1943ರ ವಸಂತ ಮಾಸದ ಸಮಯದಲ್ಲಿ ಸಹೋದರನಿಗೆ ಬರೆದ ಪತ್ರದಲ್ಲಿ “ನಾನೀಗ ಬಿಡುವಿಲ್ಲದ ಚಿಕ್ಕ ಹುಡುಗಿ, ಜೀವನವೆಲ್ಲ ಕುತೂಹಲಕರ ಕೆಲಸಗಳು ತುಂಬಿವೆ. ಹಿಂದೆ ಇದ್ದ ಅಬಿಂಗ್ಡನ್ ಪ್ರಾಂತ್ಯದ ಮನೆಯಲ್ಲಿ ವ್ಯರ್ಥವಾದ ಸಮಯವನ್ನು ಇಲ್ಲಿ ತುಂಬಿಸಿಕೊಳ್ಳುತ್ತಿದ್ದೇನೆ. ನೀನು ಮರಳುವಾಗ ಬಹುಶಃ ಇಲ್ಲೇ ಇರುತ್ತೇನೆ” ಎಂದು ಬರೆದಿದ್ದಳು. ಮುಂದೊಂದು ದಿನ ತಾನು ಜರ್ಮನಿಯಲ್ಲಿ ಸೆರೆಯಲ್ಲಿರುವುದನ್ನು ಅಂದು ಅವಳು ಊಹಿಸರಲಿಲ್ಲ, ಆದರೆ ಹಾಗೆ ಸೆರೆಯಲ್ಲಿರುವಾಗ, ಊಟದ ತಟ್ಟೆಯ ಮೇಲೆ ತನ್ನ ಹೆಸರನ್ನು “ನೋರಾ ಬೇಕರ್, ರೇಡಿಯೋ ನಿರ್ವಾಹಕಿ” ಎಂದು ಕೆತ್ತಿ ಜೈಲಿನಲ್ಲಿರುವ ಸಹವಾಸಿಗಳೊಡನೆ ಸಂಪರ್ಕಿಸುತ್ತಿದ್ದಳು.
ಯೋಗೀಂದ್ರ ಮರವಂತೆ ಬರೆಯುವ ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯ ಹೊಸ ಬರಹ

ಲೇಖಕಿ ಇತಿಹಾಸಕಾರ್ತಿ ಶ್ರಾಬಣಿ ಬಸು ಹೇಳುತ್ತಾರೆ “ಆಕೆ ಲಂಡನ್‌ನ ಮನೆಯನ್ನು ಬಿಟ್ಟು ಹೊರಟಾಗ ತಾನೊಂದು ದಿನ ಸಾಹಸ ಹಾಗು ತ್ಯಾಗಗಳ ಸಂಕೇತವಾಗಿ ಬ್ರಿಟನ್ನಿನ ಇತಿಹಾಸದಲ್ಲಿ ಜಾಗ ಪಡೆಯುವೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಕ್ಕಿಲ್ಲ. ಅವಳು ಬ್ರಿಟನ್ ಕಂಡ ಅಸಾಮಾನ್ಯ ಗೂಢಚಾರಿಣಿ. ಸೂಫಿ ಸಿದ್ಧಾಂತಗಳಲ್ಲಿ ಒಲವಿದ್ದ ಅವಳು ಅಹಿಂಸೆ ಹಾಗು ಸಾಮರಸ್ಯವನ್ನು ನಂಬಿದವಳು. ಆದರೂ ದೇಶ ಅವಳ ಸೇವೆಯನ್ನು ಬಯಸಿದಾಗ ಹಿಂಜರಿಕೆ ಇಲ್ಲದೇ ಫಾಸಿವಾದದ (ಫ್ಯಾಸಿಸಂ) ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿ ಕ್ರೌರ್ಯವನ್ನು ಎದುರಿಸುತ್ತ ಜೀವತೆತ್ತಳು.”

ಬಸು ಹೇಳಿದ್ದು ನೂರ್ ಇನಾಯತ್ ಖಾನ್, ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್ನಿನಿಂದ ನಾಝಿ ಆಕ್ರಮಿತ ಫ್ರಾನ್ಸ್ ಗೆ ಕಳುಹಿಸಲ್ಪಟ್ಟ ಗುಪ್ತಚರೆಯ ಕುರಿತು. ನೂರ್, ಬ್ರಿಟನ್ನಿನ ಮೊಟ್ಟಮೊದಲ ರೇಡಿಯೋ ಸಂದೇಶ ನಿರ್ವಾಹಕಿ ಎನ್ನುವ ಹಿರಿಮೆ ಕೂಡ ಹೊಂದಿದವಳು.

ನೂರ್‌ಳ ತಾಯಿ ಅಮೆರಿಕ ಮೂಲದ ಕವಿ ಅಮೀನಾ ಬೇಗಂ, ತಂದೆ ಭಾರತದ ಇನಾಯತ್ ಖಾನ್, ಹಿಂದೂಸ್ತಾನಿ ಸಂಗೀತಗಾರ ಮತ್ತು ಸೂಫಿ ಗುರು. ಬರೋಡಾದಲ್ಲಿ ಜನಿಸಿದ ಇನಾಯತ್ ಖಾನ್ ಹದಿನೆಂಟನೆಯ ಶತಮಾನದಲ್ಲಿ ಮೈಸೂರಿನ ರಾಜನಾಗಿದ್ದ ಟಿಪ್ಪು ಸುಲ್ತಾನ್ ವಂಶದ ನೇರ ವಾರಿಸು ಎಂದು ಕೆಲವು ಇತಿಹಾಸಕಾರರು ಹೇಳಿದ್ದಾರೆ. ಅವರು ಸೂಫಿ ತತ್ವನನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಪರಿಚಯಿಸುತ್ತ ತಿರುಗಿದವರು, ಅಮೆರಿಕದಲ್ಲಿ ಸಂಪರ್ಕಕ್ಕೆ ಬಂದ ಅಮೀನಾರನ್ನು ಮದುವೆಯಾದವರು. ಸೂಫಿ ಯಾನವನ್ನು ಮುಂದುವರೆಸಿ ರಷ್ಯಾದಲ್ಲಿ ಇದ್ದಾಗ ಹುಟ್ಟಿದ ನೂರ್ ಬಾಲ್ಯವನ್ನು ಲಂಡನ್ ಅಲ್ಲಿ ಕಳೆದು, ಕುಟುಂಬ ಪ್ಯಾರಿಸ್ ಗೆ ವಾಸ್ತವ್ಯ ಬದಲಿಸಿದ ಮೇಲೆ ಬಹುತೇಕ ಅವಧಿಯನ್ನು ಅಲ್ಲೇ ಕಳೆದಳು. ಸಣ್ಣ ವಯಸ್ಸಿನಲ್ಲಿ ನೂರ್ ಳನ್ನು ತಿಳಿದವರು “ಸಂಗೀತ ವಾದ್ಯವನ್ನು ನುಡಿಸುವ, ಮಕ್ಕಳ ಕತೆಗಳನ್ನು ಬರೆಯುವ ಯಾವಾಗಲೂ ಕನಸು ಕಾಣುವ ಹುಡುಗಿ” ಎಂದು ವರ್ಣಿಸಿದ್ದಾರೆ. ಶಿಕ್ಷಣದ ಮುಂದುವರಿಕೆಯಲ್ಲಿ ಮಕ್ಕಳ ಮನಃಶಾಸ್ತ್ರವನ್ನು ವಿಷಯವಾಗಿ ಆಯ್ದುಕೊಂಡಳು. ಪ್ರತಿಭಾನ್ವಿತ ಸಂಗೀತ ಕಲಾವಿದೆಯಾಗಿ ಬೆಳೆದಳು, ಮಕ್ಕಳ ಪುಸ್ತಕಗಳನ್ನು ಬರೆದಳು.

೧೯೪೦ರಲ್ಲಿ ಆಗಲೇ ಎರಡನೆಯ ಮಹಾಯುದ್ಧ ಯೂರೋಪ್‌ನಲ್ಲಿ ಹಬ್ಬಿ, ಫ್ರಾನ್ಸ್ ನ ರಾಜಧಾನಿ ಪ್ಯಾರಿಸ್, ಜರ್ಮನಿಯ ನಾಝಿಗಳ ವಶವಾಗುವ ಕೆಲವೇ ದಿನಗಳ ಮೊದಲು ಅವಳ ಕುಟುಂಬ ಫ್ರಾನ್ಸ್ ಬಿಟ್ಟು ಇಂಗ್ಲೆಂಡ್ ಗೆ ಹೊರಟಿತ್ತು. ಶಾಂತಿಪ್ರಿಯ ಸೂಫಿ ವಾತಾವರಣದಲ್ಲಿ ಬೆಳೆದ ನೂರ್ ಮತ್ತು ಕುಟುಂಬ, ನಾಝಿಗಳ ಫಾಸಿವಾದದ ವಿರುದ್ಧದ ಹೋರಾಟವನ್ನು ಸೇರಲು ಬಯಸಿ ಮೊದಲು ತಾವು ವಾಸಿಸುತ್ತಿದ್ದ ಇಂಗ್ಲೆಂಡ್ ಗೆ ಮರಳಿದ್ದರು.

ನೂರ್ 1940ರ ನವೆಂಬರ್ 19ರಂದು ಬ್ರಿಟನ್ನಿನ ಮಹಿಳಾ ಮೀಸಲು ವಾಯುಪಡೆಯಲ್ಲಿ “ನೋರಾ ಇನಾಯತ್ ಖಾನ್” ಎಂದು ತನ್ನ ಹೆಸರು ನೋಂದಾಯಿಸಿದಳು. 1941ರಲ್ಲಿ ಗೂಢಚಾರ ವಿಭಾಗದಲ್ಲಿ ಕೆಲಸ ಮಾಡುವ ಆಸಕ್ತಿ ತೋರಿಸಿದಳು. 1942ರಲ್ಲಿ ತಂತಿರಹಿತ ಸಂಪರ್ಕ ನಿರ್ವಾಹಕಿಯಾಗಿ ನಿಯುಕ್ತಿಗೊಂಡು ವಿಶೇಷ ತರಬೇತಿಯನ್ನೂ ಪಡೆದಳು. 1942ರ ನವೆಂಬರ್ ಹತ್ತರಂದು, ಪ್ರಧಾನಿ ಚರ್ಚಿಲ್‌ರಿಂದ ನಿರ್ಮಿಸಲ್ಪಟ್ಟ ಸ್ವತಂತ್ರ ಬ್ರಿಟಿಷ್ ಗುಪ್ತಚರ ಪಡೆಯ ವಿಶೇಷ ಕಾರ್ಯನಿರ್ವಾಹಕಿ ಹುದ್ದೆಯ ಆಯ್ಕೆಯ ಸಂದರ್ಶನಕ್ಕಾಗಿ ಲಂಡನ್‌ಗೆ ಬಂದಳು. ಆಯ್ಕೆಯಾದ ಮೇಲೆ, ಬ್ರಿಟನ್ನಿನ ಹಲವು ಗುಪ್ತ ಸ್ಥಳಗಳಲ್ಲಿ ಪ್ಯಾರಾಮಿಲಿಟರಿ ತರಬೇತಿ ಸಿಕ್ಕಿತು.

1940ರ ಸಮಯದಲ್ಲಿ ಅವಳದು ಅಲೆಮಾರಿ ಬದುಕಾಗಿತ್ತು. ಇಂಗ್ಲೆಂಡ್‌ನಲ್ಲಿ ತನ್ನ ಕುಟುಂಬ ಎಲ್ಲೆಲ್ಲಿ ವಾಸಿಸುತ್ತಿತ್ತೋ ಅಲ್ಲೆಲ್ಲ ಅವಳೂ ಜೊತೆಗಿದ್ದಳು. 1942 ಹಾಗು 43ರ ನಡುವೆ ಲಂಡನ್ ನ ಬ್ಲೂಮ್ಸ್‌ಬರಿ ಪ್ರದೇಶದ ಟಾವಿಟನ್ ರಸ್ತೆಯ ನಾಲ್ಕನೆಯ ನಂಬ್ರದ ಮನೆಯಲ್ಲಿ ವಾಸಿಸುತ್ತಿದ್ದಳು. 1943ರ ವಸಂತ ಮಾಸದ ಸಮಯದಲ್ಲಿ ಸಹೋದರನಿಗೆ ಬರೆದ ಪತ್ರದಲ್ಲಿ “ನಾನೀಗ ಬಿಡುವಿಲ್ಲದ ಚಿಕ್ಕ ಹುಡುಗಿ, ಜೀವನವೆಲ್ಲ ಕುತೂಹಲಕರ ಕೆಲಸಗಳು ತುಂಬಿವೆ. ಹಿಂದೆ ಇದ್ದ ಅಬಿಂಗ್ಡನ್ ಪ್ರಾಂತ್ಯದ ಮನೆಯಲ್ಲಿ ವ್ಯರ್ಥವಾದ ಸಮಯವನ್ನು ಇಲ್ಲಿ ತುಂಬಿಸಿಕೊಳ್ಳುತ್ತಿದ್ದೇನೆ. ನೀನು ಮರಳುವಾಗ ಬಹುಶಃ ಇಲ್ಲೇ ಇರುತ್ತೇನೆ” ಎಂದು ಬರೆದಿದ್ದಳು. ಮುಂದೊಂದು ದಿನ ತಾನು ಜರ್ಮನಿಯಲ್ಲಿ ಸೆರೆಯಲ್ಲಿರುವುದನ್ನು ಅಂದು ಅವಳು ಊಹಿಸರಲಿಲ್ಲ, ಆದರೆ ಹಾಗೆ ಸೆರೆಯಲ್ಲಿರುವಾಗ, ಊಟದ ತಟ್ಟೆಯ ಮೇಲೆ ತನ್ನ ಹೆಸರನ್ನು “ನೋರಾ ಬೇಕರ್, ರೇಡಿಯೋ ನಿರ್ವಾಹಕಿ, ರಾಯಲ್ ಏರ್ಫೋರ್ಸ್, 4 ಟಾವಿಟನ್ ರಸ್ತೆ, ಲಂಡನ್” ಎಂದು ಕೆತ್ತಿ ಜೈಲಿನಲ್ಲಿರುವ ಸಹವಾಸಿಗಳೊಡನೆ ಸಂಪರ್ಕಿಸುತ್ತಿದ್ದಳು. ತನ್ನ ಮನೆಯಲ್ಲಿ ಅತಿಥಿಗಳು ತುಂಬಿಕೊಂಡಾಗ, ಟಾವಿಟನ್ ರಸ್ತೆಯ 1ನೆಯ ನಂಬ್ರದ ಮನೆಯಲ್ಲಿದ್ದ ಜೀನ್ ಓವರ್ಟನ್ ಫುಲ್ಲರ್ ಎನ್ನುವ ಗೆಳತಿಯ ಜೊತೆಗೆ ಹೋಗಿ ಇರುತ್ತಿದ್ದಳು. ಬರಹಗಾರ್ತಿ ಜೀನ್ ಮುಂದೆ ನೂರ್‌ಳ ಜೀವನಕಥೆಯ “ಮೆಡೆಲಿನ್” ಪುಸ್ತಕ ಬರೆದಳು. ಟಾವಿಟನ್ ರಸ್ತೆಯ ಮನೆಯಲ್ಲಿ ಅವಳ ವಾಸ ಉಲ್ಲಾಸದಿಂದ ಕೂಡಿತ್ತು, ಲಂಡನ್ ಜೊತೆ ನೂರ್‌ಳ ಗುರುತನ್ನು ಗಟ್ಟಿಯಾಗಿ ಬಂಧಿಸಿತ್ತು.

1943ರ ಜೂನ್ 16ರ ರಾತ್ರಿ, ನೂರ್‌ಳನ್ನು ವಿಶೇಷ ಸೇವೆಯ ಹೊಣೆ ಹೊರಿಸಿ ನಾಝಿ ಆಕ್ರಮಿತ ಫ್ರಾನ್ಸ್‌ಗೆ ಕಳುಹಿಸಲಾಯಿತು. ಫ್ರೆಂಚ್ ಭಾಷೆಯನ್ನು ಸುಲಲಿತವಾಗಿ ಮಾತನಾಡಬಲ್ಲವಳು, ಫ್ರಾನ್ಸ್‌ನಲ್ಲಿ ಮೊದಲು ವಾಸಿಸಿದ ಕಾರಣ ಪ್ರಾಂತ್ಯವನ್ನೂ ಸರಿಯಾಗಿ ತಿಳಿದವಳು ಎನ್ನುವುದು ಕೂಡ ಆಯ್ಕೆಯ ಹಿಂದಿನ ಕಾರಣಗಳಾಗಿದ್ದವು. ಸಂದೇಶ ರವಾನಿಸುವ ರೇಡಿಯೋ ಸಂಪರ್ಕ ಮಾಧ್ಯಮದ ಕೆಲಸಗಳನ್ನು ಅರಿತಿದ್ದ ಆಕೆಯನ್ನು ಅತ್ಯುತ್ತಮ ರೇಡಿಯೋ ನಿರ್ವಾಹಕಿ ಎನ್ನುತ್ತಿದ್ದರು. ನಿಗೂಢವಾಗಿ ಶತ್ರುನೆಲದಲ್ಲಿ ಕಾರ್ಯಾಚರಣೆ ಮಾಡುವ ವಿಶೇಷ ಜವಾಬ್ದಾರಿ ಅವಳದಾಗಿತ್ತು.. ಪ್ಯಾರಿಸ್ ಅಲ್ಲಿ ಇರುವ ಇತರ ಗುಪ್ತಚರರನ್ನು ಸಂಪರ್ಕಿಸಿ, ವೈರಿಯ ನೆಲೆ, ಸೂಕ್ಷ್ಮ ವರ್ತಮಾನಗಳನ್ನು ಯುದ್ಧದ ಸಮಯದಲ್ಲಿ ಮಹತ್ವದ್ದು ಎನಿಸುವ ಸಂದೇಶಗಳನ್ನು ನಿಸ್ತಂತು ಮಾಧ್ಯಮದಲ್ಲಿ ಲಂಡನ್‌ಗೆ ರವಾನಿಸಬೇಕಿತ್ತು. ಅವಳೇ ಬರೆದ ಮಕ್ಕಳ ಕತೆಯ ಒಂದು ಪಾತ್ರ “ಮೆಡೆಲಿನ್” ಗೂಢಚಾರ ವೃತ್ತಿಯಲ್ಲಿ ಅವಳ ಗುಪ್ತನಾಮವಾಗಿತ್ತು. ಅವಳು ಫ್ರಾನ್ಸ್ ಗೆ ಬಂದು ಕಾರ್ಯನಿರ್ವಹಿಸಲಾರಂಭಿಸಿದ ನಂತರ ಬ್ರಿಟಿಷ್ ಗುಪ್ತಚರ ತಂಡದ ಹಲವರು ಸೆರೆಗೆ ಸಿಕ್ಕಿದ್ದರು, ಸಂಪರ್ಕ ಜಾಲ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಸಾಧ್ಯ ಇಲ್ಲದೇ ವೈಫಲ್ಯ ಕಂಡಿತ್ತು. ತನ್ನ ಹಿರಿಯ ಅಧಿಕಾರಿ ಸೆರೆಸಿಕ್ಕ ವಿಷಯವನ್ನೂ ಅವಳೇ ರೇಡಿಯೋ ಮೂಲಕ ಲಂಡನ್ ಗೆ ತಲುಪಿಸಿದ್ದಳು. ಬ್ರಿಟನ್‌ಗೆ ಮರಳುವ ಅವಕಾಶ ಇದ್ದರೂ ನೂರ್, ಫ್ರಾನ್ಸ್‌ನಲ್ಲೆ ಉಳಿದು ಗುಪ್ತ ಸಂದೇಶ ನಿರ್ವಾಕಿಯಾಗಿ ಮುಂದುವರಿಯ ಬಯಸಿದಳು. ಲಂಡನ್‌ಗೆ ಪ್ಯಾರಿಸ್‌ನಿಂದ ಸಂದೇಶ ರವಾನಿಸುವ ಏಕೈಕ ಸೀಕ್ರೆಟ್ ಏಜೆಂಟ್ ಆಗಿ ಉಳಿದಳು.

ಸಣ್ಣ ವಯಸ್ಸಿನಲ್ಲಿ ನೂರ್ ಳನ್ನು ತಿಳಿದವರು “ಸಂಗೀತ ವಾದ್ಯವನ್ನು ನುಡಿಸುವ, ಮಕ್ಕಳ ಕತೆಗಳನ್ನು ಬರೆಯುವ ಯಾವಾಗಲೂ ಕನಸು ಕಾಣುವ ಹುಡುಗಿ” ಎಂದು ವರ್ಣಿಸಿದ್ದಾರೆ. ಶಿಕ್ಷಣದ ಮುಂದುವರಿಕೆಯಲ್ಲಿ ಮಕ್ಕಳ ಮನಃಶಾಸ್ತ್ರವನ್ನು ವಿಷಯವಾಗಿ ಆಯ್ದುಕೊಂಡಳು. ಪ್ರತಿಭಾನ್ವಿತ ಸಂಗೀತ ಕಲಾವಿದೆಯಾಗಿ ಬೆಳೆದಳು, ಮಕ್ಕಳ ಪುಸ್ತಕಗಳನ್ನು ಬರೆದಳು

ಮೂರುವರೆ ತಿಂಗಳುಗಳ ಕಾಲ ಜರ್ಮನ್ ಸಿಪಾಯಿಗಳಿಂದ ತಪ್ಪಿಸಿಕೊಳ್ಳುತ್ತ ಬೇರೆ ಬೇರೆ ಪ್ರದೇಶದಲ್ಲಿ ವಿಭಿನ್ನ ರೂಪಗಳಲ್ಲಿ ಬ್ರಿಟನ್ನಿಗೆ ಸಂದೇಶ ರವಾನಿಸುತ್ತಿದ್ದಳು. ಜರ್ಮನ್‌ನ ನಾಝಿ ಏಜೆಂಟ್‌ಗಳು ಅವಳನ್ನು ಹಿಂಬಾಲಿಸುತ್ತಿದ್ದರು. ಗುಪ್ತಸಂದೇಶಗಳ ವ್ಯಾಖ್ಯಾನ ಇದ್ದ ಪುಸ್ತಕ (ಕೋಡ್ ಬುಕ್) ಅವರ ಕೈವಶವಾದದ್ದು “ಮೆಡೆಲಿನ್”ಳ ಪರಿಚಯ ಜಾಡು ತಿಳಿಯುವಲ್ಲಿ ಅವರಿಗೆ ಸಹಾಯ ಮಾಡಿತು. 1943ರ ಅಕ್ಟೋಬರ್ 14ರಂದು ಇಂಗ್ಲೆಂಡ್ ಗೆ ಮರಳುವ ತಯಾರಿಯಲ್ಲಿದ್ದಾಗ ಅವಳ ಪರಿಚಯ ಇರುವವರಿಂದಲೇ ಮೋಸಕ್ಕೊಳಗಾಗಿ ಜರ್ಮನ್ ಏಜೆಂಟರುಗಳ ವಶವಾದಳು. ಬಂಧಿಯಾಗಿಸಿ ಪ್ಯಾರಿಸ್ ನ ಸೆರಮನೆಗೆ ಅವಳನ್ನು ಕಳುಹಿಸಲಾಯಿತು. ಎರಡು ಬಾರಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೂ ವ್ಯರ್ಥವಾಗಿ ಮತ್ತೆ ಸೆರೆಗೆ ಕಳುಹಿಸಲ್ಪಟ್ಟಳು. ಜೈಲು ಸಿಬ್ಬಂದಿಗಳ ಜೊತೆ ಸಹಕರಿಸಲು ಒಪ್ಪದ ನೋರಾ ಬೇಕರ್ ಳನ್ನು “ಅಪಾಯಕಾರಿ ಬೇಹುಗಾರ್ತಿ” ಎಂದು ನಿರ್ಧರಿಸಿ ಸಂಕೋಲೆಗಳಿಂದ ಬಂಧಿಸಲಾಗಿತ್ತು. 1944ರ ಸೆಪ್ಟೆಂಬರ್ 11ರಂದು ಇನ್ನೂ ಮೂವರು ಮಹಿಳಾ ಬಂಧಿಗಳ ಜೊತೆ ಆಗ ಇದ್ದ ಜೈಲಿನಿಂದ 250 ಮೈಲು ದೂರದ ಒತ್ತೆಯಾಳುಗಳ ಶಿಬಿರಕ್ಕೆ ವರ್ಗಾಯಿಸಲಾಯಿತು. ಯುದ್ಧ ಅಪರಾಧ ಮಾಹಿತಿ ಹಾಗು ಅವಳ ಜೊತೆಗಿದ್ದ ಜೈಲುವಾಸಿಗಳು ಒದಗಿಸಿದ ಮಾಹಿತಿಯ ಆಧಾರಗಳ ಮೇಲೆ ನೂರ್ ಳನ್ನು ಒಬ್ಬಂಟಿಯಾಗಿ ರಾತ್ರಿ ಹಿಂಸಿಸಲಾಗಿತ್ತು, ಮತ್ತೆ ಇತರ ಜೈಲುವಾಸಿಗಳ ಜೊತೆ ಗುಂಡಿಟ್ಟು ಕೊಲ್ಲಲಾಯಿತು.

ನಾಝಿಗಳ ಪಾಳಯದ ಏಜೆಂಟರ ಪರಿಣತಿ, ಕುಟಿಲ ನೀತಿಗಳಲ್ಲದೇ ನೂರ್‌ಳ ಅನನುಭವ ಕೂಡ ಅವಳ ಬಂಧನ ಮತ್ತು ಸಾವಿಗೆ ಕಾರಣವಾಯಿತು ಎಂದು ಬ್ರಿಟನ್ನಿನ ಇತಿಹಾಸಕಾರರು ವಿಶ್ಲೇಷಿಸುತ್ತಾರೆ. ಹಾಗಂತ ಎಂತಹ ಸಂದರ್ಭದಲ್ಲೂ ಅವಳು ತನ್ನ ಬಳಿ ಇದ್ದ ಯಾವುದೇ ಮಾಹಿತಿಯನ್ನು ಬಿಟ್ಟುಕೊಡಲಿಲ್ಲ, ನಿಜವಾದ ಹೆಸರನ್ನೂ ಕೂಡ. ಗುಂಡೊಂದು ಅವಳ ಪ್ರಾಣವನ್ನು ಬಲಿಪಡೆಯುವ ಕ್ಷಣದ ಮೊದಲು ಬಾಯಿಂದ ಹೊರಟ ಕೊನೆಯ ಮತ್ತು ಏಕೈಕ ಶಬ್ದ “ಬಿಡುಗಡೆ” (Liberty).

ನೂರ್‌ಳ ಆತ್ಮಕಥೆ ಬರೆದ ಬಸು ಹೇಳುವಂತೆ ಭಾರತೀಯ ಮೂಲದ ನೂರ್‌ಳ ಕುಟುಂಬ ಬ್ರಿಟಿಷರ ವಿರುದ್ಧದ ಸ್ವಾತಂತ್ಯ್ರ ಸಂಗ್ರಾಮದಲ್ಲಿ ತೊಡಗಿದ್ದ ಕಾರಣ ಬ್ರಿಟನ್ ಬಗೆಗಿನ ನಿಷ್ಠೆಯನ್ನು ಮೊದಲು ಶಂಕಿಸಲಾಗಿತ್ತು. ರೇಡಿಯೋ ಸಂದೇಶ ನಿರ್ವಹಣೆಯ ಹೊಣೆ ಹೊತ್ತು ವೈರಿ ನೆಲದಲ್ಲಿ ಕೆಲಸ ಮಾಡುವವರು ಹೆಚ್ಚು ಅಂದರೆ ಆರು ವಾರಗಳ ಕಾಲ ಕೆಲಸ ಮಾಡುವ ನಿರೀಕ್ಷೆ ಇರುತ್ತಿತ್ತು. ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಅದಕ್ಕಿಂತ ಹೆಚ್ಚು ಕರ್ತವ್ಯ ನಿರ್ವಹಿಸಬೇಕೆನ್ನುವ ಅಪೇಕ್ಷೆ ಇರುತ್ತಿರಲಿಲ್ಲ. ಎಲ್ಲರ ಸಂಶಯ ಹಾಗು ಅಪಾಯಗಳ ನಡುವೆ ನೂರ್ ಮೂರು ತಿಂಗಳುಗಳಿಗಿಂತ ಹೆಚ್ಚು ಬ್ರಿಟನ್ನಿನ ಬೇಹುಗಾರ್ತಿಯಾಗಿ ಕೆಲಸ ಮಾಡಿದಳು.

ಕನಸುಗಾರ್ತಿ, ಮಕ್ಕಳ ಲೇಖಕಿ, ಸಂಗೀತ ಕಲಾವಿದೆ, ಶಾಂತಿಪ್ರಿಯೆ, ಜೀವನೋತ್ಸಾಹಿ… ಹೀಗೆ ಹಲವು ಆಯಾಮಗಳ ವ್ಯಕ್ತಿತ್ವ ಹೊಂದಿದ್ದ ನೂರ್ ಇದೀಗ ಲಂಡನ್ ನ ಸ್ಮರಣೆಗಳಲ್ಲಿ ಉಳಿದಿರುವುದು ಬೇಹುಗಾರ್ತಿಯಾಗಿ, ಯುದ್ಧ ಸೇವೆ, ತ್ಯಾಗದ ಪ್ರತಿನಿಧಿಯಾಗಿ. ಲಂಡನ್ ನ ಬೀದಿಗಳನ್ನು ಜೀವಂತವಾಗಿಟ್ಟ ನೆನಪಿನ ನೀಲಿಫಲಕಗಳಲ್ಲಿ ಭಾರತೀಯ ಮೂಲದ ಮಾತ್ರವಲ್ಲದೇ ದಕ್ಷಿಣ ಏಷ್ಯಾದ ಮೊಟ್ಟಮೊದಲ ಮಹಿಳಾ ಹೆಸರು ನೂರ್ ಇನಾಯತ್ ಖಾನ್ ಳದು. ನೂರ್ ವಾಸಿಸುತ್ತಿದ್ದ ಟಾವಿಟನ್ ರಸ್ತೆ ನಾಲ್ಕನೆಯ ಸಂಖ್ಯೆಯ ಮನೆಯ ಗೋಡೆಯ ಮೇಲೆ 2020ರಲ್ಲಿ ನೆಡಲಾದ ಫಲಕ ಲಂಡನ್ ಮಹಿಳಾ ಸಾಧಕರ ಪಟ್ಟಿಗೆ ಹೊಸ ಸೇರ್ಪಡೆಯೂ ಹೌದು.