವೆ ಮನೆ ಎಲ್ಲಾ ನೋಡ್ತಾರೆ” ಎಂದು ಶಾಲಿನಿಯ ಅಮ್ಮ ಪದ್ದಕ್ಕನನನ್ನು ತಿವಿದು ಎಚ್ಚರಿಸಿದರೂ ಅದರ ಪರಿವೆಯೇ ಇಲ್ಲದಂತೆ, ನಿಧಾನಗತಿಯಿಂದ ಪ್ರಾರಂಭವಾದ ನಗು ಮೈಯನ್ನು ಕುಲುಕಿಸುತ್ತಾ ಕ್ರಮೇಣ ರಭಸವಾಗಿ ನಡುಗಿ ನೆತ್ತಿಗೇರಿ ಕೆಮ್ಮು… ಕಫದೊಡನೆ ನಗು ಬೆರತು “ಅಯ್ಯೋ ಅಪ್ಪಾ..ನನ್ ಕೈಯಲ್ಲಿ ಆಗೋಲ್ಲ ಇನ್ನು.. ಹೊಟ್ಟೆ ನೋವು ಕಣೇ…” ಜೋರಾದ ಅಳು, ಬಿಕ್ಕಿ ಬಿಕ್ಕಿ ಅಳು.

ಅವಳು ಹೀಗೆ ನಗಲು ಪ್ರಾರಂಬಿಸಿದಳೆಂದರೆ ಉಳಿದವರಿಗೆ ಗಾಬರಿಯಾಗುತ್ತಿತ್ತು. ನಕ್ಕು ನಕ್ಕು ಸುಸ್ತಾಗಿ ಕಣ್ಣ ತುದಿಯಿಂದ ಹರಿವ ನೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ, ಮುಖ ಕೆಂಪಗೆ ಮಾಡಿಕೊಂಡು, ನೂರರ ವೇಗದಲ್ಲಿ ಓಡುತ್ತಿರುವ ಗಾಡಿ ಸಡನ್ ಬ್ರೇಕ್ ಹಾಕಿದಂತೆ ಸುಮ್ಮನಾಗಿಬಿಡುತ್ತಿದ್ದಳು. ನಲವತ್ತೈದು ವರುಷದ ಅವಳ ದಾಂಪತ್ಯಕ್ಕೆ ವ್ಯಾಖ್ಯೆ ಬರೆದಂತೆ ಬಂಡೆಕಲ್ಲಿನಂತೆ ಕುಳಿತು ಬಿಡುತ್ತಿದ್ದಳು. ಯಾರು ಅಲುಗಾಡಿಸಿದರೂ ಜಪ್ಪಯ್ಯ ಅನ್ನುತ್ತಿರಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ, ಒಂದಾನೊಂದು ಕಾಲದಲ್ಲಿ ಸೊಂಟದವರೆಗೆ ಇಳಿಬಿದ್ದ ಕೂದಲನ್ನು ಮೋಹದಿಂದ ಬಾಚಿಕೊಳ್ಳುತ್ತಿದ್ದ ಪದ್ದಕ್ಕ, ಕೊನೆ ಕೊನೆಗೆ ಅಳಿದುಳಿದ ನಾಲ್ಕು ಕೂದಲನ್ನು ಗಂಟು ಹಾಕಿಕೊಳ್ಳುತ್ತಾ ಹೊರಗೆ ನಡೆದುಬಿಡುತ್ತಿದ್ದಳು. ಯಾರೊಂದಿಗೂ ಮಾತಿಲ್ಲ ಕತೆಯಿಲ್ಲ.

ಇಂತಹ ಅನೇಕ ಘಟನೆಗಳನ್ನು ಶಾಲಿನಿಯೂ ಕಂಡಿದ್ದಳು. ಪದ್ದಕ್ಕ ಗಂಡ ಹೋದ ಹೊಸದರಲ್ಲಿ ತನ್ನ ಮಗಳ ಸೀಮಂತವನ್ನು ಇಟ್ಟುಕೊಂಡಿದ್ದಳು. ಶಾಲಿನಿಗೆ ಬಂದೇತೀರಬೇಕೆಂಬ ಒತ್ತಾಯ ಬೇರೆ. ಪದ್ದಕ್ಕನಿಗೆ ಸ್ವಲ್ಪ ಸಹಾಯವಾದರೂ ಆದೀತು ಎಂದು ಶಾಲಿನಿ ಹೊರಟಿದ್ದಳು. ಮನೆ ತಲಪಿದಾಗ ಒಳಗಿನಿಂದ ಜೋರಾಗಿ ಪದ್ದಕ್ಕ ಯಾರನ್ನೋ ಬೈಯುತ್ತಿದ್ದಳು “ಹೊಡಿಯೋ ಹೊಡಿ ಮುಂಡೇಮಗನೆ ಸಾಯಿಸಿಬಿಡು..” ಶಾಲಿನಿ ಒಳಗೆ ಹೋದಾಗ ಅಲ್ಲಿ ಯಾರೂ ಇರಲಿಲ್ಲ ಮುಸ್ಸಂಜೆಯಾದರೂ ಮನೆಯಲ್ಲಿ ದೀಪ ಹಾಕಿರಲಿಲ್ಲ. ಗವ್ವೆನ್ನುವ ಕತ್ತಲು. ಶಾಲಿನಿ ಒಳಗೆ ಬಂದವಳೇ ದೀಪ ಹಾಕಿದಳು. ಪದ್ದಕ್ಕ ತಲೆಕೆದರಿಕೊಂಡು ಗೋಡೆಗೆ ಮುಖಮಾಡಿಕೊಂಡು ಕ್ಯಾಕರಿಸಿ ಉಗಿಯುತ್ತಿದ್ದಳು. “ಆವೊತ್ತು ನನ್ನ ತಲೆಮೇಲೆ ಬಿಸಿ ಸಾರು ಸುರಿದ್ಯಲ್ಲಾ ನಿನಗೇನು ಬಂದಿತ್ತೋ ಕೇಡು” ಎಂದು ರಪ ರಪ ಗೋಡೆಗೆ ಗುದ್ದುತ್ತಿದ್ದಳು. ಶಾಲಿನಿ ಪದ್ದಕ್ಕನನ್ನು ಹಿಡಿದುಕೊಂಡು ಮಂಚದ ಮೇಲೆ ಕೂರಿಸಿ ಒಳಗಿನಿಂದ ನೀರು ತಂದುಕೊಟ್ಟಳು. ಕುಡಿದು ಸೆರಗಿನಿಂದ ಬಾಯೊರೆಸಿಕೊಳ್ಳುತ್ತಾ ತಕ್ಷಣ “ಬಂದ್ಯಾ.. ಬಾ ಯಾವಾಗ ಬಂದೆ ಗೊತ್ತೇ ಆಗ್ಲಿಲ್ಲ..ನೀನು ಬಂದರೆ ನನಗೆ ಹತ್ತಾನೆ ಬಲ ಬಂದಂಗೆ ಕಣೇ..ಅಚ್ಚಕ್ಕ ಚೆನ್ನಾಗಿದ್ದಳಾ? ಅವಳೂ ಬಂದಿದ್ರೆ ಚೆನ್ನಾಗಿತ್ತು. ಆದ್ರೆ ಮನೇಲಿ ಬಾಣಂತಿ ಇರೋವಾಗ ಹೇಗೆ ಬರ್ತಾಳೆ ಹೇಳು.. ಸದ್ಯ ನೀನಾದ್ರೂ ಬಂದ್ಯಲ್ಲಾ.. ಅಯ್ಯೋ ನನ್ನ ಬುದ್ಧೀಗಿಷ್ಟು ನಿಂಗೆ ಕಾಪೀನೂ ಕೊಡದೇ ಹಾಗೇ ಮಾತಾಡಿಸ್ತ ಕೂತ್ನಲ್ಲೇ..” ಒಳಗೆ ಸರಭರ ಓಡುವಂತೆ ನಡೆದಳು.. “ನಾ ಎಲ್ಲಾ ಮಾಡ್ಕೊಂಡೇ ಬಂದಿದೀನಿ ಈಗ ಏನೂ ಬೇಡ. ನೀನು ಕೂತ್ಕೋ ಮಾತಾಡು” ಎಂದು ಬಲವಂತವಾಗಿ ಕೂರಿಸಿದ್ದಳು.

ಗಂಡ ಸತ್ತಾಗ ಪದ್ದಕ್ಕ ಎಲ್ಲರೆದುರಿಗೆ ಅತ್ತಳು ನಿಜ. ಆಗ ಶಾಲಿನಿ ಕೂಡ ದೊಡ್ಡಮ್ಮನನ್ನು ಸಂತೈಸುತ್ತಾ ಅಲ್ಲೇ ಇದ್ದಳು. “ನೀನು ಹೊರಡು ಇನ್ನು, ನಿನ್ನ ಗಂಡ ಮಕ್ಕಳಿಗೆ ಕಷ್ಟ ಅಗಬಹುದು” ಎಂದು ಎಷ್ಟು ಹೇಳಿದರೂ ಶಾಲಿನಿ ಹತ್ತನೆಯ ದಿನದವರೆಗೂ ಅಲ್ಲಿಯೇ ಇರುವುದಾಗಿ ಹಟ ಮಾಡಿದ್ದಳು. ಅದಕ್ಕೆ ಕಾರಣವೂ ಇತ್ತು. ಪದ್ದಕ್ಕನನ್ನು ಅಮಂಗಳೆಯನ್ನಾಗಿ ಮಾಡುವ ದಿನವದು. ಪದ್ದಕ್ಕನನ್ನು ಆ ಅನಿಷ್ಟಗಳಿಂದ ಕಾಪಾಡಲೆಂದೇ ಅವಳು ಅಲ್ಲಿ ಉಳಿದುಕೊಂಡಿದ್ದಳು. ಇಷ್ಟಾದರೂ ಹಿರಿಯರ ಮುಂದೆ ಶಾಲಿನಿಯ ಉದ್ದೇಶ ಈಡೇರಲಿಲ್ಲ. ಶಾಲಿನಿ ಎಷ್ಟು ತಡೆದರೂ ಕೆಲವು ಹಿರಿಯ ವಿಧವೆಯರು ಬಂದು ಪದ್ದಕ್ಕನ ಹಣೆಗೆ ಕುಂಕುಮವಿಟ್ಟು ಒರಸಿ, ಅವಳ ಮುಡಿಗೇರಿಸಿದ ಹೂವನ್ನು ತರಚಿ ಹೋಗಿದ್ದರು.

ಹೂವೆಂದರೆ ಅವಳಿಗೆ ಪ್ರಾಣ. ಉದ್ದ ಜಡೆಗೆ ಹೂಮುಡಿದು ಓಲಾಡುತ್ತಾ ಹೊರಟಳೆಂದರೆ ಯಾರಿಗಾದರೂ ಸುಖದ ಅನುಭವವಾಗುವುದು. ತವರು ಮನೆಗೆ ಹೋದಾಗಷ್ಟೇ ಅವಳ ಈ ಬಯಕೆ ಪೂರ್ತಿಯಾಗುತ್ತಿತ್ತು. ತನ್ನ ತವರು ಮನೆಯ ಹಿತ್ತಲಲ್ಲಿ ದಂಡಿಯಾಗಿ ಬಿಡುತ್ತಿದ್ದ ಮಲ್ಲಿಗೆ ಹೂಗಳನ್ನು ಬಿಡಿಸಿ ತಂದು ದಂಡೆಕಟ್ಟಿ ಮುಡಿಯುವುದರಲ್ಲಿ ಅವಳಿಗೆ ಎಂತಹ ಆನಂದವಿರುತ್ತಿತ್ತು? ಋಣಕ್ಕಾದರೂ ಒಂದೇ ಒಂದು ಸಲವಾದರೂ ಸಂತೆಯಿಂದ ‘ಇಗೋಳ್ಳೇ.. ನಿನಗೇ’ ಎಂದು ಒಂದು ಮೊಳ ಹೂವನ್ನು ತಂದುಕೊಟ್ಟವನಲ್ಲ ಅವಳ ಗಂಡ. ಸಂತೆಯಲ್ಲಿ ಹೂ ಮಾರುವ ಪಾಪದವರ ಮುಂದೆ ನಿಂತು ಚೌಕಾಸಿ ಮಾಡಿ ಹಿಗ್ಗಾಮುಗ್ಗಾ ಜಗ್ಗಾಡಿ ಕೊನೆಗೂ “ಹೋಗ್ ಹೋಗ್ ಒಂದು ಮೊಳಕ್ಕೆ ಇಷ್ಟು ಯಾರು ಕೊಡ್ತಾರೆ” ಎಂದು ಬರಿಗೈಯಲ್ಲಿ ಮನೆಗೆ ಬರುತ್ತಿದ್ದ.

ಇಂತಹ ಪಿಸುಣ ಗಂಡ ತೀರಿಕೊಂಡ ಮೇಲೆ ಅವನ ವರ್ಷದ ಶ್ರಾದ್ಧಕ್ಕೆಂದು ಶಾಲಿನಿ ಪದ್ದಕ್ಕನ ಮನೆಗೆ ಬಂದಿದ್ದಳು. ಮೂರು ದಿನಗಳ ಕಾರ್ಯಗಳೆಲ್ಲಾ ಮುಗಿದು ಬಂದ ನೆಂಟರೆಲ್ಲಾ ಮರಳಿಮನೆ ಖಾಲಿಯಾಗಿತ್ತು. ಎಲ್ಲರೂ ಸುಸ್ತಾಗಿ ಮಲಗಿದ್ದರು. ಮಾರನೆಯ ದಿನ ಹಬ್ಬದ ಶಾಸ್ತ್ರವಾದ್ದರಿಂದ ಯಾರಿಗೂ ಯಾವ ಗಡಿಬಿಡಿಯೂ ಇರಲಿಲ್ಲವೆಂಬುದನ್ನು ಮನೆಯ ನೀರವತೆಯೇ ಹೇಳುತ್ತಿತ್ತು. ರಾತ್ರಿ ಒಂದು ಹೊತ್ತಿನಲ್ಲಿ ಶಾಲಿನಿಗೆ ಎಚ್ಚರವಾಯಿತು. ನೀರು ಕುಡಿಯಲೆಂದು ಅಡುಗೆ ಮನೆಗೆ ಬಂದ ಅವಳು ಆಗ ಕಂಡದ್ದೇನು? ದೇವರ ಪಟಕ್ಕೆ ಮಾಲೆಯಾಗಿ ಹಾಕಿದ್ದ ಹೂವನ್ನು ಪದ್ದಕ್ಕ ತನ್ನ ಅಳಿದುಳಿದ ಜುಟ್ಟಿಗೆ, ಸೇರಿಸಿಕೊಂಡು ಕನ್ನಡಿಯ ಮುಂದೆ ನಿಂತು ಹಿಂದೆ ಮುಂದೆ ತಿರುಗಿ ನೋಡಿಕೊಳ್ಳುತ್ತಿದ್ದಳು. ಅವಳಿಗೆ ಗೊತ್ತಾಗದಂತೆ ಶಾಲಿನಿ ಬಾಗಿಲ ಹಿಂದೆ ಅಡಗಿಕೊಂಡಳು. ಪದ್ದಕ್ಕ ತನ್ನ ಸೀರೆಯನ್ನು ಬಿಚ್ಚಿದಳು ಬಿಳಿಯ ತೋರ ಮೈ. ಜೋತಾಡುವ ಮೊಲೆಗಳು! ಬಳಿಯಲ್ಲೇ ಇದ್ದ ಯಾವುದೋ ಶರಟನ್ನು ಹಾಕಿಕೊಂಡಳು ಅದು ಅವಳ ಧಡೂತಿ ದೇಹಕ್ಕೆ ಬಿಗಿಯಾಗುತ್ತಿತ್ತು. ಆನಂತರ ಮಗನ ಪ್ಯಾಂಟನ್ನು ಹಾಕಿಕೊಳ್ಳಲು ಹೋಗಿ ವಿಫಲಳಾದಳು. ಅಲ್ಲಿಯೇ ನೇತಾಡುತ್ತಿದ್ದ ಒಂದು ಪೈಜಾಮವನ್ನು ಹಾಕಿಕೊಂಡು ಮತ್ತೊಮ್ಮೆ ಕನ್ನಡಿ ನೋಡಿಕೊಂಡು, ಸದ್ದಾಗದಂತೆ ಬಾಗಿಲು ತೆಗೆದು ಹೊರನಡೆದಳು. ಶಾಲಿನಿಯೂ ಅವಳಿಗೆ ಗೊತ್ತಾಗದಂತೆ ಹಿಂಬಾಲಿಸಿದಳು. ದುಡು ದುಡು ಹೊಳೆಯ ಕಡೆ ಓಡಹತ್ತಿದಳು ಪದ್ದಕ್ಕ. ಶಾಲಿನಿಯೂ ಅವಳ ಬೆನ್ನುಹತ್ತಿದಳು. ಹೊಳೆಯ ದಡದಲ್ಲಿ ನಿಂತು ಒಮ್ಮೆ ಪದ್ದಕ್ಕ ತಿರುಗಿ ನೋಡಿದಾಗ, ಮುಖಕ್ಕೆಲ್ಲಾ ಅಡ್ಡಾದಿಡ್ಡಿಯಾಗಿ ಪೌಡರನ್ನು ಬಳಿದುಕೊಂಡು ತುಟಿಗೆ ಎಂಥದೋ ಬಣ್ಣವನ್ನು ಬಳಿದು, ಕಣ್ಣಿಗೆ ರಾಡಿಯಾಗಿ ಕಪ್ಪು ಹಚ್ಚಿದ ಪದ್ದಕ್ಕನ ಮುಖ ವಿಕಾರವಾಗಿ ಶಾಲಿನಿಗೆ ಕಂಡಿತು. ಪದ್ದಕ್ಕ ಹೊಳೆಗೆ ಬೀಳಬಹುದೆಂಬ ಭಯದಲ್ಲಿ ಶಾಲಿನಿ ಮುಂದಡಿಯಿಟ್ಟಳು. “ಇಲ್ಲಿಗ್ಯಾಕೆ ಬಂದೇ …. ನನ್ನ ಹೆಣ ಬೀಳಿಸೋದಕ್ಕಾ? ನಾನು ಸಾಯಲ್ಲ ಕಣೇ.. ನಾನು ಸಾಯೋಲ್ಲ, ಬರೆದಿಟ್ಕೋ ಬೇಕಾದರೆ” ಎಂದು ಹೇಳಿ ಭೋರೆಂದು ಕೂಗಿಕೊಂಡು ಬಿದ್ದುಬಿಟ್ಟಳು. ಎಂದೂ ಗಟ್ಟಿಯಾಗಿ ಮಾತನಾಡದ ದೊಡ್ಡಮ್ಮ ಹೀಗೆ ಘರ್ಜಿಸಿದ್ದು ಕೇಳಿ ಶಾಲಿನಿ ಬೆವತು ಹೋದಳು. ಸಾವರಿಸಿಕೊಂಡು ಹತ್ತಿರ ಹೋದಾಗ ಪದ್ದಕ್ಕ ಪ್ರಜ್ಞೆತಪ್ಪಿ ಬಿದ್ದಿರುವುದು ಗೊತ್ತಾಯಿತು. ಆಗಷ್ಟೇ ಬೆಳಕು ಹರಿಯುತ್ತಿತ್ತು. ತಕ್ಷಣವೇ ಪದ್ದಕ್ಕನ ಮಗ ಶ್ರೀನಿವಾಸನನ್ನು ಕರೆಯಲು ಮನೆಗೆ ಓಡಿದ್ದಳು.

ಶಾಲಿನಿಗೆ ಮಕ್ಕಳ ಶಾಲೆ, ಓದು, ಪರೀಕ್ಷೆ ಮುಂತಾದ ತನ್ನ ಸಂಸಾರದ ಜಂಜಡದಲ್ಲಿ ಪದ್ದಕ್ಕನ ಮನೆಯ ಓಡಾಟ ಕಡಿಮೆಯಾಯಿತು. ಪದ್ದಕ್ಕನ ಮನೆಗೆ ಸೊಸೆಯರೂ ಬಂದಾಗಿತ್ತು. ಹೆಣ್ಣು ಮಕ್ಕಳೂ ಗಂಡನ ಮನೆ ಸೇರಿಯಾಗಿತ್ತು. ಬಂದ ಸೊಸೆಯಂದಿರಿಂದಲೂ ಪದ್ದಕ್ಕ ಸುಖ ಉಣ್ಣಲಿಲ್ಲ. ಈಗ ಪದ್ದಕ್ಕನೇ ಅವಳ ಮನೆಯಲ್ಲಿ ಅತಿಥಿಯಾಗಿದ್ದಳು, ಇನ್ನು ಶಾಲಿನಿ ಹೋಗುವುದೆಲ್ಲಿಗೆ? ಅರವತ್ತು ಸಮೀಸುತ್ತಿದ್ದ ಪದ್ದಕ್ಕ ಎಪ್ಪತ್ತನ್ನು ದಾಟಿದ ಹೆಂಗಸಂತೆ ಕಾಣಹತ್ತಿದ್ದಳು. ಅವಳ ಮಗನೇ ಅವಳಿಗೆ ಸ್ನಾನವನ್ನು ಮಾಡಿಸುತ್ತಿದ್ದ. ಹೇನು ಹತ್ತಿ ಕರಪರ ಕೆರೆಯುವ ಅವಳ ತಲೆಯನ್ನು ಬಾಚುವವರೇ ಇಲ್ಲವಾಯಿತು. ಕೈಕಾಲು ಬಿದ್ದಹೋಗಿತ್ತು. ಪದ್ದಕ್ಕ ಈಗ ನಗುವುದು ಜಾಸ್ತಿಯಾಗಿತ್ತು. ಸಣ್ಣ ಕಾರಣ ಸಿಕ್ಕರೂ ನಗು ಸ್ಫೋಟಗೊಳ್ಳುತ್ತಿತ್ತು.

*****

“ಎಲ್ಲಾದಕ್ಕೂ ಪುಣ್ಯ ಬೇಕು ಶಾಲಿನಿ.. ನಿನಗೆ ದೇವರಂತಹ ಗಂಡ ಸಿಕ್ಕಿದ್ದಾನೆ… ಅನುಸರಿಸಿಕೊಂಡು ಹೋಗು.. ಜೋರು ಮಾಡಬೇಡಾ.. ಗೊತ್ತಾಯಿತಾ..” ಎಂದು ಒಮ್ಮೆ ಶಾಲಿನಿ ಅವಳ ಮನೆಗೆ ಹೋದಾಗ ಎತ್ತರದ ದನಿಯಲ್ಲಿ ಅವಳನ್ನು ಎಚ್ಚರಿಸಿದ್ದಳು.

“ಶಾಲಿನಿ.. ಮೊಟ್ಟಮೊದಲು ಮಗೂನ ಎತ್ಕೊಂಡು ಬಂದಿದಿಯಾ.. ತಡಿಯೇ.. ಶ್ಯಾವಿಗೆ ಪಾಯಸನಾರ ಮಾಡ್ತೀನಿ. ಎಷ್ಟು ಮುದ್ದಾಗಿದ್ದಾನೆಯೇ ನಿನ್ ಮಗಾ.. ಬಲೇ ತುಂಟ. ಜೋಪಾನವಾಗಿ ನೋಡ್ಕೋ..” ಎಂದು ಗಲ್ಲ ಹಿಂಡಿ ಲೊಚ ಲೊಚ ಮುತ್ತುಕೊಟ್ಟಿದ್ದ ಪದ್ದಕ್ಕ ದುರ್ದಾನ ತೆಗೆದುಕೊಂಡವಳಂತೆ ತಿರುಗಿ ನೋಡದೇ ಹೊರಟು ಬಿಟ್ಟಳು.
“ಏಯ್ ನನ್ನ ಸೆರಗು ಬಿಡೋ.. ಬಿಡೋ..ಬಿಡೋ….” ಮುಖ ಕೆಂಪಗೆ ಮಾಡಿಕೊಂಡು “ಹತ್ರಬಂದ್ರೆ.. ನೋಡು..ಬೇಡಾ ಮತ್ತೆ..” ಎನ್ನುವಂತೆ ಕೈ ಅಡ್ಡ ಹಿಡಿದಿದ್ದಳು…ತುಸು ಭಾರವಾದ ಪದ್ದಕ್ಕನ ನಿತಂಬದ ಮೇಲೆ ಅಷ್ಟೇ ಭಾರವಾದ ಉದ್ದನೆಯ ಜಡೆ ಓಲಾಡುತ್ತಿತ್ತು. ಪದ್ದಕ್ಕಾ ಪದ್ದಕ್ಕಾ …ಎಂದು ಅವಳನ್ನು ಹಿಡಿಯಲೆಂದು ಅವಳ ಜಡೆಗೆ ಕೈ ಹಾಕಿ ಎಳೆದಳು. ಜಡೆಯ ಜೊತೆಗೆ ಅವಳ ಇಡಿಯ ತಲೆ ಕೂದಲೇ ಕಿತ್ತು ಶಾಲಿನಿಯ ಕೈಗೆ ಬಂದುಬಿಟ್ಟಿತು. ಬೆಚ್ಚಿ ಬಿದ್ದು ಶಾಲಿನಿ ಕಣ್ತೆರೆದಳು. ಬೆವರಿನಿಂದ ಮೈ ಪೂರ್ತಿ ತೊಯ್ದು ಹೋಗಿತ್ತು. ತೆರೆದ ಕಿಟಕಿಯಾಚೆ ಇಣುಕಿದಾಗ,

ಬೋಳು ತಲೆಯ ಪದ್ದಕ್ಕ ಕತ್ತಲಲ್ಲಿ ಮರೆಯಾಗಿ ಬಿಟ್ಟಳು.


ಗಿರಿಜಾಶಾಸ್ತ್ರಿ

ನನಗೆ ಬುದ್ಧಿ ತಿಳಿದಾಗಿನಿಂದ, ಅನಂತಮೂರ್ತಿಯವರ ‘ಘಟಶ್ರಾದ್ಧ’ ಕತೆಯನ್ನು ಓದುವುದಕ್ಕೂ ಮುನ್ನ ಬ್ರಾಹ್ಮಣ ಮಹಿಳೆಯರಿಗೇ ಮೊದಲು ಕಾಯಕಲ್ಪವಾಗಬೇಕೆಂದು ನನಗೆ ಬಲವಾಗಿ ಎನಿಸುತ್ತಿದ್ದುದಕ್ಕೆ ಕಾರಣ ಹೊರಗಿನ ಸಾಮಾಜಿಕ ಸಿದ್ಧಾಂತಗಳಲ್ಲ, ಲಿಂಗ ಸಮಾನತೆಯ ಆದರ್ಶಗಳಲ್ಲ, ಬದಲಾಗಿ ನಾನು ಹುಟ್ಟಿ ಬೆಳೆದ ಪರಿಸರವೇ ಆಗಿದ್ದಿತು. ಬಾಲ್ಯದಲ್ಲಿ ನನ್ನ ಸುತ್ತ ಇದ್ದ ಮಹಿಳೆಯರೆಂದರೆ ಮಡಿ ಹೆಂಗಸರಾದ ಬಾಲವಿಧವೆಯರು, ಸಕೇಶಿಯರು, ಕಟ್ಟುನಿಟ್ಟು ಮುತ್ತೈದೆಯರು. ಬೆಳಗಿನ ಹೊತ್ತು ಗಂಡನ ಜೊತೆ ಮಾತನಾಡದೇ ಸಂಸಾರ ಮಾಡುವ ಗೃಹಿಣಿಯರು. ಆಸ್ತಿಯ ಹಕ್ಕನ್ನು ಕಳೆದುಕೊಂಡ ಹೆಚ್ಚಿನ ಬಾಲ ವಿಧವೆಯರು ತಮ್ಮ ಉದರಂಭರಣೆಗಾಗಿ ಮುತ್ತುಗದ ಎಲೆ ಹೆಣೆಯುತ್ತಾ ಕಾಲಕಳೆಯುತ್ತಿದ್ದುದನ್ನು ನಾನು ಮರೆಯುವ ಹಾಗೇ ಇಲ್ಲ. ಶಾಲೆ, ಕಾಲೇಜು ಮೆಟ್ಟಿಲೇರುತ್ತಿದ್ದಂತೆ ಮುಳ್ಳುಬೇಲಿಗಳೊಳಗೆ ಬದುಕುವ ಇವರ ಬಗ್ಗೆ ನನಗೆ ಅನುಕಂಪಕ್ಕಿಂತಲೂ ಸಿಟ್ಟು ಬರುತ್ತಿತ್ತು.
ಕ್ರಮೇಣ, ಎಲ್ಲಿ ಬಂಧನದ ಅರಿವಿರುವುದೋ ಅಲ್ಲಿ ಬಿಡುಗಡೆಯ ಸಾಧ್ಯತೆಗಳೂ ಇವೆ ಎಂಬುದು ನನ್ನ ತಿಳಿವಿಗೆ ಬಂದದ್ದು ನಿಜ. ಬಂಧನದ ಅರಿವೇ ಇಲ್ಲದ ಹೆಂಗೆಳೆಯರು ಬಿಡುಗಡೆಯ ಬಗೆಗೆ ಕನಸು ಕಾಣುವುದಾದರೂ ಹೇಗೆ? ಅಂದಿನ ಹೆಚ್ಚಿನ ಮಹಿಳೆಯರಿಗೆ ಬಂಧನದ ಅರಿವಿಲ್ಲದೇ ಹೋದದ್ದು ನಿಜ. ಆದರೆ ನೈಸರ್ಗಿಕ ಒತ್ತಡಗಳು ಮತ್ತು ಸಾಮಾಜಿಕ ನಂಬಿಕೆಗಳ ನಡುವೆ ಸಮತೋಲ ಸಾಧಿಸಲು ಅವರು ನಡೆಸಿದ ಹೋರಾಟ ಮಾತ್ರ ಆಧುನಿಕ ಮಹಿಳೆಯರ ಹೋರಾಟಕ್ಕಿಂತ ಸಾವಿರಪಟ್ಟು ಕಷ್ಟಕರವಾದುದು, ಸಂಕೀರ್ಣವಾದುದು ಎಂದೇ ನನಗೆನ್ನಿಸುತ್ತದೆ. ಆದುದರಿಂದಲೇ ಆಧುನಿಕ ಸ್ತ್ರೀವಾದಿಗಳು ನಮ್ಮ ಅಮ್ಮಂದಿರಿಗೆ, ಅಜ್ಜಿಯರಿಗೆ ಬುದ್ಧಿ ಇರಲಿಲ್ಲವೆಂದರೆ ಹಾಸ್ಯಾಸ್ಪದವೆನಿಸುವುದು. ಬೇಟೆಗಾರನಿಂದ ತಪ್ಪಿಸಿಕೊಳ್ಳಲು ಆ ಮಹಿಳೆಯರು ಕಂಡುಕೊಂಡ ಅಡಗುತಾಣ, ಎದುರಿಸಲು ಹೂಡಿದ ತಂತ್ರ ಮಾತ್ರ ಎಂದಿಗೂ ಬೆರಗುಗೊಳಿಸುವಂತಹದ್ದು. ಇದರಲ್ಲಿ ಅವರು ಸೋತಿದ್ದಿರಬಹುದು, ಸಾವಿಗೆ ಶರಣಾಗಿರಬಹುದು. ಹಾಗೆ ನೆಲಕ್ಕೆ ಬೀಳುವ ಮುನ್ನ ಅವರು ತೋರಿಸಿದ ಜೀವಂತಿಕೆ ಮಾತ್ರ ಅನನ್ಯವಾದುದು. ಈ ನಿಟ್ಟಿನಿಂದಲೇ ನಮ್ಮ ಪೂರ್ವದ ಮಹಿಳೆಯರನ್ನು ಬಲಿಪಶುಗಳನ್ನಾಗಿ ಗ್ರಹಿಸುವುದಕ್ಕೆ ಬದಲಾಗಿ ಎಂತಹ ವೈಪರೀತ್ಯಗಳ ನಡುವೆಯೂ ಕಂಗೆಡದ ಧೀರೆಯರನ್ನಾಗಿ ಗ್ರಹಿಸಬೇಕು ಎನ್ನುವುದು ನನ್ನ ನಂಬಿಕೆ.
ಈ ದೃಷ್ಟಿಯಲ್ಲಿ ಇಲ್ಲಿ ಪದ್ದಕ್ಕನ ಕಥೆಯನ್ನು ನೋಡಬಹುದೇನೋ. ನಾನು ಅವಳನ್ನು ಹತ್ತಿರದಿಂದ ಕಂಡವಳೇ. ಕಥೆಯ ವಾಸ್ತವವನ್ನು ಮರೆಮಾಚಲಿಕ್ಕೆ ಮತ್ತು ಅದನ್ನು ನೈಜವಾಗಿಸಲಿಕ್ಕೆ ಕೆಲವು ಬದಲಾವಣೆಗೆಳನ್ನು, ಕುಸರಿ ಅಲಂಕಾರಗಳನ್ನು ಮಾಡಿದ್ದೇನೆ.